ಮೀಲಾದ್ ಆಚರಣೆ-ಪ್ರಮಾಣ ಗ್ರಂಥಗಳಲ್ಲಿ...

312881,xcitefun-eid-milad-nabi-wallpaper-5ಜಾಗತಿಕ ಮುಸಲ್ಮಾನರು ಅತ್ಯಧಿಕ ಸಡಗರ, ಸಂತೋಷದಿಂದ ಬರಮಾಡಿದ ರಬೀವುಲ್ ಅವ್ವಲ್ ತಿಂಗಳು ವಿದಾಯ ಹೇಳಿದೆ. ಪ್ರವಾದಿ ಮುಹಮ್ಮದ್(ಸ.ಅ)ರು ಜನಿಸಿದ ಈ ತಿಂಗಳಲ್ಲಿ ಅವರ ಮಹಿಮೆಗಳನ್ನು ಕೊಂಡಾಡಿದ್ದು ಕೆಲವು ಅಲ್ಪಜ್ಞಾನಿಗಳಾದ ನೂತನ ಸಿದ್ಧಾಂತಿಕರಿಗೆ ಅಲರ್ಜಿಯೆನಿಸಿದರೂ ಇದು ಇಸ್ಲಾಮಿನ ದೃಷ್ಟಿಯಲ್ಲಿ ಪುಣ್ಯದಾಯಕವೆಂದು ಹೇಳದೆ ವಿಧಿಯಿಲ್ಲ. ಪ್ರವಾದಿ(ಸ.ಅ)ರು ಒಬ್ಬ ಸಾಮಾನ್ಯ ಮನುಷ್ಯರೆಂದೂ, ಮೀಲಾದ್ ಅಚರಣೆ ಶಿರ್ಕ್ ಹಾಗೂ ಬಿದ್‌ಅತ್ ಎಂದೂ ಹೇಳಿ ಪ್ರಸ್ತತ ಕಾರ್ಯಗಳನ್ನು ಹೀಯಾಳಿಸುತ್ತಾ ಪ್ರಮಾಣ ಗ್ರಂಥಗಳನ್ನೂ ಪೂರ್ವಿಕರಾದ ವಿದ್ವಾಂಸರನ್ನು ನೂತನವಾದಿಗಳು ಧಿಕ್ಕರಿಸುತ್ತಾರೆ. ಪ್ರವಾದಿ(ಸ.ಅ)ರು ಒಬ್ಬ ಸಾಮಾನ್ಯ ಮನುಷ್ಯರಂತಲ್ಲವೆಂಬ ಸತ್ಯವನ್ನು ಅಂಗೀಕರಿಸುವುದು, ಪ್ರವಾದಿ (ಸ.ಅ)ರ ಗುಣಗಾನಗಳನ್ನು(ಮೌಲೀದ್) ಹೇಳುವುದು, ಅವರ ಹೆಸರಿನಲ್ಲಿ ದಾನ ಧರ್ಮ ನೀಡುವುದು, ಪ್ರಾರ್ಥನೆ ಮಾಡುವುದು, ಅವರ ಮಹತ್ವಗಳನ್ನು ಹೇಳಿ ಜನರಿಗೆ ಅರಿವು ಮೂಡಿಸುವಂತೆ ಸಭೆ ಸಮಾರಂಭ ಇತ್ಯಾದಿ ಏರ್ಪಡಿಸುವುದು ಮುಂತಾದುವುಗಳೇ ಪ್ರಸ್ತುತ ಮೀಲಾದ್ ಆಚರಣೆಯಲ್ಲಿ ಅಡಕವಾಗಿರುವುದು. ಇದರಲ್ಲಿ ಶಿರ್ಕ್, ಬಿದ್‌ಅತ್ ಏನಿದೆ!? ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ದೂತರಾದ ಮಲಕ್‌ಗಳು ಪ್ರವಾದಿ(ಸ.ಅ)ರ ಹೆಸರಲ್ಲಿ ಸ್ವಲಾತ್ ಹೇಳುತ್ತಾರೆ. ಓ ಸತ್ಯ ವಿಶ್ವಾಸಿಯರೇ: ನೀವು ಕೂಡಾ ಪ್ರವಾದಿ(ಸ.ಅ)ರ ಮೇಲೆ ಸ್ವಲಾತ್ ಹೇಳಿರಿ. (ಕುರ್‌ಆನ್ ೩೩-೫೬) ಪ್ರಸ್ತುತ ಸ್ವಲಾತ್ ಎಂದರೆ ’ಪ್ರಕೀರ್ತನೆ’ ಹೇಳುವುದೆಂಬುದಾಗಿ ಇಮಾಂ ಬೈಲಾವೀ(ರ)  ಹೇಳುತ್ತಾರೆ.. (ಬೈಲಾವೀ-೨:೨೦೦) ಅನಸ್(ರ) ಹೇಳುತ್ತಾರೆ: ಸ್ವಹಾಬಿಗಳಲ್ಲಿ ಒಂದು ವಿಭಾಗವು ಒಗ್ಗೂಡಿ ಪೂರ್ವಿಕ ಪ್ರವಾದಿಗಳಾದ ಹ.ಆದಂ(ಅ), ಹ.ಇಬ್ರಾಹೀಂ(ಅ), ಹ. ಮೂಸಾ(ಅ), ಹ.ಈಸಾ(ಅ) ಮುಂತಾದವರ ಗುಣಗಾನಗಳನ್ನು ಹೇಳುತ್ತಿದ್ದರು. ಆ ವೇಳೆಗೆ ಪ್ರಸ್ತುತ ಕಾರ್ಯವನ್ನು ವೀಕ್ಷಿಸುತ್ತಾ ರಂಗಪ್ರವೇಶ ಮಾಡಿದ ಅಂತ್ಯ ಪ್ರವಾದಿ ಮುಹಮ್ಮದ್(ಸ.ಅ)ರು ಈ ರೀತಿ ಹೇಳಿದರು. ಓ ನನ್ನ ಸ್ವಹಾಬಿಯರೇ, ನೀವು ಹೇಳುವುದೆಲ್ಲಾ ನಿಜ ತಾನೇ, ಆದರೆ ನೀವು ತಿಳಿಯಬೇಕು. ನಾನು ಅಲ್ಲಾಹುವಿನ ಪರಮ ಶ್ರೇಷ್ಠ ಪ್ರವಾದಿ. ಅಂತ್ಯ ದಿನದಲ್ಲಿ ’ಲಿವಾಉಲ್ ಹಮ್‌ದ್’ ಎಂಬ ಪತಾಕೆಯನ್ನು ವಹಿಸುವವನು ನಾನೇ. ಅಲ್ಲಾಹುವಿನ ಸನ್ನಿಧಿಯಲ್ಲಿ ಪ್ರಥಮವಾಗಿ ಶಿಫಾರಸ್ಸು ಸ್ವೀಕರಿಸಲ್ಪಡುವವನು ನಾನೇ. ಮೊದಲು ಸ್ವರ್ಗದ ಬಾಗಿಲು ತೆರೆಯಲ್ಪಡುವುದು ನನಗಾಗಿರುತ್ತದೆ. ಅಲ್ಲಾಹುವಿನ ಹತ್ತಿರ ಮುಂದಿನವರಿಗಿಂತಲೂ, ಹಿಂದಿನವರಿಗಿಂತಲೂ ಶ್ರೇಷ್ಠನು ನಾನಾಗಿರುವೆನು. ಇದ್ಯಾವುದು ನಾನು ಅಹಂಬಾವದಿಂದ ಹೇಳುವುದಲ್ಲ. (ಹದೀಸ್ ತುರ್ಮುದಿ. ಮಿಶ್ಕಾತ್ ೨-೫೧೩) ಮರಣ ಹೊಂದಿದವರ ಗುಣಗಾನ ಮಾಡುವುದು ಅನುವದನೀಯವೆಂದು ಅದನ್ನು ಪ್ರವಾದಿ (ಸ.ಅ)ರು ಅಂಗೀಕರಿಸುತ್ತಾ, ಅವರೇ ತನ್ನ ಶ್ರೇಷ್ಠತೆಗಳನ್ನು ಸ್ವಹಾಬಿಗಳಿಗೆ ಕಲಿಸಿಕೊಡುತ್ತಿದ್ದರೆಂದೂ, ಮಾತ್ರವಲ್ಲ ಅದನ್ನು ಹೇಳಲು ಪ್ರೋತ್ಸಾಹ ನೀಡುತ್ತಿದ್ದರೆಂದೂ ಇದರಿಂದ ಗ್ರಹಿಸಬಹುದು. ಅಲ್ಲದೇ ಹಲವು ಜನರು ಸೇರಿ ಮೌಲಿದ್ ಆಚರಿಸುವುದು ಪ್ರವಾದಿ(ಸ.ಅ)ರ ಹಾಗೂ ಅನುಚರರ ಚರ್ಯೆ ಕೂಡಾ ಎಂದು ಇದರಿಂದ ಸ್ಪಷ್ಡವಾಗುತ್ತದೆ. ಸ್ವಹಾಬಿಗಳು ಮೌಲಿದ್ ಆಚರಿಸುತ್ತಿದ್ದರೋ, ಪ್ರವಾದಿ ಕಾಲದಲ್ಲಿ ಮೌಲಿದ್ ಆಚರಣೆಯಲ್ಲಿತ್ತೋ ಎಂದೆಲ್ಲಾ ಪ್ರಶ್ನಿಸುವ ಅಲ್ಪಜ್ಞಾನಿಗಳಿಗೆ ಇದಕ್ಕಿಂತ ಮಿಗಿಲಾದ ಪುರಾವೆಗಳು ಬೇಕೆಂದು ತೋರುವುದಿಲ್ಲ. ಇನ್ನು ಪ್ರವಾದಿ(ಸ.ಅ)ರು ಸಾಮಾನ್ಯ ಮನುಷ್ಯರೆಂದು ಹೇಳಿ ಪ್ರವಾದಿಯವರ ಶ್ರೇಷ್ಟ ವ್ಯಕ್ತಿ ಗೌರವಕ್ಕೆ ಕುಂದೆಸೆಗುವವರಿದ್ದಾರೆ. ಚರಿತ್ರೆಯನ್ನು ಅವಲೋಕನ ಮಾಡದೆ ಸತ್ಯವನ್ನರಿಯದೆ ಸಾಧ್ಯವಿಲ್ಲ. ಪ್ರವಾದಿಯವರು ಸಾಮಾನ್ಯ ಮನುಷ್ಯರಲ್ಲವೆಂದೂ, ಅಸಾಧಾರಣವಾಧ ಅತ್ಯಧಿಕ ಶ್ರೇಷ್ಠತೆಗಳಿಂದ ಅನುಗ್ರಹೀತರಾದವರೆಂದೂ ಕುರ್‌ಆನ್ ಮತ್ತು ಹದೀಸ್‌ಗಳಿಂದ ಸ್ಪಷ್ಟಗೊಂಡಿದೆ. ಓ ಪ್ರವಾದಿಯವರೇ, ನಿಮ್ಮನ್ನು ಲೋಕಕ್ಕೆ ಅನುಗ್ರಹೀತರಾಗಿಯಲ್ಲದೆ ನಾನು ಕಳುಹಿಸಿಲ್ಲ- (ಕುರ್‌ಆನ್) ಆ ಮುರ್‌ಸಲುಗಳಲ್ಲಿ ಮುಹಮ್ಮದ್ ನೆಬಿ(ಸ.ಅ)ರನ್ನು ಹಲವು ತರದ ಸ್ಥಾನಗಳನ್ನು ನೀಡಿ, ನಾನು ಉನ್ನತಗೊಳಿಸಿದ್ದೇನೆ (ಕುರ್‌ಅನ್) ಓ ಪ್ರವಾದಿಯವರೇ, ತಾವೊಂದು ಉನ್ನತ ಸ್ವಭಾವದ ನಾಯಕರಾಗಿದ್ದೀರಿ (ಕುರ್‌ಅನ್ ) ಇನ್ನು ಹದೀಸ್‌ನಲ್ಲಿ ಹೇಳುವುದು ನೋಡಿ. ಹಝ್ರತ್ ಅನಸ್(ರ)ರಿಂದ ಉಲ್ಲೇಖನ: ಪ್ರವಾದಿ(ಸ)ರ  ದೇಹದಿಂದ ಹೊರ ಘಮಿಸುವ ಸುಗಂಧಕ್ಕಿಂತ ಮಿಗಿಲಾದ ಬೇರೊಂದು ಸುಗಂಧವನ್ನು ನಾನು ಘ್ರಾಣಿಸಲೇ ಇಲ್ಲ. (ಮುಸ್ಲಿಂ ೨:೨೫೭, ಬುಖಾರಿ ೧-೨೬೪). ಇಬ್ನು ಸಿರೀನ್(ರ)ರಿಂದ ಉಲ್ಲೇಖನ ಅನಸ್(ರ)ರವರ ಕುಟುಂಬ ಮೂಲಕ ಪ್ರವಾದಿ(ಸ.ಅ)ರ ಒಂದು ಕೂದಲು ನನಗೆ ಲಭ್ಯವಾಗಿದೆ. ಅದನ್ನು ನಾನು ಆಬಿದತ್(ರ)ರೊಡನೆ ಹೇಳಿದಾಗ, ಅವರು ಈ ರೀತಿ ಹೇಳಿದರು. ಪ್ರವಾದಿ(ಸ.ಅ)ರ ಒಂದು ಕೂದಲು ನನ್ನ ಬಳಿ ಇರುತ್ತಿದ್ದರೆ ಈ ಲೋಕಕ್ಕಿಂತಲೂ ಅತಿಯಾಗಿ ಆ ಕೂದಲನ್ನು ಪ್ರೀತಿಸುತ್ತಿದ್ದೆ. (ಬುಖಾರಿ ೧-೨೯) ಪ್ರವಾದಿ(ಸ.ಅ)ರು ವುಲೂ(ಅಂಗ ಸ್ನಾನ) ಮಾಡುತ್ತಿರುವಾಗ ಅವರ ಪವಿತ್ರ ಅಂಗಾಂಗಗಳಿಂದ ಸುರಿಯುತ್ತಿರುವ ನೀರಿನ ಹನಿಗಳನ್ನು ಕೈಗೆ ತಾಗಿಸಿ, ಅದನ್ನು ಶರೀರಕ್ಕೆ ಸವರಿಕೊಳ್ಳಲು ಸ್ವಹಾಬಿಗಳು ನೂಕು ನುಗ್ಗಲು ಮಾಡುತ್ತಿದ್ದರು. (ಬುಖಾರಿ, ೧-೩೧) ಉಮ್ಮು ಸುಲೈಂ ಬೀವಿ(ರ)ರು ಮಕ್ಕಳಿಗೆ ಬರ್ಕತ್(ಅನುಗ್ರಹ) ಲಭಿಸಲಿಕ್ಕಾಗಿ ಪ್ರವಾದಿ(ಸ.ಅ)ರ ದೇಹದಿಂದ ಹೊರ ಚಿಮ್ಮುವ ಬೆವರಿನ ಹನಿಗಳನ್ನು ಶೇಖರಿಸಿ ಇಡುತ್ತಿದ್ದರು. (ಮುಸ್ಲಿಂ ೨-೨೫೭) ಹೆಚ್ಚೇಕೆ ಪ್ರವಾದಿವರ‍್ಯರ ಬಾಯಿಂದ ಬರುವ ಉಗುಳು ನೀರನ್ನು ನೆಲಕ್ಕೆ ಬೀಳಲು ಸ್ವಹಾಬಿಗಳು ಬಿಡುತ್ತಿರಲಿಲ್ಲ. ಅದನ್ನು ಅವರ ದೇಹಕ್ಕೆ ಹಚ್ಚಿಕೊಳ್ಳುತ್ತಿದ್ದರು (ಬುಖಾರಿ ೧-೩೮) ಪ್ರವಾದಿ(ಸ.ಅ)ರವರ ಅಸಾಧಾರಣ ವ್ಯಕ್ತಿತ್ವವನ್ನು ಅಂಗಿಕರಿಸಿರುವುದರಿಂದಲೇ ಸ್ವಹಾಬಿಗಳು ಪ್ರಸ್ತುತ ಕಾರ್ಯಗಳಲ್ಲಿ ಏರ್ಪಟ್ಟಿರುವುದು. ಪ್ರವಾದಿಯವರ ಕುರಿತು ಅನುಭವ ಜ್ಞಾನವನ್ನು ಗ್ರಹಿಸಲ್ಪಟ್ಟ ಸ್ವಹಾಬಿಗಳ ವಿಶ್ವಾಸ-ಅಚಾರಗಳನ್ನು ಆಧಾರ ರಹಿತವೆಂದು ನಿರಾಕರಿಸಲು ಯತಾರ್ಥ ವಿಶ್ವಾಸಿಗೆ ಸಾಧ್ಯವಿಲ್ಲ. ಕಾರಣ ಪ್ರವಾದಿಯವರ ಅಸಾಮಾನ್ಯ ವ್ಯಕ್ತಿತ್ವವನ್ನು ಅನುಭವದಿಂದ ಗ್ರಹಿಸಿರುವುದರಿಂದಲೇ ಸ್ವಹಾಬಿಗಳು ಅವರಲ್ಲಿ ಅಚಲ ವಿಶ್ವಾಸವನ್ನು ಹೊಂದಿದ್ದು. ಪ್ರವಾದಿ(ಸ.ಅ)ರು ಈ ರೀತಿ ಹೇಳುತ್ತಾರೆ: ಸ್ವಾಹಾಬಿಯವರೇ, ನಾನು ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯನಲ್ಲ. ಕಾರಣ ನಿಮಗೆ ತಿಳಿಯದಂತೆ ಅನ್ನ, ಪಾನೀಯಗಳು ನನಗೆ ಲಭ್ಯವಾಗುತ್ತದೆ,  (ಬುಖಾರಿ ೧-೨೫೭) ಪ್ರವಾದಿ(ಸ.ಅ)ರ ಅಸಾಮಾನ್ಯ ವ್ಯಕ್ತಿತ್ವದ ಕುರಿತು ಬರೆಯುವುದಾದರೆ ಬಹಳಷ್ಠಿವೆ.

Related Posts

Leave A Comment

Voting Poll

Get Newsletter