ಝಂಝಂ ತ್ಯಾಗದ ಪ್ರತೀಕ
Yahya Madannoor

ಇದು ಸುಟ್ಟು ಕರಕಲಾಗಿದ್ದ, ಜನರಿಲ್ಲದ ನಿರ್ಜನ ಮರುಭೂಮಿಯಲ್ಲಿ ನಡೆದಂತಹ ಘಟನೆ, ಅಲ್ಲಾಹನ ಪ್ರಿಯ ಪ್ರವಾದಿ ಇಬ್ರಾಹೀಂ (ಅ) ಹಾಗೂ ಅವರ ಕಂದಮ್ಮ ಇಸ್ಮಾಯಿಲ್ (ಅ) ರವರ ಅಪಾರ ತ್ಯಾಗದ ಪ್ರತೀಕವೇ ಈ ಕಥೆ. ಪ್ರವಾದಿ ಇಬ್ರಾಹೀಂ (ಅ) ರವರು ಹಲವು ವರ್ಷಗಳ ಕಾಲ ಅಲ್ಲಾಹನಲ್ಲಿ ಮೊರೆಯಿಟ್ಟು ದೊರೆತಂತಹ ಮಗುವಾದ ಇಸ್ಮಾಯಿಲ್ (ಅ) ರನ್ನು ಹಾಗೂ ತನ್ನ ಜೀವನ ಒಡನಾಡಿಯಾದ ಪತ್ನಿ ಬೀವಿ ಹಾಜರಾ ಬೀವಿ (ರ) ರನ್ನು ಅಲ್ಲಾಹನ ಆಜ್ಞೆಯ ಮೇರೆಗೆ ಬಕ್ಕಾ (ಇಂದಿನ ಮಕ್ಕಾ) ಎಂಬ ಬರಡಾದ ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಹೋದರು.

ತನ್ನವರನ್ನು ಅಲ್ಲಿಯೇ ಬಿಟ್ಟು ಹೊರಡುವಾಗ ಪ್ರವಾದಿ ಇಬ್ರಾಹೀಂ (ಅ) ರವರ ಹೃದಯ ಸಾವಿರ ಚೂರುಗಳಾಗುತ್ತಿತ್ತು. ಆದರೂ ಅವರ ಹೆಜ್ಜೆಗಳಲ್ಲಿ ಕಿಂಚಿತ್ತೂ ತಡಬಡಿಕೆ ಇರಲಿಲ್ಲ ಏಕೆಂದರೆ ಅವರ ಆ ನಡೆ ಪ್ರಾಪಂಚಿಕ ಸುಖವನ್ನು ಮೀರಿದ, ದೈವಿಕ ಆಜ್ಞೆಗೆ ಶರಣಾದ ಪರಮೋನ್ನತ ಹೆಜ್ಜೆಯಾಗಿತ್ತು. ಅದು ದೈವಾಜ್ಞೆಯಾದ್ದರಿಂದ ಅವರು ತಮ್ಮ ಕುಟುಂಬವನ್ನು ಅಲ್ಲಾಹನ ಮೇಲೆ ಸಂಪೂರ್ಣವಾಗಿ ತವಕ್ಕುಲು ಮಾಡಿದ್ದರು. ಇತ್ತಕಡೆ ಹಾಜರಾ ಬೀವಿಯವರ ಹೃದಯ ಮಿಡಿಯುತ್ತಿತ್ತು. ಮರುಭೂಮಿಯಲ್ಲಿ ಜೀವ ಹಿಡಿದಿಟ್ಟುಕೊಳ್ಳಲು ಅವರ ಬಳಿ ಇದ್ದದ್ದು ಕೇವಲ ಅಲ್ಪ ಪ್ರಮಾಣದ ನೀರು ಮತ್ತು ಒಂದು ಚೀಲ ಖರ್ಜೂರ ಮಾತ್ರ. ಕೊನೆಗೂ ಹಾಜರಾ ಬೀವಿ ಆ ಮರುಭೂಮಿಯ ಮೌನವನ್ನು ಸೀಳುತ್ತಾ ಒಂದು ಪ್ರಶ್ನೆಯನ್ನು ಕೇಳಿಬಿಟ್ಟರು: ನಮ್ಮನ್ನು ಹೀಗೆ ಒಂಟಿಯಾಗಿ ಬಿಟ್ಟು ತಾವು ಎತ್ತ ಕಡೆ ಹೊರಟಿದ್ದೀರಿ? ಆದರೂ ಪ್ರವಾದಿ ಇಬ್ರಾಹೀಂ (ಅ) ಹಿಂತಿರುಗಿ ನೋಡಲೇ ಇಲ್ಲ. ಏಕೆಂದರೆ, ಒಂದು ವೇಳೆ ತಿರುಗಿ ನೋಡಿದಾಗ ಹಸುಗೂಸಿನ ಮುಖ ಕಂಡರೆ ಎಲ್ಲಿ ತನ್ನ ಹೆಜ್ಜೆಗಳು ತಡಬಡಿಸಿಯಾವೋ, ಎಲ್ಲಿ ದೈವಾಜ್ಞೆಯನ್ನು ಪಾಲಿಸಲು ಮನಸ್ಸು ಒಪ್ಪದೇ ಹೋಗುವುದೋ ಎಂಬ ಆತಂಕ ಅವರದಾಗಿತ್ತು; ದೈವಾಜ್ಞೆಯನ್ನು ಮೀರುವುದು ಅವರಿಗೆ ಅಸಾಧ್ಯವಾದುದ್ದಾಗಿತ್ತು. ತನ್ನ ಪತಿಯ ಮೌನದಲ್ಲೇ ಸತ್ಯವನ್ನು ಕಂಡುಕೊಂಡ ಬೀವಿ ಹಾಜರಾ, "ಇದು ಅಲ್ಲಾಹನ ಆಜ್ಞೆಯೇ?" ಎಂದು ಮತ್ತೊಮ್ಮೆ ಕೇಳಿದಾಗ, ಪ್ರವಾದಿ ಇಬ್ರಾಹೀಂ (ಅ) ಅವರು ಮೌನವಾಗಿಯೇ ತಲೆಯಾಡಿಸಿದರು. "ಹಾಗಾದರೆ, ಸರ್ವಶಕ್ತನಾದ ಅಲ್ಲಾಹನು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ" ಎಂಬ ಹಾಜರಾ ಅವರ ಆ ಮಾತು, ಅವರ ಅಚಲವಾದ ನಂಬಿಕೆ ಅವರ ದೃಢವಾದ ಈಮಾನನ್ನು (ದೈವವಿಶ್ವಾಸವನ್ನು) ಎತ್ತಿಹಿಡಿಯುತ್ತದೆ.

ಕಾಲಚಕ್ರವು ಉರುಳುತ್ತಾ ಸಾಗಿತು. ದಿನ ಕಳೆದಂತೆ ಸೂರ್ಯನ ಪ್ರಖರತೆಗೆ ಮರುಭೂಮಿಯ ಮರಳು ಕುದಿಯಲಾರಂಭಿಸಿತು. ಅವರ ಬಳಿ ಇದ್ದ ಅಲ್ಪ ನೀರು ಮತ್ತು ಖರ್ಜೂರವೂ ಮುಗಿದುಹೋದವು. ಹನಿ ನೀರಿಲ್ಲದೆ ಗಂಟಲು ಒಣಗಿ, ಹಸುಗೂಸು ಅಸಹಾಯಕತೆಯಿಂದ ನೆಲದ ಮೇಲೆ ಕಾಲುಗಳನ್ನು ಒದೆಯುತ್ತಾ, ಪಾದಗಳನ್ನು ಬಡಿಯುತ್ತಿತ್ತು. ಈ ದೃಶ್ಯ ಆ ತಾಯಿಯ ಹೃದಯವನ್ನು ಸೀಳುವಂತಿತ್ತು. ಕಂದನ ದಾಹ ನೀಗಿಸಲು ತಾಯಿ ಹಾಜರಾ ನೀರನ್ನು ಹುಡುಕುತ್ತಾ ಹೊರಟರು. ನೆರವಿಗಾಗಿ ಯಾರಾದರೂ ಸಿಗಬಹುದೇ ಎಂದು ಹಂಬಲಿಸುತ್ತಾ, ಅವರು ಸಫಾ ಪರ್ವತವನ್ನೇರಿದರು, ದೂರದ ಮರುಭೂಮಿಯತ್ತ ಕಣ್ಣು ಹಾಯಿಸಿದರು. ಆದರೆ ಯಾರೂ ಕಾಣದಿದ್ದಾಗ, ಪರ್ವತದಿಂದ ಕೆಳಗಿಳಿದು ಮರ್ವಾ ಪರ್ವತದತ್ತ ಧಾವಿಸಿದರು.ಮರಳಿನಲ್ಲಿ ಓಡಲು ಅನುಕೂಲವಾಗುವಂತೆ ತಮ್ಮ ವಸ್ತ್ರವನ್ನು ಕೊಂಚ ಎತ್ತಿ ಹಿಡಿದು ಮೃದುವಾಗಿ ಓಡಿದರು. ಅಂದು ತಾಯಿಯೊಬ್ಬಳು ಪಟ್ಟ ಆ ಕಷ್ಟ ಮತ್ತು ಓಡಿದ ಆ ಓಟ, ಇಂದಿಗೂ ವಿಶ್ವದ ಕೋಟ್ಯಾಂತರ ಸತ್ಯವಿಶ್ವಾಸಿಗಳು ಒಟ್ಟುಗೂಡುವ ಪವಿತ್ರ ಹಜ್ ಹಾಗೂ ಉಮ್ರಾ ಧಾರ್ಮಿಕ ವಿಧಿಗಳ ಅವಿಭಾಜ್ಯ ಅಂಗವಾಗಿ ಇತಿಹಾಸದಲ್ಲಿ ಅಮರವಾಗಿದೆ.

ತಾಯಿ ಹಾಜರಾ ಬೀವಿ ಅವರು ನೀರಿಗಾಗಿ ಸಫಾ ಮತ್ತು ಮರ್ವಾ ಪರ್ವತಗಳ ನಡುವೆ ಏಳು ಬಾರಿ ಅಲೆದು, ದಣಿದು ಮಗುವಿನ ಬಳಿ ಹಿಂತಿರುಗಿದಾಗ ಅಲ್ಲೊಂದು ಪವಾಡವೇ ನಡೆದಿತ್ತು. ದಾಹದಿಂದ ಕಂದಮ್ಮ ತನ್ನ ಪಾದಗಳನ್ನು ಬಡಿದಿದ್ದ ಆ ನೆಲದಿಂದ ಅಮೃತದಂತಹ ನೀರಿನ ಅದ್ಭುತ ಕಾರಂಜಿ ಚಿಮ್ಮುತ್ತಿತ್ತು. ನೀರಿನ ವೇಗ ಹೆಚ್ಚಾಗುತ್ತಿರುವುದನ್ನು ಕಂಡು ತಾಯಿ ಹಾಜರಾ ಅವರು "ಝಮ್ ಝಮ್" (ನಿಲ್ಲು, ನಿಲ್ಲು) ಎಂದು ಉದ್ಗರಿಸಿದರು. ಆ ಕಾರಣಕ್ಕಾಗಿಯೇ ಇಂದಿಗೂ ಆ ಪವಿತ್ರ ತೀರ್ಥ ಅದೇ ಹೆಸರಿನಿಂದ ಕರೆಯಲ್ಪಡುತ್ತಿದೆ.

ಆ ಕಠಿಣ ಕ್ಷಣದಲ್ಲಿ ಉದ್ಭವಿಸಿದ ಆ ನೀರು, ಕೇವಲ ಒಬ್ಬ ತಾಯಿಯ ಬಾಯಾರಿಕೆಯನ್ನಷ್ಟೇ ನೀಗಿಸಲಿಲ್ಲ, ಬದಲಿಗೆ ಮುಂದಿನ ಸಹಸ್ರಾರು ವರ್ಷಗಳ ಕಾಲ ಇಡೀ ಮಾನವಕುಲದ ಬಾಯಾರಿಕೆಯನ್ನು ತಣಿಸುವ ಪವಿತ್ರ ಜಲಧಾರೆಯಾಗಿ ಮಾರ್ಪಟ್ಟಿತು.

Related Posts

Leave A Comment

Voting Poll

Get Newsletter