ಖುರಾನಿನ ಕ್ರತಕ ಬುದ್ಧಿಮತೆ ಮತ್ತು ನೈತಿಕತೆ
ಜಗತ್ತು ಅಣುವಿನಿಂದ ಪರಮಾಣುವಿನೆಡೆಗೆ, ಅಂಗಳದಿಂದ ಮಂಗಳದವರೆಗೆ ಸಾಗಿಬಿಟ್ಟಿದೆ. ಕಿರುಬೆರಳಿನಲ್ಲಿ ಜಗತ್ತನ್ನು ಹೊತ್ತು ಮಾನವ ಸಾಗುತ್ತಿದ್ದಾನೆ. ಇದಕ್ಕೆಲ್ಲ ಭದ್ರ ಬುನಾದಿ ಅಥವಾ ತಾಪು ಕಾಲಿಟ್ಟದ್ದು ಕೃತಕ ಬುದ್ಧಿಮತ್ತೆ. ಈ ಬುದ್ಧಿಮತ್ತೆಯು ಜಗತ್ತಿನ ಅತಿ ದೊಡ್ಡ ಕ್ರಾಂತಿಕಾರಿ ಯುಗಕ್ಕೆ ಕಾರಣವಾಗಿ ಮಾರ್ಪಟ್ಟಿತು. ಮಾನವನ ನಾಗರಿಕತೆಯ ಚರಿತ್ರೆಯ ಪುಟಗಳಲ್ಲಿ ಸರಿ-ತಪ್ಪು ಬಗ್ಗೆ ಇಷ್ಟೊಂದು ಪ್ರಶ್ನೆಗಳನ್ನು ಎಬ್ಬಿಸಿದ ಕ್ರಾಂತಿಯಾಗಿದೆ ಈ ಕೃತಕ ಬುದ್ಧಿಮತ್ತೆ.
ಇದು ಕೇವಲ ಯಂತ್ರಗಳು ಲೆಕ್ಕಾಚಾರ ಮಾಡುವುದಲ್ಲ. ತಂತ್ರಜ್ಞಾನವೇ ಈ ಚಿಂತನೆಯ ಬಾಗಿಲಿನ ಮುಂಭಾಗದಲ್ಲಿ ಮಣಿದು ನಿಂತಿದೆ. ಯಂತ್ರಗಳು ಊಹಿಸುತ್ತವೆ, ಅವಲೋಕಿಸುತ್ತವೆ, ತೀರ್ಮಾನಿಸುತ್ತವೆ ಮತ್ತು ಕೆಲವೊಮ್ಮೆ ನೈತಿಕ ಆಯ್ಕೆಗಳನ್ನು ಶಿಫಾರಸು ಮಾಡುತ್ತವೆ. ಆದರೂ ಇಂತಹ ಅದ್ಭುತ ವೈಶಾಲ್ಯದ ಪ್ರಗತಿಯ ನಡುವೆಯೂ ಬಹಿರಂಗದ ಅಂತರಾಳದಿಂದ ಪ್ರತಿಧ್ವನಿಸುವ ಸಾಮರಸ್ಯಕರ ಪ್ರಶ್ನೆಯು ಇನ್ನೂ ಉಳಿದಿದೆ:
ಆತ್ಮಸಾಕ್ಷಿಯಿಲ್ಲದೆ ಜ್ಞಾನವಿರಬಹುದೇ? ಅಥವಾ ಕರುಣೆಯಿಲ್ಲದೆ ಬುದ್ಧಿವಂತಿಕೆ ಇರಬಹುದೇ?
ಈ ಸಮಯದಲ್ಲಿ ಕುರಾನ್ ಮಾನವೀಯತೆಯ ತಿಳಿವಳಿಕೆಯ ಮಿತಿಗಳ ಬಗ್ಗೆ ಎಚ್ಚರಿಸುತ್ತಿದೆ:
وَمَا أُوتِيتُم مِّنَ الْعِلْمِ إِلَّا قَلِيلًا
“ನಿಮಗೆ ಸ್ವಲ್ಪ ಜ್ಞಾನವನ್ನು ಮಾತ್ರ ನೀಡಲಾಗಿದೆ.” [ಅಲ್-ಇಸ್ರಾ 17:85]
ಈ ವಚನವು ಸಾವಿರ ವರ್ಷಗಳ ಹಿಂದೆಯೇ ಧರೆಗಿಳಿದಿದ್ದರೂ ಇಂದಿಗೂ ಕ್ರಾಂತಿಯ ಕಿಚ್ಚನ್ನು ಎಡೆಬಿಡದೆ ಹಬ್ಬಿಸುತ್ತಿದೆ. ಪ್ರಸ್ತುತ ವಚನವು ಅಲ್ಲಾಹನ ಅನಂತ ಸ್ಥಾನದ ಮುಂದೆ ನಮ್ರತೆಯ ಶುಭ್ರ ಸಂದೇಶವನ್ನು ಸಾರುತ್ತಿದೆ. ಮಾನವ ಬುದ್ಧಿಮತ್ತೆ ಎಷ್ಟೇ ಮುಂದುವರಿದರೂ ಅದು ಎಂದಿಗೂ ಸೀಮಿತ ಗ್ರಹಿಕೆಯ ಸಣ್ಣ ಪಾತ್ರೆಯೊಳಗೆ ಬಂಧಿತವಾಗಿರುತ್ತದೆ. ಆದರೆ ಇಂದಿನ ಬುದ್ಧಿಮತ್ತೆ ಯಾತಚಿತ್ತವಾಗಿ ಈ ಆಶಯಕ್ಕೆ ಎದುರಾಗುತ್ತಿದೆ.
ಕೃತಕ ಬುದ್ಧಿಮತ್ತೆಯು ಎಷ್ಟೇ ಕ್ರಾಂತಿ ಎಬ್ಬಿಸಿದರೂ, ಎಷ್ಟೇ ಕೊಡುಗೆ ನೀಡಿದರೂ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಈ ವಚನದ ಎಚ್ಚರಿಕೆಯೂ ಎಂದಿಗೂ ಕೊನೆಗೊಂಡಿಲ್ಲ. ಯಂತ್ರಗಳು ಕಲಿಯಲು, ಹೊಂದಿಕೊಳ್ಳಲು ಮತ್ತು ತೀರ್ಪುಗಳನ್ನು ಪ್ರಸ್ತಾಪಿಸಲು ಪ್ರಾರಂಭಿಸಿದಾಗ ಮಾನವೀಯತೆಯು ಹಿಂದೆಂದಿಗಿಂತಲೂ ಅತಿ ವಿಭಿನ್ನವಾಗಿ ನೈತಿಕ ಪರೀಕ್ಷೆಯನ್ನು ಎದುರಿಸುತ್ತಿದೆ. ಕಾಲಚಕ್ರ ಉರುಳತೊಡಗಿದಂತೆ ತಂತ್ರಜ್ಞಾನವು ಇನ್ನು ಮುಂದೆ ಕೇವಲ ಮನುಷ್ಯನ ಸೇವಕರಾಗಿ ಮಾತ್ರ ಕಾರ್ಯ ನಿರ್ವಹಿಸುವುದಿಲ್ಲ, ಬದಲಿಗೆ ಅವು ಅವನ ಸ್ವಭಾವ ನಿರೂಪಣೆ, ಜೀವನ ಶೈಲಿ ಮತ್ತು ಅವನ ಭಾವನೆಗಳನ್ನು, ನಂಬಿಕೆಗಳನ್ನು ಸಹ ರೂಪಿಸಲು ಪ್ರಾರಂಭಿಸುತ್ತವೆ.
ಆರಂಭಿಕ ಯುಗದಲ್ಲಿ ಕಂಪ್ಯೂಟರ್ಗಳು ಕೇವಲ ಡೇಟಾ ಸಂಸ್ಕರಣೆಯ ಸಾಧನಗಳಾಗಿದ್ದವು. ಆದರೆ ಇಂದು ಆಧುನಿಕ ಕಂಪ್ಯೂಟರ್ಗಳು ತೀರ್ಪು ನೀಡುವ ಸಾಮರ್ಥ್ಯವಿರುವ ಘಟಕಗಳಾಗಿ ವಿಕಸನಗೊಂಡಿವೆ.
‘ಅಲಿ ಇಜೆಟ್ಪೆಗೊಲಿಕ್’ ಒಮ್ಮೆ ಹೇಳುತ್ತಾರೆ: “ಕೃತಕ ಬುದ್ಧಿಮತ್ತೆ ಇನ್ನು ಮುಂದೆ ನಿಷ್ಕ್ರಿಯ ಸಾಧನವಲ್ಲ, ಅದು ಈಗ ಬದುಕಿನ ಮೌಲ್ಯಮಾಪನ ಮಾಡುತ್ತದೆ.” ಗಣನೆಯಿಂದ ನೈತಿಕ ಅನುಚರಣೆಯ ಈ ಬದಲಾವಣೆಯು ಮಾನವ ಕುಲದ ಆತ್ಮಸಾಕ್ಷಿಯನ್ನು ಜಾಗ್ರತಗೊಳಿಸಬೇಕು. ತೀರ್ಪು ತೀರ್ಮಾನಗಳು ನೈತಿಕತೆಯನ್ನು ಬೇರ್ಪಟ್ಟು ಹೃದಯ ಮತ್ತು ಆತ್ಮದ ಒಲವನ್ನು ಪಡೆಯಬೇಕು.
ಪವಿತ್ರ ಗ್ರಂಥವಾದ ಕುರಾನ್ ನಿರಂತರವಾಗಿ ಜ್ಞಾನವನ್ನು ಜವಾಬ್ದಾರಿಯೊಂದಿಗೆ ಸಂಯೋಜಿಸುತ್ತದೆ. ಇದು ಚಿಂತನೆ (ತಫಕ್ಕೂರ್), ತಾರ್ತಿಕತೆ (ತವಕ್ಕುಲ್) ಮತ್ತು ನೈತಿಕ ಸಂಯಮ (ತಖ್ವಾ) ವನ್ನು ಆದೇಶಿಸುತ್ತದೆ. ಇಸ್ಲಾಮಿನಲ್ಲಿ ಜ್ಞಾನವು ಒಂದು ತಟಸ್ಥ ವಿಷಯವಲ್ಲ. ಅದು ನ್ಯಾಯ ಮತ್ತು ಕರುಣೆಯನ್ನು ಎತ್ತಿಹಿಡಿಯುವ ಕರ್ತವ್ಯವನ್ನು ಹೊಂದಿದೆ.
ಇನ್ನೊಂದು ಕಡೆ ಬುದ್ಧಿಮತ್ತೆಯ ಕಡೆ ನೋಡುವುದಾದರೆ, ಬುದ್ಧಿಮತ್ತೆ ದತ್ತಾಂಶದಿಂದ ಕಲಿಯುತ್ತಿದೆ — ದುರಾಸೆ, ಪಕ್ಷಪಾತ ಮತ್ತು ಪೂರ್ವಗ್ರಹದಿಂದ ನಡೆಸಲ್ಪಡುವ ಮಾನವ ಸಮಾಜದಿಂದ ಉತ್ಪತ್ತಿಯಾಗುವ ದತ್ತಾಂಶ. ಇದರಿಂದ ಸಮಾಜವು ಕಲುಷಿತವಾಗಿ ಮಾರ್ಪಡುತ್ತಿದೆ. ಆದ್ದರಿಂದ AI ನಮ್ಮ ಜಗತ್ತನ್ನು ಪ್ರತಿಬಿಂಬಿಸಿದಾಗ ಅದು ನಮ್ಮ ನೈತಿಕ ವೈಫಲ್ಯಗಳನ್ನು ಸಹ ಪ್ರತಿಬಿಂಬಿಸುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಯಂತ್ರಗಳು ನಮ್ಮ ಬುದ್ಧಿಶಕ್ತಿಯಿಂದ ಮಾತ್ರವಲ್ಲದೆ ನಮ್ಮ ಒಲವುಗಳಿಂದ ಕೂಡ ತರಬೇತಿ ಪಡೆದಿವೆ. ಆ ಒಲವುಗಳು ಭ್ರಷ್ಟವಾಗಿದ್ದರೆ ಪ್ರತಿಬಿಂಬವೂ ಹಾಗೆಯೇ ಇರುತ್ತದೆ.
ಮಾನವನು ತನ್ನ ಅಲ್ಪ ಜ್ಞಾನದ ಅಹಂಕಾರದ ಕೋಟೆಯಲ್ಲಿ ಮಾನವೀಯತೆಯ ದೈವಿಕ ಮಾರ್ಗದರ್ಶನವನ್ನು ಮರೆಯತೊಡಗಿದಾಗ ಕುರಾನ್ ಎಚ್ಚರಿಸುತ್ತದೆ:
أَفَرَأَيْتَ مَنِ اتَّخَذَ إِلَٰهَهُ هَوَاهُ
“ತಮ್ಮ ಸ್ವಂತ ಇಚ್ಛೆಯನ್ನೇ ತನ್ನ ದೇವರಾಗಿ ಸ್ವೀಕರಿಸಿದವನನ್ನು ನೀವು ಕಂಡಿಲ್ಲವೇ?”
ಮೇಲೆ ಸೂಚಿಸಿದ ವಚನವು ವ್ಯಕ್ತಿಗಳಿಗೆ ಮಾತ್ರವಲ್ಲ, ತಂತ್ರಜ್ಞಾನ ಮತ್ತು ಲಾಭದ ವಿಗ್ರಹಗಳನ್ನು ಪೂಜಿಸುವ ಸಮಾಜಗಳಿಗೂ ಅನ್ವಯಿಸುತ್ತದೆ.
ರಿಯಾದ್ ಅಸ್-ಸಾಲಿಹೀನ್ನಲ್ಲಿ ಕಂಡುಬರುವ ಒಂದು ನಿರೂಪಣೆಯಲ್ಲಿ ಒಬ್ಬ ಸಹಚರರು ಪ್ರವಾದಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರ ಬಳಿ ಕೇಳಿದನು:
“ಓ ದೇವದೂತರೇ, ಸದಾಚಾರ ಮತ್ತು ಪಾಪ ಎಂದರೇನು?”
ಪ್ರವಾದಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಹೇಳುತ್ತಾರೆ: “ಸದಾಚಾರವೆಂದರೆ ನಿನ್ನ ಹೃದಯವು ಶಾಂತಿಯನ್ನು ಪಡೆಯುವುದು ಮತ್ತು ನಿನ್ನ ಮನಸ್ಸು ನಿಶ್ಚಿಂತವಾಗುವುದು. ಪಾಪವೆಂದರೆ ನಿನ್ನ ಮನಸ್ಸನ್ನು ತೊಂದರೆಗೊಳಿಸುವುದು ಮತ್ತು ಆ ಪಾಪವನ್ನು ಜನರು ತಿಳಿದುಕೊಳ್ಳುವುದನ್ನು ನೀನು ಇಷ್ಟಪಡದಿರುವುದು.”
ಈ ಆಳವಾದ ಹದೀಸ್ ನೈತಿಕತೆಯನ್ನು ಸರಳವಾಗಿ ವಿವರಿಸುತ್ತದೆ. ದೈವಿಕ ಬೆಳಕಿನಿಂದ ಮಾರ್ಗದರ್ಶಿಸಲ್ಪಟ್ಟ ಮಾನವ ಹೃದಯವನ್ನು ನಿರ್ಮಿಸುತ್ತದೆ. ವಿಕಾಸನಗೊಳ್ಳುತ್ತಿರುವ ಈ ಆಧುನಿಕ ಜಗತ್ತು ಬುದ್ಧಿವಂತ ಯಂತ್ರಗಳನ್ನು ಸೃಷ್ಟಿಸುವ ಆತುರದಲ್ಲಿ ಮರೆತುಬಿಟ್ಟ ಒಂದು ಪ್ರಶ್ನೆಯಿದೆ — “ಬುದ್ಧಿವಂತಿಕೆ ಯಾವುದಕ್ಕಾಗಿ?”
ಕುರಾನ್ ದೃಷ್ಟಿಕೋನದಲ್ಲಿ ಬುದ್ಧಿವಂತಿಕೆ ಎಂಬುದು ಸತ್ಯವನ್ನು ಗುರುತಿಸಲು ಮತ್ತು ಸೃಷ್ಟಿಕರ್ತನನ್ನು ಆರಾಧಿಸಲು ನೀಡಲಾದ ಪವಿತ್ರ ಕೊಡುಗೆಯಾಗಿದೆ. ಜ್ಞಾನವು ಅಲ್ಲಾಹನ ಗುಲಾಮಗಿರಿಯಿಂದ ಬೇರ್ಪಟ್ಟಾಗ ಅದು ವಿಷಕಾರಿಯಾಗುತ್ತದೆ. ಕೃತಕ ಬುದ್ಧಿಮತ್ತೆಯ ಅಪಾಯವೆಂದರೆ ಯಂತ್ರಗಳಲ್ಲ, ಬದಲಿಗೆ ತಮ್ಮ ಸೃಷ್ಟಿಕರ್ತನೇ ಹೊಣೆಗಾರಿಕೆಯಿಲ್ಲದೆ ಅವುಗಳನ್ನು ವಿನ್ಯಾಸಗೊಳಿಸುವ ಮಾನವರು — “ಕೃತಜ್ಞತೆ ಇಲ್ಲದ ನರಪ್ರಾಣಿಗಳು.”
ಯುವಲ್ ನೋವ್ ಹರಾರಿ ತಮ್ಮ ನೆಕ್ಸಸ್ ಕಥೆಯಲ್ಲಿ ಪೇಪರ್ಕ್ಲಿಪ್ನ ಕಥೆ ಹೇಳಿದಂತೆ, ಸಾಮಾಜಿಕ ಮಾಧ್ಯಮಗಳು ಹಲವು ಅಪಾಯಗಳನ್ನು ಹುಟ್ಟುಹಾಕುತ್ತಿವೆ. ಅವುಗಳ ಅಲ್ಗಾರಿದಮ್ಗಳು ನಿರ್ದಿಷ್ಟ ಗುರಿಯನ್ನು ಹೊಂದಿವೆ. ಜನರನ್ನು ಚಿಂತನೆಗೆ ಒಯ್ಯದೇ ಸ್ಕ್ರೋಲ್ ಮಾಡಲು ಪ್ರೇರೇಪಿಸುತ್ತವೆ. ಹೆಚ್ಚು ವಿಭಜನೆಯ ವಿಷಯಗಳು ಹೆಚ್ಚು ಗಮನ ಸೆಳೆಯುತ್ತವೆ.
ಅಲ್ಲಾಹನು ಕುರಾನಿನಲ್ಲಿ ವಿವರಿಸುತ್ತಾನೆ:
وَلَا تَقْفُ مَا لَيْسَ لَكَ بِهِ عِلْمٌ ۚ إِنَّ السَّمْعَ وَالْبَصَرَ وَالْفُؤَادَ كُلُّ أُولَٰئِكَ كَانَ عَنْهُ مَسْئُولًا
“ನಿನಗೆ ಜ್ಞಾನವಿಲ್ಲದ ವಿಷಯವನ್ನು ಅನುಸರಿಸಬೇಡ. ನಿಶ್ಚಯವಾಗಿಯೂ ಶ್ರವಣ, ದೃಷ್ಟಿ ಮತ್ತು ಹೃದಯ — ಇವೆಲ್ಲವೂ ನಿಶ್ಚಯವಾಗಿಯೂ ಪ್ರಶ್ನಿಸಲ್ಪಡುವುವು.” [ಅಲ್-ಇಸ್ರಾ 17:36]
ಈ ವಚನವು ಬುದ್ಧಿಶಕ್ತಿ ಮತ್ತು ಹೃದಯದ ಪ್ರತಿಯೊಂದು ಕ್ರಿಯೆಗೂ ಹೊಣೆಗಾರಿಕೆಯ ಬಗ್ಗೆ ಬಹಳ ಸೂಕ್ತವಾಗಿ ಎಚ್ಚರಿಸುತ್ತಿದೆ.
ಕೃತಕ ಬುದ್ಧಿಮತ್ತೆ ಮತ್ತು ನೈತಿಕತೆಯ ಭೇದಕವು ತಾಂತ್ರಿಕ ಚರ್ಚೆಯಲ್ಲ, ಇದು ಆಧ್ಯಾತ್ಮಿಕ ಚರ್ಚೆಯಾಗಿದೆ. ಸರಿ ಮತ್ತು ತಪ್ಪು ವ್ಯಾಖ್ಯಾನಿಸುವ ಅಧಿಕಾರ ಯಾರಿಗಿದೆ ಎಂಬುದರ ಬಗ್ಗೆ ಯಂತ್ರಗಳು ಅಪಾರ ಮಾಹಿತಿ ನೀಡಬಹುದು. ಆದರೆ ಅವು ಆತ್ಮೀಯತೆ ಮತ್ತು ಧಾರ್ಮಿಕತೆಯ ಮುಂದೆ ವಿಸ್ಮಯವನ್ನು ಅನುಭವಿಸಲು ಅಥವಾ ದಮನಿತರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಕರುಣೆಯನ್ನು ಅನುಭವಿಸಲು ಸಾಧ್ಯವಿಲ್ಲ.
ಇಸ್ಲಾಂ ಧರ್ಮ ಎಂದಿಗೂ ಮಾನವರನ್ನು ಗೌರವಿಸುತ್ತಲೇ ಬಂದಿದೆ. ಪ್ರತ್ಯೇಕವಾಗಿ ಕುರಾನ್ ಮಾನವ ಜನಾಂಗವನ್ನು ಎಲ್ಲ ಸೃಷ್ಟಿಗಳಿಗಿಂತ ಮಿಗಿಲಾಗಿ ಗೌರವಿಸುತ್ತದೆ:
وَلَقَدْ كَرَّمْنَا بَنِي آدَمَ
“ನಿಶ್ಚಯವಾಗಿಯೂ ನಾವು ಆದಮ್ ಸಂತತಿಯನ್ನು ಗೌರವಿಸಿದ್ದೇವೆ.”
ಈ ಸೂಕ್ತದ ಒಳಾರ್ಥವನ್ನು ನೋಡುವುದಾದರೆ, ಈ ಗೌರವವು ಕೇವಲ ಬುದ್ಧಿವಂತಿಕೆಯಿಂದಲ್ಲ, ಬದಲಾಗಿ ಆತ್ಮಸಾಕ್ಷಿಯಿಂದ ಹುಟ್ಟಿಕೊಂಡು, ಸುಳ್ಳಿನ ಬದಲಿಗೆ ಸತ್ಯವನ್ನು, ಅನ್ಯಾಯದ ಬದಲಿಗೆ ನ್ಯಾಯವನ್ನು, ಅಧಿಕಾರದ ಬದಲಿಗೆ ಕರುಣೆಯನ್ನು ಆಯ್ಕೆ ಮಾಡುವ ವಿಶಿಷ್ಟ ಸಾಮರ್ಥ್ಯದಿಂದ ಮಾನವ ಕುಲಕ್ಕೆ ಸಲ್ಲುತ್ತದೆ.
ಬುದ್ಧಿವಂತಿಕೆ ಬೆಳೆಯುತ್ತಾ ಹೋದಂತೆ ನಂಬಿಕೆಯು ಪೂರ್ಣವಾಗುವುದನ್ನು ಖಚಿತಪಡಿಸುವುದು ಪ್ರತಿಯೊಬ್ಬ ವಿಶ್ವಾಸಿಯ ಕರ್ತವ್ಯವಾಗಿದೆ. ಇಂತಹ ಸಮಯದಲ್ಲಿ ಮಾತ್ರ ಜ್ಞಾನವು ಹೊರೆಯಾಗದೆ ಆಶೀರ್ವಾದವಾಗಿ ಉಳಿಯುತ್ತದೆ. ಪ್ರಸ್ತುತ ಇಸ್ಲಾಂ ಧರ್ಮವು ಎಂದಿಗೂ ಪ್ರಗತಿಯ ಬೆಳವಣಿಗೆಯನ್ನು ತಿರಸ್ಕರಿಸುವುದಿಲ್ಲ, ಆದರೆ ಅದನ್ನು ಹೊಣೆಗಾರಿಕೆಯೊಂದಿಗೆ ಒಯ್ಯುತ್ತದೆ. ಕುರಾನ್ ಜ್ಞಾನವನ್ನು ಹುಡುಕುವುದನ್ನು ಪ್ರೋತ್ಸಾಹಿಸುತ್ತದೆ, ಆದರೆ ಯಾವಾಗಲೂ ನ್ಯಾಯ ಮತ್ತು ಕರುಣೆಯ ಮಿತಿಯೊಳಗೆ ತಂತ್ರಜ್ಞಾನವು ವಿಕಸನಗೊಳ್ಳಬೇಕು.
ಪ್ರತಿಯೊಬ್ಬ ವಿಶ್ವಾಸಿಯೂ ಈ ಜಗತ್ತಿನಲ್ಲಿ ತನ್ನ ಬಹುಮುಖ್ಯ ಪಾತ್ರದ ಬಗ್ಗೆ ಚಿಂತಿಸಬೇಕು. ಮುಂಬರುವ ಕಾಲದಲ್ಲಿ ತಂತ್ರಜ್ಞಾನದ ಯುಗದಲ್ಲಿ ನೈತಿಕತೆಯನ್ನು ರೂಪಿಸುವ ಮುಖ್ಯ ಪಾತ್ರವನ್ನು ವಹಿಸಬೇಕು. ಇಸ್ಲಾಮಿನ ದೃಷ್ಟಿಯಲ್ಲಿ ನೈತಿಕತೆಯು ಹೊರಗಿನಿಂದ ಹೇರಲ್ಪಡುವುದಿಲ್ಲ, ಬದಲಿಗೆ ಒಳಗಿನಿಂದ ಸಾಗರವಾಗಿ ಹರಿಯುತ್ತಿರುತ್ತದೆ.
“ಎಲ್ಲವನ್ನೂ ಅಲ್ಲಾಹು ನೋಡುತ್ತಿದ್ದಾನೆ ಮತ್ತು ಪ್ರತಿಯೊಂದು ಕ್ರಿಯೆಯನ್ನು ವಾಖ್ಯಾನಿಸುತ್ತಿದ್ದಾನೆ. ಎಲ್ಲಕ್ಕೂ ನಿಶ್ಚಿತ ಪ್ರತಿಫಲವಿದೆ.”
ಎಂಬ ನೈತಿಕತೆಯ ಚಿಂತನೆಯು ಎಂದಿಗೂ ಕೃತಕ ಬುದ್ಧಿಮತ್ತೆಗೆ ಸಾಧ್ಯವಿಲ್ಲ. ಏಕೆಂದರೆ ಕೃತಕ ಬುದ್ಧಿಮತ್ತೆಗೆ ಸತ್ಯದ ಹಾದಿಯ ಆತ್ಮ ಎಂದಿಗೂ ಇರುವುದಿಲ್ಲ. ಹೀಗಾಗಿ ವಿಶ್ವಾಸಿಯು ತಾಂತ್ರಿಕ ಯುಗದಲ್ಲಿ ನೈತಿಕತೆಯ ರಕ್ಷಕನಾಗಿ ಉಳಿಯಬೇಕು.
“ಜ್ಞಾನವು ಎಂದಿಗೂ ಹೊತ್ತುವ ಬೆಂಕಿಯಾಗದೆ, ಜ್ವಲಿಸುವ ಬೆಳಕಾಗಿ ಉಳಿಯುವಂತೆ ನೋಡಿಕೊಳ್ಳಬೇಕು.”
— ರಾಫಿ ಕೋಲ್ಪೆ