ಇಸ್ಲಾಮಿಕ್ ಫೈನಾನ್ಸ್: ಒಂದು ಕಿರು ಪರಿಚಯ

Bilal Kuddupadavu

ಪ್ರಕೃತಿಪರವಾಗಿ ಮನುಷ್ಯನಿಗೆ ಹಣದ ಮೇಲಿನ ಆಕರ್ಷಣೆ ಒಂದು ಸ್ವಾಭಾವಿಕ ವಿಷಯ. ಕುರಾನ್ ಮತ್ತು ಹದೀಸಿನಲ್ಲಿ ಈ ವಿಷಯವನ್ನು ಹಲವು ಸಂದರ್ಭಗಳಲ್ಲಿ ವಿವರಿಸಲಾಗಿದೆ. ಅಲ್ಲಾಹು ಪರಿಶುದ್ಧ ಕುರಾನಿನಲ್ಲಿ ಹೇಳುತ್ತಾನೆ:

“ಮನುಷ್ಯ ವರ್ಗಕ್ಕೆ ಮಹಿಳೆಯರ, ಮಕ್ಕಳ, ಚಿನ್ನ ಮತ್ತು ಬೆಳ್ಳಿಯ ರಾಶಿಗಳ, ಅಲಂಕೃತ ಕುದುರೆಗಳ, ಪಶುಗಳ ಮತ್ತು ಬೆಳೆಗಳ ಆಸಕ್ತಿ ಅಲಂಕಾರವಾಗಿ ತೋರಿಸಲ್ಪಟ್ಟಿದೆ. ಅದು ದುನಿಯಾದ ತಾತ್ಕಾಲಿಕ ಆನಂದ ಮಾತ್ರ; ಆದರೆ ಅಲ್ಲಾಹನ ಬಳಿಯಲ್ಲಿದೆ ಅತ್ಯುತ್ತಮ ಅಂತ್ಯನಿವಾಸ.” (ಕುರಾನ್ 3:14)

ಪ್ರವಾದಿ ﷺ ಮನುಷ್ಯನ ಹಣದ ಆಸೆಯನ್ನು ಹೀಗೆ ವಿವರಿಸುತ್ತಾರೆ: “ಮನುಷ್ಯನಿಗೆ ಚಿನ್ನದ ಒಂದು ಪರ್ವತವಿದ್ದರೆ, ಅವನಿಗೆ ಎರಡನೇ ಪರ್ವತವೂ ಬೇಕೆನಿಸುತ್ತದೆ.”

ಹೀಗಾಗಿ, ಹಣದ ಆಸೆ ಪ್ರಕೃತಿಪರವಾಗಿದ್ದರೂ, ಅದು ದುರಾಸೆಯಾಗಬಾರದು. ಮನುಷ್ಯನು ಅದನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಿ, ಭೂಮಿಯಲ್ಲಿ ಅಲ್ಲಾಹನ ಖಲೀಫನಾಗಿ ವರ್ತಿಸಬೇಕು.

ಮುಸ್ಲಿಮನಿಗೆ ಸಂಬಂಧಿಸಿದಂತೆ, ಈ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನದಾಗಿದೆ. ಆದರೂ ಅಲ್ಲಾಹನು ಮನುಷ್ಯನಿಗೆ ಖರ್ಚು ಮಾಡುವುದಕ್ಕೂ, ನಿರ್ವಹನೆ ಮಾಡುವುದಕ್ಕೂ ಅವಕಾಶ ನೀಡಿದ್ದಾನೆ. ಕುರಾನಿನಲ್ಲಿ ಅಲ್ಲಾಹನು ಹೇಳುತ್ತಾನೆ:

“ಅಲ್ಲಾಹನು ನಿಮ್ಮನ್ನು ಪ್ರತಿನಿಧಿಗಳಾಗಿ ಮಾಡಿದ ಸಂಪತ್ತನ್ನು ಖರ್ಚುಮಾಡಿ; ಅಲ್ಲಾಹನು ನಿಮ್ಮ ವಿನಿಯೋಗವನ್ನು ನೋಡುತ್ತಾನೆ.”

ಇಂತಹ ಹಲವಾರು ಕುರಾನ್ ವಚನಗಳು ಮತ್ತು ಹದೀಸಿನ ಉಲ್ಲೇಖಗಳು ಇಸ್ಲಾಮಿನ ಆರ್ಥಿಕ ದೃಷ್ಟಿಕೋನವನ್ನು ಸ್ಪಷ್ಟಪಡಿಸುತ್ತವೆ. ಆದ್ದರಿಂದ ಇಸ್ಲಾಂ ಹೇಳುವ ತತ್ವವೇನೆಂದರೆ — ಸಂಪತ್ತು ಅಲ್ಲಾಹನದ್ದಾಗಿದೆ, ಮನುಷ್ಯನು ಅದರ ನಿರ್ವಹಣಾಕಾರನಾಗಿದ್ದಾನೆ.

ಇಸ್ಲಾಂ ಮನುಷ್ಯನಿಗೆ ಸಂಪತ್ತನ್ನು ಸಂಪಾದಿಸಲು ಅನುಮತಿ ನೀಡಿದಷ್ಟೇ ಅಲ್ಲ, ಅದನ್ನು ಪ್ರೋತ್ಸಾಹಿಸುತ್ತದೆ ಕೂಡ. ಅಲ್ಲಾಹು ಪರಿಶುದ್ಧ ಕುರಾನಿನಲ್ಲಿ ಹೇಳುತ್ತಾನೆ:

“ಜುಮಾ ನಮಾಝ್ ಪೂರ್ತಿಯಾದ ಬಳಿಕ ಭೂಮಿಯಲ್ಲಿ ಸಂಚರಿಸಿರಿ , ಅಲ್ಲಾಹನ ಕೃಪೆಯನ್ನು ಹುಡುಕಿರಿ.” (62:10)

ಉಮರ್ (ರ.ಅ) ಕೆಲಸ ಮಾಡದೆ “ತವಕ್ಕುಲ್” ಹೆಸರಿನಲ್ಲಿ ಮನೆಯಲ್ಲಿ ಕೂತುಜೀವಿಸುವವರನ್ನು ವಿಮರ್ಶಿಸುತ್ತಾ,ಅವರು ಹೇಳುತ್ತಿದ್ದರು:

“ಅಲ್ಲಾಹನೇ, ನನಗೆ ರಿಜ್ಕ್ ನೀಡು” ಎಂದು ಮನೆಯಲ್ಲಿ ಕೂತುಕೊಳ್ಳಬಾರದು, ಏಕೆಂದರೆ ಚಿನ್ನ ಮತ್ತು ಬೆಳ್ಳಿ ಆಕಾಶದಿಂದ ಮಳೆಯಾಗಿ ಬೀಳುವುದಿಲ್ಲ.”

ಹೀಗಾಗಿ, ಇಸ್ಲಾಮಿನ ಆರ್ಥಿಕ ತತ್ವವೆಂದರೆ — ಮನುಷ್ಯನು ಈ ಭೂಮಿಯಲ್ಲಿರುವ ಅಲ್ಲಾಹನ ಸಂಪತ್ತನ್ನು ಶ್ರಮದಿಂದ ಅನ್ವೇಷಿಸಬೇಕು.

ಆದರಿಂದ ಇಸ್ಲಾಂ ಸಂಪತ್ತು ಸಂಪಾದನೆಯನ್ನು ಪ್ರೋತ್ಸಾಹಿಸುತ್ತದೆ. ಆದರೆ ಅದು ಹೇಗೆ ಸಂಪಾದಿಸಬೇಕು ಎಂಬ ವಿಷಯವನ್ನು ಕುರಾನ್ ಮತ್ತು ಹದೀಸಿನಲ್ಲಿ ಸ್ಪಷ್ಟವಾಗಿ ವಿವರಿಸಲ್ಪಟ್ಟಿದೆ. ಆರಾಧನಾ ವಿಷಯಗಳ ನಂತರ ಅತ್ಯಂತ ವಿವರವಾಗಿ ವಿವರಿಸಿದ ವಿಷಯ ಆರ್ಥಿಕತೆಯಾಗಿದೆ, ಏಕೆಂದರೆ ಪ್ರಕೃತಿಪರವಾಗಿ ಸಂಪತ್ತು ಮನುಷ್ಯನಿಗೆ ಅತ್ಯಂತ ಆಕರ್ಷಕವಾದ ವಸ್ತುವಾಗಿದೆ.

ಅದನ್ನು ಸ್ಪಷ್ಟವಾಗಿ ವಿವರಿಸದಿದ್ದರೆ, ಇಸ್ಲಾಮಿಕ ಅಲ್ಲದ ಮಾರ್ಗಗಳಲ್ಲಿ ಸಂಪತ್ತು ಗಳಿಸುವ ಸಂವೇದನ ಸಾಧ್ಯತೆ ಇದೆ. ಆದ್ದರಿಂದ, ಒಂದು ಮುಸ್ಲಿಂ ಕುರಾನ್ ಮತ್ತು ಹದೀಸಿನಲ್ಲಿ ನಿಷೇಧಿಸಲ್ಪಟ್ಟ ಮಾರ್ಗಗಳನ್ನು ಬಿಟ್ಟು ಬೇರೆ ಯಾವುದೇ ನ್ಯಾಯಸಮ್ಮತ ಮಾರ್ಗದ ಮೂಲಕ ಸಂಪತ್ತನ್ನು ಸಂಪಾದಿಸಬಹುದು.

ಪ್ರಪಂಚದಲ್ಲಿ ಹಲವಾರು ಆರ್ಥಿಕ ಸಿದ್ಧಾಂತಗಳಿವೆ — ಕ್ಯಾಪಿಟಲಿಸಂ, ಸೋಷಿಯಲಿಸಂ ಮುಂತಾದವು. ಇವುಗಳೆಲ್ಲಕ್ಕೂ ಹಲವು ಕೊರತೆಗಳಿವೆ, ಏಕೆಂದರೆ ಅವು ಮಾನವಕೇಂದ್ರಿತ ಹಾಗೂ ಲಾಭಕೇಂದ್ರಿತ ಸಿದ್ಧಾಂತಗಳು.

ಉದಾಹರಣೆಗೆ, ಕ್ಯಾಪಿಟಲಿಸಂ ಮಾಲೀಕರ ಲಾಭಕ್ಕಾಗಿ ನಿರ್ಮಿಸಲ್ಪಟ್ಟಿದೆ. ಅದೇ ರೀತಿ, ಸೋಷಿಯಲಿಸಂ ಕೆಲಸಗಾರರ ಬೇಡಿಕೆಗಳನ್ನು ಪೂರೈಸುವ ಚಿಂತನೆಯಿಂದ ಬಂದಿದೆ. ಆದರೆ ಇಸ್ಲಾಮಿನ ಆರ್ಥಿಕ ಸಿದ್ಧಾಂತವು ಈ ಎಲ್ಲ ಅಂಶಗಳನ್ನು ಸಮತೋಲನದಿಂದ ಒಳಗೊಂಡಿದ್ದು, ಎಲ್ಲಾ ವಿಭಾಗಗಳಿಗೆ ನ್ಯಾಯಯುತ ಪರಿಹಾರವನ್ನು ಒದಗಿಸುತ್ತದೆ.

ಆದ್ದರಿಂದ ಇಸ್ಲಾಮಿನ ಆರ್ಥಿಕತೆಯ ಮೂಲತತ್ವವೇನೆಂದರೆ — ಈ ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳು ಅಲ್ಲಾಹನದಾಗಿದೆ. ಮನುಷ್ಯನನ್ನು ಅಲ್ಲಾಹು ಖಲೀಫನಾಗಿ ನೇಮಿಸಿ, ಅದನ್ನು ಉಪಯೋಗಿಸುವ ಅವಕಾಶ ನೀಡಿದ್ದಾನೆ.

ಇಸ್ಲಾಂ ಸಂಪತ್ತು ಸಂಪಾದನೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಅದು ಹೇಗೆ ಆಗಬೇಕು ಎಂಬುದನ್ನು ಕುರಾನ್ ಹಾಗೂ ಹದೀಸಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಇಸ್ಲಾಮಿಕ್ ಫೈನಾನ್ಸ್ ಎಲ್ಲಾ ವಿಭಾಗಗಳನ್ನು ಒಳಗೊಂಡ ಒಂದು ಸಮಗ್ರ ಸಿದ್ಧಾಂತವಾಗಿದೆ. ಇದರಲ್ಲಿ ಆಧುನಿಕ ಜಗತ್ತು ಎದುರಿಸುತ್ತಿರುವ ಎಲ್ಲಾ ಆರ್ಥಿಕ ಸಮಸ್ಯೆಗಳಿಗೂ ನ್ಯಾಯಸಮ್ಮತ ಪರಿಹಾರವಿದೆ.

ಇಸ್ಲಾಮಿಕ್ ಫೈನಾನ್ಸಿನ ಮೂಲಾಧಾರ ಕುರ್ ಆನ್ ಹಾಗೂ ಸುನ್ನತ್ತಾಗಿದೆ. ಕುರ್ ಆನಿನ ವಚನಗಳನ್ನು ಗಮನಿಸಿದರೆ ಅಲ್ಲಾಹನು ಈಬಾದತ್ ಕಿಂತ ಆರ್ಥಿಕತೆಯನ್ನು ಸ್ಪಷ್ಟವಾಗಿ ವಿವರಿಸಿದ್ದಾನೆ. ನಮಾಝ್ ಕಡ್ಡಾಯ ಎಂದು ಕುರ್ ಆನಿನಲ್ಲಿ ಇರಬಹುದು ಆದರೆ ಹೇಗೆ ನಮಾಝ್ ಮಾಡಬೇಕು ಎಂಬುದು ಹದೀಸ್ ಮುಖಾಂತರ ಸ್ಪಷ್ಠವಾದದ್ದು, ಆದರೆ ಆರ್ಥಿಕತೆ ವಿಷಯದಲ್ಲಿ ಯಾರಿಗೆ ಝಕಾತ್ ನೀಡಬೇಕು, ವಾರಿಸು ಸೊತ್ತಿನ ವಿಷಯದಲ್ಲಿ ಒಂದು ಸಂಶಯಕ್ಕೂ ಅವಕಾಶ ಬರದ ರೀತಿಯಲ್ಲಿ ಅಲ್ಲಾಹನು ಕುರ್ ಆನಿನಲ್ಲಿ ವ್ಯಕ್ತಪಡಿಸಿದ್ದಾನೆ. ಆದರಿಂದ ಆರ್ಥಿಕತೆ ವಿಷಯದಲ್ಲಿ ಕುರ್ ಆನ್ ಬಹಳ ಸ್ಪಷ್ಟವಾಗಿ ವಿವರಿಸಿದೆ. ಅದಕ್ಕೆ ಹಲವಾರು ಕಾರಣಗಳಿವೆ ಮುಖ್ಯವಾದ ಕಾರಣವೆನೆಂದರೆ ಮನುಷ್ಯನಿಗೆ ಪ್ರಕೃತಿ ಪರವಾಗಿ ಹಣದ ಮೇಲಿರುವ ಆಕರ್ಷಣೆಯಾಗಿದೆ, ಯಾವುದಾದರೂ ಅನ್ಯಾಯವಾದ ರೂಪದಲ್ಲಿ ಸಂಪಾದಿಸಲು ಸಾಧ್ಯವಿದೆ ಎಂಬ ಕಾರಣದಿಂದಲೂ ಸ್ಪಷ್ಟವಾಗಿ ವಿವರಿಸಲಾಗಿದೆ.

ಕರ್ಮಶಾಸ್ತ್ರದಲ್ಲಿ ಎಲ್ಲಾ ವ್ಯವಹಾರಗಳ ಮೂಲ ಹಲಾಲಾಗಿದೆ. ಅಲ್ಲಾಹು ಹಾಗೂ ಅವನ ಪ್ರವಾದಿ (ಸ) ನಿಷಿದ್ಧಮಾಡಿದ ವ್ಯವಹಾರಗಳನ್ನು ಹೊರತುಪಡಿಸಿ ಎಲ್ಲಾ ವ್ಯವಹಾರಗಳು ಹಲಾಲ್ ಎಂದರ್ಥ. ಮಾಲಿಕಿ ಪಂಡಿತನಾದ ಇಬ್ನ್ ಅರಬ್ (ರ) ಹೇಳಿದ್ದಾರೆ "ಪ್ರವಾದಿ (ಸ) ಜಾಹಿಲಿ ಕಾಲದಲ್ಲಿ ಪ್ರಚಲಿತದಲ್ಲಿದ್ದ 37 ವ್ಯವಹಾರದ ರೂಪಗಳನ್ನು ನಿಷೇಧಿಸಿದ್ದಾರೆ".

ಇಸ್ಲಾಮಿಕ್ ಫೈನಾನ್ಸ್ ಮೂಲವೇನೆಂದರೆ ಒಂದು ವ್ಯವಹಾರದಲ್ಲಿ ಈ ನಾಲ್ಕು ಅಂಶಗಳು ಸೇರಿಬರಬಾರದು. ಇಲ್ಲವಾದರೆ ಹಲಾಲಾಗುತ್ತದೆ. 

1) ಒಂದು ವ್ಯವಹಾರದಲ್ಲಿ ಅಕ್ರಮ ಹಾಗೂ ಅನ್ಯಾಯ ಇರಬಾರದು. 

ಅಂದರೆ ವ್ಯವಹಾರ ಮಾಡುವ ಇಬ್ಬರ ಮಧ್ಯೆಯು ಪೂರ್ಣವಾದ ತೃಪ್ತಿ ಇರಬೇಕು. ಒಂದು ರೀತಿಯ ಅಕ್ರಮಕ್ಕೂ ಅನ್ಯಾಯಕ್ಕೂ ಸಾಧ್ಯತೆ ಇರಬಾರದು. ಅಲ್ಲಾಹನು ಅವನ ಕುರ್ ಆನಿನಲ್ಲಿ ವಿವರಿಸುತ್ತಾನೆ. "ನಿಮ್ಮ ಮಧ್ಯೆ ನೀವು ಅನ್ಯಾಯವಾಗಿ ಹಣವನ್ನು ತಿನ್ನಬಾರದು. ನಿಮ್ಮ ಮಧ್ಯ ಒಂದು ವ್ಯವಹಾರ ಮಾಡುವ ಪೂರ್ಣವಾದ ತೃಪ್ತಿ ಬೇಕು". ನಂತರ ಅದೇ ವಚನದಲ್ಲಿ ಹೀಗೆ ವಿವರಿಸುತ್ತಾನೆ. ನೀವು ಮನುಷ್ಯರನ್ನು ಕೊಲೆ ಮಾಡಬಾರದು. ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಜೊತೆ ಕರುಣೆಯುಳ್ಳವನಾಗಿದ್ದಾನೆ. ಈ ಒಂದು ವಚನದಲ್ಲಿ ಅಕ್ರಮವಾಗಿ ವ್ಯವಹಾರ ಮಾಡುವುದನ್ನು ಹಾಗೂ ಮನುಷ್ಯ ಜೀವನಗಳನ್ನು ಕೊಲೆ ಮಾಡುವುದನ್ನು ಒಂದೇ ಗೌರವದಲ್ಲಿ ಅಲ್ಲಾಹನು ಸೂಚಿಸಿದ್ದಾನೆ.

2) ವ್ಯವಹಾರದಲ್ಲಿ ಅನಿಶ್ಚಿತತೆ (ಘರರ್) ಇರಬಾರದು.

 ಕಾರಣ ಪ್ರವಾದಿ ಹೇಳುತ್ತಾರೆ, ಅಬೂ ಹುರೈರಾ (ರ) ವರದಿ ಮಾಡಿದಂತಹ ಹದೀಸ್ ಈ ರೀತಿದೆ. "ಪ್ರವಾದಿಯವರು ಅನಿಶ್ಚಿತತೆ ವ್ಯವಹಾರವನ್ನು ನಿಷೇಧಿಸಿದ್ದಾರೆ". ಅನಿಶ್ಚಿತತೆ ಎಂಬುದಕ್ಕೆ ಕರ್ಮಶಾಸ್ತ್ರ ಪಂಡಿತರು ಹಲವಾರು ವಿವರಣೆಗಳನ್ನು ನೀಡಿದ್ದಾರೆ. ಇಮಾಮ್ ನವವಿ (ರ) ಒಳಗೊಂಡ ಕೆಲವು ಪಂಡಿತರು ನೀಡಿದ ವಿವರಣೆ ಈ ರೀತಿಯಾಗಿದೆ . ಅನಿಶ್ಚಿತತೆ (ಘರರ್) ಎಂದರೆ ಅದರ ಅಂತಿಮ ತಿಳಿವಳಿಕೆ ಇಲ್ಲದಾಗಿದೆ. ಅಂದರೆ ಆ ವ್ಯವಹಾರ ಮುಂದೆ ಏನಾಗುತ್ತೆ ಅದರ ಕುರಿತು ಪೂರ್ಣವಾದ ಸ್ಪಷ್ಟತೆ ಇಲ್ಲದಾಗಿದೆ. ಅದು ಹಲವಾರು ರೀತಿಗಳಿವೆ. ಉದಾಹರಣೆಗೆ ಇಲ್ಲದ ಅಥವಾ ಲಭ್ಯವಲ್ಲದ ವಸ್ತುಗಳಲ್ಲಿ ವ್ಯವಹಾರ ಮಾಡುವುದು, ಆಕಾಶದಲ್ಲಿ ಹಾರುವ ಪಕ್ಷಿಯಲ್ಲಿ ವ್ಯವಹಾರ ಮಾಡದು. ಇಮಾಮ್ ಮುಸ್ಲಿಂ ನಿಷೇಧಿಸಲ್ಪಟ್ಟ ವ್ಯವಹಾರಗಳಲ್ಲಿ ಮೊದಲನೆಯದಾಗಿ ಲೆಕ್ಕ ಮಾಡಿದ್ದು ಈ ವ್ಯವಹಾರವನ್ನಾಗಿದದೆ. (ಘರರ್) ಎಂಬುದರ ಹಲವು ರೂಪಗಳನ್ನು ಕರ್ಮಶಾಸ್ತ್ರ ಪಂಡಿತರು ವಿವರಿಸಿದ್ದಾರೆ.

3) ವ್ಯವಹಾರದಲ್ಲಿ ಬಡ್ಡಿ (ರಿಬಾ) ಸೇರಿಬರಬಾರದು. 

ಬಡ್ಡಿ ಮುಖ್ಯವಾಗಿ ಎರಡು ರೂಪದಲ್ಲಿಯಾಗಿದೆ. ವ್ಯವಹಾರದಲ್ಲಿ ಸೇರಿ ಬರುವುದು.

 ಒಂದು ಬಡ್ಡಿ ಬರುತ್ತದೆ ಎಂಬ ಪ್ರವಾದಿ (ಸ) ವಿವರಿಸಿದ ವಸ್ತುಗಳ ಮಧ್ಯೆ ವ್ಯವಹಾರ ನಡೆಸುವಾಗ ಇದನ್ನು ವ್ಯವಹಾರದ ಬಡ್ಡಿ ಎಂದು ಹೇಳಲ್ಪಪಡುತ್ತದೆ.ಎರಡನೆಯದ್ದು ಸಾಲದ ಬಡ್ಡಿ.

ವ್ಯವಹಾರದ ಮುಖ್ಯವಾಗಿ ಎರಡು ರೀತಿಯ ವಸ್ತುಗಳಲ್ಲಿ ಬಡ್ಡಿ ಸೇರಿ ಬರುತ್ತದೆ.

1) ನಾಣ್ಯಗಳು (ಬೆಳ್ಳಿ ಹಾಗೂ ಚಿನ್ನ)

ಇಂದು ನಾಣ್ಯಗಳ ಸ್ಥಾನದಲ್ಲಿ ನಾವು ವ್ಯವಹಾರ ಮಾಡುವ ಕರೆನ್ಸಿಯಲ್ಲಿ ಬಹುಮತ ಕರ್ಮಶಾಸ್ತ್ರ ಪಂಡಿತರ ಪ್ರಕಾರ ಇದೇ ವಿಧಿ ಅನ್ವಯವಾಗುತ್ತದೆ.

2) ಆಹಾರ ವಸ್ತುಗಳು. ಪ್ರವಾದಿ (ಸ) ಹದೀಸಿನಲ್ಲಿ ವಿವರಿಸಿದ ಆಹಾರ ವಸ್ತುಗಳಲ್ಲಿ ಸೇರಿ ಬರುತ್ತದೆ ಅವು ಗೋಧಿ, ಬಾರ್ಲಿ (ಯವ), ಖರ್ಜೂರ, ಉಪ್ಪು.

ಅಲ್ಲಾಹನು ಬಡ್ಡಿಯನ್ನು ಎರಡು ವಸ್ತುಗಳಲ್ಲಿ ಮಾತ್ರ ಸೀಮಿತಗೊಳಿಸಲು ಮುಖ್ಯ ಕಾರಣವೇನೆಂದರೆ ಒಂದು ಮನುಷ್ಯನಿಗೆ ವ್ಯವಹಾರ ಮಾಡುವಾಗ ಸಂಕಲ್ಪಿಕ ಬೆಲೆ ಇರುವ ನಾಣ್ಯಗಳು ಅನಿವಾರ್ಯ. ಅದೇ ರೀತಿ ಮನುಷ್ಯ ಜೀವನದ ಬದುಕುಳಿಯುವಿಕೆಗೆ ಆಹಾರ ಪದಾರ್ಥಗಳು ಅನಿವಾರ್ಯ. ಆದ್ದರಿಂದ ಅಲ್ಲಾಹನು ಎರಡು ವಸ್ತುಗಳಲ್ಲಿ ಮಾತ್ರ ಸೀಮಿತಗೊಳಿಸಿದ್ದಾನೆ.

ಸಾಲದ ಬಡ್ಡಿಯನ್ನು (ರಿಬಾ ಅಲ್-ಖರ್ಝ್) ಅಲ್ಲಾಹನು ನಿಷೇಧಿಸಲು ಹಲವಾರು ಕಾರಣಗಳನ್ನು ಕರ್ಮಶಾಸ್ತ್ರ ಪಂಡಿತರು ವಿವರಿಸಿದ್ದಾರೆ.

1) ಸಾಲದಲ್ಲಿ ಬಡ್ಡಿಯನ್ನು ಬೇಡಿದರೆ ಅದು ಮನುಷ್ಯರ ಮಧ್ಯೆ ಸಹಾಯ ಮಾಡುವ ಮನಸ್ಥಿತಿಯನ್ನು ಇಲ್ಲದಾಗಿಸುತ್ತದೆ.ಒಬ್ಬನಿಗೆ ಸಂಕಷ್ಟ ಬರುವಾಗ ಮತ್ತೊಬ್ಬನಿಗೆ ಸಂತೋಷವಾಗುತ್ತದೆ ಕಾರಣವೇನೆಂದರೆ ಅವನು ಸಾಲ ಕೇಳಿ ಮತ್ತೊಬ್ಬನಿಗೆ ಲಾಭ ಉಂಟಾಗುತ್ತದೆ ಎಂಬ ಚಿಂತೆಯಿಂದ ಮನುಷ್ಯನಿಗೆ ಪರಸ್ಪರ ಸಹಾಯ ಮಾಡುವ ಮನಸ್ಥಿತಿ ಇಲ್ಲವಾಗುತ್ತದೆ.

2) ಇಸ್ಲಾಮಿನಲ್ಲಿ ಸಾಲ ನೀಡುವುದು ಪುಣ್ಯಕರ್ಮವಾಗಿದೆ. ಕಾರಣ ಅದು ಸಂಕಷ್ಟದಲ್ಲಿರುವ ಒಬ್ಬ ವ್ಯಕ್ತಿಯನ್ನು ಸಹಾಯ ಮಾಡುವುದಾಗಿದೆ. ಒಬ್ಬನು ಸಾಲ ಕೇಳುವುದು ಅವನು ಸಂಕಷ್ಟದಲ್ಲಿ ಸಿಲುಕಿ ಅವನ ಮುಂದೆ ಯಾವ ದಾರಿ ಇಲ್ಲದ ಗತಿಯಿಂದಾಗಿದೆ. ಒಬ್ಬ ಮುಸ್ಲಿಂ ಸಾಲ ಬೇಡಿ ಜೊತೆಗೆ ಬಡ್ಡಿಯನ್ನು ಸೇರಿಸಿ ಕೇಳಿದರೆ ಅದು ಅವನನ್ನು ದೊಡ್ಡ ಸಂಕಷ್ಟಕ್ಕೆ ಕೊಂಡೊಯ್ಯುತ್ತದೆ.

3) ಹಣದಿಂದ ಹೊಸ ಹೊಸ ರೀತಿಯ ವ್ಯವಹಾರ ಮಾಡಿ ಸಂಪಾದನೆ ಮಾಡದೆ ಕೇವಲ ಸಾಲ ನೀಡಿ ಲಾಭ ಮಾಡುವ ಎಂಬ ಮನಸ್ಥಿತಿ ಮನುಷ್ಯರಲ್ಲಿ ಹುಟ್ಟಿಬರುತ್ತದೆ. ಇದ್ದರಿಂದ, ಹಣದಿಂದ ಹೊರಬರಬೇಕಾದ ಹೊಸ ಹೊಸ ರೀತಿಯ ವ್ಯವಹಾರಗಳಿಗೆ ಅಡ್ಡಿಯಾಗುತ್ತದೆ.

4) ಜೂಜಾಟ ವ್ಯವಹಾರದಲ್ಲಿ ಸೇರಿಬರಬಾರದು. ಇಂದಿನ ಹಲವು ವ್ಯವಹಾರಗಳಲ್ಲಿ ಇದು ಸೇರಿ ಬರುತ್ತದೆ. ಇದರ ರೂಪ ಹೇಗೆಂದರೆ ಇಬ್ಬರು ಹಣ ಖರ್ಚು ಮಾಡುವುದು, ಒಬ್ಬನಿಗೆ ಮಾತ್ರ ಲಾಭವಾಗುವುದು, ಮತ್ತೊಬ್ಬನು ಎಲ್ಲಾ ರೀತಿಯ ನಷ್ಟವನ್ನು ಹೊರಬೇಕು. ಇದು ಕುರ್ ಆನಿನಲ್ಲಿ (ಖಿಮಾರ್, ಮೈಸರ್) ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿದೆ. ಇದು ಪರಿಶುದ್ಧ ಕುರಾನಿನಲ್ಲಿ ಮಧ್ಯಪಾನದಂತೆ ಹರಾಮೆಂದು ವಿವರಿಸಲ್ಪಟ್ಟ ವ್ಯವಹಾರವಾಗಿದೆ .

ಅದ್ದರಿಂದ ಕರ್ಮಶಾಸ್ತ್ರದಲ್ಲಿ ಅಲ್ಲಾಹನು ಹಾಗೂ ಪ್ರವಾದಿ ನಿಷೇಧಿಸಿದ ಹಾಗೂ ಈ ಈ ನಾಲ್ಕು ಕಾರ್ಯಗಳು ಸೇರಿಬರುವ ವ್ಯವಹಾರವಲ್ಲದೆ ಎಲ್ಲಾ ರೀತಿಯ ವ್ಯವಹಾರಗಳು ಹಲಾಲಗಿದೆ. ಈ ಒಂದು ಆಧುನಿಕ ಯುಗದಲ್ಲಿ ನಮ್ಮ ಮುಂದೆ ಹಲವಾರು ರೀತಿಯ ವ್ಯವಹಾರಗಳಿವೆ. ಒಂದು ವ್ಯವಹಾರದಲ್ಲಿ ಈ ನಾಲ್ಕರಲ್ಲಿ ಯಾವುದಾದರೂ ಒಂದು ಕಾರ್ಯ ಸೇರಿ ಬರುತ್ತದೆಯೋ ಎಂದು ಪರಿಶೀಲಿಸಬೇಕು. ಯಾವುದಾದರೂ ಒಂದು ಸೇರಿ ಬಂದರೆ ಆ ವ್ಯವಹಾರ ಹರಾಂ ಆಗುತ್ತದೆ. ಈ ನಾಲ್ಕರಲ್ಲಿ ಯಾವುದೇ ಒಂದು ಕಾರ್ಯ ಸೇರಿ ಬರದಿದ್ದರೆ ವ್ಯವಹಾರವು ಹಲಾಲಾಗುತ್ತದೆ.

Related Posts

Leave A Comment

Voting Poll

Get Newsletter