ತ್ಯಾಗದಿಂದ ಅರಳಿದ ಮರುಭೂಮಿಯ ನಾಗರಿಕತೆ
Salam Baithadka

ಇದು ಸಾವಿರಾರು ವರ್ಷಗಳ ಹಿಂದಿನ ಕಥೆ. ತನ್ನ ಸೃಷ್ಟಿಕರ್ತನ ಆದೇಶಕ್ಕೆ ತನ್ನ ಜೀವನವನ್ನೇ ಸಂಪೂರ್ಣವಾಗಿ ಸಮರ್ಪಿಸಿದ ಒಬ್ಬ ಮಹಾನ್ ಮನುಷ್ಯನ ಕಥೆ. ಸೃಷ್ಟಿಗಳೆಲ್ಲ ಗೌರವದಿಂದ ತಲೆಬಾಗುವ, ದಾರಿ ತಪ್ಪಿದ ಯುಗದಲ್ಲೂ ಸತ್ಯದ ಬೆಳಕನ್ನು ಹುಡುಕುವ ಹೃದಯಗಳಿಗೆ ಆಶಾಕಿರಣವಾಗಿರುವ ಒಂದು ಅದ್ಭುತ ಜೀವನಗಾಥೆ.

ಇದು ಬೇರೆ ಯಾರ ಚರಿತ್ರೆಯೂ ಅಲ್ಲ-ಅಲ್ಲಾಹನ ಖಲೀಲು, ಪ್ರವಾದಿ ಇಬ್ರಾಹೀಂ (ಅ) ರವರ ಚರಿತ್ರೆ.

ಯಾವ ಜೀವವೂ ಚಿಗುರೊಡೆಯದ, ನೀರಿನ ಹನಿ ಕಾಣದೆ ಸುಟ್ಟು ಬರಡಾಗಿದ್ದ ಮಕ್ಕಾದ ನಿರ್ಜನ ಕಣಿವೆಯಲ್ಲಿ, ತನ್ನ ಪ್ರಿಯ ಪತ್ನಿ ಹಾಜರಾ (ಅ) ಹಾಗೂ ಮೊಲೆಯುಣ್ಣುತ್ತಿದ್ದ ಪುಟ್ಟ ಮಗುವನ್ನು ಅಲ್ಲಾಹನ ಆದೇಶದ ಮೇರೆಗೆ ಕೇವಲ ಒಂದು ಚೊಂಬು ನೀರು ಮತ್ತು ಸ್ವಲ್ಪ ಖರ್ಜೂರದೊಂದಿಗೆ ಬಿಟ್ಟು ಹಿಂದಿರುಗಿದ ಮಹಾತ್ಯಾಗಿಯ ಕಥೆ ಇದು. ಆ ಕ್ಷಣದ ಮೌನ, ಆ ವಿದಾಯದ ನೋವು, ಆ ವಿಧೇಯತೆಯ ಆಳ-ಇವೆಲ್ಲ ಇಂದಿಗೂ ಮಾನವ ಮನಸ್ಸನ್ನು ನಡುಗಿಸುತ್ತವೆ.

ಇಂದು ಬೆಳೆದು ಬರುತ್ತಿರುವ ಹೊಸ ತಲೆಮಾರಿನಲ್ಲಿ ಈಮಾನಿನ ಕಾಂತಿ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಮಹತ್ವದ ಸತ್ಯವೊಂದು ಇದೆ. ಇಬ್ರಾಹೀಂ (ಅ) ರವರು ತಮ್ಮ ತ್ಯಾಗ, ತವಕ್ಕುಲ್ ಮತ್ತು ಸಂಪೂರ್ಣ ಸಮರ್ಪಣೆಯ ಮೂಲಕ ಕೇವಲ ಒಂದು ಕುಟುಂಬವನ್ನಲ್ಲ, ಒಂದು ಹೊಸ ನಾಗರಿಕತೆಯನ್ನೇ ನಿರ್ಮಿಸಿದರು. ಅದು ಇತಿಹಾಸದ ಪುಟಗಳಲ್ಲಿ ಮಾತ್ರವಲ್ಲ; ಇಂದಿಗೂ ಜೀವಂತವಾಗಿ ಉಸಿರಾಡುತ್ತಿದೆ.

ಒಂದು ಕಡೆ ಏಕ ಇಲಾಹನಲ್ಲಿ ವಿಶ್ವಾಸವಿರಿಸದ ತಂದೆ. ಮತ್ತೊಂದು ಕಡೆ ತನ್ನನ್ನು ಹುಚ್ಚನೆಂದು ಕರೆದ, ಅಗ್ನಿಕುಂಡಕ್ಕೆ ಎಸೆದ, ಅಲ್ಲಾಹನಲ್ಲಿ ವಿಶ್ವಾಸವಿರಿಸಿದವರನ್ನು ಹಿಂಸೆಗೆ ಒಳಪಡಿಸಿದ ಶತ್ರು ಸಮುದಾಯ. ಇಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಇಬ್ರಾಹೀಂ (ಅ) ಸ್ಥಿರವಾಗಿ ನಿಂತರು.

ತನ್ನ ಪ್ರಿಯ ಪತ್ನಿಯನ್ನು ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಹೊರಟಾಗಲೂ ಅವರು ಪ್ರಶ್ನಿಸಲಿಲ್ಲ. ಅನೇಕ ವರ್ಷಗಳ ನಿರೀಕ್ಷೆಯ ನಂತರ ಲಭಿಸಿದ ಮಗನನ್ನು ಕುರ್ಬಾನಿ ಮಾಡಲು ಆದೇಶ ಬಂದಾಗಲೂ ಅವರು ಹಿಂಜರಿಯಲಿಲ್ಲ. ಕತ್ತಿಯನ್ನು ಮಗನ ಕತ್ತಿಗೆ ಇಟ್ಟಾಗಲೂ "ಯಾಕೆ?" ಎಂದು ಕೇಳಲಿಲ್ಲ. "ನಾನು ಮಾಡಲಾರೆ” ಎಂದು ವಿರೋಧಿಸಲಿಲ್ಲ. ಅಲ್ಲಾಹನ ಆಜ್ಞೆಯ ಮುಂದೆ ತಲೆಬಾಗಿದ ಆ ಹೃದಯವೇ ಇಬ್ರಾಹೀಂ (ಅ) ರವರ ಮಹಿಮೆ.

ಇಬ್ರಾಹೀಂ (ಅ), ಹಾಜರಾ (ಅ), ಇಸ್ಮಾಈಲ್ (ಅ) - ಈ ಕುಟುಂಬದ ತ್ಯಾಗ, ಸಬ್ ಮತ್ತು ಸಮರ್ಪಣೆ ಕೇವಲ ಒಂದು ಕಥೆಯಾಗಿ ಉಳಿದುಹೋಗಲಿಲ್ಲ. ಅದು ಇಂದಿಗೂ ಹಜ್ ಎಂಬ ಜೀವಂತ ಆರಾಧನೆಯ ರೂಪದಲ್ಲಿ ಪ್ರತಿವರ್ಷ ಲಕ್ಷಾಂತರ ಜನರ ಬದುಕಿನಲ್ಲಿ ಮರುಕಳಿಸುತ್ತಿದೆ. ಕಾರಣಗಳನ್ನು ಮಾತ್ರ ಹುಡುಕುವ ಇಂದಿನ ಹೊಸ ತಲೆಮಾರಿಗೆ, ಅವರ ಜೀವನವು ಪ್ರಶ್ನೆಗಳಿಗೆ ಉತ್ತರವಾದ ನಿದರ್ಶನವಾಗಿದೆ.

ಕತ್ತು ಕುಯ್ಯಲು ನಿರಾಕರಿಸಿದ ಕತ್ತಿ... ಇಬ್ರಾಹೀಂ (ಅ) ರವರನ್ನು ಸುಡದ ಬೆಂಕಿ... ಬರಿದಾದ ಮರುಭೂಮಿಯಿಂದ ಉಕ್ಕಿಬಂದ ಝಂಝಂ ... ಇವೆಲ್ಲವೂ ನಮಗೆ ಒಂದೇ ಸಂದೇಶವನ್ನು ಸಾರುತ್ತವೆ ಅಲ್ಲಾಹನಿಗಾಗಿ ಮಾಡಿದ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ.

ಇಬ್ರಾಹೀಂ (ಅ) ದುನಿಯಾದ ಸುಖಸೌಕರ್ಯಗಳ ಹಿಂದೆ ಓಡಿದವರಲ್ಲ; ಅಲ್ಲಾಹನ ತೃಪ್ತಿಯ ಹಿಂದೆ ನಡೆದವರು. ಮಾನವನ ದೃಷ್ಟಿಯಲ್ಲಿ ಅಸಾಧ್ಯವೆನಿಸುವ ಕೆಲಸಗಳನ್ನೂ ಅವರು ಅಲ್ಲಾಹನಿಗೋಸ್ಕರ ಸಹಿಸಿದರು. ತನ್ನ ಕೋಪವನ್ನೂ, ಅಭಿಮಾನವನ್ನೂ, ಭಯವನ್ನೂ ಅಲ್ಲಾಹನ ಮುಂದೆ ಸಮರ್ಪಿಸಿದರು. ಅವರು ಒಡೆಯಲು ಯತ್ನಿಸಿದ್ದು ಮನುಷ್ಯರನ್ನು ಅಲ್ಲ; ಮನುಷ್ಯರ ಹೃದಯಗಳಲ್ಲಿ ಬೆಳೆದಿದ್ದ ಅಹಂಕಾರ, ಹಗೆ, ಅನ್ಯಾಯ ಮತ್ತು ಶಿರ್ಕಿನ ಮೂರ್ತಿಗಳನ್ನು. ಇಂದು ಮನುಷ್ಯನ ಮೌಲ್ಯವನ್ನು ಅವನ ಉಡುಪು, ಆಸ್ತಿ, ಸ್ಥಾನಮಾನಗಳಿಂದ ಅಳೆಯುವ ಕಾಲದಲ್ಲಿ, ಇಬ್ರಾಹೀಂ (ಅ) ರವರ ಜೀವನ ನಮಗೆ ಕಲಿಸುವುದು-ಮನುಷ್ಯನ ನಿಜವಾದ ಸೌಂದರ್ಯ ಅವನ ಹೃದಯದಲ್ಲೂ ಸ್ವಭಾವದಲ್ಲೂ ಇದೆ ಎಂಬುದನ್ನು.

ಅವರ ಜೀವನದ ತ್ಯಾಗ, ಸಬ್, ತವಕ್ಕುಲ್ ಮತ್ತು ಅಲ್ಲಾಹನ ಮೇಲಿನ ಅಚಲ ವಿಶ್ವಾಸ ನಮ್ಮೊಳಗೂ ಅರಳಲಿ. ನಮ್ಮ ಬದುಕು ಕೂಡ ಅಲ್ಲಾಹನ ಮೆಚ್ಚುಗೆಗೆ ಪಾತ್ರವಾಗಲಿ.

ಅಲ್ಲಾಹು ತಆಲಾ ನಮಗೆ ಇಬ್ರಾಹೀಂ (ಅ) ರವರ ಜೀವನದಿಂದ ಪಾಠ ಕಲಿಯುವ ತೌಫೀಕ್ ನೀಡಲಿ. ನಮ್ಮ ಬದುಕನ್ನು ಈಮಾನಿನಿಂದ ಅಲಂಕರಿಸಲಿ. ಆಮೀನ್.

-ಸಲಾಂ ಬೈತಡ್ಕ

Related Posts

Leave A Comment

Voting Poll

Get Newsletter