ಭಯೋತ್ಪಾದನೆ ಬಹಿರಂಗಗೊಳಿಸಿದ ಅಜ್ಮೀರ್

cj2_630ಹೈದರಾಬಾದ್ ಜೈಲಲ್ಲಿ ನನ್ನೊಡನೆ ಇದ್ದ ಮುಸ್ಲಿಂ ಬಾಲಕನೊಬ್ಬ ಮಕ್ಕಾ ಮಸೀದಿ ಬಾಂಬು ಸ್ಪೋಟದ ಅರೋಪಿ ಎಂದು ಗೊತ್ತಾಯಿತು. ತಾನು ಮಾಡದ ಅಪರಾಧಕ್ಕಾಗಿ ಆ ಬಾಲಕ ಒಂದೂವರೆ ವರ್ಷದಿಂದ ಜೈಲಲ್ಲಿದ್ದ. ನಾನು ಜೈಲಲ್ಲಿದ್ದಷ್ಟು ದಿನ ನನ್ನನ್ನು ಪ್ರೀತಿಯಿಂದ ನೋಡಿಕೊಂಡ ಆತನನ್ನು ಕಂಡು ಪಶ್ಚಾತಾಪ ಪಟ್ಟು ತಪ್ಪೊಪ್ಪಿಕೊಳ್ಳಬೇಕು ಎಂದು ನಿರ್ಧರಿಸಿದೆ ಹಾಗಂತ ಹೈದರಾಬಾದ್‌ನ ಮಕ್ಕಾ ಮಸೀದಿಯ ಬಾಂಬ್ ಸ್ಪೋಟದ ಪ್ರಮುಖ ಆರೋಪಿ, ಆರೆಸ್ಸೆಸ್‌ನ ನಿಷ್ಟಾವಂತ ಕಾರ್ಯಕರ್ತನಾಗಿದ್ದ ಅಸೀಮಾನಂದ ಸ್ವಾಮಿ ನ್ಯಾಯಾಧೀಶರ ಮುಂದೆ ತಪ್ಪೊಪಿಗೆಯಲ್ಲಿ ಹೇಳಿದ ಮಾತು. ಆ ಮೂಲಕ ಭಯೋತ್ಪಾದನೆಯ ಇನ್ನೊಂದು ಕರಾಳ ಮುಖವನ್ನು ದೇಶದ ಮುಂದೆ ತೆರೆದಿಟ್ಟಿದ್ದಾರೆ. ಅಷ್ಟೇ ಅಲ್ಲ ಭಯೋತ್ಪಾದನೆಯ ನೆಪದಲ್ಲಿ ಒಂದು ಸಮಾಜ ವಿನಾಕಾರಣ ಹೇಗೆ ನೋವು ಅನುಭವಿಸುತ್ತದೆ ಎಂಬ ಸತ್ಯವನ್ನು ಅನಾವರಣಗೊಳಿಸಿದ್ದಾನೆ. ದೇಶದ ಯಾವುದೇ ಕಡೆ ಬಾಂಬ್ ಸ್ಪೋಟ ನಡೆದರೂ ಯಾವುದೇ ತನಿಖೆ ನಡೆಯುವ ಮೊದಲೇ ಅರೋಪಿಗಳಾಗಿ ನಿಲ್ಲಬೇಕಾಗಿ ಬರುವುದು ಇಲ್ಲಿನ ಮುಸ್ಲಿಮರು. ಅಷ್ಟೇ ಅಲ್ಲ ಕೆಲವೊಂದು ಯುವಕರನ್ನು ಪಾಕಿಸ್ತಾನಿ ಉಗ್ರಾಗಾಮಿ ಬೆಂಬಲಿತರೆಂದು ಏಕಾಏಕಿ ಬಿಂಬಿಸಿ ಜೈಲಿಗಟ್ಟಲಾಗುತ್ತದೆ. ಅವರನ್ನು ವಿಚಾರಣೆ ಇಲ್ಲದೆ ವರ್ಷಗಟ್ಟಲೆ ಜೈಲಲ್ಲಿ ಕೊಳೆಯುವಂತೆ ಮಾಡುವ ನಿಗೂಡ ಪ್ರಕ್ರಿಯೆ ಇಲ್ಲಿ ನಡೆಯುತ್ತಲೇ ಬಂದಿದೆ. ಸಾಲದ್ದಕ್ಕೆ ’ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರು’ ಎಂಬ ಡೈಲಾಗ್‌ನ್ನು ಹೇಳಿಕೊಂಡು ಸಂಘಪರಿವಾರಿಗಳು ಮುಸ್ಲಿಮರನ್ನೇ ಟಾರ್ಗೆಟ್ ಮಾಡಿ ಕ್ರೂರವಾಗಿ ಚಿತ್ರಿಸಿ ಅಪಪ್ರಚಾರ ನಡೆಸುತ್ತಿದ್ದರು.! ಅದರೆ ಯಾವಾಗ ಪವಿತ್ರ ಪುಣ್ಯ ಸ್ಥಳವಾದ ಅಜ್ಮೀರ್ ದರ್ಗಾದಲ್ಲಿ ಬಾಂಬ್ ಸ್ಪೋಟವಾಯಿತೋ ಅಷ್ಟರಲ್ಲೇ ಭಯೋತ್ಪಾದನೆಯ ನಿಜ ಮುಖ ಆಗಲೇ ದರ್ಶವಾಯಿತು. ಯಾವುದೇ ಸಮಸ್ಯೆಗಳಿದ್ದರೂ ಅಜ್ಮೀರ್ ಪುಣ್ಯಕ್ಷೇತ್ರಕ್ಕೆ ಹೋದರೆ ಪರಿಹಾರ ಕಾಣುತ್ತೆ ಎಂಬ ಮಾತಿಗೆ ಅದೇ ತೆರನಾಗಿ ಇಲ್ಲಿ ಮುಸ್ಲಿಮರ ಮೇಲೆ ಅನಗತ್ಯವಾಗಿ ನಡೆಸುತ್ತಿದ್ದ ಅಪಪ್ರಚಾರಕ್ಕೂ ತೆರೆಬೀಳುವಂತೆ ಅಜ್ಮೀರ್ ಸ್ಪೋಟ ಮಾಡಿದೆ. ಅಷ್ಟೇ ಅಲ್ಲ ಎಲ್ಲೆಲ್ಲೋ ಬಾಂಬ್ ಸ್ಪೋಟಿಸಿ ಅಮಾಯಕ ಮುಸ್ಲಿಮರ ಮೇಲೆ ಕಟ್ಟುತಿದ್ದ ಸಂಘ ಪರಿವಾರಗಳ ಜಾತಕವನ್ನು ಬಯಲುಗೊಳಿಸಿದೆ, ಈಗ ಅವರೇ ಹೇಳತೊಡಗಿದ್ದಾರೆ ಭಯೋತ್ಪನೆಗೆ ಧರ್ಮವಿಲ್ಲ ಎಂದು!. ನೋಡಿ ೨೦೦೮ರ ಸಪ್ಟೆಂಬರ್ ಒಂಬತ್ರರಂದು ಮಲೆಗಾಂವ್‌ನಲ್ಲಿ ನಡೆದ ಮೋಟರ್ ಬೈಕ್ ಬಾಂಬು ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಎಟಿಎಸ್ ಬಂಧಿಸಿದಾಗಲೇ ಮೊದಲ ಬಾರಿಗೆ ಸಂಘಪರಿವಾರಗಳ ಜಾತಕ ಮೊದಲು ಬಹಿರಂಗವಾದದ್ದು. ಅಂದು ಹಿರಿಯ ಪೋಲಿಸ್ ಅಧಿಕಾರಿ ಹೇಮಂತ ಕರ್ಕರೆ ನೇತೃತ್ವದ ಎಟಿಎಸ್ ಬಂಧಿಸಿದ ಹತ್ತು ಆರೋಪಿಗಳೂ ಹಿಂದೂಗಳಾಗಿದ್ದರು. ಬಂಧನಕ್ಕೀಡಾದವರಲ್ಲಿ ದುರ್ಗಾವಾಹಿನಿಯ ಮಾಜಿ ಸದಸ್ಯೆ ಪ್ರಜ್ಞಾ ಸಿಂಗ್ ಠಾಕೂರ್, ಸೇವೆಯಲ್ಲಿದ್ದ ಸೇನಾಧಿಕಾರಿ ಲೆಪ್ಪಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ನಿವೃತ ಸೇನಾಧಿಕಾರಿ ಮೇಜರ್ ರಮೇಶ್ ಉಪಾದ್ಯಾಯ ಹಾಗೂ ಸ್ವಾಮಿ ದಯಾನಂದ ಪಾಂಡೆ ಮೊದಲಾದವರಿದ್ದರು. ಇವರೆಲ್ಲರೂ ಹಿಂದೂ ಮಹಾಸಭದ ಸ್ಥಾಪಕರಾದ ’ವೀರ್ ಸಾವರ್ಕರ್’ ಅವರ ಸಿದ್ದಾಂತದ ಪ್ರೇರಣೆಯಿಂದ ಪುಣೆಯಲ್ಲಿ ಸ್ಥಾಪನೆಗೊಂಡ ’ಅಭಿನವ ಭಾರತ’ ಎಂಬ ಉಗ್ರ ಬಲಪಂಥೀಯ ಸಂಘಟನೆ ಜತೆ ಸಂಬಂಧ ಹೊಂದಿದ್ದವರು. ನೋಡಿ ಈ ಸ್ಪೋಟ ಪ್ರಕರಣಕ್ಕೆ ಸಂಬಧಿಸಿ ಮೊದಲು ಒಂದಷ್ಟು ಮುಸ್ಲಿಂ ಯುವಕರನ್ನು ಬಂಧಿಸಲಾಗಿತ್ತು. ಅದರೆ ಹೇಮಂತ ಕರ್ಕರೆಯಂಥ ದಿಟ್ಟ ಪೋಲೀಸ್ ಅಧಿಕಾರಿ ತನಿಖೆಗಿಳಿದಾಗ ಬಹಿರಂಗಗೊಂಡ ಸತ್ಯವೇ ಬೇರೆ. ಅದೇ ಕಾರಣಕ್ಕೆ ಇದು ಕೆಲವರಿಗೆ ಕಹಿಯಾಯಿತು. ಅವರು ಕರ್ಕರೆ ಮೇಲೆ ವಾಗ್ದಾಳಿಯನ್ನು ನಡೆಸಿದ್ದರು. ದುರದೃಷ್ಟವಶಾತ್ ೨೬/೧೧/ರ ಮುಂಬೈ ಸ್ಪೋಟದಲ್ಲಿ ಆ ನಿಷ್ಠಾವಂತ, ಧೀರ ಅಧಿಕಾರಿ ಬಲಿಯಾದರು. ಆದರೆ ಅವರು ತೆರೆದಿಟ್ಟ ಸತ್ಯ ಕಣ್ಣು ಮುಚ್ಚಲಿಲ್ಲ. ತನಿಖೆ ಹಾದಿ ಎಲ್ಲೆಲ್ಲೋ ಸುತ್ತು ಹೊಡೆದರೂ ಮತ್ತೆ ಅದು ಸಂಘಪರಿವಾರದ ಮನೆಬಾಗಿಲ ಮುಂದೆನೆ ಬಂದು ನಿಂತಿದೆ. ಅಂದು ಕರ್ಕರೆ ಸರರ್ಕಾರಕ್ಕೆ ಸಲ್ಲಿಸಿದ ೧೪೦೦ ಪುಟಗಳ ದೀರ್ಘ ವರದಿಯಲ್ಲಿ ಹಿಂದೂ ಭಯೋತ್ಪಾದನೆಯ ಎಲ್ಲಾ ಮುಖಗಳನ್ನು ತೆರೆದಿಟ್ಟಿದ್ದರೂ ಅವರ ಅಕಾಲಿಕ ಅಗಲಿಕೆಯ ಕಾರಣ ತನಿಖೆಯ ಹಾದಿ ತಪ್ಪಿತ್ತು. ಅದರೆ ಇದೀಗ ಅಸೀಮನಾಂದ ನೀಡಿದ ತಪ್ಪೊಪ್ಪಿಗೆ ಆ ಎಲ್ಲಾ ಸತ್ಯವನ್ನು ಸಖತ್ತಾಗಿ ಬಹಿರಂಗ ಪಡಿಸಿದೆ. ೨೦೦೬ ಮತ್ತು ೨೦೦೮ರಲ್ಲಿ ಮಾಲೆಂಗಾವ್, ೨೦೦೭ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್, ಜೈಪುರದ ಅಜ್ಮೀರ್ ದರ್ಗಾ ಶರೀಫ್, ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲಿ ಬಾಂಬ್ ಸ್ಪೋಟ ನೆಡಸಿದ್ದು, ಆರ್‌ಎಸ್‌ಎಸ್ ಜತೆ ಸಂಬಂಧ ಹೊಂದಿದ್ದ ಹಿಂದೂ ಸಂಘಟನೆಗಳ ಕಾರ‍್ಯಕರ್ತರೇ ಹೊರತು ಮುಸ್ಲಿಮರಲ್ಲ ಎಂಬ ಸತ್ಯವನ್ನು ಬಾಂಬ್ ಸ್ಪೋಟದ ಆರೋಪಕ್ಕೆ ವಿನಾ ಕಾರಣ ಜೈಲಲ್ಲಿದ್ದ ಅಬ್ದುಲ್ ಕಲೀಂ ಎಂಬ ಮುಗ್ದ ಯುವಕನ ಮೂಲಕ ಮನ ಪರಿವರ್ತನೆಗೊಂಡ ಅಸೀಮಾನಂದ ತಿಳಿಸಿದ್ದಾನೆ. ಅಷ್ಟೇ ಅಲ್ಲ ಅಜ್ಮೀರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಪೋಲೀಸರು ಇತ್ತೀಚೆಗೆ ದೇವೆಂದ್ರ ಗುಪ್ತ ಮತ್ತು ಲೋಕೇಶ್ ಶರ್ಮಾ ಎಂಬ ಇಬ್ಬರು ಆರೆಸೆಸ್ ಪ್ರಚಾರಕರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಮಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೀರ್ ದರ್ಗಾ ಮತ್ತು ಮಕ್ಕಾ ಮಸೀದಿ ಬಾಂಬ್ ಸ್ಪೋಟದ ರೂವಾರಿ ಆರ್‌ಎಸ್‌ಎಸ್‌ನ ಕೇಂದ್ರ ಸಮಿತಿ ಸದಸ್ಯರಾದ ಇಂದ್ರೇಶ್ ಕುಮಾರ್ ಎಂದು ಸಿಬಿಐಗೆ ತಿಳಿಸಿದ್ದಾರೆ. ಈಗ ಅಸೀಮಾನಂದ ಸ್ವಾಮಿ ಬಾಂಬ್ ಸ್ಪೋಟ ಪ್ರಕರಣಗಳಲ್ಲಿ ಇಂದ್ರೇಶ್ ಕುಮಾರ್ ಪಾತ್ರವನ್ನು ಬಿಡಿಸಿ ಬಿಡಿಸಿ ಹೇಳಿದ್ದಾರೆ. ನಿಜ. ಭಯೋತ್ಪಾದನೆಗೆ ಧರ್ಮವಿಲ್ಲ ಎಂಬ ಸತ್ಯ ತಡವಾಗಿ ಬಹಿರಂಗಗೊಂಡಿದೆ. ವಿಪರ್ಯಾಸ ನೋಡಿ, ನಿಜ ಸಂಗತಿಯನ್ನು ಅಸೀಮಾನಂದ ಸ್ವಾಮಿ ಹೇಳಿದಾಗ ಆರೆಸ್ಸೆಸ್ ಮೊದಲು ಅದನ್ನು ನಿರಾಕರಿಸಿತು. ರಾಹುಲ್‌ಗಾಂಧಿ ಸಹಿತ ಕೇಂದ್ರದ ಕೆಲ ಸಚಿವರು ಕೇಸರಿ ಭಯೋತ್ಪಾದನೆಯ ಬಗ್ಗೆ ಮಾತನಾಡಿದಾಗ ದೇಶವ್ಯಾಪಿ ಫ್ರತಿಭಟನೆಯನ್ನು ನಡೆಸಿದರು. ಆದರೆ ಅಸೀಮಾನಂದ ಈಗ ತಾನು ಸ್ವಇಚ್ಚೆಯಿಂದ ಹೇಳಿಕೆ ನೀಡಿದ್ದೇನೆ ಎಂದು ಸ್ಪಷ್ಟ ಪಡಿಸಿದಾಗ ಮೈಪರಚಿಕೊಳ್ಳಬೇಕಾಯಿತು. ಕೊನೆಗೂ ಸತ್ಯ ಒಪ್ಪಿಕೊಳ್ಳಬೇಕಾಯಿತು. ಆದ್ದರಿಂದಲೇ ಕೊನೆಗೂ ಆರೆಸೆಸ್ ಸಹಸಂಘಚಾಲಕ ಮೋಹನ್ ಭಾಗವತ್ ಬಾಯಿ ಬಿಟ್ಟಿದ್ದಾನೆ. ಹೌದು ನಮ್ಮ ಸಂಘಟನೆಯಲ್ಲಿ ಕೆಲ ಉಗ್ರಗಾಮಿಗಳಿದ್ದಾರೆ. ಅವರನ್ನು ಹೊರ ಹೋಗುವಂತೆ ತಿಳಿಸಿದ್ದೇವೆ ಎಂದು ಹೇಳಿಕೊಂಡಿದ್ದಾನೆ. ಹೌದು, ಸತ್ಯವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ, ತಪ್ಪು ಯಾರು ಮಾಡಿದರೂ ತಪ್ಪೆ. ಎಲ್ಲಾ ಧರ್ಮದ ಅನುಯಾಯಿಗಳಲ್ಲೂ ದಾರಿ ತಪ್ಪಿದವರಿದ್ದಾರೆ. ಆ ಕಾರಣಕ್ಕೆ ಇಡೀ ಧರ್ಮ ಅಥವಾ ಸಮಾಜವನ್ನು ಗುರಿಮಾಡಿ ಅಪಪ್ರಚಾರ ನಡೆಸುವುದು, ಅಮಾಯಕರನ್ನು ಬಂಧಿಸಿ ಜೈಲಲ್ಲಲಿಡುವುದು ನ್ಯಾಯವಲ್ಲ. ಅಂಥ ಪೂರ್ವಗ್ರಾಹಪೀಡಿತ ಪ್ರಕ್ರಿಯೆ ಇನ್ನು ನಿಲ್ಲಬೇಕು. ಅಮಾಯಕರು ಬಂಧನದಿಂದ ಮುಕ್ತರಾಗಬೇಕು.

-ಅಲ್ ಅಹ್ಸನ್

Related Posts

Leave A Comment

Voting Poll

Get Newsletter