ಮಹಲ್ಲ್-ಅಸ್ಥಿತ್ವ- ಸುವ್ಯವಸ್ಥೆ

ಆಡಳಿತ ಸಮಿತಿ ಜವಾಬ್ದಾರಿಗಳು.

 

ಮಹಲ್ಲ್ ವ್ಯವಸ್ಥೆ ಮುಸ್ಲಿಂ ಸಮುದಾಯಕ್ಕೆ ಅಲ್ಲಾಹನು ಕರುಣಿಸಿದ ಅತ್ಯುತ್ತಮ ವ್ಯವಸ್ಥೆ ಎಂದೇಳಬಹುದು.ಮೊಹಲ್ಲಾ-ಜಮಾಅತ್ ಅನ್ನು ನಿಯಂತ್ರಿಸುವ ಆಡಳಿತ ಸಮಿತಿ ಅತ್ಯುತ್ತಮರಿಂದ ಕೂಡಿದ್ದರೆ ಮೊಹಲ್ಲಾಗಳಲ್ಲಿ ನೂರಾರು ಅಭಿವೃದ್ಧಿ ಕಾರ್ಯಗಳನ್ನು ಕಾಣಲು ಹಾಗೂ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.ಆಡಳಿತ ಸಮಿತಿ ಅಸಮರ್ಥರಿಂದ ಕೂಡಿದ್ದರೆ ಅವರೇ ಸಮಸ್ಯೆಗೆ ಕಾರಣರಾಗುತ್ತಾರೆ.

 

ಯಾವುದೇ ಸಮಸ್ಯೆಗಳಿರಲಿ ಅದಕ್ಕೆ ಪರಿಹಾರ ಇಲ್ಲದ್ದಿಲ್ಲ.ಗೊಂದಲಗಳನ್ನು ಪಕ್ವತೆಯಿಂದ ನಿಭಾಯಿಸಬಲ್ಲ ಸಾಮರ್ಥ್ಯ ಆಡಳಿತ ಸಮಿತಿಗಿರಬೇಕು. ಕಷ್ಟ ಹೇಳಿಕೊಂಡು ಬರುವ ಬಡಜನರಿಗೆ ಲೆಟರ್ ಹೆಡ್ ಕೊಡುವ ಬದಲು ತಮ್ಮ ಮೊಹಲ್ಲಾದಿಂದ ಅದನ್ನು ಬಗೆಹರಿಸಲು ಸಾಧ್ಯವೇ ಎಂದು ಆಡಳಿತ ಸಮಿತಿ ಚರ್ಚಿಸಬೇಕು.ಮೊಹಲ್ಲ ಆಡಳಿತ ಸಮಿತಿಗಳು ಸಾಂತ್ವನ ಕೇಂದ್ರವಾಗಬೇಕು.ನೂರಾರು ಜನರು ಒಂದು ಮೊಹಲ್ಲಾದಲ್ಲಿ ವಾಸಿಸುವಾಗ ಅವರ ಸಹಾಯದಿಂದ ಹಲವು ಜನರ ಕಣ್ಣೀರೊರೆಸುವ ಕೆಲಸ ಮಾಡಲು ಆಡಳಿತ ಸಮಿತಿಗೆ ಸಾಧ್ಯವಿದೆ.‌

 

ಆಡಳಿತ ಸಮಿತಿ ಬಳಿ ತಮ್ಮ ಮೊಹಲ್ಲಾದ ಸರಿಯಾದ ಮಾಹಿತಿ  ಇರಬೇಕು. ತಮ್ಮ ಮೊಹಲ್ಲಾಗಳಲ್ಲಿ ಇರುವ ಮನೆಗಳೆಷ್ಟು? ತಿಂಗಳ ವಂತಿಗೆ ಕಲೆಕ್ಟ್ ಮಾಡುವುದರಿಂದ ಈ ಬಗ್ಗೆ ಆಡಳಿತ ಸಮಿತಿಗೆ ಸರಿಯಾದ ಮಾಹಿತಿ ಇರುತ್ತದೆ. ತಿಂಗಳ ವಂತಿಗೆ ಕಲೆಕ್ಟ್ ಮಾಡಿ ಉಸ್ತಾದರುಗಳಿಗೆ ಸಂಬಳ ಕೊಡುವ ಕಾಯಕಕ್ಕೆ ಮಾತ್ರ ಆಡಳಿತ ಸಮಿತಿಗಳ ಕಾರ್ಯ ವೈಖರಿ ಸೀಮಿತವಾಗದೆ ಊರಿನಲ್ಲಿರುವ ಬಡ ಜನರೆಷ್ಟು? ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ ಧಾರ್ಮಿಕ-ಲೌಕಿಕ ಶಿಕ್ಷಣ ಪಡೆದ ಜನರೆಷ್ಟು? ರೋಗಿಗಳೆಷ್ಟು? ಅವರ ರೋಗಾವಸ್ಥೆ? ಔಷಧಕ್ಕಿರುವ ವ್ಯವಸ್ಥೆಗಳೇನು? ವಿಧವೆಯರೆಷ್ಟು? ಪ್ರಾಯವಾಗಿ ಮದುವೆಯಾಗದ ಹೆಣ್ಣು ಮಕ್ಕಳೆಷ್ಟು? ಕಾರಣವೇನು?ಊರಿನಲ್ಲಿ ನಡೆಯುತ್ತಿರುವ ಅನಾಚಾರಗಳೇನು?ಎಲ್ಲಾ ವಿಷಯಗಳ ಪರಿಪೂರ್ಣ ಮಾಹಿತಿ ಆಡಳಿತ ಸಮಿತಿ ಬಳಿ ಇರಬೇಕು. 

 

ಆಡಳಿತ ಸಮಿತಿ ಇಂತಹ ವಿಷಯಗಳ ಕುರಿತು ಸಮಗ್ರವಾಗಿ ಆಲೋಚಿಸಿ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಮಾಡಬೇಕಿದೆ.ಅಸಾಧ್ಯ ಎಂಬುವುದಿಲ್ಲ. ಆಡಳಿತ ಸಮಿತಿಯ ಎಲ್ಲರೂ ಒಂದಾಗಿ ಊರಿನ ಎಲ್ಲರ ವಿಶ್ವಾಸಗಳಿಸಿ ಈ ಬಗ್ಗೆ ಶ್ರಮಿಸಿದರೆ ಮೊಹಲ್ಲಾಗಳಲ್ಲಿ ಬಹಳಷ್ಟು ಬದಲಾವಣೆಯನ್ನು ತರುವ ಮೂಲಕ ಕ್ರಾಂತಿಯನ್ನುಂಟು ಮಾಡಲು ಸಾಧ್ಯ. ಕಾಂಪೌಂಡ್ ಕಟ್ಟುವುದು, ಒಡೆದು ಎತ್ತರಿಸಿ ಕಟ್ಟುವುದು. ಇಂಟರ್ಲೋಕ್ ಹಾಕುವುದು, ತೆಗೆಸುವುದು ಪಕ್ಕದ ಮಸೀದಿಗಿಂತ ಎತ್ತರದ ಮೀನಾರ, ಮಿಂಬರ್ ಅಳವಡಿಸುವುದು, ಹತ್ತು ಇಪ್ಪತ್ತು ಲಕ್ಷದ ಟೈಲ್ಸ್, ಗ್ರಾನೈಟ್ ಹಾಕಿ ಅದರ ಮೇಲೆ ನಾಲ್ಕೈದು ಲಕ್ಷದ ಕಾರ್ಪೆಟ್ ಹಾಕುವುದು, ಊರಿನ ಸಣ್ಣಪುಟ್ಟ ವಿಚಾರವನ್ನು ದೊಡ್ಡದು ಮಾಡಿ ರಾದ್ದಾಂತ ಎಬ್ಬಿಸುವುದು, ಖ್ಯಾತಿಗಾಗಿ ಆಗಾಗ್ಗೆ ಸಭೆ ಸಮಾರಂಭಗಳನ್ನು ನಡೆಸುವುದು (ಒಂದು ರೀತಿಯ ಪೈಪೋಟಿ) ಇದು ಮಾತ್ರ ಅಭಿವೃದ್ಧಿ ಎಂದು ಹಲವಾರು ಪದಾಧಿಕಾರಿಗಳು ಮನಗಂಡಿದ್ದಾರೆ.‌

 

ಒಂದು ಮೊಹಲ್ಲಾದಲ್ಲಿ ನೂರು ಮನೆಗಳಿದ್ದರೆ ಅದರಲ್ಲಿ ಕಡಿಮೆ ಅಂದರೆ ಇಪ್ಪತ್ತರಿಂದ ಮೂವತ್ತು ಮನೆಗಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಆರ್ಥಿಕವಾಗಿ ಬಲಿಷ್ಠರಾದ ಜನರನ್ನು ಒಗ್ಗೂಡಿಸಿ ಊರಿನ ಬಡಜನರ ಪರಿಸ್ಥಿತಿ ಮನವರಿಕೆ ಮಾಡಿ ಸ್ವತಃ ಮೊಹಲ್ಲಾದ ಜನರಿಂದ ಸಹಾಯವನ್ನು ತಲುಪಿಸುವ ನಿಟ್ಟಿನಲ್ಲಿ ಆಡಳಿತ ಸಮಿತಿ ಶ್ರಮಿಸಬೇಕು. ಅವರು ಮನಸ್ಸು ಮಾಡಿದರೆ ಆ ಮೊಹಲ್ಲಾದ ಯಾರೂ ಕೂಡ ಬಡತನದಿಂದ ಕಷ್ಟಪಡಲು ಸಾಧ್ಯವಿಲ್ಲ.ಪ್ರತೀ ಮೊಹಲ್ಲಾಗಳಲ್ಲಿ ಧಾರ್ಮಿಕ, ಲೌಕಿಕ ಶಿಕ್ಷಣ ಪಡೆದ ವಿದ್ಯಾವಂತರಿರುತ್ತಾರೆ. ಆಡಳಿತ ಸಮಿತಿ ಅವರ ಒಂದು ತಂಡ ರಚಿಸಬೇಕು. ಅವರ ಸಹಕಾರ ಪಡೆದು ಅವರ ಮಾರ್ಗದರ್ಶನದಲ್ಲಿ ಶ್ರಮಿಸಿದರೆ ಆ ಮೊಹಲ್ಲಾದ ಜನರು ಸಾಕ್ಷರತೆ, ಅಗತ್ಯ ಜ್ಞಾನದಿಂದ ವಂಚಿತರಾಗಲು ಅಸಾಧ್ಯ.

 

SSLC, PUC ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸುವ ಅವರಿಗೆ ಪ್ರೋತ್ಸಾಹ, ಸೂಕ್ತ ಮಾರ್ಗದರ್ಶನ ನೀಡಿ ಉನ್ನತ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಆಡಳಿತ ಸಮಿತಿ ಶ್ರಮಿಸಬೇಕು. ಈ ಮೂಲಕ ಡಾಕ್ಟರ್, IAS, IPS ನಂತಹ ಉನ್ನತ ಸ್ಥಾನದಲ್ಲಿರುವ ಸಂಪನ್ಮೂಲ ಜನರನ್ನು ಸಮುದಾಯಕ್ಕೆ ಸಮರ್ಪಿಸಲು ಸಾಧ್ಯ. ಹಲವು ಕಾರಣಗಳಿಂದ ಮೊಹಲ್ಲಾಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇದರಲ್ಲಿ ಮೊದಲನೇ ಕಾರಣ ಅಸಮರ್ಥ ಅಡಳಿತ ಸಮಿತಿ‌ ಎಂದೇಳಬಹುದು. ಇನ್ನು ಆಡಳಿತ ಸಮಿತಿ ಸಮರ್ಥವಾಗಿದ್ದರೂ ಹಲವು ಕಡೆಗಳಲ್ಲಿ ಹಾಲಿ ಹಾಗೂ ಮಾಜಿ ಸಮಿತಿಗಳ ನಡುವೆ ವೈಷಮ್ಯ ಇಲ್ಲವೇ ಆಡಳಿತ ಸಮಿತಿಯ ಎಡೆಯಲ್ಲೇ ಪರಸ್ಪರ ಭಿನ್ನಾಭಿಪ್ರಾಯಗೊಂಡು ಯಾವುದೇ ಅಭಿವೃದ್ಧಿ ಕಾಣದಾಗಿದೆ. ಯಾವುದೇ ಭಿನ್ನಾಭಿಪ್ರಾಯ, ವೈಷಮ್ಯಗಳಿರಲಿ ಅದು ಊರಿನ ಅಭಿವೃದ್ಧಿಗೆ ತೊಡಕಾಗಬಾರದು.ಸಂಘಟನೆ, ಮಹಲ್ಲ್ ಸಮಿತಿಗಳಿಂದ ಹತ್ತು ಜನರಿಗೆ ಉಪಕಾರ ಆಗಬೇಕೇ ಹೊರತು ಯಾರಿಗೂ ತೊಂದರೆಯಾಗಬಾರದು.

 

ಮದ್ರಸ ಬಿಟ್ಟ ವಿದ್ಯಾರ್ಥಿಗಳಿಗೆ ಧಾರ್ಮಿಕವಾಗಿ ಹೆಚ್ಚಿನ ಕಲಿಕೆಗೆ ವ್ಯವಸ್ಥೆ ಕಲ್ಪಿಸಬೇಕು.ಧಾರ್ಮಿಕತೆಗೆ ಹೆಚ್ಚಿನ ಮಹತ್ವ ನೀಡಿ ಸಾಮಾಜಿಕವಾಗಿ ಮೊಹಲ್ಲಾವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಆಡಳಿತ ಸಮಿತಿ ಪ್ರಯತ್ನಿಸಬೇಕು.ಗಾಂಜಾ, ವ್ಯಭಿಚಾರದಂತಹ ಹಲವು ರೀತಿಯ ಅನಾಚಾರಗಳು, ಅನಿಸ್ಲಾಮಿಕ್ ಪ್ರವೃತ್ತಿಗಳಿಗೆ ಬ್ರೇಕ್ ಹಾಕುವ ನೆಲೆಯಲ್ಲಿ ಯುವಕ ಯುವತಿಯರಿಗೆ ಪ್ರತ್ಯೇಕ ಇಸ್ಲಾಮಿಕ್ ತರಬೇತಿ ನೀಡಬೇಕು.

 

ಕೆಲವಾರು ಆಡಳಿತ ಸಮಿತಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಆದರೆ ಹಲವಾರು ಕಡೆಗಳಲ್ಲಿ ವ್ಯವಸ್ಥಿತವಾದ ಅಜೆಂಡಾ, ರೂಪುರೇಷೆ ಎಂಬುವುದಿಲ್ಲ.ಸುನ್ನೀ ಮಹಲ್ ಫೆಡರೇಶನ್ (SMF) ಸಂವಿಧಾನದ ಮೂಲಕ ಕೇರಳದ ಹಲವು ಮೊಹಲ್ಲಾಗಳಲ್ಲಿ ಉತ್ತಮ ಪರಿವರ್ತನೆ ತರಲು ಸಾಧ್ಯವಾಗಿದೆ ಅಂತಹ ವ್ಯವಸ್ಥೆಗಳು ನಮ್ಮಲ್ಲಿಯೂ ಉಂಟಾಗಲಿ.

 

ಆಡಳಿತ ಸಮಿತಿಯಲ್ಲಿ ಈ ಬಗ್ಗೆ ಚಿಂತನೆ ನಡೆಸುವ ವಿದ್ಯಾವಂತರು, ಉಲಮಾ- ಉಮರಾ ನೇತಾರರು ಅಧಿಕಾರ ಹಿಡಿಯಬೇಕು. ಅವರಿಗೆ ಊರಿನ ಎಲ್ಲರೂ ಸಹಕಾರ ನೀಡಿದರೆ ಮೊಹಲ್ಲಾಗಳಲ್ಲಿ ಹಲವು ರೀತಿಯ ಉತ್ತಮ ಪರಿವರ್ತನೆಯನ್ನುಂಟು ಮಾಡಲು ಸಾಧ್ಯವಿದೆ. ಸಾಧ್ಯವಾಗಲಿ.

 

                                                                                               ಎಂ. ಇಸ್ಹಾಕ್ ಕೌಸರಿ ಪರ್ಲೋಟು

 

Related Posts

Leave A Comment

Voting Poll

Get Newsletter