ಯಾದೇರಫ್ತಗಾನ್ – 1. ಶೇಖ್ ಅಹ್ಮದ್ ಖಟ್ಟು (ರ)

ಎ.ಪಿ. ಮುಸ್ತಫಾ ಹುದವಿ ಅರೂರ್

( ಕನ್ನಡಾನುವಾದ : ಹಿಬತುಲ್ಲಾ ಮಾಡನ್ನೂರು )

ಅಸಂಖ್ಯಾತ ಸೂಫಿ ಸಂತರ ಸಾನ್ನಿಧ್ಯದಿಂದ ಭಾರತದ ನೆಲ ಪವಿತ್ರವಾಗಿದೆ. ಅವರ ಸದಾಚಾರ ಮತ್ತು ಉದಾತ್ತ ನಡವಳಿಕೆಗಳನ್ನು ಕಂಡು ಅನೇಕರು ಇಸ್ಲಾಂ ಧರ್ಮದ ನೈಜ ಸ್ವರೂಪವನ್ನು ಅರಿತು ಅದನ್ನು ಸ್ವೀಕರಿಸಿದರು. ಮಾತುಗಳಿಗಿಂತ ತಮ್ಮ ಜೀವನದ ಮೂಲಕವೇ ಆದರ್ಶವನ್ನು ತೋರಿಸಿಕೊಡುವುದು ಅವರ ವೈಶಿಷ್ಟ್ಯವಾಗಿತ್ತು. ಭಾರತದ ವಿವಿಧ ರಾಜ್ಯಗಳಲ್ಲಿ ಇಸ್ಲಾಂ ಧರ್ಮದ ಪ್ರಸರಣದ ಇತಿಹಾಸವನ್ನು ಪರಿಶೀಲಿಸಿದರೆ, ಅದರಲ್ಲಿ ಇಂತಹ ಮಹಾತ್ಮರ ಮಹತ್ವದ ಪಾತ್ರವನ್ನು ಕಾಣಬಹುದು.

ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ, ಗುಜರಾತ್ ಸೂಫಿ ಸಂತರೊಂದಿಗೆ ಆಳವಾದ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಅಹ್ಮದಾಬಾದ್ ಮಾತ್ರವಲ್ಲದೆ, ಸೂರತ್, ಪಾಟಣ್ ಮತ್ತು ಪೋರ್‌ಬಂದರ್ ಸೇರಿದಂತೆ ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ಅನೇಕ ಸೂಫಿ ಸಂತರು, ವಿದ್ವಾಂಸರು ಮತ್ತು ಸಯ್ಯಿದ್‌ಗಳ ಮಖ್‌ಬರಗಳಿವೆ. ಖಾದಿರಿಯ್ಯಾ, ರಿಫಾಯಿಯ್ಯಾ, ನಖ್ಶಬಂದಿಯ್ಯಾ, ಚಿಶ್ತಿಯ್ಯಾ, ಸುಹ್ರವರ್ದಿಯ್ಯಾ, ಮಗ್ರಿಬಿಯ್ಯಾ ಮತ್ತು ಐದರೂಸಿಯ್ಯಾ ಮೊದಲಾದ ಸೂಫಿ ಪರಂಪರೆಗಳ ಮಶಾಯಿಖ್‌ಗಳು ಈ ಪ್ರದೇಶಗಳಲ್ಲಿ ಆಧ್ಯಾತ್ಮಿಕ ಬೆಳಕನ್ನು ಪಸರಿಸಿದರು. ಅಲ್ಲದೆ, ಅಪಾರ ಸಂಖ್ಯೆಯ ಶಿಷ್ಯರು ಮತ್ತು ಖಲೀಫರನ್ನು ರೂಪಿಸಿದರು. ಮಗ್ರಿಬಿಯ್ಯಾ ಪರಂಪರೆಗೆ ಸೇರಿದ ಮಹಾತ್ಮರಾದ ಶೇಖ್ ಅಹ್ಮದ್ ಖಟ್ಟು (ರ) ಅವರ ಪರಿಚಯವನ್ನು ಇಲ್ಲಿ ಮಾಡಿಕೊಳ್ಳೋಣ.

ಮಗ್ರಿಬಿಯ್ಯಾ ಸಿಲ್ಸಿಲಾ

ಪ್ರಾಚೀನ ಭೌಗೋಳಿಕ ಪರಿಕಲ್ಪನೆಯ ಪ್ರಕಾರ, ಟ್ರಿಪೋಲಿ, ಟುನೀಶಿಯಾ, ಸ್ಪೇನ್ ಮತ್ತು ಮೊರಾಕ್ಕೊ ಮೊದಲಾದ ಪ್ರದೇಶಗಳನ್ನು ‘ಮಗ್ರಿಬ್’ ಎಂದು ಕರೆಯಲಾಗುತ್ತಿತ್ತು. ಆ ಪ್ರದೇಶದಲ್ಲಿ ಬೆಳೆದು ಬಂದ ಸೂಫಿ ಪರಂಪರೆಯು ‘ಮಗ್ರಿಬಿಯ್ಯಾ ಸಿಲ್ಸಿಲಾ’ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಹಿಜರಿ ಆರನೇ ಶತಮಾನದಿಂದ ಹತ್ತನೇ ಶತಮಾನದವರೆಗೆ ಈ ಪರಂಪರೆಯು ಭಾರತದಲ್ಲಿ ವ್ಯಾಪಕವಾಗಿ ಅಸ್ತಿತ್ವದಲ್ಲಿತ್ತು. ಈ ಪರಂಪರೆಯ ಸಂತರು ಸಮುದ್ರಮಾರ್ಗದ ಮೂಲಕ ಭಾರತಕ್ಕೆ ಬಂದಿದ್ದರಿಂದ, ಅದು ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಹರಡಿತು. ಈ ಪರಂಪರೆಯ ಆಧ್ಯಾತ್ಮಿಕ ಮೂಲವು ಶೇಖ್ ಅಬೂ ಮದ್ಯನ್ ಅಲ್-ಮಗ್ರಿಬಿ (ರ) ರವರ ವರೆಗೆ ತಲುಪುತ್ತದೆ. ಈ ಪರಂಪರೆಗೆ ಸೇರಿದ ಬಾಬಾ ಇಸ್ಹಾಖ್ ಮಗ್ರಿಬಿ (ವಫಾತ್: ಹಿ. 781) ರವರ ಮುರೀದ್ (ಶಿಷ್ಯ) ಆಗಿದ್ದರು ನಮ್ಮ ಲೇಖನದ ಪ್ರಮುಖ ವ್ಯಕ್ತಿಯಾದ ಶೇಖ್ ಅಹ್ಮದ್ ಖಟ್ಟು (ರ). 

ಜನನ ಮತ್ತು ಬೆಳವಣಿಗೆ

ಹಿಜರಿ 738ರಲ್ಲಿ (ಕ್ರಿ.ಶ. 1337) ದೆಹಲಿಯಲ್ಲಿ ಜನಿಸಿದರು. ಆಗ ಸುಲ್ತಾನ್ ಮುಹಮ್ಮದ್ ಬಿನ್ ತುಘಲಕ್ ದೆಹಲಿಯ ಆಡಳಿತಗಾರನಾಗಿದ್ದನು. ಬಾಲ್ಯದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಪ್ರಚಂಡ ಬಿರುಗಾಳಿ ಬೀಸಿ, ಇವರು ತಮ್ಮ ಪೋಷಕರು ಮತ್ತು ಬಂಧುಗಳಿಂದ ಬೇರ್ಪಟ್ಟರು. ಸಹಾಯವಿಲ್ಲದೆ ಅಲೆಯುತ್ತಿದ್ದಾಗ ಬಾಬಾ ಇಸ್ಹಾಖ್ ಮಗ್ರಿಬಿ ಎಂಬ ಸೂಫಿ ಸಂತರನ್ನು ಭೇಟಿಯಾದರು. ಅವರು ಈ ಮಗುವನ್ನು ದತ್ತು ತೆಗೆದುಕೊಂಡು ತಮ್ಮ ಸ್ವದೇಶವಾದ ರಾಜಸ್ಥಾನದ ಖಟ್ಟು ಎಂಬ ಪ್ರದೇಶಕ್ಕೆ ಕರೆದೊಯ್ದರು. ಖಟ್ಟು ಎಂಬುದು ಅಜ್ಮೇರ್‌ನ ವಾಯುವ್ಯಕ್ಕೆ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ಸ್ಥಳವಾಗಿದೆ. ಅಲ್ಲಿ ಬೆಳೆದ ಕಾರಣದಿಂದ ಶೇಖ್ ಅಹ್ಮದ್ ಮಗ್ರಿಬಿ ಅವರು ಶೇಖ್ ಅಹ್ಮದ್ ಖಟ್ಟು ಎಂದು ಪ್ರಸಿದ್ಧರಾದರು.

ಬಾಬಾ ಇಸ್ಹಾಖ್ ಮಗ್ರಿಬಿ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಬೆಳೆದ ಇವರು ಇಜಾಝತ್ ಮತ್ತು ಖಿಲಾಫತ್‌ಗಳನ್ನು ಪಡೆದುಕೊಂಡರು. ಇವರ ಆಧ್ಯಾತ್ಮಿಕ ಬೆಳವಣಿಗೆಯ ಕುರಿತು ಶಾ ಅಬ್ದುಲ್ ಹಕ್ಕ್ ಮುಹದ್ದಿಸ್ ದಹ್ಲವಿ ಅವರು ತಮ್ಮ ‘ಅಖ್ಬಾರುಲ್ ಅಖ್ಯಾರ್’ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ.

ದೆಹಲಿಯಲ್ಲಿಯೇ ಇವರು ಪ್ರಾಥಮಿಕ ಶಿಕ್ಷಣವನ್ನು ಪಡೆದರು. ನಂತರ ಖಾನ್ ಜಹಾನ್ ಮಸೀದಿಯಲ್ಲಿ ಕಠಿಣ ಆಧ್ಯಾತ್ಮಿಕ ಸಾಧನೆಯಲ್ಲಿ (ರಿಯಾಳ) ತೊಡಗಿ ಉನ್ನತ ಆಧ್ಯಾತ್ಮಿಕ ಪದವಿಗಳನ್ನು ಗಳಿಸಿದರು. ಹಗಲಿನಲ್ಲಿ ಉಪವಾಸವಿದ್ದು, ಒಣ ಖರ್ಜೂರದ ಸಣ್ಣ ತುಂಡಿನಿಂದ ಉಪವಾಸವನ್ನು ಮುರಿಯುತ್ತಿದ್ದರು. ನಲವತ್ತು ದಿನಗಳ ಧ್ಯಾನದಲ್ಲಿದ್ದಾಗ ದಿನಕ್ಕೆ ಕೇವಲ ಒಂದು ಖರ್ಜೂರವನ್ನು ಮಾತ್ರ ಸೇವಿಸುತ್ತಿದ್ದರು.

ಮುಜಫ್ಫರ್ ಶಾ ಗುಜರಾತ್‌ನ ಆಡಳಿತವನ್ನು ವಹಿಸಿಕೊಂಡಾಗ, ದೆಹಲಿಯಲ್ಲಿದ್ದ ಶೇಖ್ ಅಹ್ಮದ್ ಖಟ್ಟುರವರನ್ನು ಗುಜರಾತ್‌ಗೆ ಆಹ್ವಾನಿಸಿದರು. ಆ ಆಹ್ವಾನದಂತೆ ಇವರು ಅಹ್ಮದಾಬಾದ್‌ನಿಂದ ಸುಮಾರು ಏಳು ಕಿಲೋಮೀಟರ್ ನೈಋತ್ಯದಲ್ಲಿರುವ ಸರ್ಖೇಜ್ ಎಂಬ ಪ್ರದೇಶಕ್ಕೆ ಬಂದು ನೆಲೆಸಿದರು. ಜೀವನದ ಕೊನೆಯವರೆಗೂ ಅಲ್ಲಿಯೇ ವಾಸವಾಗಿದ್ದರು. ಬಡವರಿಗೆ ಅನ್ನದಾನ ಮಾಡುವುದರಲ್ಲಿ ಅವರು ವಿಶೇಷ ಕಾಳಜಿ ವಹಿಸುತ್ತಿದ್ದರು. ಅವರ ಮರಣದ ನಂತರವೂ ಈ ಪದ್ಧತಿ ಮುಂದುವರಿಯಿತು.

ಆಧ್ಯಾತ್ಮಿಕ ಜ್ಞಾನದ ಜೊತೆಗೆ ಬಾಹ್ಯ ವಿದ್ಯೆಗಳಲ್ಲಿಯೂ ಅವರು ಪ್ರಾವೀಣ್ಯತೆಯನ್ನು ಹೊಂದಿದ್ದರು. ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಇವರು ಸಮರ್ಖಂದ್‌ನ ಮಸೀದಿಯೊಂದಕ್ಕೆ ತಲುಪಿದರು. ಅಲ್ಲಿ ಒಬ್ಬ ವಿದ್ವಾಂಸರು ಅನೇಕ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿದ್ದರು. ಶೇಖ್ ಅಹ್ಮದ್ ಖಟ್ಟು ಅವರು ಸಾಮಾನ್ಯ ಉಡುಪಿನಲ್ಲಿ ಮಸೀದಿಯ ಒಂದು ಮೂಲೆಯಲ್ಲಿ ಕುಳಿತು ಪಾಠವನ್ನು ಆಲಿಸುತ್ತಿದ್ದರು. ಆ ಸಂದರ್ಭದಲ್ಲಿ ಹನಫೀ ಮದ್ಹಬ್‌ನ ಪ್ರಮುಖ ಉಸೂಲ್ ಗ್ರಂಥವಾದ ‘ಅಲ್-ಹುಸಾಮಿ’ಯ ಪಾಠ ನಡೆಯುತ್ತಿತ್ತು. ಗ್ರಂಥವನ್ನು ಓದುತ್ತಿದ್ದ ವಿದ್ಯಾರ್ಥಿಯೊಬ್ಬನು ಪಠನದಲ್ಲಿ ತಪ್ಪೆಸಗಿದಾಗ, ಮೂಲೆಯಲ್ಲಿ ಕುಳಿತಿದ್ದ ಶೇಖ್ ಅಹ್ಮದ್ ಖಟ್ಟು ಅವರು ತಕ್ಷಣವೇ ಆ ತಪ್ಪನ್ನು ಸರಿಪಡಿಸಿದರು. ಅವರ ಪಾಂಡಿತ್ಯವನ್ನು ಮನಗಂಡ ಶಿಕ್ಷಕರು ಆಶ್ಚರ್ಯಚಕಿತರಾಗಿ ಅವರಿಗೆ ವಿಶೇಷ ಗೌರವವನ್ನು ನೀಡಿದರು. ಬಳಿಕ ಉಸೂಲುಲ್ ಫಿಖ್ಹ್‌ಗೆ ಸಂಬಂಧಿಸಿದ ಅನೇಕ ಗಹನ ಸಂಶಯಗಳನ್ನು ಅವರ ಮುಂದಿಟ್ಟರು. ಶೇಖ್ ಅಹ್ಮದ್ ಖಟ್ಟು ಅವರು ಪ್ರತಿಯೊಂದು ಪ್ರಶ್ನೆಗೂ ನಿಖರವಾದ ಉತ್ತರಗಳನ್ನು ನೀಡಿದರು.

ಆಧ್ಯಾತ್ಮಿಕವಾಗಿ ಅತ್ಯುನ್ನತ ಮಟ್ಟವನ್ನು ತಲುಪಿದ್ದರಿಂದ, ಅದನ್ನು ಸೂಚಿಸುವ ಅನೇಕ ಉಪಾಧಿಗಳು (ಬಿರುದುಗಳು) ಅವರಿಗೆ ಲಭಿಸಿದ್ದವು.

ಬದ್ರುಲ್ ಆರೀಫೀನ್, ಸಿರಾಜುಸ್ಸಿದ್ಧಿಖೀನ್, ಖುತ್ಬೆ ಆಲಮ್, ಗಂಜ್ ಗೀರ್ ಮತ್ತು ಗಂಜ್ ಬಖ್ಶ್ ಮುಂತಾದ ಹಲವು ಹೆಸರುಗಳಿಂದ ಇತಿಹಾಸಕಾರರು ಇವರನ್ನು ಪರಿಚಯಿಸುತ್ತಾರೆ. ಇವುಗಳಲ್ಲಿ ‘ಗಂಜ್ ಬಖ್ಶ್’ ಎಂಬ ಹೆಸರು ಅತ್ಯಂತ ಪ್ರಸಿದ್ಧವಾಗಿದೆ. ‘ಗಂಜ್’ ಎಂದರೆ ನಿಧಿ ಎಂದರ್ಥ. ‘ಗಂಜ್ ಗೀರ್’ ಎಂದರೆ ನಿಧಿಯನ್ನು ವಶಪಡಿಸಿಕೊಂಡವನು ಮತ್ತು ‘ಗಂಜ್ ಬಖ್ಶ್’ ಎಂದರೆ ನಿಧಿಯನ್ನು ದಾನ ಮಾಡಿದವನು ಎಂದರ್ಥ.

ಹಿಜರಿ 758ರಲ್ಲಿ ಪ್ರಸಿದ್ಧ ಸೂಫಿ ಸಂತ ಹಜರತ್ ಜಲಾಲುದ್ದೀನ್ ಬುಖಾರಿ ಅವರು ಶೇಖ್ ಅಹ್ಮದ್ ಖಟ್ಟು ಅವರಿಗೆ ಖಿರ್ಖಾ (ಸೂಫಿ ಪದವಿಯ ವಸ್ತ್ರ) ವನ್ನು ಉಡುಗೊರೆಯಾಗಿ ನೀಡಿದ್ದರು. ಮಖ್ದೂಮ್ ಜಹಾನಿಯಾನ್ ಜಹಾನ್ ಗಶ್ತ್ ಎಂದೇ ಪ್ರಸಿದ್ಧರಾಗಿದ್ದ ಜಲಾಲುದ್ದೀನ್ ಬುಖಾರಿಯವರ ಸಮಾಧಿಯು ಮುಲ್ತಾನ್‌ನ ಉಚ್ ಎಂಬ ಪ್ರದೇಶದಲ್ಲಿದೆ. ಶೇಖ್ ಅಹ್ಮದ್ ಖಟ್ಟು ಅವರು ಆ ಖಿರ್ಖಾವನ್ನು ಒಂದು ನಿಧಿಯಂತೆ ಸುಮಾರು 80 ವರ್ಷಗಳ ಕಾಲ ತಮ್ಮ ಬಳಿ ಇಟ್ಟುಕೊಂಡು ಸಂರಕ್ಷಿಸಿದ್ದರು. ಇದರಿಂದಾಗಿ ಅವರಿಗೆ ‘ಗಂಜ್ ಗೀರ್’ ಎಂಬ ಹೆಸರು ಬಂದಿತು. ನಂತರ ಹಿಜರಿ 834ರಲ್ಲಿ ಅದನ್ನು ಅಹ್ಮದಾಬಾದ್‌ನ ಮತ್ತೊಬ್ಬ ಸೂಫಿ ಸಂತ ಶಾಹೇ ಆಲಮ್ ಅವರಿಗೆ ದಾನ ಮಾಡಿದರು. ಇದರಿಂದಾಗಿ ಅವರಿಗೆ ‘ಗಂಜ್ ಬಖ್ಶ್’ ಎಂಬ ಹೆಸರು ಬಂದಿತು.

ತಮ್ಮ ಜೀವನದ ಹೆಚ್ಚಿನ ಭಾಗವನ್ನು ಇವರು ಪ್ರವಾಸಕ್ಕಾಗಿ ವಿನಿಯೋಗಿಸಿದರು. ಈ ಮೂಲಕ ಭಾರತದಲ್ಲಿಯೂ ಭಾರತದ ಹೊರಗಿನ ಪ್ರದೇಶಗಳಲ್ಲಿಯೂ ಅನೇಕ ಮಹಾತ್ಮರೊಂದಿಗೆ ಸಂಪರ್ಕ ಬೆಳೆಸಲು ಅವರಿಗೆ ಸಾಧ್ಯವಾಯಿತು. ತಮ್ಮ ಅನುಭವವನ್ನು ವಿವರಿಸುತ್ತಾ ಅವರು ತಮ್ಮ ‘ತುಹ್ಫತುಲ್ ಮಜಾಲಿಸ್’ ಗ್ರಂಥದಲ್ಲಿ ಹೀಗೆ ಹೇಳುತ್ತಾರೆ:

“ಈ ವಿನೀತನು ಸುಮಾರು ಹನ್ನೆರಡು ವರ್ಷಗಳ ಕಾಲ ಬರಿಗಾಲಿನಲ್ಲಿ ಸಂಚರಿಸಿದ್ದಾನೆ. ಯಾವುದಾದರೂ ನಗರಕ್ಕೆ ತಲುಪಿದರೆ ಅಲ್ಲಿನ ಮಸೀದಿಯಲ್ಲಿ ರಾತ್ರಿ ತಂಗುವುದು ನನ್ನ ವಾಡಿಕೆಯಾಗಿತ್ತು. ‘ನೀವು ಬರಿಗಾಲಿನಲ್ಲಿ ಸಂಚರಿಸಿ; ಆಗ ರಬ್ಬನನ್ನು (ಅಲ್ಲಾಹನನ್ನು) ನೇರವಾಗಿ ದರ್ಶಿಸಬಹುದು’ ಎಂಬ ಪ್ರವಾದಿವಚನದ ಆಶಯವನ್ನು ಸಾಕಾರಗೊಳಿಸುವ ಉದ್ದೇಶದಿಂದಲೇ ಈ ವಿನೀತನು ಇಷ್ಟು ಕಾಲ ಕಾಲ್ನಡಿಗೆಯಲ್ಲಿ ಸಂಚರಿಸಿದನು. ಪ್ರಯಾಣದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಿ ಬಂದರೂ, ಆಧ್ಯಾತ್ಮಿಕ ಅನುಭೂತಿಗಳು ಲಭಿಸುವುದರಿಂದ ಅಪಾರ ಸಂತೋಷವಾಗುತ್ತದೆ.”

ಗುರುಗಳಾದ ಬಾಬಾ ಇಸ್ಹಾಖ್ ಮಗ್ರಿಬಿ ಅವರಿಗೆ ಶೇಖ್ ಅಹ್ಮದ್ ಖಟ್ಟು ಅತ್ಯಂತ ಪ್ರೀತಿಯ ಮತ್ತು ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಒಮ್ಮೆ ಸಯ್ಯಿದ್ ಜಲಾಲುದ್ದೀನ್ ಬುಖಾರಿ ಅವರು ದೆಹಲಿಗೆ ಬಂದಾಗ, ಬಾಬಾ ಇಸ್ಹಾಖ್ ಮಗ್ರಿಬಿಯವರು ತಮ್ಮ ಶಿಷ್ಯರಾದ ಅಹ್ಮದ್ ಖಟ್ಟು ಅವರಿಗೆ, “ನೀನು ಬಯಸುವುದಾದರೆ, ನಿನ್ನನ್ನು ಸಯ್ಯಿದ್ ಜಲಾಲುದ್ದೀನ್ ಬುಖಾರಿಯವರ ಮುರೀದ್ (ಆಧ್ಯಾತ್ಮಿಕ ಶಿಷ್ಯ) ಆಗಲು ಅವಕಾಶ ಕಲ್ಪಿಸುತ್ತೇನೆ.” ಅದಕ್ಕೆ ಇವರು, “ಪ್ರಸ್ತುತ ನಾನು ನಿಮ್ಮ ಮುರೀದ್ ಆಗಿದ್ದೇನಲ್ಲವೇ? ಆದ್ದರಿಂದ ಇನ್ನೊಬ್ಬರ ಮುರೀದ್ ಆಗುವ ಅಗತ್ಯವಿಲ್ಲ” ಎಂದರು. ಇದನ್ನು ಕೇಳಿದ ಗುರುಗಳು ಪ್ರಾರ್ಥನಾಪೂರ್ವಕವಾಗಿ,“ಎಲ್ಲ ರಾಜರು ಮತ್ತು ಆಡಳಿತಗಾರರು ನಿನ್ನ ಸನ್ನಿಧಿಗೆ ಬಂದು ಗೌರವ ಸಲ್ಲಿಸುವ ದಿನ ದೂರವಿಲ್ಲ” ಎಂದು ನುಡಿದರು.

ಗುರುಗಳ ಸಂತೃಪ್ತಿ ಮತ್ತು ಪ್ರಾರ್ಥನೆಯ ಫಲವಾಗಿ ದೆಹಲಿ ಹಾಗೂ ಗುಜರಾತ್‌ನ ಆಡಳಿತಗಾರರು ಇವರಿಗೆ ಅಪಾರ ಗೌರವವನ್ನು ಸಲ್ಲಿಸುತ್ತಿದ್ದರು. ದೆಹಲಿಯ ಫಿರೋಜ್ ಶಾ ತುಘಲಕ್, ಗಿಯಾಸುದ್ದೀನ್ ತುಘಲಕ್, ಅಬೂಬಕರ್ ತುಘಲಕ್, ನಾಸಿರುದ್ದೀನ್ ತುಘಲಕ್ ಮತ್ತು ಮಹ್ಮೂದ್ ತುಘಲಕ್ ಸೇರಿದಂತೆ ಅನೇಕ ಆಡಳಿತಗಾರರು ಹಾಗೂ ಗುಜರಾತ್‌ನ ಮುಜಫ್ಫರ್ ಶಾ, ಅಹ್ಮದ್ ಶಾ ಮತ್ತು ಮಹ್ಮೂದ್ ಶಾ ಮೊದಲಾದ ರಾಜರು ಇವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಗುಜರಾತ್‌ನ ಸುಲ್ತಾನನಾದ ಅಹ್ಮದ್ ಶಾ ಪ್ರಥಮನು ಇವರಿಂದ ಬೈಅತ್ (ಆಧ್ಯಾತ್ಮಿಕ ದೀಕ್ಷೆ) ಸ್ವೀಕರಿಸಿದ್ದನು. ಇವರ ನಿರ್ದೇಶನದಂತೆಯೇ ಅಹ್ಮದ್ ಶಾ ಪ್ರಥಮನು ‘ಅಹ್ಮದಾಬಾದ್’ ನಗರವನ್ನು ನಿರ್ಮಿಸಿದನು.ರಾಜರು ಮತ್ತು ವಿದ್ವಾಂಸರೆಲ್ಲರೂ ಇವರಿಗೆ ಅಪಾರ ಗೌರವವನ್ನು ಸಲ್ಲಿಸುತ್ತಿದ್ದರೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ರಚನೆಗಳು ಮತ್ತು ಬೋಧನೆಗಳು

ಪರ್ಷಿಯನ್ ಭಾಷೆಯಲ್ಲಿ ರಚಿಸಲಾದ ಇವರ ಅನೇಕ ಕವನಗಳನ್ನು ಉಲ್ಲೇಖಿಸಲಾಗುತ್ತದೆ. ಹಲವು ಕವನಗಳು ಇವರ ‘ಮಲ್ಫೂಝಾತ್’ (ಬೋಧನೆಗಳ ಸಂಗ್ರಹ) ಗಳಲ್ಲಿಯೂ ಸ್ಥಾನ ಪಡೆದಿವೆ. ಗುಜರಾತ್‌ನ ಆಡಳಿತಗಾರ ಅಹ್ಮದ್ ಶಾ ಪ್ರಥಮನಿಗಾಗಿ ಬರೆದ ‘ರಿಸಾಲಾ’ ಇವರ ಮತ್ತೊಂದು ರಚನೆಯಾಗಿದೆ.

ಇವರ ಅನೇಕ ಶಿಷ್ಯರು ಇವರ ಮಾತುಗಳನ್ನು (ಮಲ್ಫೂಝಾತ್) ಕ್ರೋಡೀಕರಿಸಿದ್ದಾರೆ. ಶಿಷ್ಯರಾದ ಮಹ್ಮೂದ್ ಎರ್ಜಿ ಕ್ರೋಡೀಕರಿಸಿದ ‘ತುಹ್ಫತುಲ್ ಮಜಾಲಿಸ್’ ಅವುಗಳಲ್ಲಿ ಪ್ರಮುಖವಾದದ್ದು. ಶೇಖ್ ಮುಹಮ್ಮದ್ ಬಿನ್ ಅಬಿಲ್ ಖಾಸಿಮ್ ಕ್ರೋಡೀಕರಿಸಿದ ‘ಮಿರ್ಕಾತುಲ್ ವುಸೂಲ್ ಇಲಲ್ಲಾಹಿ ವರಸೂಲ್’ ಎಂಬುದು ಮತ್ತೊಂದು ಬೋಧನಾ ಸಂಗ್ರಹವಾಗಿದೆ.

‘ತುಹ್ಫತುಲ್ ಮಜಾಲಿಸ್’ ಗ್ರಂಥವನ್ನು ಕ್ರೋಡೀಕರಿಸಿದ ಶೇಖ್ ಮಹ್ಮೂದ್ ಎರ್ಜಿ ಇರಾನ್ ಮೂಲದವರಾಗಿದ್ದರು. ಅವರು ಗುರುಗಳಾದ ಶೇಖ್ ಅಹ್ಮದ್ ಖಟ್ಟು (ರ) ಅವರ ಆಪ್ತ ಹಾಗೂ ಪ್ರೀತಿಯ ಶಿಷ್ಯರಾಗಿದ್ದರು.ಒಮ್ಮೆ ಗುರುಗಳು ಅವರನ್ನು ಕರೆದು,“ಮಹ್ಮೂದ್, ನಿನಗೆ ನಿನ್ನ ಮನದಾಸೆಗಳನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ಸಂದರ್ಭ. ನಿನ್ನ ಮನದಲ್ಲಿರುವ ಎಲ್ಲ ಬಯಕೆಗಳನ್ನು ಮುಕ್ತವಾಗಿ ಹೇಳು” ಎಂದು ನುಡಿದರು.

ಲೌಕಿಕ ಬಯಕೆಗಳನ್ನು ಗುರುಗಳ ಮುಂದೆ ವ್ಯಕ್ತಪಡಿಸುವ ಬದಲು, ಶಿಷ್ಯನು ವಿನಯದಿಂದ ಹೀಗೆ ಹೇಳಿದರು: “ತಮ್ಮೊಂದಿಗಿನ ಸಹವಾಸದಿಂದಲೇ ನನಗೆ ಇಹಲೋಕ ಮತ್ತು ಪರಲೋಕಗಳ ವಿಜಯ ಹಾಗೂ ಸೌಭಾಗ್ಯಗಳು ಪ್ರಾಪ್ತವಾಗಿವೆ. ಇನ್ನು ಮುಂದೆ ತಮ್ಮ ಅಮೂಲ್ಯವಾದ ಮಾತುಗಳನ್ನು ದಾಖಲಿಸಿಡುವುದೇ ನನ್ನ ಏಕೈಕ ಬಯಕೆಯಾಗಿದೆ. ತಮ್ಮ ಸಮ್ಮತಿ ದೊರೆತರೆ ಮಾತ್ರ ಈ ಕಾರ್ಯಕ್ಕೆ ಮುಂದಾಗುತ್ತೇನೆ.”ಎಂದರು.

ಶೇಖ್ ಅಹ್ಮದ್ ಖಟ್ಟು (ರ) ಅವರು ಶಿಷ್ಯನ ಮನವಿಗೆ ಸಮ್ಮತಿ ಸೂಚಿಸಿದರು. ಅದರಂತೆ, ಶೇಖ್ ಅವರು ಪ್ರತಿದಿನ ನೀಡುತ್ತಿದ್ದ ಉಪದೇಶಗಳು ಮತ್ತು ಅಮೂಲ್ಯವಾದ ಮಾತುಗಳನ್ನು ಶಿಷ್ಯನು ಕ್ರಮಬದ್ಧವಾಗಿ ದಾಖಲಿಸುತ್ತಾ ಬಂದನು. ಈ ಸಂಗ್ರಹವೇ ಮುಂದೆ ‘ತುಹ್ಫತುಲ್ ಮಜಾಲಿಸ್’ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು. ಈ ಗ್ರಂಥದ ಪ್ರತಿಯೊಂದು ಅಧ್ಯಾಯಕ್ಕೂ ‘ಮಜ್ಲಿಸ್’ ಎಂಬ ಹೆಸರನ್ನು ಬಳಸಲಾಗಿದೆ. ಒಂದು ಸಭೆಯಲ್ಲಿ ಶೇಖ್ ಅವರು ನೀಡಿದ ಉಪದೇಶಗಳು ಮತ್ತು ಪ್ರವಚನಗಳ ಸಂಗ್ರಹವನ್ನು ‘ಮಜ್ಲಿಸ್’ ಎಂದು ಕರೆಯಲಾಗುತ್ತದೆ.ಇಂತಹ 75 ಮಜಾಲಿಸ್‌ಗಳು ಈ ಮಲ್ಫೂಝಾತ್‌ನಲ್ಲಿ ಅಡಕವಾಗಿವೆ.

ತಮ್ಮ ಆಧ್ಯಾತ್ಮಿಕ ಜೀವನದಲ್ಲಿ ನಡೆದ ಅನೇಕ ಅನುಭವಗಳನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ. ಸೂಫಿಗಳು ಮತ್ತು ದರ್ವೇಶ್‌ಗಳ ಮಹತ್ವವನ್ನೂ ಹಲವು ಕಡೆಗಳಲ್ಲಿ ವಿವರಿಸಲಾಗಿದೆ.

ಮಜ್ಲಿಸ್ 19ರಲ್ಲಿ ಹೀಗೆ ಹೇಳಲಾಗಿದೆ: “ದರ್ವೇಶ್‌ಗಳ ಸಭೆಗೆ ಪ್ರವೇಶಿಸುವುದು ಸುಲಭದ ವಿಷಯ; ಆದರೆ ಅಲ್ಲಿಂದ ಯಶಸ್ವಿಯಾಗಿ ಹಿಂತಿರುಗುವುದು ಕಷ್ಟದ ಕೆಲಸ.” ಅಲ್ಲಾಹನ ಪ್ರಿಯ ದಾಸರ ಮಹತ್ವ ಮತ್ತು ಅವರ ಸಭೆಯಲ್ಲಿ ಪಾಲಿಸಬೇಕಾದ ಮರ್ಯಾದೆಗಳು ಈ ಮಾತುಗಳಲ್ಲಿ ಅಡಕವಾಗಿವೆ. ಸಾಮಾನ್ಯ ಜನರನ್ನು ಸಮೀಪಿಸುವ ರೀತಿಯಲ್ಲಿ ಇಂತಹ ಮಹಾತ್ಮರನ್ನು ಸಮೀಪಿಸಿದರೆ, ಅದು ಇಹಲೋಕದಲ್ಲಿಯೂ ಪರಲೋಕದಲ್ಲಿಯೂ ನಷ್ಟಕ್ಕೆ ಕಾರಣವಾಗಬಹುದು. ಅವರ ಸಭೆಯನ್ನು ಪ್ರವೇಶಿಸಿದಾಗ ಅವರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಲು ಸಾಧ್ಯವಾಗಬೇಕು. ಗ್ರಂಥವನ್ನು ಕ್ರೋಡೀಕರಿಸಿದ ಮಹ್ಮೂದ್ ಎರ್ಜಿ ಈ ಮಾತಿನ ವಿವರಣೆಯಲ್ಲಿ ಹೀಗೆ ಹೇಳುತ್ತಾರೆ:

ಸಯ್ಯಿದ್ ಬಹಾಉದ್ದೀನ್ ಝಕರಿಯ್ಯಾ ಮುಲ್ತಾನಿ (ರ) ಹೇಳುತ್ತಿದ್ದರು: “ಸಾಧ್ಯವಾದಷ್ಟು ಸೂಫಿಗಳ ಹತ್ತಿರ ಹೋಗಬೇಡಿ. ಹೋಗುವುದಾದರೆ ಅಂಧರಂತೆ, ಕಿವುಡರಂತೆ ಮತ್ತು ಮೂಕರಂತೆ ಅವರ ಸಭೆಯಲ್ಲಿ ಕುಳಿತುಕೊಳ್ಳಿ. ಅಂದರೆ ಕಣ್ಣು, ಕಿವಿ ಮತ್ತು ಬಾಯಿಯನ್ನು ಮುಚ್ಚಿ ಹೃದಯವನ್ನು ತೆರೆದಿಡಿ. ಏಕೆಂದರೆ ಅವರು ಹೃದಯದ ವ್ಯಕ್ತಿಗಳು; ಅವರು ಹೃದಯವನ್ನೇ ನೋಡುತ್ತಾರೆ.”

ಮಜ್ಲಿಸ್ 21ರಲ್ಲಿ ತಮ್ಮ ಉದಾರತೆಗೆ ಸಂಬಂಧಿಸಿದ ಅನುಭವವನ್ನು ವಿವರಿಸುತ್ತಾರೆ:

ತಮ್ಮ ಗುರುಗಳಾದ ಬಾಬಾ ಇಸ್ಹಾಖ್ ಮಗ್ರಿಬಿ ಹೇಳುತ್ತಿದ್ದ ಮಾತುಗಳನ್ನು ಶೇಖ್ ಅಹ್ಮದ್ ಖಟ್ಟು ಹೀಗೆ ನೆನಪಿಸಿಕೊಳ್ಳುತ್ತಾರೆ: “ಅಹ್ಮದ್, ನೀನು ಅತ್ಯಂತ ಉದಾರಿಯಾಗಿದ್ದೀಯ. ಆದರೆ, ಒಂದು ದಿನ ದಾನಧರ್ಮ ಮಾಡಲು ಸಾಧ್ಯವಾಗದಂತೆ ನಿನ್ನ ಕೈಗಳು ಕೆಳಗಿಳಿಯುವ ಸ್ಥಿತಿಯ ಬಗ್ಗೆ ನೀನು ಎಂದಾದರೂ ಯೋಚಿಸಿದ್ದೀಯಾ?”

ಇದಕ್ಕೆ ಶೇಖ್ ಅಹ್ಮದ್ ಖಟ್ಟು (ರ) ಅವರು, “ಮಹಾತ್ಮರ ಆಧ್ಯಾತ್ಮಿಕ ಆಶೀರ್ವಾದದಿಂದ ನನ್ನ ಕೈ ಸದಾ ಮೇಲ್ಮುಖವಾಗಿಯೇ ಇರುತ್ತದೆ ಎಂಬ ದೃಢವಿಶ್ವಾಸ ನನಗಿದೆ” ಎಂದು ಉತ್ತರಿಸಿದರು. ಧರ್ಮದಾನ ಮಾಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎಂಬುದೇ ಈ ಮಾತಿನ ಆಶಯವಾಗಿತ್ತು. ಆಗ ಗುರುಗಳು, “ಅಹ್ಮದ್, ನಿನ್ನ ಮನೋಭಾವವನ್ನು ಪರೀಕ್ಷಿಸುವ ಉದ್ದೇಶದಿಂದಲೇ ನಾನು ಈ ಪ್ರಶ್ನೆಯನ್ನು ಕೇಳಿದೆ. ನಿನ್ನ ಕೈ ಸದಾ ಮೇಲೆಯೇ ಇರುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.

‘ಮಜ್ಲಿಸ್ 29’ರಲ್ಲಿ ಅವರ ವಿನಯಭಾವ ಹಾಗೂ ಅಲ್ಲಾಹನ ಸನ್ನಿಧಿಯಲ್ಲಿ ತಮ್ಮ ಸ್ಥಾನಮಾನದ ಕುರಿತು ವ್ಯಕ್ತಪಡಿಸಿದ ವಿಲಾಪವು ಮನಮುಟ್ಟುವಂತೆ ಮೂಡಿಬಂದಿದೆ. ಈ ಸಂದರ್ಭದಲ್ಲಿ ಅವರು ಪರ್ಷಿಯನ್ ಕವನವೊಂದರ ಮೂಲಕ ತಮ್ಮ ಅಂತರಂಗದ ಭಾವನೆಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ:

ನ ದರ್ ಶುಮಾರೇ ಮರ್ದ್ ನ ಅಂದರ್ ಶುಮಾರೇ ಸನ್

ಮಅಲೂಮ್ ನೀಸ್ತ್ ದರ್ ಚೆ ಶುಮಾರೀಮ್ ಆಹ್ ಆಹ್

ಖಾನ್ದ್ ಅಗರ್ ಬ ಲುತ್ತಫ್ ಬಯಾಯೀಮ್ ಶಾದ್ ಶಾದ್

ರಾನದ್ ಅಗರ್ ಬ ಖಹರ್ ಬರ್ ಆರೀಮ್ ಆಹ್ ಆಹ್

ಅರ್ಥ:

“ಅಲ್ಲಾಹನ ಸನ್ನಿಧಿಯಲ್ಲಿ ನನಗಿರುವ ಸ್ಥಾನವೇನೆಂಬುದು ನನಗೇ ತಿಳಿದಿಲ್ಲ. ಪುರುಷರ ಗುಂಪಿನಲ್ಲೋ ಅಥವಾ ಸ್ತ್ರೀಯರ ಗುಂಪಿನಲ್ಲೋ ನಾನು ಸೇರುತ್ತೇನೆ ಎಂಬುದೂ ತಿಳಿಯದು. ಅವನು ಪ್ರೀತಿಯಿಂದ ನನ್ನನ್ನು ಆಹ್ವಾನಿಸಿದರೆ, ಆನಂದದಿಂದ ಅವನೆಡೆಗೆ ಧಾವಿಸುತ್ತೇನೆ. ಆದರೆ, ಅವನು ಕೋಪದಿಂದ ನನ್ನನ್ನು ದೂರ ಸರಿಸಿದರೆ, ಹೃದಯದಲ್ಲಿ ವೇದನೆಯನ್ನು ಹೊತ್ತು ಅಲ್ಲಿಂದ ಹಿಂದಿರುಗುತ್ತೇನೆ.”

ಮಜ್ಲಿಸ್ 47ರಲ್ಲಿ ಗೌಸುಲ್ ಅಅ್‌ಝಮ್ ಶೇಖ್ ಅಬ್ದುಲ್ ಖಾದಿರ್ ಜೀಲಾನಿ (ಖು.ಸಿ.) ಅವರ ಮಹತ್ವವನ್ನು ವಿವರಿಸುತ್ತಾ ಹೀಗೆ ಹೇಳುತ್ತಾರೆ:

“ನಾನು ಒಮ್ಮೆ ಬಾಬಾ ಇಸ್ಹಾಖ್ ಮಗ್ರಿಬಿಯವರಲ್ಲಿ, ‘ಸಯ್ಯಿದ್ ಅಬ್ದುಲ್ ಖಾದಿರ್ ಜೀಲಾನಿಯವರ ಪದವಿ ಏನು?’ ಎಂದು ಕೇಳಿದೆ. ಅದಕ್ಕೆ ಅವರು, ‘ಶೇಖ್ ಜೀಲಾನಿ (ರ) ಅವರ ಮಹತ್ವವನ್ನು ಹನ್ನೆರಡು ಭಾಗಗಳಾಗಿ ವಿಂಗಡಿಸಿದರೆ, ಅವುಗಳಲ್ಲಿ ಕೇವಲ ಒಂದು ಭಾಗದ ಮಹಿಮೆಯನ್ನು ವಿವರಿಸಲು ಸಮುದ್ರಗಳೆಲ್ಲವೂ ಮಸಿಯಾದರೂ, ಮರಗಳೆಲ್ಲವೂ ಲೇಖನಿಗಳಾದರೂ ಮತ್ತು ಭೂಮಿಯೆಲ್ಲವೂ ಕಾಗದವಾದರೂ ಸಾಕಾಗುವುದಿಲ್ಲ’ ಎಂದು ಉತ್ತರಿಸಿದರು.”

ವಫಾತ್ (ಮರಣ)

ಹಿಜರಿ 849ರ ಶವ್ವಾಲ್ ತಿಂಗಳ 14ರಂದು, ಗುರುವಾರ, ಇವರು ಇಹಲೋಕ ತ್ಯಜಿಸಿದರು. ಇವರ ಅಂತ್ಯಕ್ರಿಯೆಯಲ್ಲಿ ಅಂದಿನ ಆಡಳಿತಗಾರರಾದ ಸುಲ್ತಾನ್ ಮುಹಮ್ಮದ್ ಬಿನ್ ಅಹ್ಮದ್ ಬಾದ್‌ಶಾ ಕೂಡ ಪಾಲ್ಗೊಂಡಿದ್ದರು. ಅಹ್ಮದಾಬಾದ್‌ನಿಂದ ನೈಋತ್ಯ ದಿಕ್ಕಿನಲ್ಲಿ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಸರ್ಖೇಜ್ ಎಂಬ ಪ್ರದೇಶದಲ್ಲಿ ಇವರ ಪವಿತ್ರ ಮಖ್ಬರಾ ನೆಲೆಗೊಂಡಿದೆ.

ಅಡಿಟಿಪ್ಪಣಿಗಳು

ನೂರುಝಮಾನ್ ಮಿಸ್ಬಾಹಿ, ತದ್ಕಿರಯೆ ಔಲಿಯಾಯೆ ಅಹ್ಮದಾಬಾದ್ (ಅಹ್ಮದಾಬಾದ್: ಕಲೀಮ್ ಬುಕ್ ಡಿಪೋ, 1998).

ಶೇಖ್ ಅಬ್ದುಲ್ ಹಕ್ ದಹ್ಲವಿ, ಅಖ್ಬಾರುಲ್ ಅಖ್ಯಾರ್, ಉರ್ದು ಅನುವಾದ (ಲಾಹೋರ್: ಅಕ್ಬರ್ ಬುಕ್ ಸೆಲ್ಲರ್ಸ್ 2004).

ಅಬ್ದುಲ್ ಹಯ್ಯ್ ಲಕ್ನವಿ, ನುಝ್ಹತುಲ್ ಖವಾತಿರ್ (ಬೈರೂತ್: ದಾರು ಇಬ್ನಿ ಹಝ್ಮ್, 1999).

ಸಯ್ಯಿದ್ ಅಬು ಸಫರ್ ನದ್ವಿ, ತುಹ್ಫತುಲ್ ಮಜಾಲಿಸ್, ಉರ್ದು ಅನುವಾದ (ಅಹ್ಮದಾಬಾದ್: ಹಜರತ್ ಪೀರ್ ಮುಹಮ್ಮದ್ ಶಾ ಲೈಬ್ರರಿ, 1939),

ಗುಲಾಮ್ ಅಲಿ ಶೇರ್ ಖಾನಿ, ತುಹ್ಫತುಲ್ ಕಿರಾಮ್.

ಡಾ. ಝುಹೂರುಲ್ ಹಸನ್ ಶಾರಿಬ್, ತದ್ಕಿರಯೆ ಔಲಿಯಾಯೆ ಹಿಂದ್ ಒ ಪಾಕ್ (ಲಾಹೋರ್: ಇಸ್ಲಾಂ ಬುಕ್ ಡಿಪೋ, 1999).                                                         

Related Posts

Leave A Comment

Voting Poll

Get Newsletter