"ಇಂಡಿಯಾ" ಮೈತ್ರಿಕೂಟದ ಮುಂದಿನ ಸವಾಲು...
ಬರುವ ಲೋಕಸಭಾ ಚುನಾವಣೆ ಪಲಿತಾಂಶಕ್ಕೆ ಅನಲ್ಪವಾಗಿ ಪ್ರಭಾವ ಬೀರಲಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ಸಿನ ಸೋಲು "ಇಂಡಿಯಾ" ಮೈತ್ರಿ ಕೂಟದ ಮೇಲೆ ಉಂಟುಮಾಡಿದ ಹಿನ್ನಡೆ ಸ್ವಲ್ಪವಲ್ಲ. ಉನ್ನತ ಮಟ್ಟದ ಸಭೆಗಳೊಂದಿಗೆ ಅಬ್ಬರದ ಆಗಮನ ಕಹಳೆ ಬಾರಿಸಿದ ವಿರೋಧ ಪಕ್ಷಗಳ ಮೈತ್ರಿಗೆ ಮೊದಲಿನ ಆಸಕ್ತಿ ಕಾಣುತ್ತಿಲ್ಲ. ಲೋಕಸಭಾ ಚುನಾವಣೆಗೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇರುವಾಗ ಯಾವುದೇ ರೀತಿಯ ಕಾರ್ಯ ವೈಖರಿಗಳು ಕಾಣುತ್ತಿಲ್ಲ ಎನ್ನುವುದು ಬಲಪಂಥೀಯ ಪಕ್ಷದ ವಿರೋಧಿಗಳಿಗೆ ಬೇಸರದ ಮಾತು. ಪಂಚ ರಾಜ್ಯಗಳ ಚುನಾವಣೆಗೆ ತಿಂಗಳುಗಳ ಮುಂಚೆಯೇ ಮೈತ್ರಿಕೂಟದ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಪ್ರಕಟವಾಗಿ ಮುನ್ನಡೆಗೆ ಬಂದಿತ್ತು.
ಮಧ್ಯಪ್ರದೇಶದ ಭೋಪಾಲಿನಲ್ಲಿ ಆಯೋಜಿಸಲಾಗಿದ್ದ ಜಂಟಿ ವಿರೋಧ ಪಕ್ಷದ ಪ್ರಚಾರ ರಾಲಿಯ ವಿಫಲವಾಗಿತ್ತು. ಸೀಟು ಹಂಚಿಕೆ ಅಥವಾ ಸರ್ವ ಪಕ್ಷಾನುಮತ ಪ್ರಣಾಳಿಕೆಯಂತಹ ನಿರ್ಣಾಯಕ ವಿಷಯಗಳ ಕುರಿತು ಕಳೆದ ಮೂರು ತಿಂಗಳಿಂದ ಯಾವುದೇ ವಿಧದ ಲಕ್ಷಣಗಳು ಎದ್ದು ಕಾಣುತ್ತಿಲ್ಲ. ಕೊನೆಯ ಪ್ರಯತ್ನವೆಂಬಂತೆ ಪಂಚ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಗೆ ಆಸಕ್ತಿ ತೋರದೆ ಒನ್ ಮ್ಯಾನ್ ಶೋ ಗೆ ಮುಂದಾದ ಕಾಂಗ್ರೆಸ್ ಕೈಸುಟ್ಟು ಗೊಂಡಿತು, ಚುನಾವಣೆ ಫಲಿತಾಂಶದ ಬಳಿಕ ತರಾತುರಿಯಲ್ಲಿ ಡಿಸೆಂಬರ್ 6 ರಂದು ಕರೆದ ಸಭೆಯು ನಾಯಕರ ಗೈರು ಹಾಜರಿಯಿಂದ ಮುಂದೂಡಬೇಕಾಯಿತು.
ಸೀಟು ಹಂಚಿಕೆ ಮತ್ತು ಸರ್ವ ಸಮ್ಮತಿ ಸಿದ್ಧಾಂತವನ್ನು ರೂಪಿಕರಿಸುವಲ್ಲಿ ಇಂಡಿಯಾ ಮೈತ್ರಿಕೂಟವು ಎಡವಟ್ಟುತ್ತಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೀಟು ಹಂಚಿಕೆ ಒಪ್ಪಂದದಲ್ಲಿ ವಿಫಲವಾಯಿತು. ಮಾತ್ರವಲ್ಲ ಕಾಂಗ್ರೆಸ್ ನಾಯಕ ಕಮಲ್ ನಾತ್ ಅವರು ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರ ಮಧ್ಯೆ ಮಾತಿನ ಚಕಮಕಿ ನಡೆಸಿದರೆ, ಡಿಎಂಕೆ ನಾಯಕ ಉದಯ ನಿಧಿ ಸ್ಟಾಲಿನ್ ಅವರ ಸನಾತನ ಧರ್ಮದಂತಹ ವಿಷಯಗಳು ಮೈತ್ರಿಕೂಟಕ್ಕೆ ಹಿನ್ನಡೆ ಉಂಟು ಮಾಡಿದ್ದೂ ನಿಜ. ಇಂತಹ ಪ್ರಸಂಗಗಳು ದೃಢವಾದ ಸಿದ್ಧಾಂತವನ್ನು ಸ್ಥಾಪಿಸಲು ಅಸಮರ್ಥತೆಯ ಸಂಕೇತ, ಸೀಟು ಹಂಚಿಕೆಯ ಕುರಿತಾದ ಪಕ್ಷಗಳ ಮಧ್ಯೆಯಿರುವ ಅಸಮಾನತೆಯು "ಇಂಡಿಯಾ ಮೈತ್ರಿ ಕೇವಲ ಅವಕಾಶವಾದಿ ರಚನೆ" ಎಂಬ ಬಿಜೆಪಿಯ ಟೀಕೆಯನ್ನ ಬಲಪಡಿಸಿದೆ. ಮೈತ್ರಿ ಕೂಟ ರಚನೆಗೊಂಡು ಮೂರು ತಿಂಗಳ ನಿಷ್ಕ್ರಿಯವಾದ್ದು ಒಪ್ಪಲೇ ಬೇಕಾದ ಕಹಿಸತ್ಯ, ಲೋಕಸಭೆ ಚುನಾವಣೆಗೆ ಕೇವಲ 5 ತಿಂಗಳು ಬಾಕಿ ಇರುವ ಕಾರಣ ಅತಿ ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಸವಾಲುಗಳು
"ಇಂಡಿಯಾ" ಮೈತ್ರಿಕೂಟದಲ್ಲಿರುವ ಪಕ್ಷಗಳು 2024 ರ ಚುನಾವಣೆಯಲ್ಲಿ ತಮ್ಮ ಪಕ್ಷದ ವಿಸ್ತರಣೆಯ ಚಿಂತನೆಯನ್ನು ಬದಿಗಿಡಬೇಕು. ಇಲ್ಲದಿದ್ದರೆ ಸೀಟು ಹಂಚಿಕೆಯು ದೊಡ್ಡ ಸಮಸ್ಯೆಯಾಗಿ ಮೈತ್ರಿಕೂಟವನ್ನು ಮತ್ತಷ್ಟು ಸಂಕೀರ್ಣಗೊಳಿಸಬಹುದು.
ಸೀಟು ಹಂಚಿಕೆಯ ವಿಷಯದಲ್ಲಿ ಗೊಂದಲವಿಲ್ಲದೆ ಒಮ್ಮತದಿಂದ ಮುನ್ನಡೆದರೂ ವಿವಿಧ ಪಕ್ಷಗಳ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಒಗ್ಗೂಡಿಸುವುದು ಸವಾಲಿನ ಕೆಲಸವಾಗಿದೆ. "ಇಂಡಿಯಾ" ಮೈತ್ರಿಕೂಟಕ್ಕೆ ವಿಭಿನ್ನ ಸಿದ್ದಾಂತ ಹೊಂದಿದ್ದ ಪಕ್ಷಗಳ ನಡುವೆ ಸಮರ್ಥನೀಯ ಸೈದ್ಧಾಂತಿಕ ಹೊಂದಾಣಿಕೆಗಳನ್ನು ಎತ್ತಿ ತೋರಿಸಲು ಇದು ಕರೆ ನೀಡುತ್ತದೆ. ಇಂತಹ ಹೊಂದಾಣಿಕೆಯು ಸೈದ್ಧಾಂತಿಕದಿಂದ ದೂರ ಹೊಂದಿದ ಮತದಾರರ ಮತ್ತು ಮೈತ್ರಿ ಪಾರುದಾರರ ಬೆಂಬಲ ಪಡೆಯುವುದರಲ್ಲಿ ಯಶಸ್ವಿಯಾಗಬಹುದು.
ವಿವಿಧ ಪಕ್ಷಗಳು ತಮ್ಮ ಮೂಲಸಿದ್ದಾಂತ ಬದ್ಧತೆಗಳ ಬಗ್ಗೆ 2024 ಲೋಕಸಭೆ ಚುನಾವಣೆವರೆಗೆ ಯಾವುದೇ ರೀತಿಯ ಕಾಳಜಿ ವಹಿಸದಿರುವುದು. ಬದಲಾಗಿ ಪ್ರಸ್ತುತ ಸರಕಾರದ ವೈಫಲ್ಯದ ಕುರಿತು ಸ್ಪಷ್ಟವಾಗಿ ಮತದಾರಿಗೆ ಮನವರಿಕೆ ಮಾಡಲು ಪ್ರಯತ್ನಿಸುವುದು. ಮೋದಿ ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಎತ್ತಿ ತೋರಿಸುವ ನಿರಂತರ ಮತ್ತು ಸಂಘಟಿತ ಪ್ರಚಾರವನ್ನು ಪ್ರಾರಂಭಿಸುವುದು, ಮಾತ್ರವಲ್ಲದೆ ಅದನ್ನು ಮತದಾರರಿಗೆ ಮನವಿ ಮಾಡುವ ಪರ್ಯಾಯ ದೃಷ್ಟಿಯನ್ನು ಕಂಡುಕೊಳ್ಳಬೇಕು. ಅದೇ ರೀತಿ ಬಿಜೆಪಿಯ ಚುನಾವಣೆ ಯಶಸ್ವಿಗೆ ಬಳಸುವ ಅಜೆಂಡಾವನ್ನು ಪೂರ್ವಭಾವಿಯಾಗಿ ತಿಳಿದು ಅದನ್ನು ಬೀರುವ ಶಕ್ತಿ "ಇಂಡಿಯಾ" ಮೈತ್ರಿಕೂಟಕ್ಕೆ ಇರಬೇಕು. ಇದು ವಿರೋಧ ಪಕ್ಷಗಳು ಶೀಘ್ರದಲ್ಲಿ ತಯಾರು ನಡೆಸಬೇಕಾದ ಮುಖ್ಯಾಂಶಗಳಾಗಿವೆ. ಆದರೆ ಮಾತ್ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ಮೈತ್ರಿಯು ಬಿಜೆಪಿಯ ಎದುರು ಪ್ರಬಲವಾದ ಪೈಪೋಟಿ ನಡೆಸಲು ಸಾಧ್ಯ...!
ಅಜ್ಮಲ್ ಉಜಿರೆ