ಎಂ.ಎ. ಜಲೀಲ್ ಸಖಾಫಿ ಪುಲ್ಲಾರ
ಅನುವಾದ: ಸಫ್ವಾನ್ ಕುದ್ಲೂರು
ಮದ್ಹಬ್‌ನ ಇಮಾಮ್‌ಗಳ ನಂತರ ಇಸ್ಲಾಮಿಕ್ ಜಗತ್ತು ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ಎಂಬ ನೆಲೆಯಲ್ಲಿ ಶೈಖ್ ಮುಹ್ಯಿದ್ದೀನ್ ಅಬ್ದುಲ್ ಖಾದಿರ್ ಜೀಲಾನಿಯವರನ್ನು ನಾವು ಗೌರವಿಸುತ್ತೇವೆ. ಈ ಗೌರವದ ಭಾಗವಾಗಿಯೇ ಮುಸ್ಲಿಮರು ಅವರ ಜನ್ಮದಿನಾಚರಣೆ ಮತ್ತು ವಫಾತ್ ದಿನಾಚರಣೆಗಳನ್ನು ನಡೆಸುತ್ತಾರೆ.
ಹಿಜ್ರಿ 470 ರಲ್ಲಿ (ಕ್ರಿ.ಶ. 1077) ರಮಝಾನ್ ಒಂದರಂದು 'ಜೀನ್' ಎಂಬ ಸ್ಥಳದಲ್ಲಿ ಶೈಖ್ ಜೀಲಾನಿ ಜನಿಸಿದರು. ಈ ಸ್ಥಳವು ಜೀಲಾನಿ, ಕೈಲಾನ್ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತದೆ. ಅಬೂ ಸಾಲಿಹ್ ಮೂಸಾ ಜಂಗೀದೋಸ್ತ್ (ರ) ಅವರು ಮುಹ್ಯಿದ್ದೀನ್ ಶೈಖ್ ಅವರ ತಂದೆ. 'ಜಂಗೀದೋಸ್ತ್' ಎಂಬುದು ಅರೇಬಿಯೇತರ ಪದವಾಗಿದೆ. ಇದರ ಅರ್ಥ 'ಯುದ್ಧಪ್ರಿಯ' ಎಂದು. ಕೆಲವು ಗ್ರಂಥಗಳಲ್ಲಿ ಇದನ್ನು 'ಖಂದಕೂಸ್' ಎಂದು ಕಾಣಬಹುದು, ಆದರೆ ಅದು ತಪ್ಪು. ಉಮ್ಮುಲ್ ಖೈರ್ ಫಾತಿಮಾ (ರ) ಅವರು ಇವರ ತಾಯಿಯಾಗಿದ್ದಾರೆ. ಜೀಲಾನಿಯವರ ತಾಯಿಯ ವಂಶಾವಳಿಯು ಇಮಾಮ್ ಹುಸೈನ್ (ರ) ಅವರಿಗೂ ಮತ್ತು ತಂದೆಯ ವಂಶಾವಳಿಯು ಇಮಾಮ್ ಹಸನ್ (ರ) ಅವರಿಗೂ ತಲುಪುತ್ತದೆ. ಶೈಖ್ ಜೀಲಾನಿಯವರು ಅಹ್ಲುಬೈತ್‌ಗೆ ಸೇರಿದ ಪ್ರಮುಖರಾಗಿದ್ದಾರೆ.
ಪವಿತ್ರ ಜೀವನ, ಲೌಕಿಕ ವಿರಕ್ತಿ, ಕಠಿಣ ಆತ್ಮನಿಯಂತ್ರಣ ಮತ್ತು ಸ್ವಯಂ ಸಮರ್ಪಣೆಯ ಮೂಲಕ ಉನ್ನತ ಸ್ಥಾನಕ್ಕೇರಿದ ಔಲಿಯಾಗಳ ಪೈಕಿ ಪ್ರಮುಖರಾದ ಶೈಖ್ ಜೀಲಾನಿಯವರ ಬಗ್ಗೆ ಗೌರವವನ್ನು ವ್ಯಕ್ತಪಡಿಸುವುದು ಮಾನವ ಸಹಜ ಸ್ವಭಾವವಾಗಿದೆ. ಅಲ್ಲಾಹನು ಗೌರವಿಸಿದವರನ್ನು ಗೌರವಿಸಬೇಕೆಂದು ಅಲ್ಲಾಹನು ಆಜ್ಞಾಪಿಸುತ್ತಾನೆ. ಆದ್ದರಿಂದ, ಮುಸಲ್ಮಾನನಿಗೆ ತನ್ನ ಇಸ್ಲಾಂ ಪೂರ್ಣಗೊಳ್ಳಲು ಔಲಿಯಾಗಳ ಬಗ್ಗೆ ಗೌರವ ಹೊಂದುವುದು ಅತ್ಯಗತ್ಯವಾಗಿದೆ. ಔಲಿಯಾಗಳ ಜೀವಿತಾವಧಿಯಲ್ಲಿ ಮತ್ತು ಮರಣಾನಂತರವೂ ಈ ಗೌರವಕ್ಕೆ ಚ್ಯುತಿ ಬರಬಾರದು. ಗೌರವಕ್ಕೆ 'ಆರಾಧನೆ' ಎಂಬ ಅರ್ಥವನ್ನು ಕಲ್ಪಿಸಿ ಶಿರ್ಕ್‌ನ (ಬಹುದೇವತಾರಾಧನೆ) ಹಣೆಪಟ್ಟಿ ಕಟ್ಟುವ ಕೆಲವು ಮುಗ್ಧ ಜನರನ್ನು ಕಾಣಬಹುದು. ಸವಕಲಾಗಿರುವ ಈ ಆರೋಪಕ್ಕೆ ಅನೇಕರು ಈಗಾಗಲೇ ಉತ್ತರ ನೀಡಿದ್ದಾರೆ. ಹಾಗಾಗಿ ಅವುಗಳನ್ನು ನಿರ್ಲಕ್ಷಿಸುವುದೇ ಸೂಕ್ತ.
ಅದೇ ಸಮಯದಲ್ಲಿ, ಔಲಿಯಾಗಳ ಬಗೆಗಿನ ಪ್ರೀತಿ ಮತ್ತು ಗೌರವವನ್ನು ಕೇವಲ ಖುತುಬಿಯ್ಯತ್, ರಾತೀಬ್, ಮೌಲಿದ್ ಮುಂತಾದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸುವ ಕೆಲವರನ್ನೂ ಕಾಣಬಹುದು. ಇವರು ಕೂಡ ವಾಸ್ತವದಲ್ಲಿ ಗೌರವವನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಸದಾಚಾರಿಗಳಾದ ಔಲಿಯಾಗಳನ್ನು ಅನುಸರಿಸುವುದೇ ಅಂತಿಮ ಗೌರವ ಎಂಬುದನ್ನು ಅಂತಹವರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಖಂಡಿತವಾಗಿಯೂ ಸುನ್ನಿ ಮುಸ್ಲಿಮರಿಗಿದೆ.
ಔಲಿಯಾಗಳ ಬಗ್ಗೆಯೇ ತಪ್ಪು ತಿಳುವಳಿಕೆ ಹೊಂದಿರುವವರೂ ನಮ್ಮಲ್ಲಿದ್ದಾರೆ. ಹಸಿರು ಶಾಲು ಹೊಡೆದುಕೊಂಡು ಔಲಿಯಾ ಪಟ್ಟವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವವರನ್ನೂ ಕಾಣಬಹುದು. ಶಾಲು ಹೊಡೆಯುವುದಾಗಲೀ ಅಥವಾ ಸಣ್ಣಪುಟ್ಟ ಪವಾಡಗಳನ್ನು ತೋರಿಸುವುದಾಗಲೀ ಔಲಿಯಾ ಆಗಿರುವುದಕ್ಕೆ ಪುರಾವೆಯಲ್ಲ. 'ವಲಿಯ್ಯ್' (ಔಲಿಯಾ) ಎಂಬುದರ ವ್ಯಾಖ್ಯಾನವನ್ನು ಇಮಾಮ್ ತಫ್ತಾಝಾನಿ (ರ) ಹೇಳುವುದನ್ನು ನೋಡಿ:
"ಅಲ್ಲಾಹನ ಬಗ್ಗೆ ಮತ್ತು ಅವನ ಗುಣವಿಶೇಷಣಗಳ ಬಗ್ಗೆ ತಮ್ಮ ಸಾಮರ್ಥ್ಯದ ಮಿತಿಯಲ್ಲಿ ಅರಿತಿರುವವನು, ಅಲ್ಲಾಹನಿಗೆ ವಿಧೇಯನಾಗುವುದರಲ್ಲಿ ನಿರತನಾಗಿರುವವನು, ಪಾಪಗಳನ್ನು ತ್ಯಜಿಸಿ, ಭೌತಿಕ ಸುಖಭೋಗಗಳಲ್ಲಿ ಮತ್ತು ದೇಹೇಚ್ಛೆಗಳಲ್ಲಿ ಮುಳುಗದವನೇ ವಲಿಯ್ಯ್ ಆಗಿರುತ್ತಾನೆ" (ಶರ್ಹುಲ್ ಅಖಾಯಿದ್).
ಶೈಖ್ ಜೀಲಾನಿ ತಮ್ಮ 18ನೇ ವಯಸ್ಸಿನಲ್ಲಿ ಬಾಗ್ದಾದ್ ಪ್ರವೇಶಿಸಿದರು. ಶೈಖ್ ಅವರ ಕಾರಣದಿಂದ ಅನೇಕ ಜನರು ಇಸ್ಲಾಮ್‌ಗೆ ಬಂದರು. ಹಾಗಾಗಿ ಜೀಲಾನಿಯವರಿಗೆ 'ಮುಹ್ಯಿದ್ದೀನ್' (ಧರ್ಮವನ್ನು ಪುನರುಜ್ಜೀವನಗೊಳಿಸಿದವರು) ಎಂಬ ಬಿರುದು ಲಭಿಸಿತು. ಶೈಖ್ ಅವರು ಸರ್ವಸಮ್ಮತರಾಗಿದ್ದರು. ಯಾರ ಮುಂದೆ ಕೂಡ ಸತ್ಯವನ್ನು ಹೇಳಲು ಭಯಪಡುತ್ತಿರಲಿಲ್ಲಾ.
ಅವರ ಕಠಿಣ ಪರಿಶ್ರಮ ಮತ್ತು ಇಚ್ಛೆಗಳನ್ನು ತ್ಯಜಿಸುವ ಗುಣ ಎಷ್ಟರಮಟ್ಟಿಗಿತ್ತು ಎಂಬುದನ್ನು ಸ್ಪಷ್ಟಪಡಿಸಲು ಶೈಖ್ ಜೀಲಾನಿ ಅವರೇ ತಮ್ಮ ಕಥೆಯನ್ನು ವಿವರಿಸುವುದನ್ನು ನೋಡಿ: "ಇರಾಕ್‌ನ ವಾಸದಲ್ಲಿ ನಲವತ್ತು ವರ್ಷಗಳ ಕಾಲ ಇಶಾ ನಮಾಜ್ ಮಾಡಿದ ವುಝೂವಿನಿಂದಲೇ ನಾನು ಸುಬಹ್ ನಮಾಜ್ ನಿರ್ವಹಿಸಿದ್ದೇನೆ. ಕುರಾನ್ ಪಠಣದ ವೇಳೆ ನಿದ್ದೆ ಬರದಂತೆ ತಡೆಯಲು ಒಂಟಿ ಕಾಲಿನಲ್ಲಿ ನಿಲ್ಲುತ್ತಿದ್ದೆ. ಗೋಡೆಗೆ ಹೊಡೆದ ಮೊಳೆಯ ಮೇಲೆ ಒಂದು ಕೈ ಇರುತ್ತಿತ್ತು. ಸಹರಿ (ಮುಂಜಾನೆ ಊಟ) ಸಮಯವಾಗುವಷ್ಟರಲ್ಲಿ ಕುರಾನ್ ಒಂದು ಖತಮ್ (ಪೂರ್ಣ) ಆಗುತ್ತಿತ್ತು." (ಬಹ್ಜಾ)
'ಖುತ್ಬ್' ಎಂಬ ಉನ್ನತ ಪದವಿಯನ್ನು ಅಲಂಕರಿಸಿದ ಶೈಖ್ ಜೀಲಾನಿ (ರ) ಅವರ ಹೆಸರು ಮತ್ತು ಪ್ರಸ್ತುತತೆಯು ಏಳು ಆಕಾಶಗಳಲ್ಲೂ ಮತ್ತು ಅದರಾಚೆಗೂ ಪ್ರಸಿದ್ಧವಾಗಿದೆ. ಶೈಖ್ ಜೀಲಾನಿ (ರ) ಅವರೇ ವಿವರಿಸುವುದನ್ನು ನೋಡಿ: "ಭೂಮಿ ಮತ್ತು ಆಕಾಶದಲ್ಲಿ ನನಗೆ ಧ್ವಜವನ್ನು ಸ್ಥಾಪಿಸಲಾಗಿದೆ. ಆಕಾಶ ಮತ್ತು ಭೂಮಿಯಲ್ಲಿರುವವರಿಗೆ ನನ್ನ ಪ್ರಭಾವ ತಿಳಿದಿದೆ. ಆಕಾಶ ಮತ್ತು ಭೂಮಿಯಲ್ಲಿ ನನ್ನ ಡಂಗುರ ಮೊಳಗಿದೆ. ವಿಜಯದ ಬೆಳ್ಳಿ ದೀಪವನ್ನು ನನಗೆ ಪ್ರದರ್ಶಿಸಲಾಗಿದೆ." (ಫುತೂಹುಲ್ ಗೈಬ್), ಈ ಸಾಲಂಕೃತ ಪ್ರಯೋಗದ ಮೂಲಕ ಭಗವಂತ ತನಗೆ ನೀಡಿದ ಕೀರ್ತಿಯನ್ನು ಜೀಲಾನಿ (ರ) ತೆರೆದಿಡುತ್ತಿದ್ದಾರೆ.
ಹಿಜ್ರಿ 561 ರಬೀಉಲ್ ಆಖಿರ್ 11 ರಂದು ಮುಹ್ಯಿದ್ದೀನ್ ಶೈಖ್ (ರ) ಬಾಗ್ದಾದ್‌ನಲ್ಲಿ ವಫಾತ್ ಹೊಂದಿದರು. ಒಂಬತ್ತು ದಶಕಗಳ ಕಾಲ ಶೈಖ್ ಜೀವಿಸಿದ್ದರು. ಅವರ ಪುತ್ರ ಅಬ್ದುಲ್ ವಹಾಬ್ (ರ) ಜನಾಝಾ ನಮಾಜ್‌ನ ನೇತೃತ್ವ ವಹಿಸಿದ್ದರು. ಶೈಖ್ ಜೀಲಾನಿ ವಹಿಸಿಕೊಂಡು ನಡೆಸುತ್ತಿದ್ದ ಬಾಗ್ದಾದ್‌ನ ಸಂಸ್ಥೆಯ ಮುಂಭಾಗದಲ್ಲಿಯೇ ಶೈಖ್ ಜೀಲಾನಿ (ರ) ಅಂತ್ಯವಿಶ್ರಾಂತಿ ಪಡೆಯುತ್ತಿದ್ದಾರೆ.
ಜ್ಞಾನವು ವಿಶ್ವಾಸಕ್ಕಾಗಿ; ವಿಶ್ವಾಸವು ಆರಾಧನೆಗಾಗಿ. ಆರಾಧನೆಯು ಏಕದೇವನ ಸಾಮೀಪ್ಯಕ್ಕಾಗಿ. ಅದಕ್ಕಾಗಿ ನಾವು ಸಾಯುವವರೆಗೂ ಶ್ರಮಿಸಬೇಕು. ಇದುವೇ ಶೈಖ್ ಜೀಲಾನಿ (ರ) ರವರ ಜೀವನ ಸಂದೇಶ.