ಪಶ್ಚಿಮ ಕರಾವಳಿಗೆ ಇಸ್ಲಾಂ ಧರ್ಮದ ಆಗಮನ ಮತ್ತು ಮುನ್ನಡೆ
ಪಶ್ಚಿಮ ಕರಾವಳಿಗೆ ಇಸ್ಲಾಂ ಧರ್ಮದ ಆಗಮನ ಮತ್ತು ಮುನ್ನಡೆ
ಕ್ರಿಸ್ತ ಪೂರ್ವ 3 ನೇ ಶತಮಾನದಿಂದ ಕ್ರಿ. ಶ. 7ನೇ ಶತಮಾನದಿಂದಲೇ ಹಿಂದೂ ಮಹಾಸಾಗರದ ಮೂಲಕ ಭಾರತದ ಕರಾವಳಿಗೂ ಕೊಲ್ಲಿ ರಾಷ್ಟ್ರಗಳ ಮಧ್ಯೆ ವ್ಯಾಪಾರ ಸಂಬಂಧಗಳ ಬಗ್ಗೆ ಪುರಾವೆಗಳು ಲಭ್ಯವಿದೆ. ಈ ಅವಧಿಯ ಭಾರತದ ಕಲಾಕೃತಿಗಳು ಅರೇಬಿಯಾದಲ್ಲಿ ಪತ್ತೆಯಾಗಿವೆ. ಈ ಅವಧಿಯು ಇಸ್ಲಾಂ ಪೂರ್ವ ಅವಧಿಯಾಗಿತ್ತು. ರೋಮನ್ ದೊರೆ ಆಗಸ್ಟಸ್ ಕ್ರಿ. ಪೂ. 30ರಲ್ಲಿ ಈಜಿಪ್ಪನ್ನು ವಶಪಡಿಸಿದ ನಂತರ ರೋಮ್ ಮತ್ತು ಭಾರತದ ಮಧ್ಯೆ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಕ್ಕೆ ಒತ್ತು ಸಿಕ್ಕಿತು. ಆಯಕಟ್ಟಿನ ಜಾಗದ ಈಜಿಪ್ಟ್ ದೇಶದ ಬಂದರುಗಳು ಭಾರತದಿಂದ ಬಂದ ಸರಕುಗಳನ್ನು ದಾಸ್ತಾನು ಮಾಡಿ ಯುರೋಪ್ ದೇಶಗಳಿಗೆ ರವಾನೆ ಮಾಡುವ ಮರುಬಂದರುಗಳಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
ಹೈದರಾಲಿ
ಸಹ ಪ್ರಾಧ್ಯಾಪಕರು ವಾಣಿಜ್ಯ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು.
ವ್ಯಾಪಾರ, ವಾಣಿಜ್ಯ ವಹಿವಾಟು ಅನಾದಿ ಎಲ್ಲಕಾಲದಿಂದಲೇ ಪ್ರಚಲಿತವಿರುವ ಒಂದು ಕಸುಬು. ದೇಶದ ಗಡಿಯೊಳಗಿನ ಆಂತರಿಕ ವ್ಯಾಪಾರ ಮತ್ತು ಗಡಿಯಾಚೆಗೆ ಅಂತಾರಾಷ್ಟ್ರೀಯ ವ್ಯಾಪಾರ ನಿರಂತರ ಪ್ರಕ್ರಿಯೆ. ಈ ವ್ಯಾಪಾರದ ಮುಖ್ಯ ಅಂಶ ಖರೀದಿ ಮತ್ತು ವಿಕ್ರಯ ಮತ್ತು ಬೇಡಿಕೆ ಮತ್ತು ಪೂರೈಕೆ ಮಾಡುವುದು. ಆಧುನಿಕ ವ್ಯಾಪಾರದಲ್ಲಿ ಉತ್ಪಾದನಾ ಸ್ಥಳದಿಂದ ಗ್ರಾಹಕರಿಗೆ ಪೂರೈಸುವ ಪ್ರಕ್ರಿಯೆಯಲ್ಲಿ ಇತರ ವಾಣಿಜ್ಯ ಚಟುವಟಿಕೆಗಳಾದ ಬ್ಯಾಂಕಿಂಗ್, ವಿಮೆ, ದಾಸ್ತಾನು, ಸಾಗಾಣಿಕೆ, ಜಾಹಿರಾತು ಕೂಡ ಪೂರಕ ಚಟುವಟಿಕೆಗಳಾಗಿ ತಮ್ಮ ಪಾತ್ರವಹಿಸುತ್ತದೆ. ವ್ಯಾಪಾರದಲ್ಲಿ ಹೆಚ್ಚು ಲಾಭ ಗಳಿಸುವ ಸಲುವಾಗಿ ಹೆಚ್ಚು ಅಪಾಯ (Risk)ಎದುರಿಸುವುದು ಮುಖ್ಯವಾಗಿರುತ್ತದೆ. ವ್ಯಾಪಾರ ಮತ್ತು ವಾಣಿಜ್ಯ ಒಂದು ಪ್ರಮುಖ ಆರ್ಥಿಕ ಚಟುವಟಿಕೆ ಯಾದ ಕಾರಣ ಇಲ್ಲಿ ಸರಕುಗಳು ಮತ್ತು ಸೇವೆಗಳ ವಿನಿಮ ಯದ ಜತೆಗೆ ಉತ್ಪಾದನಾ ಅಂಶಗಳ ವಿನಿಮಯವೂ ನಡೆಯುತ್ತಿರುತ್ತದೆ. ಬಂಡವಾಳ, ಶ್ರಮ, ಮತ್ತು ಉದ್ಯಮಿಗಳು ಉತ್ತಮ ವ್ಯಾಪಾರ, ಉದ್ಯೋಗ ಅರಸಿ
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತೆರಳುತ್ತಾರೆ. ಈ ರೀತಿಯ ದೂರ ಪ್ರಯಾಣ ನಡೆದಾಗ ಸಾಂಸ್ಕೃತಿಕ ಸಂಬಂಧಗಳು ಏರ್ಪಡುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಸ್ಕೃತಿಯ ಅಂಶಗಳು ರವಾನೆ ಯಾಗುತ್ತದೆ.
ಭಾರತದ ಭೌಗೋಳಿಕ ಪರಿಸ್ಥಿತಿ ಸಾಗರ ವ್ಯಾಪಾರಕ್ಕೆ ಪೂರಕವಾಗಿತ್ತು. ಪರ್ಯಾಯ ದ್ವೀಪವಾದ ಭಾರತದ ಪಶ್ಚಿಮದಲ್ಲಿ ಅರಬಿ ಸಮುದ್ರ, ಪೂರ್ವದಲ್ಲಿ ಬಂಗಾಳ ಕೊಲ್ಲಿ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಈ ವ್ಯಾಪಾರ ಚಟುವಟಿಕೆಗಳಿಗೆ ಸಹಜವಾದ ವೇದಿಕೆಯಾಗಿ ರೂಪುಗೊಂಡಿತ್ತು.
ಕ್ರಿಸ್ತ ಪೂರ್ವ 3 ನೇ ಶತಮಾನದಿಂದ ಕ್ರಿ. ಶ. 7ನೇ ಶತಮಾನದಿಂದಲೇ ಹಿಂದೂ ಮಹಾಸಾಗರದ ಮೂಲಕ ಭಾರತದ ಕರಾವಳಿಗೂ ಕೊಲ್ಲಿ ರಾಷ್ಟ್ರಗಳ ಮಧ್ಯೆ ವ್ಯಾಪಾರ ಸಂಬಂಧಗಳ ಬಗ್ಗೆ ಪುರಾವೆಗಳು ಲಭ್ಯವಿದೆ. ಈ ಅವಧಿಯ ಭಾರತದ ಕಲಾಕೃತಿಗಳು ಅರೇಬಿಯಾದಲ್ಲಿ ಪತ್ತೆಯಾಗಿವೆ. ಈ ಅವಧಿಯು ಇಸ್ಲಾಂ ಪೂರ್ವ ಅವಧಿ ಯಾಗಿತ್ತು. ರೋಮನ್ ದೊರೆ ಆಗಸ್ಟಸ್ ಕ್ರಿ. ಪೂ. 30ರಲ್ಲಿ ಈಜಿಪ್ಪನ್ನು ವಶಪಡಿಸಿದ ನಂತರ ರೋಮ್ ಮತ್ತು ಭಾರತದ ಮಧ್ಯೆ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಕ್ಕೆ ಒತ್ತು ಸಿಕ್ಕಿತು. ಆಯಕಟ್ಟಿನ ಜಾಗದ ಈಜಿಪ್ಟ್ ದೇಶದ ಬಂದರುಗಳು ಭಾರತದಿಂದ ಬಂದ ಸರಕುಗಳನ್ನು ದಾಸ್ತಾನು ಮಾಡಿ ಯುರೋಪ್ ದೇಶಗಳಿಗೆ ರವಾನೆ ಮಾಡುವ ಮರುಬಂದರುಗಳಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಭಾರತ ಮತ್ತು ಅರೇಬಿಯಾದ ಮಧ್ಯೆ ಅಂತರಾಷ್ಟ್ರೀಯ ವ್ಯಾಪಾರ ಅದಕ್ಕಿಂತ ಮುಂಚಿತವಾಗಿ ಇತ್ತೆಂದು ದಕ್ಷಿಣ ಅರೇಬಿಯಾದಲ್ಲಿ ಇತಿಹಾಸತಜ್ಞರು ಉತ್ಪನನ ನಡೆಸಿ, ದೊರಕಿದ ಭಾರತದ ಕುಂಬಾರರ ಮಡಿಕೆ ಪತ್ತೆ ಹಚ್ಚಿದಾಗ ಇದಕ್ಕೆ ಸಾಕ್ಷಿ ದೊರಕಿತು. ಇದಲ್ಲದೆ ರೋಮನ್ ನಾವಿಕ ಮಾರ್ಗಸೂಚಿ ಪುಸ್ತಕ ಪೆರಿಪ್ಲಸ್ನಲ್ಲಿ ಹಿಂದೂ ಮಹಾಸಾಗರ ಮತ್ತು ಕೆಂಪು ಸಮುದ್ರದ ಪ್ರಸ್ತಾವನೆಗಳಿವೆ. ಭಾರತ ಮತ್ತು ರೋಮನ್ ಸಾಮ್ರಾಜ್ಯ ಮಧ್ಯೆ ಕ್ರಿಸ್ತಪೂರ್ವ ಮೂವತ್ತರ ಮೊದಲೇ ಅರೇಬಿಯದ ಮೂಲಕ ನಡೆಯುತ್ತಿತ್ತು ಎಂಬ ಪುರಾವೆಗಳು ಅರೇಬಿಯದಲ್ಲಿ ಪತ್ತೆಯಾದ ಮಣ್ಣಿನ ಪಾತ್ರೆಗಳ ಅಧಾರದಲ್ಲಿ ನಿರೂಪಿಸಬಹುದು. ಇದಕ್ಕಿಂತ ಹೆಚ್ಚಾಗಿ ಭಾರತ ಮತ್ತು ದಕ್ಷಿಣ ಅರೇಬಿಯಾ ಪ್ರದೇಶಗಳ ಮಧ್ಯೆ ನೇರ ವ್ಯಾಪಾರ ಈಜಿಪ್ಟ್ ರೋಮಿಗೆ ಸೇರುವುದಕ್ಕೆ ಮೊದಲೇ ಇತ್ತು ಎಂಬುವುದು ದಕ್ಷಿಣ ಅರೇಬಿಯಾದಲ್ಲಿ ದೊರೆತ ಭಾರತದ ಮಣ್ಣಿನ ಪಾತ್ರೆಗಳ ಪತ್ತೆಯ ಹಿನ್ನೆಲೆಯಲ್ಲಿ ಸಾಬೀತುಗೊಂಡಿದೆ. (ಆಂಜನೇಯ ಎಲ್
2013). ಅರೇಬಿಯಾ ಬಂದರುಗಳು ಭಾರತ ಮತ್ತು ರೋಮಿಗೆ ಇರುವ ಅಂತರಾಷ್ಟ್ರೀಯ ವ್ಯಾಪಾರದ ದಾಸ್ತಾನು ಕೇಂದ್ರ ಮತ್ತು ಮರು ಬಂದರಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕ್ರಿ. ಪೂ. 312ರಿಂದಲೇ ಇರುವ ನಬಾಟಿಯನ್ ಬುಡಕಟ್ಟುವರ್ಗದ ವ್ಯಾಪಾರಿಗುಂಪುಗಳು ಭಾರತ ಮತ್ತು ಅರೇಬಿಯಾ ನಡುವೆ ವ್ಯಾಪಾರ ನಡೆಸಿದ್ದ ಬಗ್ಗೆ ಉಲ್ಲೇಖಗಳಿವೆ. ( ಪೋಟ್ಸ್ 1990).
ರಾಜ ಮಹಾರಾಜರು ವ್ಯಾಪಾರದ ಹಿಡಿತ ಗಟ್ಟಿಗೊಳಿ ಸಲು ಹೆಚ್ಚು ಸುಂಕಗಳಿಸಲು ಹಾಗೂ ಸಂಪತ್ತು ಕ್ರೋಡಿಕರಿ ಸುವ ನಿಟ್ಟಿನಲ್ಲಿ ಹೊಸ ವ್ಯಾಪಾರ ಮಾರ್ಗವನ್ನು ಹುಡುಕುವ ಮತ್ತು ಅದನ್ನು ನಿರ್ವಹಿಸಲು ಸಾಹಸಿ ಪ್ರವೃತ್ತಿಯ ಯಾತ್ರಿಕರಿಗೆ ರಾಜಾಶ್ರಯ ನೀಡುತ್ತಿದ್ದರು. ಅದೇ ರೀತಿ ಗಮ್ಯಸ್ಥಾನಗಳಲ್ಲೂ ಈ ಯಾತ್ರಿಕರಿಗೆ ರಾಜ ಮನೆತನದ ಆತಿಥ್ಯ ಸಿಗುತಿತ್ತು. ಅರಬ್ ಮೂಲದ ಭೂಗೋಳಶಾಸ್ತ್ರಜ್ಞರಾದ ಅಲ್ -ಇದ್ರಿಸಿ, ಇಬ್ ಬತೂತಾ, ಅಲ್ - ಬಿರೂನಿ, ಇಬ್ಸೀನ ಮುಂತಾದವರು ಭಾರತದಭೌಗೋಳಿಕ ಚಿತ್ರಣವನ್ನು ವಿಶ್ವಕ್ಕೆ ಪರಿಚಯಸಲು ಮೂಲಕೃತಿಗಳನ್ನು ರಚಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಅಲ್- ಬಿರೂನಿಯ ಕಿತಾಬುಲ್ ಹಿಂದ್ ಭಾರತದ ಸಂಸ್ಕೃತಿಯನ್ನು ಅರೇಬಿಯಾ ದೇಶಕ್ಕೆ ಉತ್ತಮ ರೀತಿಯಲ್ಲಿ ಪರಿಚಯಿಸಿದೆ. ವಿಜಯನಗರಕ್ಕೆ ಭೇಟಿ ನೀಡಿದ ಪರ್ಷಿ ಯಾದಯಾತ್ರಿಕ ಅಬ್ದುಲ್ ರಝಾಕ್ ಅಲ್ಲಿಯ ಉತ್ತುಂಗದ ಸ್ಥಿತಿಯನ್ನು ದಾಖಲಿಸಿದ್ದಾರೆ. ಸಂಪತ್ತು ಗಳಿಸುವಿಕೆ – ಸಾಂಬಾರ ಪದಾರ್ಥಗಳು, ರೇಷ್ಮೆ, ಚಿನ್ನ, ದಂತ ಮುಂತಾದ ಬೆಲೆಬಾಳುವ ಸರಕು ಸಂಪತ್ತುಗಳ ನೇರ ನಿಯಂತ್ರಣ, ರಾಜಕೀಯ ಅಧಿಕಾರ ಮತ್ತು ಪ್ರತಿಷ್ಠೆ, ಮಧ್ಯವರ್ತಿಗಳನ್ನು ದೂರವಿಡಲು, ಆರ್ಥಿಕ ಸ್ಥಿರತೆ ಮತ್ತು ಸೈನ್ಯ ಶಕ್ತಿ ಬಲಪಡಿಸಲು ಹೊಸ ವ್ಯಾಪಾರಮಾರ್ಗ ಹುಡುಕುವುದನ್ನು ಪ್ರೋತ್ಸಾಹಿಸುತ್ತಿದ್ದರು.
ವ್ಯಾಪಾರದ ಉದ್ದೇಶದಿಂದ ಚೀನಾವನ್ನು ಐರೋಪ್ಯ, ಮಧ್ಯ ಪ್ರಾಚ್ಯ ಹಾಗೂ ಏಷ್ಯಾದ ಇತರ ಭಾಗಗಳ ನಡುವೆ ಜೋಡಿಸಿ ವ್ಯಾಪಾರವನ್ನು ಸುಗಮಗೊಳಿಸುವ ಕ್ರಿ. ಪೂ. 2ನೇ ಶತಮಾನದಿಂದ ಕ್ರಿ. ಶ. 14 ನೇ ಶತಮಾನದ ವರೆಗೆ ಮಾನದಿಂದ ಅಸ್ತಿತ್ವ ದಲ್ಲಿದ್ದ ವ್ಯಾಪಾರ ಮಾರ್ಗಗಳ ಸಂಕೀರ್ಣ ಜಾಲ ರೇಷ್ಮೆ ಮಾರ್ಗ. ಈ ಮಾರ್ಗದ ಮೂಲಕ ರೇಷ್ಮೆಯೊಂದಿಗೆ ಇತರ ಸರಕುಗಳು ಹಾಗೂ ಸಂಸ್ಕೃತಿಯ ವಿನಿಮಯ ನಿರಂತರವಾಗಿ ನಡೆಯುತ್ತಿತ್ತು. ಚೀನಾದ ಹೂನರು, ಭಾರತದ ಕುಶಾನರು, ರೋಮನ್ ಸಾಮ್ರಾಜ್ಯ, ಮಂಗೋಲ್ ಸಾಮ್ರಾಜ್ಯ, ತಿಮುರೀಡ್ ರಾಜವಂಶ ಮತ್ತು ಅಬ್ಬಾಸಿಯ ಖಿಲಾಫತ್ ಈ ರೇಷ್ಮೆ ಮಾರ್ಗದ ವ್ಯಾಪಾರಕ್ಕೆ ರಾಜಾಶ್ರಯ ನೀಡುತ್ತಿದ್ದವು. ಈ ವ್ಯಾಪಾರ ಮಾರ್ಗಗಳು ಭೂಮಾರ್ಗ ಮತ್ತು ಸಮುದ್ರ ಮಾರ್ಗಗಳ ಸಂಕೀರ್ಣ ಜಾಲವಾಗಿತ್ತು.
ಈ ಸಾಗರ ವ್ಯಾಪಾರದ ಜೊತೆಗೆ ಮನುಷ್ಯ ಸಹಜವಾದ ಸಂವಹನ-ಸಂಕಟಗಳ ಮುಖಾಮುಖಿ, ಚರ್ಚೆ ಮತ್ತು ವಿನಿಮಯ ಆಗುತ್ತಿತ್ತು. ಒಟ್ಟಾರೆಯಾಗಿ ಇದು ಸಂಸ್ಕೃತಿಯ ವಿನಿಮಯ ಪ್ರಕ್ರಿಯೆ ಕೂಡ ಆಗಿತ್ತು. ಸಂಸ್ಕೃತಿ ಎಂದರೆ ಒಂದು ಸಂಕೀರ್ಣ ಅರ್ಥ ನೀಡುವ ಪರಿಕಲ್ಪನೆ. ಅದು ಅನೇಕ ಅಂಶಗಳನ್ನು ಒಳಗೊಂಡ ಒಂದು ಸಾಮಾಜಿಕ ವ್ಯವಸ್ಥೆ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಸಾಹಿತ್ಯ, ಕಲೆ ಮತ್ತು ಧಾರ್ಮಿಕ ನಂಬಿಕೆ ಜೊತೆಗೆ ಭಾಷೆ ಎಲ್ಲವೂ ಸೇರಿ ಉಂಟಾಗುವ ಒಂದು ಸಂಕರ ವ್ಯವಸ್ಥೆ ಇದುವೇ ಸಂಸ್ಕೃತಿ, ಸಂಸ್ಕೃತಿಯನ್ನು ಪರಿಚಯಿಸುವುದು ಭಾಷೆಯ ಮುಖಾಂತರ, ಅರೇಬಿಯನ್ನರು ಭಾರತಕ್ಕೆ ವ್ಯಾಪಾರಕ್ಕೆ ಬಂದಾಗ ಅಲ್ಲಿಯ ಸಂಸ್ಕೃತಿ ಯನ್ನು ಇಲ್ಲಿಗೆ ತರುತ್ತಾರೆ. ಅದೇ ರೀತಿ, ಇಲ್ಲಿಯ ಸಂಸ್ಕೃತಿ ಯ ರವಾನೆಯೂ ಇದರಲ್ಲಿ ನಿರಂತರವಾದ ಪ್ರಕ್ರಿಯೆ.
ಬಂಡವಾಳ, ಉತ್ಪಾದನಾ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಭಾಗವಾಗಿದ್ದು ಅದರಲ್ಲಿ ಬರುವ ಅನೇಕ ಆರ್ಥಿಕ ಚಟುವಟಿಕೆಗಳು ಸಾಮಾಜಿಕ ವಾಗಿಯೂ ಧಾರ್ಮಿಕ ವಾಗಿಯೂ ಹಾಗೂ ರಾಜಕೀಯವಾಗಿಯೂ ಪರಸ್ಪರ ಬೆಸೆದುಕೊಂಡಿರುವುದರಿಂದ ಅದು ಈ ಹಿನ್ನಲೆಯ ಒಂದು ಸಂಕರ ಸಂಸ್ಕೃತಿ. ಈ ಸಂಸ್ಕೃತಿಯ ದೂರವ್ಯಾಪಿ ಮತ್ತು ದೂರಗಾಮಿ ವಾಹಕ "ಅಂತರಾಷ್ಟ್ರೀಯ ವ್ಯಾಪಾರ". ಕರಾವಳಿ ಪ್ರದೇಶಗಳಲ್ಲಿ ಅನೇಕ ಪಟ್ಟಣಗಳು ಸಮುದ್ರ ಮಾರ್ಗದ ಮೂಲಕ ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಂಡವು. ಈ ವ್ಯಾಪಾರ ವೃತ್ತಿಗೆ ಪೂರಕವಾಗಿ ನಗರಗಳು ಹುಟ್ಟಿಕೊಂಡು ಇವು ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಾ ಅದನ್ನು ಅಂತರಾಷ್ಟ್ರೀಯ ವ್ಯಾಪಾರಕ್ಕೆ ಮುಂದುವರಿಸುವ ಸಂಕೀರ್ಣ ಕಾರ್ಯವನ್ನು ಕೈಗೊಳ್ಳು ತ್ತಿದ್ದವು. ಈ ನಗರ ನಿರ್ಮಾಣಕ್ಕೂ ಅಂತರಾಷ್ಟ್ರೀಯ ವ್ಯಾಪಾರಕ್ಕೂ ನೇರ ಸಂಬಂಧವಿತ್ತು.
ಭಾರತದ ಭೌಗೋಳಿಕ ಪರಿಸ್ಥಿತಿ ಅದರಲ್ಲೂ ಮುಖ್ಯವಾಗಿ ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದ ಮಾರುತಗಳು ಮತ್ತು ಅದರ ವೇಗ, ವ್ಯಾಪಾರಿಗಳ ಸಮುದ್ರ ಮಾರ್ಗದ ಯಾನಕ್ಕೆ ಪೂರಕವಾದ ನೈಸರ್ಗಿಕ ನಿರ್ಮಿತ ವೇದಿಕೆಗಳಾಗಿತ್ತು. ಮಾನ್ಸೂನ್ ಮಾರುತ ಈಶಾನ್ಯ ದಿಕ್ಕಿಗೆ ಮಳೆ ತರುವಂತಹ ಒಂದು ಪ್ರಮುಖ ಮಾರುತ, ಮಾನ್ಸೂನ್ ಪದ ಅರೇಬಿಕ್ ಮೂಲದ ಪದ. ಮೌಸಂ ಅಂದರೆ ಋತುಮಾನ ಎಂದರ್ಥ. ಮಾನ್ಸೂನ್ ಜೂನಿನಿಂದ ಸೆಪ್ಟೆಂಬರ್ ವರೆಗೆ ಪಶ್ಚಿಮ ಕರಾವಳಿಯ ಎಲ್ಲಾ ಪ್ರದೇಶಗಳಿಗೂ ಮಳೆ ತರುತ್ತಿತ್ತು. ಇದು ಅರೇಬಿಯದಿಂದ ವರ್ತಕರಿಗೆ ಹಡಗಿನ ಮೂಲಕ ಸರಕು ತರಲು ಸಹಕಾರಿಯಾಗಿತ್ತು. ವೇಗವಾಗಿ ಬೀಸುವ ಮಾನ್ಸೂನ್ ಗಾಳಿ, ಸಾಗರಯಾನಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಮಾನ್ಸೂನ್ ಜಾಡು ಹಿಡಿದು ಹಡಗಿನಲ್ಲಿ ಅರೇಬಿಯಾದ ಕುದುರೆಗಳು ಭಾರತಕ್ಕೆ ರವಾನೆ ಆಗುತ್ತಿದ್ದರೆ.ಭಾರತದ ಸಾಂಬಾರ ಪದಾರ್ಥಗಳು ಆದರಲ್ಲೂ ಮುಖ್ಯವಾಗಿ ಕರಿಮೆಣಸು, ದಾಲ್ಟಿನಿ ಮತ್ತು ಮಸ್ಲಿನ್ ಬಟ್ಟೆಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇತ್ತು. ಅರೇಬಿಯಾದ ಮೂಲಕ ಅದು ಯುರೋಪಿನ ಮಾರುಕಟ್ಟೆಗೆ ರವಾನೆ ಆಗುತ್ತಿತ್ತು
ಹೊಸ ಮಾರುಕಟ್ಟೆ ಅಥವಾ ಹೊಸ ಕಚ್ಚಾ ವಸ್ತುಗಳು ಲಭ್ಯವಿರುವ ತಾಣಗಳನ್ನು ಅರಸುತ್ತಾ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ದೀರ್ಘ ಪಯಣ ಕೈಗೊಂಡಿದ್ದ ಸಾಹಸಿಗಳೂ ಇದ್ದರು. ಮಾರ್ಕೊ ಪೋಲೊ. ಕ್ರಿಸ್ಟೋಫರ್ ಕೊಲಂಬಸ್. ವಾಸ್ಕೋ ಡಾ ಗಾಮ, ಫರ್ಡಿನಾಂಡ್ ಮೆಗೆಲೆನ್, ಬರ್ತಾಲೋಮೋ ಡಯಾಸ್, ಸಾಮುಲ್ ಪೆದ್ರೋ ಮತ್ತು ಆಳ್ವಾರಸ್ ಕಾರ್ಬಲ್ ಮುಂತಾದ ನಾವಿಕರು ಹೊಸ ಮಾರ್ಗಗಳ ಮಾರುಕಟ್ಟೆಗಳ ಜೊತೆಗೆ, ಸಂಪರ್ಕ,ಸಂಸ್ಕೃತಿ ಮತ್ತು ತಂತ್ರಜ್ಞಾನಗಳ ವಿನಿಮಯಕ್ಕೂ ಹೊಸ ಆಯಾಮ ನೀಡಿದರು.
ಇಸ್ಲಾಂ ದಕ್ಷಿಣ ಭಾರತಕ್ಕೆ ಅದರಲ್ಲೂ ಮುಖ್ಯವಾಗಿ ಕೇರಳ ತೀರಕ್ಕೆ ಬಂದು ಬಲವಾಗಿ ನೆಲೆಯೂರಲು ಹಲವಾರು ಕಾರಣಗಳನ್ನು ನೀಡಬಹುದು. ಅದರಲ್ಲಿ ಮುಖ್ಯವಾಗಿ ಇರುವ ಕಾರಣಗಳೇನೆಂದರೆ, ಈ ಮೊದಲು ಉಲ್ಲೇಖಿಸಿರುವ ಅರಬ್ ಮತ್ತು ಪಶ್ಚಿಮ ಕರಾವಳಿಯ ನಡುವೆ ಇದ್ದಂತಹ ವ್ಯಾಪಾರ, ಎರಡನೆಯದಾಗಿ, ಸಮುದ್ರ ವ್ಯಾಪಾರಕ್ಕೆ ಉತ್ತೇಜಕವಾಗಿ ಸಮುದ್ರ ವ್ಯಾಪಾರದಲ್ಲಿ ತೊಡಗಿರುವ ಆರಬಿಗಳೊಂದಿಗೆ ಸಂಪರ್ಕ ಗಟ್ಟಿಗೊಳಿಸಲು ಮತ್ತು ವ್ಯಾಪಾರಕ್ಕಾಗಿ ಒಳನಾಡಿಗೆ ಬಂದ ಅರಬರೊಂದಿಗೆ ಅವರ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗೆ ಸಹಕಾರಿಯಾಗಲುಬೇಕಾದ ಉಪಕ್ರಮಗಳಾದ ಮಸೀದಿ ನಿರ್ಮಾಣ, ಧಾರ್ಮಿಕ ಪ್ರಚಾರ ಪ್ರಸರಣಕ್ಕೆ ಮುಕ್ತ ಅವಕಾಶ ಮತ್ತು ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಇದ್ದಂತಹ ಅಸ್ಪೃಶ್ಯತಾ ನಿಯಮ ಮತ್ತು ಇಸ್ಲಾಂ ಬೋಧಿಸಿದ ಸರಳ ಸಮಾನತೆಯ ತತ್ವಗಳ ಮೇಲಿನ ಆಕರ್ಷಣೆಯೂ ಇದ್ದವು. ಆದರೆ ಅದಕ್ಕೆಲ್ಲ ಮುಖ್ಯ ಕಾರಣ ಅರಬರೊಂದಿಗೆ ವ್ಯಾಪಾರ ಮಾಡುವುದು ಕಲ್ಲಿಕೋಟೆಯ ಸಾಮೂದರಿ ರಾಜನಿಗೆ ಅನಿವಾರ್ಯ ವಾದುದರಿಂದ ಅವರ ಮೆಚ್ಚುಗೆ ಪಡೆಯುವುದು ಅವನ ಅವಶ್ಯಕತೆಯಾಗಿತ್ತು. ಹಾಗಾಗಿ ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಅವನು ರಾಜ್ಯದಲ್ಲಿ ಏರ್ಪಡಿಸಿದ ಕಾರಣ ಇಸ್ಲಾಂ ಗಟ್ಟಿಯಾಗಿ, ವ್ಯಾಪಕವಾಗಿ ಕೇರಳದಲ್ಲಿ ನೆಲೆ ನಿಂತಿತು.
ಕೇರಳದ ಕರಾವಳಿಯ ಮುಸ್ಲಿಮರನ್ನು ಮಾಪಿಲ್ಲ ಮುಸ್ಲಿಮರೆಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಈ ಮಾಪಿಲ್ಲ ಜನರ ಮೂಲದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ.
ಮೊದಲ ಅಭಿಪ್ರಾಯದ ಪ್ರಕಾರ ಅರಬ್ ವ್ಯಾಪಾರಿಗಳು ಮತ್ತು ಸ್ಥಳೀಯ ಮಹಿಳೆಯರ ನಡುವೆ ಏರ್ಪಟ್ಟ ವೈವಾಹಿಕ ಸಂಬಂಧದಿಂದ ಉಂಟಾದ ಮಕ್ಕಳನ್ನು "ಮಹಾ ಪಿಳ್ಳೆ" ಎಂದು ಕರೆದರು ಎಂಬುವುದಾಗಿದೆ. ಎರಡನೇ ಅಭಿಪ್ರಾಯದ ಪ್ರಕಾರ ಮಾ ಅಂದರೆ ತಾಯಿ, ಪಿಲ್ಲೆ ಅಂದರೆ ಮಗು ಅಂದರೆ ತಾಯಿ ಸಾಕಿದ ಮಗು. ಇಲ್ಲಿ ತಂದೆ ವಿದೇಶಿ ಮೂಲದ ಆರಬ್ ಆದರೆ ತಾಯಿ ಸ್ಥಳೀಯ ಮಹಿಳೆ ಮತ್ತು ಪುರುಷ ನಿರಂತರವಾಗಿ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ, ಮಹಿಳೆ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿ ಕೊಂಡಿರುತ್ತಾಳೆ. ಮೂರನೇ ಅಭಿಪ್ರಾಯದ ಪ್ರಕಾರ ಮಹಾ ಪಿಳ್ಳೆ ಅಂದರೆ ಒಬ್ಬ ಶ್ರೇಷ್ಟ ಲೆಕ್ಕತಜ್ಞ ಅರ್ಥಾತ್ ವ್ಯಾಪಾರಿ. ಇದೇ ಮೂಲದ ತುಸು ವಿಭಿನ್ನವಾದ ಸಮುದಾಯ ದಕ್ಷಿಣ ಕನ್ನಡ ಜಿಲ್ಲೆಯ ತುಳು ಸಂಸ್ಕೃತಿ ಯೊಂದಿಗೆ ಬೆರೆತಾಗ ಅಲ್ಲಿ ಉದ್ಭವಿಸಿದ ಒಂದು ಸಂಕರ ವರ್ಗ, ತುಳುನಾಡಿನ ತುಳು ಭಾಷೆಗೆ ನಿಕಟವಾದ ಭಾಷೆ ಮತ್ತು ಸಂಸ್ಕೃತಿಯನ್ನು ಅನುಸರಿಸುವ, ಹೆಚ್ಚಾಗಿ ಜೀವನೋಪಾಯಕ್ಕೆ ಸಣ್ಣಪುಟ್ಟ ವ್ಯಾಪಾರವನ್ನು ಕಸುಬಾಗಿ ಮಾಡಿಕೊಂಡ ಬ್ಯಾರಿಗಳು. ಇವರ ಧಾರ್ಮಿಕ ಸಂಸ್ಕೃತಿ ಮಾಹಿಲ್ಲ ಸಂಸ್ಕೃತಿಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ.
ಆದೇ ರೀತಿಯಲ್ಲಿ ಉತ್ತರ ಕನ್ನಡದ ಭಟ್ಕಳ ಕೇಂದ್ರವಾಗಿ ರಿಸಿರುವ ನವಾಯಿತಿ ಮುಸಲ್ಮಾನರು ಮತ್ತು ರತ್ನಗಿರಿ ಮತ್ತು ಕೊಂಕಣ್ ತೀರದ ಕೊಂಕಣಿ ಮುಸ್ಲಿಮರು, ಮತ್ತು ಕೋರಮಂಡಲ ತೀರದ ಲಬ್ಬಯಿ, ರಾವುತಾರ್ ಮಾರಾಕ್ಟರ್, ಶ್ರೀಲಂಕಾದ ಮುರಾರುಗಳು ಮತ್ತು ಗುಜರಾತಿನ ಮೆಮನ್ಗಳು ಪ್ರಮುಖವಾಗಿ ಭಾರತದ ಉಭಯ ಕರಾವಳಿಯ ಮುಸ್ಲಿಮರು. ಇವರೆಲ್ಲರು ಅರಬ್ ದೇಶದ ವ್ಯಾಪಾರಿಗಳು ಮತ್ತು ಸ್ಥಳೀಯ ಸ್ತ್ರೀಯರ ವೈವಾಹಿಕ ಸಂಬಂಧದ ಸಂತಾನಗಳು. ಇದಲ್ಲದೆ ಶಾಂತಿಯುತ ರೀತಿಯಲ್ಲಿ ಇಸ್ಲಾಮಿನ ಮೂಲಭೂತ -ಸರಳ ಆಚರಣೆ ಮತ್ತು ಭ್ರಾತೃತ್ವ ಸಿದ್ಧಾಂತಕ್ಕೆ ಪ್ರಭಾವ ಗೊಂಡು ಕೆಳ ವರ್ಗದಿಂದ ರಾಜಾಶ್ರಯದೊಂದಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು. ಈ ಮೂಲದ ಮುಸ್ಲಿಂ ವರ್ಗಕ್ಕೆ ಸೇರುತ್ತಾರೆ. ಇವರೆಲ್ಲರಲ್ಲರೂ ( ಮೆಮನ್ ಹೊರತು ಪಡಿಸಿ) ಇಸ್ಲಾಮಿನ ಶಾಫಿ ಕರ್ಮ ಶಾಸ್ತ್ರವನ್ನು ಅನುಸರಿಸುವರು. ಹಾಗೂ ಭಾರತದ ಇತರ ಮುಸ್ಲಿಮರಿಗಿಂತ ಭಿನ್ನವಾಗಿ ಸ್ಥಳೀಯ ಭಾಷೆಯನ್ನು ತಮ್ಮ ಮನೆಮಾತಾಗಿ ಉಳಿಸಿಕೊಂಡು, ಇಸ್ಲಾಂ ಸಂಸ್ಕೃತಿಗೆ ಪೂರಕವಾಗಿ ಸ್ವಲ್ಪ ಮಾರ್ಪಾಡು ಮಾಡಿಕೊಂಡು ಇಲ್ಲಿನ ಸ್ಥಳೀಯ ರೀತಿಯ ವಸ್ತ್ರಧಾರಣೆ ಮಾಡುವವರಾಗಿರುತ್ತಾರೆ. ಇವರಲ್ಲಿ ಹಿಂದೆ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಮತ್ತು ಉತ್ತರಾಧಿಕಾರ ವ್ಯವಸ್ಥೆ ಇತ್ತು.
ಕೇರಳ ತೀರಕ್ಕೆ ಇಸ್ಲಾಂ ಪರಿಚಯಿಸಿದ ಮಾಲಿಕ್ ದಿನಾರ್ ತಂಡದ ಆಗಮನದ ಹಂತದಿಂದ 1498 ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಾಗಾಮ ಕಲ್ಲಿಕೋಟೆಗೆ ಬಂದಿಳಿದ ತನಕ ಕರಾವಳಿ ಭಾಗದ ಮುಸಲ್ಮಾನರು ಸಮುದ್ರ ವ್ಯಾಪಾರದಲ್ಲಿ ಪ್ರಬಲರಾಗಿದ್ದರು. ಇವರ ವ್ಯಾಪಾರದ ಕೌಶಲ್ಯದ ಜೊತೆಗೆ ಉತ್ತಮ ಧಾರ್ಮಿಕ ಅನುಸರಣೆಯ ಪ್ರಭಾವದಿಂದ ಕರಾವಳಿಯ ಶಕ್ತ ವ್ಯಾಪಾರಿ ತಂಡವಾಗಿತ್ತು. ಆದರೆ 1498ರ ನಂತರ ಪೋರ್ಚುಗೀಸರು ವ್ಯಾಪಾರದಲ್ಲಿ ಮುಸ್ಲಿಮರಿಗಿದ್ದ ಹಿಡಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಪರಿಣಾಮ ಪ್ರಬಲರಾಗಿದ್ದ ಮುಸ್ಲಿಮರು ಸಬಾಲ್ಫಾನ್ ಹಂತಕ್ಕೆ ಕುಸಿದರು.ಒಟ್ಟಿನಲ್ಲಿ ವ್ಯಾಪಾರ ವೃತ್ತಿಯಿಂದ ಜನಾನುರಾಗಿ ಯಾಗಿ ಗುರುತಿಸಿ ಕೊಂಡ ಒಂದು ಸಮುದಾಯ ಅದೇ ವ್ಯಾಪಾರದ ಕಾರಣ ತುಳಿತಕ್ಕೆ ಒಳಗಾಗಿ ಮತ್ತೆ ಇಂದು ತಲೆ ಎತ್ತಿ ನಿಲ್ಲುವ ಸ್ಥಿತಿಗೆ ಬಂದಿದೆ.