ಪವಿತ್ರ ದಿನಗಳು, ಅನಂತ ಪ್ರತಿಫಲಗಳು: ದುಲ್ ಹಿಜ್ಜಾತಿಂಗಳ ಪ್ರಥಮ ಹತ್ತು ದಿನಗಳ ಆಧ್ಯಾತ್ಮಿಕ ಪಯಣ ಭಾಗ 2
ಹಾಗಾದರೆ ಈ ಹತ್ತು ದಿನಗಳನ್ನು ಇಷ್ಟೊಂದು ವಿಶೇಷವಾಗಿಸುವುದು ಯಾವುದು?
ಈ ದಿನಗಳ ಶ್ರೇಷ್ಠತೆಗೆ ಇಸ್ಲಾಮಿಕ್ ವಿದ್ವಾಂಸರು ಹಲವು ಪ್ರಮುಖ ಕಾರಣಗಳನ್ನು ನೀಡಿದ್ದಾರೆ. ಅದರಲ್ಲಿ ಅತ್ಯಂತ ಮುಖ್ಯವಾದ ಕಾರಣವೆಂದರೆ ಅಲ್ಲಾಹನು ಇದೇ ಅವಧಿಯಲ್ಲಿ ಇಸ್ಲಾಂ ಧರ್ಮವನ್ನು ಸಂಪೂರ್ಣಗೊಳಿಸಿ ಪರಿಪೂರ್ಣವಾಗಿಸಿದನು. ಪವಿತ್ರ ಅರಪಾ ದಿನದಂದು ಈ ಕೆಳಗಿನ ಕುರಾನ್ ವಾಕ್ಯವು ಅವತೀರ್ಣಗೊಂಡಿತು.
"ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ, ನಿಮ್ಮ ಮೇಲಿನ ನನ್ನ ಅನುಗ್ರಹವನ್ನು ಸಂಪೂರ್ಣಗೊಳಿಸಿ, ಇಸ್ಲಾಂ ಧರ್ಮವನ್ನು ನಿಮಗಾಗಿ ನಿಮ್ಮ ಜೀವನ ಧರ್ಮವಾಗಿ ಅಂಗೀಕರಿಸಿದ್ದೇನೆ" -ಸೂರತುಲ್ ಮಾಯಿದಾ (5:3)
ಅಲ್ಲದೆ ಇಬ್ಬು ಹಜರುಲ್ ಅಸ್ಖಲಾನಿ ಅವರು ವಿವರಿಸುವ ಪ್ರಕಾರ ಈ ಹತ್ತು ದಿನಗಳ ವಿಶಿಷ್ಟತೆಗೆ ಪ್ರಮುಖ ಕಾರಣವೆಂದರೆ ಇಸ್ಲಾಂನ ಐದು ಮೂಲ ಸ್ತಂಭಗಳು ಈ ಒಂದೇ ಅವಧಿಯಲ್ಲಿ ಒಗ್ಗೂಡಿ ಸೇರುತ್ತದೆ ಎಂಬುದಾಗಿದೆ.
1. ಶಹಾದತ್ (ವಿಶ್ವಾಸದ ಘೋಷಣೆ)
2. ಸ್ವಲಾತ್ (ನಮಾಝ್/ಪ್ರಾರ್ಥನೆ)
3. ಸೌಂ (ಉಪವಾಸ)
4. ಝಕಾತ್(ದಾನಧರ್ಮ)
5. ಹಜ್ಜ್ (ಪವಿತ್ರ ಯಾತ್ರೆ)
ಇಸ್ಲಾಮಿಕ್ ವರ್ಷದ ಬೇರೆ ಯಾವುದೇ ಸಮಯವು ಆರಾಧನೆಯ ಇಂತಹ ಸಮಗ್ರ ರೂಪವನ್ನು ಒಟ್ಟಿಗೆ ಒಳಗೊಳ್ಳುವುದಿಲ್ಲ. ಈ ದಿನಗಳನ್ನು ಓರ್ವ ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೇಳಲ್ಪಟ್ಟಾಗ ಇಮಾಂ ಹಸನುಲ್ ಬಸುರಿ(ರ.ಅ) ರವರು ಅತ್ಯಂತ ಸಮತೋಲಿತ ಹಾಗೂ ವಿವೇಕಯುತವಾದ ಉತ್ತರವನ್ನು ಸಮರ್ಪಿಸಿದರು, ಅವರು ಮೊದಲಿಗೆ ಐದು ಹೊತ್ತಿನ ನಿಯಮಿತ ನಮಾಜ್ ಗಳಂತಹ ಪ್ರಮುಖ ಕರ್ತವ್ಯಗಳನ್ನು ತಪ್ಪದೇ ಪಾಲಿಸುವುದನ್ನು ಒತ್ತಿ ಹೇಳಿದ್ದಲ್ಲದೇ ಸಾಧ್ಯವಾದರೆ ಈ ದಿನಗಳೆಲ್ಲ ಉಪವಾಸ ವ್ರತವನ್ನು ಆಚರಿಸುವ ಮಹತ್ವವನ್ನು ಕೂಡ ನೆನಪಿಸಿದ್ದಾರೆ. ತದನಂತರ ಅವರು ವಿಶ್ವಾಸಿಗಳಿಗೆ ದಿಕ್ರ್, ಸ್ವದಖಾ, ಐಚ್ಛಿಕ ಉಪವಾಸಗಳು ಮತ್ತು ಸುನ್ನತ್ ನಮಾಝ್ ಗಳಂತಹ ಸತ್ಕರ್ಮಗಳನ್ನು ಅಧಿಕರಿಸುವುದು ಪ್ರೋತ್ಸಾಹಿಸಿದರು. ಏಕೆಂದರೆ ಈ ಪವಿತ್ರ ದಿನಗಳಲ್ಲಿ ಮಾಡುವ ಕಾರ್ಯಗಳಿಗೆ ಸಿಗುವ ಪ್ರತಿಫಲವು ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ, ಮತ್ತು ಅತ್ಯಂತ ಸಣ್ಣ ಒಳ್ಳೆಯ ಕೆಲಸವೂ ಆಧ್ಯಾತ್ಮಿಕವಾಗಿ ಅಪಾರವಾದ ತೂಕ ಹಾಗೂ ಮಹತ್ವವನ್ನು ಪಡೆದುಕೊಳ್ಳುತ್ತದೆ.
*ಈ ದಿನಗಳ ಕುರಿತು ಪವಿತ್ರ ಕುರಾನ್ ಏನು ಹೇಳುತ್ತದೆ?*
ದುಲ್ ಹಿಜ್ಜಾ ತಿಂಗಳ ಪ್ರಥಮ ಹತ್ತು ದಿನಗಳು ಇಸ್ಲಾಂ ಧರ್ಮದಲ್ಲಿ ಅತ್ಯಂತ ವಿಶಿಷ್ಟ ಹಾಗೂ ಉನ್ನತವಾದ ಸ್ಥಾನವನ್ನು ಅಲಂಕರಿಸಿದೆ. ಬಹುಸಂಖ್ಯಾತ ವಿದ್ವಾಂಸರ- ಅದರಲ್ಲೂ ಪ್ರಮುಖವಾಗಿ ಇಮಾಂ ಅಲ್ ತ್ವಬ್ರೀ ಅವರ ಅಭಿಪ್ರಾಯದ ಪ್ರಕಾರ ಸೂರತುಲ್ ಫಜ್ರ್ ನಲ್ಲಿ ಅಲ್ಲಾಹನು ಯಾವ ಹತ್ತು ರಾತ್ರಿಗಳ ಮೇಲೆ ಪ್ರಮಾಣ ಮಾಡಿದ್ದಾನೋ, ಅವು ಇದೇ ದಿನಗಳನ್ನು ಉಲ್ಲೇಖಿಸುತ್ತವೆ.
"ಮುಂಜಾನೆ ಮತ್ತು ಹತ್ತು ರಾತ್ರಿಗಳನ್ನು ಸಾಕ್ಷಿಯಾಗಿ"- ಸೂರತುಲ್ ಫಜ್ರ್ (89:1,2) ಈ ಸುಧೀರ್ಘ ವ್ಯಾಖ್ಯಾನವನ್ನು ವಿದ್ವಾಂಸರ ಸರ್ವ ಸಮ್ಮತ ಒಮ್ಮತ (ಇಜ್ಮಾ)ಎಂದು ಪರಿಗಣಿಸಲಾಗಿದೆ. ಇದು ಈ ದಿನಗಳಿಗಿರುವ ಅಪಾರವಾದ ಮಹಿಮೆಯನ್ನು ಎತ್ತಿ ತೋರಿಸುತ್ತದೆ. ಏಕೆಂದರೆ ಸ್ವತಃ ಅಲ್ಲಾಹನೇ ಇವುಗಳ ಮೇಲೆ ಆಣೆ ಇಟ್ಟು ಪ್ರಮಾಣ ಮಾಡುವ ಮೂಲಕ ಈ ದಿನಗಳನ್ನು ಗೌರವಿಸಿದ್ದಾನೆ. ಇದರ ಕುರಿತು ಕೆಲವು ವಿದ್ವಾಂಸರು ಪರ್ಯಾಯ ದೃಷ್ಟಿಕೋನಗಳನ್ನು ಹೊಂದಿದ್ದು ಈ ಹತ್ತು ರಾತ್ರಿಗಳು ರಂಜಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳನ್ನು ಅಥವಾ ಕುರಾನ್ ವಾಕ್ಯದಲ್ಲಿ ನಿರ್ದಿಷ್ಟ ಉಪಪದ ಇಲ್ಲದಿರುವುದರಿಂದ ಎರಡು ಅವಧಿಗಳನ್ನು ಹೊಂದಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಹೇಗಾದರೂ, ಈ ಪವಿತ್ರ ಸೂಕ್ತಗಳು ದುಲ್ ಹಿಜ್ಜಾ ತಿಂಗಳ ಪ್ರಥಮ ಹತ್ತು ರಾತ್ರಿಗಳನ್ನೇ ಉಲ್ಲೇಖಿಸುತ್ತದೆ ಎಂಬುದು ಅತ್ಯಂತ ಪ್ರಮುಖ ಹಾಗೂ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಸಿದ್ಧಾಂತವಾಗಿದೆ.
ದಿನಗಳು ಎನ್ನುವುದರ ಬದಲಿಗೆ ರಾತ್ರಿಗಳು ಎಂದು ಏಕೆ ಉಲ್ಲೇಖಿಸಲಾಗಿದೆ?
ದುಲ್ ಹಿಜ್ಜಾ ತಿಂಗಳ ನಿರ್ದಿಷ್ಟ ಅವಧಿಯನ್ನು ಅತ್ಯಂತ ಪುಣ್ಯದಾಯಕ ದಿನಗಳೆಂದು ಪರಿಗಣಿಸಲಾಗಿದ್ದರೂ, ಪವಿತ್ರ ಕುರಾನ್ ಇವುಗಳನ್ನು ರಾತ್ರಿಗಳು ಎಂದು ಏಕೆ ಸಂಬೋಧಿಸುತ್ತದೆ ಎಂಬ ಸಾಮಾನ್ಯ ಜಿಜ್ಞಾಸೆ ಮೂಡುವುದು ಸಹಜ.
ಇದಕ್ಕೆ ಉತ್ತರವು ಅರಬಿಕ್ ಭಾಷೆಯ ಸಾಹಿತ್ಯ ಶ್ರೀಮಂತಿಕೆ ಮತ್ತು ಅಭಿವ್ಯಕ್ತಿ ಚಾತುರ್ಯದಲ್ಲಿ ಅಡಗಿದೆ. ಅರೇಬಿಕ್ ಭಾಷಾ ಶೈಲಿಯಲ್ಲಿ ಸಂದರ್ಭಕ್ಕೆ ಅನುಗುಣವಾಗಿ ರಾತ್ರಿ ಅಥವಾ ದಿನ ಎಂಬ ಪದಗಳು ಕೇವಲ ಹಗಲು ಅಥವಾ ಕತ್ತಲನ್ನು ಮಾತ್ರ ಸೂಚಿಸದೆ, ಸಂಪೂರ್ಣ 24 ಗಂಟೆಯ ಅಹೋರಾತ್ರಿ ಅವಧಿಯನ್ನು ಪ್ರತಿನಿಧಿಸುತ್ತದೆ.
ಉದಾಹರಣೆಗೆ ಪವಿತ್ರ ಕುರಾನ್ ನಲ್ಲಿ ಬರುವ ಪ್ರವಾದಿ ಝಕರಿಯ ಅವರ ವೃತಾಂತದಲ್ಲಿ ಇದೇ ಕಾಲಾವಧಿಯನ್ನು ಬೇರೆ ಬೇರೆ ಸೂಕ್ತಗಳಲ್ಲಿ ಹಗಲು ಮತ್ತು ರಾತ್ರಿ ಎಂಬ ಎರಡೂ ಪದಗಳ ಮೂಲಕ ಉಲ್ಲೇಖಿಸಲಾಗಿದೆ. ತನ್ಮೂಲಕ ಸೂರತುಲ್ ಫಜ್ರ್ ನಲ್ಲಿ ಬರುವ 10 ರಾತ್ರಿಗಳು ಎಂಬ ಪ್ರಯೋಗವು ಹಗಲು ಮತ್ತು ರಾತ್ರಿ ಎರಡನ್ನು ಒಳಗೊಂಡ ಸಂಪೂರ್ಣ ಅವಧಿಯನ್ನು ಸಾಂಕೇತಿಕವಾಗಿ ದ್ವನಿಸುತ್ತದೆ.
ಸೂರತುಲ್ ಫಜ್ರ್ ನಲ್ಲಿರುವ ಇತರ ಪ್ರಮಾಣಗಳು
ತದನಂತರ ಅಲ್ಲಾಹನು ಫಜ್ರ್ ಸಾಕ್ಷಿಯಾಗಿ ಪ್ರಮಾಣ ಮಾಡುತ್ತಾನೆ- ಇದನ್ನು ಅನೇಕ ವಿದ್ವಾಂಸರು ದುಲ್ ಹಿಜ್ಜಾ ತಿಂಗಳ ಈ 10 ದಿನಗಳ ಮುಂಜಾನೆಯ ಸಮಯವೆಂದು ವ್ಯಾಖ್ಯಾನಿಸುತ್ತಾರೆ. ಈ ಉಪಕಾಲವು ಅರಫಾ ದಿನದ ಸಮಾಪ್ತಿಯನ್ನು ಸೂಚಿಸುವುದಲ್ಲದೇ, ಬಲಿದಾನದ ಶುಭ ದಿನವಾದ ಈದುಲ್ ಅಝ್ಹಾ ವನ್ನು ಬರಮಾಡಿಕೊಳ್ಳುತ್ತದೆ. ಈ ಮುಂಜಾನೆಯ ಕುರಿತು ಪ್ರವಾದಿಯವರು (ಸ.ಅ) ಹೀಗೆ ಪ್ರಾರ್ಥಿಸಿದ್ದಾರೆ: "ಓ ಅಲ್ಲಾಹನೇ, ನನ್ನ ಉಮ್ಮತ್ತಿನ ಮುಂಜಾನೆಯ ಅವಧಿಯಲ್ಲಿ ಅಭಿವೃದ್ಧಿ ಹಾಗೂ ದೈವಿಕ ಅನುಗ್ರಹ ಕರುಣಿಸು"-(ಸುನನು ಅಬೀ ದಾವೂದ್)
ಇದು ಮುಂಜಾನೆಯ ಪವಿತ್ರ ಘಳಿಗೆಗಳಲ್ಲಿ ವಿಶೇಷವಾಗಿ ಫಜ್ರ್ ನಮಾಝಿನಿಂದ ಸೂರ್ಯೋದಯವರೆಗಿನ ಅವಧಿಯಲ್ಲಿ ಆರಾಧನೆ ಮತ್ತು ಸತ್ಕರ್ಮಗಳಲ್ಲಿ ತೊಡಗಿ ಕೊಳ್ಳುವುದಕ್ಕೆ ಇರುವ ವಿಶಿಷ್ಟವಾದ ದೈವಿಕ ಸೌಭಾಗ್ಯವನ್ನು ಸ್ಪಷ್ಟಪಡಿಸುತ್ತದೆ. ಈ ಮುಂಜಾನೆಯು ಧಿಕ್ರ್, ದುಆ ಮತ್ತು ಪವಿತ್ರ ಕುರಾನ್ ಪಾರಾಯಣಕ್ಕೆ ಅತ್ಯಂತ ಶ್ರೇಷ್ಠ ಹಾಗೂ ಪ್ರಶಸ್ತವಾದ ಸಮಯವಾಗಿದೆ.