ಆಲಮುಲ್ ಅರ್ವಾಹ್: ಆತ್ಮಗಳ ಅದೃಶ್ಯ ಲೋಕ

Iqbal Ajjavara

ಮಾನವ ಜೀವನವು ಭೂಮಿಯ ಮೇಲಿನ ಕೆಲವೇ ದಿನಗಳ ಪ್ರಯಾಣವಾಗಿದೆ. ಈ ಲೋಕದಲ್ಲಿ ಮನುಷ್ಯನು ಜನಿಸುತ್ತಾನೆ, ಬೆಳೆಯುತ್ತಾನೆ, ಸಂಪತ್ತನ್ನು ಸಂಪಾದಿಸುತ್ತಾನೆ ಹಾಗೂ ಅನೇಕ ಸಂಬಂಧಗಳನ್ನು ನಿರ್ಮಿಸಿಕೊಳ್ಳುತ್ತಾನೆ. ಆದರೆ ಒಂದು ದಿನ ಇವೆಲ್ಲವನ್ನೂ ಬಿಟ್ಟು ಹೊರಡಬೇಕಾಗುತ್ತದೆ. ಮರಣವು ಆ ಪ್ರಯಾಣದ ಅಂತ್ಯವಲ್ಲ; ಬದಲಾಗಿ ಮತ್ತೊಂದು ಲೋಕದ ಪ್ರವೇಶದ್ವಾರವಾಗಿದೆ.

ಇಸ್ಲಾಮಿಕ್ ಪರಂಪರೆಯಲ್ಲಿ ಮರಣಾನಂತರದ ಹಂತಗಳ ಕುರಿತು ವಿವರವಾಗಿ ಚರ್ಚಿಸುವಾಗ ಪ್ರಮುಖವಾಗಿ ಪ್ರಸ್ತಾಪವಾಗುವ ಪರಿಕಲ್ಪನೆಯೇ “ಆಲಮುಲ್ ಅರ್ವಾಹ್” (ಆತ್ಮಗಳ ಲೋಕ). ಇಸ್ಲಾಂ ಮಾನವನನ್ನು ದೇಹ ಮತ್ತು ಆತ್ಮ ಎಂಬ ಎರಡು ಅಂಶಗಳ ಸಂಯೋಜನೆಯಾಗಿ ಪರಿಗಣಿಸುತ್ತದೆ. ದೇಹವು ಭೂಮಿಯಿಂದ ಸೃಷ್ಟಿಸಲ್ಪಟ್ಟದ್ದಾಗಿದ್ದು ನಾಶವಾಗುವ ಸ್ವಭಾವ ಹೊಂದಿದೆ. ಆದರೆ ಆತ್ಮವು ಅಲ್ಲಾಹನ ಸೃಷ್ಟಿಯಾದ ಅಮೂಲ್ಯವಾದ ವಾಸ್ತವಿಕತೆಯಾಗಿದೆ. ಮನುಷ್ಯನು ಮರಣ ಹೊಂದಿದಾಗ ದೇಹವು ಭೂಮಿಗೆ ಮರಳುತ್ತದೆ; ಆದರೆ ಆತ್ಮವು ತನ್ನ ಪ್ರಯಾಣವನ್ನು ಮತ್ತೊಂದು ಲೋಕದತ್ತ ಮುಂದುವರಿಸುತ್ತದೆ.

ಆತ್ಮಗಳ ಪೂರ್ವಾವಸ್ಥೆ

ಹದೀಸ್‌ಗಳಲ್ಲಿ ಆತ್ಮಗಳ ಪೂರ್ವಸೃಷ್ಟಿಯ ಕುರಿತು ಕೆಲವು ಸೂಚನೆಗಳು ಕಂಡುಬರುತ್ತವೆ. ಪ್ರವಾದಿ ಮುಹಮ್ಮದ್ (ಸ) ಅವರು ಹೀಗೆ ಹೇಳಿದರು: “ಆತ್ಮಗಳು ಒಟ್ಟುಗೂಡಿಸಲ್ಪಟ್ಟ ಸೈನ್ಯಗಳಂತಿವೆ. ಅವುಗಳಲ್ಲಿ ಪರಸ್ಪರ ಪರಿಚಯ ಹೊಂದಿದ್ದವು ಒಂದಕ್ಕೊಂದು ಪ್ರೀತಿಸುತ್ತವೆ; ಪರಿಚಯವಿಲ್ಲದವುಗಳು ಪರಸ್ಪರ ದೂರವಾಗಿರುತ್ತವೆ.” (ಸಹೀಹ್ ಮುಸ್ಲಿಂ)

ಇಸ್ಲಾಮಿಕ ವಿದ್ವಾಂಸರು ಈ ಹದೀಸ್ ಅನ್ನು “ಆಲಮುಲ್ ಅರ್ವಾಹ್” ಎಂಬ ಪರಿಕಲ್ಪನೆಯೊಂದಿಗೆ ಸಂಬಂಧಿಸಿ ವಿವರಿಸುತ್ತಾರೆ. ಕೆಲವರನ್ನು ನಾವು ಮೊದಲ ಬಾರಿಗೆ ಭೇಟಿಯಾದಾಗಲೇ ಅವರೊಂದಿಗೆ ಒಂದು ವಿಶೇಷ ಆತ್ಮೀಯತೆ ಅನುಭವಿಸುತ್ತೇವೆ. ಮತ್ತೆ ಕೆಲವರನ್ನು ನೋಡಿದಾಗ ಅದರ ಸ್ಪಷ್ಟ ಕಾರಣ ತಿಳಿಯದಿದ್ದರೂ ಒಂದು ರೀತಿಯ ಅಂತರಭಾವನೆ ಉಂಟಾಗುತ್ತದೆ. ಮಾನವರ ಆತ್ಮಗಳ ನಡುವೆ ಪೂರ್ವದಲ್ಲಿ ಇದ್ದ ಪರಿಚಯದ ಪ್ರತಿಫಲನವಾಗಿಯೇ ಇದನ್ನು ಕೆಲವು ಪಂಡಿತರು ವಿವರಿಸುತ್ತಾರೆ. ಈ ಪರಿಕಲ್ಪನೆಯು ಮಾನವ ಸಂಬಂಧಗಳ ಆಧ್ಯಾತ್ಮಿಕ ನೆಲೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮರಣಾನಂತರ ಆತ್ಮದ ಸ್ಥಿತಿ

ಮರಣದೊಂದಿಗೆ ಮನುಷ್ಯನ ದೇಹವು ಭೂಮಿಗೆ ಮರಳುತ್ತದೆ. ಆದರೆ ಆತ್ಮವು ಅಸ್ತಿತ್ವದಲ್ಲೇ ಉಳಿಯುತ್ತದೆ. ಕೆಲವು ಸಹಾಬಿಗಳು ಉಲ್ಲೇಖಿಸಿರುವ ವರದಿಗಳ ಪ್ರಕಾರ, ವಿಶ್ವಾಸಿಗಳ ಆತ್ಮಗಳು ಬಿಳಿ ಪಕ್ಷಿಗಳ ರೂಪದಲ್ಲಿ ಅಲ್ಲಾಹನ ಅರ್ಶಿನ ನೆರಳಿನಲ್ಲಿ ಇರುತ್ತವೆ ಎಂದು ಇಸ್ಲಾಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದು ಮರಣದೊಂದಿಗೆ ಆತ್ಮದ ಜೀವನವು ಅಂತ್ಯಗೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಮರಣದ ನಂತರ ಮನುಷ್ಯನ ಆತ್ಮವು “ಬರ್‌ಝಖ್” ಎಂಬ ಲೋಕಕ್ಕೆ ಪ್ರವೇಶಿಸುತ್ತದೆ. ಅಲ್ಲಿ ಅವನು ತನ್ನ ಸತ್ಕರ್ಮ ಮತ್ತು ದುಷ್ಕರ್ಮಗಳ ಫಲದ ಒಂದು ಭಾಗವನ್ನು ಅನುಭವಿಸುತ್ತಾನೆ. ಬರ್‌ಝಖ್ ಎನ್ನುವುದು ಇಹಲೋಕ ಮತ್ತು ಪರಲೋಕದ ನಡುವಿನ ಮಧ್ಯಂತರ ಸ್ಥಿತಿಯಾಗಿದ್ದು, ಆತ್ಮವು ಅಂತಿಮ ಪುನರುತ್ಥಾನದವರೆಗೆ ಅಲ್ಲಿ ವಾಸಿಸುತ್ತದೆ.

ಇಮಾಮ್ ಗಝಾಲಿಯವರ ವಿವರಣೆ

ಈ ವಿಷಯವನ್ನು ವಿವರವಾಗಿ ಚರ್ಚಿಸುವಾಗ, ಪ್ರಸಿದ್ಧ ಇಸ್ಲಾಮಿಕ ಚಿಂತಕ ಅಬೂ ಹಾಮಿದ್ ಅಲ್ ಗಝಾಲಿ ಅವರ  ಪ್ರಸಿದ್ಧ ಕೃತಿ The Remembrance of Death and the Afterlife ನಲ್ಲಿ ಆತ್ಮದ ಸ್ಥಿತಿಯ ಕುರಿತು ಆಳವಾದ ಚಿಂತನೆಗಳನ್ನು ಮಂಡಿಸುತ್ತಾರೆ.

ಅಲ್-ಗಝಾಲಿಯವರ ಅಭಿಪ್ರಾಯದಂತೆ, ಮನುಷ್ಯರು ಲೋಕದ ಸುಖಭೋಗಗಳು ಮತ್ತು ಆಸೆಗಳಲ್ಲಿ ಮುಳುಗಿಹೋಗುವುದರಿಂದ ಮರಣದ ಸ್ಮರಣೆಯಿಂದ ದೂರವಾಗುತ್ತಾರೆ. ಆದರೆ ಮರಣದ ಸತ್ಯವನ್ನು ಅರಿತ ವ್ಯಕ್ತಿಯು ಈ ಲೋಕವನ್ನು ಶಾಶ್ವತ ನಿವಾಸವೆಂದು ಪರಿಗಣಿಸುವುದಿಲ್ಲ. ಏಕೆಂದರೆ ಮರಣವು ಮನುಷ್ಯನನ್ನು ಹೊಸ ಲೋಕದತ್ತ, ಅಂದರೆ ಆತ್ಮಗಳ ಲೋಕದತ್ತ ಕೊಂಡೊಯ್ಯುತ್ತದೆ.

ಈ ಸತ್ಯವನ್ನು ಮರೆತುಬಿಡುವವರೇ ಲೋಕದ ಮೋಹ ಮತ್ತು ಭ್ರಮೆಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಮರಣಾನಂತರ ಮನುಷ್ಯನು ಪ್ರವೇಶಿಸುವ ಮೊದಲ ಹಂತವೇ ಸಮಾಧಿಯ ಜೀವನವಾಗಿದೆ. ಅಲ್ಲಿ ಅವನ ಆತ್ಮವು ಒಂದು ಹೊಸ ಅನುಭವವನ್ನು ಎದುರಿಸುತ್ತದೆ ಹಾಗೂ ತನ್ನ ಮುಂದಿನ ಪರಲೋಕ ಜೀವನದ ಆರಂಭಿಕ ಸ್ಥಿತಿಯನ್ನು ಅನುಭವಿಸಲು ಪ್ರಾರಂಭಿಸುತ್ತದೆ.

ಆತ್ಮಗಳು ಮತ್ತು ಜೀವಂತರ ನಡುವಿನ ಸಂಬಂಧ

ಇಸ್ಲಾಮಿಕ ಪರಂಪರೆಯ ಪ್ರಕಾರ, ಮರಣ ಹೊಂದಿದವರಿಗೂ ಜೀವಂತರಿಗೂ ನಡುವೆ ಒಂದು ಆಧ್ಯಾತ್ಮಿಕ ಸಂಬಂಧ ಮುಂದುವರಿಯುತ್ತದೆ ಎಂದು ಹೇಳಲಾಗುತ್ತದೆ. ಜೀವಂತರು ಮೃತರಿಗಾಗಿ ಮಾಡುವ ದುಆ (ಪ್ರಾರ್ಥನೆ) ಮತ್ತು ಇಸ್ತಿಗ್ಫಾರ್ (ಕ್ಷಮೆಯಾಚನೆ) ಅವರಿಗೆ ಒಂದು ಉಡುಗೊರೆಯಾಗಿ ತಲುಪುತ್ತದೆ ಎಂದು ಹದೀಸ್‌ಗಳು ಸೂಚಿಸುತ್ತವೆ.

ಇಮಾಮ್ ಗಝಾಲಿಯವರು ಈ ವಿಷಯವನ್ನು ವಿವರಿಸುವಾಗ, “ಮೃತರಿಗಾಗಿ ಮಾಡಲಾಗುವ ದುಆ ಅವರಿಗೆ ಅತ್ಯಂತ ಪ್ರಿಯವಾದದ್ದು. ಅದು ಅವರಿಗೆ ಮಹತ್ತರವಾದ ಸಾಂತ್ವನ ಮತ್ತು ಸಮಾಧಾನವನ್ನು ನೀಡುತ್ತದೆ” ಎಂದು ಹೇಳುತ್ತಾರೆ. ಈ ಕಾರಣದಿಂದಲೇ ಇಸ್ಲಾಂ ಮೃತರಿಗಾಗಿ ದುಆ ಮಾಡಲು ಹಾಗೂ ಅವರ ಸಮಾಧಿಗಳನ್ನು ಸಂದರ್ಶಿಸಲು ಪ್ರೋತ್ಸಾಹಿಸುತ್ತದೆ.

ಕುರ್‌ಆನಿನ ದೃಷ್ಟಿಕೋನ

ಮಾನವನ ಜೀವನಯಾತ್ರೆಯನ್ನು ಕುರ್‌ಆನ್ ಅತ್ಯಂತ ಗಂಭೀರ ಮತ್ತು ಅರ್ಥಪೂರ್ಣ ರೀತಿಯಲ್ಲಿ ಚಿತ್ರಿಸುತ್ತದೆ. ಮಾನವನ ಸೃಷ್ಟಿ, ಅವನ ಮರಣ ಮತ್ತು ನಂತರದ ಪುನರುತ್ಥಾನದ ಕುರಿತು ಕುರ್‌ಆನ್ ಅನೇಕ ಕಡೆಗಳಲ್ಲಿ ಉಲ್ಲೇಖಿಸುತ್ತದೆ. ಅವುಗಳಲ್ಲಿ ಅತ್ಯಂತ ಆಳವಾದ ಅರ್ಥವನ್ನು ಹೊಂದಿರುವ ಒಂದು ಆಯತ್ ಸೂರತುಲ್ ಬಖರದ 28ನೇ ಆಯತ್ ಆಗಿದೆ:

«كَيْفَ تَكْفُرُونَ بِاللَّهِ وَكُنتُمْ أَمْوَاتًا فَأَحْيَاكُمْ ثُمَّ يُمِيتُكُمْ ثُمَّ يُحْيِيكُمْ

“ನೀವು ಹೇಗೆ ಅಲ್ಲಾಹನನ್ನು ನಿರಾಕರಿಸುತ್ತೀರಿ? ನೀವು ನಿರ್ಜೀವ ಸ್ಥಿತಿಯಲ್ಲಿದ್ದಾಗ ಆತನು ನಿಮಗೆ ಜೀವ ನೀಡಿದನು. ನಂತರ ಆತನು ನಿಮಗೆ ಮರಣವನ್ನು ನೀಡುವನು; ಬಳಿಕ ಮತ್ತೆ ನಿಮ್ಮನ್ನು ಜೀವಂತಗೊಳಿಸುವನು.”»

(ಸೂರತುಲ್ ಬಖರಾ 2:28)

ಈ ಆಯತ್ ಮಾನವ ಜೀವನದ ಸಂಪೂರ್ಣ ದೃಷ್ಟಿಕೋನವನ್ನು ಅತ್ಯಂತ ಸಂಕ್ಷಿಪ್ತವಾದ ಪದಗಳಲ್ಲಿ ವಿವರಿಸುತ್ತದೆ. ಈ ಆಯತ್ ಅನ್ನು ವಿವರಿಸುವಾಗ ಇಸ್ಲಾಮಿಕ ವಿದ್ವಾಂಸರು, ಮಾನವನ ಜೀವನವು ನಾಲ್ಕು ಪ್ರಮುಖ ಹಂತಗಳ ಮೂಲಕ ಸಾಗುತ್ತದೆ ಎಂದು ಹೇಳುತ್ತಾರೆ.

ಮೊದಲ ಹಂತವು ಮಾನವನ ಅಸ್ತಿತ್ವವಿಲ್ಲದ ಸ್ಥಿತಿಯಾಗಿದೆ. ಭೂಮಿಯಲ್ಲಿ ಜನಿಸುವ ಮೊದಲು ಮನುಷ್ಯನು ಅಸ್ತಿತ್ವದಲ್ಲಿರಲಿಲ್ಲ; ಅಲ್ಲಾಹನು ಅವನನ್ನು ಸೃಷ್ಟಿಸುವ ಮೊದಲು ಅವನು ಒಂದು ಅಸ್ತಿತ್ವರಹಿತ ಸ್ಥಿತಿಯಲ್ಲಿದ್ದನು. ನಂತರ ಅಲ್ಲಾಹನು ಅವನಿಗೆ ಜೀವವನ್ನು ನೀಡುತ್ತಾನೆ. ಇದೇ ಇಹಲೋಕದ ಜೀವನದ ಆರಂಭವಾಗಿದೆ. ಮನುಷ್ಯನು ಬೆಳೆಯುವ, ಬದುಕುವ ಮತ್ತು ತನ್ನ ಜೀವನವನ್ನು ಸಾಗಿಸುವ ದುನಿಯಾದ ಜೀವನ ಇದೇ ಆಗಿದೆ.

ಅದರ ನಂತರ ಮನುಷ್ಯನು ಮತ್ತೊಮ್ಮೆ ಮರಣವನ್ನು ಎದುರಿಸುತ್ತಾನೆ. ಈ ಮರಣವು ದೇಹದ ಅಂತ್ಯ ಮಾತ್ರ; ಆತ್ಮದ ಪ್ರಯಾಣವು ಇದರೊಂದಿಗೆ ಮುಗಿಯುವುದಿಲ್ಲ. ಇಸ್ಲಾಮಿಕ ವಿದ್ವಾಂಸರ ಪ್ರಕಾರ, ಮರಣದ ನಂತರ ಮನುಷ್ಯನು ಬರ್‌ಝಖ್ ಎಂಬ ಮಧ್ಯಂತರ ಲೋಕಕ್ಕೆ ಪ್ರವೇಶಿಸುತ್ತಾನೆ.

ಕೊನೆಯ ಹಂತವು ಪುನರುತ್ಥಾನವಾಗಿದೆ. ಕಿಯಾಮತ್ ದಿನದಲ್ಲಿ ಅಲ್ಲಾಹನು ಮಾನವರನ್ನು ಮತ್ತೆ ಜೀವಂತಗೊಳಿಸುವನು. ಆ ದಿನ ಪ್ರತಿಯೊಬ್ಬರೂ ತಮ್ಮ ಕರ್ಮಗಳಿಗೆ ಅನುಗುಣವಾಗಿ ಪ್ರತಿಫಲ ಅಥವಾ ಶಿಕ್ಷೆಯನ್ನು ಪಡೆಯುವರು.

ಈ ದೃಷ್ಟಿಯಿಂದ ನೋಡಿದರೆ, ಕುರ್‌ಆನ್ ಮಾನವ ಜೀವನವನ್ನು ಕೇವಲ ಅಲ್ಪಾವಧಿಯ ಇಹಲೋಕ ಜೀವನವೆಂದು ಮಾತ್ರ ಕಾಣುವುದಿಲ್ಲ. ಬದಲಾಗಿ, ಅದನ್ನು ಒಂದು ದೀರ್ಘವಾದ ಆಧ್ಯಾತ್ಮಿಕ ಪ್ರಯಾಣವಾಗಿ ಚಿತ್ರಿಸುತ್ತದೆ. ಅಸ್ತಿತ್ವವಿಲ್ಲದ ಸ್ಥಿತಿಯಿಂದ ಆರಂಭವಾಗಿ, ದುನಿಯಾದ ಜೀವನದ ಮೂಲಕ ಸಾಗುತ್ತಾ, ಮರಣಾನಂತರದ ಲೋಕಕ್ಕೆ ಪ್ರವೇಶಿಸಿ, ಅಂತಿಮವಾಗಿ ಆಖಿರತ್‌ನ ಶಾಶ್ವತ ಜೀವನವನ್ನು ತಲುಪುವ ಮಹತ್ತರ ಯಾತ್ರೆಯೇ ಮಾನವ ಜೀವನವಾಗಿದೆ.

ಮಾನವ ಜೀವನಕ್ಕೆ ದೊರೆಯುವ ಪಾಠ

ಆಲಮುಲ್ ಅರ್ವಾಹ್ ಎಂಬ ಪರಿಕಲ್ಪನೆಯು ಮಾನವನನ್ನು ಒಂದು ಮಹತ್ತರ ಸತ್ಯದತ್ತ ಕೊಂಡೊಯ್ಯುತ್ತದೆ. ಅದು, ಮನುಷ್ಯನು ಈ ಭೂಮಿಯ ಮೇಲೆ ಶಾಶ್ವತ ನಿವಾಸಿಯಲ್ಲ; ಅವನು ಕೇವಲ ಒಬ್ಬ ಪ್ರಯಾಣಿಕನು ಎಂಬ ವಾಸ್ತವಿಕತೆಯಾಗಿದೆ. ಪ್ರವಾದಿ ಮುಹಮ್ಮದ್ (ಸ) ಅವರು ಹೀಗೆ ಹೇಳಿದರು: “ಈ ಲೋಕದಲ್ಲಿ ನೀನು ಒಬ್ಬ ಪ್ರಯಾಣಿಕನಂತೆ ಅಥವಾ ದಾರಿಹೋಕನಂತೆ ಬದುಕು.” (ಸಹೀಹ್ ಬುಖಾರಿ)

ಮರಣವು ಮಾನವ ಜೀವನದ ಅಂತ್ಯವಲ್ಲ. ಅದು ಮತ್ತೊಂದು ಲೋಕಕ್ಕೆ ಪ್ರವೇಶಿಸುವ ಬಾಗಿಲಾಗಿದೆ. ಆದ್ದರಿಂದಲೇ ಇಸ್ಲಾಂ ಮಾನವನನ್ನು ಈ ಲೋಕದಲ್ಲಿ ಧರ್ಮನಿಷ್ಠ ಹಾಗೂ ಸತ್ಕಾರ್ಯಪರ ಜೀವನ ನಡೆಸಲು ಪ್ರೇರೇಪಿಸುತ್ತದೆ.

ಪ್ರತಿದಿನ ನಮ್ಮ ಕಣ್ಣೆದುರು ಸಂಭವಿಸುವ ಮರಣಗಳು, ಒಂದು ದಿನ ನಮಗೂ ಅದೇ ಪ್ರಯಾಣವನ್ನು ಆರಂಭಿಸಬೇಕಾಗುತ್ತದೆ ಎಂಬುದನ್ನು ನೆನಪಿಸುತ್ತವೆ. ಇಂದು ನಮ್ಮೊಂದಿಗೆ ಬದುಕುತ್ತಿರುವವರು ನಾಳೆ ಮಣ್ಣಿನಡಿಯಲ್ಲಿ ವಿಶ್ರಾಂತಿ ಪಡೆಯಬಹುದು; ಇಂದು ನಾವು ನಡೆಯುತ್ತಿರುವ ದಾರಿಯಲ್ಲಿ ನಾಳೆ ನಮ್ಮ ನೆನಪುಗಳಷ್ಟೇ ಉಳಿಯಬಹುದು. ಈ ಕಾರಣದಿಂದಲೇ ಇಸ್ಲಾಂ ಮನುಷ್ಯನಿಗೆ ಮರಣವನ್ನು ನಿರಂತರವಾಗಿ ಸ್ಮರಿಸಲು ಉಪದೇಶಿಸುತ್ತದೆ.

ಮಾನವನ ನಿಜವಾದ ಜೀವನವು ಈ ಲೋಕದಲ್ಲಿ ಅಲ್ಲ; ಮರಣದ ನಂತರವೇ ಅದು ಆರಂಭವಾಗುತ್ತದೆ. ಈ ಲೋಕವು ಒಂದು ಪರೀಕ್ಷಾ ಕೇಂದ್ರವಾಗಿದ್ದರೆ, ಆಲಮುಲ್ ಅರ್ವಾಹ್ ಆ ಪರೀಕ್ಷೆಯ ಫಲಿತಾಂಶಗಳು ಅನಾವರಣಗೊಳ್ಳುವ ಲೋಕವಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿಶ್ವಾಸಿಯು ತನ್ನ ಜೀವನವನ್ನು ಆತ್ಮಶುದ್ಧಿ, ಅಲ್ಲಾಹನ ಭಯಭಕ್ತಿ ಮತ್ತು ಸತ್ಕಾರ್ಯಗಳಿಂದ ಅಲಂಕರಿಸಬೇಕು. ಏಕೆಂದರೆ ಒಂದು ದಿನ ನಮ್ಮ ಆತ್ಮವೂ ಈ ಲೋಕವನ್ನು ತೊರೆದು ಆ ಅದೃಶ್ಯ ಲೋಕದತ್ತ ತನ್ನ ಪ್ರಯಾಣವನ್ನು ಆರಂಭಿಸಲಿದೆ.

Related Posts

Leave A Comment

Voting Poll

Get Newsletter