ಅಮವಿ ಸಾಮ್ರಾಜ್ಯ: ಉದಯ, ಆಡಳಿತ ಮತ್ತು ಪತನ
Ajvad Ujire
ನಾಲ್ಕು ಖುಲಫಾ ರಾಶಿದೂನ್‌ಗಳ ಆಡಳಿತದ ನಂತರ ಮುಸ್ಲಿಂ ಲೋಕದಲ್ಲಿ ಆರಂಭವಾದ ಆಡಳಿತ ವಂಶವೇ ಅಮವಿಗಳು. ಸ್ವಹಾಬಿವರ್ಯರಾದ ಮುಆವಿಯ ಬಿನ್ ಅಬೀ ಸುಫ್ಯಾನ್ (ರ) ಇದರ ಸ್ಥಾಪಕರಾಗಿದ್ದರು. ಡಮಸ್ಕಸ್ ಆಗಿತ್ತು ಆಡಳಿತದ ರಾಜಧಾನಿ. ಹಿಜ್ರಾ ವರ್ಷ 41ರಿಂದ 132ರವರೆಗೆ (ಕ್ರಿ.ಶ. 661–750) ಈ ಆಡಳಿತ ಮುಂದುವರಿಯಿತು. ಮುಆವಿಯ (ರ) ಅವರ ತಂದೆ ಅಬೂ ಸುಫ್ಯಾನ್ ಅವರ ಕುಟುಂಬವಾದ ಬನೂ ಉಮಯ್ಯಕ್ಕೆ ಸೇರಿದ್ದರಿಂದ ಇದಕ್ಕೆ ಉಮವಿ ಎಂಬ ಹೆಸರು ಬಂದಿತು. ಹಿಂದೆ ಸಿರಿಯದ ಗವರ್ನರ್ ಆಗಿದ್ದ ಮುಆವಿಯ (ರ), ಅಲಿ (ರ) ಅವರ ಕಾಲದಲ್ಲಿ ಉಂಟಾದ ಗೊಂದಲಮಯ ಪರಿಸ್ಥಿತಿಯಿಂದ ಹೊರಬಂದು ಹೊಸ ಖಿಲಾಫತ್‌ಗೆ ಚಾಲನೆ ನೀಡಿದರು. 92 ವರ್ಷಗಳ ಈ ಆಡಳಿತ ಕಾಲದಲ್ಲಿ 78 ವರ್ಷ ಮರ್ವಾನ್ ಕುಟುಂಬದವರು ಹಾಗೂ 14 ವರ್ಷ ಮುಆವಿಯ ಕುಟುಂಬದವರು ಆಡಳಿತ ನಡೆಸಿದರು.
ಮುಆವಿಯ (ಹಿಜ್ರಾ 41–60), ಯಝೀದ್ ಪ್ರಥಮ (60–64), ಮರ್ವಾನ್ ಪ್ರಥಮ (64–65), ಅಬ್ದುಲ್ ಮಲಿಕ್ (65–86), ವಲೀದ್ ಪ್ರಥಮ (86–96), ಸುಲೈಮಾನ್ (96–99), ಉಮರ್ ಬಿನ್ ಅಬ್ದುಲ್ ಅಝೀಝ್ (99–101), ಯಝೀದ್ ದ್ವಿತೀಯ (101–105), ಹಿಶಾಮ್ ಬಿನ್ ಅಬ್ದುಲ್ ಮಲಿಕ್ (105–125), ವಲೀದ್ ದ್ವಿತೀಯ (125–126), ಇಬ್ರಾಹೀಮ್ (126–127) ಮತ್ತು ಮರ್ವಾನ್ ದ್ವಿತೀಯ (127–135) ಅಮವಿ ಖಲೀಫರಾಗಿದ್ದರು.
ಹಿಂದಿನ ಆಡಳಿತ ವ್ಯವಸ್ಥೆಗಳಿಗೆ ಹೋಲಿಸಿದರೆ, ಆಡಳಿತ, ರಾಜಕೀಯ, ಆರ್ಥಿಕತೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಈ ಆಡಳಿತ ವಂಶವು ಅನೇಕ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ತಂದಿತು. ಮಧ್ಯ ಏಷ್ಯಾದ ವಿಜಯ, ಸ್ಪೇನ್ ವಿಜಯ, ಕರ್ಬಲಾ, ಕಾನ್ಸ್ಟಾಂಟಿನೋಪಲ್ ಮೇಲಿನ ಯುದ್ಧ, ಸಿಂಧ್ ವಿಜಯ ಹಾಗೂ ಕೈರುವಾನ್ ನಗರದ ಸ್ಥಾಪನೆ ಮುಂತಾದವು ಈ ಆಡಳಿತದ ಇತಿಹಾಸದಲ್ಲಿ ಬಹಳ ಮಹತ್ವದ ಸಾಧನೆಗಳಾಗಿವೆ.
ವಿಶಾಲವಾದ ಇಸ್ಲಾಮಿಕ್ ಸಾಮ್ರಾಜ್ಯವನ್ನು ಒಂಬತ್ತು ಆಡಳಿತ ಪ್ರದೇಶಗಳಾಗಿ ವಿಭಜಿಸಿ ಅಮವಿಗಳು ತಮ್ಮ ಆಡಳಿತವನ್ನು ನಡೆಸುತ್ತಿದ್ದರು.
- ಸಿರಿಯಾ ಮತ್ತು ಪ್ಯಾಲೆಸ್ತೀನ್ ಸೇರಿರುವ ಪ್ರದೇಶ
- ಕೂಫಾ ಮತ್ತು ಇರಾಕ್
- ಬಸ್ರಾ
- ಹಿಜಾಝ್
- ಕರ್ಮಾನ್
- ಅರ್ಮೇನಿಯ
- ಈಜಿಪ್ಟ್
- ಇಫ್ರಿಕಿಯಾ
- ಯಮನ್
ಈ ಪ್ರತಿಯೊಂದು ಆಡಳಿತ ಪ್ರದೇಶಕ್ಕೂ ಪ್ರತ್ಯೇಕ ಗವರ್ನರ್‌ಗಳನ್ನು ನೇಮಿಸಲಾಗುತ್ತಿತ್ತು. ಅವರನ್ನು ಅಮೀರ್ ಎಂದು ಕರೆಯಲಾಗುತ್ತಿತ್ತು. ಜನರು ಮತ್ತು ಆಡಳಿತ ಪ್ರದೇಶಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳು ಅವರ ಮೂಲಕ ಖಲೀಫರ ಗಮನಕ್ಕೆ ಬರುತ್ತಿದ್ದವು. ಅನೇಕ ವಿಷಯಗಳಲ್ಲಿ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅವಕಾಶವಿದ್ದರೂ, ಯುದ್ಧ, ಸಂಧಿ ಮತ್ತು ಆಕ್ರಮಣದಂತಹ ಅತ್ಯಂತ ಪ್ರಮುಖ ವಿಷಯಗಳಲ್ಲಿ ಖಲೀಫರ ಅಭಿಪ್ರಾಯವನ್ನು ಪಡೆದ ನಂತರವೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿತ್ತು.
ಧಾರ್ಮಿಕ ಕಾರ್ಯಗಳ ನೇತೃತ್ವ, ತೆರಿಗೆ ಸಂಗ್ರಹ ಮತ್ತು ಕಾನೂನು ಹಾಗೂ ಸುವ್ಯವಸ್ಥೆಯ ಪಾಲನೆ ಹೀಗೆ ಸಾರ್ವಜನಿಕ ಆಡಳಿತವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಅಮವಿಗಳ ಆಡಳಿತ ನಿಯಂತ್ರಣ ವ್ಯವಸ್ಥೆಯು ಈ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಹೊಸದಾಗಿ ವಶಪಡಿಸಿಕೊಂಡ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹ ಮತ್ತು ಆಡಳಿತ ನಿರ್ವಹಣೆಯ ಜವಾಬ್ದಾರಿಯನ್ನು ಸಾಹಿಬುಲ್ ಖರಾಜ್ ಎಂಬ ತೆರಿಗೆ ಸಂಗ್ರಹ ವಿಭಾಗವು ನಿರ್ವಹಿಸುತ್ತಿತ್ತು. ನ್ಯಾಯಾಂಗ ವ್ಯವಸ್ಥೆ ಮತ್ತು ಧಾರ್ಮಿಕ ಕಾರ್ಯಗಳ ಜವಾಬ್ದಾರಿ ಖಾಝಿಗಳ ಮೇಲಿತ್ತು. ಈ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರತಿಯೊಂದು ಪ್ರದೇಶದಲ್ಲಿಯೂ ಪ್ರತ್ಯೇಕ ಖಾಝಿಗಳು ಅಥವಾ ನ್ಯಾಯಾಧೀಶರನ್ನು ನೇಮಿಸಲಾಗುತ್ತಿತ್ತು. ಅವರ ಸಾಮರ್ಥ್ಯ ಮತ್ತು ಅರ್ಹತೆಗೆ ಅನುಗುಣವಾಗಿ ಆ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಗಳ ನಿರ್ವಹಣೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ನಿರ್ಧರಿಸಲಾಗುತ್ತಿತ್ತು. ಸೈನ್ಯದ ಸಹಾಯದಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುತ್ತಿತ್ತು. ಈ ಕಾಲದಲ್ಲಿ ಮುಸ್ಲಿಮರ ಶಸ್ತ್ರಾಸ್ತ್ರ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಾಯಿತು. ಅಲ್ಲದೆ, ವಿವಿಧ ವಿಭಾಗಗಳಲ್ಲಿನ ಸೈನಿಕ ಸಾಮರ್ಥ್ಯವೂ ಹತ್ತು ಪಟ್ಟು ವೃದ್ಧಿಸಿತು. ಕಾಲಾಳುಪಡೆ ಮತ್ತು ಅಶ್ವದಳಗಳು ಹೆಚ್ಚಿನ ಶಕ್ತಿಯನ್ನು ಪಡೆದುಕೊಂಡವು.
ಖಿಲಾಫತ್‌ನ ಪವಿತ್ರ ಆಡಳಿತ ವ್ಯವಸ್ಥೆಯಿಂದ ಇಸ್ಲಾಮಿಕ್ ಆಡಳಿತವು ರಾಜಪ್ರಭುತ್ವದ ವ್ಯವಸ್ಥೆಯತ್ತ ಬದಲಾದದ್ದು ಅಮವಿ ಆಡಳಿತದ ಅತ್ಯಂತ ಮಹತ್ವದ ಪರಿಣಾಮಗಳಲ್ಲಿ ಒಂದಾಗಿದೆ. ಉಮರ್ ಬಿನ್ ಅಬ್ದುಲ್ ಅಝೀಝ್ (ರ) ಅವರಂತಹ ನ್ಯಾಯಯುತ ಆಡಳಿತಗಾರರು ಇದ್ದರೂ, ಇತರ ಅನೇಕ ಆಡಳಿತಗಾರರು ಸರ್ವಾಧಿಕಾರದ ಸ್ವರೂಪ ಮತ್ತು ಶೈಲಿಯನ್ನು ಅನುಸರಿಸಿದರು. ಈ ಕಾಲದಲ್ಲಿ ಜನರಿಗೆ ಖಲೀಫರನ್ನು ಪ್ರಶ್ನಿಸುವ ಅವಕಾಶ ಕಡಿಮೆಯಾಯಿತು. ಖಲೀಫರು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳನ್ನು ಪ್ರಜೆಗಳ ಮೇಲೆ ಬಲವಂತವಾಗಿ ಹೇರಬಹುದಾದ ಪರಿಸ್ಥಿತಿಯೂ ನಿರ್ಮಾಣವಾಯಿತು.
ಸಾಹಿತ್ಯ, ಶಿಕ್ಷಣ, ನಿರ್ಮಾಣ ಮತ್ತು ನಾಗರಿಕತೆಯ ಕ್ಷೇತ್ರಗಳಲ್ಲಿಯೂ ಅಮವಿ ಆಡಳಿತದ ಕಾಲದಲ್ಲಿ ಮುಸ್ಲಿಮರು ವ್ಯವಸ್ಥಿತ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸಿದರು. ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳು ವಿಸ್ತರಿಸಿದವು. ಇದರಿಂದ ಪ್ರದೇಶದಲ್ಲಿ ಸಮೃದ್ಧಿ ನೆಲೆಸಿತು. ಸುಂದರವಾದ ಮಸೀದಿಗಳು ಮತ್ತು ಗುಮ್ಮಟಗಳ ನಿರ್ಮಾಣ ಸಾಮಾನ್ಯವಾಯಿತು. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪ್ರಗತಿ ಕಂಡುಬರದಿದ್ದರೂ, ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗಳಲ್ಲಿ ಕೆಲವು ಬೆಳವಣಿಗೆಗಳು ಈ ಕಾಲದಲ್ಲಿ ಸಂಭವಿಸಿದವು. ಕವಿಗಳು, ಸಾಹಿತಿಗಳು ಮತ್ತು ವಿಜ್ಞಾನಿಗಳು ಈ ಕಾಲದಲ್ಲಿ ಹೊರಹೊಮ್ಮಿದರು.
ಆಡಳಿತದ ನಾಯಕತ್ವಕ್ಕಾಗಿ ನಡೆದ ಆಂತರಿಕ ಸಂಘರ್ಷಗಳು ಅಂತಿಮವಾಗಿ ಅಮವಿಗಳ ಶಕ್ತಿ ಕುಂದಲು ಕಾರಣವಾದವು. ಈ ಅವಕಾಶವನ್ನು ಬಳಸಿಕೊಂಡ ಅಬ್ಬಾಸಿಗಳು ಮತ್ತು ಶಿಯಾಗಳು ಅಮವಿಗಳ ಶಕ್ತಿಯನ್ನು ದುರ್ಬಲಗೊಳಿಸಿದರು.
ಹಿಜ್ರಾ 132ರ ವೇಳೆಗೆ ಅಮವಿಗಳ ರಾಜಧಾನಿಯಾಗಿದ್ದ ಡಮಸ್ಕಸ್ ಅಬ್ಬಾಸಿಗಳ ನಿಯಂತ್ರಣಕ್ಕೆ ಬಂದಿತು. ಇದರೊಂದಿಗೆ ಅಮವಿ ಆಡಳಿತವು ಪತನಗೊಂಡಿತು.