ಪದಗಳ ಇಸ್ರೇಲೀಕರಣ ಮತ್ತು ಪ್ಯಾಲೇಸ್ತೀನ್ ಆಕ್ರಮಣ

  ಪ್ಯಾಲೆಸ್ತೀನ್ ನಾಗರಿಕರ ಮೇಲೆ ಮೇಲೆ ಇಸ್ರೇಲ್‌ನ ಅತ್ಯುಗ್ರ ಜನಂಗೀಯವಾದಿ ಸರ್ಕಾರ ಅನಾಗರೀಕ  ದಾಳಿಯನ್ನು ಪ್ರಾರಂಭಿಸಿ ಇಂದಿಗೆ ಒಂದು ತಿಂಗಳು. 

ಕಳೆದ ಅಕ್ಟೊಬರ್ 7 ರಂದು ಪ್ಯಲೇಸ್ತಿನಿನ ಹಮಾಸ್ ಸಂಘಟನೆ ಇಸ್ರೇಲಿನ ನಿರಾಯುಧ ನಾಗರಿಕರ ಮೇಲೆ ಅತ್ಯಂತ ಖಂಡನೀಯ ದಾಳಿ ನಡೆಸಿ 1400 ಕ್ಕೂ  ಹೆಚ್ಚು ಇಸ್ರೇಲಿಗಳನ್ನು ಕೊಂದು ಹಾಕಿತು. ಮರುದಿನದಿಂದಲೇ  ಇಸ್ರೇಲ್ ಹಮಾಸ್ ದಾಳಿಯನ್ನು ನೆಪವಾಗಿ ಬಳಸಿಕೊಂಡು ಕಳೆದ 15 ವರ್ಶಗಳಿಂದ ಇಸ್ರೇಲಿನ ಅನಾಗರಿಕ ದಿಗ್ಭಂಧನಕ್ಕೆ ಸಿಲುಕಿ, ಇಸ್ರೇಲಿನ ಬಯಲು ಬಂದೀಖಾನೆಯಾಗಿರುವ ಗಾಜಾದ 23 ಲಕ್ಷ ನಿಸ್ಸಹಾಯಕ ನಿತ್ರಾಣಗೊಂಡಿರುವ ನಾಗರಿಕರ ಮೇಲೆ ಸತತ ಬಾಂಬ್ ದಾಳಿ ಮಾಡುತ್ತಾ ಪ್ಯಲೆಸ್ತೀನಿಯರ ನರಮೇಧ ನಡೆಸುತ್ತಿದೆ.

ನೇತನ್ಯಾಹು ನೇತೃತ್ವದ ಇಸ್ರೇಲ್ ಜನಂಗಿವಾದಿ ಸರ್ಕಾರ ಕಳೆದ ಒಂದು ತಿಂಗಳಲ್ಲಿ ಗಾಜಾ ಪಟ್ಟಿಯಲ್ಲಿ 10,000 ಅಮಾಯಕ ಪ್ಯಾಲೆಸ್ತೀನಿಯರನ್ನು ಕೊಂದು ಹಾಕಿದೆ. ಅದರಲ್ಲಿ 5000 ಅಮಾಯಕ ಮಕ್ಕಳು. ಇದರ ಜೊತೆಗೆ 26,000 ನಾಗರಿಕರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ 10000  ಮಕ್ಕಳು. ಇದಲ್ಲದೆ ಇಡೀ ಗಾಜಾ ಪ್ರದೇಶಕೆ ಅಹಾರ, ಇಂಧನ , ಔಷಧಿ ಸರಬರಾಜನ್ನು ನಿಲ್ಲಿಸಿ ಇಡೀ 23 ಲಕ್ಷ ಪ್ಯಾಲೆಸ್ತೀನಿ ನಾಗರಿಕರಿಗೆ ಸಾಮೂಹಿಕ ಶಿಕ್ಷೆ ಕೊಡುತ್ತಿದೆ.

ಇಸ್ರೇಲ್ತಿ ಗಾಜಾದಲ್ಲಿ ಪ್ರತಿ  ಹತ್ತು ನಿಮಿಷಕ್ಕೆ ಒಂದು ಮಗುವನ್ನು ಬಲಿತೆಗೆದುಕೊಳ್ಳುತ್ತಿದೆ. ಪ್ರತಿ ಗಂಟೆಗೆ 16 ಜನ ಪ್ಯಾಲೆಸ್ತೀನಿಯರನ್ನು ಕೊಂದುಹಾಕುತ್ತಿದೆ. ಪ್ರತಿ ಗಂಟೆಗೆ 45  ಬಾಂಬುಗಳನ್ನು ಗಾಜಾದ ಮೇಲೆ ಹಾಕುತ್ತಿದೆ. ಪ್ರತಿ ಗಂಟೆಗೆ ಗಾಜಾದ 12  ಕಟ್ಟಡಗಳನ್ನು ಧ್ವಂಸಗೊಳಿಸುತ್ತಿವೆ.21 ನೇ ಶತಮಾನದಲ್ಲಿಯೂ ಇಂಥ ಒಂದು ಬರ್ಬರ ನಾಗರಿಕ ಜಗತ್ತಿನ ನರಮೇಧ ಕಣ್ಣೆಮುಂದೆ ನಡೆಯುತ್ತಿದೆ. 

ಆದರೂ...ಗಾಜಾದ ನಾಗರಿಕರಿಗೆ  ಅತ್ಯಗತ್ಯವಾಗಿ ಬೇಕಿರುವ ಔಷಧ-ಆಹಾರದಂಥ ಮಾನವೀಯ ಸರಬರಾಜನ್ನು ಮಾಡಲು ಬೇಕಾಗಿರುವ  ತಾತ್ಕಾಲಿಕ ಕದನ ವಿರಾಮ ಘೋಷಿಸುವಂತೆ  ಇಸ್ರೇಲಿನ ಮೇಲೆ ಪರಿಣಾಮಕಾರಿ ಒತ್ತಡ ಹಾಕಲು  ಸಹ ಹಿಂಜರಿಯುವಷ್ಟು ’ಪ್ರಜಾತಾಂತ್ರಿಕ’ ಜಗತ್ತು ಮಾನವೀಯತೆಯನ್ನು ಕಳೆದುಕೊಂಡಿದೆ.

ಅದಕ್ಕೆ ತದ್ವಿರುದ್ಧವಾಗಿ ಅಮೆರಿಕ ಈ ಯುದ್ಧದಲ್ಲಿ ಇನ್ನಷ್ಟು ಮಾರಣಹೋಮ ನಡೆಸಲು ಹಾಗೂ ಈ ನೆಪದಲ್ಲಿ ಗಾಜಾ ಪ್ಯಾಲೆಸ್ತೀನಿಯರನ್ನು ಸಂಪೂರ್ಣವಾಗಿ  ಗಾಜಾದಿಂದ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಇಸ್ರೇಲಿಗೆ ಇನ್ನಷ್ಟು ಸೈನಿಕ ಹಾಗೂ ಹಣಕಾಸು ಸಹಕಾರವನ್ನು ಘೋಷಿಸಿದೆ. ಐರ್‌ಲೆಂಡ್ ಒಂದನ್ನು ಹೊರತು ಪಡಿಸಿ ಇಡೀ ಐರೋಪ್ಯ ಒಕ್ಕೂಟ ಅಮೆರಿಕದ ಮಾದರಿಯನ್ನೇ ಮೌನವಾಗಿ ಅನುಸರಿಸುತ್ತಿದೆ. ಅರಬ್ ರಾಷ್ಟ್ರಗಳ ಸರ್ಕಾರಗಳೂ ಅತ್ಯಂತ ಅವಕಾಶವಾದಿಯಾಗಿ ವರ್ತಿಸುತ್ತಿವೆ. ಭಾರತದ ಮೋದಿ ಸರ್ಕಾರವಂತೂ ಬಲಿಯಾದವರಿಗೆ ಕಣ್ಣೀರು ಸುರಿಸುವ ನಾಟಕವಾಡುತ್ತಾ, ಬೇಟೆಗಾರನನ್ನೇ  ಬಲವಾಗಿ ಸಮರ್ಥಿಸುತ್ತಿದೆ.  

ಉಕ್ರೈನ್ ಮೇಲೆ ರಷ್ಯಾ ದಾಳಿ  ಮಾಡಿದ ಕೂಡಲೇ ಆಕ್ರಮಣಕಾರಿ ರಷ್ಯಾದ ವಿರುದ್ಧ ಆಕ್ರಮಿತ ಉಕ್ರೈನ್‌ಗೆ ನ್ಯಾಯ- ಮಾನವೀಯತೆ- ಇತ್ಯಾದಿಗಳ ಹೆಸರಲ್ಲಿ ಇಡೀ ’ನಾಗರಿಕ ದೇಶಗಳು’ ಸ್ವರಕ್ಷಣೆ ಮಾಡಿಕೊಳ್ಳಲು ಕೂಡಲೇ ಶಸ್ತ್ರಾಸ್ತ್ರಗಳನ್ನು , ಮಾನವೀಕ ಸಹಕಾರಗಳನ್ನು ಸರಬರಾಜು ಮಾಡಿದವು.ಈಗ ಗಾಜಾದ ಮೇಲೆ ಇಸ್ರೇಲ್ ಆಕ್ರಮಣ ಮಾಡಿದೆ. ಆದರೆ ನಾಗರಿಕ ಜಗತ್ತು ಆಕ್ರಮಿತ ಗಾಜಾ ಪ್ಯಾಲೆಸ್ತೀನಿಯರಿಗೆ ಸಹಾಯ ಮಾಡುವ ಬದಲು ಆಕ್ರಮಣಕಾರಿ ಇಸ್ರೇಲಿನ ಬೆಂಬಲಕ್ಕೆ ಏಕೆ ಮತ್ತು ಹೇಗೆ ನಿಂತಿದೆ?

ಇದಕ್ಕೆ ಒಂದು ಕಾರಣ ಪ್ಯಾಲೇಸ್ಟಿನ್ ಮೇಲೆ ತಾನು ನಡೆಸುತ್ತಿರುವ ಜನಾಂಗೀಯ ನರಮೇಧ ಮತ್ತು ಆಕ್ರಮಣಗಳನ್ನು ಇಸ್ರೇಲ್ ನ್ಯಾಯ ಮತ್ತು ಆತ್ಮ  ರಕ್ಷಣೆಯ ಭಾಷೆಯಲ್ಲಿ ಸಮರ್ಥಿಸಿಕೊಳ್ಳುವುದು ಮತ್ತು ಅದನ್ನೇ ಪರಮ ಸತ್ಯವೆಂದು ಕಾರ್ಪೊರೇಟ್ ಮಾಧ್ಯಮಗಳ ಮೂಲಕ ಬಿತ್ತುವುದು. 

ಈ ಏಕಪಕ್ಷೀಯ ಇಸ್ರೇಲಿ  ಸತ್ಯಗಳನ್ನೇ ಇಸ್ರೇಲಿ ಮಿತ್ರರಾದ ಬಲಿಷ್ಟ ದೇಶಗಳೂ ಕೂಡ ತಮ್ಮ ಸ್ವಾರ್ಥ ಹಿತಾಸಕ್ತಿಯ ಕಾರಣದಿಂದ ಅವನ್ನೇ ಅಂತಿಮ ಸತ್ಯವೆಂದು ಅಧಿಕೃತಗೊಳಿಸುತ್ತಿರುವುದು.

ಇದಲ್ಲದೆ, ಈಗಾಗಲೇ ಮುಸ್ಲಿಂ ಸಮುದಾಯ ಹಾಗೂ ಅವರ ಪ್ರತಿರೋಧಗಳ ಬಗ್ಗೆ ಒಂದು ಬಗೆಯ ಜನಾಂಗೀಯ ಹಾಗೂ ಧಾರ್ಮಿಕ ಪೂರ್ವಗ್ರಹಗಳನ್ನೇ ಮೈಗೂಡಿಸಿಕೊಂಡಿರುವ ಬಹುಪಾಲು ಕಾರ್ಪೊರೇಟ್ ಮಾಧ್ಯಮಗಳು ಇಸ್ರೇಲಿನ ಸಮರ್ಥನೆಗಳನ್ನೇ ಪರಮ ಸತ್ಯವೆಂಬಂತೆ ಬಿತ್ತರಿಸುತ್ತವೆ. ಸಮಸ್ಯೆಯನ್ನು ಚಿತ್ರಿಸುವುದರಲ್ಲಿ ಬಳಸುವ  ಭಾಷೆ, ಹಾಗೂ ಸೆಲೆಕ್ಟಿವ್ ಮತ್ತು ಅರ್ಧ ಸತ್ಯಗಳನ್ನು ಮಾತ್ರ ವರದಿ ಮಾಡುವ, ವಾಸ್ತವ ಸಂಗತಿಗಳನ್ನು ವಿಕೃತವಾಗಿ ಚಿತ್ರಿಸುವ, ಹಾಗೂ ಘಟನೆಯ ಹಾಗೂ ಸಮಸ್ಯೆಯ ಐತಿಹಾಸಿಕ ಹಿನ್ನೆಲೆಯನ್ನು ಮರೆಮಾಚುವ  ಮೂಲಕ ತನ್ನ ಕೇಳುಗ ಮತ್ತು ಓದುಗರಲ್ಲಿ ಅದೇ ಬಗೆಯ ಪೂರ್ವಗ್ರಹಗಳನ್ನು ಬಲವಾಗಿ ಹುಟ್ಟಿಸುತ್ತವೆ.

ಈ ಬಗೆಯ ವರದಿ ಮತ್ತು ವರದಿಯಲ್ಲಿ ಅಡಕವಾಗಿರುವ ಭಾಷೆ  ಹಾಗೂ ಆ ಭಾಷೆಯ ಮೂಲಕ ಪಡೆದುಕೊಳ್ಳುವ ದ್ವೇಷಸಿಕ್ತ ಮಾಹಿತಿ/ತರ್ಕ/ ವಿಶ್ಲೇಶಣೆಗಳು, ಓದುಗರು ಮತ್ತು ಕೇಳುಗರನ್ನು  ಇಸ್ರೇಲಿ ಆಕ್ರಮಣದ ಹಾಗೂ ಇಸ್ರೇಲಿ ಅಪಪ್ರಚಾರದ ಬಲಿಪಶುಗಳಾಗಿರುವ ಪ್ಯಾಲೆಸ್ತಿನಿಯರನ್ನು ತನ್ನ ನೈತಿಕ ವಿಶ್ವದಿಂದ ಹೊರಗಿಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದೆ.

ಇದರಿಂದಾಗಿಯೇ  ಹಮಾಸಿನಿಂದ ಬಲಿಯಾದ ಇಸ್ರೇಲಿ ಮಕ್ಕಳಿಗಾಗಿ ಮರಮರುಗುವ ಜಗತ್ತಿನ ಮಮತೆ, ಪ್ಯಾಲೆಸ್ತೀನಿ ಮಕ್ಕಳ ಕೊಲೆಗಳಿಗೆ ಕಲ್ಲಾಗುವಂತೆ ಮಾಡುತ್ತದೆ.  ಹೀಗಾಗಿಯೇ ಯುದ್ಧಗಳು ಮೊದಲು ನಡೆಯುವುದು ಭಾಷೆಯ ಮೇಲೆ.  ಅದು ಧ್ವನಿಸುವ ಅರ್ಥಗಳ ಮೇಲೆ. ಪದಗಳಲ್ಲಿರುವ ಅರ್ಥವನ್ನು ಕೊಂದರೆ ಚಿಂತನೆಯನ್ನು ನಿಗ್ರಹಿಸುವುದು ಸುಲಭ.

ಆ ಮೂಲಕ  ತಮ್ಮ ಆಕ್ರಮಣ ಹಾಗೂ ಅನ್ಯಾಯಗಳಿಗೆ ಹೊಸ ಅರ್ಥಗಳ ರಕ್ಷಾ ಕವಚವನ್ನು ತೊಡಿಸಿ "ಆತ್ಮ ರಕ್ಷಣೆ " ಮಾಡಿಕೊಳ್ಳುವುದು ಸುಲಭ.

ಇಂದು ಜಗತ್ತಿನ ಜನರು ಈ ಇಸ್ರೇಲೀಕೃತ  ಭಾಷೆಯ ಮುಖಾಂತರವೇ ಅಲ್ಲಿನ ವಿದ್ಯಮಾನಗಳನ್ನು ಗ್ರಹಿಸುವಂತಾಗಿರುವುದರಿಂದ  ಪ್ಯಾಲೆಸ್ತೀನ್ ವಿದ್ಯಮಾನಗಳ ಬಗ್ಗೆ ಇಸ್ರೇಲಿ  ಗ್ರಹಿಕೆಗಳೇ ಜಗತ್ತಿನ ಜನಮಾನಸದಲ್ಲೂ ಇಳಿದುಬಿಡುತ್ತಿದೆ. ಹೀಗಾಗಿ ಇಸ್ರೇಲ್- ಪ್ಯಾಲೆಸ್ತೀನ್ ವಿಷಯದಲ್ಲಿ ನ್ಯಾಯಪರರು, ಮತ್ತು  ಶಾಂತಿವಾದಿಗಳು ಮೊದಲು ಭಾಷೆಯ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ಸೋಲಿಸಬೇಕಿದೆ.  

ಉದಾಹರಣೆಗೆ :

1. ಯುದ್ಧ

ಇಸ್ರೇಲ್ - ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವುದು - ಯುದ್ಧವೇ?

ಯುದ್ಧಗಳು ಎರಡು ದೇಶಗಳ ನಡುವೆ ನಡೆಯುತ್ತದೆ.  ಉದಾಹರಣೆಗೆ ರಷ್ಯಾ ಎಂಬ ದೇಶ ಉಕ್ರೈನ್ ಎಂಬ ದೇಶದ ಮೇಲೆ ಯುದ್ಧ ನಡೆಸುತ್ತಿದೆ. ಆದರೆ ಇಸ್ರೇಲ್ ಯಾವ ದೇಶದ ಮೇಲೆ ಯುದ್ಧ ನಡೆಸುತ್ತಿದೆ?  

ಯುದ್ಧ ನಡೆದಾಗ ಎರಡೂ ಕಡೆ ಸೈನಿಕರು ಇರುತ್ತಾರೆ. ಆದರೆ ಇಲ್ಲಿ ಒಂದು ಕಡೆ ಅಪಾರ ಸಶಸ್ತ್ರ ಬಲದ ಇಸ್ರೇಲಿ ಸೈನಿಕರು ಒಂದೆಡೆ. ಹತ್ತಿಪ್ಪತ್ತು ವರ್ಷಗಳಿಂದ ಕನಿಷ್ಠ ಆಹಾರವನ್ನು ಪಡೆಯದೇ ಸೊರಗಿಹೋಗಿರುವ ಅಸಾಹಾಯಕ ಪ್ಯಾಲೇಸ್ತೀನಿ ನಾಗರಿಕರು ಮತ್ತೊಂದೆಡೆ .

ಹೀಗಾಗಿ ಇದನ್ನು ಯುದ್ಧ ಎಂದು ಕರೆಯುವ ಮೂಲಕ, ಬಲಿಶ್ಟ ದೇಶವೊಂದು ತನ್ನದೇ ನಾಗರಿಕರ ಮೇಲೆ ನಡೆಸುತ್ತಿರುವ ನರಮೇಧವನ್ನು ಮತ್ತು ದೌರ್ಜನ್ಯವನ್ನು ಮರೆಮಾಚಲಾಗುತ್ತಿದೆ.

ಇಸ್ರೇಲ್  ಹಮಾಸ್ ಎಂಬ ಸಂಘಟನೆಯನ್ನು ನಾಶ ಮಾಡುವ ನೆಪವನ್ನು ಜಗತ್ತಿನ ಮುಂದಿಟ್ಟು ಇಡೀ ಗಾಜಾ ಪ್ರದೇಶದಲ್ಲಿ ಮೇಲೆ ಬಾಂಬುಗಳ ಸುರಿಮಳೆ ಸುರಿಸಿ  ಪ್ಯಾಲೆಸ್ತೀನ್  ನಾಗರಿಕರ ನರಮೇಧ ನಡೆಸುತ್ತಿದೆ.ಹಾಗೂ ಹಮಾಸ್ ಎಂಬ ಸಂಘಟನೆಯ ಅಸ್ಥಿತ್ವವೇ  ಇಲ್ಲದ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ  ಪ್ಯಾಲೇಸ್ತೀನಿ ನಾಗರಿಕರನ್ನು ಚಿತ್ರಹಿಂಸೆ ನೀಡಿ ಹೊರದಬ್ಬುತ್ತಿದೆ. ಎರಡರ ಉದ್ದೇಶವೂ ಅಳಿದುಳಿದ ಪ್ಯಾಲೆಸ್ತೀನ್ ಪ್ರದೇಶದಿಂದ ಪ್ಯಾಲೇಸ್ಟಿನಿಯರನ್ನು ಹೊರದಬ್ಬಿ, ಅಥವಾ ಕೊಂದು ಹಾಕಿ ಆ ಪ್ರದೇಶಗಳನ್ನು ಇಸ್ರೇಲಿಗೆ ಸೇರಿಸಿಕೊಳ್ಳುವುದು .

ಹೀಗಾಗಿ ಈ ಜನಾಂಗೀಯ ನಿರ್ಮೂಲನೆಯನ್ನು  ದೇಶಗಳ ನಡುವಿನ ಯುದ್ಧವೆನ್ನುವ ಮೂಲಕ ನಾವೂ ಕೂಡ ಇಸ್ರೇಲ್ ಮಾಡುತ್ತಿರುವ ಜನಾಂಗೀಯ ನರಮೇಧಕ್ಕೆ ಯುದ್ಧವೆಂಬ ಸಮರ್ಥನೆಯನ್ನು ಕೊಟ್ಟಂತಾಗುತ್ತದೆ.

ಆದ್ದರಿಂದ  ಕನಿಷ್ಠ ಪಕ್ಷ ಪ್ರಗತಿಪರ ಮಾಧ್ಯಮಗಳು, ಸಂಘಟನೆಗಳು ಹಾಗೂ ನ್ಯಾಯಪರ ವ್ಯಕ್ತಿಗಳು ಇದನ್ನು ಯುದ್ಧವೆಂದು ಕರೆಯುವುದನ್ನು ನಿಲ್ಲಿಸಬೇಕು.ಇದು ಇಸ್ರೇಲ್  ಅಳಿದುಳಿದ ಪ್ಯಾಲೆಸ್ತೀನ್ ಅನ್ನು ಸಂಪೂರ್ಣವಾಗಿ ಇಸ್ರೇಲೀಕರಿಸಲು ಪ್ಯಾಲೆಸ್ತೀನಿನ ಜನರ ಮೇಲೆ  ಮತ್ತು ನೆಲದ  ಮೇಲೆ ನಡೆಸುತ್ತಿರುವ ಜನಾಂಗೀಯ ಆಕ್ರಮಣ ..

 2. ಭಯೋತ್ಪಾದನೆ

ಇಸ್ರೇಲಿ ನಾಗರಿಕರನ್ನು ಕೊಂದರೆ ಭಯೋತ್ಪಾದನೆ, ಪ್ಯಾಲೇಸ್ತೀನಿ ನಾಗರಿಕರನ್ನು ಕೊಂದರೆ ಅನಿವಾರ್ಯ ಯುದ್ಧ ಕ್ರಮವೇ?

 ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಕಾರ:

" ಮಾರಕ ಹಾಗೂ ಸ್ಪೋಟಕ ವಸ್ತುಗಳನ್ನು ಬಳಸಿ ನಾಗರಿಕರನ್ನು ಕೊಂದು ಅಸ್ಥಿರತೆ, ಅಭದ್ರತೆ ಮತ್ತು ಭಯವನ್ನು ಉಂಟು ಮಾಡಿ ಒಂದು ರಾಜಕೀಯ ಉದ್ದೇಶವನ್ನು ಸಾಧಿಸಿಕೊಳ್ಳುವುದು ಭಯೋತ್ಪಾದಕ ಕೃತ್ಯ.." ಅದನ್ನು ಗುರಿ ಸಾಧನೆಯ ಮಾರ್ಗ ಎಂದು ಭಾವಿಸಿರುವ ಸಂಘಟನೆಗಳು , ಸರ್ಕಾರಗಳು ಭಯೋತ್ಪಾದಕರು.

ಈ ನಿರ್ವಚನದ ಪ್ರಕಾರ ಹಮಾಸ್ ನಿರಾಯುಧ ಇಸ್ರೇಲಿ ನಾಗರಿಕರ ಮೇಲೆ ನಡೆಸಿದ ದಾಳಿ ಮತ್ತು 1400  ಜನರನ್ನು ಕೊಂದದ್ದು ಒಂದು ಭಯೋತ್ಪಾದಕ ಕೃತ್ಯ ಎಂಬುದು ಸರಿ.  ಆದರೆ ಹಮಾಸ್ ಎಂಬುದೇ ಒಂದು ಭಯೋತ್ಪಾದನಾ ಸಂಘಟನೆಯೇ ? ಅದು ಭಯೋತ್ಪಾದನೆಯನ್ನೇ ತನ್ನ ಗುರಿ ಸಾಧನೆಯ ಮಾರ್ಗವನ್ನಾಗಿಸಿಕೊಂಡಿದೆಯೇ ?

ವಿಷಯವೇನೆಂದರೆ , ಇಸ್ರೇಲ್ ಮತ್ತು ಅಮೇರಿಕ ಹಾಗೂ ಹಲವು ಯುರೋಪ್ ದೇಶಗಳು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯೇನೆಂದು ಘೋಷಿಸಿದರೂ..  ಮೋದಿ ಸರ್ಕಾರವನ್ನು ಒಳಗೊಂಡಂತೆ ಜಗತ್ತಿನ ಹಲವು ದೇಶಗಳು ಈವರೆಗೆ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿಲ್ಲ.

 ಅದೇನೇ ಇರಲಿ , ಭಯೋತ್ಪಾದನೆಯ ಬಗ್ಗೆ ಇರುವ Universal Definition   ಇಸ್ರೇಲ್ ಗೆ ಕೂಡ ಅನ್ವಯಿಸಬೇಕಲ್ಲವೇ?

ಆರು ತಿಂಗಳ ಕೆಳಗೆ ಉಕ್ರೈನ್ ನಾಗರಿಕರು ವಾಸ ಮಾಡುವ ವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ರಷ್ಯಾ ಮಾಡಿದ ದಾಳಿಗಳನ್ನೂ  ಹಾಗೂ ಉಕ್ರೈನ್ ಜನರಿಗೆ ಅಗತ್ಯವಿರುವ ಪೂರೈಕಗೆಳನ್ನು ತಡೆಹಿಡಿದ ರಷ್ಯಾ ಕ್ರಮಗಳನ್ನು ಉಲ್ಲೇಖಿಸಿ ಐರೋಪ್ಯ ಒಕ್ಕೂಟ ಮತ್ತು ಅಮೇರಿಕ ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರವೆಂದು ಕರೆಯಿತು.

ಹಾಗಿದ್ದಲ್ಲಿ.. 2007  ರಿಂದ  23 ಲಕ್ಷ ಪ್ಯಾಲೇಸ್ಟಿನಿಯರು ವಾಸಿಸುತ್ತಿರುವ ಇದೆ ಗಾಜಾ ಪ್ರದೇಶಕ್ಕೆ ಮಿಲಿಟರಿ ದಿಗ್ಭಂಧನ ವಿಧಿಸಿ ಅನ್ನ , ಆಹಾರ , ಔಷಧಿಗಳ ಸರಬರಾಜನ್ನು ನಿಗ್ರಹಿಸುತ್ತಾ ಪ್ಯಾಲೇಸ್ಟಿನಿಯರು ಸೊರಗಿ ಸಾಯುವಂತೆ ಮಾಡಿರುವ. -ಅಕ್ಟೊಬರ್ 7 ರ ನಂತರ ಆ ಕನಿಷ್ಟ  ಸರಬರಾಜನ್ನು ಕೂಡ ನಿರ್ಭಂಧಿಸಿರುವ ,-ಈಗಾಗಲೇ ಆಸ್ಪತ್ರೆ, ಶಾಲೆ ಮತ್ತು ವಸತಿ ಪ್ರದೇಶಗಳ ಮೇಲೆ ಗುರಿ ಇಟ್ಟು  ಬಾಂಬ್ ದಾಳಿ ಮಾಡಿ 10   ಸಾವಿರ ಅಸಹಾಯಕ ಪ್ಯಾಲೆಸ್ತೀನ್ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಕೊಂದು  ಹಾಕಿರುವ.. ಹಾಗೂ ...ಇವೆಲ್ಲವನ್ನೂ ಗಾಜಾದಲ್ಲಿರುವ ಪ್ಯಾಲೇಸ್ಟಿನಿಯರನ್ನು ಈಜಿಪ್ಟಿಗೆ ದೂಡಿ ಗಾಜಾ ಪ್ರದೇಶವನ್ನು  ಇಸ್ರೇಲೀಕರಿಸಿಕೊಳ್ಳುವ  ರಾಜಕೀಯ ಉದ್ದೇಶದಿಂದ ನಡೆಸುತ್ತಿರುವ...   

ಇಸ್ರೇಲ್ ಕೂಡ ಭಯೋತ್ಪಾದಕ ರಾಷ್ಟ್ರವಲ್ಲವೇ?

ಇಸ್ರೇಲಿನ ಆಸ್ತಿತ್ವನ್ನು ಪರಿಗಣಿಸುವುದಿಲ್ಲ ಹಾಗೂ ಇಸ್ರೇಲಿನ ನಾಶವನ್ನು ಗುರಿಯಾಗಿಟ್ಟುಕೊಂಡಿದೆ ಎಂಬ ಕಾರಣಕ್ಕೆ ಹಮಾಸ್ ಭಯೋತ್ಪಾದಕ ಸಂಘಟನೆಯಗುವುದಾದರೆ....

ಪ್ಯಾಲೇಸ್ತಿನಿಯರನ್ನು ಒಂದು ರಾಷ್ಟ್ರೀಯತೆ ಎಂದು ಪರಿಗಣಿಸದೆ ಪ್ಯಾಲೇಸ್ತಿನಿಯರ ಸಂಪೂರ್ಣ ಜನಾಂಗಿಯ ನಿರ್ಮೂಲನೆ ಮತ್ತು ನರಮೇಧದಲ್ಲಿ ತೊಡಗಿರುವ ಇಸ್ರೇಲ್ ಕೂಡ ಒಂದು ಭಯೋತ್ಪಾದಕ ಪ್ರಭುತ್ವವಲ್ಲವೇ?

 ಆದ್ದರಿಂದ ಇನ್ನುಮುಂದೆ ಇಸ್ರೇಲ್ -ಪ್ಯಾಲೆಸ್ತೀನ್ ಬಗ್ಗೆ ಬರೆಯುವಾಗ ಮತ್ತು ಮಾತಾಡುವಾಗ ಭಯೋತ್ಪಾದಕ ಹಮಾಸ್ ಎಂದು ಹೇಳುವುದಾದಲ್ಲಿ ಭಯೋತ್ಪಾದಕ ಇಸ್ರೇಲ್  ಜಿಯೋನಿಸ್ಟ್ ಪ್ರಭುತ್ವ ಎಂದು ಸೂಚಿಸಬೇಕಲ್ಲವೇ?

 

3. ಇಸ್ರೇಲ್ ದಾಳಿಯು ಆತ್ಮರಕ್ಷಣೆ- ಪ್ಯಾಲೆಸ್ತಿನ್ ಆತ್ಮರಕ್ಷಣೆಯು ಆಕ್ರಮಣ!

1948 ರಲ್ಲಿ ಇಸ್ರೇಲ್ ಸೃಷ್ಟಿಯಾದಾಗಿನಿಂದಲೂ ಇಸ್ರೇಲ್ ಅಮೆರಿಕ-ಬ್ರಿಟನ್  ಹಾಗೂ ಇತರ ಬಲಿಷ್ಟ ರಾಷ್ಟ್ರಗಳ ಸಹಾಯ ಹಾಗೂ ಅರಬ್ ರಾಶ್ಟ್ರಗಳ ಅವಕಾಶವಾದಿ ನಿಲುವುಗಳನ್ನು ಬಳಸಿಕೊಂಡು ಪ್ಯಾಲೇಸ್ತಿನನ್ನು ಕಬಳಿಸುತ್ತಾ ಬಂದಿದೆ. ಇಸ್ರೇಲ್ ಸೃಷ್ಟಿಯಾದಾಗ ವಿಶ್ವಸಂಸ್ಥೆ ಪ್ಯಾಲೆಸ್ತೀನಿನ ಶೇ. 55 ಭಾಗವನ್ನು ಮಾತ್ರ  ಇಸ್ರೇಲಿಗೆ ಕೊಟ್ಟಿತ್ತು. ಉಳಿದ ಶೇ. 45  ಭಾಗ ಪ್ಯಾಲೆಸ್ತೀನ್ ಎಂದು ಘೋಷಿಸಿತ್ತು. 

 ಆದರೆ ಇಸ್ತೇಲ್ ಒಂದು ಸ್ಥಿರ ರಾಷ್ಟ್ರವಾಗಬೇಕೆಂದರೆ ಶೇ. 80  ರಷ್ಟು ಭೂ ಭಾಗ ಮತ್ತು ಶೇ. 80  ರಷ್ಟು ಯೆಹೂದಿ ಜನರು ಬೇಕೇ ಬೇಕು ಎಂಬುದು ಇಸ್ರೇಲಿ ನಾಯಕರ ನಿಲುವಾಗಿತ್ತು. ಆದ್ದರಿಂದ ಇಸ್ರೇಲ್ ಘೋಷಣೆಯಾದ ಕೂಡಲೇ ತನಗೆ ನೀಡಲಾಗಿದ್ದ ಭೂಭಾಗದಲ್ಲಿದ್ದ  ಪ್ಯಾಲೇಸ್ತೀನಿಯರನ್ನು ಕೊಂದು, ಬೆದರಿಸಿ ,ಲೂಟಿ ಮಾಡಿ ಹೊರಹಾಕಿದ್ದು ಮಾತ್ರವಲ್ಲದೆ, ತನಗೆ ಮೀಸಲಾಗಿದ್ದ ಪ್ರದೇಶದ ನೆರೆಹೊರೆಯಲ್ಲಿದ್ದ ಪ್ಯಾಲೇಸ್ತಿನಿಯರನ್ನು ಹೊರಹಾಕಿ ಆ ಭೂ ಭಾಗವನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿತು. 

 ಇಸ್ರೇಲಿನ ಈ ಜನಾಂಗೀಯ  ನಿರ್ಮೂಲನಾ ದಾಳಿಯಿಂದಾಗಿ 10  ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತಿನಿಯರು ತಮ್ಮ ತಾಯ್ನೆಲದಲ್ಲೇ ನಿರಾಶ್ರಿತರಾದರು. 500  ಕ್ಕೂ ಹೆಚ್ಚು ಪ್ಯಾಲೆಸ್ತಿನ್ ಹಳ್ಳಿಗಳನ್ನು ಇಸ್ರೇಲಿ ಜನಾಂಗೀಯವಾದಿಗಳು  ನಾಶಮಾಡಿದರು. ಇದೆಲ್ಲದರಿಂದಾಗಿ ಶೇ. 78 ರಷ್ಟು ಪ್ಯಾಲೆಸ್ತೀನ್ ಭೂ ಭಾಗವನ್ನು ಇಸ್ರೇಲಿಗಳು ವಶಪಡಿಸಿಕೊಂಡರು.

1967 ರಲ್ಲಿ ನಡೆದ ಆರು ದಿನದ ಯುದ್ಧದಲ್ಲಿ ಪ್ಯಾಲೆಸ್ತಿನಿಯರಿಗೆ ಉಳಿದ ಶೇ. 22  ಭೂ ಭಾಗವಾದ ವೆಸ್ತ್ ಬ್ಯಾಂಕ್  (ಎಡದಂಡೆ) ಮತ್ತು ಗಾಜಾವನ್ನು ಕೂಡಾ ಇಸ್ರೇಲ್ ಆಕ್ರಮಿಸಿಕೊಂಡಿತು. ಅಂದಿನಿಂದ ಇಂದಿನವರೆಗೂ ಅದೇ ಪರಿಸ್ಥಿತಿ ಮುಂದುವರೆದಿದೆ. ಶಾಂತಿ ಮಾತುಕತೆ ಇತ್ಯಾದಿ ನಾಟಕಗಳನ್ನಾಡಿದರೂ  ಇಸ್ರೇಲು ಪ್ಯಾಲೆಸ್ತಿನಿಯರನ್ನು ಒಂದು ರಾಷ್ಟ್ರೀಯ ಸಮುದಾಯವನ್ನಾಗಿಯ್ಯೊ, ಪ್ಯಾಲೆಸ್ತಿನಿನ ಮೂಲ ನಿವಾಸಿಗಳನ್ನಾಗಿಯೂ ಪರಿಗಣಿಸುತ್ತಿಲ್ಲ. ಬದಲಿಗೆ ಪ್ಯಲೆಸ್ತಿನಿಯರನ್ನು ಎರದನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ.ಹೀಗಾಗಿ ಇಲ್ಲಿ ಆಕ್ರಮಣ ಮಾಡಿರುವವರು ಇಸ್ರೇಲಿಗಳು. ಆಕ್ರಮಣಕ್ಕೆ ಬಲಿಯಾಗಿ ಆತ್ಮರಕ್ಷಣೆ ಯ ಹೋರಾಟ ನಡೆಸುತ್ತಿರುವವರು ಪ್ಯಾಲೆಸ್ತೀನಿಯರು. 

ತಮ್ಮ ತಾಯ್ನೆಲವನ್ನು ಕಳೆದುಕೊಂಡ ಪ್ಯಾಲೆಸ್ತಿನಿಯರು ನೆಲಸಿಗ ವಸಾಹತುಶಾಹಿಗಳಾಗಿರುವ ಉಗ್ರ ಯೆಹೂದಿ ಜನಾಂಗೀಯವಾದಿ ಜಿಯೋನಿಸ್ಟ್ ಸರ್ಕಾರದ ವಿರುದ್ಧ ನಡೆಸುತ್ತಿರುವ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿದ್ದಂತೆ, ಫ಼್ರೆಂಚರ ವಿರುದ್ಧ ಅಲ್ಜಿರಿಯಾ ಸ್ವಾತಂತ್ರ್ಯ ಹೋರಾಟದಲ್ಲಿದ್ದಂತೆ ಹಲವು ಧಾರೆಗಳಿವೆ. 

ಉಗ್ರ, ಮಂದ, ಅತ್ಯಗ್ರ, ಪ್ರಜಾತಂತ್ರಿಕ, ಅಹಿಂಸಾತ್ಮಕ ಇತ್ಯಾದಿ. ಈ ಧಾರೆಗಳ ಮಾರ್ಗ ಅಥವಾ ಕೆಲವು ಕಾರ್ಯಗಳ ಬಗ್ಗೆ ಮೂಲಭೂತ ಭಿನಾಭಿಪ್ರಾಯಗಳಿರಬಹುದಾದರೂ ಅವು ಮೂಲಭೂತವಾಗಿ ವಸಾಹತುಶಾಹಿ ವಿರೋಧಿ ಹೋರಾಟಗಳೆ ಎಂಬುದನ್ನು ಮರೆಯುವಂತಿಲ್ಲ.

ಇಪ್ಪತ್ತನೇ ಶತಮಾನದಲ್ಲಿ ಎಲ್ಲಾ ವಸಾಹತುಶಾಹಿಗಳು ತಮ್ಮ ಘನಘೋರ ಭಯೋತ್ಪಾದನೆಯನ್ನು ಆತ್ಮ ರಕ್ಷಣೆಯ ಕಾನೂನಿನ ಮುಸುಕಿನಲ್ಲಿ ಸಮರ್ಥಿಸಿಕೊಂಡಂತೆ ಇಸ್ರೇಲ್ ಸಹ ತನ್ನದು ಆತ್ಮರಕ್ಷನೆಯ ಯುದ್ಧ ಎಂದು ಸಮರ್ಥನೆ ಮಾಡಿಕೊಳ್ಳುತ್ತದೆ.

ಮಾಧ್ಯಮಗಳು ಸಹ ಉದ್ದೇಶಪೂರ್ವಕವಾಗಿ ಘಟನೆಯನ್ನು ಅದರ ಐತಿಹಾಸಿಕ ಹಿನ್ನೆಲೆಯಿಂದ ಹೊರತೆಗೆದು ಭಯೋತ್ಪಾದಕವಾಗಿ ಜನರ ಮುಂದಿರಿಸುತ್ತವೆ.  

ಇತಿಹಾಸ ಶುರುವಾದದ್ದೇ ಅಕ್ಟೋಬರ್ 7 ರಿಂದ  ಎಂಬಂತೆ ಚಿತ್ರಿಸುತ್ತವೆ.  ಹಮಾಸ್ ದಾಳಿಯಿಂದ ಆತ್ಮ ರಕ್ಷಣೆ ಮಾಡಿಕೊಳ್ಳಲೆಂದೇ ಇಸ್ರೇಲ್ ಗಾಜಾ ಮೇಲೆ ಆಕ್ರಮಣ ಮಾಡಿದೆ ಎಂಬ ಇಸ್ರೇಲಿ ಪ್ರಚಾರವನ್ನು ಮಾತ್ರ ಮುಂದಿಟ್ಟು ಅದರ ಹಿಂದಿರುವ ಇಸ್ರೇಲಿನ ಆಕ್ರಮಣಕಾರಿ, ವಿಸ್ತರಣಾ ವಾದಿ ಹಾಗೂ ನೆಲಸಿಗ ವಸಾಹತುಶಾಹಿ ಹಿನ್ನೆಲೆಯನ್ನು ಮರೆಮಾಚುತ್ತವೆ.ಆದ್ದರಿಂದ ಈ ಪ್ರಕರಣದಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳುತ್ತಿರುವುದು ಪ್ಯಾಲೆಸ್ತಿನಿಯರು ಮತ್ತು ಆಕ್ರಮಣ ಮಾಡುತ್ತಿರುವುದು ಇಸ್ರೇಲ್ ಎಂಬ ಸ್ಪಷ್ಟ ತಿಳವಳಿಕೆ ಇರುವುದು ಅತ್ಯಗತ್ಯ.

 

4. ಸತ್ತವರು ಮತ್ತು ಕೊಲೆಯಾದವರು!

ಹಮಾಸ್ ದಾಳಿಯಿಂದ 1400 ಇಸ್ರೇಲಿಗಳು ಕೊಲೆಯಾದರೆ, ಇಸ್ರೇಲ್ ದಾಳಿಯಿಂದ 10 ಸಾವಿರ ಜನರು ಸತ್ತರು ಎಂದಾಗುವುದೇಕೆ?

ಮೇಲಿನ ವಾಕ್ಯ ಪ್ರಯೋಗಗಳಲ್ಲಿನ ಜನಾಂಗೀಯ ವಾದಿ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕು.  ಒಂದು ವಾಕ್ಯದಲ್ಲಿ ಕರ್ತೃ , ಕರ್ಮಾ ಮತ್ತು ಕ್ರಿಯಾ ಪಾದಗಳಿರುತ್ತವೆ. ಕರ್ತೃ  ಕ್ರಿಯೆಗೆ ಹೊಣೆಗಾರ .ಕೊಲೆಯಾದರು ಎಂಬ ಪದದಲ್ಲಿ ಕೊಲೆಗಾರನ ಸೂಚನೆ ಇದೆ. ಸತ್ತರು ಎಂಬ ಪದದಲ್ಲಿ ಕತೃ ವಿಲ್ಲ.  ಹೊಣೆಗಾರಿಕೆ ಇಲ್ಲ.

ಇಸ್ರೇಲಿಗಳು ಕೊಲೆಯಾದರು. ಕೊಲೆಗಾರ ಹಮಾಸ್.

ಪ್ಯಾಲೇಸ್ಟಿನಿಯರು ಸತ್ತರು. ಸಾವಿಗೆ ಹೊಣೆಗಾರ ಸತ್ತವರೇ!

ಆದ್ದರಿಂದ ಹಮಾಸ್ ದಾಳಿಯಿಂದ 1400 ಇಸ್ರೇಲಿಗಳು ಕೊಲೆಯಾದಂತೆ, ಗಾಜಾ ಪ್ರದೇಶದಲ್ಲಿ  ಹತ್ತು ಸಾವಿರ  ಪ್ಯಾಲೇಸ್ಟಿನಿಯರು ಇಸ್ರೇಲಿನಿಂದ ಕೊಲೆಯಾದರು. ಕೊಲೆಯಾಗುತ್ತಿದ್ದಾರೆ ಎಂಬ ಸತ್ಯವನ್ನು ಮರೆಮಾಚುವ ಉದ್ದೇಶವೇ ಈ ಪದಬಳಕೆಗಳ ಹಿಂದಿದೆ.ಪ್ಯಾಲೇಸ್ಟಿನಿರನ್ನು  ಇಸ್ರೇಲ್ ಸರ್ಕಾರ ಕೊಂದಿದೆ ಎಂದು ಬಳಸುವುದು ಮಾತ್ರ ಸತ್ಯವನ್ನು ಅನಾವರಣ ಮಾಡುತ್ತದೆ.

5. ಹಮಾಸ್ ಇಸ್ರೇಲಿ ಕಟ್ಟಡಗಳನ್ನು ಉರುಳಿಸಿದರೆ, ಪ್ಯಾಲೆಸ್ತೀನಿ ಕಟ್ಟಡಗಳು ಕುಸಿಯುತ್ತವೆ!

ಹಮಾಸ್ ಸಂಘಟನೆ ಹಲವಾರು ಬಾರಿ ಇಸ್ರೇಲಿನ ಮೇಲೆ ಅತ್ಮಹತ್ಯಾ ದಾಳಿಯನ್ನು ಮಾಡಿದೆ. ಇದರಿಂದ ಸಾಮಾನ್ಯ ಜನರು ಬಲಿಯಾಗಿದ್ದಾರೆ. ಕೆಲವು ಇಸ್ರೇಲಿ ಕಟ್ಟಡಗಳ್ನ್ನು ಉರುಳಿಸಿದ್ದಾರೆ. ಆದರೆ  ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸರ್ಕಾರ ಬಾಂಬ್  ದಾಳಿ ಮಾಡಿ   2005 ರಿಂದ ಸಾವಿರಾರು ಪ್ಯಾಲೆಸ್ತೀನಿ ಕಟ್ಟದಗಳನ್ನು ಉರುಳಿಸಿವೆ.

ಅಕ್ಟೋಬರ್ 7  ರ ನಂತರವೇ ಇಸ್ರೇಲ್ ಪ್ರತಿ ದಿನ ಗಂಟೆಗೆ 45 ಬಾಂಬುಗಳನ್ನು ಪ್ಯಾಲೆಸ್ತೀನ್ ಮೇಲೆ ಹಾಕುತ್ತಿದೆ. ಹಾಗೂ ಗಂಟೆಗೆ 12  ಕಟ್ಟಡಗಳನ್ನು ಉರುಳಿಸುತ್ತಿದೆ. ಗಾಜಾಗೆ  ಪ್ಯಾಲೆಸ್ತೀನಿ ಯರು ವಾಪಸ್ ಬರಲಾಗದಂತೆ ಸರ್ವ ನಾಶ ಮಾಡಿ ಗಾಜವನ್ನು ಇಸ್ರೇಲಿಗೆ ಸೇರಿಸಿಕೊಳ್ಳುವುದು ದರ ವಸಾಹತುಶಾಹಿ ಹುನ್ನಾರ .ಆದರೆ ಮಾಧ್ಯಮಗಳು ಈ ವಿಧ್ವಂಸವನ್ನು ವರದಿ ಮಾಡುವುದು ಹೇಗೆ? 

ಹಮಾಸ್ ದಾಳಿಯಿಂದಾಗಿ ಇಸ್ರೇಲಿನ ಕಟ್ಟಡಗಳು ಧ್ವಂಸಗೊಂಡರೆ , ಗಾಜಾದಲ್ಲಿ ಪ್ಯಾಲೆಸ್ತೀನಿ ಕಟ್ಟಡಗಳು ಬಾಂಬ್ ದಾಳಿಗೆ ಕುಸಿದು ಬೀಳುತ್ತಿವೆಇಲ್ಲಿಯೂ ಭಾಷಾ ರಾಜಕಾರಣವನ್ನು ಗಮನಿಸಿ. ಇಸ್ರೇಲಿ ಕಟ್ಟಡಗಳ ಧ್ವಂಸಕ್ಕೆ ಕಾರಣ ಹಮಾಸಿನ ಬಾಂಬುಗಳಲ್ಲ. ಹಮಾಸೇ.ಆದರೆ ಪ್ಯಾಲೆಸ್ತೀನಿ ಕಟ್ಟಡಗಳ ವಿಧ್ವಂಸಕ್ಕೆ ಇಸ್ರೇಲಿನ ಸರ್ಕಾರ ಕಾರಣವಲ್ಲ. ಬಾಂಬುಗಳು ಕಾರಣ. 

ಅಂದರೆ ಒಂದು ಕಡೆ ವಿಧ್ವಂಸಕ್ಕೆ ಸ್ಪಷ್ಟವಾಗಿ ಹಮಾಸನ್ನು ಹೊಣೆಗಾರರನ್ನಾಗಿಸುತ್ತಿದ್ದರೆ, ಪ್ಯಾಲೆಸ್ತಿನಿನ ವಿಧ್ವಂಸಕ್ಕೆ ಇಸ್ರೇಲನ್ನು ನೇರ ಹೊಣೆಗಾರರನ್ನಾಗಿಸುತ್ತಿಲ್ಲ.ಇಂಥ ಹತ್ತು ಹಲವು ರೂಢಿ ಮಾಡಿಸಲ್ಪಟ್ಟ ಭಾಷೆಯನ್ನೂ ಮುರಿಯುವುದು , ಹಾಗೂ  ಭಾಷೆಯ  ಇಸ್ರೇಲೀಕರಣವನ್ನು ಸೋಲಿಸುವುದೂ ಸಹ ಪ್ಯಾಲೇಸ್ಟಿನ್ ಸಮಸ್ಯೆಯ ನ್ಯಾಯಯುತ ಪರಿಹಾರಕ್ಕಾಗಿ   ಮತ್ತು ಆ ಪ್ರದೇಶದಲ್ಲಿ ಶಾಂತಿಗಾಗಿ ನಡೆಸುವ ಹೋರಾಟದ ಭಾಗ. ಅಲ್ಲವೇ?

                                                                                                                                                    - ಶಿವಸುಂದರ್

Related Posts

Leave A Comment

Voting Poll

Get Newsletter