ಲೋಕಸಭಾ ಚುನಾವಣೆ; ಕಾಂಗ್ರೆಸ್ ಕ್ರಮಿಸಬೇಕಿರುವ ಸಂಕಷ್ಟಮಯ ಹಾದಿ.

  2024ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಮುಗ್ಗರಿಸಿದೆ. 

ಉತ್ತರ ಭಾರತದಲ್ಲಿ ಬಿಜೆಪಿಯ ಸೈಧಾಂತಿಕವಾದ ಹೋರಾಟದ ಮುಂದೆ ಧೂಳೀಪಟವಾಗಿರುವ ಕಾಂಗ್ರೆಸ್, ಮಿಜೋರಾಂನಲ್ಲಿ ಪ್ರಾದೇಶಿಕ ಶಕ್ತಿಯ ಮುಂದೆ ತಲೆಬಾಗಿಸಿದೆ. ಕರ್ನಾಟಕ ಗೆಲುವಿನ ಹುಮ್ಮಸ್ಸಿನಲ್ಲಿ ಸಮಾನ ಚಿಂತೆಯ ಪಕ್ಷಗಳ ಒಕ್ಕೂಟವಾದ "ಇಂಡಿಯಾ" ರಚಿಸಿಕೊಂಡು ಆಡಳಿತರೂಢ ಬಿಜೆಪಿಯ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಮೂಲಕ ಆಶಾಭಂಗವಾಗಿದೆ.

ಉತ್ತರದಲ್ಲಿ ಹಿಂದುತ್ವದ ಮುಂದೆ ಮೃದು ಹಿಂದುತ್ವದ ಡಾಲನ್ನು ಹಿಡಿದು ಗೆಲ್ಲಲು ಪ್ರಯತ್ನಿಸಿದ ಕಾಂಗ್ರೆಸ್ ಪಕ್ಷ ಆಂತರಿಕ ಕಚ್ಚಾಟ, ಮುದಿ ರಾಜಕಾರಣಿಗಳ ಪಾರುಪತ್ಯ, ಅತಿಯಾದ ಆತ್ಮವಿಶ್ವಾಸ ಮತ್ತು ದುರ್ಬಲ ಪಕ್ಷ ಸಂಘಟನೆ ಗಳಿಂದಾಗಿ ಹೀನಾಯವಾಗಿ ಸೋಲ ಬೇಕಾಗಿ ಬಂತು ಎಂಬುವುದು ತಜ್ಞರ ಅವಲೋಕನ. ಬಿಜೆಪಿಯ "ಮೋದಿ ಕೀ ಗ್ಯಾರಂಟಿ " ಮತ್ತು "ಹಿಂದುತ್ವದ" ಮುಂದೆ ಕಾಂಗ್ರೆಸ್ ಮುಂದಿಟ್ಟ ಗ್ಯಾರಂಟಿಗಳು ಮತ್ತು ಜಾತಿಗಣತಿಯ ವಾಗ್ದಾನಗಳು ವಿಫಲವಾಗಿದೆ ಎಂಬುದು ಸುಸ್ಪಷ್ಟ.

ಸೋಲಿನ ಹೊಡೆತಕೆ ಕಾಂಗ್ರೆಸ್ ಪಕ್ಷದ ಮಂಕಾಗಿದ್ದರೂ, ಇನ್ನೂ ಹಳಿಗೆ ಮರಳಲು ಸಮಯ ಮಿಂಚಿಲ್ಲ. ಆತ್ಮಾವಲೋಕನ ನಡೆಸಿ ತಪ್ಪುಗಳನ್ನು ತಿದ್ದಿ ಕೊಳ್ಳುವುದಾದರೆ ಕಳೆದು ಕೊಂಡದನ್ನು ಮರಳಿ ಪಡೆಯಬಹುದು.

ಪಂಚ ರಾಜ್ಯ ಪಂಚ ರಾಜ್ಯ ಚುನಾವಣೆಯ ತಯಾರಿಯಲ್ಲಿ ಕಾಂಗ್ರೆಸ್, ಸ್ವಲ್ಪ ತಿಂಗಳುಗಳ ಹಿಂದೆಯಷ್ಟೇ ಸ್ಥಾಪಿತವಾಗಿದ್ದ ಇಂಡಿಯಾ ಮೈತ್ರಿಕೂಟವನ್ನು ಮರೆತು ಏಕಾಂಗಿಯಾಗಿ ಹೋರಾಡಿತ್ತು.ಇದು ವಿರೋಧ ಪಕ್ಷಗಳ ಲೋಕಸಭಾ ಮಹತ್ವಾಕಾಂಕ್ಷೆಗೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು. ಈ ಲೋಕ ಸಭಾ ಚುನಾವಣೆಯ ಗೆಲುವು ಕಾಂಗ್ರೆಸ್ ಪಾಲಿಗೆ ಅತ್ಯಾವಶ್ಯವಾಗಿರುವುದರಿಂದ ಏಕಾಂಗಿಯಾಗಿ ಹೋರಾಡದೆ ತನ್ನ ಮಿತ್ರರ ಜೊತೆಗೆ ಕೂಡಿ ಹೋರಾಡುವುದಾದರೆ ಬಿಜೆಪಿಯ ಬಿರುಗಾಳಿಯ ಮುಂದೆ ಅಲ್ಲಾಡದೇ ನಿಲ್ಲಬಹುದು. ಅದೇ ರೀತಿ ಉಳಿದ ವಿರೋಧಪಕ್ಷಗಳಿಗೂ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ನ ಜೊತೆ ಸಖ್ಯ ಅನಿವಾರ್ಯವಾಗಿದೆ.

ಆದ್ದರಿಂದಾಗಿ, ವಿರೋಧ ಪಕ್ಷಗಳು ತಮ್ಮ ಸೈಧಾಂತಿಕ ವೈಪರೀತ್ಯಗಳನ್ನು ಹಿಂದೆ ಬಿಟ್ಟು ಜನಸ್ನೇಹಿ ಕಾರ್ಯಕ್ರಮಗಳ ಮೇಲೆ ಒಗ್ಗೂಡಬೇಕಿದೆ. ಮಧ್ಯಪ್ರದೇಶದಲ್ಲಿ ಚುನಾವಣಾ ಸಮಯದಲ್ಲಿ ನಡೆದ ಹಾಗೆ ಮಿತ್ರ ಪಕ್ಷಗಳ ನಡುವೆ ಸೀಟು ಹಂಚಿಕೆಯಲ್ಲಿ ವಾಗ್ವಾದಗಳು ಬರದಂತೆ ಜಾಗರೂಕತೆಯನ್ನು ಪಾಲಿಸಿ, "ಸನಾತನ ಧರ್ಮದ ವಿನಾಶ" ಮೊದಲಾದ ಅಜಾಗರೂಕ ಮತ್ತು ಅಸಮಂಜಸ ಹೇಳಿಕೆಗಳು ಮತ್ತು ಅದರ ಉಂಟಾಗುವ ಹುಟ್ಟಿಕೊಳ್ಳುವ ವಿವಾದಗಳಿಂದ ದೂರ ನಿಂತು, ದೇಶದ ಜನತೆಯ ಅವಶ್ಯಕತೆ-ಅಹವಾಲುಗಳ ಮೇಲೆ ತಮ್ಮ ಕಾರ್ಯ ಸೂಚಿಯನ್ನು ಸಿದ್ಧಪಡಿಸುವುದಾದರೆ 24ರ ಚುನಾವಣೆಯ ದಾರಿ ಸುಲಭವಾಗಲಿದೆ.

 

Related Posts

Leave A Comment

Voting Poll

Get Newsletter