ಮಲಬಾರ್ ಮಣ್ಣಿನ ಕ್ರಾಂತಿ ಪುರುಷ: ಮಂಬುರಂ ಸಯ್ಯಿದ್ ಅಲವಿ ತಂಙಳ್(ನ.ಮ)
ಕೇರಳದ ಇಸ್ಲಾಮಿಕ್ ಪುನರುಜ್ಜೀವನದ ಇತಿಹಾಸದಲ್ಲಿ ಕ್ರಿಯಾತ್ಮಕತೆ ಮತ್ತು ಪರಿವರ್ತನೆಯ ಅದ್ಭುತ ಅಧ್ಯಾಯವೇ ಮಂಬುರಂ ಸಯ್ಯಿದ್ ಅಲವಿ ತಂಙಳ್. ಹದಿನೆಂಟು-ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಕೇರಳದ ಸಾಮಾಜಿಕ-ಧಾರ್ಮಿಕ ಮತ್ತು ರಾಜಕೀಯ ರಂಗವನ್ನು ಚಲನಶೀಲಗೊಳಿಸಿದವರು ಇವರೇ ಎಂದು ಕಾಣಬಹುದು. ಜಾತಿ-ಮತ ಭೇದವಿಲ್ಲದೆ ಇಡೀ ಕೇರಳದ ಜನರಿಂದ ಪೂರ್ಣವಾಗಿ ಸ್ವೀಕರಿಸಲ್ಪಟ್ಟ ಇವರು, ಜನರ ಸಾಮಾಜಿಕ ಪ್ರಗತಿ ಮತ್ತು ಜೀವನ ಶೈಲಿಯ ಸುಧಾರಣೆಯಲ್ಲಿ ಮಹತ್ತರ ಕೊಡುಗೆ ನೀಡಿದ ಸುಧಾರಕರಾಗಿದ್ದರು.
ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ಮಾರ್ಗದರ್ಶಕ ಮತ್ತು ನಾಯಕರಾಗಿ ಇವರು ಗುರುತಿಸಿಕೊಂಡಿದ್ದರು. ಕೇರಳ ಮುಸ್ಲಿಂ ಇತಿಹಾಸವನ್ನು 'ಮಂಬುರಂ ತಂಙಳ್ ಕಾಲಕ್ಕೆ ಮೊದಲು' ಮತ್ತು 'ತಂಙಳ್ ಕಾಲದ ನಂತರ' ಎಂದು ವಿಭಜಿಸಿ ಚರ್ಚಿಸುವಷ್ಟು ಪ್ರಭಾವಶಾಲಿ ವ್ಯಕ್ತಿತ್ವ ಇವರದ್ದಾಗಿತ್ತು. ತಮ್ಮ ಜೀವನದ ಮೂಲಕವೇ ಸಾಮಾಜಿಕ ಕ್ರಾಂತಿಯ ಕಿಚ್ಚನ್ನು ಹಚ್ಚಲು ಇವರಿಗೆ ಸಾಧ್ಯವಾಯಿತು.
ಹದಿನೆಂಟು-ಹತ್ತೊಂಬತ್ತನೇ ಶತಮಾನದ ಮಲಬಾರ್ನ ಪ್ರಮುಖ ಆಧ್ಯಾತ್ಮಿಕ ನಾಯಕ ಮತ್ತು ಸಾಮಾಜಿಕ ಸುಧಾರಕರಾಗಿದ್ದರು ಮಂಬುರಂ ತಂಙಳ್. ಇವರು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಬ್ರಿಟಿಷ್ ವಿರೋಧಿ ಹೋರಾಟಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಅವರ ಜೀವನವು ಬೇರ್ಪಡಿಸಲಾಗದ ಘಟನೆಗಳಿಂದ ತುಂಬಿತ್ತು. ಕರಾವಳಿ ಪ್ರದೇಶಗಳಿಂದ ಒಳನಾಡಿಗೆ ಕ್ರಮೇಣ ವಲಸೆ ಬಂದ ಮಾಪಿಳ್ಳೆ ಸಮುದಾಯಕ್ಕೆ ನೈತಿಕ, ರಾಜಕೀಯ ಮತ್ತು ಸಾಮಾಜಿಕ ನಾಯಕತ್ವವನ್ನು ನೀಡಿದವರು 'ತಂಙಳ್'ಗಳು. ಏರನಾಡು, ವಳ್ಳುವನಾಡು, ಪೊನ್ನಾನಿಯಂತಹ ತಾಲ್ಲೂಕುಗಳಲ್ಲಿ ಮಾತ್ರವಲ್ಲದೆ, ಕೇರಳದಾದ್ಯಂತ ಮುಸ್ಲಿಂ ಜನಸಂಖ್ಯೆಯ ಗ್ರಾಫ್ ಗಣನೀಯವಾಗಿ ಏರಲು ಈ ನಾಯಕತ್ವವು ಪ್ರಮುಖ ಪಾತ್ರ ವಹಿಸಿದೆ. ಜಾತಿಯಿಂದ ತುಳಿಯಲ್ಪಟ್ಟ ಮತ್ತು ಕೋಮುವಾದದಿಂದ ತಾರತಮ್ಯಕ್ಕೊಳಗಾದ ಸಮಾಜದಲ್ಲಿ, ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ಬೋಧಕರಾಗಿ ತಂಙಳ್ ಅವರ ಜೀವನವಿತ್ತು. ಸಮುದಾಯದ ಆಧ್ಯಾತ್ಮಿಕ ಕೇಂದ್ರಬಿಂದುವಾಗಿ (ಖುತುಬ್) ಅವರು ಇಲ್ಲಿ ನೆಲೆಸಿದ್ದು ಮಲಯಾಳಿ ಜನತೆಗೆ ದೊರೆತ ಅಪರೂಪದ ಸೌಭಾಗ್ಯಗಳಲ್ಲಿ ಒಂದಾಗಿದೆ
ಜನನ ಮತ್ತು ಜೀವನ
ಸಯ್ಯಿದ್ ಅಲವಿ ತಂಗಳ್ ಅವರ ಕುಟುಂಬವು ಯೆಮನ್ನ ಹದ್ರಮೌತ್ನ 'ತರೀಮ್' ಎಂಬ ಪ್ರದೇಶದಲ್ಲಿ ನೆಲೆಸಿತ್ತು. ಇತರ ಕುಟುಂಬಗಳಿಗೆ ಹೋಲಿಸಿದರೆ ಈ ಕುಟುಂಬವು ಅತ್ಯಂತ ಗೌರವಾನ್ವಿತ ಮತ್ತು ಉನ್ನತ ಸ್ಥಾನಮಾನವನ್ನು ಹೊಂದಿತ್ತು. ಅಹ್ಮದ್ ಬಿನ್ ಸುಲೈಮಾನ್ ಮತ್ತು ಮುಹಮ್ಮದ್ ಬಿನ್ ಮುಹಮ್ಮದ್ ಅವರು ತರೀಮ್ನ ಪ್ರಮುಖ ವ್ಯಕ್ತಿಗಳಾಗಿದ್ದರು. ಈ ಪರಂಪರೆಯಲ್ಲಿ ಸಯ್ಯಿದ್ ಮುಹಮ್ಮದ್ ಬಿನ್ ಸಹ್ಲ್ ಮೌಲದ್ದವೀಲಾ ಅವರು ಆಧ್ಯಾತ್ಮಿಕ ಜ್ಞಾನದ ಕೇಂದ್ರಬಿಂದುವಾಗಿದ್ದರು.
ಸಯ್ಯಿದ್ ಮುಹಮ್ಮದ್ ಬಿನ್ ಸಹ್ಲ್ ಅವರು ಜಿಫ್ರಿ ಕುಟುಂಬದ ಮುಖ್ಯಸ್ಥರ ಮಗಳು ಮತ್ತು ಶೇಖ್ ಹಸನ್ ಜಿಫ್ರಿಯವರ ಸಹೋದರಿಯಾದ ಸಯ್ಯಿದ ಫಾತಿಮಾ ಅವರನ್ನು ವಿವಾಹವಾದರು. ಫಾತಿಮಾ ಅವರು ಅತ್ಯಂತ ಉದಾರ ಸ್ವಭಾವದ ಮತ್ತು ಧರ್ಮನಿಷ್ಠ ಮಹಿಳೆಯಾಗಿದ್ದರು. ಇವರ ಪುತ್ರರಾಗಿ ಸಯ್ಯಿದ್ ಅಲವಿ ತಂಗಳ್ ಅವರು ಹಿಜರಿ ವರ್ಷ 1166 (ಕ್ರಿ.ಶ. 1753) ರಂದು ದುಲ್-ಹಿಜ್ಜಾ 23 ರ ಶನಿವಾರ ರಾತ್ರಿ ಜನಿಸಿದರು.
ತಂಗಳ್ ಅವರು ಬಾಲ್ಯದಲ್ಲಿಯೇ ಪೋಷಕರನ್ನು ಕಳೆದುಕೊಂಡರು. ನಂತರ ಅವರ ಚಿಕ್ಕಮ್ಮ ಸಯ್ಯಿದಾ ಹಮೀದಾ ಬೀವಿ ಅವರು ಅವರನ್ನು ಪೋಷಿಸಿದರು. ಸಯ್ಯಿದಾ ಹಮೀದಾ ಅವರು ಮಗುವಿಗೆ ಧಾರ್ಮಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ನೀಡಿದ ಮೊದಲ ಶಿಕ್ಷಕಿಯಾಗಿದ್ದರು. ಬಾಲ್ಯದಲ್ಲೇ ಸಯ್ಯಿದ್ ಅಲವಿ ತಂಗಳ್ ಅವರಲ್ಲಿ ತಾಳ್ಮೆ, ಸೌಜನ್ಯ, ಪ್ರಾಮಾಣಿಕತೆ, ಬುದ್ಧಿವಂತಿಕೆ ಮತ್ತು ಆತ್ಮವಿಶ್ವಾಸದಂತಹ ಆಕರ್ಷಕ ಗುಣಗಳು ಗೋಚರಿಸತೊಡಗಿದವು.
ಸೇವನಾ ತತ್ಪರತೆ ಮುಂತಾದ ಅನೇಕ ಒಳ್ಳೆಯ ಗುಣಗಳು ಸಯ್ಯಿದ್ ಅಲವಿ ಅವರಿಗೆ ಸ್ಪಷ್ಟವಾಗಿ ಅರಬಿ ಮಾತನಾಡಲು ಕಲಿಸಿಕೊಟ್ಟವು. ಕ್ರಮೇಣ ಅವರು ಅಪರೂಪದ ಮಕ್ಕಳಲ್ಲಿ ಒಬ್ಬರಾದರು. ಅವರು ಚಿಕ್ಕ ವಯಸ್ಸಿನಲ್ಲೇ ಅದರಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಭಾಷೆಯನ್ನು ಕರಗತ ಮಾಡಿಕೊಂಡ ನಂತರ ಕುರಾನ್ ಕಲಿಯಲು ಕಷ್ಟವಾಗಲಿಲ್ಲ.
ನಂತರ ಪವಿತ್ರ ಕುರಾನ್ನ ಅಧ್ಯಾಯಗಳನ್ನು ಒಂದೊಂದಾಗಿ ಮನನ ಮಾಡಿ ಪೂರ್ಣಗೊಳಿಸಿದಾಗ, ಅವರು ಜನರ ನಡುವೆ 'ಹಾಫಿಜ್' ಎಂಬ ಹೆಸರಿನಿಂದ ಕರೆಯಲ್ಪಡಲು ಪ್ರಾರಂಭಿಸಿದರು.
ಸೈಯದ್ ಅಲವಿ ತಂಙಳ್ ಅವರ ಪ್ರಾಥಮಿಕ ಶಿಕ್ಷಣವು ಅವರ ಸ್ವಂತ ಊರಾದ ತರೀಮ್ನಲ್ಲೇ ನಡೆಯಿತು. ಅಲ್ಲಿನ ಪ್ರಖ್ಯಾತ ಶೇಖ್ ಬಾಯಿರೀನ್ ಅವರು ಅವರ ಪ್ರಧಾನ ಗುರುಗಳಾಗಿದ್ದರು. ಗುರುಗಳ ಅಕ್ಷರಶಃ ಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಆದರ್ಶಶಾಲಿಯಾಗಲು ಅವರಿಗೆ ಸಾಧ್ಯವಾಯಿತು. ಅವರು ಬಾಲ್ಯದಲ್ಲೇ ಆಧ್ಯಾತ್ಮಿಕತೆಯ ಹಾದಿಯನ್ನು ಆರಿಸಿಕೊಂಡಿದ್ದರು.
ಅಷ್ಟರಲ್ಲೇ, ತಮ್ಮನ್ನು ಪುತ್ರನಂತೆ ಪ್ರೀತಿಸುತ್ತಿದ್ದ ಸೋದರಮಾವ ಮತ್ತು ಸಂಬಂಧಿಕರೆಲ್ಲರೂ ಇಸ್ಲಾಂ ಧರ್ಮದ ಪ್ರಚಾರಕ್ಕಾಗಿ ಕೇರಳಕ್ಕೆ ಪ್ರಯಾಣಿಸಿದ್ದಾರೆಂದು ಮತ್ತು ಅವರು ಅಲ್ಲಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆಂದು ತಮ್ಮ ಪಾಲಕರಿಂದ ಕೇಳಿ ತಿಳಿದುಕೊಂಡರು. ವಯಸ್ಸಾದಂತೆ ತಾನೂ ಅವರೊಂದಿಗೆ ಸೇರಬೇಕೆಂಬ ಆಸೆ ಅವರಲ್ಲಿ ಮೂಡಿತು. ತಂಙಳ್ ಅವರು ತಮ್ಮ ಆಸೆಯನ್ನು ಪೋಷಕರಿಗೆ ತಿಳಿಸಿದರು ಮತ್ತು ಅವರಿಂದ ಅನುಮತಿಯನ್ನು ಪಡೆದರು. ಅವರ ತಾಯಿ ಇದಕ್ಕೆ ಯಾವುದೇ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಬದಲಾಗಿ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಡುವುದಾಗಿ ಮತ್ತು ಮಲಬಾರ್ಗೆ ಹೋಗುವ ವ್ಯಾಪಾರಿಗಳ ಜೊತೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.
ಕುಟುಂಬದ ದೃಷ್ಟಿಯಿಂದ, ತಂದೆ ಮತ್ತು ತಾಯಿಯ ಕಡೆಯಿಂದಲೂ ಸೈಯದ್ ಅಲವಿ ತಂಙಳ್ ಅವರು ಶ್ರೇಷ್ಠ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಸೈಯದ್ ಕುಟುಂಬದಲ್ಲಿ ಜನಿಸಿದ ಇವರು ಪ್ರವಾದಿ ಪರಂಪರೆಯ 33ನೇ ಮೊಮ್ಮಗನಾಗಿದ್ದಾರೆ.
ಪ್ರವಾದಿವರೆಗಿನ ಅವರ ಕುಟುಂಬ ವಂಶಾವಳಿ:
ಸಯ್ಯಿದ್ ಅಲವಿ ಮೌಲದ್ದವೀಲ, ಸಯ್ಯಿದ್ ಮುಹಮ್ಮದ್, ಸಯ್ಯಿದ್ ಸಹಲ್, ಸಯ್ಯಿದ್ ಮುಹಮ್ಮದ್, ಸಯ್ಯಿದ್ ಅಹ್ಮದ್, ಸಯ್ಯಿದ್ ಸುಲೈಮಾನ್, ಸಯ್ಯಿದ್ ಉಮರ್, ಸಯ್ಯಿದ್ ಮುಹಮ್ಮದ್, ಸಯ್ಯಿದ್ ಸಹಲ್, ಸಯ್ಯಿದ್ ಅಬ್ದುರ್ರಹ್ಮಾನ್, ಸಯ್ಯಿದ್ ಅಬ್ದುಲ್ಲಾ. ಸಯ್ಯಿದ್ ಅಲವಿ, ಸಯ್ಯಿದ್ ಮುಹಮ್ಮದ್ ಮೌಲದ್ದವೀಲಾ, ಸಯ್ಯಿದ್ ಅಲಿ, ಸಯ್ಯಿದ್ ಮುಹಮ್ಮದ್ ಅಲ್ ಫಕೀಹುಲ್ ಮುಖದ್ದಂ, ಸಯ್ಯಿದ್ ಅಲಿ, ಸಯ್ಯಿದ್ ಮುಹಮ್ಮದ್ ಸಾಹಿಬು ಮಿರ್ಬಾತ್, ಸಯ್ಯಿದ್ ಅಲಿ ಖಾಲಿಲಾ ಖಸಮ್, ಸಯ್ಯಿದ್ ಅಲವಿ, ಸಯ್ಯಿದ್ ಮುಹಮ್ಮದ್, ಸಯ್ಯಿದ್ ಉಬೈದುಲ್ಲಾ, ಸಯ್ಯಿದ್ ಅಹ್ಮದ್ ಅಲ್ ಮುಹಾಜಿರ್, ಸಯ್ಯಿದ್ ಈಸನ್ನಕೀಬ್, ಸಯ್ಯಿದ್ ಮುಹಮ್ಮದ್, ಸಯ್ಯಿದ್ ಅಲವಿಯುಲ್ ಉರೈದಿ, ಸಯ್ಯಿದ್ ಜಾಫರುಸ್ಸಾದಿಖ್, ಸಯ್ಯಿದ್ ಮುಹಮ್ಮದ್ ಬಾಕಿರ್, ಸಯ್ಯಿದ್ ಅಲಿ ಸೈನುಲ್ ಆಬಿದೀನ್, ಸಯ್ಯಿದ್ ಹುಸೈನ್, ಸಯ್ಯಿದ್ ಫಾತಿಮಾ(ರ), ಮುಹಮ್ಮದ್ ನಬಿ(ಸ).
ಕುಟುಂಬ
ಸಯ್ಯಿದ್ ಹಸನ್ ಜಿಫ್ರಿಯವರ ಮಗಳಾದ ಫಾತಿಮಾ ಮತ್ತು ಕೊಯಿಲಾಂಡಿಯ ಸಯ್ಯಿದ್ ಅಬೂಬಕ್ಕರ್ ಮದನಿಯವರ ಮಗಳಾದ ಫಾತಿಮಾ ಮತ್ತು ತಾನೂರು ಪೊನ್ಮುಂಡಂ ಆಯಿಷಾ ಮತ್ತು ಇಂಡೋನೇಷ್ಯಾದ ತಿಮೋರ್ ದ್ವೀಪದ ಸ್ವಾಲಿಹಾ ಎಂಬವರು ಇವರ ಪತ್ನಿಯರು. ವಿಶ್ವಪ್ರಸಿದ್ಧ ಪಂಡಿತರಾಗಿ ಬೆಳೆದ ಸಯ್ಯಿದ್ ಫಝಲ್ ಪೂಕೋಯ ತಂಙಳ್ ಇವರ ಏಕೈಕ ಪುತ್ರರಾಗಿದ್ದಾರೆ. ಶರೀಫಾ ಅಲವಿಯ್ಯಾ, ಕುಂಞಿ ಬೀವಿ, ಫಾತಿಮಾ ಮತ್ತು ಸ್ವಾಲಿಹಾ ಎಂಬವರು ಇವರ ಪುತ್ರಿಯರು.
ಮಲಬಾರಿನೆಡೆಗೆ
ತಾಯಿಯ ಸಹೋದರರಾದ (ಮಾವಂದಿರಾದ) ಸಯ್ಯಿದ್ ಶೈಖ್ ಜಿಫ್ರಿ ಮತ್ತು ಸಯ್ಯಿದ್ ಹಸನ್ ಜಿಫ್ರಿಯವರ ಮೂಲಕ ತರೀಮ್ನಿಂದ ಮಲಬಾರಿನೆಡೆಗೆ ಬಂದರು. ಹಿಜರಿ 1183 ರಂಜಾನ್ 19 ರಂದು ತಮ್ಮ 17 ನೇ ವಯಸ್ಸಿನಲ್ಲಿ ಹಡಗಿನಲ್ಲಿ ಕೋಝಿಕ್ಕೋಡ್ ಗೆ ಬಂದಿಳಿದರು. ಸಯ್ಯಿದ್ ಹಸನ್ ಜಿಫ್ರಿಯವರ ಕಬರ್ ಸಂದರ್ಶಿಸಲು ಶೈಖ್ ಜಿಫ್ರಿಯವರೊಂದಿಗೆ ಮಂಬುರಂಗೆ ಬರಲಾರಂಭಿಸಿದರು ಮತ್ತು ಅಲ್ಲಿಯೇ ಸ್ಥಿರವಾಗಿ ನೆಲೆಸಿದರು. ತರುವಾಯ, ಮಲಬಾರ್ ಮುಸ್ಲಿಮರ ಸಾರ್ವಕಾಲಿಕ ಶ್ರೇಷ್ಠ ಆಧ್ಯಾತ್ಮಿಕ ನಾಯಕರಾಗಿ ಮತ್ತು ಖಾದಿರಿಯಾ ತರೀಕತ್ತಿನ ಶೈಖ್ ಆಗಿ ಅವರು ಕಾರ್ಯನಿರ್ವಹಿಸಿದರು.
ಸಾಮಾಜಿಕ ಸೌಹಾರ್ದತೆಯ ನಾಯಕ
ಪರಿಸ್ಥಿತಿಯ ಅನಿವಾರ್ಯತೆಯನ್ನು ಅರಿತು, ಹಿಂದೂ-ಮುಸ್ಲಿಂ ಸೌಹಾರ್ದತೆಯನ್ನು ಉತ್ತೇಜಿಸಿದ ಮತ್ತು ಧಾರ್ಮಿಕ ಸಾಮರಸ್ಯಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಸೈಯದ್ ಅಲವಿ ತಂಙಳ್. ಮುಸ್ಲಿಂ ಸಮುದಾಯದ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದ್ದ ಬ್ರಿಟಿಷ್ ಆಧಿಪತ್ಯವನ್ನು ಸೋಲಿಸಲು ಇಂತಹ ಒಂದು ಒಗ್ಗಟ್ಟು ಅಗತ್ಯವಾಗಿತ್ತು. ಕೇರಳದ ಹಿಂದೂ-ಮುಸ್ಲಿಂ ಸಂಘಟಿತ ಜೀವನಕ್ಕೆ ಧಕ್ಕೆ ತರುವಂತಹ ಬ್ರಿಟಿಷರ ನಿಲುವಿನ ವಿರುದ್ಧ ಹೋರಾಡಿದರು.
' *ಭಿನ್ನವಾಗಿ ಇರಿ* ' ಎಂಬ ಅಪಾಯಕಾರಿ ಚಿಂತನೆಯು ಸಮಾಜಕ್ಕೆ ತಂದೊಡ್ಡಿದ ಕೆಟ್ಟ ಫಲಿತಾಂಶಗಳನ್ನು ಹೋಗಲಾಡಿಸಲು, ಇಂತಹ ಗುಪ್ತ ಯೋಜನೆಗಳನ್ನು ಆಧ್ಯಾತ್ಮಿಕ ಶಕ್ತಿಯಿಂದ ಎದುರಿಸಲು ಸಯ್ಯಿದ್ ಅಲವಿ ತಂಗಳ್ ಅವರು ಅತಿಯಾಗಿ ಶ್ರಮಿಸಿದರು.
ಇಲ್ಲಿನ ಸಕಲ ಧರ್ಮೀಯರ ಬಗ್ಗೆಯೂ ಸಹಿಷ್ಣುತೆ ಮತ್ತು ಪ್ರೀತಿಯಿಂದಲೇ ಸಯ್ಯಿದ್ ಅಲವಿ ತಂಗಳ್ ಅವರು ಬೆಳೆದು ಬಂದರು. ಅವರು ಧಾರ್ಮಿಕ ಮತ್ತು ನಂಬಿಕೆಯ ವಿಷಯಗಳಲ್ಲಿ ಎಲ್ಲರಿಗೂ ಉಪದೇಶ ನೀಡುತ್ತಿದ್ದರು. ಲೌಕಿಕ ವಿಷಯಗಳಲ್ಲಿ ಇಸ್ಲಾಮೇತರರು ಅತಿಕ್ರಮಿಸದ ಹೊರತು, ಅವರು ಮುಸ್ಲಿಮೇತರರೊಂದಿಗೆ ಸಾಕಷ್ಟು ಸಹಕರಿಸುತ್ತಿದ್ದರು. ಮಾನವಕುಲದ ಒಳಿತನ್ನು ಮತ್ತು ಶಾಶ್ವತ ಮೋಕ್ಷವನ್ನೇ ಅವರು ಇದರ ಮೂಲಕ ಗುರಿಯಾಗಿರಿಸಿಕೊಂಡಿದ್ದರು.
ಹಲವು ಕಾಲಗಳಿಂದ ಏರನಾಡ್ನ ಮೂನ್ನಿಯೂರ್ನಲ್ಲಿ ನಡೆಯುತ್ತಿರುವ ಕೋಳಿಕಳಿಯಾಟಂ ಮಂಬುರಂ ತಂಗಳ್ ಅವರು ಮಲಬಾರ್ನಲ್ಲಿ ಬಿತ್ತಿದ ಧಾರ್ಮಿಕ ಸೌಹಾರ್ದತೆಗೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ. ಮಂಬುರಂ ಸಯ್ಯಿದ್ ಅಲವಿ ತಂಗಳ್ ಅವರಿಗೆ ಇದರೊಂದಿಗೆ ಸಂಬಂಧವಿದೆ ಎಂಬುದು ಇತಿಹಾಸ. ಕೆ.ಕೆ. ಮುಹಮ್ಮದ್ ಅಬ್ದುಲ್ ಕರೀಮ್ ಅವರ ' *ಮಲಬಾರಿನ ರತ್ನಗಳು'* ಎಂಬ ಕೃತಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ.
ಮಂಬುರಂ ಬಳಿಯ ಮೂನ್ನಿಯೂರ್ನಲ್ಲಿ ಹರಿಜನ ವಿಭಾಗದವರ ನೇತೃತ್ವದಲ್ಲಿ ' *ಕಳಿಯಾಟಂ* ' ಎಂಬ ಹೆಸರಿನಲ್ಲಿ ವಾರ್ಷಿಕ ಸಂತೆಯೂ ಉತ್ಸವವೂ ನಡೆಯುತ್ತದೆ. ಪ್ರತಿ ವರ್ಷ ಮುಸ್ಲಿಮರ ಜುಮಾ ದಿನದಂದು (ಶುಕ್ರವಾರ) ಈ ಆಚರಣೆ ನಡೆಯುತ್ತದೆ. ದಲಿತರಿಗೆ ಕಳಿಯಾಟಕ್ಕಾಗಿ ಶುಕ್ರವಾರದ ದಿನವನ್ನು ನಿಗದಿಪಡಿಸಿದ್ದು ಸಯ್ಯಿದ್ ಅಲವಿ ತಂಗಳ್ ಅವರೇ ಆಗಿದ್ದರು. ಮಲಬಾರಿನ ಹಲವು ಪ್ರದೇಶಗಳಿಂದ ತೆಂಗಿನ ಗರಿಯಿಂದ ತಯಾರಿಸಿದ ಕುದುರೆಯ ರೂಪಗಳು ಮತ್ತು ಚೆಂಡೆ ವಾದ್ಯಗಳೊಂದಿಗೆ ಹರಿಜನರು ಮೆರವಣಿಗೆಯಾಗಿ ಕಳಿಯಾಟಕ್ಕೆ ಬರುತ್ತಾರೆ. ಜಾತಿ-ಮತ ಭೇದವಿಲ್ಲದೆ ಅನೇಕ ಜನರು ಕಳಿಯಾಟವನ್ನು ನೋಡಲು ಮತ್ತು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮೂನ್ನಿಯೂರ್ ಕಳಿಯಾಟ ಮೈದಾನಕ್ಕೆ ಹೋಗುತ್ತಾರೆ. ಹರಿಜನರ ಜಾನಪದ ಕಲಾ ಪ್ರದರ್ಶನಗಳು ಕಣ್ಣಿಗೆ ಹಬ್ಬದಂತಿರುತ್ತವೆ. ಈ ರೀತಿಯಾಗಿ, ಸಮಾಜದಲ್ಲಿನ ಅನ್ಯಾಯದ ವಿರುದ್ಧ ಹೋರಾಡಿ ತಳ ಸಮುದಾಯದ ಜನರನ್ನು ಒಗ್ಗೂಡಿಸಿದ ಅನೇಕ ಇತಿಹಾಸಗಳು ಇಂದಿಗೂ ಹಲವು ಮನೆತನಗಳಲ್ಲಿ ಅಚ್ಚಳಿಯದೆ ಉಳಿದಿವೆ.
ಶಿಷ್ಯಂದಿರು
ಬೈತ್ತಾರ್ ಮುಹಮ್ಮದ್ ಮುಸ್ಲಿಯಾರ್, ಅಬುಕೋಯ ಮುಸ್ಲಿಯಾರ್, ಕುಸ್ಸೈ ಹಾಜಿ, ಮಗ ಸೈಯದ್ ಫಝಲ್ ಪೂಕೋಯ ತಂಗಲ್, ಸೈಯದ್ ಅಬ್ದುಲ್ ಖಾದಿರ್ ಅಹ್ದಲ್ ತಂಗಲ್ ಮಂಬಾಡ್,ವಲಿಯಂಗೋಡ್ ಉಮರ್ ಖಾಝಿ.
ನಿಧನ (ವಫಾತ್):
ಹಿಜರಿ 1260 ಮುಹರ್ರಂ 7 / 1844 ಫೆಬ್ರವರಿ 25 ಶನಿವಾರದಂದು ಮಹಾನರು ಇಹಲೋಕ ತ್ಯಜಿಸಿದರು.
ರಚನೆ: ಮಿಕ್ ದಾದ್ ಕುಂತೂರು