ಗಝಾ ಮತ್ತೊಂದು ಅಂಡುಲಿಸ್ (ಸ್ಪೇನ್) ಆಗುವುದೇ?

Basheer Ahmad Kinya

ಐದನೇ ಹಿಜರಿ ಶತಮಾನದಲ್ಲಿ (ಕ್ರಿ.ಶ. ಹನ್ನೊಂದನೇ ಶತಮಾನ) ಸ್ಪೇನ್ ಅಥವಾ ಅಂಡುಲಿಸ್ ಪ್ರದೇಶದಲ್ಲಿದ್ದ ಮುಸ್ಲಿಂ ಆಡಳಿತವು ಎದುರಿಸಿದ ರಾಜಕೀಯ ಬಿಕ್ಕಟ್ಟು ಮತ್ತು ಅದರ ದುಷ್ಪರಿಣಾಮಗಳು ಇಸ್ಲಾಮಿಕ್ ಇತಿಹಾಸದ ಅತ್ಯಂತ ದುರಂತದ ಅಧ್ಯಾಯಗಳಲ್ಲಿ ಒಂದಾಗಿದೆ. ಕಾರ್ಡೋವಾದ ಶಕ್ತಿಶಾಲಿ ಉಮಯ್ಯದ್ ಖಿಲಾಫತ್ ಒಡೆದು ತುಂಡಾಗಿ, ಇಡೀ ಅಂಡುಲಿಸ್ ಪ್ರದೇಶವು ಅನೇಕ ಸಣ್ಣಪುಟ್ಟ ಸ್ವತಂತ್ರ ರಾಜಪ್ರಭುತ್ವಗಳಾಗಿ ವಿಭಜನೆಗೊಂಡಿತು. ಇವರನ್ನೇ ಇತಿಹಾಸದಲ್ಲಿ "ಮುಲುಕ್ ಅತ್-ತ್ವಾಯಿಫ್" ಅಥವಾ ತ್ವಾಯಿಫಾ ರಾಜ್ಯಗಳು ಎಂದು ಕರೆಯಲಾಗುತ್ತದೆ. ಅಧಿಕಾರ ಮತ್ತು ಕಿರೀಟಕ್ಕಾಗಿ ಈ ಸಣ್ಣ ರಾಜರ ನಡುವೆ ಯಾವುದೇ ಒಗ್ಗಟ್ಟು ಇರಲಿಲ್ಲ. ಪರಸ್ಪರರ ವಿರುದ್ಧವೇ ಕಾದಾಡುತ್ತಿದ್ದ ಈ ಆಡಳಿತಗಾರರು, ತಮ್ಮ ನೆರೆಹೊರೆಯ ಮುಸ್ಲಿಂ ಸಹೋದರರ ಮೇಲೆಯೇ ಯುದ್ಧ ಸಾರಲು ಉತ್ತರದಲ್ಲಿದ್ದ ಕ್ರಿಶ್ಚಿಯನ್ ರಾಜರ ಸಹಾಯವನ್ನು ಯಾಚಿಸತೊಡಗಿದರು ಮತ್ತು ಅವರಿಗೆ ದೊಡ್ಡ ಮೊತ್ತದ ಕಪ್ಪ ಕಾಣಿಕೆಗಳನ್ನು ನೀಡಲು ಆರಂಭಿಸಿದರು. ಈ ಆಂತರಿಕ ಕಲಹ ಹಾಗೂ ಅಸಹಾಯಕತೆಯೇ ಮುಸ್ಲಿಂ ಸಾಮ್ರಾಜ್ಯದ ಅತಿ ದೊಡ್ಡ ಶತ್ರುವಾಯಿತು.

ಈ ಆಂತರಿಕ ದೌರ್ಬಲ್ಯದ ಸಂಪೂರ್ಣ ಲಾಭವನ್ನು ಪಡೆದ ಕ್ಯಾಸ್ಟಿಲ್ಲೆ ಸಾಮ್ರಾಜ್ಯದ ಕ್ರಿಶ್ಚಿಯನ್ ದೊರೆ ಆರನೇ ಅಲ್ಫೋನ್ಸೊ ಅತ್ಯಂತ ಶಕ್ತಿಶಾಲಿಯಾಗಿ ಬೆಳೆದು ಬಂದನು. ಪರಸ್ಪರ ವಿರೋಧಿಗಳಾಗಿದ್ದ ತ್ವಾಯಿಫಾ ರಾಜರ ದೌರ್ಬಲ್ಯವನ್ನು ಅರಿತ ಆತ, ಅಂಡುಲಿಸ್‌ನ ಒಂದೊಂದೇ ಪ್ರಮುಖ ಪ್ರದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಾರಂಭಿಸಿದನು. ಇದರ ದುಷ್ಪರಿಣಾಮವಾಗಿ, ಮುಸ್ಲಿಮರ ಪ್ರಮುಖ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಕೇಂದ್ರವಾಗಿದ್ದ ಟೊಲೆಡೊ ನಗರವನ್ನು ಕ್ರಿ.ಶ. 1085ರಲ್ಲಿ ಆರನೇ ಅಲ್ಫೋನ್ಸೊ ವಶಪಡಿಸಿಕೊಂಡನು. ಈ ಪ್ರಮುಖ ನಗರದ ಪತನವು ಇಬೇರಿಯನ್ ದ್ವೀಪಕಲ್ಪದಲ್ಲಿ ಇಸ್ಲಾಮಿಕ್ ಆಡಳಿತದ ಕುಸಿತಕ್ಕೆ ನೇರವಾದ ನಾಂದಿಯಾಯಿತು.

ತ್ವಾಯಿಫಾ ರಾಜರ ಈ ಸ್ವಾರ್ಥ ಹಾಗೂ ಸಂಪೂರ್ಣ ಅಸಹಾಯಕತೆಯಿಂದಾಗಿ ಇಡೀ ಅಂಡುಲಿಸ್ ಅರಬ್ಬರ ಕೈಜಾರಿ ಗಂಭೀರ ಅಪಾಯ ಎದುರಾಯಿತು. ಈ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡ ಸ್ಥಳೀಯ ಮುಸ್ಲಿಂ ವಿದ್ವಾಂಸರು ಮತ್ತು ಕೆಲ ದೂರದೃಷ್ಟಿಯ ಆಡಳಿತಗಾರರು, ಉತ್ತರ ಆಫ್ರಿಕಾದಲ್ಲಿದ್ದ ಬಲಶಾಲಿ ಅಲ್ಮೋರಾವಿಡ್ ಸಾಮ್ರಾಜ್ಯದ ಸಹಾಯವನ್ನು ಕೋರಿದರು. ತದನಂತರ ಯೂಸುಫ್ ಬಿನ್ ತಾಷ್ಫೀನ್ ನೇತೃತ್ವದಲ್ಲಿ ಸ್ಪೇನ್‌ಗೆ ಬಂದ ಅಲ್ಮೋರಾವಿಡ್ ಪಡೆಗಳು ಅಲ್ಫೋನ್ಸೊನನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರೂ, ತ್ವಾಯಿಫಾ ರಾಜರ ಒಗ್ಗಟ್ಟಿಲ್ಲದ ರಾಜಕೀಯವು ಅಂಡುಲಿಸ್‌ನ ಅಂತಿಮ ಪತನಕ್ಕೆ ಮುನ್ನುಡಿ ಬರೆದಿತ್ತು ಎಂಬುದು ಐತಿಹಾಸಿಕ ಸತ್ಯವಾಗಿದೆ. 



ಚರಿತ್ರೆಯ ಈ ಕರಾಳ ಪುಟಗಳು ಇಂದಿನ ಆಧುನಿಕ ಜಗತ್ತಿನಲ್ಲಿಯೂ ಮರುಕಳಿಸುತ್ತಿರುವಂತೆ ಕಾಣುತ್ತಿದ್ದು, ವಿಶೇಷವಾಗಿ ಪ್ರಸ್ತುತ ಗಝಾದ ಸ್ಥಿತಿಗತಿಯು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಅಂದಿನ ತ್ವಾಯಿಫಾ ಅರಸರಂತೆ ಇಂದಿನ ಮುಸ್ಲಿಂ ರಾಷ್ಟ್ರಗಳ ನಾಯಕರು ತೋರುತ್ತಿರುವ ಮೌನ ಹಾಗೂ ಅಸಹಾಯಕತೆ ಇತಿಹಾಸದ ಕಹಿ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ನೆರೆಯ ಮುಸ್ಲಿಂ ರಾಷ್ಟಗಳ ವಿರುದ್ದ ಕಾದಾಟಕ್ಕಾಗಿ ದೂರದ ಅಮೆರಿಕದ ಸಹಾಯಕ್ಕಾಗಿ ಅಂಗಲಾಚುತ್ತಿದೆ. ಗಝಾದ ನೆರೆಯ ಪ್ರಮುಖ ರಾಷ್ಟ್ರವಾದ ಈಜಿಪ್ಟ್ ತನ್ನ ಗಡಿಗಳನ್ನು (ರಫಾ ಗಡಿ ಮಾರ್ಗ) ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿರುವುದು, ಹಾಗೂ ಸೌದಿ ಅರೇಬಿಯಾ ಮತ್ತು ಜೋರ್ಡಾನ್‌ನಂತಹ ಬೃಹತ್ ರಾಷ್ಟ್ರಗಳು ಕೇವಲ ರಾಜತಾಂತ್ರಿಕ ಹೇಳಿಕೆಗಳಿಗೆ ಸೀಮಿತಗೊಂಡು ಪ್ರಾಯೋಗಿಕವಾಗಿ ಜನರ ರಕ್ಷಣೆಗೆ ನಿಲ್ಲುವಲ್ಲಿ ಅಸಹಾಯಕತೆ ಪ್ರದರ್ಶಿಸುತ್ತಿರುವುದು ಅಂದಿನ ತ್ವಾಯಿಫಾ ಕಾಲದ ಒಗ್ಗಟ್ಟಿಲ್ಲದ ರಾಜಕೀಯ ಬಿಕ್ಕಟ್ಟನ್ನು ನೆನಪಿಸುತ್ತದೆ. ಹೊರ ಜಗತ್ತಿನ ನೆರವಿಲ್ಲದೆ, ಆಹಾರ-ಔಷಧವಿಲ್ಲದೆ ನರಳುತ್ತಿರುವ ಗಝಾದ ಜನತೆಯ ಈ ದುಸ್ಥಿತಿಯು ಇಂದಿನ ಜಾಗತಿಕ ಮುಸ್ಲಿಂ ನಾಯಕತ್ವದ ನೈತಿಕ ಪತನ ಹಾಗೂ ರಾಜಕೀಯ ದೌರ್ಬಲ್ಯದ ಪರಮಾವಧಿಯನ್ನು ಎತ್ತಿ ತೋರಿಸುತ್ತಿದೆ.

Related Posts

Leave A Comment

Voting Poll

Get Newsletter