ಪಾಂಡಿತ್ಯ ಲೋಕದ ವಿಸ್ಮಯ ಬಹ್ರುಲ್ ಉಲೂಂ ಶೈಖುನಾ ಉಸ್ತಾದ್ ಓ.ಕೆ ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ ( ನ.ಮ)
Basith Ajjavara

ಪಾಂಡಿತ್ಯ ಲೋಕದ ವಿಸ್ಮಯ ಬಹ್ರುಲ್ ಉಲೂಂ ಶೈಖುನಾ ಉಸ್ತಾದ್ ಓ.ಕೆ ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ ( ನ.ಮ)

 

ಈ ಲೋಕದಲ್ಲಿ ಕೆಲವು ಮಹಾನ್ ವ್ಯಕ್ತಿಗಳು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸಾಧನೆಗಳ ಮೂಲಕ ಮಾತ್ರವಲ್ಲ, ತಮ್ಮಿಂದ ಜ್ಞಾನ ಪಡೆದ ಶಿಷ್ಯರ ಮೂಲಕವೂ ಶಾಶ್ವತವಾಗಿ ಸ್ಮರಣೀಯರಾಗುತ್ತಾರೆ. ಅವರು ಕಲಿಸಿದ ಪಾಠಗಳು ಪುಸ್ತಕಗಳ ಪುಟಗಳಲ್ಲಿ ಮಾತ್ರ ಉಳಿಯುವುದಿಲ್ಲ; ಬದಲಾಗಿ ಶಿಷ್ಯರ ಬದುಕಿನಲ್ಲಿ, ಅವರ ಬೋಧನೆಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ತಲುಪುವ ಜ್ಞಾನಪರಂಪರೆಯಲ್ಲಿ ಜೀವಂತವಾಗಿರುತ್ತವೆ. ಅಂತಹ ವಿದ್ವಾಂಸರನ್ನು ನೆನಪಿಸಿಕೊಳ್ಳುವುದು ಎಂದರೆ ಕೇವಲ ಒಬ್ಬ ವ್ಯಕ್ತಿಯ ಜೀವನವನ್ನು ಸ್ಮರಿಸುವುದಲ್ಲ, ಅವರು ಪ್ರತಿನಿಧಿಸಿದ ಜ್ಞಾನಸಂಸ್ಕೃತಿ, ಗುರು-ಶಿಷ್ಯ ಸಂಬಂಧ ಮತ್ತು ಸಮಾಜದ ಶೈಕ್ಷಣಿಕ ಪರಂಪರೆಯನ್ನು ಗೌರವಿಸುವುದಾಗಿದೆ.

ಕೇರಳದ ಮುಸ್ಲಿಂ ವಿದ್ವತ್ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದ *"ಬಹ್ರುಲ್ ಉಲೂಂ ಶೈಖುನಾ ಓ.ಕೆ. ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್"* ಅವರು ಇಂತಹ ಮಹಾನ್ ಗುರುಗಳಲ್ಲಿ ಒಬ್ಬರು.  

ಓ.ಕೆ. ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ ಅವರಿಗೆ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಏ.ಪಿ ಅಬೂಬಕರ್ ಮುಸ್ಲಿಯಾರ್ ರವರು ಗೌರವ ಪೂರ್ವಕವಾಗಿ ನೀಡಿದ ನಾಮವಾಗಿದೆ.'ಬಹ್ರುಲ್ ಉಲೂಂ' ಎಂಬ ನಾಮ.

 *1916* ರಲ್ಲಿ ಮಹಾನರಾದ ಓ.ಕೆ ಉಸ್ತಾದರು 

ಮಲಪ್ಪುರಂ ಜಿಲ್ಲೆಯ ಕೋಟಕ್ಕಲ್ ಸಮೀಪ ಕುಝಿಪ್ಪುರಂನ ಮುಸ್ಲಿಯಾರಕತ್ ಓಡಕ್ಕಲ್ ಕುಟುಂಬದಲ್ಲಿ ಮಖ್ದೂಮ್ ಪರಂಪರೆಯ ಅಂಗವಾಗಿ ಜನಿಸಿದರು.

ಝೈನುದ್ದೀನ್ ಮಖ್ದೂಮ್ ಅವರಿಂದ ಜ್ಞಾನವನ್ನು ಪಡೆಯಲು ಯೆಮನ್‌ನಿಂದ ಪೊನ್ನಾನಿಗೆ ಆಗಮಿಸಿದ್ದ ಅಬ್ದುರ್ರಹ್ಮಾನುಲ್ ಯಮನಿಯ ಸಂತತಿ ಪರಂಪರೆಯವರಾಗಿದ್ದರು ಉಸ್ತಾದರು.

ಝೈನುದ್ದೀನ್ ಮಖ್ದೂಮ್ ಅವರ ಪುತ್ರಿ ಫಾತಿಮಾ ಬೀಬಿಯವರನ್ನು ಅಬ್ದುರ್ರಹ್ಮಾನುಲ್ ಯಮನಿ ವಿವಾಹವಾಗಿದ್ದರು. ಪತ್ನಿ ಗರ್ಭಿಣಿಯಾಗಿದ್ದಾಗಲೇ ಆ ಮಹಾಪಂಡಿತರು ತಮ್ಮ ಸ್ವದೇಶಕ್ಕೆ ಪ್ರಯಾಣ ಬೆಳೆಸಿದರು. ಜನಿಸಲಿರುವ ಮಗುವಿಗೆ ಅಲಿ ಹಸನ್ ಎಂದು ಹೆಸರಿಡಬೇಕೆಂದು ಅವರು ಸೂಚನೆ ನೀಡಿದರು.

ಇಲ್ಮ್ ಮತ್ತು ತಖ್ವಾದೊಂದಿಗೆ ಬೆಳೆದು ಬಂದ ಅಲಿಹಸನ್ ಮುಸ್ಲಿಯಾರ್ ಅವರು ತಿರೂರಂಗಾಡಿಯಲ್ಲಿ ಖಾಝಿಯಾಗಿ ನೇಮಕಗೊಂಡರು. ತಿರೂರಂಗಾಡಿಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿಯೇ ಆ ಕುಟುಂಬಕ್ಕೆ ‘ಓಡಕ್ಕಲ್’ ಎಂಬ ಹೆಸರು ಬಂದಿತು. ನಂತರ ಈ ಕುಟುಂಬವು ಹಲವು ಪ್ರದೇಶಗಳಿಗೆ ಹರಡಿಕೊಂಡಿತು. ಈ ವಂಶಪರಂಪರೆಯಲ್ಲಿಯೇ ಕುಝಿಪ್ಪುರಂನ ಅಲಿಹಸನ್ ಮುಸ್ಲಿಯಾರ್ ಅವರ ಪುತ್ರನಾಗಿ ಶೈಖುನಾ ಒ.ಕೆ. ಉಸ್ತಾದರು ಜನಿಸಿದರು.

ಸುಮಾರು 25 ವರ್ಷಗಳ ಕಾಲ ಅವರ ಔಪಚಾರಿಕ ಜ್ಞಾನಾರ್ಜನೆಯ ಅವಧಿ ಮುಂದುವರಿಯಿತು. ಅವರ ತಂದೆಯಾದ ಅಲಿಹಸನ್ ಮುಸ್ಲಿಯಾರ್ ಅವರೇ ಮೊದಲ ಗುರುನಾಥರಾಗಿದ್ದರು.

ಆ ಕಾಲದಲ್ಲಿ ಮಲಬಾರ್ ಪ್ರದೇಶದ ವಿದ್ವಾಂಸರ ಕುಟುಂಬಗಳಲ್ಲಿ ತಮ್ಮ ಮಕ್ಕಳನ್ನು ಸ್ವತಃ ತಮ್ಮ ಮಾರ್ಗದರ್ಶನದಲ್ಲಿಯೇ ಬೆಳೆಸುವುದು ಸಾಮಾನ್ಯ ಪದ್ಧತಿಯಾಗಿತ್ತು. ಅದರಂತೆ ಒ.ಕೆ. ಉಸ್ತಾದರೂ ತಮ್ಮ ತಂದೆಯವರಿಂದಲೇ ಪ್ರಾಥಮಿಕ ಶಿಕ್ಷಣವನ್ನು ಪಡೆದರು. 

ನಂತರ ಅಂಬಲವನ್ ಕುಂಞಿಮೊಯ್ತೀನ್ ಮುಸ್ಲಿಯಾರ್, ಕೈಪ್ಪಟ್ಟ ಕರಿಂಬನಕ್ಕಲ್ ಮಮ್ಮುಟ್ಟಿ ಮುಸ್ಲಿಯಾರ್ ಮುಂತಾದ ಶ್ರೇಷ್ಠ ವಿದ್ವಾಂಸರಿಂದ ತಮ್ಮ ಅಧ್ಯಯನವನ್ನು ಮುಂದುವರಿಸಿದರು. ಬಳಿಕ ಸ್ವದಖತ್ತುಲ್ಲಾ ಮುಸ್ಲಿಯಾರ್ ಅವರ ಮಾರ್ಗದರ್ಶನದಲ್ಲಿ ಬೆಳೆದರು. ಸ್ವದಖತ್ತುಲ್ಲಾ ಮುಸ್ಲಿಯಾರ್ ಅವರ ವಿಶಿಷ್ಟ ಬೋಧನಾ ಶೈಲಿ ಮತ್ತು ವಿಷಯಗಳನ್ನು ಆಳವಾಗಿ ವಿಶ್ಲೇಷಿಸುವ ಸಾಮರ್ಥ್ಯವು ಒ.ಕೆ. ಉಸ್ತಾದರ ಮೇಲೆ ಬಹಳ ಪ್ರಭಾವ ಬೀರಿತ್ತು.

ನಂತರ ಶೈಖ್ ಹಸನ್ ಹಸ್ರತ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಕಾಪ್ಪಾಡ್ ಕುಂಞಿಮುಹಮ್ಮದ್ ಮುಸ್ಲಿಯಾರ್ ಅವರ ಬಗ್ಗೆ ತಿಳಿದುಕೊಂಡರು. ಬಳಿಕ ಅವರ ದರ್ಸ್‌ನಲ್ಲಿ ಸೇರಿ, "ರಿಸಾಲತುಲ್ ಮರದೀನಿ" ಸೇರಿದಂತೆ ವಿವಿಧ ಕಿತಾಬ್‌ಗಳನ್ನು ಅಧ್ಯಯನ ಮಾಡಿದರು. ಈ ಮೂಲಕ ವಿವಿಧ ಜ್ಞಾನಶಾಖೆಗಳಲ್ಲಿ ಪ್ರಾವೀಣ್ಯವನ್ನು ಗಳಿಸಿದರು.

1944ರಲ್ಲಿ ಉನ್ನತ ಶಿಕ್ಷಣಕ್ಕಾಗಿ ವೆಲ್ಲೂರಿನ ಬಾಖಿಯಾತುಸ್ಸಾಲಿಹಾತ್ ಸಂಸ್ಥೆಗೆ ಸೇರಿದರು. ಕೊಟ್ಟುಮಲ ಅಬೂಬಕರ್ ಮುಸ್ಲಿಯಾರ್ ಸೇರಿದಂತೆ ಅನೇಕ ಪ್ರಮುಖ ವಿದ್ವಾಂಸರು ಬಾಖಿಯಾತ್‌ನಲ್ಲಿ ಅವರ ಸಹಪಾಠಿಗಳಾಗಿದ್ದರು.

ಶಂಸುಲ್ ಉಲಮಾ’ ಎಂದು ಪ್ರಸಿದ್ಧರಾಗಿದ್ದ ಇ.ಕೆ. ಅಬೂಬಕರ್ ಮುಸ್ಲಿಯಾರ್ ಅವರ ಶಿಷ್ಯತ್ವವನ್ನು ಪಡೆಯುವ ಸೌಭಾಗ್ಯ ಅವರಿಗೆ ದೊರೆತದ್ದು ಅಲ್ಲಿಯೇ.

ಬಾಖಿಯಾತ್‌ನಲ್ಲಿನ ಅಧ್ಯಯನವನ್ನು ಪೂರ್ಣಗೊಳಿಸಿ ಹಿಂದಿರುಗಿದ ಅವರು, 1946ರಲ್ಲಿ ತಮ್ಮ ಜನ್ಮಸ್ಥಳವಾದ ಕುಝಿಪ್ಪುರಂನಲ್ಲಿ ಮೊದಲ ದರ್ಸ್‌ ಆರಂಭಿಸಿದರು. ಕೆ.ಸಿ. ಜಮಾಲುದ್ದೀನ್ ಮುಸ್ಲಿಯಾರ್ ಸೇರಿದಂತೆ ಅನೇಕ ಪ್ರಮುಖ ವಿದ್ವಾಂಸರು ಆ ದರ್ಸ್‌ಗೆ ಆಗಮಿಸುತ್ತಿದ್ದರು.

‘ *ಮದ್ರಸತು ಸಿರಾಜುಲ್ ಉಲೂಮ್’* ಎಂದು ಹೆಸರಿಸಲಾದ ಆ ದರ್ಸ್‌ಗೆ ನಂತರ ಜ್ಞಾನಾರ್ಜನೆಯ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳ ದೊಡ್ಡ ಪ್ರವಾಹವೇ ಹರಿದುಬಂತು.

ತದನಂತರ ತಲಕ್ಕಡತ್ತೂರು, ಕಾಯಂಕುಳಂ, ಚೆರುಶ್ಶೋಲ, ಮಾಟ್ಟೂಲ್ ವೇದಾಂಬ್ರಂ, ಚಾಲಿಯಂ, ಕಿಳಕ್ಕೇಪ್ಪುರಂ, ಪೊಡಿಯಾಡ್ ಮುಂತಾದ ಪ್ರದೇಶಗಳಲ್ಲಿ ಅವರು ದರ್ಸ್‌ಗಳನ್ನು ನಡೆಸಿದರು.

ಸುಮಾರು ಮೂರು ದಶಕಗಳ ಕಾಲ ಚಾಲಿಯಂನಲ್ಲಿಯೇ ದರ್ಸ್ ನಡೆಸಿದ ಅವರು, ಆ ಕಾಲದಲ್ಲಿ ‘ಚಾಲಿಯತ್ತೆ ಮೊಯ್ಲ್ಯಾರ್’ ಎಂದೇ ಪ್ರಸಿದ್ಧರಾಗಿದ್ದರು.

ಕೇರಳದ ಅನೇಕ ವಿದ್ವಾಂಸ ಪ್ರಮುಖರು ಚಾಲಿಯಂ ದರ್ಸ್‌ನಲ್ಲಿ ಅವರ ಶಿಷ್ಯರಾಗಿದ್ದರು. 

ಚಾಲಿಯಂ ದರ್ಸ್‌ನ ಆ ಸುವರ್ಣಯುಗವನ್ನು ನೆನಪಿಸುವಂತೆ, ಇಂದಿಗೂ ಚಾಲಿಯಂ ಮಸೀದಿಯ ಒಳಭಾಗದಲ್ಲಿ ಅವರು ದರ್ಸ್ ನಡೆಸುತ್ತಿದ್ದ ಸ್ಥಳವನ್ನು ವಿಶೇಷವಾಗಿ ಗುರುತಿಸಿ ಇಡಲಾಗಿದೆ. 1990 ರಿಂದ 2002 ರ ವರೆಗೆ ದೀರ್ಘಕಾಲ ಉಸ್ತಾದರು ಓದುಕ್ಕುಂಗಲ್ ಇಹ್ಯಾಉಸುನ್ನ ದಲ್ಲಿ ಉಸ್ತಾದರಾಗಿ ಸೇವೆ ಸಲ್ಲಿಸಿದರು.

 2002 ರ ಆಗಸ್ಟ್ 15ರಂದು, ಜಮಾದುಲ್ ಆಖಿರ್ 6ರಂದು, ಆ ಮಹಾಗುರುಗಳು ಈ ಲೋಕಕ್ಕೆ ವಿದಾಯ ಹೇಳಿದರು.

Related Posts

Leave A Comment

Voting Poll

Get Newsletter