ಶೈಖ್ ರಿಫಾಯಿ (ರ) - ಜೀವನ, ಸಂದೇಶ
ಎಂ.ಎ. ಜಲೀಲ್ ಸಖಾಫಿ ಪುಲ್ಲಾರ
ಸಂಗ್ರಹ: ಸಫ್ವಾನ್ ಕುದ್ಲೂರು
ಸುಲ್ತಾನುಲ್ ಆರಿಫೀನ್ ಅಹ್ಮದುಲ್ ಕಬೀರ್ ಅರ್ರಿಫಾಯಿ (ರ) ಹಿಜ್ರಿ 500 ರಜಬ್ ತಿಂಗಳ 27 ರಂದು ಜನಿಸಿದರು. ಅವರ ಜನನ ಇರಾಕ್ನ ಬತಾಯಿಹ್ ಎಂಬ ಗ್ರಾಮದಲ್ಲಿ ಆಯಿತು. ಪ್ರಸಿದ್ಧ ವಲಿಯ್ಯ್ ಮತ್ತು ಪಂಡಿತರಾದ ಮನ್ಸೂರುನಿಲ್ ಬತಾಯಿಹಿ ಅವರ ಸಹೋದರಿ ಫಾತಿಮಾ (ರ) ಅವರು ಶೈಖ್ ರಿಫಾಯಿ (ರ) ಅವರ ತಾಯಿಯಾಗಿದ್ದಾರೆ. ಅವರ ತಂದೆಯ ಪರಂಪರೆಯು ಪ್ರವಾದಿ (ಸ) ಅವರ ಮೊಮ್ಮಗ ಹುಸೈನ್ (ರ) ಅವರಿಗೆ ತಲುಪುತ್ತದೆ. ತಾಯಿಯ ಪರಂಪರೆಯ ಮೂಲಕ ಹಸನ್ (ರ) ಅವರಿಗೆ ತಲುಪುತ್ತದೆ. ‘ಅಬುಲ್ ಅಬ್ಬಾಸ್’ ಎಂಬುದು ಅವರ ಬಿರುದಾಗಿದೆ. ಶೈಖ್ ರಿಫಾಯಿ (ರ) ಅವರ ತಾಯಿಯು ತಮ್ಮ ಸಹೋದರನಾದ ಮನ್ಸೂರುನಿಲ್ ಬತಾಯಿಹಿ ಅವರ ಶೈಖ್ ಆದ ಅಬೂ ಮುಹಮ್ಮದಿಸ್ಸನ್ ಬಕೀರಾ (ರ) ಅವರನ್ನು ಭೇಟಿ ಮಾಡಲು ಹೋದಾಗಲೆಲ್ಲಾ ಅವರು ಎದ್ದು ನಿಲ್ಲುತ್ತಿದ್ದರು. ಇದನ್ನು ಹಲವು ಬಾರಿ ನೋಡಿದ ಮುರೀದ್ಗಳು (ಶಿಷ್ಯರು) ಎದ್ದು ನಿಲ್ಲುವುದರ ಕಾರಣವನ್ನು ಕೇಳಿದಾಗ ಶೈಖ್ ಅವರ ಉತ್ತರ ಹೀಗಿತ್ತು: “ಅವಳ ಹೊಟ್ಟೆಯಲ್ಲಿರುವ ಮಗುವನ್ನು ಗೌರವಿಸುತ್ತಾ ನಾನು ಎದ್ದು ನಿಲ್ಲುತ್ತಿದ್ದೇನೆ. ಆ ಮಗುವಿಗೆ ದೊಡ್ಡ ಸ್ಥಾನ ಮತ್ತು ಕರಾಮತ್ಗಳು (ಪವಾಡಗಳು) ಇರುತ್ತವೆ.”
ರಿಫಾಯಿ ಶೈಖ್ ಅವರಿಗೆ ಏಳು ವರ್ಷವಿರುವಾಗ ತಂದೆ ಅಲಿಯ್ಯ್ (ರ) ನಿಧನರಾದರು. ನಂತರ ಸೋದರಮಾವ ಶೈಖ್ ಮನ್ಸೂರ್ ಅವರು ಕುಟುಂಬವನ್ನು ವಾಸ್ವಿತಿಗೆ ಸ್ಥಳಾಂತರಿಸಿದರು. ಅಲ್ಲಿ ಅವರು ಅನೇಕ ಶೈಖ್ಗಳಿಂದ ಧಾರ್ಮಿಕ ಜ್ಞಾನವನ್ನು ಪಡೆದುಕೊಂಡರು. ಪವಿತ್ರ ಕುರಾನ್ ಅನ್ನು ಕಂಠಪಾಠ ಮಾಡಿದರು.
ಪಂಡಿತರು ಶೈಖ್ ರಿಫಾಯಿ (ರ) ಅವರನ್ನು ತಾಜುಲ್ ಆರಿಫೀನ್, ಶರಫುಸ್ಸಾಹಿದೀನ್, ಅಲ್ಖುತ್ಬುಲ್ ಗೌಸ್, ಅಲ್ಕನ್ಸು ರಬ್ಬಾನಿ ಮುಂತಾದ ಅನೇಕ ಬಿರುದುಗಳೊಂದಿಗೆ ಪರಿಚಯಿಸುತ್ತಾರೆ. ಉನ್ನತ ಇಮಾಮ್ಗಳು ಶೈಖ್ ರಿಫಾಯಿ (ರ) ಅವರ ಶ್ರೇಷ್ಠತೆಗಳನ್ನು ವಿವರಿಸಿ ಗ್ರಂಥಗಳನ್ನೇ ರಚಿಸಿದ್ದಾರೆ. ಇಮಾಮ್ ರಾಫಿಯಿ (ರ) ಅವರ ‘ಸವಾದುಲ್ ಐನೈನ್’, ಇಮಾಮ್ ಕಾಸರೂನಿ (ರ) ಅವರ ‘ಶಿಫಾಉಲ್ ಅಸ್ಮಾಮ್’, ಇಮಾಮ್ ಅಲಿಯ್ಯುಬ್ನು ಹದ್ದಾದಿ (ರ) ಅವರ ‘ರಬೀಉಲ್ ಆಶಿಕೀನ್’ ಇವುಗಳಲ್ಲಿ ಕೆಲವು ಮಾತ್ರ.
ಪರೀಕ್ಷೆಗಳು
ಅಲ್ಲಾಹನ ನೆಚ್ಚಿನ ದಾಸರೆಲ್ಲರೂ ಅನೇಕ ಪರೀಕ್ಷೆಗಳನ್ನು ಎದುರಿಸಿದವರಾಗಿದ್ದಾರೆ. ಅವೆಲ್ಲವನ್ನೂ ತಾಳ್ಮೆಯಿಂದ ಎದುರಿಸಿ ವಿಜಯ ಸಾಧಿಸಿದವರು ಅವರು. ನಮ್ಮ ಈ ಲೇಖನದ ನಾಯಕರ ಕೆಲವು ಪರೀಕ್ಷೆಗಳ ಇತಿಹಾಸವನ್ನು ಗಮನಿಸಿ. ಶೈಖ್ ರಿಫಾಯಿ (ರ) ಅವರ ಒಬ್ಬ ಮುರೀದರು ಶೈಖ್ ರಿಫಾಯಿ (ರ) ಅವರು ಸ್ವರ್ಗದ ಉನ್ನತ ಸ್ಥಾನದಲ್ಲಿ ಕುಳಿತಿರುವುದನ್ನು ಹಲವು ಬಾರಿ ಕನಸಿನಲ್ಲಿ ಕಂಡರು. ಮುರೀದ್ ಈ ವಿಷಯವನ್ನು ಶೈಖ್ ಅವರಿಗೆ ತಿಳಿಸಲಿಲ್ಲ. ಒಂದು ದಿನ ಮುರೀದ್ ಶೈಖ್ ರಿಫಾಯಿ (ರ) ಅವರ ಮನೆಗೆ ಹೋದಾಗ, ದುಷ್ಟ ಸ್ವಭಾವದ ಪತ್ನಿಯು ಸುಳ್ಳು ಹೇಳುತ್ತಾ, ಕೈಯಲ್ಲಿದ್ದ ಸೌಟಿನಿಂದ ಶೈಖ್ ಅವರ ಕುತ್ತಿಗೆಗೆ ಹೊಡೆಯುವ ದೃಶ್ಯವನ್ನು ನೋಡಿದರು. 500 ದೀನಾರ್ ಕೇಳುತ್ತಾ ಪತ್ನಿ ಈ ದೌರ್ಜನ್ಯ ಎಸಗುತ್ತಿದ್ದರು. ಮುರೀದ್ ಐನೂರು ದೀನಾರ್ ಸಂಗ್ರಹಿಸಿ ಶೈಖ್ ರಿಫಾಯಿ (ರ) ಅವರಿಗೆ ತಂದು ಕೊಟ್ಟು, “ಇದನ್ನು ಪತ್ನಿಗೆ ಕೊಡಿ” ಎಂದರು. ತಕ್ಷಣವೇ ಶೈಖ್ ಮುರೀದ್ಗೆ ಹೇಳಿದರು: “ನಾನು ಇವೆಲ್ಲವನ್ನೂ ಕ್ಷಮಿಸದಿದ್ದರೆ, ನೀನು ನನ್ನನ್ನು ಸ್ವರ್ಗದ ಉನ್ನತ ಸ್ಥಾನದಲ್ಲಿ ನೋಡುತ್ತಿದ್ದೆಯಾ?”
ಕರಾಮತ್ಗಳು
ಶೈಖ್ ರಿಫಾಯಿ (ರ) ಅವರ ಅನೇಕ ಕರಾಮತ್ಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಪ್ರವಾದಿ (ಸ) ಅವರ ಕೈ ಚುಂಬಿಸಿದ ಘಟನೆ ಪ್ರಸಿದ್ಧವಾಗಿದೆ. ಪ್ರವಾದಿ (ಸ) ಅವರ ಹುಜ್ರಾ ಶರೀಫ್ಗೆ ಝಿಯಾರತ್ಗಾಗಿ ಬಂದಿದ್ದ ಶೈಖ್ ರಿಫಾಯಿ (ರ), ಮುತ್ತು ನಬಿಯವರ ಎದುರು ನಿಂತು ಈ ಅರ್ಥ ಬರುವ ಎರಡು ಸಾಲಿನ ಕವಿತೆಯನ್ನು ಹೇಳಿದರು: “ನಾನು ದೂರದಲ್ಲಿದ್ದಾಗ ನನ್ನ ಆತ್ಮವನ್ನು ಇಲ್ಲಿ ಮುತ್ತಿಡಲು ಕಳುಹಿಸುತ್ತಿದ್ದೆ. ಆದರೆ, ಆತ್ಮವು ತನ್ನ ದೇಹದೊಂದಿಗೆ ಈಗ ಇಲ್ಲಿದೆ. ಹಾಗಾಗಿ, ನಿಮ್ಮ ಬಲಗೈಯನ್ನು ಚುಂಬಿಸುವ ಭಾಗ್ಯ ಪಡೆಯಲು ದಯವಿಟ್ಟು ಅದನ್ನು ಚಾಚಿರಿ.” ತಕ್ಷಣವೇ ಪ್ರವಾದಿಯವರ ಪುಣ್ಯ ಹಸ್ತವು ಗೋಚರಿಸಿತು ಮತ್ತು ರಿಫಾಯಿ (ರ) ಅದನ್ನು ಚುಂಬಿಸಿದರು.
ಮಹನೀಯರು ಶಾಯಿ ಬಳಸದೆ ಬರೆಯುತ್ತಿದ್ದರು. ಯಾರಾದರೂ ಮಂತ್ರ ಅಥವಾ ತಾಯತ ಬರೆಸಿಕೊಳ್ಳಲು ಬಂದರೆ ಶಾಯಿ ಬಳಸದೆ ಬೆರಳಿನಿಂದ ಶೈಖ್ ರಿಫಾಯಿ (ರ) ಬರೆದುಕೊಡುತ್ತಿದ್ದರು. ಹೀಗೆ ಬರೆಸಿಕೊಂಡಿದ್ದ ವ್ಯಕ್ತಿಯೊಬ್ಬರು ಬಹಳ ದಿನಗಳ ನಂತರ ಆ ಕಾಗದದೊಂದಿಗೆ ಶೈಖ್ ಅವರನ್ನು ಸಮೀಪಿಸಿ ಬರೆಯಲು ಕೇಳಿಕೊಂಡರು. ಅವರು ಅದನ್ನು ನೋಡಿ ಇದು ಬರೆದಿರುವುದೇ ಅಲ್ಲವೇ ಎಂದು ಹೇಳಿ ಹಿಂದಿರುಗಿಸಿದರು.
ಒಮ್ಮೆ ಅನೇಕ ಶಿಷ್ಯರಿಗೆ ಪಾಠ ಮಾಡುತ್ತಿರುವಾಗ ಶೈಖ್ ರಿಫಾಯಿ (ರ) ಹೇಳಿದರು: “ಉಹೈಮಿದು ಮಿನ್ಹುಮ್” (ಚಿಕ್ಕ ಅಹ್ಮದ್ ಆ ಗುಂಪಿನಲ್ಲಿದ್ದಾರೆ). ಯಾವ ಚಿಕ್ಕ ಅಹ್ಮದ್, ಯಾವ ಗುಂಪು ಎಂದು ತಿಳಿಯದೆ ಶಿಷ್ಯರು ದಿಗ್ಭ್ರಮೆಗೊಂಡಾಗ ಶೈಖ್ ಹೇಳಿದರು: “ಮಕ್ಕಳೇ, ಈ ಸಮಯದಲ್ಲಿ ದೂರದ ಬಾಗ್ದಾದ್ನಲ್ಲಿ ಇಂದು ಜೀವಂತವಿರುವ ಎಲ್ಲಾ ಔಲಿಯಾಗಳ ನಾಯಕ ತಾನೇ ಎಂದು ರಬ್ಬ್ನ ಅನುಮತಿಯೊಂದಿಗೆ ಶೈಖ್ ಜೀಲಾನಿ (ರ) ಘೋಷಿಸಿದ್ದಾರೆ. ಎಲ್ಲಾ ಔಲಿಯಾಗಳೂ ಅದನ್ನು ಒಪ್ಪಿಕೊಂಡಿದ್ದಾರೆ. ಅವರ ಗುಂಪಿನಲ್ಲಿ ಚಿಕ್ಕ ಅಹ್ಮದ್ ಆದ ನಾನೂ ಇದ್ದೇನೆ. ಎಲ್ಲರೂ ನನ್ನನ್ನು ಅಹ್ಮದುಲ್ ಕಬೀರ್ (ದೊಡ್ಡ ಅಹ್ಮದ್) ಎಂದು ಕರೆಯುತ್ತಿದ್ದರೂ, ನಾನು ಉಹೈಮಿದ್ (ಚಿಕ್ಕ ಅಹ್ಮದ್). ನಾನೂ ಮುಹ್ಯಿದ್ದೀನ್ ಶೈಖ್ ಅವರ ಪಾದದಡಿಯಲ್ಲಿದ್ದೇನೆ.”
ಪಾಂಡಿತ್ಯ
ಶೈಖ್ ರಿಫಾಯಿ (ರ) ಅವರು ಶಾಫಿ ಮದ್ಹಬ್ ಅನ್ನು ಅನುಸರಿಸುವವರಾಗಿದ್ದರು. ಇಮಾಮ್ ಶೀರಾಝಿ (ರ) ಅವರ ‘ತನ್ಬೀಹ್’ ಎಂಬ ಗ್ರಂಥವನ್ನು ಅವರು ಈ ವಿಷಯದಲ್ಲಿ ಬೋಧಿಸಿದ್ದರು. ಇಪ್ಪತ್ತು ವರ್ಷಗಳಲ್ಲಿ ಅವರು ವಿವಿಧ ಜ್ಞಾನಗಳಲ್ಲಿ ಪರಿಣತಿಯನ್ನು ಸಾಧಿಸಿದರು. ಇಬ್ನುಲ್ ಜೌಸಿ ಹೇಳುತ್ತಾರೆ: “ನಾನು ಒಂದು ಬರಾಅತ್ ರಾತ್ರಿಯಂದು ಶೈಖ್ ಅವರ ಸನ್ನಿಧಿಗೆ ಹೋದೆ. ಅವರ ಉಪದೇಶವನ್ನು ಕೇಳಲು ಸುಮಾರು ಒಂದು ಲಕ್ಷ ಜನರು ಅಲ್ಲಿದ್ದರು.
ಶೈಖ್ ಅವರು ವಿನಯ ಮತ್ತು ನಮ್ರತೆಯ ಮೂರ್ತರೂಪವಾಗಿದ್ದರು. ಅವರನ್ನು ನಿಂದಿಸುವವರು ಅನೇಕರಿದ್ದರು. ಎಷ್ಟೇ ನಿಂದಿಸಿದರೂ ಅವರು ಯಾವುದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ. ಬದಲಾಗಿ ಅವರಿಗೆ ಕಾಣಿಕೆಯಾಗಿ ಏನಾದರೂ ವಸ್ತುಗಳನ್ನು ಕಳುಹಿಸಿಕೊಡುತ್ತಿದ್ದರು. ಎಲ್ಲಿಯಾದರೂ ರೋಗಿಗಳಿದ್ದಾರೆಂದು ತಿಳಿದರೆ ಅಲ್ಲಿಗೆ ಭೇಟಿ ನೀಡಲು ಹೋಗುತ್ತಿದ್ದರು. ತಮ್ಮ ತಲೆಯ ಮೇಲೆ ಉರುವಲು ಹೊತ್ತು ತಂದು ಅಗತ್ಯವಿರುವವರಿಗೆ ಹಂಚುತ್ತಿದ್ದರು. ಆಟವಾಡುತ್ತಿದ್ದ ಮಕ್ಕಳಲ್ಲಿ ಒಬ್ಬನನ್ನು ‘ನೀನು ಯಾರ ಮಗ?’ ಎಂದು ಕೇಳಿದಾಗ, ‘ಅದನ್ನು ನೀವೇಕೆ ತಿಳಿಯಬೇಕು?’ ಎಂದು ಮರುಪ್ರಶ್ನಿಸಿದ ಮಗುವಿಗೆ, ‘ಮಗು, ನೀನು ನನಗೆ ಅದಬ್ ಕಲಿಸಿದೆ, ಅಲ್ಲಾಹನು ನಿನಗೆ ಒಳಿತು ಮಾಡಲಿ’ ಎಂದು ರಿಫಾಯಿ (ರ) ಪ್ರತಿಕ್ರಿಯಿಸಿದ್ದರು.
ರಿಫಾಯಿ ತ್ವರೀಖತ್
ಖಾದಿರಿ ತ್ವರೀಖತ್ನಂತೆಯೇ ರಿಫಾಯಿ ತ್ವರೀಖತ್ ಕೂಡ ನೈಜ ತ್ವರೀಖತ್ ಆಗಿದೆ. ಶೈಖ್ ರಿಫಾಯಿ (ರ) ಅವರ ಮುರಬ್ಬಿ ಶೈಖ್ ಅಲಿಯ್ಯುಲ್ ಖಾರಿ (ರ) ಆಗಿದ್ದರು. ಅವರ ಕಾಲದಲ್ಲೇ ಜನರನ್ನು ಸನ್ಮಾರ್ಗದತ್ತ ಆಹ್ವಾನಿಸುವ ಅನುಮತಿ (ಇಜಾಸತ್) ಮತ್ತು ಅಧಿಕೃತ ಉಡುಗೆಯನ್ನು ಶೈಖ್ ರಿಫಾಯಿ (ರ) ಅವರಿಗೆ ನೀಡಲಾಗಿತ್ತು. ಇದೇ ರೀತಿ ತಮ್ಮ ಸೋದರಮಾವ ಶೈಖ್ ಮನ್ಸೂರ್ ಅವರಿಂದಲೂ ಲಭಿಸಿತ್ತು. ಅವರೆಲ್ಲರ ಸಿಲ್ಸಿಲಾ (ಪರಂಪರೆ) ಪ್ರಮುಖ ಮಶಾಯಿಖ್ಗಳ ಮೂಲಕ ಅಲಿಯ್ಯುಬ್ನು ಅಬೀತಾಲಿಬ್ (ರ) ಅವರಿಗೆ ತಲುಪುತ್ತದೆ. ರಿಫಾಯಿ ತ್ವರೀಖತ್ನ ಶೈಖ್ಗಳು ಇಂದಿಗೂ ಈ ತ್ವರೀಖತ್ ಅನ್ನು ರಕ್ಷಿಸಿಕೊಂಡು ಬರುತ್ತಿದ್ದಾರೆ.
ಅಂತಿಮ ಯಾತ್ರೆ
ದೀರ್ಘ ಎಪ್ಪತ್ತು ವರ್ಷಗಳ ಜೀವನದಲ್ಲಿ ಇಸ್ಲಾಮಿನ ಘನತೆ ಮತ್ತು ತೇಜಸ್ಸಿಗಾಗಿ ಕಠಿಣ ಪರಿಶ್ರಮ ಪಟ್ಟು, ಅನೇಕರಿಗೆ ಸನ್ಮಾರ್ಗವನ್ನು ತೋರಿಸಿಕೊಟ್ಟ, ಹಲವಾರು ಮುರೀದ್ಗಳನ್ನು ತಸವ್ವುಫ್ನ ಉನ್ನತ ಸ್ಥಾನಕ್ಕೆ ಕೈಹಿಡಿದು ಎತ್ತಿದ ಶೈಖ್ ರಿಫಾಯಿ (ರ) ಅವರು ಹಿಜ್ರಿ 570 ಜುಮಾದುಲ್ ಊಲಾ 12 ರಂದು ಮಧ್ಯಾಹ್ನ ಶಹಾದತ್ ಕಲಿಮಾವನ್ನು ಉಚ್ಚರಿಸುತ್ತಾ ಭೌತಿಕ ಜಗತ್ತಿಗೆ ವಿದಾಯ ಹೇಳಿದರು. ಅವರ ನಿಧನವು ಅವರ ಸ್ವಗ್ರಾಮವಾದ ಉಮ್ಮು ಅಬೀದಾದಲ್ಲಿ ಸಂಭವಿಸಿತು.