ಶೈಕ್ಷಣಿಕ ಕ್ಷೇತ್ರದಲ್ಲಿ ಮುಸಲ್ಮಾನರ ಅಧಃಪತನ

  ಪರಲೋಕದ ಗುರಿ ಮತ್ತು ಸಂಪಾದನೆಯ ಉದ್ದೇಶದೊಂದಿಗೆ ಶಿಕ್ಷಕ, ವೈಧ್ಯ, ಅಧಿಕಾರಿ, ವಿಜ್ಞಾನಿಯಾಗುವ ಅವಕಾಶ ಇಸ್ಲಾಂ ಕಲಿಸುವ ಹುಕೂಕಲ್ ಇಬಾದದಲ್ಲಿದೆ.ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ಕುರಿತ ಜ್ಞಾನ  ಪ್ರಸ್ತುತ ಬಲು ದೊಡ್ಡ ಅನಿವಾರ್ಯತೆ. ಶಿಕ್ಷಣ ಬೇಕು ಎನ್ನುವ ಬೇಡಿಕೆಯನ್ನು ಅರಿತು ಎರಡು ದಶಕಗಳ ಕಾಲ ಈ ಸಮುದಾಯ ನಡೆಸಿದ ಪ್ರಯತ್ನ ಇಂದು ಫಲ ಕೊಡುವುದರ ಜೊತೆ ಹಲವಾರು ಬೆದರಿಕೆಯನ್ನು ಎದುರಿಸುತ್ತಿದೆ.ಈ ಬೆದರಿಕೆಗೆಳಲ್ಲಿ ಅತೀ ಹೆಚ್ಚು ಆತಂಕ ಎದುರಿಸುತ್ತಿರುವುದು ಇಸ್ಲಾಮಿನ ವಿಶ್ವಾಸ, ಸಂಪ್ರದಾಯ ಮತ್ತು ಮೌಲ್ಯವಾಗಳಾಗಿದೆ. ಆರಂಭದಲ್ಲಿ ನಾವು ದಾರ್ಮಿಕ ಮತ್ತು ಲೌಕಿಕ ಶಿಕ್ಷಣ ಬೇರೆ ಬೇರೆ ಎನ್ನುವ ಗೊಂದಲದಲ್ಲಿದ್ದೆವು. ಈಗ ದಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಒಂದೇ ಸೂರಿನಡಿಯಲ್ಲಿ ನೀಡುವ ಪದ್ದತಿಗಳು ಬೆಳೆಯ ತೊಡಗಿದೆ. ಈ ಪದ್ದತಿಗಳಲ್ಲೂ ಸಮಾನ ನೀತಿ ಮತ್ತು ಶಿಸ್ತುಬದ್ದತೆಯಿಲ್ಲ. ಇಂತಹ ಆಲೋಚನೆಗಳನ್ನು ಜಾತ್ಯಾತೀತಕ್ಕೆ ಆತಂಕ ಮತ್ತು ಆಶಯಗಳಿಗೆ ಮಾರಕ ಎನ್ನುವ ತರ್ಕಗಳಿವೆ. ಮಹಿಳಾ ಶಿಕ್ಷಣದಲ್ಲಿ ಇದು ಹೊಸ ಹೊಸ ಪಠ್ಯಕ್ರಮ ಮತ್ತು ಬಿರುದುಗಳ ಮೂಲಕ ನಮ್ಮನ್ನು ಮತ್ತಷ್ಟೂ ಕಂಗೆಡಿಸುತ್ತಿದೆ. ಜಗತ್ತಿನ ಯಾವುದೇ ಸಮುದಾಯದಲ್ಲೂ ಇಷ್ಟು ವೈವಿಧ್ಯತೆ, ವೈರುದ್ಯ ಮತ್ತು ವಿಚಿತ್ರವಾದ ಶಿಕ್ಷಣ ವ್ಯವಸ್ಥೆಗಳು ಇರಲು ಸಾಧ್ಯವಿಲ್ಲ.

ಒಂದು ಸಮುದಾಯ, ಒಂದು ಶಿಕ್ಷಣ ಪದ್ದತಿ ನಮ್ಮಲ್ಲಿ ಬೇಕಾಗಿತ್ತು. ಕ್ರೈಸ್ತ ಮಿಷನರಿಗಳದ್ದು ನೂರು ವರ್ಷ ಹಳೆಯದಾದ ಪದ್ದತಿ, ಅದು ಇಂದಿಗೂ ಅನ್ವಯಿಸಲ್ಪಡುತ್ತದೆ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲ್ಪಡುತ್ತದೆ. ಹೆಣ್ಣಾಗಲೀ-ಗಂಡಾಗಲೀ ಎಲ್ಲರಿಗೂ ಒಂದು ನೀತಿ ಮತ್ತು ಪದ್ದತಿ ಅಲ್ಲಿದೆ. ಕ್ರೈಸ್ತರಲ್ಲಿ ಬಡವ ಶ್ರೀಮಂತರಿಗೆ ಒಂದೇ ಆಯ್ಕೆ. ಅವರು  ಶಿಕ್ಷಣವನ್ನು ನರ್ಸರಿ ಯಿಂದ ಮೆಡಿಕಲ್ ಕಾಲೇಜಿನ ವರೆಗೂ ಶಿಸ್ತುಬದ್ದವಾಗಿ ಮುನ್ನಡುಸುತ್ತಾರೆ. ಮುಸ್ಲಿಮರಲ್ಲಿ ಆಯ್ಕೆಗಳ ಗೊಂದಲ ಮತ್ತು ಅನಿವಾರ್ಯತೆಗಳಿವೆ. 

ಒಂದು ಮುಸ್ಲಿಂ ಕುಟುಂಬದ ಕಥೆ ಹೀಗಿದೆ. ಆ ಕುಟುಂಬದಲ್ಲಿ ಸಹೋದರನ ಮಗಳು ಕ್ರೈಸ್ತ ಮಿಷನರಿಗಳ ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋಗುತ್ತಾಳೆ. ಸಂಪಾದನೆಯಲ್ಲಿ ಕಡಿಮೆ ಇರುವ ಇನ್ನೊಬ್ಬ ಸಹೋದರನ ಮಗಳು ಸರಕಾರಿ ಶಾಲೆಗೆ ಹೋಗುತ್ತಾಳೆ. ಸಹೋದರಿಯ ಪರಿ ಕೂಲಿ ಕಾರ್ಮಿಕ ಆದ ಕಾರಣ ಆತನ ಮಗ ಪಲ್ಲಿ ದರ್ಸ್ ನಲ್ಲಿ ಕಲಿಯುತ್ತಾನೆ. ಅದೇ ಕುಟುಂಬದ ಇನ್ನೊಂದು ಮಗು ಸಮನ್ವಯ ಶಿಕ್ಷಣ ಸಂಸ್ಥೆ ಇಸ್ಲಾಮಿಕ್ ಇಂಟರ್ ನ್ಯಾಶನಲ್ ಸ್ಕೂಲ್ ಗೆ ಹೋಗುತ್ತಾನೆ. ಇನ್ನೊಂದು ಮಗು ಮಸೀದಿಯ ಮದರಸಕ್ಕೆ ಹೋಗಿ ಮುಸ್ಲಿಂ ಮ್ಯಾನೇಜ್ ಮೆಂಟ್ ನ ಶಿಕ್ಷಣ ಸಂಸ್ಥೆಗೆ ಹೋಗುತ್ತದೆ. ಒಬ್ಬಳು ಯುವತಿ ಎಸ್.ಎಸ್.ಎಲ್.ಸಿ ಮುಗಿಸಿ 590 ಅಂಕ ಪಡೆದಿದ್ದರೂ ಉಸ್ತಾದರು ನಡೆಸುವ ಕಾಮರ್ಸ್ ಮತ್ತು ಶರೀಯತ್ತ್ ಸೆಂಟರ್ ಗೆ ಹೋಗುತ್ತದೆ. ಇನ್ನೊಬ್ಬಳು ಯುವತಿ ಬಿರುದು ಸಿಗುವ ಶರೀಯತ್ತ್ ಮಾತ್ರವೇ ಕಲಿಯಲು ಹೋಗುತ್ತಾಳೆ. ಮತ್ತೊಬ್ಬಾಕೆಯ ಹೆತ್ತವರು ನನ್ನ ಮಗಳು ಡಾಕ್ಟರ್ ಕಲಿಯುವುದು ಎಂದು ಅಭಿಮಾನದಿಂದ ಹೇಳಲು ಸಾಧ್ಯವಾಗುವ ಪಾರಮೆಡಿಕಲ್ ಕೋರ್ಸ್ ಗೆ ಹೋಗುತ್ತಾಳೆ. 40% ಯುವಕ-ಯುವತಿಯರು ಸ್ವತಂತ್ರ ಆಯ್ಕೆಗಳ ಮೂಲಕ ಪಿಯುಸಿ ಸಯನ್ಸ್, ಕಾಮರ್ಸ್,ಆರ್ಟ್ಸ್ , ಡಿಪ್ಲೋಮಾ ಗೆ ಸೇರುತ್ತಾರೆ. ವಿಶೇಷವಾಗಿ ಯತೀಂ ಖಾನ ಶಾಲೆಗಳು, ಸ್ವತಂತ್ರ ಯುನಿವರ್ಸಿಟಿ ಕೋರ್ಸ್ ಗಳ ಪಧವಿಗಳು, ಈಗ ಮಕ್ಕಳನ್ನೂ ಬಿಡದೇ ಆಕರ್ಶಿಸುತ್ತಿರುವ ಜಾಹೀರಾತಿನಲ್ಲಿ ಆಧುನಿಕ ಕಾಣುವ ಹೊಸ ಹೊಸ ಸ್ಕೂಲ್ ಗಳು ಈ ಸಮುದಾಯದಲ್ಲಿದೆ. ವಿಭಿನ್ನವಾದ ಪದ್ದತಿ, ನೀತಿ, ಸಿಲೆಬೆಸ್, ಭಾಷೆ, ಪಧವಿಯಲ್ಲಿ ಈ ಸಮುದಾಯವನ್ನು ಶಿಕ್ಷಣ ಆಯ್ಕೆಯಲ್ಲಿ ಹುಚ್ಚರ ಸಂತೆಯಾಗಿಸಿರುವ ಈ ವ್ಯವಸ್ಥೆಯಲ್ಲಿ ನಾವೆಲ್ಲರೂ ಬಲಿಪಶುಗಳು.

ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಪ್ರಗತಿ ಇದೆ ಎಂದು ಅಭಿಮಾನ ಪಡುತ್ತೇವೆ. ಆದರೆ, ಸಮುದಾಯದ ಶಿಕ್ಷಣ ವ್ಯವಸ್ಥೆಯಲ್ಲಿ ಚೌಕಟ್ಟು, ಶಿಸ್ತು, ಸ್ಪಷ್ಟತೆ ಮತ್ತು ಶಿಕ್ಷಣದ ಕುರಿತು ಶಿಕ್ಷಣ ಇಲ್ಲದೇ ಒಟ್ಟಾರೆ ಸಮುದಾಯ ಗೊಂದಲದಲ್ಲಿದೆ. ಈಗಿನ ಶಿಕ್ಷಣ ಪ್ರಗತಿಯ ಮಾನದಂಡವು ಸೀಮಿತ ಸಾಧನೆಯ ವರದಿಗಳ ಆದಾರದಲ್ಲಿ ಸಿನಿಮೀಯ ರೀತಿಯಲ್ಲಿ ನಮ್ಮಲ್ಲಿ ರೊಮಾಂಚನ ಉಂಟು ಮಾಡುತ್ತಿದೆ.  ಸಮುದಾಯದಲ್ಲಿ ಶಿಕ್ಷಣದ ಪ್ರಗತಿಯ ಸಮಗ್ರ ದತ್ತಾಂಶವನ್ನು ಅವಲೋಕಿಸುವ ಯಾವುದೇ ಕೇಂದ್ರೀಕೃತ ಪದ್ದತಿ ಇಲ್ಲದ ಕಾರಣ ನಮ್ಮಲ್ಲಿ ಒಂದು ಎರಡು ಸಾಧನೆಗಳು ಬರ್ಜರಿ ಪ್ರಚಾರದಲ್ಲಿ ಭೀಗುವಂತೆ ಮಾಡುತ್ತದೆ. ಒಂದೆಡೆ ಸಾವಿರಾರು ವಿದ್ಯಾರ್ಥಿಗಳು ಡ್ರಾಪೌಟ್ ಆಗುತ್ತಿರುವುದು, ಅದರಲ್ಲೂ ಯುವಕರು ಪಿಯುಸಿಯಲ್ಲೇ ಅತೀ ಹೆಚ್ಚು ಶಿಕ್ಷಣ ಮೊಟಕುಗೊಳಿಸುವುದು, ಅನುತ್ತೀರ್ಣರಾಗುತ್ತಿರುವುದು, ಸಿಕ್ಕಿದ ಕೋರ್ಸ್ ಗಳನ್ನು  ಆಯ್ಕೆ ಮಾಡಿ ಪರಿತಪಿಸುವುದು ಇರುವಂತೆಯೇ, ಯುವತಿಯರ ಶಿಕ್ಷಣ ಆಯ್ಕೆಗಳು, ಸ್ವಾತಂತ್ರ ಹಾಗೂ ವೃತ್ತಿ ಆಸಕ್ತಿಯು ದಾರ್ಮಿಕ ನಂಭಿಕೆಯೇ ಬದುಕು ಎನ್ನುವ ಸಮುದಾಯದ ವಿಶ್ವಾಸಕ್ಕೆ ಅಪಾಯ ಉಂಟು ಮಾಡುವಂತಿದೆ. ಶಿಕ್ಷಣ ಪಡೆಯಬೇಕು ಎನ್ನುವ ಕ್ರಾಂತಿ ಆರಂಭವಾದ ಬಿರುಸಿನಲ್ಲಿ ಹೊರಟು ದಶಕಗಳ ನಂತರದ ಸಾಧನೆ ಏನು ಎಂದು ಮೌಲ್ಯಮಾಪನ ಮಾಡುವಾಗ ಮೌಲ್ಯ ಮತ್ತು ನೈತಿಕತೆ ಕಳೆದುಕೊಂಡ, ಇಸ್ಲಾಮಿಕ್ ಸಂಪ್ರದಾಯ ಮತ್ತು ಶಿಸ್ತು ಇಲ್ಲದ, ದಾಂಪತ್ಯ ಜೀವನ ಹಾಗೂ ಕೌಟುಂಬಿಕ ಜೀವನ ಬಿರುಕು ಬಿದ್ದ ಸಮಾಜದ ಬೆಳವಣಿಗೆಯು ವೇಗವಾಗುತ್ತಿದೆ ಎನ್ನುವ ಆತಂಕ ಹೆಚ್ಚುತ್ತಿದೆ.  ಹಿರಿಯ ತಲೆಮಾರಿನಲ್ಲಿದ್ದ ಸಾಮಾಜಿಕ ಕಾಳಜಿ ಮತ್ತು ಸ್ಪಂದನೆ ಈಗ ಸಮುದಾಯವನ್ನು ಪ್ರತಿನಿಧಿಸದೇ, ಸಂಘ ಸಂಸ್ಥೆ ಮತ್ತು ಸಂಘಟನೆಗಳ ಸ್ಪರ್ಧೆಯಾಗಿರುವುದು ಕಾಣುತ್ತೇವೆ. ಇದು ಸಮುದಾಯದ ಸರ್ವಾಂಗೀಣ ಪ್ರಗತಿಗೆ ಬೃಹತ್ತ್ ಯೋಜನೆಗಳಾಗದೆ, ಸಣ್ಣ ಸಣ್ಣ ಸೇವೆಗಳು ಬೃಹತ್ತ್ ಪ್ರಚಾರದಿಂದ ಪುಳಕಗೊಳಿಸುವಂತಿದೆ. ಮೊದಲು ಶ್ರೀಮಂತರು ಸಮುದಾಯಕ್ಕೆ ಕೊಡುಗೈ ದಾನಿಗಳಾಗಿದ್ದರು, ಈಗ ಅವರ ಮಕ್ಕಳು ಕೈಗೆ ಸಿಗುವುದೇ ಕಷ್ಟ ಎನ್ನುವಂತಿದೆ.

ನಮ್ಮ ಹಿರಿಯರಲ್ಲಿ ಸಯನ್ಸ್, ಮ್ಯಾಥ್ಸ್, ಫಿಸಿಕ್ಸ್, ಬಯೋಕಜಿ, ಎಕಾನಮಿ, ಹಿಸ್ಟರಿ, ಕೆಮಸ್ಟ್ರೀ, ಅಕೌಂಟ್ಸ್ ಮುಂತಾದ ಸಬ್ಜೆಕ್ಟ್ ಗಳ ಶಿಕ್ಷಣ ಕಡಿಮೆ ಇರಬಹುದು, ಆದರೆ, ಅವರಲ್ಲಿ ದಾಂಪತ್ಯ ಜೀವನ, ಕುಟುಂಬ ಜೀವನ, ಸಾಮಾಜಿಕ ಜೀವನ, ಸೌಹಾರ್ಧ ಜೀವನ, ತಖ್ವಾ, ಕಾಳಜಿ ಮತ್ತು ದೇವನ ಭಯ ಹೆಚ್ಚು ಇದ್ದವು. ಆ ಕಾಲದಲ್ಲಿ ನಮಾಝ್ ಮಾಡುವವರ ಸಂಖ್ಯೆ ಕಡಿಮೆ ಇದ್ದರೂ ಅವರಲ್ಲಿ ನ್ಯಾಯ ಮತ್ತು ನೈತಿಕತೆಯ ಬಗ್ಗೆ ಅಪಾರ ಶ್ರದ್ಧೆ ಇದ್ದವು. ಹಿರಿಯ ತಲೆಮಾರಿನ ಮಹಿಳೆಯರಿಗೆ ಮಾನವು ಮುತ್ತಿನಂತೆ, ನಾಚಿಕೆಯು ಚಿಪ್ಪಿನಂತೆ ಇದ್ದವು. ವರ್ಷಕ್ಕೆ ಎರಡು ಭಾರಿ ಮಾತ್ರವೇ ಉತ್ತಮ ಬಟ್ಟೆ, ಕೋಳಿ ಪದಾರ್ಥ ತಿಂದು ಉಳಿದ ದಿನಗಳು ಉಪ್ಪಿನ ಕಾಯಿ ಗಂಜಿ ಕುಡಿಯುತ್ತಾ ಬದುಕಿದ್ದರೂ ಅವರು ಹಿರಿಯರನ್ನು ಗೌರವಿಸುತ್ತಿದ್ದರು ಮತ್ತು ಮಾವ-ಚಿಕ್ಕಪ್ಪ ಎನ್ನುವವರೆಗೂ ಭಯ ಇದ್ದವು. ಸರಳವಾದ ಮದುವೆ, ಮುಂಜಿ, ಮೌಲೂದ್, ಮಾಲೆಗಳ ಸಂಪ್ರದಾಯಗಳಿಂದ ಆತ್ಮ ತೃಪ್ತಿ ಇದ್ದ ಸಮಾಜವಾಗಿತ್ತು. 

ಶಿಕ್ಷಣ ಬೇಕು ಎನ್ನುವ ಆಂದೋಲನ ಹುಟ್ಟಿದಾಗ ಈ ಸಮುದಾಯ ಯುವತಿಯರಿಗೆ ಇಷ್ಟು, ಯುವಕರಿಗೆ ಇಷ್ಟು ಎನ್ನುವ ತೀರ್ಮಾನದಲ್ಲಿ ಚರ್ಚಿಸಲು ಆರಂಭಿಸಿತು. ಎರಡು ದಶಕದ ಹಿಂದೆ ಯುವತಿಯರಿಗೆ ಕಡಿಮೆ, ಯುವಕರಿಗೆ ಹೆಚ್ಚು ಎಂದು ಕತ್ತಿ ಮಸೆದ ಸಮುದಾಯ ಈಗ ಯುವತಿಯರು ಹೆಚ್ಚು, ಯುವಕರು ಕಡಿಮೆ ಶಿಕ್ಷಣ ಪಡೆಯುವಾಗ ನಮ್ಮ ಯುವತಿಯರಿಗೆ ಶಹಬ್ಬಾಷ್ ಎನ್ನುತ್ತಿದೆ. ಇದೇ ಶಹಬ್ಬಾಷ್ ಎಂದು ಚಪ್ಪಾಳೆ ತಟ್ಟಿದವ ತನ್ನ ಪಿಯುಸಿ ಕಲಿತ ಮಗನಿಗೆ  ಎಂಎಸ್ಸಿ ಮಾಡಿದ ಸೊಸೆಯನ್ನು ತಂದು ಆಕೆಯೊಂದಿಗೆ ಇನ್ನು ನೀನು ನನ್ನ ಮಗನ ಸೇವೆ ಮಾಡು ಎನ್ನುವುದು ಕಾಣುತ್ತಿದ್ದೇವೆ.  ಆ ಯುವತಿಗೆ ದಾಂಪತ್ಯ ಜೀವನದ ಮಹತ್ವ ಮತ್ತು ಪುಣ್ಯಗಳ ಕುರಿತು ಭಯ ಇದ್ದರೆ ಆಕೆ ಖಂಡಿತಾ ಈ ಸಮುದಾಯಕ್ಕೆ ಆಸ್ತಿಯಾಗುತ್ತಾಳೆ. ಆಕೆ ತನ್ನ ಸಂತಾನವನ್ನು ಶ್ರೇಷ್ಠ ಪೀಳಿಗೆ ಮಾಡಲೂ ಬಹುದು.

ಒಬ್ಬ ಅದ್ಯಾಪಕರು ನನ್ನಲ್ಲಿ ಕೇಳಿದರು, ನಿಮಗೆ ಮದರಸದಲ್ಲಿ ಮೌಲ್ಯಾದಾರಿತ ಶಿಕ್ಷಣ ಮತ್ತು ಕಾಲೇಜಿನಲ್ಲಿ ವೃತಿ ಆದಾರಿತ ಶಿಕ್ಷಣ ಸಿಗುತ್ತಿದೆ. ಹೀಗಿದ್ದೂ ನಿಮ್ಮ ಯುವಕ-ಯುವತಿಯರಲ್ಲಿ ಶಿಸ್ತು, ಗೌರವ ಮತ್ತು ಮೌಲ್ಯಗಳು ಕಡಿಮೆ ಕಾಣುತ್ತಿದೆ ಹಾಗೇ ಸರಕಾರಿ ಮತ್ತು ಉನ್ನತ ವೃತ್ತಿಯಲ್ಲಿ ಇರುವವರು ಕಡಿಮೆ ಇದ್ದಾರೆ ಏಕೆ ಎಂದು ? ನಾವು ಆತ್ಮಾವಲೋಕನ ಮಾಡುವ ಪ್ರಶ್ನೆಯಿದು. ಶಿಕ್ಷಣ ಇಲ್ಲದಾಗ ನಮ್ಮ ಯುವತಿಯರು ಅಪ್ಪ-ಅಮ್ಮನ ಮನೆತನದ  ಸಂಪ್ರದಾಯಕ್ಕೆ ತಲೆಬಾಗಿಸಿ ಮದುವೆ, ಆಚರಣೆ ಮಾಡಿ ಶಿಸ್ತಿನಲ್ಲಿ ಇದ್ದಳು. ಶಿಕ್ಷಣ ಕೊಟ್ಟ ಸಮುದಾಯದ ಮದುವೆ, ಬರ್ತ್ ಡೇ, ಮನರಂಜನೆ, ವಿನೋದ, ಜೀವನ ಶೈಲಿ, ವಸ್ತ್ರವಿನ್ಯಾಸ ಮತ್ತು ಆಕರ್ಶನೆಯು ಸಂಪೂರ್ಣ ಶೈತಾನಿಯತ್ತ್ ನಿಂದ ಕೂಡಿದೆ. ಹಾಗಾದರೆ ಶಿಕ್ಷಣ ಕೊಟ್ಟದ್ದು ತಪ್ಪೆ ? ಸ್ವತಂತ್ರ ಕೊಟ್ಟದ್ದು ತಪ್ಪೆ ? ಯುವಕರ ಶಿಕ್ಷಣಕ್ಕೆ ಮಹತ್ವ ಕೊಡದೇ ಇರುವುದು ತಪ್ಪೆ ? ಪ್ರತೀ ಶಾಲಾ-ಕಾಲೇಜು ಮತ್ತು ಬೀದಿಯಲ್ಲೂ ಮುಸ್ಲಿಂ ವಿದ್ಯಾರ್ಥಿಗಳ, ಯುವಪೀಳಿಗೆಯ ಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ಭವಿಷ್ಯ ಭಯಾನಕವೇ ಆಗಿದೆ.

ಎರಡು ದಶಕದಿಂದ ಶಿಕ್ಷಣ ಕ್ರಾಂತಿ ಮಾಡಿದ ಸಮುದಾಯ ಇತ್ತೀಚೆಗೆ ಸ್ಕಾರ್ಪ್ ಪ್ರಕರಣ ಆದಾಗ ನಾವು ಸಯನ್ಸ್ ಕಾಲೇಜು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿತು. ನಮ್ಮ ದುರಂತ ಏನಂದರೆ, ಸಯನ್ಸ್ ಕಾಲೇಜು ಮಾಡಿದ ಒಂದು ಸಂಸ್ಥೆಗೆ ಒಬ್ಬರೇ ಒಬ್ಬರು ಫಿಸಿಕ್ಸ್, ಕೆಮೆಸ್ಟ್ರೀ, ಬಯೋಲಜಿ ಎಕ್ಸ್ ಪರ್ಟ್ ಟೀಚರ್ ಸಿಕ್ಕಿಲ್ಲ. ಪ್ರೊಫೇಸರ್ ಸಿಕ್ಕಿಲ್ಲ. ಹಾಗಾದರೆ 20 ವರ್ಷ ಕಲಿತವರು ಎಲಿದ್ದಾರೆ ? ಏನು ಕಲಿತರು ? ಅದನ್ನು ತಿಳಿಯಲು ಪುತ್ತೂರು ಕಮ್ಯೂನಿಟಿ ಸೆಂಟರ್ ಗೆ ಹೋಗಬೇಕು. ಇತ್ತೀಚೆಗೆ ಅಲ್ಲಿ ಒಂದು ಅಧ್ಯಯನ ಮಾಡಲಾಯಿತು, 13 ಬಿಎಡ್ಡ್ ಕಲಿತ ಯುವತಿಯರು ಮನೆಯಲ್ಲೇ ಇದ್ದಾರೆ, ಅವರು ಮದುವೆಯಾದದ್ದು 8ನೇ ರಿಂದ ದ್ವಿತೀಯ ಪಿಯುಸಿ ಮಾಡಿದ ಯುವಕರನ್ನು. ಅವರಿಗೆ ಈ ಬಿಎಡ್ಡ್ ಎಂದರೆ ಏನು ಗೊತ್ತು.  ಆ ಯುವತಿಯರನ್ನು ಅವರಲ್ಲಿ ಹೆಚ್ಚಿನವರು ವೃತ್ತಿ ಹೋದದಂತೆ ತಡೆದು ಮನೆಯಲ್ಲೇ ಇರುವಂತೆ ಹೇಳಿದ್ದಾರೆ. ಇಬ್ಬರು ಸಣ್ಣ ಮಗು ಇದೆ ಎಂದು ವೃತ್ತಿಗೆ ಹೋಗುವುದಿಲ್ಲ. ಒಬ್ಬಾಕೆಗೆ ಪತಿಯಲ್ಲಿ ಒಲಿಸುವ ಸಾಮರ್ಥ್ಯ ಇದೆ ಆದರೆ ಅತ್ತೆಯು ಅವಕಾಶ ನೀಡುವುದಿಲ್ಲ. ಈ ಬೆದರಿಕೆಯನ್ನು ಇಟ್ಟುಕೊಂಡು ನಮ್ಮ ಯುವತಿಯರು  ಎಂಎಸ್ಸ್ ಫಿಸಿಕ್ಸ್, ಪಿಎಚ್ ಡಿ ಮಾಡಿ ವೃತ್ತಿ ಮಾಡುತ್ತಾರೆ ಎನ್ನುವ ಕನಸು ಕಂಡರೂ, ಇಂತಹ ಯುವತಿಯರು ಸೌದಿ, ದುಬಾಯಿಗೆ ಹಾರಿ ಹೋಗುತ್ತಾರೆ. ಯುವಕರನ್ನು ಪ್ರೊಪೇಸರ್ ಮಾಡುವ ಯೋಜಯನ್ನು ಕಮ್ಯೂನಿಟಿ ಸೆಂಟರ್ ಮಾಡಿದಾಗ ಅದಕ್ಕೆ ಸಿಕ್ಕಿದ ಬೆಂಬಲ ಸಾವಿರದಲ್ಲಿ ಇಬ್ಬರು ಯುವಕರದು ಮಾತ್ರ.

ಶಿಕ್ಷಣದ ಕುರಿತು ಜ್ಞಾನ ಈ ಸಮುದಾಯದ ಬಲುದೊಡ್ಡ ಬೇಡಿಕೆ ಎನ್ನುವ ಮುಖ್ಯ ವಿಷಯದಲ್ಲಿ ಪ್ರಮುಖವಾಗಿ ನಾವು ಗಮನಿಸಬೇಕಾದ್ದು ನಾವು ಶಿಕ್ಷಣ ಬೇಕು ಎನ್ನುವುದನ್ನು ಅರಿತಾಗ ಅದು ಏಕೆ ಬೇಕು ಮತ್ತು ಹೇಗೆ ಬೇಕು ಎನ್ನುವ ಕೇಂದ್ರೀಕೃತ ಆಲೋಚನೆಗಳನ್ನು ರೂಪಿಸಿಲ್ಲ. ಸಮುದಾಯ ಎನ್ನುವುದು ವ್ಯಕ್ತಿ, ಸಂಘಟನೆ ಮತ್ತು ಸಂಸ್ಥೆಗಳನ್ನು ಮೀರಿ ನಿಂತು, ಅದೊಂದು ಸಮೂಹವಾಗಿ ಆ ಸಮೂಹದ ದಾರ್ಮಿಕ, ಸಾಮಾಜಿಕ, ಶೈಕ್ಷಣಿಕ , ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಬೇಡಿಕೆಯಲ್ಲಿನ ಅನಿವಾರ್ಯತೆಯನ್ನು ಅರಿತುಕೊಂಡು ಆ ಸಮುದಾಯ ಚಿಂತಕರು, ತಜ್ಞರು, ಬುದ್ದಿಜೀವಿಗಳು, ಉಲೆಮಾಗಳು, ಶ್ರೀಮಂತರು ಒಂದೆಡೆ ಕುಳಿತು ಚರ್ಚಿಸಿ ಅದಕ್ಕೊಂದು ಆಲೋಚನೆಯನ್ನು ರೂಪಿಸಿ ಅದು ರಚನಾತ್ಮಕ ಮತ್ತು ದೂರದೃಷ್ಠಿಯಿಂದ ಮಾಡಿದ್ದರೆ ನಮಗೆ ಈಗ ಈ ಸಮಸ್ಯೆಗಳೇ ಸೃಷ್ಠಿಯಾಗುತ್ತಿರಲಿಲ್ಲ.

ಮುಸ್ಲಿಮರಿಗೆ ಶಿಕ್ಷಣ ಕೊಡುವ ಮೊದಲು ಮುಸ್ಲಿಮನಿಗೆ ಯಾವ ಶಿಕ್ಷಣ ಅಗತ್ಯ ಎನ್ನುವುದನ್ನು ನಾವು ಬಹಳ ಪ್ರಾಮುಖ್ಯ ವಿಷಯವಾಗಿಸಬೇಕು. ಇಸ್ಲಾಮಿನ ಜ್ಞಾನ ಕೊಡುವ, ಜಗತ್ತಿನ ವಿಜ್ಞಾನ, ಸಂಶೋಧನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕಿತ್ತು. ಇಸ್ಲಾಮಿನ ಜ್ಞಾನ ಎನ್ನುವಾಗ ನಮಾಝ್, ಝಕಾತ್, ಉಪವಾಸ, ಕುಲಿ, ವಝೂಹ್ ಗಳ ಬಗ್ಗೆ ಮಾತ್ರವಲ್ಲ, ಅದು ಫಿಸಿಕ್ಸ್ , ಕೆಮೆಸ್ಟ್ರೀ, ಬಯೋಲಜಿ, ಸೋಶಿಯೋಲಜಿ, ಎಕಾನಮಿಕ್ಸ್ , ಮೆಥಮೆಟಿಕ್ಸ್, ಹಿಸ್ಟರಿ, ಟೆಕ್ನಿಕಲ್ ಸಯನ್ಸ್ ನ ಜ್ಞಾನ ಪಡೆದು ಅದನ್ನು ಭೂಮಿಯ ಬದುಕು, ಪರಲೋಕ ಬದುಕಿಗೆ ಪ್ರಯೋಜನ ಆಗುವಂತೆ ಸಮೂಹಕ್ಕೆ ತಿಳುವಳಿಕೆ ಮೂಡಿಸಬೇಕಿತ್ತು.

ಕಮ್ಯೂನಿಟಿ ಸೆಂಟರ್ ನಲ್ಲಿ ವಿದ್ಯಾರ್ಥಿಗಳಲ್ಲಿ ಒಂದು ಪ್ರಶ್ನೆ ಕೇಳಲಾಗುತ್ತದೆ. ನಿಮ್ಮ ಬದುಕಿನ ಗುರಿ ಮತ್ತು ಉದ್ದೇಶ ಏನು ಎಂದು ? ಅವರು ಬೇರೆ ಬೇರೆ ಉತ್ತರ ಕೊಡುತ್ತಾರೆ. ಅನಂತರ ಕೌನ್ಸಿಲರ್ ಗಳು ಅವರಲ್ಲಿ ಹೇಳುತ್ತಾರೆ, ನಿಮ್ಮ ಬದುಕಿನ ಗುರಿ ಪರಲೋಕವಾಗಿದೆ ಮತ್ತು ಈ ಭೂಮಿಯ ಬದುಕು ಅದಕ್ಕಿರುವ ತಯಾರಿಯಾಗಿದೆ. ಅದಕ್ಕೆ ನಿಮಗೆ ಸಿರಾತಲ್ ಮುಸ್ತಕೀಮ್ ಎಂಬ ದಾರಿ ಇದೆ. ಆ ದಾರಿಯಲ್ಲಿ ನೀವು ಹುಕೂಕಲ್ಲಾಹ್ ಮತ್ತು ಹುಕೂಕಲ್ ಇಬಾದದ ಮೂಲಕ ಇಹಲೋಕವನ್ನು ಮತ್ತು ಪರಲೋಕವನ್ನೂ ಸಂಪಾದಿಸಬಹುದು.  ಹುಕೂಕಲ್ಲಾಹ್ ಎಂದರೆ ನಿಮಗೂ ಅಲ್ಲಾಹನಿಗೂ ಇರುವ ಬಾದ್ಯತೆಗಳಾಗಿದೆ. ಅದು ನಮಾಝ್, ಝಿಕ್ರ್, ಉಪವಾಸ, ಹಜ್ಜ್, ಝಕಾತ್ ಆಗಿದೆ. ಹಾಗೇ ಹುಕೂಕಲ್ ಇಬಾದ ಏನಂದರೆ ಅದು ನಿಮಗೂ ಅಲ್ಲಾಹನ ಸೃಷ್ಠಿಗಳಿಗೂ ಇರುವ ಬಾದ್ಯತೆಗಳಾಗಿದೆ. ನೀವು ಅಲ್ಲಾಹನ ಸೃಷ್ಠಿಯಾದ ಪ್ರಪಂಚದ ಅಭಿವೃದ್ದಿಗೆ, ಮಾನವ ಕಲ್ಯಾಣಕ್ಕೆ, ಪ್ರಾಣಿ-ಪ್ರಕೃತಿಯ ಸುರಕ್ಷತೆಗೆ ಮಾಡುವ ಎಲ್ಲಾ ಕರ್ಮಗಳು ಅಲ್ಲಾಹನ ತೃಪ್ತಿ ಉದ್ದೇಶಿಸಿ ಮಾಡುವುದಾದರೆ ಅದು ನಿಮಗೆ ಪರಲೋಕ ಸಂಪಾದನೆಯಾಗಿದೆ. ಉದಾಹರಣೆಗೆ ಒಂದು ಗಿಡವನ್ನು ನೆಟ್ಟು ಪ್ರಕೃತಿಯನ್ನು ಸಂರಕ್ಷಿಸುವುದು, ಕೃಷಿ ಮಾಡಿ ಆಹಾರ ಉತ್ಪತ್ತಿ ಮಾಡುವುದು, ಹಕ್ಕಿ-ಪ್ರಾಣಿಗಳಿಗೆ ನೀರು ಉಣಿಸುವುದು, ಅದ್ಯಾಕರಾಗಿ ಪೀಳಿಗೆಗೆ ಜ್ಞಾನ -ಸುಜ್ಞಾನ ದಾರೆಯೆರೆಯುವುದು. ವೈಧ್ಯರಾಗಿ ರೋಗಿಗಳ ಸುಶ್ರೂಷೆ ಮಾಡುವುದು, ವಿಜ್ಞಾನಯಾಗಿ ಜಗತ್ತಿನ ಮನುಷ್ಯನಿಗೆ ಪ್ರಯೋಜನವಾಗುವ ಸಂಶೋಧನೆ ಮತ್ತು ಅವಿಷ್ಕಾರ ಮಾಡುವುದು. ತಂತ್ರಜ್ಞಾನ ನಿರ್ಮಿಸುವುದು. ತತ್ವಜ್ಞಾನಿಗಳಾಗಿ ಮಾನವ ಕಲ್ಯಾಣಕ್ಕೆ ಶ್ರಮಿಸುವುದು. ಮಾನವನ ಮೆದುಳು, ಹೃದಯ ಮತ್ತು ಆತ್ಮ ಶುದ್ದಿಯ ಜ್ಞಾನವನ್ನು ಒದಗಿಸುವುದು. ಒಬ್ಬ ಹವಾಮಾನ ವಿಜ್ಞಾನಿಯಾಗಿ ಬೀಸಲಿರುವ ಬಿರುಗಾಳಿಯ ಬಗ್ಗೆ ಮುನ್ಸೂಚನೆ ನೀಡಿ ಜನರ ಜೀವ-ಸೊತ್ತುಗಳನ್ನು ಉಳಿಸುವುದು. ಒಬ್ಬ ಗಗನ ಯಾತ್ರಿಕನಾಗಿ ಆಕಾಶದಲ್ಲಿ ಸಂಶೋಧನೆ ಮಾಡುವುದು. ಭೂಮಿಯಲ್ಲಿ ಸಂಶೋಧನೆ ಮಾಡುವುದು. ಪೊಲೀಸ್ ಅಧಿಕಾರಿಯಾಗಿ ಕಾನೂನು ಸಂರಕ್ಷಿಸುವುದು, ನ್ಯಾಯಧೀಶರಾಗಿ ನ್ಯಾಯ-ನೀತಿ ಸ್ಥಾಪಿಸುವುದು. ಒಬ್ಬ ತಹಶಿಲ್ದಾರ್ ಅಥವಾ ಜಿಲ್ಲಾಧಿಕಾರಿಯಾಗಿ ನಾಡಿನ ಜನರ ಯೋಗಕ್ಷೇಮ ಮತ್ತು ಸುಂದರ ಬದುಕಿಗೆ ಯೋಜನೆ ರೂಪಿಸುವುದು. ಒಬ್ಬ ರಾಜಕಾರಣಿಯಾಗಿ ಜನರ ಹಕ್ಕುಗಳಿಗಾಗಿ ಹೋರಾಡುವುದು. ಇದೆಲ್ಲದೆ ಎಲ್ಲಾ ವೃತ್ತಿಯನ್ನೂ ಪ್ರಾಮಾಣಿಕನಾಗಿ ಮಾಡಿ ಅಲ್ಲಾಹನ ಅನುಗ್ರಹ ಎಂದು ತಿಳಿದು ತನ್ನ ಬದುಕು, ತನ್ನ ಕುಟುಂಬದ ಬದುಕು ನಿಭಾಯಿಸುವುದೂ ಕೂಡ ಹುಕೂಕಲ್ ಇಬಾದ ಆಗಿದೆ. ನಮ್ಮ ಜ್ಞಾನ- ಸಮಯ- ಸಂಪತ್ತು- ಆರೋಗ್ಯವನ್ನು ಅಲ್ಲಾಹನ ಇಷ್ಟಕ್ಕಾಗಿ ಮನುಷ್ಯನ ಒಳಿತು, ಅಭಿವೃದ್ದಿಗಾಗಿ ಸದುಪಯೋಗ ಪಡಿಸುವುದು ಹುಕೂಕಲ್ಲ್ ಇಬಾದ ಆಗಿದೆ. ನೀನು ಒಳ್ಳೆಯ ವೈದ್ಯನಾಗು, ಶಿಕ್ಷಕಿಯಾಗು, ಅಧಿಕಾರಿಯಾಗು, ನಾಯಕನಾಗು, ಬೋಧಕನಾಗು, ವಿಜ್ಞಾನಿಯಾಗು ಕೃಷಿಕನಾಗು, ಭೂವಿಜ್ಞಾನಿಯಾಗು, ಹವಾಮಾನ ತಂತ್ರಜ್ಞನಾಗು, ಪತ್ರಕರ್ತನಾಗು, ಸಾಹಿತಿ-ಲೇಖಕನಾಗು, ವಾಗ್ಮಿಯಾಗು, ವಾಹನ ಚಾಲಕನೇ ಆಗು ಇದೆಲ್ಲವೂ ಅಲ್ಲಾಹನ ದರ್ಮದಲ್ಲಿ ಸತ್ಕರ್ಮವಾಗಿದೆ.

ಈ ಸಮುದಾಯಕ್ಕೆ ನಾವೀಗ ಫಿಝಿಕ್ಸ್ ಮತ್ತು ಮೆಥಮೆಟಿಕ್ಸ್ ಕಲಿತು ವಿಜ್ಞಾನಿಯಾಗಿ ಮನುಷ್ಯನಿಗೆ ಉಪಕಾರವಾಗುವ ಸಂಶೋಧನೆ ಮಾಡಿದರೆ ಅದು ಸದಕತುಲ್ ಜಾರಿಯಾ ಆಗಿ ದುನಿಯಾವಿನಲ್ಲೂ ಹಣ, ಪ್ರತಿಷ್ಠೆ, ಪ್ರಸಿದ್ದಿಯ ಜೊತೆ ಅಲ್ಲಾಹನ ಬಳಿಯಲ್ಲೂ ಗೌರವ, ಮಾನ್ಯತೆ ಸಿಗುತ್ತದೆ ಎನ್ನುವುದನ್ನು ಈ ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ. ದರ್ಮ ಎಂದರೆ ಪ್ರಕೃತಿದತ್ತವಾಗಿ ಬದುಕುವುದು ಎಂದಾಗಿದೆ ಕುರ್ ಆನ್ ಹೇಳುವುದು. ಪ್ರಕೃತಿಯನ್ನು ಹಾಳು ಮಾಡುವ ಮಾಲಿಣ್ಯವನ್ನು ತಡೆಯುವುದು ಕೂಡ ಒಬ್ಬ ಮುಸ್ಲಿಮನ ಇಬಾದತ್ತ್ ಆಗಿದೆ. ಪ್ರವಾದಿ ಮುಹಮ್ಮದ್ (ಸ.ಅ)ರ ಒಂದು ಹದೀಸ್ ನಲ್ಲಿ ಚೀನಾದ ವರೆಗೆ ಹೋಗಿ  ಬೇಕಾದರೂ ಕಲಿಯಿರಿ ಎಂದು ಇದೆ ಎಂದು ಗುರುಗಳು ಹೇಳಿದ್ದನ್ನು ಕೇಳಿದ್ದೆ. ನಾನು ಪ್ರವಾದಿಯವರು ಹೇಳುವ ಆ ಕಾಲದಲ್ಲಿ ಚೈನಾ ಹೇಗುತ್ತು ಎಂದು ಅಧ್ಯಯನ ಮಾಡಿದೆ. ಜಗತ್ತಿನ ನಾಲ್ಕು ಬಲು ದೊಡ್ಡ ಸಂಶೋಧನೆಯನ್ನು ಆಗ ಚೀನ ಮಾಡಿತ್ತು. ನೆವಿಗೇಷನ್, ಗನ್ ಪೌಡರ್, ಪೇಪರ್, ಪೇಪರ್ ಮೆಷಿನ್ ಅದು ಆ ಸಮಯದಲ್ಲಿ ಕಂಡು ಹಿಡಿದಿತ್ತು. ಅಲ್ಲದೇ, ಚೈನಾದಲ್ಲಿ ಆಗ ಈಗ ನಾವು ಸಿವಿಲ್ ಸರ್ವಿಸ್ ಎಂದು ಹೇಳುವ ಎಕ್ಸಾಮ್ ಕೂಡ ಇದ್ದವು. ಆಡಳಿತಕ್ಕೆ ಆಯ್ಕೆ ಪ್ರಕ್ರಿಯೆ ಆಗಲೇ ಚೀನಾ ಆರಂಬಿಸಿತ್ತು. ಇದನ್ನು ಕಲಿಯಲು ಪ್ರವಾದಿ ಮುಹಮ್ಮದ್ (ಸ.ಅ)ರು ಹೇಳಿದ್ದು, ಅದಕ್ಕಾಗಿ ಚೈನಾದವರೆಗೆ ಹೋಗಿ ಎಂದುದ್ದು ಎಂದು ನನ್ನ ಅನಿಸಿಕೆ. ಕಾರಣ, ಈಗ ನಮ್ಮ ಆಲಿಮಿಗಳು ಕೂಡ ನಮ್ಮ ಮಕ್ಕಳು ಆಕ್ಸ್ ಪರ್ಡ್ ಗೆ ಹೋಗಬೇಕು, ವಿಜ್ಞಾನಿಯಾಗಬೇಕು, ಸಿವಿಲ್ ಸರ್ವಿಸ್ ಬರೆಯಬೇಕು ಎಂದು ಹೇಳುವುದು ಕೇಳುತ್ತಿದ್ದೇನೆ. 

 

ಪರಲೋಕಕ್ಕೆ ನಮ್ಮನ್ನು ತಯಾರುಗೊಳಿಸದ ಜ್ಞಾನ- ಶಿಕ್ಷಣ-ಕೌಶಲ್ಯಗಳು ಭೂಮಿಯಲ್ಲಿ ಬದುಕಿಸಬಹುದು ಹೊರತು ಪರಲೋಕದಲ್ಲಿ ಅದು ಲಾಭದಾಯಕವಲ್ಲ. ಹಾಗಾಗಿ ನಮ್ಮ ತಲೆಮಾರನ್ನು ಜೀವನೋಪಾಯ, ವೃತ್ತಿ, ಸಂಪಾದನೆಗಾಗಿ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಜೊತೆಗೆ ಪರಲೋಕವನ್ನು ಇಲ್ಲೇ ಸಂಪಾದಿಸಲು ಸಾಧ್ಯವಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಪ್ರೊತ್ಸಾಹಿಸಿದರೆ ನಮ್ಮಲ್ಲಿ ಮೌಲ್ಯ, ಕಾಳಜಿ, ಶಿಸ್ತು ಮತ್ತು ಸಮೃದ್ಸಿ ಉಂಟಾಗಬಹುದು.

 

                                                                                           –ಹನೀಫ್ ಸುನ್ನಿ ಟುಡೆ

 

 

 

 

 

 

 

Related Posts

Leave A Comment

Voting Poll

Get Newsletter