ಅರಫಾ ಉಪವಾಸ
Thameem Hirebandadi

ಅರಫಾ ಉಪವಾಸ

‘ಅರಫಾ’ ಎಂಬ ಪದಕ್ಕೆ ತಿಳಿದುಕೊಳ್ಳುವುದು, ಗುರುತಿಸಿಕೊಳ್ಳುವುದು, ಪರಿಚಯವಾಗುವುದು ಎಂಬ ಅರ್ಥಗಳಿವೆ. ದುಲ್-ಹಿಜ್ಜಾ ತಿಂಗಳ ಒಂಬತ್ತನೇ ದಿನವೇ ಯೌಮುಲ್ ಅರಫಾ — ಅರಫಾ ದಿನ. ಈ ಮಹತ್ವಪೂರ್ಣ ದಿನದಲ್ಲಿ ಆಚರಿಸಲಾಗುವ ಉಪವಾಸವೇ ಅರಫಾ ಉಪವಾಸ. ಇದು ಪ್ರವಾದಿ ಮುಹಮ್ಮದ್ ﷺ ಅವರ ಅತ್ಯಂತ ಮಹತ್ತರವಾದ ಸುನ್ನತ್‌ಗಳಲ್ಲಿ ಒಂದಾಗಿದೆ. ಈ ದಿನಕ್ಕೆ ‘ಅರಫಾ’ ಎಂಬ ಹೆಸರು ಬರಲು ಅನೇಕ ಕಾರಣಗಳನ್ನು ಉಲಮಾಗಳು ಉಲ್ಲೇಖಿಸಿದ್ದಾರೆ.

ಕೆಲವು ವರದಿಗಳ ಪ್ರಕಾರ, ಆದಂ ನಬಿ عليه السلام ಭೂಮಿಗೆ ಇಳಿದದ್ದು ಭಾರತ ದೇಶದಲ್ಲಿ; ಬೀವಿ ಹವ್ವಾ رضي الله عنها ಜಿದ್ದಾದಲ್ಲಿ. ಬಳಿಕ ಇಬ್ಬರೂ ಪರಸ್ಪರ ಹುಡುಕುತ್ತಾ ಪ್ರಯಾಣಿಸಿದರು. ಅಂತಿಮವಾಗಿ ಅರಫಾ ಭೂಮಿಯಲ್ಲಿ ಒಂದಾದರು, ಭೇಟಿಯಾದರು. ಈ ಪುನರ್ಮಿಲನದ ಸ್ಮರಣಾರ್ಥವಾಗಿ ಆ ಸ್ಥಳಕ್ಕೂ, ಆ ದಿನಕ್ಕೂ ‘ಅರಫಾ’ ಎಂಬ ಹೆಸರು ಬಂದಿತು ಎಂದು ಹೇಳಲಾಗಿದೆ.

*ಉಪವಾಸದ ಅಪಾರ ಪುಣ್ಯ*

ಅರಫಾ ಉಪವಾಸದ ಮಹಿಮೆ ಅಪಾರ. ಪ್ರವಾದಿ ﷺ ಹೇಳಿದರು: “ಅರಫಾ ದಿನದ ಉಪವಾಸವು ಕಳೆದ ಒಂದು ವರ್ಷದ ಮತ್ತು ಬರಲಿರುವ ಒಂದು ವರ್ಷದ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ.”

ಅಂದರೆ, ಅಲ್ಲಾಹನ ಅನಂತ ಕರುಣೆಯಿಂದ ಕಳೆದ ವರ್ಷದ ಹಾಗೂ ಮುಂದಿನ ವರ್ಷದ ಸಣ್ಣ ಪಾಪಗಳು ಕ್ಷಮಿಸಲ್ಪಡುವ ಭಾಗ್ಯ ದೊರೆಯುತ್ತದೆ.

ಇಬ್ನು ಅಬ್ಬಾಸ್ رضي الله عنه ಹೇಳುತ್ತಾರೆ:

“ಈ ಮಹಾನ್ ಪ್ರತಿಫಲವು ಅರಫಾ ಉಪವಾಸ ಆಚರಿಸುವವನಿಗೆ ಇನ್ನೊಂದು ವರ್ಷದ ಆಯುಸ್ಸಿನ ಶುಭಸೂಚನೆಯಂತಿದೆ. ಏಕೆಂದರೆ ಮುಂದಿನ ವರ್ಷದ ಪಾಪಗಳೂ ಕ್ಷಮಿಸಲ್ಪಡಬೇಕಾದರೆ, ಅವನು ಆ ವರ್ಷವನ್ನು ಕಾಣಬೇಕಲ್ಲವೇ?”

ಇದು ನಿಜವಾಗಿಯೂ ಅಲ್ಲಾಹನ ಅಪಾರ ಅನುಗ್ರಹದ ನಿದರ್ಶನವಾಗಿದೆ.

ನಾವು ಯಾವ ದಿನ ಉಪವಾಸ ಆಚರಿಸಬೇಕು?

ನಮಗೆ ದುಲ್-ಹಿಜ್ಜಾ ಒಂಬತ್ತು ಆಗುವ ದಿನವೇ ಅರಫಾ ಉಪವಾಸದ ದಿನ.

ಅರಫಾದಲ್ಲಿ ಹಾಜಿಗಳು ನಿಲ್ಲುವ ದಿನದ ಲೆಕ್ಕಕ್ಕಿಂತ, ನಮ್ಮ ಪ್ರದೇಶದಲ್ಲಿ ಚಂದ್ರದರ್ಶನದ ಆಧಾರದ ಮೇಲೆ ಬಂದ ದುಲ್-ಹಿಜ್ಜಾ ಒಂಬತ್ತನೇ ದಿನವನ್ನು ಪರಿಗಣಿಸಬೇಕು.

ಆದ್ದರಿಂದ, “ಮಕ್ಕಾದಲ್ಲಿ ಯಾವ ದಿನ ಅರಫಾ ಆಗುತ್ತದೆಯೋ, ಅದೇ ದಿನ ಎಲ್ಲರೂ ಉಪವಾಸ ಆಚರಿಸಬೇಕು” ಎಂಬ ವಾದವು ಶರಈ ಆಧಾರವಿಲ್ಲದ ಅಭಿಪ್ರಾಯವಾಗಿದೆ ಎಂದು ಉಲಮಾಗಳು ಸ್ಪಷ್ಟಪಡಿಸಿದ್ದಾರೆ.

ಹಜ್ ಕರ್ಮದಲ್ಲಿ ತೊಡಗಿರದವರಿಗೆ ಅರಫಾ ಉಪವಾಸ ಸುನ್ನತ್ ಆಗಿದೆ. ದುಲ್-ಹಿಜ್ಜಾ ಎಂಟನೇ ದಿನ ಉಪವಾಸವೂ ಸುನ್ನತ್ ಆಗಿದೆ. ವಾಸ್ತವವಾಗಿ ದುಲ್-ಹಿಜ್ಜಾದ ಮೊದಲ ಒಂಬತ್ತು ದಿನಗಳ ಉಪವಾಸವು ಅತ್ಯಂತ ಮಹತ್ತರವಾದ, ಪ್ರಬಲವಾದ ಸುನ್ನತ್ ಎಂದು ಫುಖಹಾಅ್‌ಗಳು ವಿವರಿಸಿದ್ದಾರೆ.

ಸಾವಿರ ವರ್ಷಗಳ ಉಪವಾಸದ ಸಮಾನ ಪ್ರತಿಫಲ

ಬೀವಿ ಆಯಿಷಾ رضي الله عنها ಅವರಿಂದ ವರದಿಯಾಗಿದೆ:

ಪ್ರವಾದಿ ﷺ ಹೇಳಿದರು:

“ಅರಫಾ ದಿನದ ಉಪವಾಸವು ಸಾವಿರ ವರ್ಷಗಳ ಉಪವಾಸದ ಸಮಾನ ಪ್ರತಿಫಲವನ್ನು ಹೊಂದುತ್ತದೆ.”

(ಬೈಹಖಿ)

ಒಂದು ದಿನದ ಉಪವಾಸಕ್ಕೆ ಇಷ್ಟೊಂದು ಮಹತ್ತರ ಪ್ರತಿಫಲ—ಇದು ಅಲ್ಲಾಹನ ಅನಂತ ದಯೆ ಮತ್ತು ಉದಾರತೆ.

ಅರಫಾ ಹಗಲಿನ ಮಹಿಮೆ

ಜಾಬಿರ್ رضي الله عنه ವರದಿ ಮಾಡುತ್ತಾರೆ:

ಪ್ರವಾದಿ ﷺ ಹೇಳಿದರು:

“ನರಕಾಗ್ನಿಯಿಂದ ಅತ್ಯಧಿಕ ಜನರನ್ನು ಅಲ್ಲಾಹನು ಮುಕ್ತಗೊಳಿಸುವ ದಿನ ಅರಫಾ ದಿನವೇ ಆಗಿದೆ.”

ಇದು ಕ್ಷಮೆಯ ದಿನ.

ಇದು ಕರುಣೆಯ ದಿನ.

ಇದು ದುವಾಗಳಿಗೆ ಉತ್ತರ ಸಿಗುವ ದಿನ.

ಇದು ಕಣ್ಣೀರು ತೌಬಾಗೆ ಪರಿವರ್ತನೆಯಾಗುವ ದಿನ.

ತಲ್ಹತ್ ಬಿನ್ ಉಬೈದುಲ್ಲಾಹ್ رضي الله عنه ಅವರಿಂದ ವರದಿಯಾಗಿದೆ:

“ಶೈತಾನನು ಅತ್ಯಂತ ಕೀಳಾಗಿ, ಅವಮಾನಿತನಾಗಿ, ನಿರಾಶನಾಗಿ ಮತ್ತು ಕ್ರೋಧಿತನಾಗಿ ಕಾಣಿಸುವ ದಿನ ಅರಫಾ ದಿನವೇ. ಏಕೆಂದರೆ ಆ ದಿನ ಅಲ್ಲಾಹನ ಕರುಣೆ ಸುರಿಯುವುದನ್ನೂ, ಮಹಾಪಾಪಗಳು ಕ್ಷಮಿಸಲ್ಪಡುವುದನ್ನೂ ಅವನು ನೋಡುತ್ತಾನೆ.”

ಅರಫಾ ದಿನವು ಭೂಮಿಯ ಮೇಲೆ ಅಲ್ಲಾಹನ ರಹ್ಮತ್ ವಿಶೇಷವಾಗಿ ಇಳಿಯುವ ಮಹಾ ಅನುಗ್ರಹದ ದಿನವಾಗಿದೆ.

*ಕ್ಷಮಿಸಲ್ಪಡುವುದು ಯಾವ ಪಾಪಗಳು?*

ಅರಫಾ ಉಪವಾಸದಿಂದ ಎರಡು ವರ್ಷಗಳ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು ಹದೀಸಿನಲ್ಲಿ ಬಂದಿದೆ.

ಆದರೆ ಉಲಮಾಗಳು ವಿವರಿಸುವಂತೆ, ಇದರ ಅರ್ಥ ಮುಖ್ಯವಾಗಿ ಸಣ್ಣ ಪಾಪಗಳು (ಸಗಾಇರ್) ಕ್ಷಮಿಸಲ್ಪಡುವುದಾಗಿದೆ.

ಮಹಾಪಾಪಗಳು (ಕಬಾಇರ್) ಮಾತ್ರ ನಿಜವಾದ ತೌಬಾ—ಪಶ್ಚಾತ್ತಾಪ, ಪಾಪತ್ಯಾಗ, ಮತ್ತೆ ಅದಕ್ಕೆ ಮರಳದ ದೃಢ ನಿರ್ಧಾರ—ಇವುಗಳ ಮೂಲಕ ಕ್ಷಮಿಸಲ್ಪಡುತ್ತವೆ.

ಹೌದು, ಅಲ್ಲಾಹನು ಬಯಸಿದರೆ ತನ್ನ ಅಪಾರ ಕೃಪೆಯಿಂದ ಯಾವುದನ್ನೂ ಕ್ಷಮಿಸಬಲ್ಲನು. ಆದರೆ ಸಾಮಾನ್ಯ ನಿಯಮವಾಗಿ, ಪುಣ್ಯಕರ್ಮಗಳ ಮೂಲಕ ಕ್ಷಮಿಸಲ್ಪಡುತ್ತವೆ ಎಂದು ಶರೀಅತ್ತಿನಲ್ಲಿ ದಾಖಲಿಸಿದ್ದು, ಅದು ಕೇವಲ ಸಣ್ಣ ಪಾಪಗಳು ಮಾತ್ರವಾಗಿವೆ ಎಂದು ಇಸ್ಲಾಮಿನ ಪಂಡಿತರು ವಿವರಿಸಿದ್ದಾರೆ.

ಅಲ್ಲಾಹು ತಆಲಾ ನಮಗೆ ಅರಫಾ ದಿನದ ಉಪವಾಸ ಆಚರಿಸುವ ತೌಫೀಕ್ ನೀಡಲಿ.

ಆ ದಿನದ ದುವಾಗಳಲ್ಲಿ ನಮ್ಮನ್ನು ಸೇರಿಸಲಿ.

ನಮ್ಮ ಸಣ್ಣ-ದೊಡ್ಡ ಪಾಪಗಳನ್ನು ಕ್ಷಮಿಸಿ,

ತನ್ನ ಅಪಾರ ರಹ್ಮತ್‌ನ ನೆರಳಿನಲ್ಲಿ ನಮ್ಮೆಲ್ಲರನ್ನು ಒಳಗೊಳ್ಳಿಸಲಿ.

Related Posts

Leave A Comment

Voting Poll

Get Newsletter