ಅಲ್ಲಾಹನ ಹೆಸರುಗಳ ಜೋಡಿಗಳ ಹಿಂದಿನ ದೈವಿಕ ಬುದ್ಧಿವಂತಿಕೆ –  ಖುರ್-ಆನ್ ನಲ್ಲಿನ ಗಮನಾರ್ಹ ಅರ್ಥಗಳು

Unais Kooduraste

ಪ್ರವಾದಿ ಮುಹಮ್ಮದ್ ﷺ ಅವರು ಅಲ್ಲಾಹನ 99 ಹೆಸರುಗಳ ವಿವರಿಸುವ ಹದೀಸಿನಲ್ಲಿ ಹೇಳಿದರು: “ಅಲ್ಲಾಹನಿಗೆ 99 ಹೆಸರುಗಳಿವೆ. ಯಾರು ಅದನ್ನು ಕಾಪಾಡುತ್ತಾರೋ ಅವರಿಗೆ ಸ್ವರ್ಗ ನಿಶ್ಚಿತ.” (ಬುಖಾರಿ ಮತ್ತು ಮುಸ್ಲಿಂ). ಇಲ್ಲಿ “ಕಾಪಾಡುವುದು” ಎಂದರೆ ಕೇವಲ ಕಂಠಪಾಠ ಮಾಡುವುದಲ್ಲ, ಆ ಹೆಸರುಗಳ ಅರ್ಥವನ್ನು ಮನಗೊಂಡು, ಜೀವನದಲ್ಲಿ ಅನುಸರಿಸಿ, ಅವುಗಳ ಮೂಲಕ ದುಆ ಮಾಡುವುದಾಗಿದೆ. ಕುರ್‌ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ: “ಅಲ್ಲಾಹನಿಗೆ ಅತ್ಯುತ್ತಮ ಹೆಸರುಗಳಿವೆ. ಆ ನಾಮದಿಂದ ನೀವು ಅಲ್ಲಾಹನನ್ನು ಕರೆಯಿರಿ ಅಥವಾ ಪ್ರಾರ್ಥಿಸಿರಿ.” (ಸೂರತುಲ್ ಅಅ್‌ರಾಫ್ 7:180). ಅಲ್ಲಾಹನ ಹೆಸರುಗಳನ್ನು ಅರ್ಥೈಸಿಕೊಳ್ಳುವುದು ಅವನ ಅಪಾರ ಕರುಣೆಯನ್ನು ಮನಗೊಳ್ಳುವಂತೆ ಮಾಡುತ್ತದೆ.

ಪಂಡಿತ ಅಲ್-ರಾಝಿ ಅವರ ಪ್ರಕಾರ, ಅಲ್ಲಾಹನ ಹೆಸರುಗಳ ಅರ್ಥವನ್ನು ತಿಳಿದಾಗ ಮಾತ್ರ ನಿಜವಾದ ದುಆ ಸಾಧ್ಯ. ಪ್ರತಿಯೊಂದು ಹೆಸರುಗಳು ವಿಭಿನ್ನ ಅರ್ಥಗಳನ್ನು ಹೊಂದಿದ್ದು, ಅದು ನಮಗೆ ಅಲ್ಲಾಹನೊಂದಿಗೆ ನಿಕಟ ಸಂಬಂಧ ಬೆಳೆಸಲು ಸಹಾಯಕ. ನಮ್ಮ ಜೀವನದಲ್ಲಿ ಹಲವಾರು ರೀತಿಯ ಸಂದರ್ಭಗಳನ್ನು ಬೇರೆಬೇರೆ ಆಗಿರುವುದರಿಂದ, ಈ ಹೆಸರುಗಳು ಪ್ರತಿಯೊಂದು ಸಂದರ್ಭದಲ್ಲೂ ಅಲ್ಲಾಹನತ್ತ ಹತ್ತಿರವಾಗಲು ದಾರಿ ತೋರಿಸುತ್ತವೆ.

ಆದರೆ, ಅಲ್ಲಾಹನ ಹೆಸರುಗಳನ್ನು ಅರ್ಥಮಾಡಿಕೊಳ್ಳುವುದು ಕೇವಲ ಪದಗಳ ಅರ್ಥ ತಿಳಿದುಕೊಳ್ಳುವುದಲ್ಲ. ಖುರ್‌-ಆನ್‌ನ ಆಯಾತುಗಳು ಮತ್ತು ಪ್ರವಾದಿ ﷺ ಅವರ ನಿಜವಾದ ಹದೀಸ್‌ಗಳ ಮೂಲಕ ಅವನ್ನು ಅನುಭವಿಸಬೇಕು. ಇಮಾಮ್ ಅಲ್-ಗಝಾಲಿ (ರ) ಹೇಳುವಂತೆ, ಅಲ್ಲಾಹನ ಗುಣಗಳನ್ನು ಕೇವಲ ಕಲಿಯುವುದಲ್ಲ. ಅವುಗಳನ್ನು ಜೀವನದಲ್ಲಿ ಅನುಭವಿಸುವಂತೆ ಅರಿತುಕೊಳ್ಳಬೇಕು.

“ಅಲ್-ಕುದ್ದೂಸ್” ಎಂದರೆ “ಪವಿತ್ರನು”. ಅಂದರೆ ನ್ಯೂನತೆಗಳಿಂದ ಮುಕ್ತನು. “ಅಲ್-ಗಫೂರ್” (ಬಹಳ ಕ್ಷಮಿಸುವವನು) ಮತ್ತು “ಅರ್-ರಹೀಮ್” (ಅತ್ಯಂತ ದಯಾಳು) ಇಂತಹ ಹೆಸರುಗಳು ಅವನ ನ್ಯಾಯ ಮತ್ತು ಕರುಣೆಯನ್ನು ಆಳವಾಗಿ ಸೂಚಿಸುತ್ತದೆ. “ಅಲ್-ಅಝೀಝ್” (ಪರಾಕ್ರಮಶಾಲಿ) ಮತ್ತು “ಅಲ್-ಹಕೀಮ್” (ಜ್ಞಾನಪೂರ್ಣವಾಗಿ ತೀರ್ಮಾನ ಮಾಡುವವನು) ಜೊತೆಜೊತೆಯಾಗಿ ಬರುತ್ತದೆ. ಆದುದರಿಂದ ಅಲ್ಲಾಹನ ಶಕ್ತಿ ಯಾವಾಗಲೂ ಸಂಪೂರ್ಣ ಜ್ಞಾನದಿಂದ ಬಳಕೆಯಾಗುತ್ತದೆ ಎಂಬುವುದು ತಿಳಿಯುತ್ತದೆ.“ಅಲ್-ಅಝೀಜ್” “ಅರ್-ರಹೀಮ್” ಜೊತೆ ಬಂದಾಗ, ಅವನು ಅವನಿಗೆ ಅವಿಧೇಯರಾಗುವವರ ಮೇಲೂ ಕರುಣೆ ತೋರಿಸುತ್ತಾನೆ ಎಂಬ ಭರವಸೆ ಕೊಡುತ್ತದೆ.

“ಅಶ್ಶಕೂರ್” ಎಂದರೆ “ಒಳ್ಳೆಯ ಕಾರ್ಯಗಳಿಗೆ ಮೌಲ್ಯ ಕಲ್ಪಿಸುವವನು”. ನಾವು ಮಾಡುವ ಸಣ್ಣ ಒಳ್ಳೆಯ ಕೆಲಸವನ್ನೂ ಅಲ್ಲಾಹನು ಗಮನಿಸುತ್ತಾನೆ ಮತ್ತು ಅದರ ಪ್ರತಿಫಲವನ್ನು ಹೆಚ್ಚಿಸುತ್ತಾನೆ. ಪ್ರವಾದಿ ﷺ ಹೇಳಿದರು: “ನಿನ್ನ ಸಹೋದರನನ್ನು ನಗುಮುಖದಿಂದ ನೋಡುವ ಈ ಒಳ್ಳೆಯ ಕಾರ್ಯವನ್ನೂ ಕೀಳಾಗಿ ನೋಡಬೇಡ.” (ಮುಸ್ಲಿಂ). ನಾವು ಕಿರಿದಾಗಿ ನೋಡುವ ಕೃತ್ಯಗಳು ಅಲ್ಲಾಹನ ಬಳಿ ಹಿರಿದಾಗಿದೆ.

ಖುರ್‌-ಆನ್‌ನ ಸುಂದರ ಶೈಲಿ ಮತ್ತು ಪದಗಳ ಹೊಂದಾಣಿಕೆ ಅದರ ಅರ್ಥವನ್ನು ಇನ್ನಷ್ಟು ಆಳವಾಗಿ ವ್ಯಕ್ತಪಡಿಸುತ್ತದೆ. ಸೂರತ್ ಹೂದ್‌ನಲ್ಲಿ ಅವಿಶ್ವಾಸಿಗಳು ಪ್ರವಾದಿ ಶುಐಬ್ (ಅ.ಸ) ಅವರನ್ನು ಅಪಹಾಸ್ಯ ಮಾಡಿದ ವೇಳೆಯಲ್ಲಿ ಆಯತ್ತಿನ ಕೊನೆಯಲ್ಲಿ ಬಂದಿರುವ ಅಲ್ಲಾಹನ ಗುಣಗಳು ಆ ಆಯತ್ತಿಗೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ಇಂತಹ ಉದಾಹರಣೆಗಳು ಕುರ್‌ಆನ್‌ನ ಮಹಿಮೆಯ ಬಗ್ಗೆ ಆಳವಾಗಿ ಯೋಚಿಸಲು ಪ್ರೇರೇಪಿಸುತ್ತವೆ.

“ಅಲ್-ಅಲೀಮ್” (ಎಲ್ಲವನ್ನೂ ತಿಳಿದವನು) ಮತ್ತು “ಅಲ್-ಹಕೀಮ್” ಎಂಬ ಹೆಸರುಗಳು ಅಲ್ಲಾಹನ ಜ್ಞಾನ ಮತ್ತು ತಂತ್ರ ಒಂದಾಗಿ ಇರುವುದನ್ನು ತೋರಿಸುತ್ತವೆ. ಕೆಲವು ಸಂದರ್ಭಗಳಲ್ಲಿ “ಅಲ್-ಹಕೀಮ್ ಅಲ್-ಅಲೀಮ್” ಎಂದು ಬರುತ್ತದೆ. ಇದು ಅಲ್ಲಾಹನ ತೀರ್ಮಾನಗಳಲ್ಲಿರುವ ಆಳವಾದ ಜ್ಞಾನವನ್ನು ಸೂಚಿಸುತ್ತದೆ. ಸೂರ ಅಲ್-ಧಾರಿಯಾತ್‌ನಲ್ಲಿ ದೇವದೂತರು ಪ್ರವಾದಿ ಇಬ್ರಾಹೀಮ್ (ಅ.ಸ) ಅವರಿಗೆ ಮಗುವಿನ ಶುಭವಾರ್ತೆ ನೀಡಿದಾಗ ಈ ಅರ್ಥ ಸ್ಪಷ್ಟವಾಗುತ್ತದೆ.

ಕುರ್‌ಆನಿನಲ್ಲಿ ಕೊನೆಗೆ ಬರುವ ಅಲ್ಲಾಹನ ಹೆಸರುಗಳ ಜೋಡಿಗಳು ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥಮಾಡಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತವೆ. ಸೂರತ್ ಅಲ್-ಹುಜ್ರಾತಿನಲ್ಲಿ ಅನುಮಾನ, ಗೂಢಚರಿ ಮತ್ತು ಬೆನ್ನ ಹಿಂದೆ ಕೆಟ್ಟ ಮಾತು ಮಾತನಾಡುವುದು ನಿಷೇಧಿಸಿದ ನಂತರ, “ಅಲ್ಲಾಹನು ಪಶ್ಚಾತ್ತಾಪಗಳನ್ನು ಸ್ವೀಕರಿಸುವವನು ಮತ್ತು ಅತ್ಯಂತ ಕರುಣಾಳು” ಎಂದು ಹೇಳಲಾಗಿದೆ (49:12). ಅಲ್ಲಾಹನು ಒಂದಿಷ್ಟು ಚಟುವಟಿಕೆಗಳನ್ನು ನಿಭಂಧಿಸಿದ ನಂತರವೂ ಆ ಪಾಪ ಕೃತ್ಯಗಳನ್ನು ಎಸಗಿದವರಿಗೆ ಪಶ್ಚಾತಾಪವಿದೆ ಎಂದು ಹೇಳಲಾಗಿದೆ, ಇದರಿಂದ ಅಲ್ಲಾಹನು ಎಷ್ಟು ದೊಡ್ಡ ಕರುಣಾನಿಧಿ ಎಂಬುವುದಕ್ಕೆ ನಿದರ್ಶನವಾಗಿದೆ . 

“ಅಲ್-ಅಲೀಮ್” ಮತ್ತು “ಅಲ್-ಖಬೀರ್” ಎಂಬ ಹೆಸರುಗಳು ಅಲ್ಲಾಹ ನಮ್ಮ ಒಳಗಿನ ಮತ್ತು ಹೊರಗಿನ ಸ್ಥಿತಿಗಳನ್ನು ಎಲ್ಲ ತಿಳಿದಿರುವವನಾಗಿದ್ದಾನೆ ಎಂಬುದನ್ನು ತೋರಿಸುತ್ತವೆ. ನಿಜವಾದ ಗೌರವವು ತಕ್ವಾ (ಅಲ್ಲಾಹನೊಂದಿಗಿರುವ ಭಯ ಮತ್ತು ದೈವಭಕ್ತಿ) ಯಲ್ಲಿದೆ ಎಂಬುದನ್ನು ನೆನಪಿಸುತ್ತವೆ. ಆದ್ದರಿಂದ, ನಮ್ಮ ವಿಶ್ವಾಸದ ಪ್ರಮಾಣದಲ್ಲಿ  ಕೊರತೆಗಳಿದ್ದರೂ, ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳು ಎಂಬುದನ್ನು ಖುರ್‌-ಆನ್ ಹಲವಾರು ಬಾರಿ ಹೇಳುತ್ತದೆ. 

ಖುರ್‌-ಆನ್‌ನಲ್ಲಿ ಅಲ್ಲಾಹನ ಹೆಸರುಗಳ ಈ ಜೋಡಿಗಳನ್ನು ಚಿಂತಿಸುವುದರಿಂದ ಅವುಗಳ ಸೂಕ್ಷ್ಮ ಅರ್ಥಗಳನ್ನು ನಾವು ಅರಿಯಬಹುದು. ಹೆಸರುಗಳ ಕ್ರಮವೇ ಅಲ್ಲಾಹನ ಗುಣಗಳ ಆಳವನ್ನು ತೋರಿಸುತ್ತದೆ ಮತ್ತು ಜೀವನದ ಪ್ರತಿಯೊಂದು ವಿಷಯದಲ್ಲೂ ಅವನ ಮಾರ್ಗದರ್ಶನ ಮತ್ತು ಕಾಳಜಿಯ ಭರವಸೆಯನ್ನು ನೀಡುತ್ತದೆ. ಆದ್ದರಿಂದ, ವಿಶ್ವಾಸಿಗಳಾದ ನಾವು ಈ ಹೆಸರುಗಳ ಬಗ್ಗೆ ಸದಾ ಚಿಂತಿಸಬೇಕು. ಕುರ್‌ಆನ್‌ ಪಾರಾಯಣದ ವೇಳೆ ಅವುಗಳನ್ನು ಅರ್ಥಮಾಡಿಕೊಂಡು, ಅಲ್ಲಾಹನೊಂದಿಗೆ ನಮ್ಮ ಸಂಬಂಧವನ್ನು ಹೆಚ್ಚಿಸಬೇಕು. ಈ ಚಿಂತನೆಗಳಿಂದ ನಮ್ಮ ಹೃದಯಗಳನ್ನು ಕುರ್‌ಆನ್‌ನ ದೈವಿಕ ಮಾರ್ಗದರ್ಶನದತ್ತ ತೆರೆದು, ಅಲ್ಲಾಹನತ್ತ ಇನ್ನಷ್ಟು ಹತ್ತಿರವಾಗುವ ದಾರಿಯಲ್ಲಿ ಸಾಗಲು ಸಹಾಯ ಮಾಡುತ್ತದೆ.

Related Posts

Leave A Comment

Voting Poll

Get Newsletter