ಖುರ್-ಆನ್ ನಲ್ಲಿ ಜೀವವೈವಿಧ್ಯತೆ: ವೈಜ್ಞಾನಿಕ ಮತ್ತು ಖುರ್-ಆನ್ ಒಳನೋಟಗಳು
ಜೀವವೈವಿಧ್ಯತೆಯು ಭೂಮಿಯ ಮೇಲಿನ ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮಾಣು ಜೀವಿಗಳು ಮತ್ತು ಅವುಗಳನ್ನು ಉಳಿಸುವ ಪರಿಸರ ವ್ಯವಸ್ಥೆಗಳು ಸೇರಿದಂತೆ ಎಲ್ಲಾ ಜೀವರೂಪಗಳ ಸಮೃದ್ಧಿ ಮತ್ತು ವೈವಿಧ್ಯತೆಯನ್ನು ಒಳಗೊಂಡಿರುತ್ತದೆ. ಇದು 3.5 ಬಿಲಿಯನ್ ವರ್ಷಗಳಿಗಿಂತಲೂ ಹೆಚ್ಚಿನ ವಿಕಾಸ ಮತ್ತು ರೂಪಾಂತರದ ಫಲವಾಗಿದೆ. ವೈಜ್ಞಾನಿಕವಾಗಿ, ಜೀವವೈವಿಧ್ಯತೆಯು ಪರಿಸರ ವ್ಯವಸ್ಥೆಯ ಸ್ಥಿರತೆ ಮತ್ತು ಪ್ರಕೃತಿಯ ಸಮತೋಲನವನ್ನು ಕಾಪಾಡುವ ಮೂಲಕ ಪ್ರಭೇದಗಳ ನಡುವಿನ ಸಂಕೀರ್ಣ ಹಾಗೂ ಪರಸ್ಪರ ಅವಲಂಬನೆಯನ್ನು ಪ್ರತಿನಿಧಿಸುತ್ತದೆ.
ಇಸ್ಲಾಮಿಕ್ ದೃಷ್ಟಿಕೋನದಿಂದ, ಜೀವವೈವಿಧ್ಯತೆಯು ಕೇವಲ ಅಭಿವೃದ್ದಿ ಅಥವಾ ನೈಸರ್ಗಿಕ ಆಯ್ಕೆಯ ನಿರೀಕ್ಷಿತವಾದದಲ್ಲ. ಆದರೆ ಆಕಸ್ಮಿಕವಾಗಿ ಎರಡು ಘಟನೆಗಳು ಒಂದೇ ಸಮಯದಲ್ಲಿ ನಡೆಯುವುದು ಎಂದಾಗಿದೆ. ಇದು ದೈವಿಕ ಸಂಕಲ್ಪದ ಅಭಿವ್ಯಕ್ತಿ ಮತ್ತು ಬ್ರಹ್ಮಾಂಡದ ತೌಹೀದ್ (ಏಕೀಕೃತ) ವ್ಯವಸ್ಥೆಯ ಪ್ರತಿಬಿಂಬವಾಗಿದೆ. ಸೃಷ್ಟಿಯ ವೈವಿಧ್ಯತೆಯು ಅಲ್ಲಾಹನ ಬುದ್ಧಿವಂತಿಕೆ, ಶಕ್ತಿ ಮತ್ತು ಕರುಣೆಯ ಸಂಕೇತವಾಗಿ (ಆಯತ್) ಪರಿಗಿಸಿರುವುದರಿಂದ ಅದರ ಬಗ್ಗೆ ಯೋಚಿಸಲು ಖುರ್-ಆನ್ ಪದೇ-ಪದೇ ಎಚ್ಚರಿಕೆಯನ್ನು ನೀಡಿರುತ್ತದೆ. ಮಾನವಕುಲವನ್ನು ಆಹ್ವಾನಿಸುತ್ತಿದೆ. ಬಣ್ಣ, ರೂಪ ಮತ್ತು ಜಾತಿಗಳಲ್ಲಿನ ವೈವಿಧ್ಯತೆಯು ಸ್ವ ನಿರ್ಮಿತವಾದುದಲ್ಲ; ಅದು ತನ್ನೆಲ್ಲಾ ವೈವಿಧ್ಯತೆಯೊಂದಿಗೆ ಸೃಷ್ಟಿಕರ್ತನನ್ನು ಸ್ಮರಿಸುತ್ತದೆ ಎಂಬುದಕ್ಕೆ ಇದೊಂದು ಜ್ಞಾಪನೆಯಾಗಿದೆ. ಅಲ್ಲಾಹನು ಖುರ್-ಆನ್ ನಲ್ಲಿ ಹೀಗೆ ಘೋಷಿಸುತ್ತಾನೆ:
أَلَمْ تَرَ أَنَّ اللَّهَ أَنزَلَ مِنَ السَّمَاءِ مَاءً فَأَخْرَجْنَا بِهِ ثَمَرَاتٍ مُّخْتَلِفًا أَلْوَانُهَا ۚ وَمِنَ الْجِبَالِ جُدَدٌ بِيضٌ وَحُمْرٌ مُّخْتَلِفٌ أَلْوَانُهَا .وَغَرَابِيبُ سُود
“ಅಲ್ಲಾಹನು ಆಕಾಶದಿಂದ ಮಳೆಯನ್ನು ಕರುಣಿಸುವುದನ್ನು ನೀವು ನೋಡಿಲ್ಲವೇ? ನಂತರ ನಾವು ಅದರಿಂದಲೇ ವಿವಿಧ ಬೆಳೆ, ಹಣ್ಣು-ಹಂಪಲುಗಳನ್ನು ಉತ್ಪಾದಿಸುತ್ತೇವೆ; ಹಾಗೂ ಪರ್ವತಗಳಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ವಿವಿಧ ನೆರಳು ಹಾಗೂ ಕಡು ಕಪ್ಪು ಬಣ್ಣದ ಗೆರೆಗಳು ಇವೆ.” (ಖುರ್-ಆನ್ 35:27)
ಸೂರಾ ಫಾತಿರ್ನ ಈ ವಚನವು ಜೀವನ ಮತ್ತು ಪ್ರಕೃತಿಯ ವೈವಿಧ್ಯತೆಯನ್ನು ಒಂದು ದೈವಿಕ ಕಲಾಕೃತಿಯಂತೆ ಪ್ರಸ್ತುತಪಡಿಸುತ್ತದೆ, ಇಲ್ಲಿ ಪ್ರತಿಯೊಂದು ಬಣ್ಣ, ಪ್ರಭೇದ ಮತ್ತು ರೂಪವು ಸೃಷ್ಟಿಕರ್ತನ ಇಚ್ಛೆಯಂತೆ ರಚಿಸಲಾಗಿದೆ.
ಖುರ್-ಆನ್ ನ ದೃಷ್ಟಿಕೋನ (THE QUR’ANIC PERSPECTIVE)
ದೈವಿಕ ಬುದ್ಧಿವಂತಿಕೆಯ ಸಂಕೇತ (Sign of Divine Wisdom)
ಜೀವವೈವಿಧ್ಯತೆಯು ಸೃಷ್ಟಿಕರ್ತನ ಉದ್ದೇಶಪೂರ್ವಕವಾದ ಕ್ರಿಯೆಯಾಗಿದೆ ಮತ್ತು ಇದು ದೈವಿಕ ಕಲಾತ್ಮಕತೆಯ ಸಂಕೇತವಾಗಿದೆ ಎಂದು ಖುರ್-ಆನ್ ಪದೇ ಪದೇ ಪ್ರತಿಪಾದಿಸುತ್ತದೆ. ಸೂರಾ ಅಲ್-ಅನ್ಆಮ್ ನಲ್ಲಿ ಅಲ್ಲಾಹನು ಹೀಗೆ ಘೋಷಿಸುತ್ತಾನೆ:
"وَمَا مِن دَابَّةٍ فِي الْأَرْضِ وَلَا طَائِرٍ يَطِيرُ بِجَنَاحَيْهِ إِلَّا أُمَمٌ أَمْثَالُكُمْ"
“ಭೂಮಿಯಲ್ಲಿ ಓಡಾಡುವ ಯಾವುದೇ ಪ್ರಾಣಿಯಾಗಲಿ ಅಥವಾ ತನ್ನ ಎರಡು ರೆಕ್ಕೆಗಳಿಂದ ಹಾರುವ ಯಾವುದೇ ಪಕ್ಷಿಯಾಗಲಿ, ಅವು ನಿಮ್ಮಂತೆಯೇ ಜೀವ ಇರುವ ಸೃಷ್ಟಿಗಳಾಗಿವೆ.” (ಖುರ್-ಆನ್ 6:38)
ಈ ವಚನವು ಇಸ್ಲಾಮಿಕ್ ಪರಿಸರ ವಿಜ್ಞಾನದ ಮೂಲಭೂತ ತತ್ವವನ್ನು ವಿವರಿಸುತ್ತದೆ: ಪ್ರತಿಯೊಂದು ಜೀವಿಯೂ ಒಂದು ರಾಷ್ಟ್ರ ಅಥವಾ ಸಮುದಾಯದಂತಿದ್ದು, ತನ್ನದೇ ಆದ ಉದ್ದೇಶ ಮತ್ತು ವ್ಯವಸ್ಥೆಯನ್ನು ಹೊಂದಿದೆ. ಈ ನೈಸರ್ಗಿಕ ಜಗತ್ತು ಕೇವಲ ಮಾನವನ ಅಸ್ತಿತ್ವಕ್ಕೆ ಅಧೀನವಾಗಿರದೆ, ಅದು ದೈವಿಕವಾದ ನಿಯಮದಡಿಯಲ್ಲಿ ಪರಸ್ಪರ ಸಂಬಂಧ ಹೊಂದಿರುವ ಒಂದು ಸಮಗ್ರ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತದೆ.
ಸೃಷ್ಟಿಯಲ್ಲಿ ಸ್ಥಾಪಿಸಲಾದ ಸಮತೋಲನವನ್ನು (ಮೀಝಾನ್) ಕಾಪಾಡಿಕೊಳ್ಳಬೇಕೆಂದು ಅಲ್ಲಾಹನು ಮಾನವಕುಲಕ್ಕೆ ಆಜ್ಞಾಪಿಸುತ್ತಾನೆ:
"وَالسَّمَاءَ رَفَعَهَا وَوَضَعَ الْمِيزَانَ أَلَّا تَطْغَوْا فِي الْمِيزَانِ"
“ಅವನು ಆಕಾಶವನ್ನು ಮೇಲ್ದರ್ಜೆಗೆ ಎರಿಸಿದ್ದು ಸಮತೋಲನವನ್ನು ಸ್ಥಾಪಿಸಿದ್ದಾನೆ; ನೀವು ಆ ಸಮತೋಲನವನ್ನು ಉಲ್ಲಂಘಿಸಬಾರದೆಂದು ಖುರ್-ಆನ್ ನ ಈ ಸೂಕ್ತದಲ್ಲಿ ವರದಿಯಾಗಿದೆ.” (ಖುರ್-ಆನ್ 55:7-8)
ಜೀವವೈವಿಧ್ಯತೆ ಎದಬುವುದು ದೈವಿಕ ಸಮತೋಲನದ ಅಭಿವ್ಯಕ್ತಿಯಾಗಿದೆ. ಅದನ್ನು ಅನ್ಯಾಯವಾಗಿ ನಾಶಪಡಿಸುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದು ಸೃಷ್ಟಿಯ ಸಮತೋಲನವನ್ನು ಕೆಡಿಸಿದಂತೆ—ಇದು ಖುರ್-ಆನ್ ನಿಂದ ಖಂಡಿಸಲ್ಪಟ್ಟ ಕಾರ್ಯವಾಗಿದೆ.
ಜೀವಿಗಳ ಹೆಸರಿನಲ್ಲಿರುವ ಖುರ್-ಆನ್ ನ ಅಧ್ಯಾಯಗಳು (Qur’anic Chapters Named After Living Beings)
ಅಚ್ಚರಿಯ ವಿಷಯ ಏನೆಂದರೆ, ಖುರ್-ಆನ್ ನಲ್ಲಿ ಹಲವಾರು ಸೂರಾಗಳಿವೆ (ಅಧ್ಯಾಯಗಳಿವೆ) ಅದರಲ್ಲಿ ಪ್ರಾಣಿಗಳು ಮತ್ತು ಸಸ್ಯಗಳ ಹೆಸರನ್ನು ಇಡುವ ಮೂಲಕ ಜೀವವೈವಿಧ್ಯತೆಯ ಪ್ರಾಮುಖ್ಯತೆಯನ್ನು ಎತ್ತಿ ಹೇಳುತ್ತದೆ. ಅವುಗಳಲ್ಲಿ: ಅಲ್-ಬಕರ (ಹಸು), ಅಲ್-ಅನ್-ಆಮ್ (ಜಾನುವಾರು), ಅನ್-ನಹ್ಲ್ (ಜೇನುನೊಣ), ಅನ್-ನಮ್ಲ್ (ಇರುವೆ), ಅಲ್-ಅನ್ಕಬೂತ್ (ಜೇಡ), ಅಲ್-ಫೀಲ್ (ಆನೆ), ಮತ್ತು ಅತ್ತೀನ್ (ಅಂಜೂರ). ಈ ರೀತಿ ಹೆಸರಿರುವುದು ಕೇವಲ ಸಾಹಿತ್ಯದ ಶೈಲಿಯದಲ್ಲ; ಬದಲಾಗಿ ಇದು ಖುರ್-ಆನ್ ನ ದೃಷ್ಟಿಕೋನದಲ್ಲಿ ಜೀವಿಗಳೊಂದಿಗಿರುವ ಪವಿತ್ರ ಸ್ಥಾನವನ್ನು ಪ್ರತಿಬಿಂಬಿಸುತ್ತದೆ. ಈ ಪ್ರತಿಯೊಂದು ಸೂರಾಗಳು ಆಯಾ ಪ್ರಭೇದಗಳನ್ನು ನೈತಿಕ ಅಥವಾ ಆಧ್ಯಾತ್ಮಿಕ ಪಾಠಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.
ಉದಾಹರಣೆಗೆ, ಸೂರಾ ಅನ್-ನಹ್ಲ್ (ಜೇನುನೊಣ) ಜೇನುನೊಣವು ದೈವಿಕ ಆಜ್ಞೆಗೆ ತೋರುವ ಸಹಜ ವಿಧೇಯತೆ ಮತ್ತು ಮಾನವ ಕಲ್ಯಾಣಕ್ಕೆ ಅದು ನೀಡುವ ಕೊಡುಗೆಯನ್ನು ಎತ್ತಿ ತೋರಿಸುತ್ತದೆ:
"وَأَوْحَىٰ رَبُّكَ إِلَى النَّحْلِ أَنِ اتَّخِذِي مِنَ الْجِبَالِ بُيُوتًا وَمِنَ الشَّجَرِ وَمِمَّا يَعْرِشُونَ"
“ಲ್ಲಾಹನು ತನ್ನ ವಹಿಯ ಮೂಲಕ ಈ ರೀತಿಯಾಗಿ ಪ್ರೇರೇಪಿಸಿದನು: ‘ಪರ್ವತಗಳಲ್ಲಿ, ಮತ್ತು ಮರಗಳಲ್ಲಿ ನಿಮ್ಮ ಜೇನು ಗೂಡುಗಳನ್ನು ನಿರ್ಮಿಸಿಕೊಳ್ಳಿ.’ (ಖುರ್-ಆನ್ 16:68)
ಮಾನವೇತರ ಜೀವಿಗೂ ದೊರೆತಿರುವ ಈ ದೈವಿಕ ಪ್ರೇರಣೆಯು (ವಹಿ), ಎಲ್ಲಾ ಜೀವರಾಶಿಗಳ ಪವಿತ್ರತೆಯನ್ನು ಮತ್ತು ದೈವಿಕ ವ್ಯವಸ್ಥೆಯಲ್ಲಿ ಅವುಗಳ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
ಜೀವವೈವಿಧ್ಯತೆಯ ವೈಜ್ಞಾನಿಕ ತಿಳುವಳಿಕೆ ಮತ್ತು ಅದರ ವಿಧಗಳು (Scientific Understanding of Biodiversity and Its Types)
ಖುರ್-ಆನ್ ಜೀವವೈವಿಧ್ಯತೆಯ ಧರ್ಮಶಾಸ್ತ್ರ ಮತ್ತು ನೈತಿಕ ಆಯಾಮಗಳಿಗೆ ಒತ್ತು ನೀಡಿದರೆ, ಆಧುನಿಕ ವಿಜ್ಞಾನವು ಇದನ್ನು ಮೂರು ಪ್ರಮುಖ ವಿಧಗಳಾಗಿ ವರ್ಗೀಕರಿಸಿದೆ: ಅನುವಂಶಿಕೆ (Genetic), ಪ್ರಭೇದ (Species) ಮತ್ತು ಪರಿಸರ ವ್ಯವಸ್ಥೆಯ (Ecosystem) ವೈವಿಧ್ಯತೆ ಹೀಗೆ ಪ್ರತಿಯೊಂದು ಹಂತವೂ ಸೃಷ್ಟಿಕರ್ತನ ವಿನ್ಯಾಸದ ವಿಭಿನ್ನ ಆಯಾಮಗಳನ್ನು ಪ್ರತಿಬಿಂಬಿಸುತ್ತದೆ.
ಅನುವಂಶಿಕೆ ವೈವಿಧ್ಯತೆ (Genetic Diversity)
ಅನುವಂಶಿಕೆ ವೈವಿಧ್ಯತೆಯು ಒಂದೇ ಪ್ರಭೇದದೊಳಗೆ ಇರುವ ವಂಶವಾಹಿಗಳ (Genes) ವೈವಿಧ್ಯತೆಯನ್ನು ಸೂಚಿಸುತ್ತದೆ. ಈ ವೈವಿಧ್ಯತೆಯು ಜೀವಿಗಳು ಪರಿಸರದ ನೈಸರ್ಗಿಕ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತಮ್ಮ ತಲೆಮಾರುಗಳವರೆಗೆ ಅವುಗಳ ಅಸ್ತಿತ್ವವನ್ನು ಖಚಿತಪಡಿಸುತ್ತದೆ. ಖುರ್-ಆನ್ ನಲ್ಲಿ ಅಲ್ಲಾಹನು ಪ್ರತಿಯೊಂದು ಜೀವಿಯನ್ನು ಜೋಡಿಯಾಗಿ ಮತ್ತು ವಿಶಿಷ್ಟ ಗುಣಲಕ್ಷಣಗಳೊಂದಿಗೆ ಸೃಷ್ಟಿಸಿದ್ದಾನೆ ಎಂದು ಮಾನವಕುಲಕ್ಕೆ ನೆನಪಿಸುತ್ತಾನೆ:
"وَمِن كُلِّ شَيْءٍ خَلَقْنَا زَوْجَيْنِ لَعَلَّكُمْ تَذَكَّرُونَ"
“ಪ್ರತಿಯೊಂದು ಜೀವಿಯನ್ನು ನಾವು ಜೋಡಿಯಾಗಿ ಸೃಷ್ಟಿಸಿದ್ದೇವೆ; ಬಹುತೇಕವಾದ ನೀವು ಇದರಿಂದ ಪಾಠ ಕಲಿಯಬಹುದು.” (ಖುರ್-ಆನ್ 51:49)
ಈ ಅನುವಂಶಿಕೆ ವೈವಿಧ್ಯತೆಯು ಸುಲಭವಾದದಲ್ಲ; ಇದು ದೈವಿಕ ಉದ್ದೇಶವನ್ನು ಹೊಂದಿದೆ. ಮನುಷ್ಯರು ಭಾಷೆ ಮತ್ತು ಬಣ್ಣಗಳಲ್ಲಿ ಹೇಗೆ ಭಿನ್ನವಾಗಿದ್ದರೂ, ಹಾಗೆಯೇ ಎಲ್ಲಾ ಜೀವಿಗಳು ದೈವಿಕ ಸೃಜನಶೀಲತೆಯ ಸೌಂದರ್ಯವನ್ನು ವ್ಯಕ್ತಪಡಿಸುತ್ತವೆ.
ಪ್ರಭೇದ ವೈವಿಧ್ಯತೆ (Species Diversity)
ಪ್ರಭೇದ ವೈವಿಧ್ಯತೆಯು ಒಂದು ನಿರ್ದಿಷ್ಟ ಆವಾಸಸ್ಥಾನದಲ್ಲಿರುವ ಜೀವಿಗಳ ಸಂಖ್ಯೆಯನ್ನು ಸೂಚಿಸುತ್ತದೆ. ಖುರ್-ಆನ್ ಈ ವೈವಿಧ್ಯತೆಯನ್ನು ಚಿಂತನೆಗೆ ಒಂದು ಕಾರಣವೆಂದು ಗುರುತಿಸುತ್ತದೆ:
"وَمِنَ النَّاسِ وَالدَّوَابِّ وَالْأَنْعَامِ مُخْتَلِفٌ أَلْوَانُهُ كَذَٰلِكَ ۗ إِنَّمَا يَخْشَى اللَّهَ مِنْ عِبَادِهِ الْعُلَمَاءُ"
“ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ಮತ್ತು ಜಾನುವಾರುಗಳಲ್ಲಿ ಸಹ ವಿವಿಧ ಬಣ್ಣಗಳಿವೆ. ಅಲ್ಲಾಹನ ದಾಸರು ತಿಳಿವಳಿಕೆಯುಳ್ಳವರು ಮಾತ್ರ ಅವನಿಗೆ ನಿಜವಾಗಿಯೂ ಭಯಪಡುತ್ತಾರೆ.” (ಖುರ್-ಆನ್ 35:28)
ಈ ವಚನವು ಜೀವವೈವಿಧ್ಯತೆಯ ಜ್ಞಾನ ಮತ್ತು ವಿನಯಕ್ಕೆ ಸುಂದರವಾದ ಉದಾಹರಣೆಯಾಗಿದೆ: ನಿಜವಾದ ವಿದ್ವಾಂಸರು ಸೃಷ್ಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಹಾಗೂ ಪ್ರತಿ ಬಣ್ಣ, ವಿನ್ಯಾಸ ಮತ್ತು ರೂಪದಲ್ಲಿ ದೈವಿಕ ಕೌಶಲ್ಯವನ್ನು ಗುರುತಿಸಿರುತ್ತಾರೆ.
ಪರಿಸರ ವ್ಯವಸ್ಥೆಯ ವೈವಿಧ್ಯತೆ (Ecosystem Diversity)
ಪರಿಸರ ವ್ಯವಸ್ಥೆಯ ವೈವಿಧ್ಯತೆಯು ವಿವಿಧ ಆವಾಸಸ್ಥಾನಗಳು, ಪರಿಸರ ಸಮುದಾಯಗಳು ಮತ್ತು ನೈಸರ್ಗಿಕ ಪ್ರಕ್ರಿಯೆಗಳ ವೈವಿಧ್ಯತೆಯನ್ನು ಸೂಚಿಸುತ್ತದೆ. ಪ್ರತಿಯೊಂದು ಪರಿಸರದ ವ್ಯವಸ್ಥೆಯು—ಮರುಭೂಮಿ, ಅರಣ್ಯ ಅಥವಾ ಸಾಗರವಾಗಿರಲಿ—ಅವು ತನ್ನದೇ ಆದ ಹರಿವು ಮತ್ತು ಉದ್ದೇಶವನ್ನು ಹೊಂದಿದೆ. ಖುರ್-ಆನ್ ಈ ಸಂಕೀರ್ಣತೆಯನ್ನು ಅತ್ಯಂತ ಸರಳವಾಗಿ ಹೀಗೆ ವಿವರಿಸುತ್ತದೆ:
"وَهُوَ الَّذِي أَنشَأَ جَنَّاتٍ مَّعْرُوشَاتٍ وَغَيْرَ مَعْرُوشَاتٍ وَالنَّخْلَ وَالزَّرْعَ مُخْتَلِفًا أُكُلُهُ"
“ಮರವಾಗಿ ಬೆಳೆಯುವ ಮತ್ತು ಬಳ್ಳಿಯಲ್ಲಿ ಬೆಳೆಯುವ ತೋಟಗಳನ್ನು, ವಿವಿಧ ರುಚಿಯ ಹಣ್ಣುಗಳನ್ನು ನೀಡುವ ಖರ್ಜೂರದ ಮರಗಳನ್ನು ಹಾಗೂ ಬೆಳೆಗಳನ್ನು ಸೃಷ್ಟಿಸಿದವನು ಅಲ್ಲಾಹನು.” (ಖುರ್-ಆನ್ 6:141)
ಈ ವ್ಯಾಖ್ಯಾನವು ಕೇವಲ ಪರಿಸರ ವೈವಿಧ್ಯತೆಯನ್ನು ಮಾತ್ರವಲ್ಲದೆ, ಒಂದು ನೈತಿಕ ಆಜ್ಞೆಯನ್ನೂ ಎತ್ತಿ ತೋರಿಸುತ್ತದೆ: “ಅವು ಫಲ ನೀಡಿದಾಗ ಅವುಗಳ ಹಣ್ಣುಗಳನ್ನು ತಿನ್ನಿರಿ ಮತ್ತು ಕೊಯ್ಯುವ ದಿನದಂದು ಅದರ ಹಕ್ಕನ್ನು (ಝಕಾತ್) ನೀಡಿರಿ, ಮತ್ತು ಹಾಳು ಮಾಡಬೇಡಿ. ನಿಶ್ಚಯವಾಗಿಯೂ ಅಲ್ಲಾಹನು ವ್ಯರ್ಥ ಮಾಡುವವರನ್ನು ಇಷ್ಟಪಡುವುದಿಲ್ಲ.” ಇಲ್ಲಿ ಪರಿಸರ ನೈತಿಕತೆ ಮತ್ತು ಆಧ್ಯಾತ್ಮಿಕ ಹೊಣೆಗಾರಿಕೆಗಳು ಮನೋಹರವಾಗಿ ವ್ಯಾಖ್ಯಾನ ಮಾಡಲಾಗಿದೆ.
ಜೀವವೈವಿಧ್ಯತೆಗೆ ಇರುವ ಅಪಾಯ: ಖುರ್-ಆನ್ ನ ನೈತಿಕ ದೃಷ್ಟಿಕೋನ
ಮಾನವ ಭ್ರಷ್ಟಾಚಾರ ಮತ್ತು ಪರಿಸರ ಹೀನತೆ
ಖುರ್-ಆನ್ ಮಾನವನ ದುರುಪಯೋಗ ಮತ್ತು ಪರಿಸರ ಅಸಮತೋಲನದ ವಿರುದ್ಧ ಸ್ಪಷ್ಟವಾಗಿ ಎಚ್ಚರಿಸುತ್ತದೆ. ಅರಣ್ಯನಾಶ, ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಂತಹ ಆಧುನಿಕ ಬೆದರಿಕೆಗಳು ಖುರ್-ಆನ್ ಅದನ್ನು ಖಂಡಿಸುವ ಭ್ರಷ್ಟಾಚಾರ (ಫಸಾದ್) ಎಂದು ಪ್ರತಿಬಿಂಬಿಸುತ್ತವೆ:
"وَإِذَا تَوَلَّى سَعَىٰ فِي الْأَرْضِ لِيُفْسِدَ فِيهَا وَيُهْلِكَ الْحَرْثَ وَالنَّسْلَ ۗ وَاللَّهُ لَا يُحِبُّ الْفَسَادَ"
“ಮುನಾಫಿಕರು ಅಧಿಕಾರಕ್ಕೆ ಬಂದಾಗ, ಭೂಮಿಯಲ್ಲಿ ಭ್ರಷ್ಟಾಚಾರವನ್ನು ಹರಡಲು ಮತ್ತು ಬೆಳೆಗಳನ್ನು ಹಾಗೂ ಅವುಗಳ ಸಂತತಿಯನ್ನು ನಾಶಪಡಿಸಲು ಭೂಮಿಯುದ್ದಕ್ಕೂ ಶ್ರಮಿಸುತ್ತಾರೆ. ಆದರೆ ಅಲ್ಲಾಹನು ಭ್ರಷ್ಟಾಚಾರವನ್ನು ಇಷ್ಟಪಡುವುದಿಲ್ಲ.” (ಖುರ್-ಆನ್ 2:205)
ಈ ವಚನವು ಕೇವಲ ವ್ಯಕ್ತಿಗಳ ನೈತಿಕ ಭ್ರಷ್ಟಾಚಾರವನ್ನು ಮಾತ್ರವಲ್ಲದೆ, ಪರಿಸರ ಭ್ರಷ್ಟಾಚಾರವನ್ನೂ—ಅಂದರೆ ಕೃಷಿ ಮತ್ತು ಅದರ ಸಂತತಿ ನಾಶಪಡಿಸುವುದನ್ನು ಒಳಗೊಂಡಿದೆ. ಆದ್ದರಿಂದ, ಪರಿಸರ ಸಂರಕ್ಷಣೆ ಇಸ್ಲಾಮಿನಲ್ಲಿ ಕೇವಲ ಐಚ್ಛಿಕವಾದ ಗುಣವಲ್ಲ; ಅದು ದೈವಿಕ ಜವಾಬ್ದಾರಿಯಾಗಿದೆ.
ಅಸಮತೋಲನದ ಪರಿಣಾಮಗಳು
ಇಸ್ಲಾಮಿಕ್ ದೇವಶಾಸ್ತ್ರವು ನೈಸರ್ಗಿಕ ವಿಕೋಪಗಳನ್ನು ಕೇವಲ ಅನಿರೀಕ್ಷಿತ ಘಟನೆಗಳಾಗಿ ನೋಡುವುದಿಲ್ಲ, ಬದಲಿಗೆ ಅವು ಮಾನವನ ನಿರ್ಲಕ್ಷ್ಯದ ಪರಿಣಾಮಗಳ ಪ್ರತೀಕವಾಗಿದೆ.
ಖುರ್-ಆನ್ ಈ ಹಿಂದೆ ಕೆಲವು ರಾಷ್ಟ್ರಗಳ ಬಗ್ಗೆ ಪ್ರಾಸ್ತಾಪಿಸುತ್ತದೆ, ಅವುಗಳು ತಮ್ಮ ಅಹಂಕಾರ ಮತ್ತು ನಿರ್ಲಕ್ಷ್ಯದಿಂದಾಗಿ ನಾಶವಾದವು—ಇದು ಆಧುನಿಕ ನಾಗರಿಕತೆಗೆ ಪರಿಸರ ಅಹಂಕಾರದ ವಿರುದ್ಧ ಎಚ್ಚರಿಕೆಯಾಗಿದೆ.
"ظَهَرَ الْفَسَادُ فِي الْبَرِّ وَالْبَحْرِ بِمَا كَسَبَتْ أَيْدِي النَّاسِ لِيُذِيقَهُم بَعْضَ الَّذِي عَمِلُوا لَعَلَّهُمْ يَرْجِعُونَ"
“ಮನುಷ್ಯರ ಹಸ್ತಕ್ಷೇಪದ ಕಾರಣದಿಂದಾಗಿ ಭೂಮಿ ಮತ್ತು ಸಮುದ್ರದಲ್ಲಿ ಭ್ರಷ್ಟಾಚಾರವು ಹರಡಿದೆ; ಇದರಿಂದ ಅವರು ಮಾಡಿದ ಕರ್ಮಗಳ ಫಲವನ್ನು ಅವರು ಅನುಭವಿಸಲಿದ್ದು ಮತ್ತು ಅವರು ಸನ್ಮಾರ್ಗಕ್ಕೆ ಮರಳಿ ಬರಬಹುದಾಗಿದೆ.” (ಖುರ್-ಆನ್ 30:41)
ಈ ವಚನವು ಪರಿಸರ ಬಿಕ್ಕಟ್ಟಿನ ಸಾರವನ್ನು ತಿಳಿಸುತ್ತದೆ: ಮಾನವನ ದುರಾಸೆಯು ದೈವಿಕ ಸಮತೋಲನವನ್ನು ಹಾಲುಮಾಡಿ ಅದರ ಪರಿಣಾಮವಾಗಿ ಉಂಟಾಗುವ ಪರಿಸರ ಸಂಕಷ್ಟಗಳು ಮನುಷ್ಯನನ್ನು ಎಚ್ಚರಿಸಲು ಮತ್ತು ಸನ್ಮಾರ್ಗಕ್ಕೆ ಮರಳುವಂತೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಖುರ್-ಆನ್ ಮತ್ತು ಪರಿಸರ ಜವಾಬ್ದಾರಿ
ಖಿಲಾಫತ್ (ಪ್ರತಿನಿಧಿತ್ವ) ಪರಿಕಲ್ಪನೆ
ಮನುಷ್ಯರನ್ನು ಭೂಮಿಯ ಪೋಷಕರು ಅಥವಾ ಪ್ರತಿನಿಧಿಗಳು ಎಂದು ವಿವರಿಸಲಾಗಿದೆ:
"هُوَ الَّذِي جَعَلَكُمْ خَلَائِفَ فِي الْأَرْضِ"
“ಅಲ್ಲಾಹನು ನಿಮ್ಮನ್ನು ಭೂಮಿಯಲ್ಲಿ ತನ್ನ ಪ್ರತಿನಿಧಿಗಳನ್ನಾಗಿ ಮಾಡಿದವನು.” (ಖುರ್-ಆನ್ 35:39)
ಇದು ಜವಾಬ್ದಾರಿಯನ್ನು ಸೂಚಿಸುತ್ತದೆಯೇ ಹೊರತು ಆಧಿಪತ್ಯವನ್ನಲ್ಲ. ಅಲ್ಲಾಹನ ಮೇಲಿನ ಕೃತಜ್ಞತೆ ಮತ್ತು ವಿಧೇಯತೆಯ ಭಾಗವಾಗಿ ಮನುಷ್ಯರು ಜೀವವೈವಿಧ್ಯತೆಯನ್ನು ರಕ್ಷಿಸಬೇಕು. ಅಪವ್ಯಯ ಮತ್ತು ಮಾಲಿನ್ಯವು ಈ ನಂಬಿಕೆಯನ್ನು ಉಲ್ಲಂಘಿಸುತ್ತದೆ. ಖುರ್-ಆನ್ ಸ್ವಯಂ-ನಿಯಂತ್ರಣಕ್ಕೆ ಅವಕಾಶ ನೀಡುತ್ತದೆ ಮತ್ತು ಅತಿಯಾದ ಬಳಕೆಯನ್ನು ನಿಷೇಧಿಸುತ್ತದೆ:
"وَلَا تُسْرِفُوا ۚ إِنَّهُ لَا يُحِبُّ الْمُسْرِفِينَ"
“ವ್ಯರ್ಥ ಮಾಡಬೇಡಿ. ನಿಶ್ಚಯವಾಗಿಯೂ ಅಲ್ಲಾಹನು ವ್ಯರ್ಥ ಮಾಡುವವರನ್ನು ಇಷ್ಟಪಡುವುದಿಲ್ಲ.” (ಖುರ್-ಆನ್ 6:141)
ಈ ತತ್ವವು ನೈಸರ್ಗಿಕ ಸಂಪನ್ಮೂಲಗಳ ಸಮತೋಲಿತ ಬಳಕೆಗೆ ಪ್ರೋತ್ಸಾಹಿಸುತ್ತದೆ, ಇದು ಇಂದಿನ ಪರಿಸರ ನೀತಿಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುವ ನೈತಿಕ ಅಡಿಪಾಯವನ್ನು ರೂಪಿಸುತ್ತದೆ.
ಉಪಸಂಹಾರ
ಜೀವವೈವಿಧ್ಯತೆಯು ಖುರ್-ಆನ್ ಮತ್ತು ವೈಜ್ಞಾನಿಕ ದೃಷ್ಟಿಕೋನಗಳೆರಡರಲ್ಲೂ ದೈವಿಕ ವ್ಯವಸ್ಥೆ, ಕರುಣೆ ಮತ್ತು ಸಮತೋಲನವನ್ನು ಪ್ರತಿಬಿಂಬಿಸುತ್ತದೆ. ಸೃಷ್ಟಿಯ ಸಾಮರಸ್ಯ, ಜೀವಿಗಳ ಪವಿತ್ರತೆ ಮತ್ತು ಮನುಷ್ಯನ ಜವಾಬ್ದಾರಿಯ ಕುರಿತಾದ ಖುರ್-ಆನ್ ನ ಒಳವು ಇಸ್ಲಾಮಿಕ್ ಪರಿಸರ ನೈತಿಕತೆಯ ತಿರುಳಾಗಿದೆ.
ಆಧುನಿಕ ವಿಜ್ಞಾನವು ಖುರ್-ಆನ್ ನ ಈ ಒಳನೋಟವನ್ನು ದೃಢಪಡಿಸುತ್ತದೆ: ಜೀವನವು ಪರಸ್ಪರ ಅವಲಂಬನೆ ಮತ್ತು ಸಮತೋಲನದ ಮೂಲಕ ಬೆಳೆಯುತ್ತದೆ. ಮಾನವನು ಆ ಸಮತೋಲನವನ್ನು ಹಾಲುಮಾಡಿದಾಗ, ಪ್ರಕೃತಿ ಮತ್ತು ಮನುಕುಲ ಎರಡು ವಿನಾಶಕ್ಕೆ ಬಲಿಯಾಗುತ್ತದೆ. ಆದ್ದರಿಂದ, ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು ಕೇವಲ ವೈಜ್ಞಾನಿಕ ಅಥವಾ ಸಾಮಾಜಿಕ ಕರ್ತವ್ಯವಲ್ಲ—ಅದು ನಂಬಿಕೆ, ಕೃತಜ್ಞತೆ ಮತ್ತು ಅಲ್ಲಾಹನ ಇಚ್ಛೆಗೆ ಶರಣಾಗುವ ಒಂದು ಕಾರ್ಯವಾಗಿದೆ.
“ನಿಶ್ಚಯವಾಗಿಯೂ ಆಕಾಶ ಮತ್ತು ಭೂಮಿಯ ಸೃಷ್ಟಿಯಲ್ಲಿ ಹಾಗೂ ಹಗಲು ರಾತ್ರಿಗಳ ಬದಲಾವಣೆಯಲ್ಲಿ ಚಿಂತಿಸುವವರಿಗೆ ಇದು ಮಾರ್ಗದರ್ಶನವಾಗಿದೆ.”