ಕೊಲೋನಿಯಲಿಸಂ ಮತ್ತು ಅರಬಿ ಭಾಷೆ
Junaid Santyar

ಕೊಲೋನಿಯಲಿಸಂ ಮತ್ತು ಅರಬಿ ಭಾಷೆ

ಭಾಷೆಯು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆಯನ್ನು ಪ್ರಭಾವಿಸುವುದರ ಮೂಲಕ ಅಸ್ತಿತ್ವದ ಪರಿವರ್ತನೆ ಸಾಧ್ಯವಾಗುತ್ತದೆ ಎಂಬುದು ವಾಸ್ತವ. ಭಾಷೆಯು ಮೆದುಳಿನ ಹಸ್ತವಾಗಿದೆ ಎಂದು ಚಿಂತಕ ಇಝೆಟ್ಬೆಗೋವಿಕ್ ಹೇಳಿದ್ದಾರೆ. ಅರಬ್ ರಾಷ್ಟ್ರಗಳಿಗೆ ಕಾಲಿಟ್ಟ ಕ್ಷಣದಿಂದಲೇ ಈ ಸತ್ಯವನ್ನು ಅರ್ಥಮಾಡಿಕೊಂಡವರು ವಸಾಹತುಶಾಹಿಗಳು. ಅವರು ಇಸ್ಲಾಂ ಮತ್ತು ಅರಬ್ಬಿ ಭಾಷೆಯೊಂದಿಗೆ ಏಕಕಾಲದಲ್ಲಿ ಶತ್ರುತ್ವವನ್ನು ಬೆಳೆಸಿಕೊಂಡರು. ಪ್ರತಿರೋಧದ ಸ್ವರೂಪವನ್ನು ದುರ್ಬಲಗೊಳಿಸಲು ಮತ್ತು ವಸಾಹತುಶಾಹಿ ಹಿತಾಸಕ್ತಿಗಳಿಗೆ ಅನುಗುಣವಾಗಿ ಅರಬ್ ಮತ್ತು ಮುಸ್ಲಿಂ ಸಮಾಜಗಳನ್ನು ಮರುಸಂಘಟಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ಅರಿತುಕೊಂಡರು. ಮಾತೃಭಾಷೆಯು ಜನರಿಂದ ನಿಧಾನವಾಗಿ ಕಣ್ಮರೆಯಾದಾಗ, ಅವರನ್ನು ರೂಪಿಸುವ ಅಂಶಗಳು ಜನರಿಂದ ಇಲ್ಲವಾಗುತ್ತವೆ.
ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕೀನ್ಯಾದ ಕಾದಂಬರಿಕಾರ ಎನ್ಗುಗಿ ವಾ ಥಿಯೋಂಗೊ ತಮ್ಮ *Decolonizing the Mind"* ಪುಸ್ತಕದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ:
ವಸಾಹತುಶಾಹಿ ರಾಷ್ಟ್ರಗಳಲ್ಲಿನ ಭಾಷೆಯನ್ನು ಎದುರಿಸಲು ವಸಾಹತುಶಾಹಿಯು ಎರಡು ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳುತ್ತದೆ. ಮೊದಲನೆಯದು ಪ್ರಾದೇಶಿಕ ಸಂಸ್ಕೃತಿ, ಧರ್ಮ, ಇತಿಹಾಸ, ಶಿಕ್ಷಣ ಮತ್ತು ಸಾಹಿತ್ಯವನ್ನು ನಾಶಪಡಿಸುವುದು. ಎರಡನೆಯದು ವಸಾಹತುಶಾಹಿ ಶಕ್ತಿಗಳ ಭಾಷೆಯನ್ನು ಸ್ಥಳೀಯ ಭಾಷೆಗಳಿಗಿಂತ ಉನ್ನತ ಸ್ಥಾನದಲ್ಲಿರಿಸುವುದು.
ಹತ್ತೊಂಬತ್ತನೇ ಶತಮಾನದಿಂದ ಅರಬ್ ವಲಯದಲ್ಲಿ ವಸಾಹತುಶಾಹಿಯು ಇದೇ ನೀತಿಯನ್ನು ಅನುಸರಿಸಿತು. ಅವರು ಅರಬ್ಬಿ ಭಾಷೆಯನ್ನು ಯಾವುದೇ ರಾಜಿ ಇಲ್ಲದೆ ಹತ್ತಿಕ್ಕಿದರು. ಮೊರೊಕ್ಕೊದಲ್ಲಿನ ಫ್ರೆಂಚ್ ವಸಾಹತುಶಾಹಿ ಶಕ್ತಿಯು ಅರೇಬಿಕ್ ಭಾಷೆಯನ್ನು ಹತ್ತಿಕ್ಕಿದ್ದು, ಈ ನೀತಿಯನ್ನು ಜಾರಿಗೆ ತಂದಿರುವುದಕ್ಕೆ ಒಂದು ಸ್ಪಷ್ಟವಾದ ಉದಾಹರಣೆಯಾಗಿದೆ.

 ಅರೇಬಿಕ್ ಭಾಷೆಯೊಂದಿಗಿನ ಮುಖಾಮುಖಿ:

ಅರೇಬಿಕ್ ಭಾಷೆಯ ಅಭಿವೃದ್ಧಿಯ ಮೂಲಕ ಇಸ್ಲಾಂನ ಶಕ್ತಿ ಮತ್ತು ಕ್ರಾಂತಿಕಾರಿ ಸಾಮರ್ಥ್ಯವು ಸಮಾಜದಲ್ಲಿ ಸಕ್ರಿಯವಾಗಿ ಉಳಿಯುತ್ತದೆ ಎಂದು ವಸಾಹತುಶಾಹಿ ಶಕ್ತಿಗಳು ಅರಿತುಕೊಂಡವು. ಅದರ ಮೂಲಕ ಸ್ವಯಂ ಪ್ರಜ್ಞೆ ಮತ್ತು ಪ್ರತಿರೋಧವು ತೀವ್ರಗೊಳ್ಳುತ್ತದೆ ಎಂದು ಅವರು ಅರ್ಥಮಾಡಿಕೊಂಡರು.
ಆದ್ದರಿಂದ, ಅರೇಬಿಕ್ ಸಕ್ರಿಯ ಭಾಷೆಯಾಗಿ ಉಳಿಯಬಾರದು ಮತ್ತು ವಸಾಹತುಶಾಹಿ ವಿರೋಧಿ ಅಸ್ತಿತ್ವವು ರೂಪುಗೊಳ್ಳಬಾರದು ಎಂಬ ಉದ್ದೇಶದಿಂದ ಅವರು ಹೊಸ ನೀತಿಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಅರೇಬಿಕ್ ಭಾಷೆಯನ್ನು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸುವುದು ವಸಾಹತುಶಾಹಿ ಅಸ್ತಿತ್ವದ ಉಳಿವಿಗೆ ಅನಿವಾರ್ಯವಾಯಿತು.

 ಅರಬ್ಬಿ ಶಿಕ್ಷಕರ ಮೇಲಿನ ದೌರ್ಜನ್ಯ

ಅದೇರೀತಿ ಇನ್ನೊಂದು ವಿಷಯ ಏನೆಂದರೆ ಅರಬ್ಬಿ ಭಾಷೆಯನ್ನು ಏಕಕಾಲಕ್ಕೆ ನಿಷೇಧಿಸಲಾಯಿತು ಮತ್ತು ಬಲವಂತವಾಗಿ ದೂರ ಇಡಲಾಯಿತು. ಫ್ರಾನ್ಸ್ ಅಲ್ಜೀರಿಯಾವನ್ನು ತನ್ನ ವಸಾಹತನ್ನಾಗಿ ಮಾಡಿಕೊಂಡಾಗ, ಅಲ್ಲಿನ ಅರಬ್ಬಿ ಶಿಕ್ಷಕರು ಕಿರುಕುಳದಿಂದಾಗಿ ದೇಶ ಬಿಟ್ಟು ಹೋಗಬೇಕಾಯಿತು. ಅನೇಕರನ್ನು ಹೊರಹಾಕಲಾಯಿತು. ಇದು ಅರಬ್ಬಿ ಭಾಷೆಯ ಅವನತಿಗೆ ಕಾರಣವಾಯಿತು. 1883ರಲ್ಲಿ ಡಮಾಸ್ಕಸ್‌ಗೆ ಮಾತ್ರ ನಾಲ್ಕು ಸಾವಿರ ವಿದ್ಯಾವಂತ ಅಲ್ಜೀರಿಯನ್ನರು ವಲಸೆಗಾರರಾಗಿ ಬಂದಿದ್ದರು. ಅವರಲ್ಲಿ ಹೆಚ್ಚಿನವರು ಸುಶಿಕ್ಷಿತರಾಗಿದ್ದರು.ಅಲ್ಜೀರಿಯಾದ ಶಿಕ್ಷಕರ ತರಬೇತಿ ಶಾಲೆಗಳಲ್ಲಿ ಅರೇಬಿಕ್ ಭಾಷಾ ಕಲಿಕೆಗೆ ಕೇವಲ ಮೂರು ಗಂಟೆಗಳನ್ನು ಮಾತ್ರ ನಿಗದಿಪಡಿಸಲಾಗಿತ್ತು. ಇದು ಭವಿಷ್ಯದ ಶಿಕ್ಷಕರ ಅರೇಬಿಕ್ ಭಾಷಾ ಪ್ರಾವೀಣ್ಯತೆಯನ್ನು ಕುಂಠಿತಗೊಳಿಸಿತು ಮತ್ತು ಅದು ಅವರ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಿತು. 1945 ರಲ್ಲಿ, ಪ್ರತಿಯೊಬ್ಬ ಅರೇಬಿಕ್ ಭಾಷಾ ಶಿಕ್ಷಕರು ಉದ್ಯೋಗ ಪಡೆಯಬೇಕಾದರೆ ಫ್ರೆಂಚ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು ಎಂಬ ನಿಯಮವನ್ನು ಫ್ರೆಂಚ್ ವಸಾಹತುಶಾಹಿ ಶಕ್ತಿಯು ಅಲ್ಜೀರಿಯಾದ ಮೇಲೆ ಹೇರಿತು. ಇದು ಅನೇಕರು ಕೆಲಸ ಕಳೆದುಕೊಳ್ಳಲು ಕಾರಣವಾಯಿತು.

 ಅರೇಬಿಕ್ ಭಾಷೆಯನ್ನು ದೂರವಿಟ್ಟರು

ವಸಾಹತುಶಾಹಿಗಳು ಅರೇಬಿಕ್ ಭಾಷೆಯನ್ನು ನಿರ್ಮೂಲನೆ ಮಾಡಲು ಮತ್ತು ಇಸ್ಲಾಂ ಧರ್ಮವನ್ನು ಇಲ್ಲದಂತೆ ಮಾಡಲು ಪ್ರಯತ್ನಿಸಿದರು. ಅವರ ಸಂಪೂರ್ಣ ಗಮನವು ಹೊಸ ಪೀಳಿಗೆಯ ಮೇಲಿತ್ತು. ಫ್ರೆಂಚ್ ಭಾಷೆಯ ಶಿಕ್ಷಣದ ಮೂಲಕ ಬಾಲ್ಯದಿಂದಲೇ ಅರೇಬಿಕ್ ಭಾಷೆಯನ್ನು ದೂರವಿಡುವುದು ಅವರ ತಂತ್ರವಾಗಿತ್ತು. ಇದಕ್ಕೆ ಅಲ್ಜೀರಿಯಾ ಅತ್ಯುತ್ತಮ ಉದಾಹರಣೆಯಾಗಿದೆ.
ವಸಾಹತುಶಾಹಿಗಳು ಅರೇಬಿಕ್ ಅನ್ನು ಹೊರಗಿಡಲು ಒಂದು ಗುಂಪಿನ ನಿಯಮಗಳನ್ನು ಹೊರಡಿಸಿದರು ಮತ್ತು ಅಲ್ಜೀರಿಯನ್ನರನ್ನು ಫ್ರೆಂಚ್ ಬಳಸುವಂತೆ ಒತ್ತಾಯಿಸಿದರು. 1838 ರಲ್ಲಿ ಹೊರಡಿಸಲಾದ ನಿಯಮದ ಪ್ರಕಾರ, ಅರೇಬಿಕ್ ಭಾಷೆಯ ಬದಲಿಗೆ ಫ್ರೆಂಚ್ ಭಾಷೆಯನ್ನು ಪ್ರತಿಷ್ಠಾಪಿಸಲಾಯಿತು ಮತ್ತು ಅರೇಬಿಕ್ ಅನ್ನು ವಿದೇಶಿ ಭಾಷೆಯಾಗಿ ಪರಿಗಣಿಸಲಾಯಿತು. ಅರೇಬಿಕ್ ಭಾಷೆಯನ್ನು ಕಲಿಸುವ ಸ್ಥಳಗಳು, ಸಾಂಸ್ಕೃತಿಕ ಕೇಂದ್ರಗಳು ಮತ್ತು ಸಂಸ್ಥೆಗಳನ್ನು ಮುಚ್ಚುವ ಪ್ರಕ್ರಿಯೆಯೂ ಇದರೊಂದಿಗೆ ನಡೆಯಿತು. ಫ್ರೆಂಚ್ ಶಾಲೆಗಳನ್ನು ವ್ಯಾಪಕವಾಗಿ ಸ್ಥಾಪಿಸಲಾಯಿತು. 1850ರಲ್ಲಿ 6 ಪ್ರಾಥಮಿಕ ಶಾಲೆಗಳನ್ನು ತೆರೆಯಲಾಯಿತು. ಅವುಗಳನ್ನು "ಫ್ರೆಂಚ್ ಅರಬ್ ಶಾಲೆಗಳು" ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ಅರೇಬಿಕ್ ಕಲಿಸುವುದರಿಂದ ಕುರಾನ್ ಶಾಲೆಗಳಿಗೆ ಬೇಡಿಕೆಯಿದೆ ಎಂದು ಫ್ರೆಂಚರು ಅರಿತುಕೊಂಡಾಗ, 1890ರಲ್ಲಿ ಕತಾತೀಬ್ ಶಾಲೆಗಳನ್ನು ಫ್ರೆಂಚ್-ಅರೇಬಿಕ್ ಶಾಲೆಗಳಾಗಿ ಪರಿವರ್ತಿಸಲು ಆದೇಶ ಹೊರಡಿಸಲಾಯಿತು.ಅಸಾಧ್ಯವಾದ ಒಂದು ಗುಂಪಿನ ಷರತ್ತುಗಳನ್ನು ಪಾಲಿಸಿದರೆ ಮಾತ್ರ ಅರೇಬಿಕ್ ಅಧ್ಯಾಪಕರಿಗೆ ಕುರಾನ್ ಶಾಲೆಗಳನ್ನು ಪ್ರಾರಂಭಿಸಲು ಅಧಿಕಾರಿಗಳು ಪರವಾನಗಿ ನೀಡುತ್ತಿದ್ದರು. 1904 ರಲ್ಲಿ ಹೊರಡಿಸಿದ ಆದೇಶದ ಮೂಲಕ ಇದನ್ನು ಕಾನೂನುಬದ್ಧಗೊಳಿಸಲಾಯಿತು. ನಂತರ 1938 ಮಾರ್ಚ್ 8 ರಂದು ಅರೇಬಿಕ್ ಭಾಷೆಯ ಕಲಿಕೆ ಮತ್ತು ಬಳಕೆಯನ್ನು ನಿಷೇಧಿಸುವ ಕಾನೂನು " *ಚಾರ್ಟನ್ ಕಾನೂನು* " ಜಾರಿಗೆ ಬಂದಿತು. ಟುನೀಶಿಯಾವು 1881 ರಲ್ಲಿ ಫ್ರೆಂಚ್ ವಸಾಹತುಶಾಹಿಗೆ ಒಳಪಟ್ಟ ನಂತರ, ಫ್ರೆಂಚ್ ಪ್ರಜೆಯಾದ ಲೂಯಿಸ್ ಮಚುವೆಲ್ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು. ಆದರೆ ಅಲ್ಜೀರಿಯಾದಲ್ಲಿ ಅರೇಬಿಕ್ ಭಾಷೆಯನ್ನು ನಿರ್ಮೂಲನೆ ಮಾಡಲು ಅನುಸರಿಸಿದ ತಪ್ಪುಗಳನ್ನು ಪುನರಾವರ್ತಿಸದಂತೆ ಟುನೀಶಿಯಾದಲ್ಲಿ ಅವರು ಪ್ರಯತ್ನಿಸಿದರು. ಜನರನ್ನು ಕೆರಳಿಸದೆ ಶಿಕ್ಷಣ ಕ್ಷೇತ್ರದಲ್ಲಿ ಅರಬಿಯನ್ನು ಬದಿಗೊತ್ತಬೇಕಾದ ಮಹತ್ವವನ್ನು ಅವರು ಅರ್ಥಮಾಡಿಕೊಂಡರು. ಶ್ರೀಮಂತ ವರ್ಗಕ್ಕೆ ಫ್ರೆಂಚ್ ಕಲಿಸುವುದು ಅಲ್ಲಿ ಜಾರಿಗೆ ತಂದ ಕಾರ್ಯಸೂಚಿಯಾಗಿತ್ತು. ಅದರ ಮೂಲಕ ಕೆಲಸದ ಮತ್ತು ಇತರ ಅವಕಾಶಗಳ ಬಾಗಿಲುಗಳು ಶ್ರೀಮಂತ ವರ್ಗದ ಮುಂದೆ ತೆರೆಯಲ್ಪಡುತ್ತವೆ. ಆದರೆ ಧಾರ್ಮಿಕ ಭಾವನೆಗಳನ್ನು ಕೆರಳಿಸದಂತೆ ಅವರು ವಿಶೇಷ ಗಮನ ಹರಿಸಿದರು. 1919ರಲ್ಲಿ ಟುನೀಶಿಯಾದಲ್ಲಿ 350 ಶಾಲೆಗಳು ಮತ್ತು ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಫ್ರೆಂಚ್ ಶಾಲೆಗಳಲ್ಲಿದ್ದರು ಎಂದು ಲೆಕ್ಕಾಚಾರಗಳು ಸೂಚಿಸುತ್ತವೆ. ಅವರಲ್ಲಿ ಅನೇಕರು ಫ್ರೆಂಚ್ ಭಾಷೆ ಮತ್ತು ಸಂಸ್ಕೃತಿಯಿಂದ ಪ್ರಭಾವಿತರಾದರು.ಹಾಗೆಯೇ, ಮೊರಾಕ್ಕೋದಲ್ಲೂ ಅರಬ್ಬಿ ಭಾಷೆಯನ್ನು ಇಲ್ಲದಂತೆ ಮಾಡಲು ವ್ಯವಸ್ಥಿತ ಪ್ರಯತ್ನಗಳು ನಡೆದವು. 1921ರಲ್ಲಿ ಮಾರ್ಷಲ್ ಲಿಯುಟಿ ಮೊರಾಕ್ಕೋದ ಕೆಲವು ಪ್ರದೇಶಗಳಲ್ಲಿ ಕೆಲವು ಕಾರ್ಯಗಳನ್ನು ಜಾರಿಗೆ ತಂದರು. ಫ್ರೆಂಚ್ ಭಾಷೆಯ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ, ಅರಬ್ಬಿ ಮತ್ತು ಪ್ರಾದೇಶಿಕ ಭಾಷೆಗಳನ್ನು ನಿರ್ಮೂಲನೆ ಮಾಡುವ ಚಟುವಟಿಕೆಗಳೊಂದಿಗೆ ಮುಂದುವರಿಯಲು ಅವರು ತಮ್ಮ ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದರು. 20 ವರ್ಷಗಳಲ್ಲಿ ಆಡಳಿತ ವ್ಯವಸ್ಥೆಯನ್ನು ಫ್ರೆಂಚ್ ಭಾಷೆಗೆ ಬದಲಿಸುವಲ್ಲಿ ವಸಾಹತುಶಾಹಿ (Colonialism) ಯಶಸ್ವಿಯಾಯಿತು.
ಮೊರೊಕ್ಕೊನ್ನರನ್ನು ಫ್ರೆಂಚ್ ಭಾಷೆಗೆ ಬಲವಂತವಾಗಿ ತಳ್ಳಲು ಲಿಯೋಟಿ ಕರೆ ನೀಡಿದರು. ಅವರು ಹೀಗೆ ಹೇಳಿದರು: ಇಸ್ಲಾಂ ಪ್ರಚಾರದಲ್ಲಿ ಅರೇಬಿಕ್ ಭಾಷೆ ಒಂದು ಪ್ರಮುಖ ಅಂಶವಾಗಿದೆ, ಅದೇ ಸಮಯದಲ್ಲಿ ಇಸ್ಲಾಮಿನ ಚೌಕಟ್ಟಿನ ಹೊರಗೆ ಹೋಗಿ ಈ ಅಸಂಸ್ಕೃತ ಜನರನ್ನು ಸುಸಂಸ್ಕೃತರನ್ನಾಗಿ ಮಾಡಲು ನಮ್ಮ ಆಸಕ್ತಿಗಳು ಬಯಸುತ್ತವೆ.
ವಸಾಹತುಶಾಹಿ ಕಾಲದಲ್ಲಿ ಮೊರಾಕ್ಕೊದ ಶಿಕ್ಷಣ ನಿರ್ದೇಶಕರಾಗಿದ್ದ ಜಾರ್ಜ್ ಹಾರ್ಡಿ ಅವರ ಮಾತುಗಳು ಹೀಗಿದ್ದವು: ಅಧಿಕಾರದ ಮೂಲಕ ಸಾಮ್ರಾಜ್ಯಗಳನ್ನು ಕಟ್ಟಬಹುದು ಆದರೆ ಅದು ಅವುಗಳ ನಿರಂತರತೆ ಮತ್ತು ಶಾಶ್ವತತೆಯನ್ನು ಖಾತರಿಪಡಿಸುವುದಿಲ್ಲ. ಶಿರಸ್ಸುಗಳು ಬಂದೂಕುಗಳ ಮುಂದೆ ಮಣಿದಾಗ, ಹೃದಯಗಳಲ್ಲಿ ದ್ವೇಷದ ಬೆಂಕಿ ಮತ್ತು ಪ್ರತೀಕಾರದ ಹಂಬಲ ಬೆಳೆಯುತ್ತದೆ. ಆದ್ದರಿಂದ ದೇಹಗಳನ್ನು ವಶಪಡಿಸಿಕೊಂಡ ನಂತರ ಆತ್ಮಗಳನ್ನು ವಶಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.ಫ್ರೆಂಚ್ ವಸಾಹತುಶಾಹಿಯಿಂದ ಭಿನ್ನವಾದ ಅಸ್ಮಿತೆಯನ್ನು ರೂಪಿಸುವಲ್ಲಿ ಅರೇಬಿಕ್ ಭಾಷೆಯು ಹೆಚ್ಚಿನ ಪ್ರಭಾವ ಬೀರಿತ್ತು.

 ಪ್ರಾಂತೀಯ ಭಾಷೆಗಳಿಗೆ ಪ್ರಾಮುಖ್ಯತೆ ನೀಡುವುದು

ಪ್ರಾಂತೀಯ ಭಾಷಾ ಪ್ರಭೇದಗಳನ್ನು ಕಲಿಯಲು ಜನರಿಗೆ ಕರೆ ನೀಡಲಾಯಿತು ಮತ್ತು ಅವರನ್ನು ಪ್ರೋತ್ಸಾಹಿಸಲಾಯಿತು. ಸ್ಥಳೀಯ ಭಾಷೆಗಳು ಮತ್ತು ಶೈಲಿಗಳನ್ನು ಕಲಿಯಲು ನಿಘಂಟುಗಳನ್ನು ಅಭಿವೃದ್ಧಿಪಡಿಸುವುದು, ಅವುಗಳಿಗಾಗಿ ಭಾಷಾ ನಿಯಮಗಳನ್ನು ರೂಪಿಸುವುದು ಮುಂತಾದ ವಿಷಯಗಳಲ್ಲಿ ವಸಾಹತುಶಾಹಿ ಶಕ್ತಿಗಳು ಗಮನಹರಿಸಿದವು. 1890 ರಿಂದ, ಅಲ್ಜೀರಿಯಾದಲ್ಲಿನ ಓರಿಯಂಟಲಿಸಂ ಅಲ್ಜೀರಿಯನ್ ಭಾಷೆಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿತು. ಭಾಷೆಯ ಮೂಲದ ಬಗ್ಗೆ ಅಧ್ಯಯನ ಮಾಡುವುದು ಮತ್ತು ಆ ಭಾಷೆಗೆ ನಿಯಮಗಳನ್ನು ರೂಪಿಸುವುದು ಇದರ ಗುರಿಯಾಗಿತ್ತು.ಈಜಿಪ್ಟ್‌ಗೆ ಬಂದ ಜರ್ಮನ್ ಓರಿಯಂಟಲಿಸ್ಟ್ ವಿಲ್ಹೆಲ್ಮ್ ಸ್ಪಿಟ್ಟಾ ಅವರು ಮೊದಲ ಬಾರಿಗೆ ಆಡುಭಾಷೆಯನ್ನು ಪ್ರೋತ್ಸಾಹಿಸಿದರು. ಅವರು ಈಜಿಪ್ಟಿನ ಹತ್ತಿರದ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಮತ್ತು ಅರೇಬಿಕ್‌ನ ಸ್ಥಳೀಯ ಪದ್ಧತಿಗಳನ್ನು ಹಾಗೂ ಸಂಭಾಷಣೆಯ ಶೈಲಿಗಳನ್ನು ಕಲಿತರು. ಇಂತಹ ಶೈಲಿಗಳು ಪ್ರತಿ ದೇಶ ಮತ್ತು ಪ್ರದೇಶಗಳಲ್ಲಿ ವಿಭಿನ್ನವಾಗಿವೆ ಎಂದು ಅವರು ಕಂಡುಕೊಂಡರು. ಸ್ಥಳೀಯ ಭಾಷೆಗಳು ಮತ್ತು ಶೈಲಿಗಳನ್ನು ಸಂರಕ್ಷಿಸಲು ಜನರು ನಿಜವಾದ ಅರೇಬಿಕ್ ಭಾಷೆಯನ್ನು ತ್ಯಜಿಸಬೇಕು ಎಂದು ಅವರು ಕರೆ ನೀಡಿದರು. ಈ ಕರೆಯು ಅರೇಬಿಕ್ ಭಾಷೆಯ ವಿರುದ್ಧ ದಶಕಗಳ ಕಾಲ ನಡೆದ ಅತ್ಯಂತ ಪ್ರಬಲವಾದ ವಸಾಹತುಶಾಹಿ ಸವಾಲಾಗಿತ್ತು.

Related Posts

Leave A Comment

Voting Poll

Get Newsletter