ರಬೀಉಲ್ ಆಖಿರ್ ವಿದಾಯ ಹೇಳುವಾಗ ಸುನ್ನತ್ ಜಮಾಅತ್‌ಗೆ ಹೇಳಬೇಕಾದ ಮಾತುಗಳು

ಡಾ. ಝುಬೈರ್ ಹುದವಿ ಚೇಗನ್ನೂರ್

ಸಂಗ್ರಹ: ಸಫ್ವಾನ್ ಕುದ್ಲೂರು

ಈಗಾಗಲೇ ಪವಿತ್ರ ರಬೀಉಲ್ ಅವ್ವಲ್ ತಿಂಗಳು ವಿದಾಯ ಹೇಳಿದೆ. ಪ್ರವಾದಿ ಪ್ರೇಮದ ವಿಶಿಷ್ಟ ದಿನಗಳು ವಿಶ್ವ ಮುಸ್ಲಿಮರನ್ನು ಹಾದುಹೋಗಿವೆ. ಹಾಡಿ, ಹೇಳಿ, ಸ್ಮರಿಸಿ, ನೆನಪಿಸಿಕೊಳ್ಳುತ್ತಾ ಮದ್ಹ್ (ಸ್ತುತಿಗೀತೆ)ಗಳಿಂದ ಸುಗಂಧಭರಿತವಾದ ಹಗಲು-ರಾತ್ರಿಗಳು ಅವಾಗಿದ್ದವು. ಇಡೀ ಮುಸ್ಲಿಂ ಜಗತ್ತಿನ ಚಿಂತನೆ ಮದೀನಾದತ್ತಲೇ ಕೇಂದ್ರೀಕೃತವಾಗಿತ್ತು ಎಂದು ಹೇಳಬಹುದು. ವಿಚಾರಗಳೂ ಮಾತುಗಳೂ ತ್ವೈಬಾ (ಮದೀನಾ)ದ ಐತಿಹಾಸಿಕ ನಾಯಕನ ಕುರಿತಾಗಿಯೇ ಇದ್ದವು.

ಇದೀಗ ರಬೀಉಲ್ ಆಖಿರ್ ಕಳೆದು ಜುಮಾದಿಲ್ ಊಲಾ ಬರುತ್ತಿದೆ. ಸಾಮಾನ್ಯವಾಗಿ ಮುಸ್ಲಿಂ ಜಗತ್ತಿಗೆ, ವಿಶೇಷವಾಗಿ ಕರಾವಳಿಯ ಮುಸ್ಲಿಮರಿಗೆ, ಸ್ಮರಿಸಲು ಮತ್ತು ಮಾತನಾಡಲು ಹಲವು ಮಹನೀಯರ ಜೀವನಚರಿತ್ರೆಗಳಿವೆ. ಪ್ರವಾದಿ ಪರಂಪರೆಯಲ್ಲಿ ಬಂದ ಔಲಿಯಾಗಳ ನೇತಾರರಾದ ಜೀಲಾನಿ (ರ) ಮತ್ತು ರಿಫಾಈ ಶೈಖ್ (ರ) ಅವರ ವಫಾತ್ ದಿನಗಳು ಈ ತಿಂಗಳುಗಳಲ್ಲಿ ಬರುತ್ತವೆ. ವರ್ಷಪೂರ್ತಿ ಇಂತಹ ಸ್ಮರಣೆಗಳು ಮತ್ತು ಸಮಾಗಮಗಳು ಆಗಾಗ್ಗೆ ಮರುಕಳಿಸುತ್ತಲೇ ಇರುತ್ತವೆ. ಇಲ್ಲಿ ನಡೆಯುವ ಎಲ್ಲವೂ ಈಮಾನ್‌ನ ದೃಢೀಕರಣದ ಭಾಗವಾಗಿದೆ. ಪ್ರವಾದಿಯವರನ್ನೂ ಅವರ ಕುಟುಂಬವನ್ನೂ ಪ್ರೀತಿಸುವಂತೆ ಮಕ್ಕಳಿಗೆ ಕಲಿಸಬೇಕೆಂಬ ಪ್ರವಾದಿವಚನಗಳನ್ನು ನಾವು ಹೇಗೆ ಪಾಲಿಸಬಹುದು ಎಂಬ ಪ್ರಶ್ನೆಗೆ ಸಿಗುವ ಉತ್ತರಗಳೇ ಇವೆಲ್ಲ. ಶತಮಾನಗಳಿಂದ ವಿವಿಧ ದೇಶಗಳಲ್ಲಿ, ವಿಭಿನ್ನ ಭಾಷೆಗಳಲ್ಲಿ ಪ್ರವಾದಿ ಕೀರ್ತನಾ ಸಭೆಗಳು ರೂಪುಗೊಂಡದ್ದು ಹೀಗೆಯೇ.

ಇದರೊಂದಿಗೆ ಸಮುದಾಯದ ಐಕ್ಯತೆ, ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯೂ ಗಟ್ಟಿಗೊಳ್ಳುತ್ತವೆ. ಇಸ್ಲಾಂ ವಿಶೇಷವಾಗಿ ಪ್ರೋತ್ಸಾಹಿಸಿರುವ ಕುಟುಂಬ ಸಂಬಂಧಗಳನ್ನು ಬೆಸೆಯುವುದು, ನೆರೆಹೊರೆಯವರೊಂದಿಗಿನ ಬಾಂಧವ್ಯವನ್ನು ಬಲಪಡಿಸುವುದು, ಪ್ರಾರ್ಥನಾಭಾವದಿಂದ ಒಗ್ಗೂಡುವುದು, ಅನ್ನದಾನ ಮಾಡುವುದು, ಸಿಹಿ ಹಂಚುವುದು, ಹದಿಯಾ (ಉಡುಗೊರೆ) ನೀಡುವುದು ಮುಂತಾದ ಅನೇಕ ಸಾಮಾಜಿಕ ಕಾರ್ಯಗಳು ಇಲ್ಲಿ ನಡೆಯುತ್ತವೆ. ಭೌತಿಕವಾಗಿಯೂ ಅನೇಕ ಪ್ರಯೋಜನಗಳನ್ನು ಕಾಣಬಹುದು. ಆರ್ಥಿಕವಾಗಿ ಸಾಕಷ್ಟು ವಹಿವಾಟುಗಳು ನಡೆಯುತ್ತವೆ. ಅನೇಕರು ಇದರ ಮೂಲಕ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ; ಸಂಬಂಧಗಳೂ ಹೆಚ್ಚು ಆತ್ಮೀಯವಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಷ್ಟೇ ಅಲ್ಲದೆ, ಮಾನವ ಜೀವನದ ಹಲವು ರಂಗಗಳೂ ಇದರ ಮೂಲಕ ಸಕ್ರಿಯಗೊಳ್ಳುತ್ತವೆ.

‘ಸುನ್ನತ್ ಜಮಾಅತ್ ಎಂದರೇನು?’ ಎಂಬ ಹಲವರ ಪ್ರಶ್ನೆಗೆ ಮೇಲಿನ ಸಂಗತಿಗಳೆಲ್ಲವೂ ಒಂದು ಸ್ಪಷ್ಟ ಉತ್ತರವಾಗಿವೆ. ಇದನ್ನು ‘ಇಷ್ಕ್’ (ಒಲವು) ಮತ್ತು ಪ್ರೇಮದ ಅಭಿವ್ಯಕ್ತಿ ಎಂದು ಒಂದೇ ಮಾತಿನಲ್ಲಿ ಹೇಳಬಹುದು. ಇದು ಜೊತೆಯಾಗಿ ನಿಲ್ಲುವ, ಎಲ್ಲರನ್ನೂ ಅಪ್ಪಿಕೊಳ್ಳುವ ಪ್ರಕ್ರಿಯೆ. ನಬಿದಿನದಿಂದ ಹಿಡಿದು ಮಹನೀಯರ ಸ್ಮರಣೆಗಳವರೆಗೆ ಎಲ್ಲದರಲ್ಲೂ ಅದೊಂದೇ ಪ್ರತಿಫಲಿಸುತ್ತದೆ; ಅಥವಾ ಅದೇ ಮುಂಚೂಣಿಯಲ್ಲಿರಬೇಕು. ಕವಿತೆಗಳು, ಪ್ರೇಮಗೀತೆಗಳು ಮತ್ತು ಮೌಲಿದ್‌ಗಳು ಅದರ ಭಾಗವಾಗಿಯೇ ಬರುತ್ತವೆ. ಪ್ರೇಮಭರಿತ ಮನಸ್ಸಿನಿಂದ ಪಠಿಸುವುದೇ ಮೌಲಿದ್. ಅದರ ಮೂಲಕ ಮದೀನಾ ಮತ್ತು ರೌಝಾದ ಕಡೆಗೆ ಸೇತುವೆಯೊಂದನ್ನು ನಿರ್ಮಿಸಲಾಗುತ್ತದೆ.

ಕೆಲವೊಮ್ಮೆ ಎರಡು ಗಂಟೆಗಳ ಭಾಷಣವನ್ನು ಕೇಳುವುದಕ್ಕಿಂತ ಹತ್ತು ಸ್ವಲಾತ್‌ಗಳನ್ನು ಪಠಿಸಿದಾಗ, ಸ್ವಲ್ಪ ಮದ್ಹ್ ಹಾಡಿದಾಗ ಅಥವಾ ಮಹನೀಯರ ಜೀವನದ ಒಂದು ಅಧ್ಯಾಯವನ್ನು ಆಲಿಸಿದಾಗ ಕೆಲವರಿಗೆ ಹೆಚ್ಚಿನ ನೆಮ್ಮದಿ ಸಿಗಬಹುದು. ದೇವಭಕ್ತಿ ಮತ್ತು ತಕ್ವಾವನ್ನು ಹೆಚ್ಚಿಸುವುದು, ಆಧ್ಯಾತ್ಮಿಕ ಅನುಭೂತಿಯನ್ನು ಪಡೆದುಕೊಳ್ಳುವುದು—ಇವೇ ಭಾಷಣಗಳು ಮತ್ತು ತರಗತಿಗಳ ಮುಖ್ಯ ಗುರಿಗಳು. ಇಷ್ಕ್ ತುಂಬಿದ ಬೈತ್‌ಗಳಲ್ಲಿ (ಕಾವ್ಯಗಳಲ್ಲಿ), ಭಕ್ತಿ ತುಂಬಿದ ದಿಕ್ರ್‌ಗಳಲ್ಲಿ ಮತ್ತು ಪ್ರೀತಿ ಬೆರೆತ ಸ್ವಲಾತ್‌ಗಳಲ್ಲಿ ಅದೇ ಆಧ್ಯಾತ್ಮಿಕ ಆನಂದವನ್ನು ಕಂಡುಕೊಳ್ಳುವವರೇ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರವಾದಿಯವರನ್ನು ಮನಸಾರೆ ಸ್ಮರಿಸುತ್ತಾ ಹಾಡಿ, ಆಲಿಸಿ, ಬಿಕ್ಕಿಬಿಕ್ಕಿ ಅಳುವ ಅನೇಕ ಸಭೆಗಳನ್ನು ನಾನು ನೋಡಿದ್ದೇನೆ. ಅವರೊಂದಿಗೆ ಕುಳಿತುಕೊಳ್ಳುವುದೂ ಪುಣ್ಯದ ಕೆಲಸವೆಂದು ಆಗ ಅನ್ನಿಸುತ್ತಿತ್ತು. ಆ ಗುಂಪಿನೊಂದಿಗೆ ಕುಳಿತುಕೊಳ್ಳುವವನು ಎಂದಿಗೂ ವಿಫಲನಾಗುವುದಿಲ್ಲ ಎಂಬ ಪ್ರವಾದಿವಚನಗಳು ಆ ಸಮಯದಲ್ಲಿ ನನ್ನ ನೆನಪಿಗೆ ಬಂದವು.

ವಿವಿಧ ದೇಶಗಳಲ್ಲಿನ ಆಧುನಿಕ ಕಾಲದ—ವಿಶೇಷವಾಗಿ 9/11ರ ನಂತರದ—ಮುಸ್ಲಿಮರ ಇಸ್ಲಾಂ ಅನುಭವಗಳನ್ನು ಅನ್ವೇಷಿಸುವ Journey Into Islam ಎಂಬ ಪುಸ್ತಕದಲ್ಲಿ ಪ್ರಖ್ಯಾತ ಲೇಖಕ ಅಕ್ಬರ್ ಎಸ್. ಅಹ್ಮದ್ ಅವರು ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ಅಮೆರಿಕದ ನಗರವೊಂದರಲ್ಲಿ ಆಧುನಿಕ ಉಡುಗೆ ತೊಟ್ಟ ಯುವಕನನ್ನು ಭೇಟಿಯಾದ ಅವರು, ‘ನಿಮಗೆ ಪ್ರವಾದಿ ಮುಹಮ್ಮದ್ ಯಾರು?’ ಎಂದು ಕೇಳಿದರು. ಆ ಪ್ರಶ್ನೆಗೆ ಉತ್ತರಿಸಲು ಎದ್ದು ನಿಂತ ಯುವಕನ ಮಾತುಗಳು ತೊದಲಿದವು; ಆತ ಮಾತು ಮುಂದುವರಿಸಲಾಗದೆ ಬಿಕ್ಕಳಿಸಿ ಕಣ್ಣೀರು ಹಾಕಿದನು. ಲೇಖಕರು ಆತನ ಪ್ರವಾದಿ ಪ್ರೇಮವನ್ನು ಹೀಗೆ ವಿವರಿಸಿದ್ದಾರೆ.

ಶತಮಾನಗಳ ಉದ್ದಕ್ಕೂ ವಿವಿಧ ದೇಶಗಳಲ್ಲಿ ಹಾಗೂ ವಿಭಿನ್ನ ಭಾಷೆಗಳಲ್ಲಿ ರೂಪುಗೊಂಡ ಪ್ರವಾದಿ ಪ್ರೇಮದ ಸಾಲುಗಳು, ರೇಖೆಗಳು, ಭಾವನೆಗಳು, ಆಚರಣೆಗಳು ಮತ್ತು ನಂಬಿಕೆಗಳನ್ನು And Muhammad Is His Messenger ಎಂಬ ತಮ್ಮ ಮಹತ್ವದ ಸಂಶೋಧನಾ ಗ್ರಂಥದ ಮೂಲಕ ಜಗತ್ತಿಗೆ ಪರಿಚಯಿಸಿದವರು ಆನ್ಮರಿ ಶಿಮ್ಮೆಲ್. ತುರ್ಕಿಯ ವಿಶ್ವವಿದ್ಯಾನಿಲಯದಲ್ಲಿ ತಾವು ಕಳೆದ ಅವಧಿಯಲ್ಲಿ ಇಸ್ತಾಂಬುಲ್‌ನ ಪ್ರಮುಖ ಶಿಕ್ಷಕರು ಮತ್ತು ಅಧಿಕಾರಿಗಳು ತಮ್ಮ ಮನೆಗಳಲ್ಲಿ ಆಯೋಜಿಸುತ್ತಿದ್ದ ಮೌಲಿದ್ ಸಭೆಗಳಲ್ಲಿ ಭಾಗವಹಿಸಿದ ಅನುಭವಗಳನ್ನು ಅವರು ವಿವರಿಸಿದ್ದಾರೆ. ಸ್ಥಳೀಯ ಟರ್ಕಿಶ್ ಭಾಷೆಯಲ್ಲಿ ಹಾಡಿ, ಹೇಳಿ, ನಬಿಯವರನ್ನು ಸ್ಮರಿಸುತ್ತಾ, ಅವರನ್ನು ಹೃದಯದಲ್ಲಿ ತುಂಬಿಕೊಂಡು ಪ್ರೀತಿಸುತ್ತಿದ್ದ ಜನರ ಅನುಭವಗಳು ಅವರ ಬರಹಗಳಲ್ಲಿ ಮೂಡಿಬಂದಿವೆ.

ತಂದೆ ಸಿದ್ದೀಕುಲ್ ಅಕ್ಬರ್ (ರ) ಅಳುವುದನ್ನು ಕಂಡು, ಅದರಲ್ಲಿದ್ದ ಇಷ್ಕ್‌ನ ಆಳವನ್ನು ಅರಿತು, ‘ಜನರು ಸಂತೋಷದಿಂದಲೂ ಅಳುತ್ತಾರೆ ಎಂಬುದು ನನಗೆ ಅಂದೇ ಅರ್ಥವಾಯಿತು’ ಎಂದು ಉಮ್ಮುಲ್ ಮುಅ್ಮಿನೀನ್ ಆಯಿಶಾ ಬೀವಿ (ರ) ಹೇಳಿದ ಮಾತಿನ ಸೂಕ್ಷ್ಮವಾದ ಆಧುನಿಕ ಪ್ರತಿಧ್ವನಿಗಳೆಂದೇ ಇಂತಹ ಸಭೆಗಳನ್ನು ಕರೆಯಬಹುದು. ಮಾತಿನಲ್ಲಿ ವಿವರಿಸಲಾಗದ ಅನುಭೂತಿಯನ್ನೂ, ಹಿಂದೆಂದೂ ಅನುಭವಿಸದ ಆಧ್ಯಾತ್ಮಿಕ ಸಂತೃಪ್ತಿಯನ್ನೂ ನೀಡಿದ ಉತ್ತರ ಭಾರತದ ಕೆಲವು ಮೌಲಿದ್ ಸಭೆಗಳು ಆಗಾಗ್ಗೆ ನೆನಪಿನಲ್ಲಿ ಸುಗಂಧವನ್ನು ಹರಡುತ್ತವೆ. ಅವೆಲ್ಲವೂ ಆರಾಧನೆ ಮತ್ತು ಸಾಂಸ್ಕೃತಿಕ ವಿಕಸನದತ್ತ ದಾರಿ ಮಾಡಿಕೊಡುತ್ತವೆ. ನಂಬಿಕೆಯ ವಾಸ್ತುಶಿಲ್ಪವು ವಿಕಸನಗೊಳ್ಳುವ ಮಾರ್ಗಗಳನ್ನು ತೋರಿಸುತ್ತವೆ. ವಿವಿಧ ಕೃತಿಗಳ ಸೃಷ್ಟಿಗೆ ದಾರಿ ತೆರೆದಿವೆ; ಇಂದಿಗೂ ತೆರೆಯುತ್ತಿವೆ.

ಪ್ರಪಂಚದ ಪ್ರತಿಯೊಬ್ಬರ ಮನದೊಳಗೂ ಇಷ್ಕ್‌ನ ಮಾಧುರ್ಯವಿದೆ; ಪ್ರೀತಿಗಾಗಿ ತೀರದ ಬಯಕೆಯಿದೆ. ಆ ಪ್ರೀತಿ ಯಾರ ಮೇಲಿರಬೇಕು ಮತ್ತು ಆ ಪ್ರೀತಿ ಇಲ್ಲದೆ ನಿಮ್ಮ ನಂಬಿಕೆ ಪೂರ್ಣಗೊಳ್ಳುವುದಿಲ್ಲ ಎಂಬುದನ್ನು ಪ್ರವಾದಿ (ಸ) ಅವರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪ್ರೇಮವು ವಿಶ್ವಾಸದ ಒಂದು ಭಾಗವಾಗಿದೆ. ನಬಿ (ಸ) ಅವರ ಬಗ್ಗೆ ಹೇಳುವುದು ಮತ್ತು ಕೇಳುವುದು ವಿಶಿಷ್ಟವಾದ ಅನುಭೂತಿಯನ್ನು ನೀಡುತ್ತದೆ. ಪ್ರವಾದಿಯವರನ್ನು ವರ್ಣಿಸಿದವರ ಬಗ್ಗೆ ನಮಗೆ ಅಪಾರ ಗೌರವ ಮತ್ತು ಪ್ರೀತಿಯಿದೆ. ಬೂಸೀರಿಯವರನ್ನು ನಾವು ಪ್ರೀತಿಸದಿರಲು ಸಾಧ್ಯವೇ? ಪ್ರವಾದಿ ಅನುರಾಗದ ಶ್ರೇಷ್ಠ ಕಾವ್ಯಗಳನ್ನು ಜಗತ್ತಿನಾದ್ಯಂತ ಲಕ್ಷಾಂತರ ಆಶಿಕ್‌ಗಳ (ಪ್ರೇಮಿಗಳ) ನಾಲಿಗೆಗಳ ಮೂಲಕ ಹರಿಯುವಂತೆ ಮಾಡಿ, ಎಷ್ಟೋ ಹೃದಯಗಳನ್ನು ಕರಗಿಸುವ ರೀತಿಯಲ್ಲಿ ಸುಂದರವಾಗಿ ಲೇಖನಿ ಚಲಾಯಿಸಿದ ಮಹಾನ್ ಕವಿ ಬೂಸೀರಿಯವರನ್ನು ನಾವು ಹೇಗೆ ತಾನೇ ಪ್ರೀತಿಸದಿರಲು ಸಾಧ್ಯ?

ಇದುವೇ ಇಸ್ಲಾಂ. ಇದು ತುಂಬಾ ಸರಳವಾದುದು; ಅದಕ್ಕಿಂತಲೂ ಹೆಚ್ಚಾಗಿ ಮೃದುತ್ವದಿಂದ ಕೂಡಿದೆ. ಅದರಲ್ಲಿ ಇಷ್ಕ್ ಮತ್ತು ಮೊಹಬ್ಬತ್ (ಪ್ರೀತಿ) ಇವೆ. ತಕ್ವಾವನ್ನು ಹೆಚ್ಚಿಸುವ ವಾತಾವರಣವನ್ನು ಸೃಷ್ಟಿಸುವ ಅಂಶಗಳಿವೆ. ದಿಕ್ರ್‌ನ ಮಜ್ಲಿಸ್‌ನಲ್ಲಿ ಭಾಗವಹಿಸುವುದು, ಭೌತಿಕ ಚಿಂತೆಗಳಿಂದ ದೂರವಾಗಿ ಸ್ವಲ್ಪ ಸಮಯ ಅಲ್ಲಾಹನನ್ನು ಸ್ಮರಿಸುವುದು—ಇವುಗಳಿಂದ ದೊರೆಯುವ ಮಾನಸಿಕ ನೆಮ್ಮದಿ ವರ್ಣನಾತೀತ. ಮರಣಹೊಂದಿದ ವ್ಯಕ್ತಿಯ ಮನೆಯಲ್ಲಿ ಕುರಾನ್ ಪಠಣವು ಸಾಂತ್ವನದ ವಾತಾವರಣವನ್ನು ನಿರ್ಮಿಸುತ್ತದೆ. ಮೃತರ ಸಂಬಂಧಿಕರಿಗೆ ಅದು ನೀಡುವ ನೆಮ್ಮದಿಯನ್ನು ನಾವು ಕಡೆಗಣಿಸಲು ಸಾಧ್ಯವೇ?

ಅದೇ ರೀತಿ, ಮೃತರನ್ನು ಅಂತಿಮ ಯಾತ್ರೆಯಾಗಿ ಕಬರ್‌ನಲ್ಲಿ (ಗೋರಿಯಲ್ಲಿ) ಇರಿಸಿದ ನಂತರ ತಲ್ಖೀನ್ ಪಠಿಸುವಾಗ, ‘ಇಗೋ, ನಾವು ನಿಮ್ಮನ್ನು ಕೈಬಿಟ್ಟಿಲ್ಲ’ ಎಂಬ ಸಂದೇಶವನ್ನು ನೀಡಿದಂತಾಗುವುದಿಲ್ಲವೇ? ಅದಕ್ಕಿಂತಲೂ ಮಿಗಿಲಾಗಿ, ಅದನ್ನು ಕೇಳುವವರ ಮೇಲೆ ಆ ವಾಕ್ಯಗಳು ಬೀರುವ ಪ್ರಭಾವ ಅಪಾರ. ‘ಮನ್ ರಬ್ಬುಕ, ವ ಮಾ ದೀನುಕ, ವ ಮನ್ ನಬಿಯ್ಯುಕ, ವ ಮಾ ಇಮಾಮುಕ, ವ ಮಾ ಕಿಬ್ಲತುಕ’ ಎಂಬ ಪ್ರಶ್ನೆಗಳು ಮತ್ತು ‘ಅಲ್ಲಾಹು ರಬ್ಬೀ, ಮುಹಮ್ಮದುನ್ (ಸ) ರಸೂಲೀ’ ಎಂದು ಆರಂಭವಾಗುವ ಉತ್ತರಗಳು ಸುತ್ತಲೂ ನೆರೆದಿರುವ ಜನರ ಮನಸ್ಸಿನಲ್ಲಿ ಮರಣವನ್ನು ಒಂದು ಪಾಠವಾಗಿ ಉಳಿಸುತ್ತವೆ. ‘ಅಲ್ ಮುಅ್ಮಿನೂನ ಇಖ್ವಾನೀ ವಲ್ ಮುಅ್ಮಿನಾತು ಅಖವಾತೀ’ (ವಿಶ್ವಾಸಿಗಳೆಲ್ಲರೂ ನನ್ನ ಸಹೋದರರು ಮತ್ತು ಸಹೋದರಿಯರು) ಎಂಬ ವಚನಗಳು ಮನದಾಳದಲ್ಲಿ ಸಾಮಾಜಿಕ ಪ್ರಜ್ಞೆಯ ಅತ್ಯಂತ ಉದಾತ್ತ ಚಿಂತನೆಗಳನ್ನು ಬಿತ್ತುತ್ತವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮನಸ್ಸು ಪಕ್ವವಾಗುವ ಅತ್ಯುತ್ತಮ ಸಮಯವೂ ಅದೇ ಆಗಿದೆ. ಮಣ್ಣು ಹಾಕಿ, ಮೀಜಾನ್ ಕಲ್ಲು ಇಟ್ಟು, ಗಿಡದ ಕೊಂಬೆಗಳನ್ನು ನೆಟ್ಟು, ನೀರು ಚಿಮುಕಿಸಿದ ಮಣ್ಣಿನ ಸುವಾಸನೆ ತುಂಬಿರುವ ಖಬರ್‌ಸ್ಥಾನದಲ್ಲಿ ನಿಂತು ತಲ್ಖೀನ್ ಪಠಿಸುವಾಗಲೇ ನಾನು ವೈಯಕ್ತಿಕವಾಗಿ ಅತ್ಯಂತ ಹೆಚ್ಚಿನ ಭಕ್ತಿಯನ್ನು ಅನುಭವಿಸುತ್ತೇನೆ; ಮನದಾಳದಿಂದ ಪಠಿಸುತ್ತೇನೆ.

ಸಂತೋಷದ ಕಳೆ ಮತ್ತು ಹೊಳಪು ಹೆಚ್ಚಲು, ದುಃಖದ ಸಾಗರದ ಆಳ ಮತ್ತು ಆಘಾತ ಕಡಿಮೆಯಾಗಲು ಸ್ವಲಾತ್‌ಗಳು ಹಾಗೂ ಸ್ತುತಿಗಳೇ ಸಾಕು ಎಂಬ ಪೂರ್ವಿಕರ ಬೋಧನೆಗಳು ಮತ್ತು ಅನುಭವಗಳು, ಹುಟ್ಟಿದಾಗ, ಮರಣ ಹೊಂದಿದಾಗ, ಗೃಹಪ್ರವೇಶ ಮಾಡುವಾಗ ಹಾಗೂ ಕಾಯಿಲೆ ಬಂದಾಗಲೆಲ್ಲ ಮನ್ಖೂಸ್ ಮೌಲಿದ್, ಸಲಾಮ್ ಬೈತ್, ಅಶ್ರಖ್ ಮತ್ತು ಬುರ್ದಾ ಪಠಿಸುವ ರೂಢಿಯನ್ನು ನಮಗೆ ಪರಿಚಯಿಸಿವೆ.

ಆಧ್ಯಾತ್ಮಿಕತೆಯಾಚೆಗೂ ಅವು ನೀಡುವ ಮಾನಸಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಯೋಜನಗಳು ಅಸಂಖ್ಯ. ಬದಲಾಗುತ್ತಿರುವ ಹೊಸ ಪೀಳಿಗೆಗೂ ಆ ಅನುಭವಗಳು ಲಭ್ಯವಾಗಬೇಕು. ವಾದಗಳು ಮತ್ತು ಭಾಷಣಗಳು ಪ್ರಭಾವ ಬೀರುವುದು ಬಹಳ ಸಣ್ಣ ಗುಂಪಿನ ಮೇಲೆ ಮಾತ್ರ. ಹೃದಯಸ್ಪರ್ಶಿ ಮಾತುಗಳು ಮತ್ತು ಹಾಡುಗಾರಿಕೆ, ಅರ್ಥ ತಿಳಿಯದಿದ್ದರೂ ಪಠಿಸುವ ಪದಗಳ ಗಾಂಭೀರ್ಯ ಮತ್ತು ಸೌಂದರ್ಯ—ಇವೆಲ್ಲವೂ ಹೆಚ್ಚು ಜನರ ಮನಸ್ಸಿನಲ್ಲಿ ಬದಲಾವಣೆ ತರುತ್ತವೆ; ಹೊಸ ಅನುಭೂತಿಗಳನ್ನು ನೀಡುತ್ತವೆ. ಆದ್ದರಿಂದ ಅವು ಕೇವಲ ಆಚರಣೆಗಳಾಗಿ ಉಳಿಯಬಾರದು. ಬದಲಾಗಿ, ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅಭಿವ್ಯಕ್ತಿಗಳಾಗಬೇಕು; ಅನುಭವಗಳಾಗಬೇಕು.

ಅಂತಹ ಸಭೆಗಳಲ್ಲಿ ಸಾಮಾಜಿಕ ಐಕ್ಯತೆಯ ಪ್ರಕಾಶಮಾನ ಚಿತ್ರಣಗಳು ರೂಪುಗೊಳ್ಳುತ್ತವೆ. ನಿಜವಾದ ವಿಶ್ವಾಸಿಯ ಜೀವನವೂ ಅದೇ ಅಲ್ಲವೇ? ಅವೆಲ್ಲವೂ ಬೇಡವೆಂದು ಯಾರಿಗೆ ತಾನೇ ಹೇಳಲು ಸಾಧ್ಯ? ಸಯ್ಯಿದ್ ಹುಸೇನ್ ನಸ್ರ್ ಅವರು Islamic Arts and Architecture ಎಂಬ ಪುಸ್ತಕದಲ್ಲಿ ಇಸ್ಲಾಮಿನ ವಿಶಿಷ್ಟ ವಾಸ್ತುಶಿಲ್ಪವೂ ಕುರಾನ್‌ನ ವಚನಗಳಿಂದ ಮತ್ತು ಅವುಗಳನ್ನು ಪಠಿಸುವ ಸ್ಥಳಗಳಿಂದಲೇ ರೂಪುಗೊಳ್ಳುತ್ತದೆ ಎಂದು ಹೇಳಿದ್ದಾರೆ. ಪಾವಿತ್ರ್ಯ ತುಂಬಿದ ಪಠಣ ಮತ್ತು ಮಾತುಗಳಿಗೆ ಸೂಕ್ತವಾದ ಪವಿತ್ರ ಸ್ಥಳದಲ್ಲಿಯೇ (Sacred Space) ತಕ್ವಾವನ್ನು ಉದ್ದೀಪಿಸುವ, ಆಧ್ಯಾತ್ಮಿಕ ಅನುಭೂತಿಯತ್ತ ಕೊಂಡೊಯ್ಯುವ ಮಸೀದಿಯ ವಿನ್ಯಾಸ ರೂಪುಗೊಳ್ಳುತ್ತದೆ ಎಂಬುದು ಇದರ ಅರ್ಥ.

ಅದೇ ಸಮಯದಲ್ಲಿ, ಕೆಲವು ಕಡೆಗಳಲ್ಲಾದರೂ ಭೌತಿಕ ಉದ್ದೇಶಗಳು ಒಳನುಗ್ಗಿ ಇವುಗಳ ಪಾವಿತ್ರ್ಯವನ್ನು ಕಳೆದುಹಾಕಿವೆಯೇ ಎಂಬ ಆಲೋಚನೆಯೂ ಇಲ್ಲದಿಲ್ಲ. ಆದರೆ, ಅದನ್ನು ಇಲ್ಲಿನ ಸಮಸ್ಯೆಯಾಗಿ ಮಾತ್ರ ನೋಡದೆ, ಎಲ್ಲೆಡೆ ಕಂಡುಬರುವ ಅವನತಿಯ ಒಂದು ಭಾಗವಾಗಿಯೂ ಪರಿಗಣಿಸಬೇಕಾಗುತ್ತದೆ. ಹಾಗೆಂದು ಅವೆಲ್ಲವನ್ನೂ ಸಂಪೂರ್ಣವಾಗಿ ತಿರಸ್ಕರಿಸುವುದೇ ನಾವು ಮಾಡಬೇಕಾದ ಕೆಲಸವಲ್ಲ. ಅವನ್ನೆಲ್ಲ ಬದಿಗಿಟ್ಟರೆ, ಅವುಗಳಿಲ್ಲದೆ ನಮ್ಮಲ್ಲಿ ಉಳಿಯುವುದು ಒಣಗಿದ, ಶುಷ್ಕ ಧರ್ಮವಷ್ಟೇ. ಇಷ್ಕ್ ಮತ್ತು ಪ್ರೇಮವಿಲ್ಲದ, ಪೂರ್ವಿಕರ ಸ್ಮರಣೆಗಳಾಗಲೀ, ನೆನಪುಗಳಾಗಲೀ, ಅವುಗಳನ್ನು ನೆನಪಿಸುವ ಸಂದರ್ಭಗಳಾಗಲೀ ಇಲ್ಲದ; ಒಗ್ಗೂಡಿ ನಿಲ್ಲಲು ಮತ್ತು ಎಲ್ಲರನ್ನೂ ಒಳಗೊಳ್ಳಲು ಅವಕಾಶಗಳಿಲ್ಲದ ಒಂದು ಶುಷ್ಕ ಜೀವನ. ಅದು ಎಷ್ಟೊಂದು ಅಸಹನೀಯವೂ ಆನಂದರಹಿತವೂ ಆಗಿರಬಹುದು!

ಇಷ್ಟೊಂದು ಸುಂದರವಾದ ನನ್ನ ಇಸ್ಲಾಂ ಎಂದಿಗೂ ಹಾಗೆ ಆಗಲು ಸಾಧ್ಯವಿಲ್ಲ. ಖಂಡಿತವಾಗಿಯೂ ಇಲ್ಲ.

Related Posts

Leave A Comment

Voting Poll

Get Newsletter