ಗ್ಯಾರಂಟಿ ಟ್ರೆಂಡ್ ದೇಶಾದ್ಯಂತ ಫಲಿಸಲಿದೆಯೇ?      ಐದು ರಾಜ್ಯಗಳ ವಿಧಾನಸಭಾ ಚುನಾವಣೆ

  ಮುಂದಿನ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದು ಹಲವರು ನೋಡುತ್ತಿರುವ ಪಂಚರಾಜ್ಯಗಳ ಚುನಾವಣೆಯು ಇದೇ ನವಂಬರ್ ತಿಂಗಳಲ್ಲಿ ನಡೆದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಮತ್ತು ಇತರ ನಾಲ್ಕು ರಾಜ್ಯಗಳಲ್ಲಿ ಒಂದು ಹಂತದಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಈ ಚುನಾವಣೆಯು ಎಲ್ಲಾ ರಾಜಕೀಯ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ. 

ರಾಜಸ್ಥಾನ 

  200 ವಿಧಾನಸಭಾ ಕ್ಷೇತ್ರಗಳಿರುವ ರಾಜಸ್ಥಾನದಲ್ಲಿ ನವೆಂಬರ್ 23 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಜೊತೆಗೆ ರಾಜಸ್ಥಾನವು ಈ ರಾಜ್ಯಗಳ ಫಲಿತಾಂಶದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಪೈಪೋಟಿಗೆ ಪ್ರಮುಖ ಕ್ಷೇತ್ರಗಳಾಗಿವೆ.

 

  2018 ರ ಚುನಾವಣೆಯಲ್ಲಿ 39.8 ರಷ್ಟು ಮತ ಹಂಚಿಕೆಯೊಂದಿಗೆ ಕಾಂಗ್ರೆಸ್ ಬಹುಮತಕ್ಕೆ 99 ಸ್ಥಾನಗಳನ್ನು ಗಳಿಸಿತ್ತು. ಬಹುಜನ ಸಮಾಜ ಪಕ್ಷ, ಸ್ವತಂತ್ರ ಶಾಸಕರೊಂದಿಗೆ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ರಾಜಸ್ಥಾನದಲ್ಲಿ ಸರ್ಕಾರವನ್ನು ರಚಿಸಿತು. 39.3 ರಷ್ಟು ಮತ ಹಂಚಿಕೆಯೊಂದಿಗೆ ಬಿಜೆಪಿ ಕೇವಲ 73 ಸ್ಥಾನಗಳನ್ನು ಗಳಿಸುವಲ್ಲಿ ವಿಫಲಗೊಂಡಿತ್ತು. 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, 2019 ರಲ್ಲಿ ಬಿಜೆಪಿಯು ರಾಜ್ಯದ ಎಲ್ಲಾ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು. 

  ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನದ ಮುಖ್ಯಮಂತ್ರಿಯವರು  ಸುಮಾರು ಒಂದು ತಿಂಗಳಲ್ಲಿ, ಮೂರು ಕೋಟಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ತಮ್ಮ ಸರ್ಕಾರವನ್ನು ಪುನರಚಿಸುವ ಪೂರ್ಣ ಶ್ರಮದಲ್ಲಿದ್ದಾರೆ. ಗೆಹ್ಲೋಟ್ ಅವರು ತಮ್ಮ ಮಹತ್ವಾಕಾಂಕ್ಷೆಯ 'ಮೆಹಂಗೈ ರಾಹತ್ ಶಿಬಿರಗಳನ್ನು' (ಹಣದುಬ್ಬರ ಪರಿಹಾರ ಶಿಬಿರಗಳು) ರಾಜ್ಯಾದ್ಯಂತ ಏಪ್ರಿಲ್‌ನಲ್ಲಿ ಪ್ರಾರಂಭಿಸಿದ್ದರಿಂದ ತಳ ಮಟ್ಟದಲ್ಲಿ ಮತ ಸೆಳೆಯುವಂತ ಕಾರ್ಯವಾಗಲಿದೆ.

  ಗೆಹ್ಲೋಟ್ ಸರ್ಕಾರ ಎದುರಿಸುತ್ತಿರುವ ಆಡಳಿತ ವಿರೋಧಿ, ಭ್ರಷ್ಟಾಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಂದ ಬಿಜೆಪಿ ಲಾಭ ಪಡೆಯಲು ಆಶಿಸುತ್ತಿದೆಯಾದರೂ,  ಅವರ ಪಕ್ಷದಲ್ಲಿಯೇ ಅವರು ಒಗ್ಗಟ್ಟಾಗಿಲ್ಲ. ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾರವರನ್ನೇ ಅವರು ಬದಿಗಿಟ್ಟಿದ್ದಾರೆ. ಚುನಾವಣೆಯ ಮೂಲಕ ಪಕ್ಷವನ್ನು ಮುನ್ನಡೆಸಲು ಒಬ್ಬ ನಾಯಕನನ್ನು ಕಂಡುಹಿಡಿಯಲಿಲ್ಲ. ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಲ್ಲ. ಸರಕಾರ ಬಂದರೆ ಹಲವರು ಮುಖ್ಯಮಂತ್ರಿ ಸ್ಥಾನದ ಪೈಪೋಟಿಯಲ್ಲಿದ್ದಾರೆ. 

ಮಧ್ಯಪ್ರದೇಶ

  230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಸುಮಾರು ಎರಡು ದಶಕಗಳ ಕಾಲ ಬಿಜೆಪಿ ಆಡಳಿತ ನಡೆಸಿದ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಈಗ ಆಡಳಿತ ವಿರೋಧಿ ಭಾವನೆಯನ್ನು ಎದುರಿಸುತ್ತಿದೆ. ಹಲವು ಬಿಜೆಪಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಹಾತೊರೆಯುತ್ತಿದ್ದಾರೆ. 2018 ರ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 41.5 ಶೇಕಡಾ ಮತ ಹಂಚಿಕೆಯೊಂದಿಗೆ 114 ಸ್ಥಾನಗಳನ್ನು ಪಡೆದರೆ, ಬಿಜೆಪಿ 41.6 ಶೇಕಡಾ ಮತಗಳನ್ನು ಗಳಿಸಿ 109 ಸ್ಥಾನಗಳನ್ನು ಗಳಿಸಿತ್ತು. ಆದರೆ 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಬಣದ ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದಾಗ ಕಾಂಗ್ರೆಸ್ ತನ್ನ ಬಹುಮತವನ್ನು ಕಳೆದುಕೊಂಡಿತು. ಹೀಗಾಗಿ ಮಧ್ಯಪ್ರದೇಶ ಮತ್ತೆ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಿತು. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 29 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಗೆದ್ದಿತ್ತು. 

  ರಾಜ್ಯದಲ್ಲಿ ಪಕ್ಷದ ಸುದೀರ್ಘ ಆಡಳಿತದಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಅಧಿಕಾರ ವಿರೋಧಿ ಅಂಶವನ್ನು ಮುಚ್ಚಿಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಮಧ್ಯಪ್ರದೇಶವನ್ನು ದೇಶದ ಪ್ರಮುಖ ಮೂರು ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವುದು ತಮ್ಮ ಪಕ್ಷದ ಗುರಿಯಾಗಿದೆ ಎಂದು  ರ್ಯಾಲಿಯಲ್ಲಿ ನಾಯಕರು ಹೇಳುತ್ತಾ ಮತ ಸೆಳೆಯುವ ಯತ್ನವನ್ನು ನಡೆಸುತ್ತಿದ್ದಾರೆ. ಆದರೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೆಂದು ವಿಮರ್ಶಕರು ಹೇಳುತ್ತಿದ್ದಾರೆ.  

ಛತ್ತೀಸ್‌ಗಢ

  90 ವಿಧಾನಸಭಾ ಕ್ಷೇತ್ರಗಳಿರುವ ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

  2018 ರಲ್ಲಿ, ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದಲ್ಲಿ ಪಕ್ಷದ 15 ವರ್ಷಗಳ ಆಡಳಿತದ ನಂತರ ಛತ್ತೀಸ್‌ಗಢವನ್ನು ಬಿಜೆಪಿಯಿಂದ ವಶಪಡಿಸಿಕೊಂಡಿತು. ದೀರ್ಘಕಾಲದಿಂದ ಬಿಜೆಪಿಯೂ ಹತಾಶೆಯಲ್ಲಿದ್ದರಿಂದ ಈಗ ಅದನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಛತ್ತೀಸ್‌ಗಢದಲ್ಲಿ ತನ್ನ ಎರಡು 'ಪರಿವರ್ತನಾ ಯಾತ್ರೆ'ಗಳೊಂದಿಗೆ, ಬಿಜೆಪಿ ತನ್ನ ಅತೃಪ್ತ ಕಾರ್ಯಕರ್ತರ 'ಘರ್ ವಾಪ್ಸಿ' ಎಂಬ ಅವಳಿ ತಂತ್ರವನ್ನು ಬಳಸುತ್ತಿದೆ. 

  ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸರ್ಕಾರವು ಬಡವರ ಪರವಾದ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ. ಆದರೂ, ಬಾಘೆಲ್ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದ ಬಿಜೆಪಿ ಲಾಭ ಪಡೆಯಲು ಆಶಿಸುತ್ತಿದೆ. ಬಘೆಲ್ ಸರ್ಕಾರದ ಅಡಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಹಗರಣಗಳನ್ನು ಆರೋಪಿಸಿ ಕಾಂಗ್ರೆಸ್ ವಿರುದ್ಧ 104 ಪುಟಗಳ "ಚಾರ್ಜ್‌ಶೀಟ್" ಬಿಡುಗಡೆ ಮಾಡಿದೆ. 

  ಎಎಪಿ ಮತ್ತು ಹಮರ್ ರಾಜ್, ಬುಡಕಟ್ಟು ಭಾವನೆಗಳು ಮತ್ತು ಅವರ ಕಾಳಜಿಗಳನ್ನು ವ್ಯಕ್ತಪಡಿಸುವ ಹೊಸ ಪಕ್ಷವು ಕಾಂಗ್ರೆಸ್ ಮತಗಳನ್ನು ತಿನ್ನುವ ನಿರೀಕ್ಷೆಯಿದೆ. 

ತೆಲಂಗಾಣ

  119 ಸ್ಥಾನಗಳ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

  ಕೆ. ಚಂದ್ರಶೇಖರ ರಾವ್ ಅವರ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಗೆ ತೆಲಂಗಾನ ಸಾಕ್ಷಿಯಾಗಲಿದೆ. ಅಸಾದುದ್ದೀನ್ ಓವೈಸಿಯ ಎಐಎಂಐಎಂ ಸಹ ಪ್ರಮುಖ ಪಾತ್ರ ವಹಿಸುತ್ತದೆ. 2018 ರಲ್ಲಿ ನಡೆದ ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ, ಬಿ.ಆರ್.ಎಸ್ 47.4 ರಷ್ಟು ಪ್ರಬಲ ಮತಗಳನ್ನು ಹೊಂದಿ 119 ರಲ್ಲಿ 88 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಕಾಂಗ್ರೆಸ್ ಶೇ.28.7  ಮತ ಹಂಚಿಕೆಯೊಂದಿಗೆ 19 ಸ್ಥಾನಗಳನ್ನು ಪಡೆದು, ಬಿಜೆಪಿ ಸುಮಾರು 7 ಶೇಕಡಾ ಮತಗಳನ್ನು ಪಡೆದು ಕೇವಲ ಒಂದು ಸ್ಥಾನವನ್ನು ಗಳಿಸಿತ್ತು. 

  ತೆಲಂಗಾಣದಲ್ಲಿ ಕೆಲವೇ ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತವಾಗಿದ್ದ ಬಿಜೆಪಿ, 2019 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಪ್ರಭಾವಶಾಲಿ ಮತಗಳ ಹಂಚಿಕೆಯಲ್ಲಿ ದೊಡ್ಡ ಸಂಖ್ಯೆ ತನ್ನದಾಗಿಸಿಕೊಂಡಿತು. ಕಳೆದ ಲೋಕಸಭೆ ಫಲಿತಾಂಶವು ಬಿಜೆಪಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪಮಟ್ಟದಲ್ಲಿಯಾದರೂ ವಿಕಸನಗೊಳಿಸಬಹುದು ಎಂಬ ಭರವಸೆಯನ್ನು ನೀಡುತ್ತದೆ.

  ಕಾಂಗ್ರೆಸ್ ತನ್ನ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ ಇಡೀ ದೇಶದಲ್ಲಿಯೇ ನವಚೈತನ್ಯ ಪಡೆದಿದೆ. ಹಲವಾರು ನವೀನ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದ ಕೆ. ಚಂದ್ರಶೇಖರ ರಾವ್ ಅವರ ಅಡಿಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿ.ಆರ್. ಎಸ್ ಬಯಸುತ್ತಿದೆ. 

ಮಿಜೋರಾಂ

  40 ವಿಧಾನಸಭಾ ಕ್ಷೇತ್ರಗಳಿರುವ ಮಿಜೋರಾಮಿನಲ್ಲಿ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ ಮತ್ತು ಡಿಸೆಂಬರ್ 3 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. 

  ರಾಜ್ಯವು ಎರಡು ಪಕ್ಷಗಳ ರಾಜಕೀಯವನ್ನು ಹೊಂದಿದೆ, ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) ಮತ್ತು ಕಾಂಗ್ರೆಸ್ ಅಲ್ಲಿ ಪ್ರಾಬಲ್ಯ ಹೊಂದಿದೆ. ಎಂಎನ್‌ಎಫ್ ಪಕ್ಷವು ಬಿಜೆಪಿಯ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟದೊಂದಿಗೆ ಮೈತ್ರಿ ಮಾಡಿಕೊಂಡಿದೆ. 2018 ರ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್ ಐದು ಮತ್ತು ಬಿಜೆಪಿ ಮತ್ತು ಟಿಎಂಸಿ ತಲಾ ಒಂದನ್ನು ಗೆದ್ದುಕೊಂಡಿತು. ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM), ಅವರ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿ ಆರು ಸ್ಥಾನಗಳನ್ನು ಗೆದ್ದಿತು.

 

  ಕಳೆದ ಬಾರಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ಹಿರಿಯ ನಾಯಕ ಲಾಲ್ ಥನ್ಹಾವ್ಲಾ ರಾಜ್ಯ ರಾಜಕೀಯದಿಂದ ನಿವೃತ್ತಿ ಹೊಂದಿದ್ದು, ಅನುಭವಿ ನಾಯಕತ್ವದಿಂದ ಹೊರಗುಳಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಅನ್ನು ಬದಲಿಸಲು ಸಾಧ್ಯವಿದೆಯೆಂದು ಪ್ರಸ್ತುತ ಕಾಂಗ್ರೆಸ್ ಪಕ್ಷದ ನಿಲುವುನಿಂದ  ಮನದಟ್ಟಾಗುತ್ತದೆ.  

  MNF ಮಿಜೋ ರಾಷ್ಟ್ರೀಯತಾವಾದಿ ಭಾವನೆಯನ್ನು ಆಧರಿಸಿದೆ. ಬಿಜೆಪಿ ಮಿತ್ರ ಪಕ್ಷವಾಗಿದ್ದರೂ, ಇತ್ತೀಚೆಗೆ ಮ್ಯಾನ್ಮಾರ್‌ನಿಂದ ಬಂದ ನಿರಾಶ್ರಿತರನ್ನು ಬಯೋಮೆಟ್ರಿಕ್ ಗುರುತಿಸುವ ನೀತಿಯನ್ನು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರವನ್ನು ಧಿಕ್ಕರಿಸಿದೆ. ಮ್ಯಾನ್ಮಾರ್‌ನಿಂದ ಬಂದಿರುವ ಎಲ್ಲ ನಿರಾಶ್ರಿತರನ್ನು ಹಿಂದಕ್ಕೆ ತಳ್ಳಲು ಕೇಂದ್ರ ಸರ್ಕಾರ ಮಿಜೋರಾಂ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ಝೋರಂತಂಗಾ ಹೇಳಿದರು, ಆದರೆ ಅವರು ಸಾರಾಸಗಟಾಗಿ ಅದನ್ನು ನಿರಾಕರಿಸಿ, ಕೇಂದ್ರ ಸರ್ಕಾರಕ್ಕೆ ನಾವು  ಹೆದರುವವರಲ್ಲ ಎಂದು ಒತ್ತಿ ಹೇಳಿದರು. ಜೋರಮ್‌ ತಂಗ ಅವರು ಬಿಜೆಪಿ ಉತ್ತೇಜಿಸುವ ಏಕರೂಪ ನಾಗರಿಕ ಸಂಹಿತೆಯ ಕಲ್ಪನೆಯನ್ನು ಸಹ ವಿರೋಧಿಸಿದ್ದರು.  

  ಈ ಮತದಾನವು G20 ಶೃಂಗಸಭೆಯ ನಂತರ ಇದು ಮೊದಲ ಚುನಾವಣೆಯಾಗಿದೆ. ಇದು ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗಲಿದೆಯೇ ಎಂಬ ಕುತೂಹಲವು ಬಿಜೆಪಿ ಬೆಂಬಲಿಗರಿಗೆ ಮೂಡಿದೆ. ಇನ್ನೊಂದೆಡೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪರಿಣಾಮವು ಇನ್ನೂ ದೇಶದಲ್ಲಿ ಬಾಕಿಯಾಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಟ್ರೆಂಡ್ ಕರ್ನಾಟಕದಲ್ಲಿ ಫಲಿಸಿದಂತೆ ಇತರ ರಾಜ್ಯಗಳಲ್ಲಿ ಫಲಿಸಲಿದೆಯೇ ಎಂದು ಕಾದು ನೋಡೋಣ. 

ಬರಹ: ಫಾಯಿಝ್ ಪಿಲಿಗೂಡು

(ವಿದ್ಯಾರ್ಥಿ ದಾರುನ್ನುರ್  ಏಜುಕೇಶನ್ ಸೆಂಟರ್, ಕಾಶಿಪಟ್ನ) 

Related Posts

Leave A Comment

Voting Poll

Get Newsletter