ಜ್ಞಾನಯುಗದ ಒಂದು ಅಧ್ಯಾಯ ಮುಕ್ತಾಯವಾಯಿತು: ಶೈಖುಲ್ ಜಾಮಿಅಃ ಕೆ. ಆಲಿ ಕುಟ್ಟಿ ಉಸ್ತಾದ್....
Arfaz Mukve

ಜ್ಞಾನಯುಗದ ಒಂದು ಅಧ್ಯಾಯ ಮುಕ್ತಾಯವಾಯಿತು: ಶೈಖುಲ್ ಜಾಮಿಅಃ ಕೆ. ಆಲಿ ಕುಟ್ಟಿ ಉಸ್ತಾದ್....


ಅಪಾರವಾದ ಅರಿವು, ಅನುಭವ ಮತ್ತು ಅಪ್ರತಿಮ ವಿನಯದಿಂದ ನೂರಾರು ಜವಾಬ್ದಾರಿಗಳನ್ನು ಅಲಂಕರಿಸಿದ ಅಪೂರ್ವ ವ್ಯಕ್ತಿತ್ವ ಶೈಖುಲ್ ಜಾಮಿಅಃ ಕೆ. ಆಲಿ ಕುಟ್ಟಿ ಉಸ್ತಾದ್. ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಅಳಿಸಲಾಗದ ಹೆಜ್ಜೆಗುರುತುಗಳನ್ನು ಮೂಡಿಸಿದ ಶೈಖುನಾರ  ವಫಾತ್  ಇಡೀ ದೀನೀ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. 'ಉಮ್ಮುಲ್ ಮದಾರಿಸ್' ಎಂದೇ ಪ್ರಸಿದ್ಧಿ ಪಡೆದ ಪಟ್ಟಿಕಾಡು ಜಾಮಿಅಃ ನೂರಿಯಾ ಅರಬಿಕ್ ಕಾಲೇಜಿನ ಗೌರವಾನ್ವಿತ ಪ್ರಾಂಶುಪಾಲರಾಗಿ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸಲ್ಲಿಸಿದ ಸೇವೆಗಳು ಒಬ್ಬ ನೈಜ ಯುಗಪುರುಷನ ನಾಯಕತ್ವವನ್ನು ಸಾರುತ್ತವೆ. ಶಂಸುಲ್ ಉಲಮಾ (ಖ.ಸಿ) ಮತ್ತು ಝೈನುಲ್ ಉಲಮಾ (ಖ.ಸಿ) ರಂತಹ ಧಾರ್ಮಿಕ ದಿಗ್ಗಜರು ಅಲಂಕರಿಸಿದ್ದ  ಪ್ರಧಾನ ಕಾರ್ಯದರ್ಶಿ ಸೇವೆಯನ್ನು ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ಸಮಾಜಕ್ಕೆ ಸದಾ ಸನ್ಮಾರ್ಗ ತೋರಿದರು.
ಉಸ್ತಾದರ ಶಾಲಾ ಶಿಕ್ಷಣ ತೀರಾ ಅಲ್ಪವಾಗಿದ್ದರೂ, ಶೈಖುನಾ ನಿರಂತರ ಅಧ್ಯಯನ ಮತ್ತು ಅಪಾರ ಪರಿಶ್ರಮದಿಂದ ಅರಬಿ ಹಾಗೂ ಇಂಗ್ಲಿಷ್ ಭಾಷೆಗಳ ಮೇಲೆ ಅಗಾಧವಾದ ಪ್ರಭುತ್ವವನ್ನು ಸಾಧಿಸಿದ್ದರು. ಕೇವಲ ಸ್ವಪ್ರಯತ್ನ ಮತ್ತು ಸತತ ಪರಿಶ್ರಮದಿಂದ ಒಬ್ಬ ಮನುಷ್ಯ ಎಷ್ಟರಮಟ್ಟಿಗೆ ಬೆಳೆಯಬಹುದು ಎಂಬುದಕ್ಕೆ ಉಸ್ತಾದರ ಬದುಕೇ ಜೀವಂತ ಸಾಕ್ಷಿಯಾಗಿದೆ.

 1978 ರಿಂದ ಜಾಮಿಅಃ ನೂರಿಯಾದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಲು ಆರಂಭಿಸಿದ ಶೈಖುನಾ ಸುಮಾರು ಆರು ಸಾವಿರಕ್ಕೂ ಹೆಚ್ಚು 'ಫೈಝಿ' ವಿದ್ವಾಂಸರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದರು. ಶೈಖುನಾ ಬರೆದದ್ದು ಕೇವಲ ಪುಸ್ತಕಗಳನ್ನಷ್ಟೇ ಅಲ್ಲ, ಬದಲಿಗೆ ಜ್ಞಾನದ ಬೆಳಕನ್ನು ಪಸರಿಸಬಲ್ಲ ಸಮರ್ಥ ತಲೆಮಾರುಗಳನ್ನಾಗಿತ್ತು ಎಂಬುದಕ್ಕೆ ಆ ಕೊನೆಯ ಕ್ಷಣವು ಸಾಕ್ಷಿಯಾಯಿತು. 
"ನಿಮ್ಮನ್ನು ಈ ದೀನೀ ಮಾರ್ಗಕ್ಕೆ ತಲುಪಿಸಲು ನಿಮ್ಮ ಹಿಂದೆ ಅನೇಕ ಮಹನೀಯರ ಪರಿಶ್ರಮವಿದೆ. ಆದ್ದರಿಂದ ಈ ಮಾರ್ಗವನ್ನು ಎಂದಿಗೂ ಬಿಡಬೇಡಿ; ಅದನ್ನು ದೃಢವಾಗಿ ಹಿಡಿದುಕೊಳ್ಳಿ" ಎಂದು ತಮ್ಮ ಶಿಷ್ಯವೃಂದರಿಗೆ ಹೇಳುತ್ತಿದ್ದ ಆ ಅಮೂಲ್ಯ ಮಾತು ಇಂದಿಗೂ ಪ್ರತಿಯೊಬ್ಬ ಶಿಷ್ಯನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿದೆ.

1986ರಲ್ಲಿ ಸಮಸ್ತದ ಮಶಾವರ ಸದಸ್ಯರಾಗಿ ಆಯ್ಕೆಯಾದ ಶೈಖುನಾ, ಶಂಸುಲ್ ಉಲಮಾ (ಖ.ಸಿ) ಮತ್ತು ಕನ್ನಿಯತ್ ಉಸ್ತಾದ್  (ಖ.ಸಿ) ರಂತಹ ಆತ್ಮೀಯ ವಿದ್ವಾಂಸರ ಸಾಮೀಪ್ಯದಲ್ಲಿ ಬೆಳೆದು ತಮ್ಮ ಜ್ಞಾನ ಹಾಗೂ ದೂರದೃಷ್ಟಿಯಿಂದ ವಿಶಿಷ್ಟ ಸ್ಥಾನ ಗಳಿಸಿದರು. ಸುಮಾರು ನಾಲ್ಕು ದಶಕಗಳ ಕಾಲ ಮುಶಾವರ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಶೈಖುನಾರ ಅಸಾಧಾರಣ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಶೈಖುನಾರ ನಾಯಕತ್ವವು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಹಾಗೂ ಸುನ್ನೀ ಯುವಜನ ಸಂಘದ (SYS) ಪ್ರಧಾನ ಕಾರ್ಯದರ್ಶಿಯಾಗಿ, ಸುನ್ನಿ ಮಹಲ್ಲ್ ಫೆಡರೇಶನ್ ಹಾಗೂ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಉಪಾಧ್ಯಕ್ಷರಾಗಿ, ಪೊನ್ನಾನಿ ಮೌನತುಲ್ ಇಸ್ಲಾಂ ಅರಬಿಕ್ ಕಾಲೇಜಿನ ಅಧ್ಯಕ್ಷರಾಗಿ ಮತ್ತು ಕಾಸರಗೋಡು ಸಂಯುಕ್ತ ಜಮಾಅತ್ ಖಾಝಿಯಾಗಿ ಶೈಖುನಾ ಹಲವು ಸಂಸ್ಥೆಗಳನ್ನು ಮುನ್ನಡೆಸಿದರು.

 ರಾಷ್ಟ್ರೀಯ ಮಟ್ಟದಲ್ಲಿ ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯರಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಮುಸ್ಲಿಂ ವರ್ಲ್ಡ್ ಲೀಗ್‌ನ ಅಂತಾರಾಷ್ಟ್ರೀಯ ಫಿಖ್ಹ್ ಕೌನ್ಸಿಲ್ ಸದಸ್ಯರಾಗಿ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರತೀಯ ಮುಸ್ಲಿಮರ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡರು.

ಸಾರ್ವಜನಿಕ ಸೇವಾರಂಗದಲ್ಲೂ ಪ್ರಮುಖ ಹೆಜ್ಜೆಗಳನ್ನು ಇರಿಸಿದ್ದ ಶೈಖುನಾ, 2003 ರಿಂದ 2006 ರವರೆಗೆ ಕೇರಳ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರಾಗಿ ಹಾಗೂ 2006 ರಿಂದ 2009 ರವರೆಗೆ ಭಾರತೀಯ ಕೇಂದ್ರ ಹಜ್ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಹಜ್ ಯಾತ್ರಿಕರ ಅನುಕೂಲಕ್ಕಾಗಿ ಅಪಾರ ಶ್ರಮವಹಿಸಿದರು. ಇದರ ಜೊತೆಗೆ ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲೂ ತಮ್ಮ ಅಪಾರ ಕೊಡುಗೆ ನೀಡಿದ ಶೈಖುನಾ, 2014 ರಿಂದ 'ಸುಪ್ರಭಾತಂ' ದಿನಪತ್ರಿಕೆಯ ಉಪಾಧ್ಯಕ್ಷರಾಗಿ, 2005 ರಿಂದ 'ಸುನ್ನಿ ಅಫ್ಕಾರ್', 2009 ರಿಂದ 'ಅಲ್-ಮುಅಲ್ಲಿಮ್' ಮಾಸಪತ್ರಿಕೆ ಮತ್ತು 'ಅಲ್-ನೂರ್' ಅರಬಿ ಮಾಸಿಕಗಳ ಜವಾಬ್ದಾರಿ ವಹಿಸಿಕೊಂಡು ಜ್ಞಾನ ಪ್ರಸಾರಕ್ಕೆ ಹೊಸ ದಿಕ್ಕು ತೋರಿಸಿದರು. ಹೀಗೆ  ಶಿಕ್ಷಣತಜ್ಞ, ಬಹುಭಾಷಾ ಪಂಡಿತ, ಖಾಝಿ, ಸಂಘಟನಾಚತುರ, ಸಂಪಾದಕ ಹಾಗೂ ಚಿಂತಕರಾಗಿ ದೇಶ-ವಿದೇಶಗಳ ಅನೇಕ ಮಹತ್ವದ ವೇದಿಕೆಗಳನ್ನು ಅಲಂಕರಿಸಿದ ಶೈಖುನಾ, ತಮ್ಮ ಹುದ್ದೆಗಳ ತೂಕದಿಂದಲ್ಲ, ಬದಲಿಗೆ ಸರಳತೆ, ವಿನಯ, ಪಾಂಡಿತ್ಯ ಮತ್ತು ಮಾನವೀಯ ಗುಣಗಳಿಂದ ಕೋಟ್ಯಾಂತರ ಹೃದಯಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದರು. ಕರುನಾಡು ಸೇರಿದಂತೆ ಇಡೀ ವಿಶ್ವದ ಸುನ್ನಿ ಸಮಾಜದ ಹೃದಯದಲ್ಲಿ ಎಂದೆಂದಿಗೂ ಮಾಯದ ಜ್ಞಾನದ ದೀಪವಾಗಿ ಶೈಖುನಾ ಪ್ರಜ್ವಲಿಸುತ್ತಿರುತ್ತಾರೆ. ಅಲ್ಲಾಹು ತಆಲಾ ಅವರ ಎಲ್ಲಾ ದೀನೀ ಸೇವೆಗಳನ್ನು ಸ್ವೀಕರಿಸಿ, ಅವರಿಗೆ ಉನ್ನತವಾದ ಸ್ಥಾನವನ್ನು ಅನುಗ್ರಹಿಸಲಿ. ಆಮೀನ್.

Related Posts

Leave A Comment

Voting Poll

Get Newsletter