ಪವಿತ್ರ ಇಸ್ಲಾಮಿನಲ್ಲಿ ವಹ್ಹಾಬಿ-ಇಖ್ವಾನಿ-ಮೌದೂದಿ ಆಶಯಗಳು ತೊಂದರೆ ನೀಡುತ್ತಿದೆಯೋ?

   ಪರಿಶುಧ್ಧ ಖುರ್ಆನಿನಲ್ಲೂ ಪೂರ್ವ ವೇದ ಗ್ರಂಥಗಳಲ್ಲೂ ಪ್ರವಾದಿಗಳ ಸಮೂಹವನ್ನು ಮುಸ್ಲಿಮರು ಎಂದು ಕರೆಯಲಾಗಿತ್ತು. ಖುರ್ಆನಿನ ಸುರತುಲ್ ಹಜ್ಜ್ ಅಧ್ಯಾಯದಲ್ಲಿ ಇದು ಬಹಳ ವ್ಯಕ್ತವಾಗಿ ವಿವರಿಸಿದೆ. “ಇಸ್ಲಾಂ” ಎಂಬ ಏಕ ದೈವ ವಿಶ್ವಾಸಿಗಳಾಗಿರುವರು ಮುಸ್ಲಿಮರು. ಪ್ರವಾದಿವರ್ಯರ ಕಾಲದ ಬಳಿಕ ಕೆಲ ನೂತನವಾದಿಗಳ ಆಗಮನದೊಂದಿಗೆ ಇವರನ್ನು ಸರಿಯಾಗಿ ತಿಳಿಯಲು ಹಲವು ನಾಮಗಳನ್ನು ನೀಡಬೇಕಾಯಿತು. ಅಂತ್ಯ ಕಾಲದಲ್ಲಿ ಇಸ್ಲಾಮಿನ ವಾದಗಳನ್ನು ಹೇಳುವ ಎಪ್ಪತ್ತಕ್ಕೂ ಹೆಚ್ಚು ವಿಭಾಗಗಳು ಹೊರಹೊಮ್ಮಲಿದೆ ಎಂದು ಪ್ರವಾದಿ (ಸ)ರು ಸ್ಪಷ್ಟಪಡಿಸಿದ್ದಾರೆ. 

ಇಸ್ಲಾಮಿನಲ್ಲಿರುವ ನೈಜ ಆಶಯಗಳನ್ನು ತಿರುಚಿ ನವ ಆಶಯಗಳನ್ನು ಹುಟ್ಟು ಹಾಕುವುದರಿಂದ ಧರ್ಮವನ್ನು ಅಂಗೀಕರಿಸುವ ಸತ್ಯವಿಶ್ವಾಸಿಗಳ ಪಾಲಿನಲ್ಲೇ ತೊಂದರೆ ಎದುರಿಸಬೇಕಾಗುತ್ತದೆ. ಇಂದು ಪವಿತ್ರ ಇಸ್ಲಾಮಿನ ಹೆಸರಿನಲ್ಲಿ ಅದೆಷ್ಟೋ ನೂತನ ಆಶಯದಾರಿಗಳು ತಲೆಎತ್ತಿ ತೊಂದರೆಗೀಡಾಗಿಸುತ್ತಿದ್ದಾರೆ. 

ಜಮಾಆತೇ ಇಸ್ಲಾಮಿ ಮತ್ತು ಇಖ್ವಾನಿಸಂ:

ಇಖ್ವಾನಿಸಂ ಇದರ ಭಾರತೀಯ ಆವೃತ್ತಿ ಎಂದು ಕರೆಯಲ್ಪಡುವ ಸಂಘವಾಗಿದೆ ಜಮಾಅತೇ ಇಸ್ಲಾಮೀ, ರಾಜಕೀಯ ಉದ್ದೇಶದಿಂದ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಥವಾ ಧಾರ್ಮಿಕ ಸಂಘಟನೆ ಎಂದೂ ಕರೆಯಬಹುದು. ಅಬುಲ್ ಆಲಾ ಅಲ್-ಮೌದೂದಿ ಇದರ ಸ್ಥಾಪಕ.

ಜಮಾಅತೇ ಇಸ್ಲಾಮಿನ ಸಿದ್ದಾಂತ ಮತ್ತು ಆಶಯಗಳನ್ನು ಬಲಿಷ್ಟಗೊಳಿಸುವಲ್ಲಿ ಇದರ ಸ್ಥಾಪಕ ಅಬುಲ್ ಆಲಾ ಅಲ್-ಮೌದೂದಿಯ ಆಶಯಗಳು ಮತ್ತು ತತ್ವ ಚಿಂತನೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಧಾರ್ಮಿಕ ರಾಷ್ಟ್ರದ ಕಲ್ಪನೆಯಾಗಿತ್ತು ಮೌದೂದಿಯ ಪ್ರಮುಖ ವಾದ. ಭಾರತ ದೇಶವನ್ನು ಇಸ್ಲಾಮಿನ ದೇಶವಾಗಿ ಮಾರ್ಪಡಿಸುವ ಗುರಿಯನ್ನು ಇವರು ಹೊಂದಿದ್ದರು. ಪವಿತ್ರ ಇಸ್ಲಾಂ ಧರ್ಮವನ್ನು ಒಂದು ರಾಜಕೀಯ ಸಿದ್ಧಾಂತವಾಗಿ ಪ್ರಾಸ್ತಾಪಿಸಿದರು. ಆ ಕಾಲದಲ್ಲಿ ಜಗತ್ತಿನಾದ್ಯಂತ ಹೊತ್ತಿ ಉರಿಯುತ್ತಿದ್ದ ಕಮ್ಯೂನಿಸಂ, ಫಾಸಿಸಂ ಮತ್ತು ನಾಝಿಸಂ ಸೇರಿದ ರಾಜಕೀಯ ಸಿದ್ದಾಂತಗಳಿಗೆ ಪವಿತ್ರ ಧರ್ಮವನ್ನು ಸಮೀಕರಿಸಿ ಅದಕ್ಕೆ ಅನುಗುಣವಾಗಿ ಅವರು ವ್ಯಾಖ್ಯಾನಿಸಿದರು. ದೇಶದಲ್ಲಿ ನೆಲೆಗೊಂಡಿರುವ ಇತರ ಹಿಂದೂ ಕ್ರೈಸ್ತ ಧರ್ಮಗಳು ಕಮ್ಯೂನಿಸಂ ಮತ್ತು ಫಾಸಿಸಂ ಅನ್ನು ಒಪ್ಪಿಕೊಂಡಂತೆ ಇಸ್ಲಾಂ ಕೂಡ ಅದನ್ನು ಸ್ವೀಕರಸುವುದಾಗಿತ್ತು ಮೌದೂದಿಯ ಆಶಯ. ಮುಸ್ಲಿಂ ಜನಸಂಖ್ಯೆ ಅತ್ಯಂತ ಕಡಿಮೆಯಿರುವ ಈ ಭಾರತವನ್ನು ಹೇಗೆ ಇಸ್ಲಾಮಿಕ್ ರಾಷ್ಟ್ರವಾಗಿ ಮಾರ್ಪಡಿಸುವುದು ಎಂಬುವುದರ ಕುರಿತು ಅವರ ಉತ್ತರ ಹೀಗಿತ್ತು, 

“ಇಸ್ಲಾಂ ಯಾವುದೇ ಧರ್ಮ ಅಥವಾ ಮುಸಲ್ಮಾನನ ನಾಮವಲ್ಲ ಹೊರತು ಇಸ್ಲಾಂ ಒಂದು ಕ್ರಾಂತಿಕಾರಿ ಸಿದ್ದಾಂತ ಮತ್ತು ಆದರ್ಶವಾಗಿದ್ದು,  ಅದು ಇಡೀ ಪ್ರಪಂಚದ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಬಲ್ಲ  ಮತ್ತು ತನ್ನದೇ ಆದ ಸಿದ್ಧಾಂತ ಆದರ್ಶವನ್ನು ರೂಪೀಕರಿಸಲು ಸಾದ್ಯವಾಗಿರುವುದಾಗಿದೆ."(ತಫ್ಹೀಮತ್: 62)

ಪವಿತ್ರ ಇಸ್ಲಾಂ ಧರ್ಮವನ್ನು ಒಂದು ಧರ್ಮವಲ್ಲದೆ ರಾಷ್ಟ್ರೀಯ ಸಿದ್ದಾಂತವಾಗಿ ಬದಲಾಯಿಸುವುದಾಗಿದೆ ಮೌದೂದಿಯ ಈ ವಾಕ್ಯಗಳಿಂದ ತಿಳಿಯಲು ಸಾದ್ಯವಾಗುವುದು. ಇದೇ ಗುರಿಯೊಂದಿಗೆ ತನ್ನ ಸಂಘಟನೆಯನ್ನು ಹುಟ್ಟು ಹಾಕಿ ಜನರನ್ನ ಇದರ ಕಡೆ ಆಕರ್ಷಿಸುವ ಗುರಿಯನ್ನು ಮೌದೂದಿ ಹೊಂದಿದ್ದರು. ಆದೂದರಿಂದಲೇ ಕ್ಯಾಪಿಟಲಿಸಂ, ಕಮ್ಯೂನಿಸಂ ಮತ್ತು ಫಾಸಿಸ್ಟ್ ಶಕ್ತಿಗಳ ಬಹಳ ಉತ್ತೇಜನ ಇವರಿಗೆ ದೊರಕಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. “ಧರ್ಮವೆಂದರೆ ಒಂದು ರಾಷ್ಟ್ರವಾಗಿದೆ ಅದರಲ್ಲಿರುವ ಶರೀಅತ್ ಆ ರಾಷ್ಟ್ರದ ನೀತಿ ನಿಯಮಗಳಾಗಿವೆ, ಮತ್ತು ಇದನ್ನು ಕ್ರಮಬದ್ದವಾಗಿ ಅನುಸರಿಸುವುದೇ ಇಬಾದತ್ತ್ ಆಗಿದೆ” ಎಂದು ಮೌದೂದಿಯ ಭಾಷಣ ಖುತುಬಾತ್ ಎಂಬ ಗ್ರಂಥದಲ್ಲಿ ವ್ಯಾಖ್ಯಾನಿಸಲಾಗಿದೆ. 

ವಿಶ್ವಾಸ, ಇಬಾದತ್ತ್, ತೀರ್ಪು, ನೈತಿಕತೆ ಮುಂತಾದವುಗಳು ಒಳಗೊಳ್ಳುವ ಧರ್ಮವನ್ನು ಕೇವಲ ಸಂವಿಧಾನ ಎಂದು ಮಾತ್ರ ಮೌದೂದಿ ಇಸ್ಲಾಮಿನ ಕುರಿತು ವಾದ ಮಂಡಿಸುತ್ತಾರೆ. ಹೀಗಿರುವಾಗ  ಇಸ್ಲಾಂನ ಮೂಲ ಹುಕುಮತ್ತೇ ಇಲಾಹಿ (ದೈವ ರಾಷ್ಟ್ರ)ವಾಗಿದೆ. ಆದೂದರಿಂದ  ಇಸ್ಲಾಮಿನ ಮೂಲ ಸ್ಥಂಬಗಳಾದ ನಮಾಝ್, ಉಪವಾಸ, ಝಕಾತ್ ಮತ್ತು ಹಜ್ಜ್ ಕರ್ಮಗಳನ್ನು ಅದರ ಮಾರ್ಗಗಳಾಗಿ ಮೌದೂದಿ ವ್ಯಾಖ್ಯಾನಿಸುತ್ತಾರೆ. 

ಹಿಂದೆ ಖವಾರಿಜುಗಳು ತಂದಂತಹ “ಇನಿಲ್ ಹುಕುಮು ಇಲ್ಲಾಲಿಲ್ಲಾಹ್” ಎಂಬುವುದರ ಒಂದು ಆವೃತ್ತಿಯಾಗಿದೆ ಎಂದು ಇದರಿಂದ ಸ್ಪಷ್ಟಪಡಿಸಬಹುದು. ಪ್ರವಾದಿ (ಸ) ರ ತರುವಾಯ ಪವಿತ್ರ ಇಸ್ಲಾಮಿನ ಮೂಲಸ್ಥಂಬಗಳನ್ನು ಕ್ರಮೇಣ ನವ ಚಿಂತೆಗಳಿಗೆ ಬದಲಾಯಿಸುವ ಕ್ರಿಯೆಯನ್ನು ಇಲ್ಲಿ ಮೌದೂದಿ ಹಾಗೂ ಅವರ ಆಶಯಗಳು ಸ್ಪಷ್ಟಪಡಿಸುತ್ತದೆ. ಪವಿತ್ರ ಇಸ್ಲಾಮಿನ ಆಶಯ ಆದರ್ಶಗಳಲ್ಲಿ ಅದೆಷ್ಟೂ  ಬದಲಾವಣೆಗಳನ್ನು ಈ ಸಂಘ ತಂದು ಹಾಕಿದೆ.  

ವಹ್ಹಾಬಿಸಂ: 

ಹಿಜಿರ ಐದನೇ ಶತಮಾನದಿಂದ ಹನ್ನೆರಡನೆ ಶತಮಾನದ ವರೆಗೂ ಪವಿತ್ರ ಇಸ್ಲಾಂ ಬಹಳ ಶಾಂತಿಯುತವಾಗಿ ಇಮಾಂ ಅಶ್ಅರಿ ಮತ್ತು ಮಾತುರೀದಿಯ ಅಖೀದ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಆ ವರೆಗೂ ಯಾವುದೇ ನವ ಆಶಯಗಳು ಮತ್ತು ಚಿಂತೆಗಳು ತಲೆಎತ್ತಿ ನಿಂತಿರಲಿಲ್ಲ. ಬಳಿಕ 18ನೇ ಶತಮಾನ ಕಾಲದಲ್ಲಿ ನಜ್ದ್ ಮೂಲದ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ ವಹ್ಹಾಬಿಸಂ ಎಂಬ ನವೀನ ಆಶಯಗಳ ಸಂಘವನ್ನು ಸ್ಥಾಪಿಸಿದರು. 

ಇದು ಪವಿತ್ರ ಇಸ್ಲಾಮಿನ ನೈಜ ಆಶಯಗಳನ್ನು ತಿರುಚಿ ನವ ಆಶಯಗಳ ಕಡೆಗೆ ಬಾಗುತ್ತದೆ. ತೌಹೀದ್, ಬಿದ್ಅತ್ತ್, ಶಿರ್ಕ್ ಮತ್ತು ಸುನ್ನತ್ತ್ ಎಂಬಿವುಗಳನ್ನು ಆಧಾರಪಡಿಸಿಯಾಗಿದೆ ವಹ್ಹಾಬಿಸಂ ನ ಆಶಯಗಳು ವ್ಯಕ್ತಪಡಿಸುವುದು. ಇಲ್ಲಿ ಇಸ್ಲಾಮಿನ ಮೂಲ ಆಶಯವಾದ ತೌಹೀದನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ.

1.ತೌಹೀದ್ ರುಬೂಬಿಯ್ಯ (ಅಲ್ಲಾಹನು ಸಕಲ ಸೃಷ್ಟಿಗಳ ಸೃಷ್ಟಿಕರ್ತನೂ ಅದರ ನಿಯಂತ್ರಣಾಧಿಕಾರಿಯಾಗಿರುವನು ಎಂಬ ವಿಶ್ವಾಸ) 2. ತೌಹೀದ್ ಉಲೂಹಿಯ್ಯ (ಇಬಾದತ್ತ್ ಗಳಿಗೆ ಅರ್ಹನೂ ಅಲ್ಲಾಹನು ಮಾತ್ರವೆಂಬ ವಿಶ್ವಾಸ) 3. ತೌಹೀದ್ ಅಸ್ಮಾಅ್ ವಸ್ಸಿಫಾತ್ (ಖುರ್ಆನಿನಲ್ಲಿರುವ ದೈವ ನಾಮಗಳು ಮತ್ತು ಅವನ ಗುಣ ವಿಷೇಶತೆಗಳನ್ನು ಅಕ್ಷರಶಃ ಸ್ವೀಕರಿಸಬೇಕೆಂಬ ವಾದ)

ಪವಿತ್ರ ಇಸ್ಲಾಮಿನ ಮೂಲವಾಗಿರುವ ತೌಹೀದಿನ ಸಂದೇಶವನ್ನು ಸಾರಲು ಪ್ರಾವಾದಿ ಆದಂ(ಅ) ರಿಂದ ಅಂತ್ಯ ಪ್ರವಾದಿ ಮುಹಮ್ಮದ್ (ಸ)ರ ವರೆಗೂ ಅದೆಷ್ಟೋ ಪ್ರವಾದಿಗಳನ್ನು ನಿಯೋಗಿಸಿದ್ದು. ಬಳಿಕ ಪಂಡಿತ ಶಿರೋಮಣಿಗಳು ಈ ತೌಹೀದಿನ ಸಂದೇಶವನ್ನು ಯಾವುದೇ ಅಂಶವನ್ನು ಸೇರಿಸದೆ ಅದನ್ನು ಬಹಳ ಅಚ್ಚುಕಟ್ಟಾಗಿ ಈ ಮುಸ್ಲಿಂ ಸಮುದಾಯಕ್ಕೆ ವಿವರಿಸಿದರು. ಆದರೆ ಇವರಲ್ಲಿ ಯಾರೂ ಸಹ ತೌಹೀದನ್ನು ವಿಭಾಗಗಳಾಗಿ ವಿಂಗಡಿಸಲಿಲ್ಲ, ವಹ್ಹಾಬಿಗಳ ಈ ವಿಭಜನೆ ಬಹುದೈವ ವಿಶ್ವಾಸಿಗಳಾಗಿ ಇಸ್ಲಾಂ ಧರ್ಮವನ್ನು ಚಿತ್ರೀಕರಿಸುವುದಾಗಿದೆ. ಇಸ್ಲಾಮಿಕ ಆಗಮನ ಕಾಲದಲ್ಲಿ ಮಕ್ಕಾದಲ್ಲಿದ್ದಂತಹ ಬಹುದೈವ ವಿಶ್ವಾಸಿಗಳು ತೌಹೀದ್ ರುಬುಬಿಯ್ಯವನ್ನು ಅಂಗೀಕರಿಸಿದವರಾಗಿದ್ದರೆಂದು ವಹ್ಹಾಬಿಗಳು ವಿವರಿಸಿ ಘೋಷಿಸಿದರು. ಮೃತಪಟ್ಟಿರುವ ಮಹಾತ್ಮರಲ್ಲಿ ಸಹಾಯ ಕೇಳಿದರು ಎಂಬ ಕಾರಣಕ್ಕೆ ಮಾತ್ರ ಅವರು ಮುಶ್ರಿಕ್ ಗಳಾಗಿ ಬದಲಾಗಿರುವುದು. ಮಕ್ಕಾ ಮುಶ್ರಿಕ್ ಗಳೂ ಸಹ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರೂ ಎಂದು ಸಮರ್ಥಿಸಿ ಮೃತರಲ್ಲಿ ಸಹಾಯ ಕೇಳುವುದು ಬಹುದೈವ ವಿಶ್ವಾಸಕ್ಕೆ ಸಮಾನವಾಗಿದೆ ಆದೂದರಿಂದ ಅದನ್ನು ಅಂಗೀಕರಿಸುವವರು ಮುಶ್ರಿಕ್ ಗಳೂ ಹೌದು ಎಂದು ವಹ್ಹಾಬಿಸಂ ವ್ಯಕ್ತಪಡಿಸುತ್ತದೆ. ಇಸ್ಲಾಮಿನ ನೈಜ ತೌಹೀದಿನ ಸಂದೇಶವನ್ನು ತಿರುಚುವ ಉದ್ದೇಶವನ್ನು ಪ್ರಸ್ತುತ ವಿಭಾಗಗಳು ಹೊಂದಿದೆ. 

ಹದಿನಾಲ್ಕು ಶತಮಾನಗಳ ಹಿಂದೆ ಪ್ರವಾದಿವರ್ಯರು ನುಡಿದ ಪ್ರಕಾರ ಎಪ್ಪತ್ತೈದು ವಿಭಾಗಗಳ ಚಿಗುರುಗಳು ಇಂದು ವಿಶ್ವದಾದ್ಯಂತ ಹರಡುತ್ತಿದೆ. ಅವುಗಳು ಇಸ್ಲಾಮಿನ ನಾಮದಲ್ಲಿ ವದಂತಿ ಸುದ್ದಿಗಳು ಹರಡಿಸುತ್ತಿರುವರು. ಪ್ರವಾದಿ(ಸ)ರಿಂದ ದೊರೆತ ಈ ಪರಿಶುಧ್ಧ ಧರ್ಮವು ಯಾವುದೇ ಕಳಂಕವಿಲ್ಲದೆ ಸ್ವಹಾಬಿಗಳು ಎತ್ತಿ ಹಿಡಿದರು. ನಂತರ ಬಂದಂತಹ ನವ ತಲೆಮಾರಿನ ಕೆಲವರು ಸೂಕ್ಷ್ಮವಾಗಿ ಇದರ ಆಶಯಗಳನ್ನು ತಿರುಚಿ ಹಾಕಿದರು. ಆದೂದರಿಂದಲೇ ವಹ್ಹಾಬಿಸಂ, ಇಖ್ವಾನಿಸಂ ಮತ್ತು ಜಮಾಅತೇ-ಇಸ್ಲಾಮಿಯಂತಹ ನವೀನ ಆಶಯಗಳು ಹೊಂದಿರುವುದು ಪವಿತ್ರ ಇಸ್ಲಾಮಿಗೆ ನಿಜಕ್ಕೂ ದಕ್ಕೆಯುಂಟುಮಾಡುತ್ತಿದೆ. ಇಂತಹಾ ಆಶಯಗಳಿಂದ ದೂರವಿದ್ದು ನೈಜ ಹಾದಿಯನ್ನು ಹಿಂಬಾಲಿಸಿ ಅದರ ಪ್ರಚಾರಕರಾಗಲು ಅಲ್ಲಾಹನು ಅನುಗ್ರಹಿಸಲಿ.

ಬರಹ : ಅಸ್ಲಂ ಸಾಲ್ಮರ 

Related Posts

Leave A Comment

Voting Poll

Get Newsletter