ಇಸ್ರೇಲ್ ನಡೆಸುತ್ತಿರುವುದು ಪ್ರತಿದಾಳಿಯೇ?...
ಕಾಲಾಂತರಗಳಿಂದ ಹಲವಾರು ಸಾವು ನೋವುಗಳಿಗೆ ಸಾಕ್ಷಿಯಾಗಿ ಇಂದಿನವರೆಗೂ ನಿರಂತರವಾಗಿ ನಡೆಯುತ್ತಿರುವ ಇಸ್ರೇಲ್-ಫೆಲೆಸ್ತೀನ್ ಕದನ ಅದು ದೊಡ್ಡ ತೀವ್ರ ಸ್ವರೂಪವನ್ನು ಪಡೆಯುತ್ತಿದೆ, ಅದರ ದುಷ್ಪರಿಣಾಮಗಳು ಜಗತ್ತಿನಾದ್ಯಂತ ವಿಸ್ತಾರವಾಗಿ ಹರಿಯುತ್ತಿದೆ. ಅಕ್ಟೋಬರ್ 7 ಇಸ್ರೇಲ್ ಪಾಲಿಗೆ ಅದೊಂದು ಕರಾಳ ದಿನ. ಕಾರಣ ಜಲ, ಭೂ ಹಾಗೂ ವಾಯು ಮಾರ್ಗದಿಂದಲೂ ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸುತ್ತದೆ. ನಿಜಕ್ಕೂ ಈ ದಾಳಿಯು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಸ್ವತಃ ಇಸ್ರೇಲಿಗಳೇ ಇದನ್ನು ನಿರೀಕ್ಷಿಸಿರಲಿಲ್ಲ. ಕಾರಣ ಇಸ್ರೇಲ್ ಗಡಿಯಲ್ಲಿರುವ ಐರನ್ ಡಾಂಬನ್ನೇ ಲೆಕ್ಕಿಸದೆ ಪ್ಯಾರಾಚೂಟ್ ವಾಹನದಂತಹ ವಾಹನದಲ್ಲಿ ವಾಯು ಮಾರ್ಗದಲ್ಲಿ ದಾಟಿ, ಸ್ಪೀಡ್ ಬೋಟ್ ನಲ್ಲಿ ಜಲ ಮಾರ್ಗವನ್ನು ದಾಟಿ ಮುಖಾ ಮುಖಿಯಾಗಿ ಬುಲ್ಡೋಜರ್ನಿಂದ ಗಡಿ ಬೇಲಿಯನ್ನು ತೆರೆದು ಬೈಕ್ ಮೂಲಕ ಮುನ್ನುಗ್ಗಿ ಶಸಸ್ತ್ರಗಳನ್ನುಪಯೋಗಿಸಿ ನಿರಂತರ ಗುಂಡಿನ ದಾಳಿ ನಡೆಸಿದ ಹಮಾಸ್ ದೊಡ್ಡ ಸಾಹಸದ ಕೆಲಸಕ್ಕೇ ಕೈ ಹಾಕಿದೆ.
ಕಾರಣ ಇಸ್ರೇಲ್ ಶಸ್ತಾಸ್ತ್ರಗಳನ್ನು ಉತ್ಪಾದಿಸುವುದರಲ್ಲಿ ಹೆಸರುವಾಸಿಯಾದ ದೇಶ. ಇಸ್ರೇಲೊಂದಿಗೆ ಕಾದಾಡುವುದು ಅದು ಮಾನ್ಯ ವಿಷಯವಿಲ್ಲ, ಯಾಕೆಂದರೆ ಒಂದು ಕಡೆಯಿಂದ ಜಗತ್ತಿನ ದೊಡ್ಡಣ್ಣ ಅಮೇರಿಕವು ಇಸ್ರೇಲ್ ಪರವೇ ಇದೆ.
ಕೆಲವರು ಈ ಸಂಘರ್ಷವನ್ನು ಧರ್ಮಾಧರಿತವೆಂದು ಬಣ್ಣಿಸಿದರೆ ಇನ್ನು ಕೆಲವು ಮಂದಿ ಇದು ಫೆಲೆಸ್ತೀನಿಯರ ಭೂ ಹಕ್ಕನ್ನು ಪಡೆಯಲಿರುವ ಹೋರಾಟವೆಂದು ಅಭಿಪ್ರಾಯ ಪಟ್ಟಿದ್ದಾರೆ. ಒಂದು ರೀತಿಯಲ್ಲಿ ನೋಡಿದರೆ ಇದು ಧರ್ಮಾಧಾರಿತ ಯುದ್ಧವಲ್ಲ ಎಂಬುವುದು ಸತ್ಯ. ಕಾರಣ ಇದು ನಿನ್ನೆ ಮೊನ್ನೆಯ ಸಂಘರ್ಷವಲ್ಲ ದಶಕಗಳ, ಶತಕಗಳ ಹಿಂದಿನ ಇತಿಹಾಸವನ್ನು ಹೊಂದಿರುವ ಸಂಘರ್ಷ. ಫೆಲೆಸ್ತೀನ್-ಇಸ್ರೇಲ್ ಕದನದ ತಿಹಾಸದ ಪುಟಗಳನ್ನು ತಿರುಚಿ ನೋಡಿದಾಗ ಕೆಲವು ಮುಖ್ಯಾಂಶಗಳನ್ನು ನಾವು ಅರ್ಥಮಾಡಿಕೊಳ್ಳಬಹುದು.
v ಯಾವಾಗ ಫೆಲೆಸ್ತೀನಿನಲ್ಲಿ ಯಹೂದಿಯರನ್ನು ಅಲ್ಪಸಂಖ್ಯಾತರನ್ನಾಗಿ ಪರಿಗಣಿಸಿ ಅವರಿಗೆ ನೆಲೆಸಲು ಜಾಗ ಕೊಡಬೇಕೆಂದು ಬ್ರಿಟನ್ ಒತ್ತಾಸೆಯನ್ನಿಟ್ಟಿತೋ ಅಂದಿನಿಂದ ಅರಬರ ಹಾಗೂ ಯಹೂದಿಯರ ನಡುವಿನ ಸಂಘರ್ಷವು ತಾರಕಕ್ಕೇರಿತು. ಫೆಲೆಸ್ತೀನಿನಲ್ಲಿ ಯಹೂದಿಗಳಿಗೆ ನೆಲೆಸಲು ಅವಕಾಶ ದೊರಕಿದಾಗ ಜೆರ್ಮೆನಿನಲ್ಲಿ ಹಿಟ್ಲರಿನ ಹಿಂಸೆ, ನರಮೇಧಕ್ಕೆ ಬೇಸತ್ತ ಯಹೂದಿಗಳು, 1920 ರಿಂದ 1946 ರ ಅವಧಿಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಫೆಲೆಸ್ತೀನ್ ಕಡೆಗೆ ಪಲಾಯನ ಬಂದರು. ಯಹೂದಿಗಳಿಗೆ ಫೆಲಸ್ತೀನ್ ಅರಬರಿಂದ ನೆಲೆಸಲು ಸೂರನ್ನು ಕಲ್ಪಿಸಲಾಯಿತು. 1800 ರಿಂದ 1931 ರ ವರೆಗೆ ಇಸ್ರೇಲಿಗೆ ಸಿಕ್ಕಿದ ಜಾಗತಿಕ ರಾಜಕೀಯ ಬೆಂಬಲದಿಂದಾಗಿ ಮುಸಲ್ಮಾನರ ಜನ-ಸಂಖ್ಯೆಯಲ್ಲಿ 3 ಪಟ್ಟು ಹೆಚ್ಚಿದರೆ ಯಹೂದಿಗಳ ಜನಸಂಖ್ಯೆಯಲ್ಲಿ 25 ಪಟ್ಟು ಹೆಚ್ಚಿತು. ಹೀಗಿರುವಾಗ ಫೆಲೆಸ್ತೀನನ್ನು ಅರಬರಿಗೆ ಮತ್ತು ಯಹೂದಿಗಳಿಗೆ ವಿಭಜಿಸಬೇಕೆಂದು 1947 ರಲ್ಲಿ ವಿಶ್ವ ಸಂಸ್ಥೆ ನಿರ್ಣಯ ಮಾಡಿತು. ಅಂದು ಜೆರುಸೆಲೆಂ ಅಂತರಾಷ್ಚ್ರೀಯ ನಿಯಂತ್ರಣಕ್ಕೆ ಒಳಪಟ್ಟಿತು. ಇದಕ್ಕೆ ಯಹೂದಿಗಳು ಒಪ್ಪಿದ್ದಾದರೆ ಅರಬರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಅನುಪಾತದ ಭೂಮಿಯನ್ನು ನೀಡಬೇಕೆಂದು ಸಮರ ಸಾರಿದರು. ಅರಬರ ಬೇಡಿಕೆ ಇಂದಿಗೂ ನೆರವೇರದ ಕಾರಣ ಸಂಘರ್ಷ ಇಂದಿಗೂ ಬೆಳೆಯುತ್ತಿದೆ. ಯಾವಾಗ ಬ್ರಿಟನ್ ಇದಕ್ಕೆ ಪರಿಹಾರ ಕಂಡುಹಿಡಿಯಲು ವಿಫಲವಾಗಿ ಹಿಂದೆ ಸರಿಯಿತೋ ಅಂದಿನಿಂದಲೇ ಯಹೂದಿಗಳು ಇಸ್ರೇಲ್ ಸ್ವತಂತ್ರ್ಯ ದೇಶ ಸ್ಥಾಪನೆಗೆ ಘೋಷಣೆ ಕೂಗಿದರು, ಫೆಲೆಸ್ತೀನೀ ಅರಬರು ಇದಕ್ಕೆ ಸಮ್ಮತಿಸಿರಲಿಲ್ಲ. ಬಳಿಕ ಕಾಲ ಕ್ರಮೇಣ ಇಸ್ರೇಲಿನಿಂದ ಅರಬರನ್ನು ಹೊರತಳ್ಳಲಾಯಿತು. ಇಲ್ಲಿ ನಿಜಕ್ಕೂ ಫೆಲೆಸ್ತೀನಿಯರು ಮೋಸ ಹೋದರು. ತಮ್ಮದೇ ಭೂ ಸ್ವಾಧೀನವನ್ನು ಕಳೆದುಕೊಂಡರು.
ಅಲ್ಪಸಂಖ್ಯಾತರಿಗೆ, ನಿರಾಶ್ರಿತರಿಗೆ ಆಶ್ರಯ ಕೊಡುವುದೆಂದು ಬಣ್ಣಿಸಿ ಒಂದು ರಾಜ್ಯವನ್ನೇ ಇಲ್ಲವಾಗಿಸುವ ಪರಿ ಇದು. ಇಸ್ರೇಲ್ ಲಕ್ಷಾಂತರ ಯಹೂದಿಗಳಿಗೆ ಆಶ್ರಯ ತಾಣವಿರಬಹುದು. ಆದರೆ ಇಸ್ರೇಲ್ ರಾಜ್ಯ ಉದಿಸಿದ ಬಳಿಕ ಉಂಟಾದ ಸಾವು ನೋವು ನಿಜಕ್ಕೂ ಬೆಲೆ ಕಂಟುವಂತದ್ದಲ್ಲ.
ಇಷ್ಟೆಲ್ಲಾ ನಡೆಯುತ್ತಿದ್ದರೆ ಫೆಲೆಸ್ತೀನಿನಿಂದ ಭೂಭಾಗವನ್ನು ಇಸ್ರೇಲ್ ಆಕ್ರಮಿಸ ತೊಡಗಿ ಇಂದಿಗೆ ಫೆಲೆಸ್ತೀನ್ ಭೂಪಟದಲ್ಲಿ ಫೆಲೆಸ್ತೀನ್ ಸಣ್ಣ ಪ್ರಮಾಣದ ಭೂಭಾಗವನ್ನೇ ಹೊಂದಿದೆ. ಇಸ್ರೇಲಿಗೆ ಅಮೇರಿಕವು ದೊಡ್ಡ ಪ್ರಮಾಣದ ಧನ ಸಹಾಯ, ಯುದ್ಧ ಶಸಸ್ತ್ರಗಳ ನೆರವು ನೀಡುತ್ತಿವೆ. ಸ್ವತಃ ಇಸ್ರೇಲ್ ಯುದ್ಧ ಶಸಸ್ತ್ರಗಳ ತಯಾರಿಕಾ ಕೇಂದ್ರ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಇಸ್ರೇಲ್ ನಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ತಂತ್ರಜ್ಞಾನ, ನೌಕಾಪಡೆ, ವಾಯುಪಡೆ ಸುಸಜ್ಜಿತವಾಗಿದೆ. 5 ಲಕ್ಷದಷ್ಟು ಸೈನಿಕರು, ಪೂರ್ಣ ಪ್ರಮಾಣದ ಅಣ್ವಸ್ತ್ರ ಸಜ್ಜಿತ ಆಯುಧಗಳು, 20 ಸಾವಿರಕ್ಕೂ ಹೆಚ್ಚು ನೌಕಾ ಯೋಧರು ಹಾಗೂ ಎಲ್ಲಾ ರೀತಿಯಲ್ಲೂ ಮುಂಚೂಣಿಯಲ್ಲಿರುವ ಯುದ್ಧ ಸಾಮರ್ಥ್ಯವಿರುವ ಯುದ್ಧ ನೌಕೆಗಳಿವೆ. ಇವೆಲ್ಲವು ಯಾವುದೇ ದೇಶವನ್ನು ಹಿಮ್ಮೆಟ್ಟಿಸುವ ಶಕ್ತಿಯನ್ನು ಹೊಂದಿದೆ.
ವಿಷಾದದ ಸಂಗತಿಯೆಂದರೆ ಈ ಸಂಘರ್ಷದಿಂದ ಅಮಾಯಕರು, ಮುಗ್ಧರು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಒಂದು ಕಡೆ ಇಸ್ರೇಲ್ ಸೇನೆಯು ಫೆಲೆಸ್ತೀನಿಯರ ನರಮೇಧವನ್ನೇ ಮಾಡುತ್ತಿದೆ. ಪ್ರತಿದಾಳಿಯೆಂದು ಹಣೆಪಟ್ಟಿಯನ್ನು ಕಟ್ಟಿ 3 ಸಾವಿರಕ್ಕಿಂದಲೂ ಹೆಚ್ಚು ಪುಟಾಣಿ ಮಕ್ಕಳನ್ನು, 1500ಕ್ಕೂ ಹೆಚ್ಚು ಮಹಿಳೆಯರನ್ನು ಅದೆಷ್ಟೋ ವೃದ್ಧರನ್ನು ರಾಕೆಟ್, ಗುಂಡು ದಾಳಿಯಿಂದ ಕೊಲ್ಲುವುದನ್ನು ಎಂದಿಗೂ ಸಮರ್ಥಿಸಲಾಗದು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗ ತುರ್ತು ವಾಹನಗಳನ್ನು ಗುರಿಯಾಗಿಸಿ ಗುಂಡಿಟ್ಟು ಕೊಲ್ಲುವ ಅಮಾನವಿಯ ಕೃತ್ಯವನ್ನೂ ಇಸ್ರೇಲ್ ಸೇನೆ ಮಾಡಿದೆ. ಇದು ಅವರ ಕ್ರೂರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
ಒಂದು ಭಾಗದಲ್ಲಿ ಇಸ್ರೇಲ್ ತನ್ನ ಆಕ್ರಮಣವನ್ನು ತೀವ್ರವಾಗಿ ಮುಂದುವರೆಸುತ್ತಿದೆಯಾದರೆ ಇನ್ನೊಂದೆಡೆ ಇದೇ ಇಸ್ರೇಲ್ ಸೈನಿಕರು ಭೂಯುದ್ಧವನ್ನು ಘೋಷಣೆ ಮಾಡಿದಂದಿನಿಂದ ತಮ್ಮ ಅಸ್ತಿತ್ವವನ್ನು ಕಳಚಿಕೊಂಡಿತೆ ಎಂಬ ರೀತಿಗೆ ಬಂದು ತಲುಪಿದೆ. ಕಾರಣ ಭೂ ಯುದ್ಧದಲ್ಲಿ ಹಮಾಸ್ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದೆ. ಮಾತ್ರವಲ್ಲ ಸುರಂಗಗಳನ್ನು ಮುನ್ನವೇ ತೋಡಿಯಿಟ್ಟು ಇಸ್ರೇಲ್ ಸೈನಿಕರ ಕಣ್ಣು ತಪ್ಪಿಸಿ ಬೇಕಾದ ರೀತಿಯಲ್ಲಿ ಇಸ್ರೇಲಿಗೆ ತಿರುಗೇಟು ನೀಡಲು ಸಜ್ಜಾಗಿದೆ. ಭೂಯುದ್ಧವನ್ನು ಪರಿಶೀಲಿಸಿ ನೋಡಿದಾಗ ಹಮಾಸ್ ಬಹಳ ಹಿಂದಿನಿಂದಲೂ ಈ ಸಂಘರ್ಷಕ್ಕೆ ತಯಾರಿಯನ್ನು ನಡೆಸುತ್ತಿದೆ ಎಂಬುವುದನ್ನು ತಿಳಿಯಬಹುದು. ಕೋಟಿಗಟ್ಟಲೆ ಬೆಲೆ ಬಾಳುವ ಇಸ್ರೇಲಿನ ಬಲಿಷ್ಟ ಯುದ್ಧ ಟ್ಯಾಂಕ್ ಗಳನ್ನು ಹಮಾಸ್ ಒಡೆದುರುಳಿಸಿದೆ. ಇದರಿಂದ ಇಸ್ರೇಲಿಗೆ ಬಹಳ ನಷ್ಟವಾಗಿದೆ ಎಂದು ಹೇಳಬಹುದು. ಒಂದು ಭಾಗದಲ್ಲಿ ಯೆಮನಿನ ಹೂತೀ ಸೈನಿಕರು, ಲೆಬನಾನಿನ ಹಿಝ್ಬುಲ್ಲಾ ಪಡೆ ಹಾಗೂ ರಷ್ಯಾದಿಂದ ಸೈನಿಕರು ಇಸ್ರೇಲ್ ಪರ ತಮ್ಮ ನಿಲುವನ್ನು ಘೋಷಿಸಿ ಸಂಪೂರ್ಣ ಸಹಾಯ ಹಸ್ತವನ್ನು ಮುಂದಿಟ್ಟಿದ್ದಾರೆ. ವಿಶೇಷವೆಂದರೆ ವಿಶ್ವದಲ್ಲೇ ಬಲಿಷ್ಠ ಎಂದೇ ಖ್ಯಾತಿ ಪಡೆದ ಉತ್ತರ ಕೊರಿಯಾದ ಕಿಮ್ ಜಾನ್ ಉನ್ ಹಮಾಸ್ ಗೆ ಆಯುಧಗಳನ್ನು ಒದಗಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದು ಸಂಶಯಾಸ್ಪದವಾದರೂ ಉತ್ತರ ಕೊರಿಯ ಫೆಲೆಸ್ತೀನ್ ಪರ ಎಂಬುವುದಕ್ಕೆ ಎರಡು ಮಾತಿಲ್ಲ.
ಹಲವಾರು ವರ್ಷಗಳಿಂದೀಚಿಗೆ ನಿರಂತರವಾಗಿ ಸದ್ದು ಮಾಡುತ್ತಿರುವ ಈ ಕದನವು ಇಲ್ಲಿಗೇ ಕೊನೆಗೊಳ್ಳಬೇಕಿದೆ. ಅನಾಥ ಮಕ್ಕಳ, ಪೋಷಕರ ರೋಧನೆಗೆ ಪರಿಹಾರ ಕಲ್ಪಿಸಬೇಕು. ಪುಟಾಣಿ ಮಕ್ಕಳ, ಮಹಿಳೆಯರ ಸಾವಿನ ಸಂಖ್ಯೆಯನ್ನು ನೋಡಿದರೆ ಬಹುಶಃ ಇದು ಫೆಲೆಸ್ತೀನಿನ ಮುಂದಿನ ತಲೆಮಾರನ್ನು ನಾಶ ಮಾಡಲಿರುವ ಒಂದು ಯತ್ನವೇ ಎಂಬ ಸಂಶಯ ಕಾಡುತ್ತಿದೆ. ಈ ಸಂಘರ್ಷವು ಒಪ್ಪಂದದಿಂದ ನಿಂತರೆ ಅದು ಮುಂದೊಂದು ದಿನದಲ್ಲಿ ಪುನಃ ಉದ್ಭವಿಸಲಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಹಿಂಸೆ, ದಾಳಿಗಳನ್ನು ಖಂಡಿಸೋಣ. ಮಾನವೀಯತೆಯನ್ನು ಮೆರೆದು ಸತ್ಯ, ನ್ಯಾಯದ ಪರ ನಿಲ್ಲೋಣ.
ಸ್ವಾದಿಕ್ ಪುತ್ತುರು
(ವಿದ್ಯಾರ್ಥಿ ದಾರುನ್ನುರ್ ಏಜುಕೇಶನ್ ಸೆಂಟರ್, ಕಾಶಿಪಟ್ನ)