ಕುಟುಂಬ ಸಂಬಂಧ: ಸೌಂದರ್ಯದ ಗೂಡು

ಕುಟುಂಬ ಸಂಬಂಧವನ್ನು ಅರಬಿ ಭಾಷೆಯಲ್ಲಿ ರಹಮ್ ಅನ್ನಲಾಗುತ್ತದೆ. ರಹಮ್ ಅಂದರೆ ಕಾರುಣ್ಯ. ಗರ್ಭಾಶಯಕ್ಕೂ ಇದೇ ರಹಮ್ ಎಂಬ ಪದವನ್ನೇ ಬಳಸಲಾಗುತ್ತದೆ. ತಾಯಿಯ ಗರ್ಭಾಶಯವು ಶಿಶುವಿಗೆ ಕಾರುಣ್ಯದ ಒಡಲು. ಹಾಗೆ ಶಿಶುವಾಗಿ ಈ ಭೂಮಿಯಲ್ಲಿ ಮನುಷ್ಯನ ಬೀಜ ಬಿತ್ತುವಾಗಲೇ ರಹಮ್ ಅಥವಾ ಕಾರುಣ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿಸಲಾಗಿದೆ.

ಅಲ್ಲಾಹನು ಪರಿಶುದ್ಧ ಖುರ್ ಆನಿನ ಅನ್ನಿಸಾ ಸೂರಾವನ್ನು ಆರಂಭಿಸುವುದೇ ರಹಮ್ ಎಂಬ ಪದವಿರುವ ವಾಕ್ಯದೊಂದಾಗಿದೆ. ಅನ್ನಿಸಾ ಅಂದರೆ ಮಹಿಳೆ ಎಂದರ್ಥ. ಮಹಿಳೆಯು ಕಾರುಣ್ಯ ನಿಧಿಯೂ ಪುರುಷನ ಕಾರುಣ್ಯದ ಅಗತ್ಯವುಳ್ಳವಳೂ ಆಗಿರುತ್ತಾಳೆ ಎಂಬ ಸೂಚನೆಯನ್ನು ಇದರಲ್ಲಿ ಕಾಣಬಹುದು. ಅನ್ನಿಸಾ ಸೂರಾದ ಒಂದನೆಯ ಆಯತ್ ಹೀಗಿದೆ; ಮನುಷ್ಯರೇ! ಒಂದೇ ದೇಹದಿಂದ ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನಲ್ಲಿ ಭಯವಿರಿಸಿಕೊಳ್ಳಿರಿ. ಅದೇ ದೇಹದಿಂದ ಅದರ ಸಂಗಾತಿಯನ್ನೂ ಸೃಷ್ಟಿಸಿ ತನ್ಮುಖೇನ ತುಂಬಾ ಸ್ತ್ರೀ ಪುರುಷರನ್ನು ಅವನು ಹರಡಿರುತ್ತಾನೆ. ನೀವು ಅಲ್ಲಾಹನ ಕುರಿತೂ ಕುಟುಂಬ ಸಂಬಂಧಗಳ ಕುರಿತೂ ಜಾಗೃತರಾಗಿರಿ. ಅವನು ನಿಮ್ಮ ಮೇಲೆ ನಿಗಾ ಇರಿಸಿಕೊಂಡಿರುವನು.

ಒಂದೇ ದೇಹ ಅಂದರೆ ಅದಮ್ ನಬಿ ಅಲೈಹಿಸ್ಸಲಾಮ್ಸಂಗಾತಿ ಅಂದರೆ ಹವ್ವಾಬೀವಿ ,ಓ ಮನುಷ್ಯರೇ ಎಂದು ಕರೆದು ಅಲ್ಲಾಹು ಇದನ್ನು ಹೇಳಿರುವುದನ್ನು ಗಮನಿಸಬೇಕು. ಇಡೀ ಮಾನವ ಕುಲ ಒಂದೇ ತಾಯಿತಂದೆಯರ ಮಕ್ಕಳು ಎಂಬ ವಾಸ್ತವವನ್ನು ಇಲ್ಲಿ ನೆನಪಿಸಲಾಗಿದೆ. ಅಲ್ಲಾಹನ ಕುರಿತು ಜಾಗೃತರಾಗಿರಿ ಎಂಬ ಮಾತಿಗೆ ಕುಟುಂಬ ಸಂಬಂಧಗಳ ವಿಷಯಗಳಲ್ಲೂ ಜಾಗೃತರಾಗಿರಿ ಎಂದು ಜೋಡಿಸಿ ಹೇಳಿರುವುದರಿಂದ ಕುಟುಂಬ ಸಂಬಂಧಗಳ ಬೆಸುಗೆಯು ಅಲ್ಲಾಹನಿಗೆ ತಕ್ವಾ ಮಾಡುವಷ್ಟೇ ಮಹತ್ವದ ವಿಚಾರ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.ಆಯತಿನ ಕೊನೆಯಲ್ಲಿ " ಅಲ್ಲಾಹನು ನಿಮ್ಮ ಮೇಲೆ ನಿಗಾ ಇರಿಸಿರುತ್ತಾನೆ" ಎಂದು ಹೇಳಿರುವುದು ಕೂಡಾ ಗಮನೀಯ. ಕುಟುಂಬ ಸಂಬಂಧಗಳನ್ನು ಮುರಿಯುವವರಿಗೆ ಇದೊಂದು ತಾಕೀತಾಗಿರುತ್ತದೆ. ಅದರ ಜೊತೆಗೆ ಕುಟುಂಬ ಸಂಬಂಧ ಬೆಳೆಸುವವರಿಗೆ ವಾಗ್ದಾನ ಕೂಡಾ ಆಗಿರುತ್ತದೆ. 

ಖುರ್ಆ ನಿನ ಹಲವು ಕಡೆ ಕುಟುಂಬ ಸಂಬಂಧಗಳ ಬಗ್ಗೆ ಹೇಳಿರುವುದು ಅದರ ಪ್ರಧಾನ್ಯಕ್ಕೆ ಸಾಕ್ಷಿಯಾಗಿದೆ. ಉದಾಹರಣೆಗೆ ಅಲ್ ಬಲದ್ ಸೂರಾದಲ್ಲಿ ಯತೀಮನ್ ಝಾ ಮಖ್ ರಬಾ ಎಂಬ ಮಾತು. ಕುಟುಂಬ ಸಂಬಂಧಕ್ಕೆ ಸೇರಿದ ಅನಾಥನಿಗೆ ಹಸಿದಾಗ ಉಣಬಡಿಸುವುದು ಎಂದರ್ಥ. ಇದನ್ನು  ಸ್ವರ್ಗಕ್ಕೆ ಹೋಗುವ ಬಲಪಂಥೀಯರ ಗುಣವಾಗಿ ಎಣಿಸಲಾಗಿದೆ. ಉಲುಲ್ ಅರ್ಹಾಮಿ ಬ ಅಳುಹುಮ್ ಅವ್ ಲಾ ಬಿಬ ಅಳಿನ್ ಫೀ ಕಿತಾಬಿಲ್ಲಾಹ್ - ಅಲ್ಲಾಹನ ಗ್ರಂಥದಲ್ಲಿ ರಕ್ತ ಸಂಬಂಧಿಗಳು ಪರಸ್ಪರ ಹಕ್ಕುದಾರರು ಎಂದು ಅಲ್ ಅನ್ಫಾಲ್ ಸೂರಾದ ಕೊನೆಯ ಆಯತಲ್ಲಿ ಅಲ್ಲಾಹು ಹೇಳಿದ್ದು ಕೂಡಾ ಕುಟುಂಬ ಸಂಬಂಧಗಳ ಬಾಂಧವ್ಯದ ಮಹತ್ವವನ್ನು ಸೂಚಿಸುತ್ತದೆ. 

ಕುಟುಂಬ ಸಂಬಂಧವು ಕೇವಲ ಮದುವೆಯಂತಹ ಸಮಾರಂಭದಲ್ಲಿ ಕೆಲಹೊತ್ತು ಒಟ್ಟು ಸೇರುವುದಕ್ಕೆ ಮಾತ್ರ ಸೀಮಿತವಾಗಬಾರದು. ಕುಟುಂಬ ಸಂಬಂಧಗಳ ಜಾಲ ಯಾವಾಗಲೂ ಎಲ್ಲಾ ವಿಷಯಗಳಲ್ಲೂ ಸ್ಪಂದಿಸುತ್ತಿರಬೇಕು. ಕಷ್ಟಗಳಲ್ಲಿ ನೆರವಾಗಬೇಕು. ಕುಟುಂಬ ಸಂಬಂಧಿಗಳ ಪೈಕಿ ಯಾರ್ಯಾರು ಯಾವಯಾವ ಅವಸ್ಥೆಯಲ್ಲಿದ್ದಾರೆ ಎಂಬುದನ್ನು ಅರಿತು ಸಹಕರಿಸುತ್ತಿರುವುದು ಅಗತ್ಯವಾಗಿದೆ. ಅಲ್ ಬಕರಾ ಸೂರಾದ 83 ನೆಯ ಆಯತಲ್ಲಿ ಅಲ್ಲಾಹು ಹೇಳುತ್ತಾನೆ: ಅಲ್ಲಾಹು ಅಲ್ಲದವರಿಗೆ ಆರಾಧಿಸಬಾರದು. ತಾಯಿತಂದೆಯರಿಗೂ ಇತರ ಬಂಧುಗಳಿಗೂ ಹಿತವನ್ನು ಮಾಡಬೇಕು.ಅಲ್ಲಾಹನಿಗೆ ಮಾತ್ರ ಆರಾಧಿಸಬೇಕು ಎಂಬ ತೌಹೀದಿನ ಬುನಾದಿಯ ಜೊತೆಗೆ ಬಂಧುಗಳಿಗೆ ಹಿತ ಮಾಡುವುದನ್ನು ಸೇರಿಸಿ ಹೇಳಿದುದನ್ನು ನಾವು ಗಮನಿಸಬೇಕು. ಅಲ್ ಬಕರಾ 177 ನೆಯ ಆಯತಲ್ಲಿ ಅಲ್ಲಾಹನು ಇನ್ನೊಂದು ಮಾತು ಹೇಳುತ್ತಾನೆ: ತನಗೆ ಸೊತ್ತಿನಲ್ಲಿ ಇಷ್ಟ ಇದ್ದೂ ಕೂಡಾ ಬಂಧುಗಳಿಗೂ ಅನಾಥರಿಗೂ ಬಡವರಿಗೂ ಕೊಡುವುದು ಗುಣಕಾರ್ಯವಾಗಿದೆ. 

ಅಂದರೆ ತನ್ನ ಎಲ್ಲಾ ಅಗತ್ಯ ಪೂರೈಕೆಯಾಗಿ ತನಗೆ ದುಡ್ಡು ಅಗತ್ಯ ಇಲ್ಲ ಎಂಬ ಅವಸ್ಥೆ ಬರುವ ವರೆಗೆ ಕಾಯದೆ ತನ್ನ ಹೆಚ್ಚಿನ ಅಗತ್ಯಕ್ಕೆ ಹಣದ ಅವಶ್ಯಕತೆ ಇದ್ದರೂ ಕೂಡಾ ಬಂಧುಗಳ ಕಷ್ಟಗಳಿಗೆ ಕೊಟ್ಟು ಸಹಕರಿಸಬೇಕು ಎಂದರ್ಥ.ನಾನು ದಾನವನ್ನುಬಂಧುವಿಗೆ ಕೊಡಬಹುದೇ ಎಂದು ಸಹಾಬಿಯೊಬ್ಬರು ಕೇಳಿದಾಗ ಹಾಗಾದರೆ ನಿನಗೆ ದಾನ ಹಾಗೂ ಕುಟುಂಬ ಸಂಬಂಧ ಬೆಳೆಸಿದ ಎರಡು ಪುಣ್ಯ ಇದೆ ಎಂದಿದ್ದರು ನಬಿಯವರು.  ಕುಟುಂಬ ಸಂಬಂಧ ಕದಡುವುದರ ಬಗ್ಗೆ ಪ್ರವಾದಿಯವರು ಎಚ್ಚರಿಕೆ ನೀಡಿದ್ದಾರೆ. ಅಂತಹವರ ಸಂಬಂಧವನ್ನು ಅಲ್ಲಾಹು ಮುರಿಯುತ್ತಾನೆ ಅಂದಿದ್ದಾರೆ. ಅದೇ ಸಂದರ್ಭ ಕುಟುಂಬ ಸಂಬಂಧ ಬೆಳೆಸುವವರಿಗೆ ಆಯುಷ್ಯ ವೃದ್ಧಿ ಮತ್ತು ಜೀವನದಲ್ಲಿ ಬರಕತ್ ದೊರೆಯುವುದಾಗಿಯೂ ಹೇಳಿದ್ದಾರೆ.

ಕುಟುಂಬ ಬಂಧುಗಳನ್ನು ಸ್ವಾವಲಂಬಿ ಮಾಡುವುದು ಬಹಳ ದೊಡ್ಡ ಸೇವೆಯಾಗುತ್ತದೆ. ದಾನ ಕೊಡುವುದಕ್ಕೆ ಪುಣ್ಯ ಇರುವುದು ನಿಜ. ಆದರೆ ವರ್ಷಕ್ಕೊಮ್ಮೆ ರಮಳಾನಲ್ಲಿ ಒಂದು ಮೊತ್ತ ಕೊಡುವುದು ಪುಣ್ಯ ಇರುವ ಕಾರ್ಯವಾದರೂ ಅದರ ಜೊತೆಗೆ ಎಲ್ಲಾ ವರ್ಷವೂ ಕುಟುಂಬದ ಬಡವರು ಕುಟುಂಬದ ಧನಿಕರ ದಾನವನ್ನು ನಿರೀಕ್ಷಿಸಬೇಕಾದ ಅನಿವಾರ್ಯತೆ ಇಲ್ಲದಂತೆ ಮಾಡುವುದು ಹೆಚ್ಚು ಪಲಪ್ರದವಾಗಿದೆ. ಇಲ್ಲಿ ನಾನು ಕುಟುಂಬ ಅನ್ನುತ್ತಿರುವುದು ಒಂದು ಮನೆಯ ಕುಟುಂಬಕ್ಕೆ ಸೀಮಿತವಲ್ಲ. ಹೆಚ್ಚಿನ ಜನರು ಓರ್ವ ಹಿರಿಯ ಮುತ್ತಾತನ ಮೊಮ್ಮಕ್ಕಳು ಮರಿಮಕ್ಕಳಾಗಿರುತ್ತಾರೆ. ಹಿಂದಿನ ಕಾಲದಲ್ಲಿ ಒಬ್ಬ ತಂದೆ, ತಾಯಿ ಹಾಗೂ ಹತ್ತು ಮಕ್ಕಳಿದ್ದ ಒಂದು ಕುಟುಂಬ ಕಾಲಕ್ರಮೇಣ ವಿಸ್ತಾರವಾಗುತ್ತಾ ಹೋಗುತ್ತದೆ. ಆ ಹತ್ತು ಮಕ್ಕಳಿಗೆ ಹತ್ತತ್ತು ಮಕ್ಕಳಾದಾಗ ಆ ಕುಟುಂಬದ ಸಂಖ್ಯೆ ನೂರಾಗುತ್ತದೆ. ಮತ್ತೂ ಕಾಲ ಕಳೆದಾಗ ಸಾವಿರ ದಾಟುತ್ತದೆ.

ಆದರೆ ಕಾಲ ಕಳೆದಂತೆ ಕುಟುಂಬದ ಬಳ್ಳಿಯನ್ನು ಮರೆಯಲಾಗುತ್ತದೆ. ಯಾವಾಗಲೊಮ್ಮೆ ಮದುವೆಗೆ ಕರೆಯುವುದಕ್ಕೆ ಮಾತ್ರ ಸೀಮಿತಗೊಂಡು ಮತ್ತೂ ಕಾಲ ಮುಂದುವರಿದು ನವ ಪೀಳಿಗೆ ಹುಟ್ಟಿಬಂದಾಗ ಕಂಡರೂ ಪರಿಚಯವಿರದಷ್ಟು ಅಗಲಿಕೆ ಉಂಟಾಗಿರುತ್ತದೆ. ಇಂತಹ ಕುಟುಂಬಗಳ ಬೇರುಗಳನ್ನು ಹುಡುಕಿ ಎಲ್ಲರನ್ನೂ ಒಟ್ಟು ಸೇರಿಸಿ ಫ್ಯಾಮಿಲಿ ಮೀಟ್ ಎಂಬ ಕಾರ್ಯಕ್ರಮ ನಡೆಸಿದರೆ ಒಂದೇ ಮುತ್ತಾತನ ವಿಸ್ತೃತ ಪೀಳಿಗೆಯವರು ಪರಸ್ಪರ ಅರಿತು ಕೊಳ್ಳಲು ಸಹಾಯಕವಾಗುತ್ತದೆ. ಹೀಗೆ ಎಲ್ಲರ ಹೆಸರು ವಿಳಾಸ ಸಂಗ್ರಹಿಸಿ ನಿರುದ್ಯೋಗದಲ್ಲಿರುವ ಯುವಕರಿಗೆ ಉದ್ಯೋಗ ಕಲ್ಪಿಸುವುದು, ಸಣ್ಣ ಪುಟ್ಟ ವ್ಯಾಪಾರಗಳಿಗೆ ಕೃಷಿಗಳಿಗೆ ಪ್ರೋ್ತ್ಸಾಹ ಕೊಡುವುದು ಮತ ಪಂಡಿತ, ಡಾಕ್ಟರ್, ಲಾಯರ್, ಇಂಜಿನಿಯರ್ ಮುಂತಾದ ಶಿಕ್ಷಣಗಳಿಗೆ ಅವರವರ ಪ್ರತಿಭೆಯನ್ನು ಗುರುತಿಸಿ ಆ ದಾರಿಗೆ ಇಳಿಸುವುದು ಮುಂತಾದವುಗಳನ್ನು ಮಾಡಿದರೆ ಒಂದು ವಿಸ್ತಾರವಾದ ಕುಟುಂಬವು ಎಲ್ಲಾ ವಿಧದಲ್ಲೂ ಮುನ್ನೆಲೆಗೆ ಬರುತ್ತದೆ. ದಾನ ಧರ್ಮ , ಸಂಭಾವನೆ ಮುಂತಾಗಿ ಹೊರಗೆ ಕೊಡುವುದಕ್ಕಿಂತ ಹೀಗೆ ಕುಟುಂಬದೊಳಗೇ ಅಭಿವೃದ್ಧಿ ಗೆ ಬಳಸಿದರೆ ದಾನ ಧರ್ಮದ ಪುಣ್ಯದ ಜೊತೆಗೆ ಕುಟುಂಬ ಸಂಬಂಧ ಬೆಳೆಸಿದ ಪುಣ್ಯ ಕೂಡಾ ಲಭ್ಯವಾಗುವುದಲ್ಲದೆ ಕುಟುಂಬವು ಸ್ವಾಭಿಮಾನದಿಂದ ಬದುಕುವ ಅವಕಾಶವೂ ಲಭ್ಯವಾಗುತ್ತದೆ.

ಕುಟುಂಬದ ಯಾವನೇ ಒಬ್ಬ ವ್ಯಕ್ತಿ, ಹೆಣ್ಣು ಮಗಳ ಮದುವೆಗೆ, ಮನೆ ನಿರ್ಮಾಣಕ್ಕೆ, ಚಿಕಿತ್ಸೆಗೆ ಎಂದು ಸಹಾಯ ಬೇಡಿಕೊಂಡು ಬಂದಾಗ ಕುಟುಂಬಕ್ಕೆ ಸೇರಿದವನನ್ನು ಕೈಬಿಡುವಂತಿಲ್ಲ ಅಂದು ಕೊಂಡು ನಾವು ಧನ ಸಹಾಯ ನೀಡುತ್ತೇವೆ. ಇದು ಒಳ್ಳೆಯ ಕಾರ್ಯ ನಿಜ. ಆದರೆ ಕುಟುಂಬ ಯಾವನೇ ಒಬ್ಬ ಆ ರೀತಿ ಸಹಾಯ ಯಾಚಿಸುತ್ತಾ ಸುತ್ತಾಡದ ಹಾಗೆ ಸ್ವಾವಲಂಬಿ ಮಾಡುವಂತಹ ವ್ಯವಸ್ಥೆಯನ್ನು ಕುಟುಂಬದ ಮುಂದಾಳುಗಳು ಮಾಡುವುದು ಹೆಚ್ಚು ಸೂಕ್ತವಾಗಿದೆ. ಹೀಗೇ ಪ್ರತಿಯೊಂದು ವಂಶದವರೂ ಅವರವರ ಕುಟುಂಬಗಳನ್ನು ಮಾಡಿದರೆ ಎಲ್ಲರೂ ಸುಧಾರಣೆಯಾಗುತ್ತಾರೆ. ಹೊರಗೆ ಕೊಡಬಾರದು, ಕುಟುಂಬದವರಿಗೆ ಮಾತ್ರ ಕೊಡಬೇಕು ಅಂದರೆ ಹೊರಗಿನವರು ಸಹಾಯ ವಂಚಿತರಾಗುವುದಿಲ್ಲವೇ ಎಂಬ ಪ್ರಶ್ನೆಯೂ ಬರುವುದಿಲ್ಲ!.

ನಮ್ಮ ಮಕ್ಕಳು ನಮ್ಮ ಅತ್ಯಂತ ನಿಕಟ ಬಂಧುಗಳು. ಬಂಧುತ್ವ ಕಾಪಾಡಿಕೊಳ್ಳಬೇಕೆಂಬ ಇಸ್ಲಾಮಿನ ನಿರ್ದೇಶನದಲ್ಲಿ ಮಕ್ಕಳೂ ಒಳಪಡುತ್ತಾರೆ. ಅದರ ಜೊತೆಗೆ ಅವರು ನಮ್ಮ ಆಶ್ರಯದಲ್ಲಿ ಬಾಲ್ಯವನ್ನು ಕಳೆಯುವುದರಿಂದ ಅವರನ್ನು ಗುಣಶೀಲರಾಗಿ ಬೆಳೆಸುವ ಜವಾಬ್ಧಾರಿ ಕೂಡಾ ನಮಗಿದೆ.ವಿದ್ಯಾಲಯಗಳಲ್ಲಿ ಉಸ್ತಾದ್ ಗಳಿಗೆ ಕಲಿಸಲು ಮಾತ್ರ ಸಾಧ್ಯ. ಪ್ರಾಯೋಗಿಕ ಗೊಳಿಸಲು ಸಾಧ್ಯವಿಲ್ಲ. ಉದಾಹರಣೆಗೆ ರಾತ್ರಿ ಮಲಗುವ ಮುನ್ನ ಹಾಗೂ ಬೆಳಿಗ್ಗೆ ಎದ್ದ ನಂತರ ಹೇಳಬೇಕಾದ ಝಿಕ್ರ್ ದುಆ ಉಸ್ತಾದರು ಕಲಿಸಬಹುದು. ಅದನ್ನು ಹೇಳಿಸಲು ಆ ಸಮಯದಲ್ಲಿ ಅವರಿರುವುದಿಲ್ಲ. ಆಗ ಇರುವುದು ಹೆತ್ತವರು. ಆದ್ದರಿಂದ ಅವರು ಪ್ರಯೋಗಮಾಡಿಸಬೇಕು.  

ಮಕ್ಕಳ ಧಾರ್ಮಿಕ ಶಿಕ್ಷಣ ಮತ್ತು ಅದರ ಅಭ್ಯಾಸ ಮಾಡಿಸಿ ನಾವು ಮರಣ ಹೊಂದಿದಾಗ ಮಯ್ಯಿತ್ ನಮಾಝ್ ಗೆ ನೇತೃತ್ವ ಕೊಡಲು ಅರ್ಹರಾಗಿಸಬೇಕು. ತಂದೆ ಅಥವಾ ತಾಯಿಯ ಮಯ್ಯಿತ್ ಮುಂದೆ ನಿಂತು ಅಲ್ಲಾಹುಮ್ಮ ಗ್ಫಿರ್ಲಹೂ ಎಂದು ಮಕ್ಕಳು ದುಆ ಮಾಡುವಾಗ ಇರುವ ಆತ್ಮಾರ್ಥತೆ ಹಾಗೂ ಹೃದಯ ಬೇನೆ ಮತ್ತೊಬ್ಬರಿಗೆ ಬರಲು ಸಾಧ್ಯವಿಲ್ಲ. ಹಾಗೆ ನೊಂದ ಮಬದಲ್ಲಿ ಆತ್ಮಾರ್ಥವಾಗಿ ಪಲಪ್ರದವಾದ ದುಆ ನಡೆಸುವ ಮಕ್ಕಳಾಗಿ ಬೆಳೆಸಿದರೆ ಅದುವೇ ನಮಗೆ ದೊಡ್ಡ ಆಸ್ತಿ.

                                                                                                                     

                                                                                                                         ಖಲೀಲ್ ರಹ್ಮಾನ್ ಅರ್ಶದಿ

Files

Related Posts

Leave A Comment

Voting Poll

Get Newsletter