ನವೆಂಬರ್ ೨೩ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಾಶನಗೊಂಡ ಆಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ ಅಧ್ಯಕ್ಷ, ಲೋಕಸಭೆಯಲ್ಲಿ ಇಂಡಿಯನ್ ಮುಸ್ಲಿಮರ ಪರ ಧ್ವನಿ ಎತ್ತುತ್ತಿರುವ ಹೋರಾಟಗಾರ ಅಸಾದುದ್ದೀನ್ ಓವೈಸಿಯವರೊಂದಿಗಿನ ಸಂದರ್ಶನದ ಕೆಲವೊಂದು ಭಾಗವಿದು.

ಕಳೆದ ಎರಡು ತಿಂಗಳುಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುವುದರೊಂದಿಗೆ ಆಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ ಎಂಬ ರಾಜಕೀಯ ಪಕ್ಷ ಹಾಗೂ ಅದರ ಮುಖಂಡ ಅಸಾದದುದ್ದೀನ್ ಓವೈಸಿ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇದುವರೆಗೂ ಜಾತ್ಯಾತೀತ ಪಕ್ಷಗಳಿಂದ ಅವಗಣನೆಗೊಳಗಾದ ಹಾಗೂ ಕೋಮುವಾದಿ ಪಕ್ಷಗಳ ಪೀಡನೆಗೊಳಗಾದ ಉತ್ತರ ಭಾರತದ ಮುಸಲ್ಮಾನರಿಗೆ ಹೊಸ ಅಶಾಭಾವನೆಯನ್ನು ಹುಟ್ಟಿಸುವಂತಾಗಿತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಎಂಐಎಂ ರಾಜಕೀಯ ಪಕ್ಷದ ಅಭ್ಯರ್ಥಿಗಳ ಪ್ರಚಂಡ ಜಯ. ಪಕ್ಷದ ಜನ್ಮಾಸ್ಥಾನವಾದ ಹೈದರಾಬಾದ್ ಹಾಗೂ ತೆಲಂಗಾಣದಲ್ಲಿ ಪ್ರಚೋಧನಕಾರಿ ಭಾಷಣ ಮಾಡುತ್ತಾ ಮುಸ್ಲಿಂ ಕೋಮುವಾದಿ ಪಕ್ಷ ಎಂಬ ಮಾಧ್ಯಮಗಳ ಲೇಬಲ್‌ಗಳಿಂದ ಭಾರತೀಯ ಮುಸಲ್ಮಾನರ ಶಬ್ಧವಾಗಿ ತಮಗೆ ಬದಲಾಗಲು ಸಾದ್ಯವೆಂದು ಉವೈಸಿ ಹಾಗೂ ಅವರ ಪಕ್ಷಕ್ಕೆ ಇದೀಗ ಸ್ಪಷ್ಟವಾಗಿ ಅರಿವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲೂ ಹಾಗೂ ಪಶ್ಚಿಮ ಬಂಗಾಳದಲ್ಲೂ ಕೂಡ ಸ್ಪರ್ಧೆಗಿಳಿಯುವುದಾಗಿ ಊವೈಸಿಯವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಮುಸಲ್ಮಾನರು ಒಗ್ಗಟ್ಟಾಗಬೇಕು ಹಾಗೂ ಬಿಜೆಪಿಯ ಕೋಮುವಾದದ ಜೊತೆಗೆ ಕಾಂಗ್ರೆಸ್ಸಿನ ಅವಗಣನೆಯ ವಿರುದ್ಧವೂ ಹೋರಾಟ ಮಾಡಬೇಕೆಂದು ಅವರು ಆಗ್ರಹ ವ್ಯಕ್ತಪಡಿಸಿದ್ದಾರೆ. ಅವರೊಂದಿಗಿನ ಸಂದರ್ಶನದ ಭಾಗ ಹೀಗಿದೆ.

  • ಎಂಐಎಂ(ಐ) ಪಕ್ಷವು ಭಾರತದ ಸಾಮಾಜಿಕ ಭದ್ರತೆಗೆ ಮಾರಕವಾಗಿದೆ ಎಂದು ಕೆಲ ರಾಜಕೀಯ ಪಕ್ಷಗಳು ಆರೋಪಿಸುತ್ತಿವೆ. ಹಾಗಾದರೆ ತಮ್ಮ ರಾಜಕೀಯ ನಿಲುವು ಏನು?

ಮಹಾರಾಷ್ಟ್ರ ಸೇರಿದಂತೆ ಭಾರತದ ವಿವಿವಿದೆಡೆ ವಿಶ್ವಾಸನೀಯವಾದ ಮುಸ್ಲಿಂ ಶಬ್ಧವಿರಲಿಲ್ಲ. ಆದುದರಿಂದ ಸ್ವಾಭಾವಿಕವಾಗಿ ಮುಸಲ್ಮಾನರ ಓಟುಗಳು ಕಾಂಗ್ರೆಸ್ಸಿಗೆ ಲಭಿಸುತ್ತಲಿತ್ತು. ಕಳೆದ ಹತ್ತು ವರ್ಷಗಳಿಂದ ಮುಸ್ಲಿಂ ಮತದಾರರ ನಿಲುವಿನಲ್ಲಿ ಬದಲಾವಣೆ ಉಂಟಾದವು. ಅವರು ಕಾಂಗ್ರೆಸ್ಸನ್ನು ತ್ಯಜಿಸಲಾರಂಭಿಸಿದ್ದಾರೆ. ಕಾಂಗ್ರೆಸ್ಸಿನ ಭ್ರಷ್ಟಾಚಾರ, ನಿರಪರಾಧಿಗಳಾದ ಮುಸ್ಲಿಂ ಯುವಕರನ್ನು ಭಯೋತ್ಪಾಧನೆಯ ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿನಲ್ಲಿ ಬಂಧಿಸುವುದು ಸೇರಿದಂತೆ ಹಲವಾರು ಕಾರಣಗಳು ಈ ಬದಲಾವಣೆಯ ಹಿಂದೆ ಕೆಲಸ ಮಾಡಿದೆ. ಎಲ್ಲೋರ ಶಸ್ತ್ರಸ್ತ್ರ ವ್ಯವಹಾರ ಕೇಸಿನಲ್ಲಿ ೧೦ ವಷ ಜೈಲು ಶಿಕ್ಷೆಗೊಳಗಾದ ಯುವಕನ ಸಂಬಂಧಿಕರನ್ನು ಈ ಮಧ್ಯೆ ನಾನು ಭೇಟಿಯಾಗಿದ್ದೆ. ಅವನ ಸಹೋದರ ಡಾಕ್ಟರ್‌ರಾಗಿದ್ದ. ಈಗ ಅವನು ಹೇಳುತ್ತಿದ್ದಾನೆ. ಡಾಕ್ಟರ್‌ಗಿಂತಲೂ ಉತ್ತಮ ವಕೀಲನಾಗಿ ತನ್ನ ಸಹೋದರ ಬದಲಾಗಿದ್ದಾನೆಂದು. ರಾಜಕೀಯವಾಗಿ ಮುಸಲ್ಮಾನರ ಪ್ರಾತಿನಿಧ್ಯ ಕಡಿಮೆಯಾಗಿದ್ದರೂ ಜೈಲುಗಳಲ್ಲಿ ಅವರ ಸಂಖ್ಯೆ ಅತ್ಯಧಿಕವಾಗಿದೆ. ನಾವು ಮಹಾರಾಷ್ಟ್ರದಲ್ಲಿ ಕಾರ್ಯಚಟುವಟಿಕೆ ಆರಂಭಿಸಿ ೩-೪ ವರ್ಷಗಳಾದವು. ಈ ಸಮಯದಲ್ಲಿ ಮನದಟ್ಟಾದ ಕೆಲವೊಂದು ಸಂಗತಿಗಳಿವೆ; ಸಮಾಜವಾದಿ ಪಾರ್ಟಿಯೊಂದಿಗಿನ ವಿಶ್ವಾಸವನ್ನು ಮಹಾರಷ್ಟ್ರದ ಮುಸಲ್ಮಾನರು ಯಾವಾಗಲೋ ಕಳೆದುಕೊಂಡಿದ್ದಾರೆ. ಮುಸಲ್ಮಾನರ ಕ್ಷೇಮಕ್ಕಾಗಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೆ ಕಾಂಗ್ರೆಸ್ ಇಷ್ಟು ದಿನಗಳಕಾಲ ಅವರಿಂದ ಓಟುಗಳನ್ನು ಪಡೆಯುತ್ತಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಿಂದ ಒಂದೇ ಒಂದು ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಲಿಲ್ಲ. ಜಾತ್ಯಾತೀತ ಪಕ್ಷಗಳಿಗೆ ಮುಸಲ್ಮಾನರು ಮತ ಹಾಕುತ್ತಿದ್ದರೂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಡುವಂತಹ ಇಚ್ಛಾಶಕ್ತಿಯನ್ನು ಯಾವುದೇ ಪಕ್ಷ ಹೊಂದಿಲ್ಲವೆಂದು ಮುಸಲ್ಮಾನರು ಇದೀಗ ಆರ್ಥಮಾಡಿಕೊಳ್ಳಲಾರಂಭಿಸಿದ್ದಾರೆ. ಎಂಐಎಂ ಪಕ್ಷವು (ಆಂಧ್ರದಲ್ಲಿ) ಕಳೆದ ೫೫ ವರ್ಷಗಳಿಂದ ಸಕ್ರೀಯ ರಾಜಕೀಯದಲ್ಲಿದೆ. ನಮ್ಮ ಪಕ್ಷದೊಂದಿಗೆ ನಿಮಗೆ ವಿರೋಧವಿರಬಹುದು. ಅದೇ ಸಂದರ್ಭದಲ್ಲಿ ಆಂಧ್ರದಲ್ಲಿರುವ ಮುಸಲ್ಮಾನರ ಸಾಮಾಜಿಕ ಆರ್ಥಿಕ ಸ್ಥಿತಿಗತಿಯು ದೇಶದಲ್ಲೇ ಅತ್ಯುತ್ತಮವಾಗಿದೆಯೆಂಬ ಸಾಚಾರ್ ವರದಿಯನ್ನು ಅಲ್ಲಗಳೆಯಲು ನಿಮಗೆ ಸಾಧ್ಯವಿಲ್ಲ. ಅದರ ಕ್ರೆಡಿಟ್ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್‌ಗಾಗಿದೆ. ದೇಶದ್ರೋಹಿಗಳೆಂದು ನಮ್ಮ ಮೇಲೆ ಮುದ್ರೆ ಒತ್ತಲ್ಪಟ್ಟಾಗಲೂ ಕೂಡ ನಾವು ಇಲ್ಲಿ ಶಿಕ್ಷಣ ಹಾಗೂ ಮೆಡಿಕಲ್ ಕಾಲೇಜುಗಳನ್ನು ನಿರಾತಂಕವಾಗಿ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ನಾನೊಬ್ಬ ಮುಸಲ್ಮಾನ. ಅದರಲ್ಲಿ ನನಗೆ ಅಭಿಮಾನವಿದೆ. ಆದ್ದರಿಂದ ನಾವು ಮುಸಲ್ಮಾನರ ಸಬಲೀಕರಣಕ್ಕಾಗಿ ಶಬ್ಧವೆತ್ತುತ್ತೇವೆ. ಅದರಲ್ಲಿ ತಪ್ಪೇನಿದೆ? ಮಹಾರಾಷ್ಟ್ರದಲ್ಲಿ ನಮ್ಮ ಗೆಲುವನ್ನು ಇಡೀ ಭಾರತದ ಜಾತ್ಯಾತೀತತೆಯ ಗೆಲುವನ್ನಾಗಿ ಕಾಣಬೇಕು. ಯಾಕೆಂದರೆ ಇಲ್ಲಿ ನಮ್ಮಂತಹ ಸಣ್ಣ ಪಕ್ಷಗಳಿಗೆ ಕೋಮುವಾದಿ ಬಿಜೆಪಿಯಂತಹ ದೊಡ್ಡ ಪಕ್ಷಗಳ ವಿರುದ್ಧ ಒಬ್ಬಂಟಿಯಾಗಿ ಸ್ಪರ್ಧಿಸಿ ಜಯಗಳಿಸಲು ಸಾಧ್ಯವಾಗಿದೆ. ವಿಷಾಧವೆನಿಸುತ್ತಿದೆ... ನಾವು ಏನೇ ಒಳ್ಳೆ ಕೆಲಸ ಮಾಡಿದರೂ ಕೆಲವರು ನಮ್ಮನ್ನು ದೇಶದ್ರೋಹಿಗಳಂತೆ ನೋಡುತ್ತಿದ್ದಾರೆ..!!

  • ಐಎಂಐ ವಿರುದ್ಧ ಹೊರಿಸಲಾಗುತ್ತಿರುವ ಮತ್ತೊಂದು ಪ್ರಮುಖ ಆರೋಪವೆಂದರೆ, ಪ್ರಚೋಧನಾಕಾರಿ ಭಾಷಣ ಮಾಡಲಾಗುತ್ತಿದೆ ಎಂಬುವುದಾಗಿದೆ. ಯಾತಕ್ಕಾಗಿ ನೀವು ಊವೈಸಿ ಸಹೋದರರು ಪ್ರಚೋದನಾತ್ಮಕ ಇಮೇಜನ್ನು ಸೃಷ್ಟಿಸಿಕೊಂಡಿದ್ದೀರಿ?

ಮಹಾರಾಷ್ಟ್ರ ಚುನಾವಣೆಯ ಸಂದರ್ಭದಲ್ಲಿ ನಮಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗುವಾಗಲೂ ೧೪೯ (ಸಿಆರ್‌ಪಿಸಿ) ಪ್ರಕಾರ ನೋಟಿಸ್ ಲಭಿಸುತ್ತಿತ್ತು. ಆದರೆ ಇತರ ಪಕ್ಷಗಳ ಮುಖಂಡರಿಗೆ ಇದು ಲಭ್ಯವಾಗುತ್ತಿರಲಿಲ್ಲ. ಅದಲ್ಲದೆ ನನ್ನ ಪೂರ್ತಿ ಭಾಷಣವನ್ನು ಪೊಲೀಸರು ಹಾಗೂ ಎದುರಾಳಿಗಳು ಪೂರ್ಣವಾಗಿ ರೇಕಾರ್ಡ್ ಮಾಡುತ್ತಿದ್ದರು. ನೀವು ಹೇಳುವಂತೆ ನಾನು ಪ್ರಚೋಧನಕಾರಿಯಾಗಿ ನಡೆದುಕೊಂಡಿದ್ದಲ್ಲಿ ಖಂಡಿತವಾಗಿಯೂ ಚುನಾವಣಾ ಆಯೋಗವು ಅದನ್ನು ವರದಿ ಮಾಡುತ್ತಿದ್ದರು. ನಾವು ಹೇಡಿಗಳಲ್ಲ. ನಾವು ಪ್ರತಿನಿಧಿಸುವ ಸಮುದಾಯ ಏನನ್ನು ಚಿಂತಿಸುತ್ತಿದೆ ಎಂಬುವುದನ್ನು ಹೊರಗಿನವರಿಗೆ ಹೇಳಿಕೊಡುವ ಕೆಲಸವನ್ನು ಮಾತ್ರ ಮಾಡುತ್ತಿದ್ದೇವೆ.

  • ಮುಸಲ್ಮಾನರು ಒಗ್ಗಟ್ಟಾಗುತ್ತಿರುವುದು ಇತರ ರಾಜಕೀಯ ಪಕ್ಷಗಳಲ್ಲಿ ಭಯ ಹುಟ್ಟಿಸಿದೆಯೇ?

ಹೌದು... ಅವರು ಭಯಪಡಬೇಕು. ಇಷ್ಟು ದಿನಗಳವರೆಗೆ ಮುಸ್ಲಿಂ ಸಮುದಾಯ ಮತ್ತು ರಾಜಕಾರಣಿಗಳನ್ನು ಇಫ್ತಾರ್ ಕೂಟ ನಡೆಸಲು, ಅಜ್ಮೀರ್ ದರ್ಗಾದಲ್ಲಿ ಚಾದರ ಹಾಕಲು, ಬಿರಿಯಾನಿ ರೆಡಿಮಾಡುವುದಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಆವಾಗೆಲ್ಲ ಮುಸ್ಲಿಂ ನಾಯಕತ್ವ ಎಲ್ಲಿ ಹೋಗಿತ್ತು? ರಾಜಕೀಯ ಯಜಮಾನಿಗಳ ಜೀತದಾಳುಗಳಾಗಿ ಅವರು ಕೆಲಸಮಾಡುತ್ತಿದ್ದರು. ರಾಜಕಾರಣಿಗಳ ಪಾದಸೇವೆ ಮಾಡುವುದು ಓರ್ವ ಮುಸ್ಲಿಂ ನಾಯಕನ ಮೌಲ್ಯವೆಂದು ಪರಿಗಣಿಸಲ್ಪಡುವುದಾದರೆ ನನಗೆ ಆ ಸ್ಥಾನ ಬೇಡ. ನಾನು ಯಾವಾಗಲೂ ಮುಸ್ಲಿಂಮರೊಂದಿಗೆ ಹೇಳುವ ಮಾತಿದೆ; ನಾವು ಜಾತ್ಯಾತೀತತೆಯ ಕೂಲಿ ಕಾರ್ಮಿಕರಲ್ಲ. ಕಾಲಾಂತರಗಳಿಂದ ಜಾತ್ಯಾತೀತತೆಯ ಭಾರವನ್ನು ಹೊರಬೇಕಾದವರು ನಾವು. ನಾವು ಒಬ್ಬಂಟಿಯಾಗಿ ಸಹಿಸಿಕೊಳ್ಳುವಂಥದಲ್ಲ ಈ ದುರಂತ!.

  • ಭಾರತದಲ್ಲಿ ಬಿಜೆಪಿ ಅಥವಾ ಎಂಐಎಂ ಮಾದರಿಯ ಧರ್ಮನಿಷ್ಠೆಯ ರಾಜಕೀಯ ಪಕ್ಷಗಳ ಅಗತ್ಯವಿದೆಯೇ?

ಭಾರತದಲ್ಲಿ ಶರಿಅತ್ ನಿಯಮವನ್ನು ಜಾರಿಗೆ ತರಬೇಕೆಂಬುವುದು ನಮ್ಮ ಒತ್ತಾಯವಲ್ಲ. ಬದಲಾಗಿ ಸಂವಿಧಾನ ವಿಧಿಸಿರುವ ಎಲ್ಲಾ ಅವಕಾಶಗಳನ್ನು ನಮಗೆ ಅನುವುಮಾಡಿಕೊಡಬೇಕೆಂಬುವುದು ನಮ್ಮ ಆಗ್ರಹವಾಗಿದೆ. ಇಸ್ಲಾಮಿನ ಹೆಸರಿನಲ್ಲಿ ನಾನು ಓಟು ಕೇಳುವುದಿಲ್ಲ. ಲೋಕಸಭೆಯಲ್ಲೂ, ವಿಧಾಸಭೆಯಲ್ಲೂ ನಮ್ಮ ಸಮುದಾಯದ ಪ್ರಾತಿನಿಧ್ಯವಾಗಿದೆ ನಮ್ಮ ಗುರಿ. ನಮ್ಮನ್ನು ಮತ್ತು ಬಿಜೆಪಿಯನ್ನು ಹೋಲಿಕೆ ಮಾಡುವುದು ಸರಿಯಲ್ಲ. ಬಿಜೆಪಿಯ ಕುರಿತು ತಿಳಿಬೇಕಾದರೆ ಅವರ ಗುಜರಾತ್ ಘಟಕವು ತನ್ನ ವೆಬ್‌ಸೈಟಿನಲ್ಲಿ ಪ್ರಕಟಮಾಡಿರುವ ದೀನ್ ದಯಾಳ್ ಶರ್ಮಾರ ತತ್ವಗಳನ್ನು ಓದಿದರೆ ಸಾಕು. ಎರಡು ಮುಸ್ಲಿಮರು ಜೊತೆಯಾಗಿ ಬರುವುದಾದರೆ ಅಲ್ಲಿ ಏನೋ ದುರಂತ ನಡೆಯಲಿದೆ ಎಂದರ್ಥ. ಅವರನ್ನು ನಂಬಬೇಡಿ ಎಂದಾಗಿದೆ ಅವರು ಮುಸ್ಲಿಂಮರ ಬಗ್ಗೆ ತನ್ನ ಅನುಯಾಯಿಗಳಿಗೆ ಕೊಡುವ ನಿದೇರ್ಶನ.

  • ಮೋದಿಯ ಕುರಿತು ತಮ್ಮ ಅಭಿಪ್ರಾಯ? ಅವರು ಮುಸಲ್ಮಾರಿಗೆ ಬೆದರಿಕೆಯೇ?

ಪ್ರಧಾನಮಂತ್ರಿ ಹೇಳುತ್ತಾರೆ, ನಾವು ಪ್ಲಾಸ್ಟಿಕ್ ಸರ್ಜರಿ ಮತ್ತು ಕೋಶ ಸಂಶೋಧನೆಯನ್ನು ಸಹಸ್ರಾರು ಶತಮಾನಗಳಿಗಿಂತಲೂ ಹಿಂದೆ ಮಾಡಿದ್ದೇವೆಂದು. ಒಂದು ವೇಳೆ ಈ ಮಾತು ನಾನು ಹೇಳಿದ್ದರೆ ಮಾಧ್ಯಮಗಳು ಯಾವಾಗಲೇ ನನ್ನ ವಿರುದ್ಧ ರಂಗಕ್ಕಿಳಿಯುತ್ತಿದ್ದವು. ಕೇವಲ ’ಒಬ್ಬ ಆಡಳಿತಗಾರ’ ಎಂಬುವುದಕ್ಕಿಂತಲೂ ಹೆಚ್ಚಿನ ಅರ್ಹತೆಯನ್ನು ಪ್ರಧಾನಮಂತ್ರಿ ಹೊಂದಿರಬೇಕಾಗುತ್ತದೆ. ಆಡಳಿತ ನಿರ್ವಹಣೆ ಮಾತ್ರ ಒಬ್ಬ ಪ್ರಧಾನಿಯ ಅರ್ಹತೆ ಎಂದು ಪರಿಗಣಿಸುವುದಾದರೆ ಓರ್ವ ಐಎಎಸ್ ಆಫಿಸರನ್ನು ಆ ಸ್ಥಾನದಲ್ಲಿ ತಂದು ಕೂರಿಸಬಹುದಾಗಿದೆ. ಬುದ್ಧ ಧರ್ಮದ ಮೂಲಸ್ಥಾನವಾದ ಭಾರತದ ಪ್ರಧಾನಿಯೊಬ್ಬರು ಜಪಾನಿಗೆ ಹೋಗಿ ಅಲ್ಲಿನ ಪ್ರಧಾನ ಮಂತ್ರಿಗೆ ಸನ್ಮಾನಿಸುವುದು ಭಗವತ್‌ಗೀತೆಯನ್ನಾಗಿದೆ. ಬುದ್ಧ ಧರ್ಮದ ಸಾಂಸ್ಕೃತಿಕ ಪ್ರತೀಕಗಳನ್ನಲ್ಲವೇ ಅವರು ಸನ್ಮಾನಿಸಬೇಕಿರುವುದು?. ಇಂಡಿಯನ್ ಮುಸಲ್ಮಾನರು ಐಸಿಸಿ ಸಂಘಟನೆಯಲ್ಲಿ ಸೇರಲು ಸಾಧ್ಯವಿಲ್ಲವೆಂದು ಪ್ರಧಾನಮಂತ್ರಿ ಹೇಳುತ್ತಿರುವಾಗಲೇ ಅವರ ಪಕ್ಷದ ಸಂಸದರೊಬ್ಬರು ಇದಕ್ಕೆ ವೈಪರಿತ್ಯವಾಗಿ ಹೇಳಿಕೆ ಕೊಡುತ್ತಾರೆ. ಮುಸ್ಲಿಮರ ವಿರುದ್ಧ ಆರೋಪಗಳು ಕೇಳಿ ಬರುವಾಗ ಅದನ್ನು ಸಂಶಯಾಸ್ಪದ ದೃಷ್ಟಿಯಿಂದಲೇ ಇಲ್ಲಿ ವೀಕ್ಷಿಸಲಾಗುತ್ತಿದೆ. asaduddin-owaisi-leader-of-muslims-in-Indiaಗುಜರಾತಿನಲ್ಲಿ ಮೋದಿಯವರು ಮಾಡಿದ ಪಾಪ ಕೃತ್ಯವನ್ನು ಹೇಳಲು ಇಲ್ಲಿ ಯಾರಿಗೂ ತಾತ್ಪರ್ಯವಿಲ್ಲ. ನಕಲಿ ಎನ್‌ಕೌಂಟರ್‌ಗೆ ಬಲಿಯಾದ ಇಶ್ರತ್ ಜಹಾನ್, ಇಹ್ಸಾನ್ ಜಫ್ರಿಯ ಕುರಿತು ಯಾರೂ ಮಾತನಾಡುತ್ತಿಲ್ಲ. ಪುಸ್ತಕ ಮಾರಾಟವನ್ನೇ ಗುರಿಯನ್ನಾಗಿಡುವ ಕೆಲ ಮಾದ್ಯಮ ಪ್ರತಿನಿಧಿಗಳು, ಬರಹಗಾರರು ಈ ಪ್ರಕರಣದಲ್ಲಿ ಮೋದಿಯನ್ನು ಆರೋಪಿಯನ್ನಾಗಿ ಮಾಡಬಾರದೆಂದು ಹೇಳುತ್ತಾರೆ. ಇದೆಲ್ಲವನ್ನೂ ಹೊರತುಪಡಿಸಿ ಅವರ ಪಕ್ಷ ಏನು ಹೇಳುತ್ತದೆ ಎಂಬುವುದನ್ನು ನಾವು ನೋಡಬೇಕಿದೆ. ಆರ್‌ಎಸ್‌ಎಸ್ ಮುಖಂಡ ಭಾರತವನ್ನು ಹಿಂದೂರಾಷ್ಟ್ರವೆಂದು ಕರೆಯುತ್ತಾನೆ. ೨೦೧೯ರೊಳಗೆ ಬಾಬರಿ ಮಸೀದಿ ಪ್ರಕರಣಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಹೇಳುತ್ತಾರೆ. ನಾನಲ್ಲ, ಬದಲಾಗಿ ಮೋದಿಯವರ ಕಾರ್ಯವೈಖರಿಯ ಬಗ್ಗೆ ಈ ದೇಶವೇ ತೀರ್ಮಾನ ಹೇಳಬೇಕು.

  • ಜಪಾನ್ ಪ್ರಧಾನಿಗೆ ಮೋದಿ ಭಗವತ್‌ಗೀತೆ ನೀಡಿರುವುದರಲ್ಲಿ ತಪ್ಪೇನಿದೆ.?

ಮೋದಿಯವರು ಕುರ್‌ಆನನ್ನು ಕೊಡುಗೆಯಾಗಿ ನೀಡಬೇಕಿತ್ತೆಂದು ನಾನು ಹೇಳುತ್ತಿಲ್ಲ. ಅವರು ಜಪಾನಿಗೆ ಹೋಗುವಾಗ ಅಲ್ಲಿರುವವರಿಗೆ ಬುದ್ಧಧರ್ಮಕ್ಕೆ ಸಂಬಂಧಪಟ್ಟ ಏನನ್ನಾದರೂ ಕೊಡುಗೆಯಾಗಿ ನೀಡುವುದು ಅತ್ಯುತ್ತಮವಾಗಿರುತ್ತಿತು ಎಂದಷ್ಟೇ ಹೇಳುತ್ತಿದ್ದೇವೆ. ಮೋದಿ ವಿದೇಶಕ್ಕೆ ಹೋಗುವುದು ದೇಶದ ಪ್ರಧಾನ ಮಂತ್ರಿಯಾಗಿಯೇ ಹೊರತು ಒಂದು ಧರ್ಮದ ಪ್ರಧಾನಿಯಾಗಿ ಅಲ್ಲ.  ನಾವು ಇದುವರೆಗೂ ಹಿಂದೂ ರಾಷ್ಟ್ರದವರಲ್ಲ. ಮೋದಿಗೆ ಬೇಕಾದರೆ ತನ್ನ ಪ್ರಚಂಡ ಬಹುಮತವನ್ನು ಉಪಯೋಗಿಸಿಕೊಂಡು ಅನ್ಯಮಾರ್ಗದಲ್ಲಿ ಸಂವಿಧಾನದಿಂದ ಜಾತ್ಯಾತೀತ” ಎಂಬ ಪದವನ್ನು ಅಲಿಸಿಬಿಡಬಹುದು ಅಷ್ಟೇ. ಈಗಲೂ ಭಾರತ ಜಾತ್ಯಾತೀತ ರಾಷ್ಟ್ರ. ಕಾರಣ ೩೧ ಶೇಕಡ ಓಟ್ ಮಾತ್ರ ಅವರು ಪಡೆದಿರುವುದು. ಚಾಲ್ತಿಯಲ್ಲಿರುವ ಚುನಾವಣಾ ರೀತಿಯ ಬಗ್ಗೆ ನನಗೆ ಸಮಾಧಾನವಿಲ್ಲ. ಒಟ್ಟು ೩೧ ಶತಮಾನ ಮಾತ್ರ ಓಟು ಪಡೆದ ಪಕ್ಷವನ್ನು ಪಾರ್ಲಿಮೆಂಟ್‌ನಲ್ಲಿ ೫೦ ಶೇ. ಸೀಟು ಪಡೆಯಲು ಪ್ರೇರೆಪಿಸುವುದಾಗಿದೆ ಈಗಿನ ಚುನಾವಣಾ ವ್ಯವಸ್ಥೆ.

  • ಮುಂದಿನ ಚುನಾವಣೆಯಲ್ಲಿ ಯಾವೆಲ್ಲ ರಾಜ್ಯಗಳಲ್ಲಿ ಕಣಕ್ಕಿಳಿಯುವ ಯೋಜನೆ ಇದೆ?

ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶ. ಉತ್ತರ ಪ್ರದೇಶದಲ್ಲಿ ಕಾರ್ಯಚಟುವಟಿಕೆ ಪ್ರಾರಂಭಿಸಿ ತುಂಬ ದಿನಗಳಾಗಿವೆ. ಮುಂದಿನ ಚುನಾವಣೆಯು ಮುಲಾಯಂ ಸಿಂಗ್ ಯಾದವ್‌ರ ಹಾದಿ ಅಷ್ಟೊಂದು ಸುಲಭವಾಗಿರಲ್ಲ. ಅವರು ಅಲ್ಲಿ ಗಲಭೆಗಳು ನಡೆಯಲು ಅವಕಾಶ ಮಾಡಿಕೊಟ್ಟವರಾಗಿದ್ದಾರೆ. ಮುಸ್ಲಿಮರನ್ನು ಮತ್ತು ದಲಿತರನ್ನು ಮನಪೂರ್ವಕ ಪರಸ್ಪರ ಕಚ್ಚಾಡುವಂತೆ ಮಾಡುತ್ತಿದ್ದರು ಅವರು. ಈ ಹಿಂದೆ ಮುಸ್ಲಿಮರು ಮುಲಾಯಂ ಸಿಂಗ್‌ಗೆ ಓಟು ನೀಡಿದರೂ ಕೂಡ ಸಮಾಜವಾದಿ ಪಾರ್ಟಿಯಿಂದ ನಿಯುಕ್ತಗೊಂಡ ಒಬ್ಬನೇ ಮುಸ್ಲಿಂ ಅಭ್ಯಥಿಯನ್ನು ಗೆಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಸೆಕ್ಯುಲರ್ ಪಾಟಿಗಳು ಎಲ್ಲೆಲ್ಲ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಮುಸ್ಲಿಮಮರ ಕ್ಷೇಮಕ್ಕಾಗಿ ಯಾವುದೇ ಯೋಜನೆಗಳು ಕೈಗೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರಿಗೆ ಕೊಟ್ಟ ಮಾತನ್ನು ಪಾಲಿಸಲು ಮಮತಾ ಬ್ಯಾನರ್ಜಿಗೂ ಸಾಧ್ಯವಾಗಲಿಲ್ಲ. ಭಾಷಣದಲ್ಲಿ ಅಸ್ಸಲಾಮು ಅಲೈಂಕು ಎಂದೋ ಆಮೀನ್ ಎಂದೋ ಹೇಳಲು ಅವರು ನಿಪುಣರಾಗಿದ್ದಾರೆ. ಕೇವಲ ಭರವಸೆಗಳಲ್ಲಿ ಮಾತ್ರ ಮುಸ್ಲಿಮರ ಆಶಾಭಾವನೆ ಅಡಗಿಕೊಂಡಿದೆ. ಅದನ್ನು ಈಡೇರಿಸಲು ಇದುವರೆಗೂ ಯಾರೂ ಮುಂದೆ ಬರುತ್ತಿಲ್ಲ

  • ಲವ್ ಜಿಹಾದ್ ವಿಷಯದಲ್ಲಿ ತಮ್ಮ ನಿಲುವೇನು? ಮುಸ್ಲಿಮರು ಒಂದು ಪುನರಾವಲೋಕನಕ್ಕೆ ತಯಾರಬೇಕಾದ ಅಗತ್ಯವಿದೆಯ?

ಲವ್ ಜಿಹಾದ್ ಆರ್‌ಎಸ್‌ಎಸ್‌ನ ನಾಚಿಕೆಗೆಟ್ಟ ನಿಗೂಢ ತಂತ್ರವಾಗಿದೆ.  ಇಬ್ಬರು ತಮ್ಮ ಸ್ವಇಚ್ಛೆಯಿಂದ ಬದುಕಲು ತೀರ್ಮಾನ ತೆಗೆದುಕೊಂಡರೆ ನಮಗೇನು ಮಾಡಲು ಸಾಧ್ಯ. ಮುಸ್ಲಿಂ ಸಮಾಜದ ಈ ಪರಿಸ್ಥಿತಿಗೆ ನನ್ನನ್ನು ನಾನೇ ದೂಷಿಸುತ್ತೇನೆ. ನಾವು ಈ ವಿಷಯದಲ್ಲಿ ಆಕ್ಷೇಪಕ್ಕೊಳಗಬೇಕಾದವರೇ ಆಗಿದ್ದೇವೆ. ನಾವು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ನನ್ನ ಕ್ಷೇತ್ರದ ಜನತೆಯಲ್ಲಿ ನಾನು ಸಾಮಾನ್ಯವಾಗಿ ಹೇಳುವ ಮಾತಿದೆ; ನಿಮ್ಮ ಹೆಣ್ಣು ಮಕ್ಕಳನ್ನು ಬೇಗನೇ ಮದುವೆ ಮಾಡಿಸಿಕೊಡುವ ಬಗ್ಗೆ ಚಿಂತಿಸಬೇಡಿ, ದಾರಾಳವಾಗಿ ವಿದ್ಯಾಭ್ಯಾಸವನ್ನು ಧಾರೆಯೆರೆಯುವತ್ತ ಗಮನಕೊಡಿ

  • ಕಳೆದ ೫೦ ವರ್ಷಗಳಲ್ಲಿ ಮುಸ್ಲಿಮರು ಎಲ್ಲಿಂದ ಹಿಂದುಳಿಯಲ್ಪಟಿದ್ದಾರೆಂದು ತಾವು ಹೇಳಬಲ್ಲಿರಾ?

20owaisi1ಮುಸ್ಲಿಮರ ರಾಜಕೀಯ ಪ್ರಾತಿನಿತ್ಯದ ಬಗ್ಗೆ ಇದುವರೆಗೂ ಯಾರಿಂದಲೂ ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ರಾಜಕೀಯದ ಟೋಕನ್ ಮಾತ್ರವಾಗಿ ಉಳಿದಿದ್ದಾರೆ. ಮೌಲಾನಾ ಆಝಾದ್ ಹೆ, ಬಸ್ ಮೌಲಾನಾ ರಹೇಂಗ(ಮೌಲಾನಾ ಆಝಾದ್ ಇದ್ದರು. ಆದರೆ ಎಂದೂ ಮೌಲಾನಾ ಆಝಾದ್ ಮಾತ್ರ) ಮೌಲಾನಾ ಆಝಾದರ ನಂತರ ಯಾರೂ ರಾಜಕೀಯ ರಂಗಕ್ಕೆ ಬಂದಿಲ್ಲ. ದೇಶ ವಿಭಜನೆಯು ಮುಸ್ಲಿಮರ ಪರಾಭವಕ್ಕೆ ಕಾರಣವೆಂದು ಹೇಳಲ್ಪಡುತ್ತಿದೆ. ಅದು ೬೦ ವರ್ಷಗಳಿಂತಲೂ ಹಿಂದೆ ನಡೆದು ಹೋದ ಕಥೆಯಲ್ಲವೇ. ಈಗ ಏನಿದೆ ಸಮಸ್ಯೆ? ರಾಜಕೀಯ ಪಕ್ಷಗಳು ಮುಸ್ಲಿಮರ ಸಬಲೀಕರಣಕ್ಕಾಗಿ ಇಷ್ಟು ದಿನಗಳ ಕಾಲ ಏನು ಮಾಡಿದ್ದಾರೆ? ಯಾತಕ್ಕಾಗಿ ಈಗಿನ ಕೇಂದ್ರ ಸರಕಾರವು ಹಜ್ಜ್ ಸಬ್ಸಿಡಿ ಮತ್ತು ಮದ್ರಸ ಆಧುನಿಕರಣಕ್ಕೆ ಅನುದಾನ ಮಂಜೂರು ಮಾಡುತ್ತಿದ್ದೀರಾ? ಸಮುದಾಯಕ್ಕೆ ಇದರಿಂದ ಪ್ರಯೋಜನವಿಲ್ಲ. ಇಂಥ ಅನುದಾನವನ್ನು ನಿಲ್ಲಿಸಲಿ. ಬದಲಾಗಿ ನಮ್ಮ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ಮಂಜೂರು ಮಾಡಲಿ. ನಮಗೆ ವಿದ್ಯಾಕೇಂದ್ರಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಡಲಿ.

  • ಭಯೋತ್ಪಾಧನೆ-ಇಸ್ಲಾಮಿಕ್ ಸ್ಟೇಟ್(ಐಸಿಸಿ) ಎತ್ತಿಹಿಡಿಯುವ ಬೆದರಿಕೆಯನ್ನು ನೀವು ಹೇಗೆ ನಿಭಾಯಿಸುವಿರಿ?

ಇಸ್ಲಾಮಿಕ್ ಸ್ಟೆಟ್ ಇಸ್ಲಾಮಿಕವಲ್ಲವೆಂದು ನಾವು ಪುನರಾವರ್ತಿಸಿ ಹೇಳಿಕೊಂಡು ಬಂದಿದ್ದೇವೆ. ಯಾರಿಗಾದರೂ ಜಿಹಾದ್ ಮಾಡಲು ಭಾರೀ ಆಸೆ ಇದ್ದರೆ ಬಡತನ ಹಾಗೂ ಅನಕ್ಷರರತೆಯ ವಿರುದ್ಧ ಜಿಹಾದ್ ನಡೆಸಿ ಎಂದು ನಾನು ಸಾಧಾರಣವಾಗಿ ಯುವಕರಿಗೆ ಹೇಳುತ್ತಿರುತ್ತೇನೆ. ನೀವು ಪ್ರಜಾಪ್ರಭುತ್ವದ ಮೂಲಕ ಜಿಹಾದ್ ನಡೆಸಲು ಸಿದ್ದರಿದ್ದಿರೋ. ಹಾಗಾದರೆ ನೀವು ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷಕ್ಕೆ ಸೇರಿಕೊಳ್ಳಿ. ಇಲ್ಲಿರುವ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡೋಣ. ಯುವಜನತೆಯ ಮಧ್ಯೆ ಬೌತಿಕ ಸಂವಾದಗಳನ್ನೇರ್ಪಡಿಸುವ ಅಗತ್ಯವಿದೆ. ಇಸ್ಲಾಮಿಕ್ ಸ್ಟೇಟ್(ಐಎಎಸ್‌ಎಸ್) ಅಂತರ್ಜಾಲಗಳ ಮೂಲಕ ಅವರ ಸಿದ್ಧಾಂತಗಳನ್ನು ಶಕ್ತವಾಗಿ ಪ್ರಚುರಪಡಿಸುತ್ತಿದ್ದಾರೆ. ಅದಕ್ಕೆ ನಮ್ಮ ಯುವಜನತೆಯು ಹಠಾತ್ತನೆ ಬಲಿಯಾಗುತ್ತಿದ್ದಾರೆ. ನಾವು ಇಸ್ಲಾಮಿಕ್ ಸ್ಟೇಟನ್ನು ವಿರೋಧಿಸಿದರೆ ಮಾತ್ರ ಸಾಲದು ನಮ್ಮ ಯುವ ಜನತೆಗೆ ಅದರ ಅನಾಹುತದ ಬಗ್ಗೆಯೂ ಮಾರ್ಗದರ್ಶನವನ್ನು ನೀಡುವ ಕೆಲಸ ಮಾಡಬೇಕಿದೆ.

  • ನರೇಂದ್ರ ಮೋದಿಗೆ ಸೇಕ್ ಹ್ಯಾಂಡ್ ಮಾಡುತ್ತೀರಾ?

ಅವರು ಈ ದೇಶ ಪ್ರಧಾನಿಯಾಗಿದ್ದಾರೆ. ಆ ಪದವಿಯಲ್ಲಿರುವ ಅವರನ್ನು ನಾನು ಗೌರವಿಸುತ್ತೇನೆ. ಅದೇ ಸಂದರ್ಭದಲ್ಲಿ ನನಗೆ ಅವರನ್ನು ವಿರೋಧಿಸುವ ಅಧಿಕಾರವೂ ಇದೆ. ನಾಳೆ ನಾನು ಮುಖ್ಯಮಂತ್ರಿಯಾಗಿ ನನ್ನ ಅಧಿಕಾರದ ಪರಿಧಿಯಲ್ಲಿ ೫೦೦೦ ಜನರು ಕೊಲ್ಲಲ್ಪಟ್ಟರು ಎಂದು ನೀವು ಭಾವಿಸಿಕೊಳ್ಳಿ. ಕೊಲ್ಲಲ್ಪಟ್ಟವರ ಪೈಕ್ಲಿ ನಿಮ್ಮ ತಂದೆಯೋ ತಾಯೆಯೋ ಇದ್ದಲ್ಲಿ ನೀವು ನನ್ನ ಬಳಿ ಬಂದು ಸೇಕ್‌ಹ್ಯಾಂಡ್‌ಗೆ ಕೊಡುತ್ತಿರೋ? ಎಲ್ಲಾ ಅಪರಾಧಿಗಳಿಗೂ ಶಿಕ್ಷೆಯಾಗುವವರೆಗೂ ನನಗೆ ಗುಜರಾತನ್ನು ಮರೆಯಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿಯಾಗಿರುವ ಅವರನ್ನು ನಾನು ಗೌರವಿಸುತ್ತೇನೆ ಎಂಬುವುದರ ಅರ್ಥ ಅವರ ಮುಂದೆ ನಾನು ಸೋಲೊಪ್ಪಿಕೊಳ್ಳುತ್ತೇನೆಂದಲ್ಲ.

ಭಾಷಾಂತರ: ಯೂಸುಫ್ ಎಂ ಮುಂಡೋಳೆ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

Related Posts

Leave A Comment

Voting Poll

Get Newsletter