ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್: ದಕ್ಷಿಣ ಭಾರತದ ರೂಮಿಯ ಪ್ರತಿಧ್ವನಿ
ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್: ದಕ್ಷಿಣ ಭಾರತದ ರೂಮಿಯ ಪ್ರತಿಧ್ವನಿ
✒️ಕೆಯು ಖಲೀಲ್ ರಹ್ಮಾನ್ ಅರ್ಶದಿ
ಇತಿಹಾಸದ ಪುಟಗಳಲ್ಲಿ ಕೆಲವರು ಕೇವಲ ವ್ಯಕ್ತಿಗಳಾಗಿ ಉಳಿಯುವುದಿಲ್ಲ; ಅವರು ಒಂದು ಚಿಂತನೆ, ಒಂದು ಬೆಳಕು, ಒಂದು ಆತ್ಮೀಯ ಅನುಭವವಾಗಿ ಕಾಲವನ್ನು ಮೀರಿ ಬದುಕುತ್ತಾರೆ. 13ನೇ ಶತಮಾನದಲ್ಲಿ ವಿಶ್ವ ಪ್ರಸಿದ್ಧ ಸೂಫಿ ಸಂತ, ಕವಿ ಹಾಗೂ ತತ್ವಜ್ಞಾನಿ ಜಲಾಲುದ್ದೀನ್ ರೂಮಿ ಅವರು ತಮ್ಮ ಕಾವ್ಯ, ಪ್ರೀತಿ ಮತ್ತು ಆಧ್ಯಾತ್ಮಿಕತೆಯ ಮೂಲಕ ಲಕ್ಷಾಂತರ ಹೃದಯಗಳನ್ನು ಸ್ಪರ್ಶಿಸಿದರೆ, ಪ್ರಸ್ತುತ ಕಾಲದಲ್ಲಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಅವರು ತಮ್ಮ ಜ್ಞಾನ, ಭಾಷಣ ಮತ್ತು ಆತ್ಮೀಯ ಮಾರ್ಗದರ್ಶನದ ಮೂಲಕ ಅನೇಕ ಹೃದಯಗಳಲ್ಲಿ ಬೆಳಗಿಸಿದರು.
ಅವರನ್ನು "ಎರಡನೇ ರೂಮಿ" ಎಂದು ಕರೆಯುವುದು ಕೇವಲ ಪ್ರಶಂಸೆಯ ಮಾತಲ್ಲ; ಅದು ಅವರ ಜೀವನದ ದಿಕ್ಕು, ಚಿಂತನೆಯ ಆಳ ಮತ್ತು ಹೃದಯಸ್ಪರ್ಶಿ ಆಧ್ಯಾತ್ಮಿಕತೆಯ ಪ್ರತಿಬಿಂಬವಾಗಿದೆ.
ರೂಮಿ ಅವರ ಖ್ಯಾತಿಗೆ ಪ್ರಮುಖ ಕಾರಣವಾದುದು ಅವರ ಅಮರ ಕೃತಿ "ಮಸ್ನವಿ". ಆರು ಸಂಪುಟಗಳಲ್ಲಿ ರಚಿಸಲ್ಪಟ್ಟ ಈ ಮಹಾಗ್ರಂಥವು ಕೇವಲ ಕಾವ್ಯ ಸಂಕಲನವಾಗಿರಲಿಲ್ಲ; ಅದು ಆತ್ಮಶುದ್ಧಿ, ಅಲ್ಲಾಹನ ಪ್ರೀತಿ, ತಕ್ವಾ, ವಿನಯ ಮತ್ತು ಮಾನವೀಯತೆಯ ಪಾಠಗಳನ್ನು ಕಥೆಗಳ ಮೂಲಕ ಬೋಧಿಸುವ ಆಧ್ಯಾತ್ಮಿಕ ವಿಶ್ವವಿದ್ಯಾಲಯವಾಗಿತ್ತು. ಶತಮಾನಗಳಿಂದ ಉಲಮಾಗಳು ಮತ್ತು ಸೂಫಿ ಪಂಡಿತರು ಮಸ್ನವಿಯನ್ನು ಹೃದಯಗಳನ್ನು ಜಾಗೃತಗೊಳಿಸುವ ಅಪೂರ್ವ ಗ್ರಂಥವೆಂದು ಗೌರವಿಸಿದ್ದಾರೆ. ಅದೇ ರೀತಿ ಶೈಖುನಾ ತ್ವಾಖಾ ಉಸ್ತಾದ್ ಅವರ ಜೀವನ ಮತ್ತು ಭಾಷಣಗಳೂ ಸಾವಿರಾರು ಜನರ ಹೃದಯಗಳಿಗೆ ಆಧ್ಯಾತ್ಮಿಕ ಜಾಗೃತಿಯ ಮೂಲವಾಗಿದ್ದವು.
ರೂಮಿ ಅವರ "ಮಸ್ನವಿ" ವಿಶ್ವ ಆಧ್ಯಾತ್ಮಿಕ ಸಾಹಿತ್ಯದ ಮಹಾಸಾಗರವೆಂದು ಪರಿಗಣಿಸಲ್ಪಟ್ಟಿದೆ. ಅದರ ಆಳ, ತಾತ್ವಿಕತೆ ಮತ್ತು ಆತ್ಮೀಯ ಸಂದೇಶಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದು ಸಾಮಾನ್ಯ ವಿದ್ಯೆಯಿಂದ ಸಾಧ್ಯವಲ್ಲ. ಶತಮಾನಗಳಿಂದಲೂ ಕೆಲವೇ ಕೆಲವು ಮಹಾನ್ ಉಲಮಾಗಳು ಮತ್ತು ಆರಿಫ್‌ಗಳು ಮಾತ್ರ ಈ ಗ್ರಂಥದ ಅಂತರಂಗವನ್ನು ಭೇದಿಸಿ ಅದರ ಅಮೂಲ್ಯ ಮುತ್ತುಗಳನ್ನು ಹೊರತಂದಿದ್ದಾರೆ. ಆ ಅಪರೂಪದ ವಿದ್ವಾಂಸರ ಸಾಲಿನಲ್ಲಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಹೆಸರು ಗೌರವದಿಂದ ಉಲ್ಲೇಖಿಸಲ್ಪಡುತ್ತದೆ. ಮಸ್ನವಿಯ ಸೂಕ್ಷ್ಮ ತತ್ವಗಳು, ಅದರ ಆಧ್ಯಾತ್ಮಿಕ ರಹಸ್ಯಗಳು ಮತ್ತು ಹೃದಯ ಪರಿವರ್ತನೆಯ ಸಂದೇಶಗಳನ್ನು ಅವರು ಕೇವಲ ಅಧ್ಯಯನ ಮಾಡಿದವರಲ್ಲ; ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾವಿರಾರು ಜನರ ಹೃದಯಗಳಿಗೆ ತಲುಪಿಸಿದ ಮಾರ್ಗದರ್ಶಕರಾಗಿದ್ದರು. ಮಸ್ನವಿಯ ಜ್ಞಾನವು ಅವರ ಚಿಂತನೆಗಳಲ್ಲಿ, ಅವರ ಮಾತುಗಳಲ್ಲಿ ಮತ್ತು ಅವರ ವ್ಯಕ್ತಿತ್ವದಲ್ಲಿ ಪ್ರತಿಫಲಿಸುತ್ತಿತ್ತು.
ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ವ್ಯಕ್ತಿತ್ವವನ್ನು ಕೇವಲ ಭಾಷಣಗಳ ಮೂಲಕ ಅಥವಾ ಕೆಲವು ಕೃತಿಗಳ ಮೂಲಕ ಅಳೆಯಲು ಸಾಧ್ಯವಿಲ್ಲ. ಅವರ ಜ್ಞಾನವು ಅಪಾರವಾಗಿತ್ತು; ಅವರು ಅಧ್ಯಯನ ಮಾಡದ ಕ್ಷೇತ್ರಗಳು ವಿರಳವಾಗಿದ್ದವು. ಈ ಕಾಲಘಟ್ಟದಲ್ಲಿ ಅವರ ದರ್ಶನ ಪಡೆಯುವುದು, ಅವರ ಮಾರ್ಗದರ್ಶನದಲ್ಲಿ ಕೆಲಕಾಲ ಕಳೆಯುವುದು ಮತ್ತು ಅವರೊಂದಿಗೆ ಆತ್ಮೀಯವಾಗಿ ಬೆರೆಯುವ ಅವಕಾಶ ದೊರಕುವುದು ನಿಜಕ್ಕೂ ಜೀವನದ ಒಂದು ಮಹಾಭಾಗ್ಯವೆಂದೇ ಹೇಳಬಹುದು. ಒಮಾನ್‌ನ ಸಲಾಲಾ ಸಮೀಪದ ತ್ವಾಖಾ ಪ್ರದೇಶದಿಂದ ಹಿಡಿದು ಭಾರತದ ದಕ್ಷಿಣ ತುದಿವರೆಗೂ ಅವರು ಜ್ಞಾನ ಮತ್ತು ಆತ್ಮೀಯತೆಯ ಸೇತುವೆಯನ್ನು ನಿರ್ಮಿಸಿದ್ದರು. ಅವರ ನಿವಾಸದಲ್ಲಿದ್ದ ವಿಶಾಲ ಗ್ರಂಥಸಂಪತ್ತನ್ನು ಕಂಡವರು, ಅವರ ಅಧ್ಯಯನದ ಆಳ ಮತ್ತು ವ್ಯಾಪ್ತಿಯನ್ನು ಸುಲಭವಾಗಿ ಅರಿತುಕೊಳ್ಳುತ್ತಿದ್ದರು. ಸತ್ಯದ ವಿಷಯದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ; ಜನಪ್ರಿಯತೆಗಾಗಿ ಅಥವಾ ಪ್ರಶಂಸೆಗಳಿಗಾಗಿ ತಮ್ಮ ನಿಲುವುಗಳನ್ನು ಬದಲಾಯಿಸುವ ವ್ಯಕ್ತಿತ್ವ ಅವರದ್ದಾಗಿರಲಿಲ್ಲ. ಸತ್ಯವೆಂದು ಅರಿತ ವಿಷಯವನ್ನು ಅವರು ಧೈರ್ಯದಿಂದ ಮತ್ತು ಸ್ಪಷ್ಟವಾಗಿ ಪ್ರತಿಪಾದಿಸುತ್ತಿದ್ದರು. ‘ಖಾಝಿ’ ಎಂಬ ಗೌರವಪೂರ್ಣ ಪದವಿಯ ಮಹತ್ವವನ್ನು ಅದರ ನಿಜವಾದ ಅರ್ಥ ಮತ್ತು ಘನತೆಯೊಂದಿಗೆ ಸಮಾಜದಲ್ಲಿ ಪ್ರತಿಷ್ಠಾಪಿಸಲು ಅವರು ಮಹತ್ತರ ಕೊಡುಗೆ ನೀಡಿದರು. ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣವೇ ಸಮುದಾಯದ ಭವಿಷ್ಯವನ್ನು ರೂಪಿಸುತ್ತದೆ ಎಂಬ ದೃಢ ನಂಬಿಕೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಶೈಕ್ಷಣಿಕ ಮತ್ತು ಸಾಮಾಜಿಕ ಯೋಜನೆಗಳಿಗೆ ಮಾರ್ಗದರ್ಶನ ನೀಡಿದರು. ಅದರ ಫಲವಾಗಿ, ಮಂಗಳೂರಿನ ಕಾಶಿಪಟ್ಟಣದಲ್ಲಿ ಶೈಖುನಾ ಸಿ.ಎಂ. ಉಸ್ತಾದ್ ಅವರ ಹೆಸರಿನಲ್ಲಿ ಸ್ಥಾಪಿತವಾದ ಬೃಹತ್ ಶಿಕ್ಷಣ ಸಂಸ್ಥೆಯು ಅವರ ದೂರದೃಷ್ಟಿ, ಸಮರ್ಪಣೆ ಮತ್ತು ಸಮುದಾಯದ ಮೇಲಿನ ಕಾಳಜಿಯ ಜೀವಂತ ಸ್ಮಾರಕವಾಗಿ ಇಂದು ಬೆಳಗುತ್ತಿದೆ.
ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಮಹತ್ವವನ್ನು ಇನ್ನಷ್ಟು ಸ್ಪಷ್ಟಪಡಿಸುವುದು ಅವರು ಅಲಂಕರಿಸಿದ ಜವಾಬ್ದಾರಿಯುತ ಸ್ಥಾನಗಳೇ ಆಗಿವೆ. ಕೇರಳದ ಅತ್ಯುನ್ನತ ಉಲಮಾ ಒಕ್ಕೂಟಗಳಲ್ಲಿ ಒಂದಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದ ಕೇಂದ್ರೀಯ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದರು.ಅವರ ಜೀವನದಲ್ಲಿ ವಿಶೇಷವಾಗಿ ಉಲ್ಲೇಖಿಸಲ್ಪಡುವ ಸಂಗತಿಯೆಂದರೆಈ ಉಮ್ಮತ್ತಿನ ಆಧ್ಯಾತ್ಮಿಕ ನಾಯಕ ಶಂಸುಲ್ ಉಲಮಾ ಅವರ ಕನಸಿನಲ್ಲಿ ಕಾಣಿಸಿಕೊಂಡು, ‘ಈ ಒಕ್ಕೂಟಕ್ಕೆ ನಿಮ್ಮ ಸೇವೆಯ ಅವಶ್ಯಕತೆ ಇದೆ’ ಎಂದು ಸೂಚನೆ ನೀಡಿದ ನಂತರ ಅವರು ಈ ಮಹಾನ್ ಸಂಘಟನೆಯೊಂದಿಗೆ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಂಡರು.ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡಿನ ಚೆಂಬರಿಕ ಹಾಗೂ ನೂರಾರು ಮೊಹಲ್ಲಾಗಳ ಖಾಝಿಯಾಗಿ ಸೇವೆ ನಿರ್ವಹಿಸಿದ್ದರು. ಅವರ ತೀರ್ಪುಗಳಲ್ಲಿ ಜ್ಞಾನದ ಆಳವಿತ್ತು, ಅವರ ನಾಯಕತ್ವದಲ್ಲಿ ಸಮತೋಲನವಿತ್ತು, ಮತ್ತು ಅವರ ಸೇವೆಯಲ್ಲಿ ಉಮ್ಮತ್ತಿನ ಮೇಲಿನ ನಿಷ್ಕಳಂಕ ಪ್ರೀತಿಯಿತ್ತು. ಸಮುದಾಯವನ್ನು ದಿಕ್ಕುನಿರ್ದೇಶನ ಮಾಡಿದ ದೂರದೃಷ್ಟಿಯ ನಾಯಕನಾಗಿಯೂ ಜನಮನಗಳಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ರೂಮಿ ಒಮ್ಮೆ ಹೇಳಿದ್ದರು: "ಹೃದಯದಿಂದ ಹೊರಡುವ ಮಾತು ಮಾತ್ರ ಮತ್ತೊಂದು ಹೃದಯವನ್ನು ತಲುಪುತ್ತದೆ." ಈ ಮಾತು ಶೈಖುನಾ ತ್ವಾಖಾ ಉಸ್ತಾದ್ ಅವರ ಜೀವನಕ್ಕೂ ಅಕ್ಷರಶಃ ಅನ್ವಯಿಸುತ್ತದೆ. ರೂಮಿ ಕಲಮನ್ನು ಬದಿಗಿಟ್ಟು ಶೈಖುನಾ ಉಸ್ತಾದ್ ನಮ್ಮನ್ನಗಲಿದರು