ಇಸ್ಲಾಂ ಧರ್ಮದ ಸಾರ
Unais Kooduraste
ಮಾನವಕುಲದ ಅಭಿವೃದ್ಧಿಯ ಅಸ್ಮಿತೆಯನ್ನು ಕಾಪಾಡುವುದರಲ್ಲಿ ಧರ್ಮಗಳು ಹಾಗೂ ಅದರ ಸಿದ್ಧಾಂತಗಳು
ನಿಷೇಧಿಸಲಾಗದಂತಹ ಪಾತ್ರವನ್ನು ವಹಿಸಿವೆ. ಪ್ರತಿಯೊಂದು ಧರ್ಮವು ಸ್ಥಾಪಿಸಲ್ಪಡುವುದು ಸಾಮಾನ್ಯ ಜನರ
ಒಳಿತಿಗಾಗಿಯೇ, ಹೊರತು ವಿನಾಶಕ್ಕಾಗಿಯಲ್ಲ. ಶಾಂತಿಯುತ ಜೀವನದಿಂದಲ್ಲದೆ ಒಳಿತನ್ನು ಸಂಸ್ಥಾಪಿಸಲು ಯಾವುದೇ
ಸಿದ್ಧಾಂತಕ್ಕೆ ಸಾಧ್ಯವಿಲ್ಲ. ಅದರಲ್ಲೂ ಇಸ್ಲಾಂ ಧರ್ಮವು ಶಾಂತಿಗೆ ನೀಡಿದ ಪ್ರಾಮುಖ್ಯತೆಯನ್ನು ಬೇರೆ ಯಾವುದೇ
ಧರ್ಮವು ನೀಡಿಲ್ಲ ಎಂಬುದು ಕಟು ಸತ್ಯವಾಗಿದೆ. ಇಸ್ಲಾಂ ಎಂಬ ಪದದ ಅರ್ಥವೇ “ಶಾಂತಿ” ಆಗಿದೆ. ಅದು “ಸಮರ್ಪಣೆ”
ಮತ್ತು “ಶಾಂತಿಯ ಜೀವನ” ಎಂಬ ಎರಡು ಅರ್ಥಗಳನ್ನು ಹೊಂದಿದೆ. ಇಸ್ಲಾಂ ಧರ್ಮವು ಮಾನವನ ಹೃದಯದಲ್ಲಿ ಶಾಂತಿ,
ಸಮಾಜದಲ್ಲಿ ನ್ಯಾಯ, ಮತ್ತು ಮಾನವಕುಲದ ಒಳಿತಿಗಾಗಿ ಮಾರ್ಗದರ್ಶನ ನೀಡಲು ಬಂದಿದೆ. ಅಲ್ಲಾಹ್ ತ’ಆಲಾ
ಪ್ರತಿಯೊಬ್ಬ ಮಾನವನಿಗೂ ಉತ್ತಮ ಜೀವನವನ್ನು ನೀಡಲು ಬಯಸುತ್ತಾನೆ. ಆದರೆ ಆ ಜೀವನವು ಸಾರ್ಥಕವಾಗಬೇಕಾದರೆ
ಅವನ ನೈತಿಕತೆಯ, ಪ್ರಾಮಾಣಿಕತೆಯ ಮತ್ತು ಭಯಭಕ್ತಿಯ ದಾರಿಯಲ್ಲಿ ನಡೆಯಬೇಕು ಎಂದು ಕುರಾನ್
ಉಲ್ಲೇಖಿಸುತ್ತದೆ.
ಇಸ್ಲಾಂ ಧರ್ಮವು ಕೇವಲ ಪ್ರಾರ್ಥನೆಗಳಿಗೆ ಸೀಮಿತವಾದ ಧರ್ಮವಲ್ಲ, ಹೊರತು ಅದೊಂದು ಸಂಪೂರ್ಣ ಜೀವನ
ವಿಧಾನವಾಗಿದೆ. ಒಬ್ಬ ಪ್ರಜೆ ತನ್ನ ಮಾತುಕತೆಯಲ್ಲಿ ಅನುಸರಿಸಬೇಕಾದ ಗುಣ , ಕೆಲಸ ಕಾರ್ಯಗಳು ನಡೆಸಬೇಕಾದ ರೀತಿ,
ಹೇಗೆ ವ್ಯಾಪಾರ ಮಾಡಬೇಕು, ಹೇಗೆ ತನ್ನ ಪೋಷಕರು, ಪತ್ನಿ, ಮಕ್ಕಳು ಮತ್ತು ನೆರೆಹೊರೆಯವರೊಂದಿಗೆ ಉಳಿಸಬೇಕಾದ
ಸಂಭಂದ ಎಂಬುದರಲ್ಲಿಯೂ ಇಸ್ಲಾಂ ಧರ್ಮವು ಮಾರ್ಗದರ್ಶನ ನೀಡುತ್ತದೆ. ಪ್ರವಾದಿ ಮುಹಮ್ಮದ್ (ಸ.ಅ) ಅವರ
ಜೀವನವೇ ಈ ಧರ್ಮದ ಜೀವಂತ ಮಾದರಿ. ಬದ್ರ್ ಯುದ್ಧದಲ್ಲಿ ಬಂಧಿಸಲ್ಪಟ್ಟ ಮುಸ್ಲಿಮರಲ್ಲದವರ (ಅಮುಸ್ಲಿಮರ)
ನಿಸ್ಸಹಾಯಕ ಸಂದರ್ಭವನ್ನು ಮನಗೊಂಡು, ಅವರ ಮೇಲೆ ತೋರಿದ್ದ ದಯೆ, ತವರೂರು ಬಿಟ್ಟು ಮದೀನಾಗೆ ಹಿಜ್ರಾ
ಹೋಗುವ ಅತಿ ಭಯಾನಕ ಸನ್ನಿವೇಶದಲ್ಲೂ ತನ್ನಲ್ಲಿ ಅತ್ಯಂತ ಕೆಟ್ಟ ಮನೋಭಾವದಿಂದ ವರ್ತಿಸಿದ ಶತ್ರುಗಳು
ತನ್ನಲ್ಲಿರುವ ನಂಬಿಕೆಯಿಂದ ಪ್ರವಾದಿಯವರಿಗೆ ನೀಡಿದ್ದ ಆಸ್ತಿ ಸಂಪತ್ತುಗಳನ್ನು ಅವರಿಗೆ ಮರುಕಳಿಸುವುದರಲ್ಲಿ ತೋರಿಸಿದ
ನಿಷ್ಠೆ ಇದೆಲ್ಲಾ ಇಸ್ಲಾಂ ಧರ್ಮದ ಜೀವಂತ ದಾರಿಯಾಗಿದೆ ಹಾಗೂ ಫತ್ಹ್ ಮಕ್ಕಾ ಸಂದರ್ಭದಲ್ಲಿ ಶತ್ರುಗಳನ್ನೂ ಸಹ
ಬೆಚ್ಚಿಬೀಳಿಸಿದ ವಿನಮ್ರತೆ ಮುಂತಾದ ಹಲವಾರು ಗುಣವಂತ ನಡತೆಗಳು ಒಳಗೊಂಡ ಪ್ರಜ್ಞಾವಂತ ನಾಯಕರಾಗಿದ್ದಾರೆ
ಪ್ರವಾದಿ ಮುಹಮ್ಮದ್ (ಸ.ಅ)
ರವರು.
ಒಬ್ಬ ನಿಜವಾದ ಮುಸ್ಲಿಂ ಎಂದರೆ, ಅವನ ನಾಲಿಗೆಯಲ್ಲಿ ಸತ್ಯ, ಅವನ ಹೃದಯದಲ್ಲಿ ದಯೆ, ಮತ್ತು ಅವನ ಕೈಯಲ್ಲಿ
ಕರುಣೆ ನ್ಯಾಯ ಇರಬೇಕು. ಕುರಾನ್‌ನಲ್ಲಿ ಅಲ್ಲಾಹು ತ’ಆಲಾ ಹೇಳುತ್ತಾನೆ: ಉತ್ತಮ ಕೆಲಸಗಳಲ್ಲಿ ಮತ್ತು
ದಾರ್ಶನಿಕತೆಯಲ್ಲಿ ಪರಸ್ಪರ ಸಹಾಯಮಾಡಿರಿ, ಪಾಪ ಮತ್ತು ವೈರದಲ್ಲಿ ಸಹಕಾರ ಮಾಡಬೇಡಿ (2:5). ಇಸ್ಲಾಂ ಧರ್ಮವು
ಕೇವಲ ಮುಸ್ಲಿಮರಿಗಾಗಿ ಮಾತ್ರವಲ್ಲ, ಎಲ್ಲಾ ಮಾನವರ ಒಳಿತಿಗಾಗಿ ಬಂದಿದೆ. ಅದಕ್ಕಾಗಿ ಪ್ರವಾದಿ ಮುಹಮ್ಮದ್ (ಸ.ಅ)
ಹೇಳಿದರು: “ನೀವು ನಿಮ್ಮ ಸಹೋದರನಿಗಾಗಿ ಬಯಸುವುದನ್ನು, ನಿಮಗಾಗಿ ಕೂಡ ಬಯಸಿರಿ.” ಈ ಮಾತಿನಲ್ಲಿ ಇಸ್ಲಾಮಿನ
ನಿಜವಾದ ಆತ್ಮವು ಅಡಗಿದೆ.
ಇಂದಿನ ಯುಗದಲ್ಲಿ ಕೆಲವರು ಇಸ್ಲಾಮಿನ ಹೆಸರಿನಲ್ಲಿ ತಪ್ಪು ದಾರಿಯಲ್ಲಿದ್ದಾರೆ. ಕೆಲವರು ಧರ್ಮವನ್ನು ಹಿಂಸೆ, ಕೋಪ,
ಅಥವಾ ರಾಜಕೀಯ ಸಾಧನವಾಗಿ ಬಳಸುತ್ತಿದ್ದಾರೆ. ಆದರೆ ನಿಜವಾದ ಇಸ್ಲಾಂ ಯಾವತ್ತೂ ಹಿಂಸೆಗೆ ಅವಕಾಶ
ಕೊಡುವುದಿಲ್ಲ. ಕುರಾನ್ ಹೇಳುತ್ತದೆ: “ಯಾರು ಒಬ್ಬ ಮಾನವನನ್ನು ಅನ್ಯಾಯವಾಗಿ ಕೊಲ್ಲುತ್ತಾನೋ, ಆತನು ಇಡೀ
ಮಾನವಕುಲವನ್ನು ಕೊಂದವನಂತೆ. ಮತ್ತು ಯಾರು ಒಬ್ಬನ ಜೀವ ಉಳಿಸುತ್ತಾನೋ, ಅವನು ಇಡೀ ಮಾನವಕುಲದ ಜೀವ
ಉಳಿಸಿದವನಂತೆ” (5:32). ಇದು ಇಸ್ಲಾಂ ಧರ್ಮದ ಗರಿಷ್ಟ ಮನುಷ್ಯತ್ವದ ಬೋಧನೆ. ಇಸ್ಲಾಮಿನಲ್ಲಿ ಧರ್ಮದ
ಹೆಸರಿನೊಂದಿಗೆ ಯಾರನ್ನೂ ನೋಯಿಸುವುದು, ಅವಮಾನಿಸುವುದು ಅಥವಾ ಅನ್ಯಾಯ ಮಾಡುವುದು ದೊಡ್ಡ
ಪಾಪವಾಗಿದೆ.
ಇಸ್ಲಾಂ ಧರ್ಮವು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಮತೋಲನ ಕಲಿಸುತ್ತದೆ. ಅದು ನಮಗೆ ತಿಳಿಸುವುದೇನೆಂದರೆ ಪ್ರಾರ್ಥನೆ
ಮಾತ್ರ ಸಾಕಾಗದು, ಕೆಲಸವೂ ಇರಬೇಕು; ಉಪವಾಸ ಮಾತ್ರ ಸಾಕಾಗದು, ಸಹನೆ ಇರಬೇಕು; ದಾನ ಮಾತ್ರ ಸಾಕಾಗದು,
ಪ್ರಾಮಾಣಿಕತೆ ಇರಬೇಕು ಎಂದು ಹೇಳುತ್ತದೆ . ಇಸ್ಲಾಂ ಧರ್ಮದಲ್ಲಿ ಎಲ್ಲವೂ ಅರ್ಥಪೂರ್ಣವಾಗಿ ಸಮತೋಲನದೊಂದಿಗೆ
ಜೋಡಿಸಲಾಗಿದೆ. ದೈವಭಯದೊಂದಿಗೆ ಮಾನವ ಸೇವೆ ಮಾಡುವುದು, ಧಾರ್ಮಿಕ ಕರ್ತವ್ಯಗಳೊಂದಿಗೆ ಸಾಮಾಜಿಕ
ಜವಾಬ್ದಾರಿ ಪಾಲಿಸುವುದು ಇವೆಲ್ಲವೂ ಒಟ್ಟುಗೂಡಿದಾಗ ಮಾತ್ರ ನಿಜವಾದ ಮುಸ್ಲಿಮನ ಜೀವನ ಸಾಧ್ಯ.
ಪ್ರವಾದಿ (ಸ.ಅ) ಅವರ ಕಾಲದಲ್ಲಿ ಜನರು ಅಜ್ಞಾನ, ಮೂಡನಂಬಿಕೆ, ಜಾತಿ ಭೇದಗಳಿಂದ ನರಳುತ್ತಿದ್ದರು. ಇಸ್ಲಾಮಿನ
ಆಗಮನವು ಆ ಕತ್ತಲೆಯನ್ನು ಹೋಗಲಾಡಿಸಿತು. ಅದರಿಂದ ಪಡೆದದ್ದು ಜ್ಞಾನ, ನ್ಯಾಯ ಮತ್ತು ಸಹೋದರತ್ವ. ಕುರಾನಿನ
ಮೊದಲ ವಚನವೆಂದರೆ " إقرأْ " ಎಂದರೆ “ಓದಿರಿ!” ಎನ್ನುವುದಾಗಿದೆ. ಅದು ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ. ಎಂದರೆ,
ಇಸ್ಲಾಂ ಯಾವಗಲೂ ಜ್ಞಾನ, ಅಧ್ಯಯನ, ಮತ್ತು ವಿಚಾರಶೀಲತೆಯನ್ನು ಉತ್ತೇಜಿಸುತ್ತದೆ. ಪ್ರಸ್ತುತ ಮುಸ್ಲಿಂ ಯುವಕರು
ಈ ಪಾಠವನ್ನು ಮರೆಯದೆ ನಂಬಿಕೆಯ ಜೊತೆಗೆ ಜ್ಞಾನದಲ್ಲಿಯೂ ಉತ್ಸಾಹರಾಗಿರಬೇಕು.
ಇಸ್ಲಾಂ ಧರ್ಮದಲ್ಲಿ ಪ್ರಾರ್ಥನೆ, ಉಪವಾಸ, ಝಕಾತ್, ಹಜ್ಜ್ ಇವುಗಳು ಕೇವಲ ಧಾರ್ಮಿಕ ಕರ್ತವ್ಯಗಳಲ್ಲ, ಮಾನವ
ಸಹಾಯ ಮತ್ತು ಶಿಸ್ತುಗಳ ಪಾಠಗಳಾಗಿವೆ. ಪ್ರಾರ್ಥನೆ ನಮಗೆ ಶಿಸ್ತು ಕಲಿಸುತ್ತದೆ, ಉಪವಾಸ ನಮಗೆ ಸಹನೆಯನ್ನು
ಉತ್ತೇಜಿಸುತ್ತದೆ. ಝಕಾತ್ ನಮಗೆ ಹಂಚಿಕೆ ಮತ್ತು ದಯೆ ತೋರಿಸುತ್ತದೆ, ಹಜ್ಜ್ ನಮಗೆ ಏಕತೆ ಮತ್ತು ಸಮಾನತೆಯ ಪಾಠ
ಕಲಿಸುತ್ತದೆ. ಇವುಗಳ ಹಿಂದೆ ಅಡಗಿರುವ ನಿಜವಾದ ಸಂದೇಶವೆಂದರೆ ಪ್ರತಿಯೊಬ್ಬರೂ ಮತ್ತು ಒಬ್ಬರಂತೆ ಬದುಕಬೇಕು,
ಯಾರೂ ಯಾರಿಗೂ ಹಾನಿ ಮಾಡಬಾರದು, ಮತ್ತು ಎಲ್ಲರಿಗೂ ಸಹಾಯ ಮಾಡಬೇಕು.
ನಿಜವಾದ ಮುಸ್ಲಿಂ ಎಂದರೆ, ಅವನಿಂದ ಯಾರಿಗೂ ಹಾನಿಯಾಗಬಾರದು. ಪ್ರವಾದಿ (ಸ.ಅ) ಹೇಳಿದರು: “ಯಾರ
ನಾಲಿಗೆಯಿಂದ ಮತ್ತು ಕೈಯಿಂದ ಇತರರು ಸುರಕ್ಷಿತರಾಗಿರುತ್ತಾರೆ, ಆತನೇ ನಿಜವಾದ ಮುಸ್ಲಿಂ.” ಈ ಮಾತು ಇಸ್ಲಾಮಿನ
ಸಾರವನ್ನು ಹೇಳುತ್ತದೆ. ಧರ್ಮವನ್ನು ಆಚರಿಸುವಷ್ಟೇ ಅಲ್ಲ, ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸುವುದು
ಅತಿಮುಖ್ಯ. ಓರ್ವ ಮುಸಲ್ಮಾನನು ತನ್ನ ನೆರೆಹೊರೆಯವರೊಂದಿಗೆ ಸಹಕಾರದಿಂದ, ಇತರ ಧರ್ಮದವರೊಂದಿಗೆ
ಗೌರವದಿಂದ, ಮತ್ತು ಕುಟುಂಬದವರೊಂದಿಗೆ ಪ್ರೀತಿಯಿಂದ ನಡೆದುಕೊಂಡಾಗ ಮಾತ್ರ ಆತನು ಇಸ್ಲಾಮಿನ ನಿಜವಾದ
ಪ್ರತಿನಿಧಿಯಾಗುತ್ತಾನೆ.
ಇಸ್ಲಾಂ ಧರ್ಮವು ಯಾವತ್ತೂ ಅತಿರೇಕ ಅಥವಾ ಅಲಸ್ಯವನ್ನು ಬಯಸುವುದಿಲ್ಲ. ಅದು ಮಧ್ಯಮ ದಾರಿಯನ್ನು ಮತ್ತು
ಸಮತೋಲನದ ದಾರಿಯನ್ನು ಸೂಚಿಸುತ್ತದೆ. ಅತಿಯಾದ ಆಧ್ಯಾತ್ಮಿಕತೆಯೂ ಅಲ್ಲ, ಸಂಪೂರ್ಣ ಭೌತಿಕತೆಯೂ ಅಲ್ಲ ಈ
ಎರಡರ ಮಧ್ಯದಲ್ಲಿನ ಜೀವನವೇ ಇಸ್ಲಾಂ ಬೋಧಿಸುವ ದಾರಿ. ಈ ಕಾರಣದಿಂದ ಇಸ್ಲಾಂ ನಿರ್ಧಿಷ್ಟ ಕಾಲಕ್ಕೂ,
ಸಮಾಜಕ್ಕೂ ಸೀಮಿತವಾಗದಂತಹ ಮತ್ತು ಸರ್ವ ಜನಾಂಗಕ್ಕೂ ಸೂಕ್ತವಾದ ಧರ್ಮವಾಗಿದೆ.
ಇಸ್ಲಾಂ ಧರ್ಮದ ಸಾರವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೇ “ಅಲ್ಲಾಹನಿಗೆ ಸಮರ್ಪಣೆ ಮತ್ತು ಮನುಷ್ಯರಿಗೆ
ಸೇವೆ.” ಎಂದು ವ್ಯಾಖ್ಯಾನಿಸಬಹುದು. ಅಲ್ಲಾಹನ ಅಜ್ಞೆಗಳನ್ನು ಚಾಚು ತಪ್ಪದೇ ಪಾಲಿಸುವುದರೊಂದಿಗೆ ಜನರಿಗೆ
ಅಗತ್ಯವಿರುವಾಗ ಅವರಿಗೆ ನೆರವಾಗುವುದೇ ಇದರ ಸಂಕ್ಷಿಪ್ತ ರೂಪ. ಈ ಎರಡನ್ನೂ ಸೇರಿಸಿದಾಗ ನಿಜವಾದ ಇಸ್ಲಾಂ
ರೂಪಗೊಳ್ಳುತ್ತದೆ. ಇಸ್ಲಾಂ ನಮಗೆ ಜೀವನದ ಉದ್ದೇಶವನ್ನು ಕಲಿಸುತ್ತದೆ — ನಾವು ಈ ಲೋಕದಲ್ಲಿ ಕೇವಲ ಆಹಾರ,
ಹಣ, ಅಥವಾ ಗೌರವಕ್ಕಾಗಿ ಜೀವಿಸುವುದಲ್ಲ; ನಾವು ನ್ಯಾಯ, ಪ್ರೀತಿ, ಮತ್ತು ಶಾಂತಿಯ ಬೀಜ ಬಿತ್ತುವವರಾಗಿರಬೇಕು. ಈ
ಧರ್ಮದ ಸಾರವೆಂದರೆ “ಜೀವನದ ಅರ್ಥವನ್ನು ಅರಿತು, ಅದನ್ನು ಶಾಂತಿಯುತವಾಗಿ ನಡೆಸುವುದು” ಎಂಬುವುದಾಗಿದೆ.
ಮುಸಲ್ಮಾಮಾನನ ಜೀವನವು ಇತರರಿಗೆ ಬೆಳಕನ್ನು ಹಂಚುವ, ನೆರಳಾಗಿ ಮಾರ್ಪಡುವ, ಸಾಂತ್ವನವನ್ನು ಒದಗಿಸುವಂತಾಗಿದೆ.
ಪ್ರಸ್ತುತ ಕಾಲದಲ್ಲಿ ಈ ಮೌಲ್ಯಗಳನ್ನು ಮರೆತಿರುವುದೇ ದೊಡ್ಡ ಸಮಸ್ಯೆ. ಜನರು ಧರ್ಮದ ಆಚರಣೆ ಮಾಡುತ್ತಾರೆ, ಆದರೆ
ಅದರ ಅರ್ಥವನ್ನು ತಿಳಿಯುದಿಲ್ಲ. ಕುರಾನ್ ಉಲ್ಲೇಖಿಸುತ್ತದೆ, ಆದರೆ ಅದರ ಸಂದೇಶವನ್ನು ಜೀವನದಲ್ಲಿ
ಅನುಸರಿಸಲಾಗುವುದಿಲ್ಲ. ಈ ಕಾರಣದಿಂದಲೇ ನಮ್ಮೊಳಗೆ ಅಸಮಾಧಾನ, ವಿಭಜನೆ, ಮತ್ತು ಹಿಂಸೆ ಬೆಳೆಯುತ್ತಿದೆ.
ಇಸ್ಲಾಮಿನ ಸಾರವನ್ನು ಹೃದಯದಿಂದ ಅರ್ಥಮಾಡಿಕೊಂಡು ಬದುಕಿದರೆ ಮಾತ್ರ ನಮ್ಮ ಜೀವನ ಶಾಂತಿಯುತವಾಗುತ್ತದೆ,
ನಮ್ಮ ಸಮಾಜ ಬೆಳಗುತ್ತದೆ, ಮತ್ತು ನಮ್ಮ ದೇಶಕ್ಕೂ ನಿಜವಾದ ಶಾಂತಿ ದೊರೆಯುತ್ತದೆ. ಅಲ್ಲಾಹನು ಪ್ರತಿಯೊಬ್ಬ
ಮಾನವನನ್ನೂ ಸೃಷ್ಟಿಸಿದ್ದು ಪರಸ್ಪರ ಅರಿತು, ಸಹಾಯ ಮಾಡಿ, ಒಗ್ಗಟ್ಟಿನಿಂದ ಬದುಕಲಿಕ್ಕಾಗಿದೆ. ಈ ಸತ್ಯವನ್ನು ಅರಿತು
ಬದುಕುವುದೇ ನಿಜವಾದ ಇಸ್ಲಾಂ ಧರ್ಮದ ಸಾರ. ಇಸ್ಲಾಂ ಧರ್ಮದ ಮೂಲ ಉದ್ದೇಶ ಮಾನವನ ಹೃದಯವನ್ನು
ಶುದ್ಧಗೊಳಿಸುವುದು. ಹೊರಗಿನ ಪ್ರಾರ್ಥನೆಗಿಂತಲೂ ಹೃದಯದ ಸ್ವಚ್ಛತೆ ಹೆಚ್ಚು ಮುಖ್ಯವಾಗಿದೆ. ಕುರಾನ್‌ನಲ್ಲಿ
ಅಲ್ಲಾಹು ಹೇಳುತ್ತಾನೆ: “ಅಲ್ಲಾಹನ ಬಳಿಗೆ ಅವುಗಳ ಮಾಂಸವೂ ರಕ್ತವೂ ತಲುಪುವುದಿಲ್ಲ; ನಿಮಲ್ಲಿರುವ ತಕ್ವಾ
(ಭಯಭಕ್ತಿ) ಮಾತ್ರ ಅಲ್ಲಾಹನಿಗೆ ತಲುಪುತ್ತದೆ” (22:37). ಅಂದರೆ, ನಮ್ಮ ನಡತೆ ಮತ್ತು ಉದ್ದೇಶವೇ ಧರ್ಮದ
ಅರ್ಥವನ್ನು ನಿರ್ಧರಿಸುತ್ತದೆ. ಧರ್ಮವೆಂದರೆ ಕೇವಲ ಮಾತು ಅಥವಾ ಆಚರಣೆ ಅಲ್ಲ, ಅದು ಮನಸ್ಸಿನ ಶಾಂತಿ ಮತ್ತು
ನೈತಿಕತೆಯ ಬದುಕು ಎಂಬುವುದಾಗಿದೆ.
ಇಸ್ಲಾಂ ಒಬ್ಬ ಮನುಷ್ಯನೊಳಗಿನ ಸ್ವಾರ್ಥ, ಅಹಂಕಾರ ಮತ್ತು ಕೋಪವನ್ನು ಕತ್ತರಿಸಿ, ಅವನೊಳಗೆ ವಿನಯ, ದಯೆ ಮತ್ತು
ಸಹನೆಯನ್ನು ತುಂಬಿಸಲು ಪ್ರಯತ್ನಿಸುತ್ತದೆ. ಪ್ರವಾದಿ ಮುಹಮ್ಮದ್ (ಸ.ಅ) ಹೇಳಿದರು: “ಅತ್ಯುತ್ತಮ ವ್ಯಕ್ತಿ ಯಾರೆಂದರೆ
ಅವನಿಂದ ಇತರರು ಸುಖ ಪಡುವವರಾಗಬೇಕು.” ಈ ಮಾತು ನಮ್ಮ ಜೀವನದ ಸಾರವಾಗಿರಬೇಕು. ನಾವು ಇತರರಿಗೆ ತೊಂದರೆ
ಮಾಡದೇ, ಸಹಾಯ ಮಾಡುವ ಬದುಕು ನಡೆಸಿದಾಗ ಮಾತ್ರ ಧರ್ಮದ ಅರ್ಥ ಸಾರ್ಥಕವಾಗುತ್ತದೆ. ಇಸ್ಲಾಮಿನ ಪ್ರಮುಖ
ಬೋಧನೆಗಳಲ್ಲಿ ಒಂದಾಗಿದೆ “ತೌಹೀದ್”, ಎಂದರೆ ಅಲ್ಲಾಹನ ಮೇಲೆ ಏಕತೆಯೊಂದಿಗೆ ನಂಬುವುದು. ಇಸ್ಲಾಂ ನಮಗೆ
ಕಲಿಸುವುದು ಈ ವಿಶ್ವವು ಸಂಪೂರ್ಣವಾಗಿ ಅಲ್ಲಾಹನ ನಿಯಂತ್ರಣದಲ್ಲಿದೆ, ಮತ್ತು ಅಲ್ಲಾಹನಿಗೆ ಇಷ್ಟವಿಲ್ಲದ ಕಾರ್ಯ
ಏನೂ ನಡೆಯುವುದಿಲ್ಲ. ಈ ನಂಬಿಕೆ ಮನುಷ್ಯನೊಳಗೆ ಶಾಂತಿಯನ್ನು ಉಂಟುಮಾಡುತ್ತದೆ. ಏಕೆಂದರೆ ಆತನು
ತಿಳಿದುಕೊಳ್ಳುತ್ತಾನೆ ಯಾವ ಕಷ್ಟ ಬಂದರೂ ಅದು ಅಲ್ಲಾಹನ ಪರೀಕ್ಷೆಯಾಗಿದೆ, ಮತ್ತು ಯಾವ ಸುಖ ಬರುವುದಾದರೂ
ಅದು ಅಲ್ಲಾಹನ ದಯೆಯಾಗಿದೆ. ಇಂತಹ ನಂಬಿಕೆ ಇರುವವನು ಯಾವತ್ತೂ ನಿರಾಶನಾಗುವುದಿಲ್ಲ.
ಇಸ್ಲಾಂ ಧರ್ಮದಲ್ಲಿ ದಯೆ ಮತ್ತು ಸಹಾನುಭೂತಿ ಅತ್ಯಂತ ಮುಖ್ಯವಾದ ಮೌಲ್ಯಗಳು. ಕುರಾನ್ ಹೇಳುತ್ತದೆ: “(ಓ
ಮುಹಮ್ಮದ್) ನಾವು ನಿನ್ನನ್ನು ಇಡೀ ಮಾನವಕುಲಕ್ಕೆ ದಯೆಯ ರೂಪದಲ್ಲಿಯಲ್ಲದೆ ಕಳುಹಿಸಲಿಲ್ಲ” (21:107).
ಪ್ರವಾದಿಯ ಜೀವನವೇ ಇದಕ್ಕೆ ಸಾಕ್ಷಿ. ಅವರು ಅನ್ಯಾಯ ಮಾಡಿದವರಿಗೂ ಕ್ಷಮಿಸಿದರು, ಮಕ್ಕಾದಲ್ಲಿ ಜನರು ನಬಿ
ಮುಹಮ್ಮದ್ (ಸ) ಅವರ ಸಂದೇಶವನ್ನು ಕೇಳಲು ನಿರಾಕರಿಸಿದಾಗ, ಅವರು ತ್ವಾಯಿಫ್ ಎಂಬ ಊರಿಗೆ ತೆರಳಿದರು. ಅಲ್ಲಿಯ
ಜನರಿಗೆ ಸತ್ಯದ ಸಂದೇಶವನ್ನು ತಿಳಿಸಬೇಕೆಂಬ ಮೋಹದಿಂದ ನಡೆದರು. ಆದರೆ ಅಲ್ಲಿನ ಜನರು ಅವರ ಮಾತು ಕೇಳಲಿಲ್ಲ.
ಬದಲಾಗಿ, ಮಕ್ಕಳನ್ನು ಕಲ್ಲು ಎಸೆಯಲು ಕಳುಹಿಸಿದರು. ಮಕ್ಕಳು ಕಲ್ಲನ್ನು ನೆಬಿ (ಸ.ಅ) ರವರ ಮೇಲೆ
ಎಸೆಯತೊಡಗಿದರು. ನೆಬಿ (ಸ) ಅವರ ಪಾದಗಳಿಂದ ದಾರೆದಾರೆಯಾಗಿ ರಕ್ತ ಹರಿಯ ತೊಡಗಿತು. ಅವರು ಒಂದು ತೋಟದ
ಹತ್ತಿರ ಕುಳಿತು “ಅಲ್ಲಾಹ್, ನನ್ನ ಶಕ್ತಿ ಕಡಿಮೆಯಾಗಿದೆ, ಎಲ್ಲಾ ಜನರು ನನ್ನನ್ನು ತಿರಸ್ಕರಿಸುತ್ತಿದ್ದಾರೆ. ನೀನೆ ನನ್ನ
ಆಶ್ರಯ.” ಎಂದು ದುವಾ ಮಾಡಿದರು. ಆ ಸಮಯದಲ್ಲಿ ಜಿಬ್ರೀಲ್ (ಅ) ಬಂದು ನೆಬಿ (ಸ) ರವರೊಂದಿಗೆ ಕೇಳಿದರು “ಆ
ಕಾಣುವ ಪರ್ವತಗಳ ನಡುವೆ ಅವರನ್ನು ಹಾಕಿ ನಾಶಮಾಡಬೇಕೆ ಎಂದು ಕೇಳಿದಾಗ,” ನೆಬಿ (ಸ) ಹೇಳಿದರು “ಬೇಡ ಜಿಬ್ರೀಲ್
ಎಂದು ಉತ್ತರಿಸಿದರು, ನನ್ನ ಇಚ್ಛೆ ಅವರಿಂದ ಅಥವಾ ಪೂರ್ತಿ ಜನಾಂಗದವರು ಒಮ್ಮೆ ಅಲ್ಲಾಹನನ್ನು
ನಂಬುವವರಾಗುತ್ತಾರೆ.”, ಶತ್ರುಗಳಿಗೂ ಸಹಾನುಭೂತಿ ತೋರಿಸುವವರಾಗುತ್ತಾರೆ. ಅವರ ಜೀವನವು ನಮಗೆ ಕಲಿಸುವುದು
ದಯೆಯಲ್ಲಿದೆ ಶಕ್ತಿ, ಕ್ಷಮೆಯಲ್ಲಿದೆ ಜಯ.
ಇಸ್ಲಾಂ ಧರ್ಮವು ಸಾಮಾಜಿಕ ಸಮಾನತೆಯ ಧರ್ಮ. ಇಸ್ಲಾಮಿನಲ್ಲಿ ಬಣ್ಣ, ಜಾತಿ, ಭಾಷೆ ಅಥವಾ ಸಂಪತ್ತು ಆಧಾರಿತ
ಭೇದಭಾವವಿಲ್ಲ. ಕುರಾನ್ ಸ್ಪಷ್ಟವಾಗಿ ಹೇಳುತ್ತದೆ: “ನಿಮ್ಮಲ್ಲಿ ಅತ್ಯುತ್ತಮರು ಅವರು — ಧರ್ಮಭಯದಲ್ಲಿ (ತಕ್ವಾ)
ಅತ್ಯಂತ ಮೇಲುಗೈ ಹೊಂದಿರುವವರು” (49:31). ಪ್ರವಾದಿಯು ಹಜ್ಜಿನಲ್ಲಿ ಮಾಡಿದ ಕೊನೆಯ ಉಪದೇಶದಲ್ಲಿ
ಹೇಳಿದರು: “ಅರಬ್‌ಗೆ ಅರಬೇತರ ಮೇಲೆ, ಅರಬೇತರಿಗೆ ಅರಬ್‌ನ ಮೇಲೆ, ಬಿಳಿಯನಿಗೆ ಕರಿಯನ ಮೇಲೆ, ಅಥವಾ ಕರಿಯನಿಗೆ
ಬಿಳಿಯವನ ಮೇಲೆ ಯಾವುದೇ ಮಹಿಮೆ ಇಲ್ಲ; ಸ್ವಾಭಿಮಾನ ಕೇವಲ ಧರ್ಮನಿಷ್ಠೆಯಲ್ಲಿದೆ.” ಈ ಪಾಠವು ಇಂದಿನ
ಕಾಲದಲ್ಲಿ ಹೆಚ್ಚು ಅಗತ್ಯವಾಗಿದೆ.
ಇಸ್ಲಾಮಿನಲ್ಲಿ ಕೆಲಸ, ಕರ್ಮ ಮತ್ತು ಪೂಜೆಯಷ್ಟೇ ಪವಿತ್ರ. ಪ್ರವಾದಿ (ಸ) ರವರು ಹೇಳಿದರು: “ಕಾರ್ಮಿಕನ ಅವನ
ಕೈಯಿಂದ ಬರುವ ಬೆವರು, ಅಲ್ಲಾಹನ ಬಳಿ ಅಮೂಲ್ಯವಾದ ಒಳ್ಳೆಯ ವಾಸನೆಯಂತಿದೆ.” ಅಂದರೆ, ಧರ್ಮ ಎಂದರೆ ಕೇವಲ
ಮಸೀದಿಯೊಳಗಿನ ಜೀವನವಲ್ಲ, ಕೆಲಸದಲ್ಲಿಯೂ ಧರ್ಮವಿದೆ. ಪ್ರಾಮಾಣಿಕವಾಗಿ ದುಡಿಯುವುದು, ಮೋಸ ಮಾಡದೇ
ವ್ಯವಹರಿಸುವುದು, ಸಮಯ ಪಾಲಿಸುವುದು ಇವೆಲ್ಲವೂ ಇಸ್ಲಾಮಿನ ಬೋಧನೆಗಳಾಗಿದೆ. ಒಬ್ಬ ಮುಸ್ಲಿಂ ಉದ್ಯೋಗಸ್ಥ,
ವ್ಯಾಪಾರಿ ಅಥವಾ ವಿದ್ಯಾರ್ಥಿಯಾಗಿರಲಿ ಎಲ್ಲೆಡೆ ಆತನು ಪ್ರಾಮಾಣಿಕತೆಯಿಂದ ನಡೆಯಬೇಕು ಎಂಬುವುದು ಕೂಡ
ಕಲಿಸುತ್ತದೆ. ಇಸ್ಲಾಂ ಧರ್ಮವು ಶುದ್ಧ ಮನಸ್ಸಿನ, ಶುದ್ಧ ಜೀವನದ ಧರ್ಮವಾಗಿದೆ. ಅದು ನಮಗೆ ಅತಿಯಾದ ಖರ್ಚು,
ಅತಿಯಾದ ಅಲಂಕಾರ, ಮತ್ತು ಅಹಂಕಾರದ ವಿರುದ್ಧ ಎಚ್ಚರಿಸುತ್ತದೆ. ಕುರಾನ್ ಹೇಳುತ್ತದೆ: “ನೀವು ಸಮಯವನ್ನು
ವ್ಯರ್ಥವಾಗಿ ಖರ್ಚು ಮಾಡಬೇಡಿ, ವ್ಯರ್ಥ ಖರ್ಚು ಮಾಡುವವರು ಶೈತಾನಿನ ಸಹೋದರರಾಗಿದ್ದಾರೆ” (17:27). ಇದು
ನಮಗೆ ಮಧ್ಯಮ ಮಾರ್ಗವನ್ನು ಹಿಂಬಾದಿಸಲು ಕಲಿಸುತ್ತದೆ. ಎಂದರೆ ನಾವು ಬದುಕಿನಲ್ಲಿ ಸಂತೋಷದಿಂದ ಇರಬಹುದು,
ಆದರೆ ಅಹಂಕಾರದಿಂದ ಜೀವನವನ್ನು ಬೇಸರದಲ್ಲೇ ನಿಭಾಯಿಸಬೇಕಾಗುತ್ತದೆ.
ಇಸ್ಲಾಮಿನಲ್ಲಿ ಕುಟುಂಬದ ಮಹತ್ವವೂ ಬಹಳ ದೊಡ್ಡದು. ತಂದೆ ತಾಯಿಯ ಸೇವೆ ಅತ್ಯಂತ ಪವಿತ್ರ ಕರ್ಮವಾಗಿದೆ
ಎಂಬುವುದನ್ನೂ ಕುರಾನ್ ನಲ್ಲಿ ಉಲ್ಲೇಖಿಸಲಾಗಿದೆ “ನೀನು ನಿನ್ನ ತಂದೆ ತಾಯಿಗೆ ‘أُفٍّ’ ಅಥವಾ (ಉಫ್ಫಿನ್) ಎಂದೂ
ಕೊಡ ಹೇಳಬಾರದು; ಅವರನ್ನು ಗದರಿಸಬಾರದು; ಅವರು ಮಾತನಾಡುವಾಗ ಅವರ ಮೇಲೆ ಕೋಪ, ಬೇಸರ, ಅಸಹನೆ
ತೋರಿಸಬಾರದು. ಅವರೊಂದಿಗೆ ಮೃದುವಾಗಿ, ಗೌರವದಿಂದ, ಮತ್ತು ಕೃತಜ್ಞತೆಯೊಂದಿಗೆ ವರ್ತಿಸಬೇಕು ಎಂದು ಅಲ್ಲಾಹು
ತಆಲಾ ಆಜ್ಞೆ ನೀಡಿದ್ದಾನೆ.” ಪೋಷಕರಿಗೆ ಸೇವೆ ಮಾಡಿದವನು ಲೋಕದಲ್ಲೂ, ಪರಲೋಕದಲ್ಲೂ ಶ್ರೇಷ್ಠ ಸ್ಥಾನ
ಪಡೆಯುತ್ತಾನೆ. ಕುಟುಂಬದಲ್ಲಿ ಪ್ರೀತಿ, ಪರಸ್ಪರ ಗೌರವ ಮತ್ತು ಸಹನೆ ಇರುವುದು ಇಸ್ಲಾಂ ಬಯಸುವ ಸೌಹಾರ್ದ
ಜೀವನದ ಮಾದರಿಯಾಗಿದೆ. ಇಸ್ಲಾಂ ಧರ್ಮವು ಪರಿಸರ ಸಂರಕ್ಷಣೆಯನ್ನೂ ಕಲಿಸುತ್ತದೆ. ಪ್ರವಾದಿ ಮುಹಮ್ಮದ್ (ಸ.ಅ)
ಹೇಳಿದರು: “ಒಬ್ಬ ಮನುಷ್ಯ ಒಂದು ಮರ ನೆಟ್ಟರೆ, ಆ ಮರದಿಂದ ಹಕ್ಕಿಗಳು ತಿನ್ನುವ ಪ್ರತಿಯೊಂದು ಹಣ್ಣಿಗೂ ಅವನಿಗೆ
ಪಾಪವಿಮೋಚನೆ ದೊರಕುತ್ತದೆ.” ಈ ಮಾತು ಪ್ರಕೃತಿಯ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ನೀರು, ಗಾಳಿ, ಮರ,
ಮತ್ತು ಮಣ್ಣು ಇವೆಲ್ಲವೂ ಅಲ್ಲಾಹನ ಅಮಾನತ್ತುಗಳಾಗಿವೆ. ಅದನ್ನು ಅವನ್ನು ನಾಶಮಾಡುವುದು ಅಥವಾ
ದುರುಪಯೋಗ ಪಡಿಸುವುದು ದೊಡ್ಡ ಪಾಪವಾಗಿದೆ. ಇಸ್ಲಾಂ ಪರಿಸರದ ಸಂರಕ್ಷಣೆಯನ್ನೂ ಮತ್ತು ಧಾರ್ಮಿಕ
ಸಂರಕ್ಷಣೆಯನ್ನೂ ಮುಖ್ಯ ಕರ್ತವ್ಯವಾಗಿ ಕಾಣುತ್ತದೆ.
ಇಸ್ಲಾಂ ಧರ್ಮದ ಮತ್ತೊಂದು ಮಹತ್ವದ ಅಂಶ ನ್ಯಾಯವಾಗಿದೆ. ಪ್ರವಾದಿ (ಸ) ಹೇಳಿದರು: “ನೀವು ನಿಮ್ಮ ಶತ್ರುವಿನ
ಮೇಲೂ ನ್ಯಾಯ ತಾಲಿಸಬೇಕು”. ಎಂದರೆ, ಧರ್ಮದಲ್ಲಿ ಪಕ್ಷಪಾತವಿಲ್ಲ. ಯಾವ ಧರ್ಮದವನಾದರೂ, ಯಾರಾದರೂ
ಅನ್ಯಾಯ ಅನುಭವಿಸುತ್ತಿದ್ದರೆ, ಮುಸಲ್ಮಾನನು ಅದರ ವಿರುದ್ಧ ನಿಲ್ಲಬೇಕು. ನ್ಯಾಯ ಇಸ್ಲಾಮಿನ ಹೃದಯವಾಗಿದೆ.
ಕುರಾನ್ ಹೇಳುತ್ತದೆ: “ನೀವು ನಿಮ್ಮನ್ನು, ನಿಮ್ಮ ತಂದೆ ತಾಯಿಯರನ್ನು ಅಥವಾ ಬಂಧುಗಳನ್ನು ವಿರೋಧಿಸುವಂತಾದರೂ
ಸತ್ಯದ ಪರ ನಿಲ್ಲಿರಿ” (4:35). ಇದು ಇಸ್ಲಾಮಿನ ಅತ್ಯಂತ ಉನ್ನತ ಬೋಧನೆ. ಇಸ್ಲಾಂ ಧರ್ಮವು ಭಯದ ಅಥವಾ ಶಿಕ್ಷೆಯ
ಧರ್ಮವಲ್ಲ ಅದು ಪ್ರೀತಿ ಮತ್ತು ಕರುಣೆಯ ಧರ್ಮವಾಗಿದೆ. ಕೆಲವರು ತಪ್ಪಾಗಿ ಭಾವಿಸುತ್ತಿದ್ದಾರೆ ಏನೆಂದರೆ ಇಸ್ಲಾಂ
ಎಂಬುವುದು ಕಠಿಣ ಧರ್ಮವಾಗಿದೆ. ಆದರೆ ಕುರಾನ್‌ನಲ್ಲಿ ಅಲ್ಲಾಹು ಹೇಳುತ್ತಾನೆ: “ಅಲ್ಲಾಹನು ನಿಮಗೆ ಸುಲಭವನ್ನು
ಬಯಸುತ್ತಾನೆ, ಆದರೆ ಕಷ್ಟವನ್ನು ಬಯಸುವುದಿಲ್ಲ” (2:185). ಇಸ್ಲಾಂ ಮಾನವನ ಸಾಮರ್ಥ್ಯಕ್ಕೆ ತಕ್ಕಂತೆ
ನಿಯಮಗಳನ್ನು ಕೊಡುತ್ತದೆ. ಅದು ಮಾನವೀಯ ಧರ್ಮ, ಕರುಣೆಯ ಧರ್ಮ ಮತ್ತು ಶಾಂತಿಯ ಧರ್ಮವಾಗಿದೆ.
ಇಸ್ಲಾಮಿನ ಸಾರವನ್ನು ತಿಳಿದು ಬದುಕಿದರೆ ಮನುಷ್ಯನ ಜೀವನ ಸುಧಾರಿಸುತ್ತದೆ. ಅವನು ಶಾಂತವಾಗುತ್ತಾನೆ, ಇತರರಿಗೂ
ಶಾಂತಿಯನ್ನು ನೀಡುತ್ತಾನೆ. ಸಮಾಜದಲ್ಲಿ ಪ್ರೀತಿ ಬೆಳೆಯುತ್ತದೆ, ಅಸಹನೆಯು ಕಡಿಮೆಯಾಗುತ್ತದೆ. ಪ್ರವಾದಿಯು ಹೇಳಿದ
ಮಾತು “ಧರ್ಮ ಎಂದರೆ ಉತ್ತಮ ನಡತೆಯಾಗಿದೆ” ಈ ಮಾತು ಇಸ್ಲಾಮಿನ ಸತ್ಯ ಸ್ವರೂಪವನ್ನು ತೋರಿಸುತ್ತದೆ.
ಒಟ್ಟಿನಲ್ಲಿ ಇಸ್ಲಾಂ ಧರ್ಮವು ಪ್ರಾರ್ಥನೆಯಷ್ಟೇ ಅಲ್ಲ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಮಾರ್ಗದರ್ಶನ ನೀಡುವ
ಬೆಳಕಾಗಿದೆ. ಇದು ಕತ್ತಲೆಯೊಳಗೆ ಬೆಳಕಾಗಿದ್ದು, ಮನುಷ್ಯನೊಳಗೆ ಶಾಂತಿಯ ಬೀಜ ಬಿತ್ತಿದ್ದು. ಧರ್ಮದ ಸಾರವನ್ನು
ಅರ್ಥಮಾಡಿಕೊಂಡು ಬದುಕಿದಾಗ ಮಾತ್ರ ನಮ್ಮ ಜೀವನ ಸಂಪೂರ್ಣವಾಗಿ ಅರ್ಥಪೂರ್ಣವಾಗುತ್ತದೆ, ನಮ್ಮ ಹೃದಯಗಳಲ್ಲಿ
ಶಾಂತಿ ಮೇಲೈಸುತ್ತದೆ, ನಮ್ಮ ಸಮಾಜದಲ್ಲಿ ಸತ್ಯ, ದಯೆ, ಮತ್ತು ಸಹನೆ ಪ್ರೀತಿಯ ಹೂವಿನ ತೋಟವಾಗುತ್ತದೆ.
ಒಬ್ಬ ಮುಸಲ್ಮಾನನ ಜೀವನವು ಇಸ್ಲಾಮಿನ ಅಂತರಂಗದ ಕನ್ನಡಿಯಂತಿರಬೇಕು. ಅವನ ಮಾತು, ಕೆಲಸ, ಮತ್ತು
ವರ್ತನೆಗಳಿಂದ ಇಸ್ಲಾಮಿನ ಸೌಂದರ್ಯ ಕಾಣಬೇಕು. “ನೀವು ಜನರೊಂದಿಗೆ ಉತ್ತಮವಾಗಿ ವರ್ತಿಸಿರಿ, ಸತ್ಯವಾಗಿ
ಮಾತನಾಡಿರಿ, ಮತ್ತು ನಂಬಿಗಸ್ತರಾಗಿರಿ”. ಎನ್ನಲಾಗಿದೆ ಈ ಮಾತಿನ ಅರ್ಥವೆೇನೆಂದರೆ ಮುಸ್ಲಿಮನ ಜೀವನದ ಪ್ರತಿಯೊಂದು
ಕ್ಷಣವೂ ನೈತಿಕತೆಯಿಂದ ತುಂಬಿರಬೇಕು. ಅವನ ಮನಸ್ಸಿನಲ್ಲಿ ಸತ್ಯವಿರಬೇಕು, ಹೃದಯದಲ್ಲಿ ದಯೆಯಿರಬೇಕು, ಮತ್ತು
ನಡತೆಯಲ್ಲಿ ಶಾಂತಿಯಿರಬೇಕು. ಪ್ರವಾದಿ ಮುಹಮ್ಮದ್ (ಸ.ಅ) ಅವರು ಹೇಳಿದರು: “ನಿಮ್ಮಲ್ಲಿ ಅತ್ಯುತ್ತಮರು, ಅವರ
ನಡತೆಯು ಉತ್ತಮವಾಗಿರುವವರು”. ಇದು ತುಂಬಾ ಸ್ಪಷ್ಟವಾದ ಪಾಠ. ಎಂದರೆ, ಒಬ್ಬ ಮುಸಲ್ಮಾನನ ನಡತೆಯು ಅವನ
ಈಮಾನಿನ ಮಟ್ಟವನ್ನು ತೋರಿಸುತ್ತದೆ. ಆತನ ಪ್ರಾರ್ಥನೆಗಳ ಸಂಖ್ಯೆ, ಉಪವಾಸಗಳ ಪ್ರಮಾಣಕ್ಕಿಂತ ಹೆಚ್ಚಾಗಿವೆ, ಅವನ
ನಡತೆಯು ಅಲ್ಲಾಹನ ಮುಂದೆ ಮೌಲ್ಯಾಯುತವಾಗಿರುತ್ತದೆ. ಒಬ್ಬನು ಎಷ್ಟೇ ಉಪಾಸನೆ ಮಾಡಿದರೂ, ಜನರೊಂದಿಗೆ
ಕಠಿಣವಾಗಿ, ಅಸಹನೆಯಿಂದ, ಅಹಂಕಾರದಿಂದ ನಡೆದುಕೊಂಡರೆ, ಆ ಉಪಾಸನೆ ನಿಷ್ಫಲವಾಗಬಹುದು.
ಪ್ರವಾದಿ (ಸ.ಅ) ಅವರು ಹೇಳಿದರು: “ಒಬ್ಬ ಮುಸಲ್ಮಾನನಿಂದ ಇತರ ಮುಸಲ್ಮಾನರು ಸುರಕ್ಷಿತರಾಗಿರಬೇಕು ಎಂದರೆ ಅವರ
ನಾಲಿಗೆ ಮತ್ತು ಅವರ ಕೈಗಳಿಂದ ಸುರಕ್ಷಿತರಾಗಿರಬೇಕು”. ಮುಸ್ಲಿಂ ಎಂದರೆ ಯಾವಾಗಲೂ ಇತರರಿಗೆ ಹಾನಿ ಮಾಡದವನು.
ಅವರ ನಾಲಿಗೆಯಿಂದ ಯಾರಿಗೂ ನೋವು ಆಗಬಾರದು, ಅವರ ಕೈಗಳಿಂದ ಯಾರಿಗೂ ಸಮಸ್ಯೆಗಳು ಉಂಟಾಗಬಾರದು.
ಪ್ರಸ್ತುತ ಕಾಲದಲ್ಲಿ ನಾವು ಈ ಮಾತಿನ ಅರ್ಥವನ್ನು ಮರೆಯುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ, ವಿವಾದಗಳಲ್ಲಿ,
ಮಾತುಗಳಲ್ಲಿ ನಾವು ಒಬ್ಬರನ್ನೊಬ್ಬರು ನೋಯಿಸುತ್ತಿದ್ದೇವೆ. ಆದರೆ ನಿಜವಾದ ಮುಸ್ಲಿಂ ಎಂದರೆ ಶಾಂತಮನಸ್ಕ,
ಸಹನಶೀಲತೆ, ಮತ್ತು ಮೃದುಸ್ವಭಾವದಿಂದ ಸಾಗುವವನಾಗಿದ್ದಾನೆ.
ಅಲ್ಲಾಹು ಹೇಳುತ್ತಾನೆ: “ಅಲ್ಲಾಹನ ಬಾಂಧವರು ಸತ್ಯಪರವಾಗಿ ನಡೆಯುವವರು, ಅಜ್ಞಾನಿಗಳು ಮಾತಾಡಿದಾಗ
ಶಾಂತಿಯುತವಾಗಿ ಪ್ರತಿಕ್ರಿಯಿಸುವವರು” (25:63). ಇದೊಂದು ಅತ್ಯಂತ ಆಳವಾದ ಪಾಠ. ಪ್ರಸ್ತುತ ಕಾಲದಲ್ಲಿ ಕೋಪ,
ಅಹಂಕಾರ, ಮತ್ತು ಅಸಹನೆ ಹೆಚ್ಚಾಗಿದೆ. ಆದರೆ ಮುಸ್ಲಿಂ ಎಂದರೆ ಶಾಂತಿಯುತ ವ್ಯಕ್ತಿ.
ಅವನ ನಡವಳಿಕೆಯಿಂದ ಇತರರು ನೆಮ್ಮದಿಯನ್ನು ಅನುಭವಿಸಬೇಕು. ಅವನ ಮುಖದಲ್ಲಿ ಸಂತೋಷ ಇರಬೇಕು, ಏಕೆಂದರೆ
ಪ್ರವಾದಿ (ಸ.ಅ) ಹೇಳಿದರು:- “ನಿನ್ನ ಸಹೋದರನಿಗೆ ನಗುಮುಖ ತೋರಿಸುವುದು ಕೂಡ ಒಂದು ದಾನವಗಿದೆ”. ದಯೆ ಮತ್ತು
ಕರುಣೆ ಮುಸಲ್ಮಾನನ ಜೀವಾಳವಾಗಿದೆ.
ಪ್ರವಾದಿ (ಸ.ಅ) ಹೇಳಿದರು: - “ಯಾರು ದಯೆ ತೋರಿಸುತ್ತಾರೋ, ಅವರಿಗೆ ಅಲ್ಲಾಹನು ದಯೆ ತೋರಿಸುತ್ತಾನೆ”.
ಅದರಿಂದ ಯಾರಿಗಾದರೂ ಸಹಾಯ ಮಾಡುವುದು, ಹಸಿದವನಿಗೆ ಊಟ ನೀಡುವುದು, ಅನಾರೋಗ್ಯಿಗೆ ಭೇಟಿ ನೀಡುವುದು,
ಅನಾಥನ ಕಣ್ಣೀರನ್ನು ಒರೆಸುವುದು ಇವೆಲ್ಲವೂ ನಿಜವಾದ ಇಸ್ಲಾಮಿನ ಮೂಲ ನಡೆಯಾಗಿದೆ. ಇಸ್ಲಾಂ ಎಂದರೆ ಕೇವಲ
ನಮಾಜ್ ಅಥವಾ ಹಜ್ಜ್ ಅಲ್ಲ – ಅದು ಮಾನವೀಯತೆಯ ಮಾರ್ಗವಾಗಿದೆ. ಒಬ್ಬ ಮುಸಲ್ಮಾನನಿಂದ ಪ್ರೀತಿ ಮತ್ತು
ಶಾಂತಿಯ ಪರಿಮಳ ಹರಿದು ಬಂದು ಇತರರನ್ನು ಸ್ಪರ್ಶಿಸಬೇಕು. ಇದು ತುಂಬಾ ಸುಂದರವಾದಂತಹ ಮಾತಾಗಿದೆ. ನಮಗೆ
ಒಳ್ಳೆಯದಾಗಲಿ, ಇತರರಿಗೂ ಸದ್ಗುಣವಾಗಲಿ ಎನ್ನುವ ಮನೋಭಾವ ಇಸ್ಲಾಂ ಕಲಿಸುತ್ತದೆ. ಇದು ನೈತಿಕತೆಯ ಶ್ರೇಷ್ಠ
ಮಟ್ಟ. ಇಂದಿನ ದಿನಗಳಲ್ಲಿ ನಾವು ಸ್ವಾರ್ಥದಿಂದ, ಅಸೂಯೆಯಿಂದ, ಮತ್ತು ಅಹಂಕಾರದಿಂದ ತುಂಬಿದ್ದೇವೆ. ಆದರೆ ಒಬ್ಬ
ನಿಜವಾದ ಮುಸ್ಲಿಂ ಎಂದರೆ, ತನ್ನ ಸಹೋದರನ ಸಂತೋಷದಲ್ಲಿ ಸಂತೋಷಪಡುವವನು, ಅವನ ದುಃಖದಲ್ಲಿ
ದುಃಖಪಡುವವನಾಗಿದ್ದಾನೆ. ನಮ್ಮ ನಡೆ ಹೀಗೆ ಇರಬೇಕು – ಯಾರಾದರೂ ನಮ್ಮ ಮೇಲೆ ಕಠಿಣವಾಗಿ ಮಾತನಾಡಿದರೂ
ನಾವು ಶಾಂತಿಯಿಂದ ಪ್ರತಿಕ್ರಿಯಿಸಬೇಕು. ಯಾರಾದರೂ ಅನ್ಯಾಯ ಮಾಡಿದರೂ ನಾವು ನ್ಯಾಯದ ಮಾರ್ಗದಲ್ಲೇ ಇರಬೇಕು.
ಅಲ್ಲಾಹು ಹೇಳಿದ್ದಾನೆ: “ಒಳ್ಳೆಯತನದಿಂದ ಕೆಟ್ಟದನ್ನು ತಳ್ಳಿರಿ; ಆಗ ನಿಮ್ಮ ಶತ್ರು ನಿಮ್ಮ ಆಪ್ತ ಸ್ನೇಹಿತನಾಗಬಹುದು”
(41:34). ಇದು ಮುಸಲ್ಮಾನನ ನಡವಳಿಕೆಯ ತತ್ವವಾಗಿದೆ. ಜಗತ್ತಿನಲ್ಲಿ ಶಾಂತಿಯು ಕತ್ತಿಯಿಂದ ಅಲ್ಲ, ಬದಲಾಗಿ
ನಡತೆಯಿಂದ ಬರುವುದಾಗಿದೆ. ಒಬ್ಬ ಮುಸ್ಲಿಂ ತನ್ನ ಕುಟುಂಬದಲ್ಲಿಯೂ, ಸಮಾಜದಲ್ಲಿಯೂ ಒಳ್ಳೆಯ ನಡವಳಿಕೆಯ
ಮೂಲಕ ಇಸ್ಲಾಮಿನ ನಿಜವಾದ ಮುಖಃವನ್ನು ತೋರಿಸಬೇಕು. ಇಸ್ಲಾಂ ನ್ಯಾಯದ ಧರ್ಮ. ಯಾರ ಮೇಲೂ ಅನ್ಯಾಯ
ಮಾಡದಂತಹ ಧರ್ಮ. ಯಾವ ಕೆಲಸ ಮಾಡಿದರೂ ನಿಷ್ಠೆಯಿಂದ ಮಾಡಬೇಕು. ಪ್ರವಾದಿ (ಸ.ಅ) ಹೇಳಿದರು: “ಯಾರಾದರೂ
ಕೆಲಸ ಮಾಡಿದರೆ ಅದನ್ನು ಅತ್ಯುತ್ತಮವಾಗಿ ಮಾಡುವವರನ್ನು ಅಲ್ಲಾಹು ಇಷ್ಟಪಡುವನು”. ಅಲ್ಲಾಹು ಇಷ್ಟಪಡುವವನು
ನಮ್ಮ ಕೆಲಸಗಳಲ್ಲಿ ಗುಣಮಟ್ಟವಾದ ಪ್ರಾಮಾಣಿಕತೆ ಇರಬೇಕು. ನಾವು ಶಾಲೆಯಲ್ಲಿ ಓದುವಾಗ, ಕೆಲಸ ಮಾಡುವಾಗ,
ಅಥವಾ ಸೇವೆ ನೀಡುವಾಗ ಯಾವಾಗಲೂ ನಿಷ್ಠೆಯಿಂದ, ಸತ್ಯತೆಯಿಂದ ನೀಡಬೇಕು.
ಒಬ್ಬ ಮುಸ್ಲಿಂ ಸಹೋದರನು ಸುಳ್ಳು, ವಂಚನೆ, ಮೋಸ, ಮತ್ತು ಕಾಪಟ್ಯದಿಂದ ದೂರವಿರಬೇಕು. ಪ್ರವಾದಿ (ಸ.ಅ)
ಹೇಳಿದರು: “ಯಾರು ಸುಳ್ಳು ಹೇಳುವುದನ್ನು ಬಿಡುತ್ತಾರೋ ಅವರೇ ನಿಜವಾದ ವಿಶ್ವಾಸಿಗಳು”. ಇಸ್ಲಾಂ ಧರ್ಮವು
ಸತ್ಯವನ್ನು ಅತ್ಯುನ್ನತ ಸ್ಥಾನದಲ್ಲಿ ಇಟ್ಟಿದೆ. ಸುಳ್ಳು ಯಾವಾಗಲೂ ಅಸ್ಥಿರತೆಯತ್ತ ಕರೆದೊಯ್ಯುತ್ತದೆ, ಆದರೆ ಸತ್ಯ
ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಹೀಗಾಗಿ ನಮ್ಮ ಮಾತು ಯಾವಾಗಲೂ ಸತ್ಯವಾಗಿರಬೇಕು, ನಮ್ಮ ವ್ಯವಹಾರ ಸತ್ಯದ
ಮೇಲೆ ಆಧಾರಿತವಾಗಿರಬೇಕು. ಕುರಾನ್‌ನಲ್ಲಿ: “ಅಲ್ಲಾಹನ ಬಾಂಧವರು ಆ ಮಾತುಗಳನ್ನು ಹೇಳುತ್ತಾರೆ, ಅವು ಸರಳ ಮತ್ತು
ಸತ್ಯದೊಂದಿಗೆ ಒಗ್ಗಟ್ಟಿನಿಂದ ನಿಂತಂತಹ ಮಾತಾಗಿದೆ” (33:70). ಇದು ನಮ್ಮ ದಿನನಿತ್ಯದ ಜೀವನಕ್ಕೆ
ಮಾರ್ಗದರ್ಶನೆಯಾಗಿದೆ. ನಾವು ಮಾತನಾಡುವ ಪ್ರತಿ ಮಾತು, ಬರೆಯುವ ಪ್ರತಿ ವಾಕ್ಯ, ಇತರರ ಮೇಲೆ ಪ್ರಭಾವ ಬೀರುತ್ತದೆ.
ಆದ್ದರಿಂದ ಮುಸ್ಲಿಂ ಎಂದರೆ ತನ್ನ ನಾಲಿಗೆಯನ್ನು ನಿಯಂತ್ರಿಸುವವನು, ಹಾಗೂ ತನ್ನ ಮಾತನ್ನು ಚಿಂತಿಸುವವನು, ಏಕೆಂದರೆ
ಪ್ರತಿಯೊಂದು ಮಾತಿಗೂ ಜವಾಬ್ದಾರಿ ಇದೆ. ನೈತಿಕತೆಯ ವಿಷಯದಲ್ಲಿ ಪ್ರವಾದಿ (ಸ.ಅ) ಅವರು ಅತ್ಯುತ್ತಮ
ಮಾದರಿಯಾಗಿದ್ದಾರೆ. ಅವರ ಜೀವನವೇ ಕುರಾನ್‌ನ ಜೀವಂತ ರೂಪವಾಗಿದೆ. ಅವರು ಕೋಪಗೊಂಡಿಲ್ಲ, ಯಾರಿಗೂ
ಅವಮಾನ ಮಾಡಲಿಲ್ಲ, ಅನ್ಯಾಯ ಕಂಡಾಗ ನ್ಯಾಯಕ್ಕಾಗಿ ಹೋರಾಡಿ ಧೈರ್ಯದಿಂದ ನಿಂತರು. ಪ್ರಸ್ತುತ ಕಾಲದಲ್ಲಿ ನಾವು
ಈ ಪಾಠಗಳನ್ನು ಮರೆಯುತ್ತಿದ್ದೇವೆ. ಆದರೆ ನಾವೆಲ್ಲರೂ ಅವರಂತೆ ನಡೆದುಕೊಳ್ಳಲು ಪ್ರಯತ್ನಿಸಿದರೆ, ನಮ್ಮ ಸಮಾಜವೇ
ಬದಲಾಗಬಹುದು. ಒಬ್ಬ ಮುಸ್ಲಿಂ ತನ್ನ ಪೋಷಕರಿಗೆ ಗೌರವ ನೀಡಬೇಕು. ಕುರಾನ್‌ನಲ್ಲಿ: “ನೀವು ನನಗೆ ಆರಾಧನೆ ಮಾಡಿ,
ಮತ್ತು ನಿಮ್ಮ ಪೋಷಕರಿಗೆ ಒಳ್ಳೆಯದನ್ನಾಗಿ ವರ್ತಿಸಿರಿ” (2:83). ಎನ್ನಲಾಗಿದೆ ಅಂದರೆ ಧರ್ಮದಲ್ಲಿ ಪೋಷಕರ ಸ್ಥಾನ
ಅತ್ಯುನ್ನತವಾಗಿದೆ.
ಪೋಷಕರ ಮಾತು ಕೇಳುವುದು, ಅವರಿಗೆ ಸಹಾಯ ಮಾಡುವುದು, ಅವರ ಪ್ರೀತಿ ಕಾಪಾಡುವುದು – ಇವೆಲ್ಲವೂ
ಆರಾಧನೆಯಾಗಿದೆ. ಅದೇ ರೀತಿ ಅಕ್ಕಪಕ್ಕದವರ ಹಕ್ಕುಗಳನ್ನು ಕಾಪಾಡುವುದು ಕೂಡ ಅತ್ಯಂತ ಮುಖ್ಯವಾಗಿದೆ. ಪ್ರವಾದಿ
(ಸ.ಅ) ಹೇಳಿದರು: “ಅಲ್ಲಾಹನಿಂದ ಅಕ್ಕಪಕ್ಕದವರ ಬಗ್ಗೆ ಎಷ್ಟು ಸಲ ಉಪದೇಶ ಬಂದಿತೆಂದರೆ, ನಾನು ಅವರು ನನ್ನ
ನೆರೆಹೊರೆಯವರನ್ನೇ ನನ್ನ ಹಕ್ಕುದಾರನೆಂದು ಭಾವಿಸಿದೆ”. ನಮ್ಮ ನಡೆ, ಧರ್ಮದ ಗುರುತು. ನಾವು ಯಾವ ದೇಶದಲ್ಲಿರಲಿ,
ಯಾವ ಪರಿಸರದಲ್ಲಿರಲಿ, ನಮ್ಮ ನಡೆ-ನುಡಿಗಳಿಂದ ಇಸ್ಲಾಮಿನ ಮೌಲ್ಯ ತೋರಬೇಕು. ಸತ್ಯ, ಸಹನೆ, ದಯೆ, ಕ್ಷಮೆ,
ಪ್ರಾಮಾಣಿಕತೆ, ವಿನಯ – ಇವುಗಳು ನಿಜವಾದ ಮುಸಲ್ಮಾನನ ಲಕ್ಷಣಗಳಾಗಿವೆ. ಈ ಗುಣಗಳು ಇದ್ದರೆ ಸಮಾಜದಲ್ಲಿ
ಮುಸಲ್ಮಾನ ಶಾಂತಿಯ ಸಂಕೇತ ಎಂದು ಎಲ್ಲರೂ ಹೇಳುತ್ತಾರೆ. ಇದು ನಾವೆಲ್ಲರೂ ಹೃದಯದಿಂದ ಪಾಲಿಸಬೇಕಾದ
ಮಾರ್ಗ. ಇಸ್ಲಾಂ ಎಂದರೆ ಕೇವಲ ನಮಾಜಿನ ಧರ್ಮವಲ್ಲ, ಅದು ನಡವಳಿಕೆಯ ಧರ್ಮ. ನಮ್ಮ ವರ್ತನೆ ಕುರಾನ್ ಮತ್ತು
ಹದೀಸಿನ ಬೆಳಕಿನಲ್ಲಿ ಬೆಳಗಬೇಕು. ಅಲ್ಲಾಹನ ಭಯ ನಮ್ಮ ಹೃದಯದಲ್ಲಿ ಇದ್ದರೆ ನಮ್ಮ ನಡೆ ಸರಿಯಾದ ಪಥದಲ್ಲಿ
ನಡೆಯುತ್ತದೆ. ಆದ್ದರಿಂದ ಪ್ರತಿಯೊಬ್ಬ ಮುಸಲ್ಮಾನನು ತನ್ನ ಜೀವನದ ಪ್ರತಿಯೊಂದು ಕ್ಷಣದಲ್ಲೂ ಈ
ಮಾರ್ಗದರ್ಶನವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವನ ಬದುಕು ಇಸ್ಲಾಮಿನ ಬೆಳಕಾಗಬೇಕು, ಇತರರಿಗೆ
ಮಾದರಿಯಾಗಬೇಕು, ಮತ್ತು ಜಗತ್ತಿಗೆ ಶಾಂತಿಯ ಉದಾಹರಣೆಯಾಗಬೇಕು.