ಇಬ್ರಾಹೀಮೀ ಪರಂಪರೆಯ ಹಜ್ ಬದುಕಿನಲ್ಲಿ: ಆಧುನಿಕ ಯುಗದಲ್ಲಿ ಹಜ್ಜಿನ ವಿಧಿ-ವಿಧಾನಗಳ ಪ್ರಸ್ತುತತೆ
ಇಬ್ರಾಹೀಂ (ಅ) ಅವರ ಹಜ್ಜಿನ ಪರಂಪರೆ: ಇಂದಿನ ಕಾಲದಲ್ಲಿ ಹಜ್ಜಿನ ವಿಧಿ-ವಿಧಾನಗಳ ಮಹತ್ವ
ಹಜ್ಜಿನ ವಿಧಿ-ವಿಧಾನಗಳ ಮಹತ್ವ ಮತ್ತು ಅದರ ಆತ್ಮೀಯ ಶಕ್ತಿಯನ್ನು ಅಧ್ಯಯನ ಮಾಡಬೇಕು. ಇದು ಮಾನವಶಾಸ್ತ್ರ, ಮನೋವಿಜ್ಞಾನ, ಧರ್ಮಶಾಸ್ತ್ರ, ತತ್ತ್ವಶಾಸ್ತ್ರ, ತಫ್ಸೀರ್, ಫಿಖ್ ಮತ್ತು ಇಸ್ಲಾಮಿಕ್ ಆತ್ಮೀಯತೆ ಮುಂತಾದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದೆ. ಮಾನವ ಜೀವನದಲ್ಲಿ ಹಜ್ಜಿನ ವಿಧಿ-ವಿಧಾನಗಳು ಎಷ್ಟು ಮಹತ್ವದ್ದಾಗಿವೆ ಮತ್ತು ಅವು ಸಮಾಜದಲ್ಲಿ ಹಾಗೂ ವ್ಯಕ್ತಿತ್ವದ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ.
ಇಂದಿನ ಜಗತ್ತಿನಲ್ಲಿ ಕೆಲವರು ಧಾರ್ಮಿಕ ವಿಧಿ-ವಿಧಾನಗಳನ್ನು ಇವು ಕೇವಲ. ಹಳೆಯ ಕಾಲದ ಆಚರಣೆಗಳೆಂದು ಭಾವಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಅವು ಅಗತ್ಯವಿಲ್ಲವೆಂದು ಹೇಳುತ್ತಾರೆ. ಆದರೆ ಇಂದಿನ ಅನೇಕ ಪಂಡಿತರು ಈ ಅಭಿಪ್ರಾಯವನ್ನು ತಳ್ಳಿ ಹಾಕುತ್ತಾರೆ.
ವಿಧಿ-ವಿಧಾನಗಳು ಕೇವಲ ಅರ್ಥವಿಲ್ಲದ ಕ್ರಿಯೆಗಳಲ್ಲ. ಅವು ಮಾತುಗಳಲ್ಲಿ ಹೇಳಲಾಗದ ಭಾವನೆಗಳು, ಮೌಲ್ಯಗಳು ಮತ್ತು ಅಪಾರ ನಂಬಿಕೆಗಳನ್ನು ವ್ಯಕ್ತಪಡಿಸುವ ಒಂದು ಸಂಕೇತಾತ್ಮಕ ಭಾಷೆ. ಉದಾಹರಣೆಗೆ, ಕೈಕುಲುಕುವುದು ಒಂದು ಸರಳ ಕ್ರಿಯೆಯಾಗಿದ್ದರೂ ಅದು ವಿಶ್ವಾಸ, ಸ್ವಾಗತ ಮತ್ತು ಶಾಂತಿಯನ್ನು ಸೂಚಿಸುತ್ತದೆ.
ಧಾರ್ಮಿಕ ವಿಧಿ-ವಿಧಾನಗಳು ವಿಶೇಷವಾಗಿ ಮನುಷ್ಯನ ಆತ್ಮೀಯ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಅವು ಮನುಜನ ಒಳಗಿನ ಭಕ್ತಿ, ಸದ್ಗುಣ ಮತ್ತು ನಂಬಿಕೆಯನ್ನು ಹೊರಗೆ ತೋರಿಸುತ್ತವೆ. ಕುರ್‌ಆನ್ ಕೂಡ ಧಾರ್ಮಿಕ ವಿಧಿಗಳ ಆತ್ಮೀಯ ಅರ್ಥವನ್ನು ಒತ್ತಿ ಹೇಳುತ್ತದೆ. ಉದಾಹರಣೆಗೆ, ಕುರ್ಬಾನಿಯಲ್ಲಿ ಅಲ್ಲಾಹನಿಗೆ ತಲುಪುವುದು ಪ್ರಾಣಿಯ ರಕ್ತ ಅಥವಾ ಮಾಂಸ ತಲುಪುವುದಿಲ್ಲ, ಬದಲಾಗಿ ನಮ್ಮ ತಕ್ವಾ ಅಥವಾ ಭಯ ಭಕ್ತಿಯಾಗಿದೆ (ಕುರ್‌ಆನ್ 22:37). ಆದ್ದರಿಂದ ಆರಾಧನೆಯ ಮೌಲ್ಯ ಮತ್ತು ಪ್ರತಿಫಲ ಅದರ ಉದ್ದೇಶ ಮತ್ತು ನಿಷ್ಠೆಯಲ್ಲಾಗಿತ್ತು.
ಇಸ್ಲಾಮಿನ ಇಬಾದತ್‌ಗಳು ಕೇವಲ ಸಾಧಾರಣ ಕ್ರಿಯೆಗಳು ಮಾತ್ರವಲ್ಲ. ಅವು ಅಲ್ಲಾಹನ ಮೇಲಿನ ಪ್ರೀತಿ, ವಿನಯ ಮತ್ತು ಶರಣಾಗತಿಯನ್ನು ವ್ಯಕ್ತಪಡಿಸುವ ನಿದರ್ಶನ. “ ತಝ್ಕಿಯತುನ್ನಫ್ಸ್” ಅಂದರೆ ಆತ್ಮಶುದ್ಧೀಕರಣ ಕಲ್ಪನೆಯು ಆರಾಧನೆಗಳ ಒಳಗಿನ ಆತ್ಮೀಯತೆಯ ಅರ್ಥವನ್ನು ನೀಡುತ್ತದೆ. “ಅಬ್ದ್” ಎಂಬ ಪದದ ಅರ್ಥ ದಾಸ ಅಥವಾ ಸೇವಕ. ಈ ಪದಗಳು ಆರಾಧನೆಯಲ್ಲಿರುವ ಸಾರ — ವಿನಯ, ವಿಧೇಯತೆ ಮತ್ತು ಅಲ್ಲಾಹನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.
ಹಜ್ಜಿನ ವಿಧಿ-ವಿಧಾನಗಳು ಪ್ರವಾದಿ ಇಬ್ರಾಹೀಂ (ಅ) ಮತ್ತು ಅವರ ಕುಟುಂಬದ ಜೀವನವನ್ನು ನೆನಪಿಸುತ್ತವೆ. ಇಬ್ರಾಹೀಂ (ಅ) ಅವರ ಏಕದೈವ ನಂಬಿಕೆ ಮತ್ತು ಅಲ್ಲಾಹನೊಂದಿಗಿನ ಅಚಂಚಲವಾದ ವಿಶ್ವಾಸ ಮತ್ತು ನಂಬಿಕೆಯೇ ಹಜ್ಜಿನ ಮೂಲ.
ಈ ವಿಧಿವಿಧಾನಗಳ ಮೂಲಕ ಜಗತ್ತಿನಾದ್ಯಂತ ಮುಸಲ್ಮಾನರು ಏಕನಾದ ಅಲ್ಲಾಹನ ಅತಿಥಿಗಳಾಗಿ, ಅಸಮಾನತೆ, ಭೇದಭಾವಗಳಿಲ್ಲದೆ, ಅಲ್ಲಾಹನ ಕರೆಗೆ "ಲೆಬ್ಬೈಕ್" ಎಂದು ಉತ್ತರಿಸುತ್ತಾ, ಪವಿತ್ರ ಹಜ್ಜಿನ ಕರ್ಮಗಳಲ್ಲಿ ಪಾಲ್ಗೊಳ್ಳುವುದು ಇಸ್ಲಾಂ ಲೋಕಕ್ಕೆ ಸಹೋದರತೆ ಮತ್ತು ಸಾಮರಸ್ಯದ ಸಂದೇಶ ಸಾರುತ್ತದೆ.
ಹಜ್ಜಿನ ಪ್ರತಿಯೊಂದು ವಿಧಿಗೂ ಒಂದು ಆಳವಾದ ಅರ್ಥವಿದೆ. ಕಅಬಾವನ್ನು ಸುತ್ತುವ ತವಾಫ್, ಅಲ್ಲಾಹನನ್ನು ಜೀವನದ ಕೇಂದ್ರವಾಗಿಡುವುದನ್ನು ಸೂಚಿಸುತ್ತದೆ. ಸಫಾ ಮತ್ತು ಮರ್ವಾ ನಡುವೆ ನಡೆಯುವ ಸಈ, ಹಾಜರಾ (ಅ) ತಮ್ಮ ಮಗ ಇಸ್ಮಾಯೀಲ್‌ಗಾಗಿ ನೀರನ್ನು ಹುಡುಕಿದ ಘಟನೆಯನ್ನು ನೆನಪಿಸುತ್ತದೆ. ಇದು ಭರವಸೆ, ವಿಶ್ವಾಸ ಮತ್ತು ಸಹನೆಯ ಪಾಠವನ್ನು ಕಲಿಸುತ್ತದೆ.
ಅರಫಾದಲ್ಲಿ ನಿಲ್ಲುವುದು ಕಿಯಾಮತ್ ದಿನವನ್ನು ಮತ್ತು ಅಲ್ಲಾಹನ ಮುಂದೆ ನಿಲ್ಲುವ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ಮುಜ್ದಲಿಫಾದಲ್ಲಿ ತಂಗುವುದು ಪರಲೋಕವನ್ನು ಸ್ಮರಿಸುತ್ತದೆ. ಕುರ್ಬಾನಿ, ಇಬ್ರಾಹೀಂ (ಅ) ಅವರ ಅಲ್ಲಾಹನ ಆದೇಶಕ್ಕೆ ವಿಧೇಯತೆಯನ್ನು ತೋರಿಸುತ್ತದೆ. ಜಮರಾತ್‌ಗೆ ಕಲ್ಲು ಎಸೆಯುವುದು ಶೈತಾನಿನ ಪ್ರೇರಣೆಗಳನ್ನು ತಿರಸ್ಕರಿಸುವ ಸಂಕೇತ.
ಹಜ್ಜಿನ ವಿಧಿ-ವಿಧಾನಗಳು ಕೇವಲ ದೈಹಿಕ ಕ್ರಿಯೆಗಳಲ್ಲ. ಅವು ಮನುಷ್ಯನ ಆತ್ಮೀಯ ಮತ್ತು ನೈತಿಕ ಜೀವನವನ್ನು ಬಲಪಡಿಸುತ್ತವೆ. ಅವು ಅಲ್ಲಾಹನೊಂದಿಗೆ ವಿಶ್ವಾಸಿಯ ಸಂಬಂಧವನ್ನು ಗಟ್ಟಿಗೊಳಿಸುತ್ತವೆ ಮತ್ತು ಜೀವನಕ್ಕೆ ಉನ್ನತ ಗುರಿಯನ್ನು ನೀಡುತ್ತವೆ.
ಹಜ್ ದೇಹ ಮತ್ತು ಆತ್ಮ ಎರಡರ ಪ್ರಯಾಣವಾಗಿದೆ. ಇದು ಮನುಷ್ಯನನ್ನು ಆತ್ಮೀಯವಾಗಿ ಬೆಳೆಯಲು ಸಹಾಯಮಾಡಿ, ಅಲ್ಲಾಹನಿಗೆ ಇನ್ನಷ್ಟು ಸಮೀಪವಾಗಿಸುತ್ತದೆ.
ಈ ವಿಧಿ-ವಿಧಾನಗಳ ಮೂಲಕ ವಿಶ್ವಾಸಿಗಳು ತಮ್ಮ ಆತ್ಮೀಯ ಸ್ಥಿತಿಯನ್ನು ಪರಿಶೀಲಿಸಿ, ಹೆಚ್ಚು ಭಕ್ತಿ ಮತ್ತು ಉತ್ತಮ ಗುಣಗಳನ್ನು ಹೊಂದಲು ಪ್ರಯತ್ನಿಸುತ್ತಾರೆ.