ಖಬ್ಬಾಬ್ ಬಿನ್ ಅಲ್-ಅರತ್ (ರ.ಅ.) ಸಮರ್ಪಣೆಯ ಶಾಶ್ವತ ಸಾಕ್ಷಿ
ಖಬ್ಬಾಬ್ ಬಿನ್ ಅಲ್-ಅರತ್ (ರ.ಅ.) ಸಮರ್ಪಣೆಯ ಶಾಶ್ವತ ಸಾಕ್ಷಿ
ಖುರೈಶಿಗಳಲ್ಲಿ ಕೆಲವರು ಖಬ್ಬಾಬ್ ಅವರ ಮನೆಯ ಕಡೆ ನಡೆದುಹೋದರು. ಖಬ್ಬಾಬ್ ಅವರು ತಮಗೆ ತಯಾರಿಸಿ ಕೊಡಲು ಒಪ್ಪಿಕೊಂಡಿದ್ದ ಕತ್ತಿಗಳನ್ನು ಪಡೆದುಕೊಳ್ಳುವುದಕ್ಕಾಗಿಯೇ ಅವರ ಆಗಮನವಾಗಿತ್ತು. ಮಕ್ಕಾದ ಜನರಿಗಾಗಿ ಕತ್ತಿಗಳನ್ನು ತಯಾರಿಸುವ ಕೆಲಸವನ್ನು ಖಬ್ಬಾಬ್ ಮಾಡುತ್ತಿದ್ದರು. ಮಕ್ಕಾದಲ್ಲಿ ಅವರಿಗಿಂತ ಉತ್ತಮ ಗುಣಮಟ್ಟದ ಕತ್ತಿಗಳನ್ನು ತಯಾರಿಸುವವರು ವಿರಳರಾಗಿದ್ದರು. ಅನೇಕರು ತಮ್ಮ ಆಯುಧಗಳಿಗೆ ಮತ್ತೆ ಹರಿತ ಕೊಡಿಸಿಕೊಳ್ಳಲು ಅಥವಾ ಹೊಸದಾಗಿ ತಯಾರಿಸಿಸಿಕೊಳ್ಳಲು ಅವರ ಬಳಿಗೆ ಬರುತ್ತಿದ್ದರು.
ಖಬ್ಬಾಬ್ ತಮ್ಮ ಕಾರ್ಯಾಗಾರವನ್ನು ಬಿಟ್ಟು ಹೆಚ್ಚು ಹೊರಗೆ ಹೋಗುವವರಲ್ಲ. ಆದರೆ ಆ ದಿನ ಖುರೈಶಿಗಳು ಅವರ ಮನೆಗೆ ಬಂದಾಗ ಅವರು ಅಲ್ಲಿ ಇರಲಿಲ್ಲ. ಅವರು ಖಬ್ಬಾಬ್ ಬರುವ ನಿರೀಕ್ಷೆಯಲ್ಲಿ ಅಲ್ಲೇ ಕಾಯುತ್ತಿದ್ದರು. ಸ್ವಲ್ಪ ಸಮಯ ಕಳೆದ ನಂತರ, ಪ್ರಕಾಶಮಾನವಾದ ಮುಖದೊಂದಿಗೆ, ಆನಂದಭಾಷ್ಪಗಳಿಂದ ತುಂಬಿದ ಕಣ್ಣುಗಳೊಂದಿಗೆ ಖಬ್ಬಾಬ್ ಅವರ ಕಡೆಗೆ ಬಂದರು. ತಮ್ಮ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಆಗ ಅವರು ಖಬ್ಬಾಬ್ ಅವರನ್ನು ಕೇಳಿದರು:
“ನಾವು ನಿನಗೆ ತಯಾರಿಸಲು ಹೇಳಿದ್ದ ಕತ್ತಿಗಳ ಕೆಲಸ ಏನಾಯಿತು?”
ಆ ಪ್ರಶ್ನೆಗೆ ಉತ್ತರಿಸುವ ಬದಲು ಖಬ್ಬಾಬ್ ತಮ್ಮೊಳಗೆ ತಾವೇ ಮಾತಾಡಿಕೊಳ್ಳುವಂತೆ ಹೀಗೆ ಹೇಳಿದರು:
“ಅವರ ವಿಷಯವೇ ಒಂದು ಅದ್ಭುತ!”
“ನೀನು ಯಾರ ಬಗ್ಗೆ ಮಾತನಾಡುತ್ತಿದ್ದೀಯ? ನಾವು ಕತ್ತಿಗಳ ವಿಷಯವನ್ನೇ ಕೇಳಿದ್ದೇವೆ,” ಎಂದು ಅವರು ಖಬ್ಬಾಬ್ ಅವರಿಗೆ ಹೇಳಿದರು.
“ನೀವು ಅವರ ಮಾತುಗಳನ್ನು ಎಂದಾದರೂ ಕೇಳಿದ್ದೀರಾ?” ಎಂದು ಖಬ್ಬಾಬ್ ಮತ್ತೆ ಕೇಳಿದರು.
ಅವರು ಆಶ್ಚರ್ಯದಿಂದ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡರು. ವಿಷಯ ತಿಳಿದುಕೊಳ್ಳಲು ಅವರು ಖಬ್ಬಾಬ್ ಅವರನ್ನು ಕೇಳಿದರು:
“ನೀನು ಯಾರನ್ನು ಉದ್ದೇಶಿಸುತ್ತಿದ್ದೀಯ?”
“ನಿಮ್ಮ ಮನಸ್ಸಿನಲ್ಲಿ ಈಗ ಯಾರ ಬಗ್ಗೆ ಯೋಚನೆ ಬಂದಿದೆಯೋ, ಅವರನ್ನೇ,” ಎಂದು ಖಬ್ಬಾಬ್ ಅವರನ್ನು ಇನ್ನಷ್ಟು ಕುತೂಹಲಕ್ಕೆ ದೂಡುವ ರೀತಿಯಲ್ಲಿ ಉತ್ತರಿಸಿದರು.
ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಆ ಜನರು ಖಬ್ಬಾಬ್ ಅವರನ್ನು ಒತ್ತಾಯಿಸಿದರು.
ಖಬ್ಬಾಬ್ ಅವರು ತಾವು ಇಸ್ಲಾಂ ಸ್ವೀಕರಿಸಿದ್ದನ್ನು ಜಗತ್ತಿಗೆ ಘೋಷಿಸಬೇಕೆಂದು ಬಯಸಿದರು. ಅವರು ಅವರತ್ತ ಮುಖ ಮಾಡಿ ಹೇಳಿದರು:
“ನಾನು ಅವರನ್ನು ಭೇಟಿ ಮಾಡಿದ್ದೇನೆ, ಅವರ ಮಾತುಗಳನ್ನು ಕೇಳಿದ್ದೇನೆ. ಸತ್ಯವಚನಗಳು ಅವರ ಬಳಿಯಿಂದ ಹೊಳೆಯುವ ಒರತೆಯಂತೆ ಹರಿದು ಬರುತ್ತವೆ. ಅವರ ತುಟಿಗಳಿಂದ ಬೆಳಕು ಚೆಲ್ಲುತ್ತದೆ. ಅವರು ನಿಮ್ಮದೇ ಊರಿನವರಾಗಿದ್ದಾರೆ.”
“ನೀನು ಮುಹಮ್ಮದ್ ಬಗ್ಗೆ ಮಾತನಾಡುತ್ತಿದ್ದೀಯಾ?” ಎಂದು ಖುರೈಶಿಗಳ ಗುಂಪು ಖಬ್ಬಾಬ್ ಅವರನ್ನು ಕೇಳಿತು.
“ಹೌದು... ಅವರು ಅಲ್ಲಾಹನು ನಮ್ಮ ಬಳಿಗೆ ಕಳುಹಿಸಿದ ಪ್ರವಾದಿ. ದಟ್ಟವಾದ ಅಂಧಕಾರಗಳಿಂದ ನಮ್ಮನ್ನು ಬೆಳಕಿನ ಕಡೆಗೆ ನಡೆಸುವವರು ಅವರೇ.”
ಇದನ್ನು ಹೇಳುತ್ತಿದ್ದಂತೆಯೇ ಆ ಗುಂಪು ಖಬ್ಬಾಬ್ ಅವರ ಮೇಲೆ ಎರಗಿತು. ಅವರು ಪ್ರಜ್ಞೆ ತಪ್ಪುವವರೆಗೆ ನಿರ್ದಯವಾಗಿ ಹೊಡೆದರು. ಪ್ರಜ್ಞೆ ಬಂದಾಗ ಅವರ ದೇಹವೆಲ್ಲ ರಕ್ತದಿಂದ ನೆನೆದಿತ್ತು. ಧರಿಸಿದ್ದ ಬಟ್ಟೆಗಳು ಹರಿದು ಹೋಗಿದ್ದವು. ಗಾಯದ ನೋವನ್ನು ತಾಳುತ್ತಾ ಅಸಹಾಯಕರಾಗಿ ಮನೆಯ ಬಾಗಿಲಿಗೆ ಆಸರೆಯಾಗಿ ಕುಳಿತು ಆಲೋಚನೆಗಳಲ್ಲಿ ಮುಳುಗಿದರು.
“ನಾನು ಈಗ ಹೊಸ ಲೋಕವೊಂದಕ್ಕೆ ಪ್ರವೇಶಿಸಿದ್ದೇನೆ.” ಎಂದು ಅವರು ಮನಸ್ಸಿನಲ್ಲಿ ಯೋಚಿಸಿದರು. ಮಕ್ಕಾದಲ್ಲಿ ಇದುವರೆಗೆ ಕಳೆದ ಜೀವನ ಕ್ಷಣಮಾತ್ರದಲ್ಲಿ ಅವರ ಕಣ್ಮುಂದೆ ಹರಿದುಹೋಯಿತು. ಇನ್ನು ಯಾವುದೂ ಹಿಂದಿನಂತಿರಲಿಲ್ಲ. ಪ್ರವಾದಿಯನ್ನು ಶತ್ರುವೆಂದು ಕಾಣುವವರು ಇನ್ನು ತಮ್ಮನ್ನೂ ಶತ್ರುವೆಂದು ಕಾಣಲಿದ್ದಾರೆ. ಆಲೋಚನೆಯಲ್ಲಿ ಮುಳುಗಿದ್ದ ಅವರು ನಿಧಾನವಾಗಿ ಎದ್ದುನಿಂತರು. ಗುಲಾಮನಾಗಿದ್ದ ತಾವು ಇಸ್ಲಾಂ ಸ್ವೀಕರಿಸಿದ್ದರಿಂದ ಖುರೈಶಿಗಳಿಂದ ಎದುರಾಗಬಹುದಾದ ಹಿಂಸೆ ಮತ್ತು ಕಿರುಕುಳಗಳನ್ನು ಧೈರ್ಯದಿಂದ ಎದುರಿಸಲು ತಮ್ಮ ಮನಸ್ಸನ್ನು ನಿಧಾನವಾಗಿ ಸಿದ್ಧಗೊಳಿಸಿಕೊಂಡರು.
ಖುರೈಶಿಗಳಿಂದ ಖಬ್ಬಾಬ್ ಅವರು ಅತ್ಯಂತ ಕಠಿಣವಾದ ಹಿಂಸೆಗಳಿಗೆ ಗುರಿಯಾದರು. ಅವರು ನಂಬಿದ್ದ ಧರ್ಮದಿಂದ ಅವರನ್ನು ಹಿಂದಿರುಗಿಸಲು ಶತ್ರುಗಳು ಅನೇಕ ರೀತಿಯ ದೈಹಿಕ ಹಿಂಸೆಗಳನ್ನು ನಡೆಸಿದರು. ಉರಿಯುವ ಬಿಸಿ ಕಲ್ಲುಗಳನ್ನು ಅವರ ಬೆನ್ನಿನ ಮೇಲೆ ಇಟ್ಟು ಕಟ್ಟುತ್ತಿದ್ದರು; ಅದರ ತಾಪದಿಂದ ಅವರ ಬೆನ್ನಿನ ಮಾಂಸ ಸುಟ್ಟು ಗಾಯಗೊಳ್ಳುತ್ತಿತ್ತು.
ಕತ್ತಿಗಳನ್ನು ತಯಾರಿಸಲು ಖಬ್ಬಾಬ್ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದ ಕಬ್ಬಿಣವನ್ನೆಲ್ಲ ಖುರೈಶಿಗಳು ಸರಪಳಿಗಳಾಗಿ ರೂಪಾಂತರಿಸಿ ಅವರ ಕೈಕಾಲುಗಳಿಗೆ ಕಟ್ಟಿದರು. ಕಬ್ಬಿಣದ ಉಂಗುರಗಳನ್ನು ಕೆಂಪಾಗುವವರೆಗೆ ಬಿಸಿ ಮಾಡಿ ಅವರ ಕುತ್ತಿಗೆಗೆ ಹಾರವಾಗಿ ಹಾಕಿದರು. ಅದರ ಉರಿಯಿಂದ ಅವರ ತಾಜಾ ಮಾಂಸವು ನಿಧಾನವಾಗಿ ಎಲುಬಿನಿಂದ ಬೇರ್ಪಡತೊಡಗಿತು.
ಹಿಂಸೆಯನ್ನು ಇನ್ನಷ್ಟು ಸಹಿಸಲಾಗದಾಗ, ಖಬ್ಬಾಬ್ ಮತ್ತು ಅವರ ಜೊತೆಗಾರರು ಪ್ರವಾದಿಯವರ ಸನ್ನಿಧಿಗೆ ಬಂದರು. ಈ ಘಟನೆಯನ್ನು ಖಬ್ಬಾಬ್ ಅವರೇ ಹೀಗೆ ವಿವರಿಸುತ್ತಾರೆ:
“ಕಅಬಾದ ಸಮೀಪ ನಿಂತಿದ್ದ ಅಲ್ಲಾಹನ ದೂತರ ಬಳಿಗೆ ಹೋಗಿ ನಾವು ಹೇಳಿದೆವು:
‘ಅಲ್ಲಾಹನ ದೂತರೇ! ಈ ಹಿಂಸೆಗಳು ಕೊನೆಗೊಳ್ಳಲೆಂದು ನಮ್ಮ ಪರವಾಗಿ ನೀವು ಅಲ್ಲಾಹನಿಗೆ ಪ್ರಾರ್ಥನೆ ಮಾಡುವುದಿಲ್ಲವೇ?’”
ನನ್ನ ಮಾತು ಕೇಳುತ್ತಿದ್ದಂತೆಯೇ ಪ್ರವಾದಿಯವರ ಮುಖ ಕೆಂಪಾಯಿತು. ನಂತರ ಅವರು ಹೀಗೆ ಹೇಳಿದರು:
“ನಿಮಗಿಂತ ಮುಂಚಿನ ಸಮುದಾಯಗಳಲ್ಲಿದ್ದ ವಿಶ್ವಾಸಿಗಳನ್ನು ಶತ್ರುಗಳು ಅವರ ದೇಹವನ್ನು ತಲೆಯಷ್ಟೇ ಹೊರಗೆ ಕಾಣುವಂತೆ ನೆಲದಲ್ಲಿ ಹೂತುಬಿಡುತ್ತಿದ್ದರು. ಬಳಿಕ ಗರಗಸದ ಮೂಲಕ ಅವರ ತಲೆಯನ್ನು ಎರಡು ಭಾಗಗಳಾಗಿ ಸೀಳುತ್ತಿದ್ದರು. ಆದರೂ ಅಂತಹ ಹಿಂಸೆಗಳು ಅವರನ್ನು ತಮ್ಮ ಧರ್ಮದಿಂದ ದೂರ ಮಾಡಲಿಲ್ಲ. ಕಬ್ಬಿಣದ ಬಾಚಣಿಗೆಯಿಂದ ಅವರ ಎಲುಬಿನಿಂದ ಮಾಂಸವನ್ನು ಬೇರ್ಪಡಿಸುತ್ತಿದ್ದರು. ಆದರೂ ಅವರು ಅಲ್ಲಾಹನ ಮಾರ್ಗದಲ್ಲಿ ಅಚಲರಾಗಿಯೇ ಉಳಿದರು.
ಅಲ್ಲಾಹನು ಖಂಡಿತವಾಗಿಯೂ ತನ್ನ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ. ಒಂದು ದಿನ, ಒಬ್ಬ ಪ್ರಯಾಣಿಕನು ಸನ್ಆದಿಂದ ಹದ್ರಮೌತ್‌ವರೆಗೆ ಅಲ್ಲಾಹನನ್ನೂ ತನ್ನ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡುವ ತೋಳವನ್ನೂ ಹೊರತುಪಡಿಸಿ ಬೇರೆ ಯಾರಿಗೂ ಭಯಪಡದೆ ಸುರಕ್ಷಿತವಾಗಿ ಸಂಚರಿಸುವನು. ಆದರೆ ನೀವು ಆತುರಪಡುತ್ತಿದ್ದೀರಿ.”
ಮಹಾನ್ ಪ್ರವಾದಿಯವರ ಈ ಅಮೂಲ್ಯ ವಚನಗಳನ್ನು ಅವರು ಅತ್ಯಂತ ಗಮನದಿಂದ ಆಲಿಸಿದರು. ಖಬ್ಬಾಬ್ ಮತ್ತು ಅವರ ಸಂಗಾತಿಗಳ ಈಮಾನ್ ಇನ್ನಷ್ಟು ಬಲವಾಯಿತು. ಅಲ್ಲಾಹ ಮತ್ತು ಅವನ ದೂತನನ್ನು ಸಂತೋಷಪಡಿಸಲು ಯಾವ ಸಂಕಷ್ಟವನ್ನಾದರೂ ತಾಳ್ಮೆಯಿಂದ ಎದುರಿಸುವ ದೃಢನಿಶ್ಚಯದೊಂದಿಗೆ ಅವರು ಮುಂದೆ ಸಾಗಿದರು.
ಖಬ್ಬಾಬ್ ಅವರು ಉಮ್ಮು ಅಮ್ಮಾರ್ ಅವರ ಗುಲಾಮರಾಗಿದ್ದರು. ಖುರೈಶಿಗಳ ಒತ್ತಾಯದ ಮೇರೆಗೆ ಉಮ್ಮು ಅಮ್ಮಾರೂ ಖಬ್ಬಾಬ್ ಅವರಿಗೆ ನೀಡಲಾಗುತ್ತಿದ್ದ ಹಿಂಸೆಯಲ್ಲಿ ಪಾಲ್ಗೊಂಡಳು. ಕಬ್ಬಿಣವನ್ನು ಕೆಂಪಾಗುವವರೆಗೆ ಬಿಸಿ ಮಾಡಿ ಅವರ ತಲೆಯ ಮೇಲೂ ದೇಹದ ಇತರ ಭಾಗಗಳ ಮೇಲೂ ಇಡುತ್ತಿದ್ದಳು. ಅಸಹನೀಯ ನೋವನ್ನು ಸಹಿಸಿಕೊಂಡರೂ ಖಬ್ಬಾಬ್ ಅವರು ಅಪಾರ ಈಮಾನದೊಂದಿಗೆ ಎಲ್ಲವನ್ನೂ ತಾಳಿದರು. ಶತ್ರುಗಳನ್ನು ತೃಪ್ತಿಪಡಿಸುವಂತಹ ಒಂದು ಮಾತನ್ನೂ ಅವರ ಬಾಯಿಂದ ಹೊರಬರಲಿಲ್ಲ.
ಹಿಂಸೆಗೆ ಒಳಗಾಗುತ್ತಿದ್ದವರ ಸ್ಥಿತಿಯನ್ನು ಕಂಡು ಪ್ರವಾದಿಯವರಿಗೆ ಅಪಾರ ದುಃಖವಾಗುತ್ತಿತ್ತು. ಆದರೆ ಆ ಸಂದರ್ಭದಲ್ಲಿ ಅವರು ಅಸಹಾಯಕರಾಗಿದ್ದು, ಅವರ ಪರವಾಗಿ ಮಾಡಲು ಸಾಧ್ಯವಾಗಿದ್ದು ಅಲ್ಲಾಹನಿಗೆ ಪ್ರಾರ್ಥಿಸುವುದಷ್ಟೇ.
ಒಂದು ದಿನ, ಕೆಂಪಾಗುವವರೆಗೆ ಬಿಸಿ ಮಾಡಿದ ಕಬ್ಬಿಣವನ್ನು ಖಬ್ಬಾಬ್ ಅವರ ತಲೆಯ ಮೇಲೆ ಇಟ್ಟಿದ್ದ ಸ್ಥಿತಿಯಲ್ಲಿ ಪ್ರವಾದಿಯವರು ಅವರನ್ನು ಕಂಡರು. ಆ ದೃಶ್ಯವನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ತಮ್ಮ ಎರಡೂ ಕೈಗಳನ್ನು ಆಕಾಶದತ್ತ ಎತ್ತಿ ಹೀಗೆ ಪ್ರಾರ್ಥಿಸಿದರು:
“ಓ ಅಲ್ಲಾಹ್! ಖಬ್ಬಾಬ್ ಅವರಿಗೆ ನೆರವಾಗು.”
ಕೆಲವು ದಿನಗಳ ಬಳಿಕ, ಖಬ್ಬಾಬ್ ಅವರನ್ನು ಹಿಂಸಿಸಿದ ದಂಡನೆಯಂತೆ ಉಮ್ಮು ಅಮ್ಮಾರಿಗೆ ವಿಚಿತ್ರವಾದ ಒಂದು ರೋಗ ಬಂತು. ತೀವ್ರ ವೇದನೆಯಿಂದ ಬಳಲುತ್ತಾ ಅವಳು ನಾಯಿಯಂತೆ ಕೂಗತೊಡಗಿದಳು. ಆ ರೋಗಕ್ಕೆ ಚಿಕಿತ್ಸೆ ನೀಡಿದ ವೈದ್ಯರು, ಕೆಂಪಾಗುವವರೆಗೆ ಬಿಸಿ ಮಾಡಿದ ಕಬ್ಬಿಣವನ್ನು ಅವಳ ತಲೆಯ ಮೇಲೆ ಇಡುವುದನ್ನು ಹೊರತುಪಡಿಸಿ ಬೇರೆ ಚಿಕಿತ್ಸೆ ಇಲ್ಲ ಎಂದು ಹೇಳಿದರು. ಬೇರೆ ದಾರಿಯಿಲ್ಲದೆ ಉಮ್ಮು ಅಮ್ಮಾರ್ ಅದನ್ನೇ ಅನುಸರಿಸಬೇಕಾಯಿತು. ಖಬ್ಬಾಬ್ ಅವರಿಗೆ ಅವಳು ನೀಡಿದ್ದ ಅದೇ ರೀತಿಯ ಶಿಕ್ಷೆಯನ್ನು ಅಲ್ಲಾಹನು ಅವಳ ಮೇಲೆಯೂ ಸಂಭವಿಸುವಂತೆ ಮಾಡಿದನು.
ಇಸ್ಲಾಂನ ಆರಂಭಿಕ ದಿನಗಳಲ್ಲಿ ಮುಸ್ಲಿಮರು ತಮ್ಮ ದಅ್ವತ್ (ಪ್ರಬೋಧನ) ಕಾರ್ಯಗಳನ್ನೂ ಆರಾಧನಾ ವಿಧಿಗಳನ್ನೂ ರಹಸ್ಯವಾಗಿ ನಡೆಸುತ್ತಿದ್ದರು. ಖಬ್ಬಾಬ್ ಅವರು ತಮ್ಮ ಧಾರ್ಮಿಕ ಸೇವೆಯನ್ನು ಕೇವಲ ಆರಾಧನೆಗೆ ಮಾತ್ರ ಸೀಮಿತಗೊಳಿಸಲಿಲ್ಲ. ಅವರು ಕುರ್‌ಆನ್ ಅಧ್ಯಯನಕ್ಕೂ ವಿಶೇಷ ಸಮಯ ಮೀಸಲಿಟ್ಟರು. ಕುರ್‌ಆನ್ ಪಠಣದಲ್ಲೂ ಅದನ್ನು ಕಂಠಪಾಠ ಮಾಡಿಕೊಳ್ಳುವುದಲ್ಲೂ ಅವರು ಅಪಾರ ಉತ್ಸಾಹ ತೋರಿದರು.
ಕುರ್‌ಆನ್ ಪಠಣದಲ್ಲಿ ಸಂದೇಹ ಉಂಟಾದಾಗ, ಅಬ್ದುಲ್ಲಾಹ್ ಇಬ್ನು ಮಸ್‌ಊದ್ ಅವರೂ ಸಹ ಖಬ್ಬಾಬ್ ಅವರನ್ನು ಆಶ್ರಯಿಸುತ್ತಿದ್ದರು. “ಕುರ್‌ಆನ್ ಅವತರಿಸಿದ ರೀತಿಯಲ್ಲೇ ಅದನ್ನು ಪಠಿಸಲು ಬಯಸುವವರು ಅಬ್ದುಲ್ಲಾಹ್ ಇಬ್ನು ಮಸ್‌ಊದ್ ಅವರ ಪಠಣವನ್ನು ಅನುಸರಿಸಲಿ” ಎಂದು ಪ್ರವಾದಿಯವರೇ ಪ್ರಶಂಸಿಸಿದ್ದ ಮಹಾನ್ ಸಹಾಬಿ ಅವರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ಉಮರ್ ಇಬ್ನುಲ್ ಖತ್ತಾಬ್ ಅವರ ಸಹೋದರಿ ಫಾತಿಮಾ ಹಾಗೂ ಅವರ ಪತಿ ಸಈದ್ ಇಬ್ನು ಝೈದ್ ಅವರಿಗೆ ಕುರ್‌ಆನ್ ಕಲಿಸಿದವರೂ ಖಬ್ಬಾಬ್ ಅವರೇ.
ಪ್ರವಾದಿ ಮುಹಮ್ಮದ್ ﷺ ಅವರನ್ನು ಹತ್ಯೆ ಮಾಡಲು ಉಮರ್ ಹೊರಟ ಪ್ರಸಿದ್ಧ ಘಟನೆಯು ನಮಗೆ ತಿಳಿದಿದೆ. ದಾರಿಯಲ್ಲಿ ತಮ್ಮ ಸಹೋದರಿ ಇಸ್ಲಾಂ ಸ್ವೀಕರಿಸಿದ್ದಾಳೆ ಎಂಬ ಸುದ್ದಿ ತಿಳಿದು, ತೀವ್ರ ಕೋಪದಿಂದ ಅವರು ಫಾತಿಮಾ ಅವರ ಮನೆಗೆ ಬಂದರು. ಆಗ ಖಬ್ಬಾಬ್ ಅವರು ಅಲ್ಲಿಯೇ ಇದ್ದರು. ಕುರ್‌ಆನ್ ಬೋಧಿಸಲು ಅವರು ತಂದಿದ್ದ ಬರಹವಿದ್ದ ಹಾಳೆಯನ್ನು ಉಮರ್ ಅಲ್ಲಿ ಕಂಡರು. ಕೊನೆಯಲ್ಲಿ ಅದೇ ಹಾಳೆ ಅವರ ಇಸ್ಲಾಂ ಸ್ವೀಕಾರಕ್ಕೆ ಕಾರಣವಾಯಿತು.
“ಮುಹಮ್ಮದ್ ಎಲ್ಲಿದ್ದಾರೆ?” ಎಂದು ಉಮರ್ ತಮ್ಮ ಸಹೋದರಿಯನ್ನು ಕೇಳಿದಾಗ, ಅಡಗಿ ನಿಂತಿದ್ದ ಖಬ್ಬಾಬ್ ಮುಂದೆ ಬಂದು, ಪ್ರವಾದಿಯವರು ಉಮರ್‌ಗಾಗಿ ಮಾಡಿದ ಈ ಪ್ರಾರ್ಥನೆಯನ್ನು ತಿಳಿಸಿದರು:
“ಓ ಅಲ್ಲಾಹ್! ಉಮರ್ ಇಬ್ನುಲ್ ಖತ್ತಾಬ್ ಅಥವಾ ಅಬುಲ್ ಹಕಮ್ ಇಬ್ನು ಹಿಶಾಮ್—ಈ ಇಬ್ಬರಲ್ಲಿ ನಿನಗೆ ಹೆಚ್ಚು ಪ್ರಿಯನಾದವನ ಮೂಲಕ ಇಸ್ಲಾಂಗೆ ಬಲ ನೀಡು.”
ಆ ಸಮಯದಲ್ಲಿ ಖಬ್ಬಾಬ್ ಅವರು ತೋರಿದ ಜಾಣ್ಮೆಯೂ ಧೈರ್ಯವೂ ಉಮರ್ ಅವರಲ್ಲಿ ಪ್ರವಾದಿಯವರನ್ನು ತಕ್ಷಣವೇ ಭೇಟಿ ಮಾಡುವ ಆಸೆಯನ್ನು ಇನ್ನಷ್ಟು ಹೆಚ್ಚಿಸಿತು. “ಪ್ರವಾದಿಯವರನ್ನು ಎಲ್ಲಿ ಭೇಟಿ ಮಾಡಬಹುದು?” ಎಂದು ಉಮರ್ ಕೇಳಿದಾಗ, ಖಬ್ಬಾಬ್ ಅವರು ಅವರನ್ನು ದಾರುಲ್ ಅರ್‌ಖಮ್ ಕಡೆಗೆ ಮಾರ್ಗದರ್ಶನ ಮಾಡಿದರು.ಪ್ರವಾದಿ ಮುಹಮ್ಮದ್ ﷺ ಅವರೊಂದಿಗೆ ನಡೆದ ಎಲ್ಲಾ ಯುದ್ಧಗಳಲ್ಲಿಯೂ ಖಬ್ಬಾಬ್ ಅವರು ಭಾಗವಹಿಸಿದರು. ತಮ್ಮ ಜೀವನದುದ್ದಕ್ಕೂ ಅವರು ಪ್ರವಾದಿಯವರ ಮೇಲಿನ ಅಪಾರ ಪ್ರೀತಿಯಲ್ಲೂ ಅಲ್ಲಾಹನ ಮೇಲಿನ ಅಚಲ ವಿಶ್ವಾಸದಲ್ಲೂ ಸ್ಥಿರರಾಗಿದ್ದರು.
ಉಮರ್ ಮತ್ತು ಉಸ್ಮಾನ್ (ರ.ಅ.) ಅವರ ಖಿಲಾಫತ್ ಅವಧಿಯಲ್ಲಿ ಬೈತುಲ್‌ಮಾಲ್ (ಸಾರ್ವಜನಿಕ ಖಜಾನೆ) ಅಪಾರ ಸಂಪತ್ತಿನಿಂದ ತುಂಬಿತ್ತು. ಆರಂಭಿಕ ಮುಸ್ಲಿಮರಿಗೆ ಖಲೀಫರು ಅಲ್ಲಿಂದ ನಿಗದಿತ ಪಾಲನ್ನು ನೀಡುತ್ತಿದ್ದರು. ಅವರಲ್ಲಿ ಖಬ್ಬಾಬ್ ಅವರಿಗೆ ಅತಿ ಹೆಚ್ಚಿನ ಪಾಲು ದೊರಕುತ್ತಿತ್ತು. ಇಸ್ಲಾಂನ ಬೆಳವಣಿಗೆಗಾಗಿ ಆರಂಭಿಕ ದಿನಗಳಲ್ಲಿ ತಮ್ಮ ರಕ್ತವನ್ನೂ ಮಾಂಸವನ್ನೂ ಅರ್ಪಿಸಿದ ಮೊದಲಿನ ವಿಶ್ವಾಸಿಗಳನ್ನು ಗೌರವಿಸಿ, ಅವರ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ಆರ್ಥಿಕ ನೆರವನ್ನು ನೀಡಲಾಗುತ್ತಿತ್ತು.
ಆ ಹಣದಿಂದ ಖಬ್ಬಾಬ್ ಅವರು ಕೂಫಾದಲ್ಲಿ ಒಂದು ಮನೆ ಕಟ್ಟಿದರು. ಅವರಿಗೆ ಸಿಗುತ್ತಿದ್ದ ಹಣವನ್ನು ಮನೆಯ ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡುತ್ತಿದ್ದರು. ಅವರ ಸ್ನೇಹಿತರು ಅಥವಾ ಸಹಚರರಲ್ಲಿ ಯಾರಿಗಾದರೂ ಅಗತ್ಯವಿದ್ದರೆ, ಆ ಹಣದಿಂದ ಬೇಕಾದಷ್ಟು ತೆಗೆದುಕೊಂಡು ಬಳಸಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ತಮ್ಮ ಅಗತ್ಯಕ್ಕೆ ಬೇಕಾದಷ್ಟು ಮಾತ್ರ ತೆಗೆದುಕೊಂಡು, ಉಳಿದುದನ್ನೆಲ್ಲ ದಾನ ಮಾಡುವ ಉದಾರ ಗುಣ ಅವರದ್ದಾಗಿತ್ತು. ಪ್ರವಾದಿಯವರಿಂದ ನೇರವಾಗಿ ಶಿಕ್ಷಣ ಪಡೆದವರಲ್ಲಿ ಇಂತಹ ಗುಣಗಳಿರುವುದು ಆಶ್ಚರ್ಯದ ವಿಷಯವೇ ಅಲ್ಲ.
ಪ್ರವಾದಿಯವರನ್ನು ನೆನಪಿಸಿಕೊಂಡಾಗಲೆಲ್ಲ ಖಬ್ಬಾಬ್ ಅವರ ಕಣ್ಣುಗಳು ಕಣ್ಣೀರಿನಿಂದ ತುಂಬುತ್ತಿದ್ದರು. ಜೀವನದ ಕೊನೆಯ ದಿನಗಳಲ್ಲಿ ಅವರು ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದಾಗ, ಕೆಲವರು ಅವರಿಗೆ ಹೀಗೆ ಹೇಳಿದರು:
“ಸಂತೋಷಪಡಿರಿ. ನೀವು ಈಗ ನಿಮ್ಮ ಸಹೋದರರ ಬಳಿಗೆ ತೆರಳುತ್ತಿದ್ದೀರಿ.”
ಅದನ್ನು ಕೇಳಿ ಅವರು ಕಣ್ಣೀರಿಡುತ್ತಾ ಉತ್ತರಿಸಿದರು:
“ನನಗೆ ಮರಣದ ಭಯವಿಲ್ಲ. ಆದರೆ ನೀವು ನನಗೆ ಒಂದು ಜನರ ಗುಂಪನ್ನು ನೆನಪಿಸಿದಿರಿ. ಅವರು ಈ ಲೋಕದಿಂದ ಯಾವುದನ್ನೂ ಸಂಪಾದಿಸದೆ, ತಮ್ಮ ಪ್ರತಿಫಲವನ್ನೆಲ್ಲ ಅಲ್ಲಾಹನ ಬಳಿ ಉಳಿಸಿಕೊಂಡೇ ಪರಲೋಕಕ್ಕೆ ತೆರಳಿದರು. ಅವರ ನಂತರ ನಾವು ಇಲ್ಲಿ ಉಳಿದು, ಅವರಿಗೆ ಸಿಗದ ಅನೇಕ ಐಶ್ವರ್ಯಗಳು ನಮಗೆ ದೊರಕಿವೆ.”
ನಂತರ ಅವರು ತಮ್ಮ ಹಣವನ್ನು ಇಡುತ್ತಿದ್ದ ಸ್ಥಳದತ್ತ ಬೆರಳು ತೋರಿಸಿ ಹೇಳಿದರು:
“ಅಲ್ಲಾಹನ ಮೇಲೆ ಪ್ರಮಾಣ! ನನ್ನ ಸಂಪತ್ತನ್ನು ನಾನು ಒಂದು ನೂಲಿನಿಂದಲೂ ಕಟ್ಟಿಹಾಕಿ ಇಟ್ಟಿಲ್ಲ. ನನ್ನ ಬಳಿ ಕೇಳಿಕೊಂಡು ಬಂದವರಿಗೆ ಅದರಿಂದ ಕೊಡದೆ ನಾನು ಎಂದಿಗೂ ಹಿಂದಿರುಗಿಸಿಲ್ಲ.”
ಇದನ್ನು ಹೇಳಿದ ಬಳಿಕ, ತಮ್ಮಿಗಾಗಿ ಸಿದ್ಧಪಡಿಸಿ ಇಟ್ಟಿದ್ದ ಕಫನ್ ಬಟ್ಟೆಯ ಕಡೆಗೆ ಅವರು ನೋಡಿದರು. ಖಬ್ಬಾಬ್ ಅವರಿಗೆ ಅದೂ ಸಹ ತಮ್ಮ ಜೀವನದ ಸರಳತೆಗೆ ಹೋಲಿಸಿದರೆ ಒಂದು ರೀತಿಯ ಅತಿರೇಕ ಎಂದು ಭಾಸವಾಯಿತು.
ಅವರ ಕಣ್ಣಿನಿಂದ ಧಾರಾಳವಾಗಿ ಕಣ್ಣೀರು ಹರಿಯತೊಡಗಿತು. ಭಾವುಕರಾಗಿ ಅವರು ಹೇಳಿದರು:
“ಪ್ರವಾದಿಯವರ ಚಿಕ್ಕಪ್ಪ ಹಂಝಾ (ರ.ಅ.) ಶಹೀದರಾದಾಗ, ಅವರನ್ನು ಕಫನ್ ಮಾಡಲು ಬೇಕಾದಷ್ಟು ಬಟ್ಟೆಯೂ ಮುಸ್ಲಿಮರ ಬಳಿ ಇರಲಿಲ್ಲ. ತಲೆಯನ್ನು ಮುಚ್ಚಿದರೆ ಕಾಲುಗಳು ಕಾಣಿಸುತ್ತಿದ್ದವು; ಕಾಲುಗಳನ್ನು ಮುಚ್ಚಿದರೆ ತಲೆ ಹೊರಗೆ ಕಾಣಿಸುತ್ತಿತ್ತು.”
ಹಿಜ್ರಿ 37ನೇ ವರ್ಷದಲ್ಲಿ ಖಬ್ಬಾಬ್ (ರ.ಅ.) ಅವರು ಅಲ್ಲಾಹನ ಸನ್ನಿಧಿಗೆ ಮರಳಿದರು.
ಸಿಫ್ಫೀನ್ ಯುದ್ಧದ ನಂತರ ಹಿಂದಿರುಗುತ್ತಿದ್ದ ವೇಳೆ ಅಲಿ (ರ.ಅ.) ಅವರಿಗೆ ಒಂದು ಸಮಾಧಿ ಕಾಣಿಸಿತು. ತಮ್ಮ ಜೊತೆಯಲ್ಲಿದ್ದವರನ್ನು ಅವರು ಕೇಳಿದರು:
“ಇದು ಯಾರ ಸಮಾಧಿ?”
ಅವರು ಉತ್ತರಿಸಿದರು:
“ಇದು ಖಬ್ಬಾಬ್ (ರ.ಅ.) ಅವರ ಸಮಾಧಿ.”
ಖಬ್ಬಾಬ್ ಅವರ ಮೇಲಿದ್ದ ಅಪಾರ ಗೌರವದಿಂದ ಅಲಿ (ರ.ಅ.) ಅವರ ಹೃದಯ ತುಂಬಿಬಂತು. ಕಣ್ಣೀರಿಡುತ್ತಾ ತಮ್ಮ ಸುತ್ತಲಿದ್ದವರತ್ತ ಮುಖ ಮಾಡಿ ಅವರು ಹೀಗೆ ಹೇಳಿದರು:
“ಅಲ್ಲಾಹ್ ಖಬ್ಬಾಬ್ ಅವರ ಮೇಲೆ ತನ್ನ ಅಪಾರ ಕರುಣೆಯನ್ನು ಸುರಿಸಲಿ.
ಅವರು ಅಪಾರ ಉತ್ಸಾಹದಿಂದ ಇಸ್ಲಾಂ ಸ್ವೀಕರಿಸಿದರು.
ಸಂಪೂರ್ಣ ವಿಧೇಯತೆಯಿಂದ ಮಕ್ಕಾದಿಂದ ಮದೀನಾಕ್ಕೆ ಹಿಜ್ರತ್ ಮಾಡಿದರು.
ಶ್ರೇಷ್ಠ ಮುಜಾಹಿದ್ (ಯೋಧ) ಆಗಿ ತಮ್ಮ ಜೀವನವನ್ನು ಕಳೆದರು.”