ಜಗತ್ತಿನ 4ನೇ ಆರ್ಥಿಕ ಶಕ್ತಿಯತ್ತ ಭಾರತ!
ಜಗತ್ತಿನ 4ನೇ ಆರ್ಥಿಕ ಶಕ್ತಿಯತ್ತ ಭಾರತ!
'ನಾವು ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದೇವೆ. ನಮ್ಮದೀಗ 4 ಲಕ್ಷ ಕೋಟಿ ಡಾಲರ್ ಗಾತ್ರದ ಆರ್ಥಿಕತೆ. ಇದು ನನ್ನ ದತ್ತಾಂಶ ಅಲ್ಲ, ಐಎಂಎಫ್‌ನ ದತ್ತಾಂಶ, ಭಾರತವು ಇವತ್ತು ಜಪಾನ್‌ಗಿಂತ ದೊಡ್ಡ ಆರ್ಥಿಕತೆಯಾಗಿದೆ'
ನಾಲ್ಕು ದಿನಗಳ ಹಿಂದೆ ನೀತಿ ಆಯೋಗದ ಸಿಇಒ ಬಿ.ವಿ.ಆ‌ರ್.ಸುಬ್ರಹ್ಮಣ್ಯಂ ಅವರು ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆ.
ಸುಬ್ರಹ್ಮಣ್ಯಂ ಅವರ ಹೇಳಿಕೆಯನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತ್‌ನ ಗಾಂಧಿನಗರದಲ್ಲಿ ಬುಧವಾರ ದೆಹಲಿಯಲ್ಲಿ ಪುನರಾವರ್ತಿಸಿದ್ದಾರೆ. ಈವರೆಗೂ ನಾಲ್ಕನೇ ಸ್ಥಾನದಲ್ಲಿದ್ದ ಜಪಾನ್ ಅನ್ನು ಆರ್ಥಿಕತೆಯಲ್ಲಿ ಭಾರತ ಹಿಂದಿಕ್ಕಿದೆ ಎಂದು ಅವರು ಹೇಳಿದ್ದಾರೆ. 2014ರಲ್ಲಿ ತಾವು ಅಧಿಕಾರಕ್ಕೆ ಬಂದಾಗ ಭಾರತದ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ 11ನೇ ಸ್ಥಾನದಲ್ಲಿತ್ತು. ಅದು ಈಗ ನಾಲ್ಕನೇ ಸ್ಥಾನಕ್ಕೆ ಏರಿದೆ ಎಂದು ಮೋದಿ ಅವರು 10 ವರ್ಷಗಳ ತಮ್ಮ ಸಾಧನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಈ ವಿಚಾರದ ಬಗ್ಗೆ ದೇಶದಲ್ಲಿ ಈಗ ಪರ- ವಿರೋಧ ಚರ್ಚೆ ನಡೆಯುತ್ತಿದೆ. ವಾಸ್ತವದಲ್ಲಿ ಭಾರತ ಇನ್ನೂ ನಾಲ್ಕನೇ ಸ್ಥಾನಕ್ಕೆ ಏರಿಲ್ಲ. ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಈ ವರ್ಷದ ಏಪ್ರಿಲ್ 22ರಂದು ಜಾಗತಿಕ ಆರ್ಥಿಕ ಮುನ್ನೋಟ-2025 ಅನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತವು, ಜಗತ್ತಿನ ಆರ್ಥಿಕತೆಗಳ ಪಟ್ಟಿಯಲ್ಲಿ ಸದ್ಯ ಐದನೇ ಸ್ಥಾನದಲ್ಲಿದೆ. ದೇಶದ ಆರ್ಥಿಕ ಬೆಳವಣಿಗೆ ನಿರೀಕ್ಷೆಯಂತೆ ಸಾಗಿದರೆ, ಈ ಹಣಕಾಸು ವರ್ಷದ ಅಂತ್ಯಕ್ಕೆ ಭಾರತದ ಆರ್ಥಿಕತೆಯ ಗಾತ್ರ (ಜಿಡಿಪಿ ಗಾತ್ರ) ಜಪಾನ್‌ಗಿಂತ ದೊಡ್ಡದಾಗಲಿದೆ. ಆಗ ನಾಲ್ಕನೇ ಸ್ಥಾನಕ್ಕೆ ಏರಲಿದೆ.
ಐಎಂಎಫ್ ಅಂದಾಜಿಸಿರುವ ಪ್ರಕಾರ, ಭಾರತದ ಜಿಡಿಪಿ ಗಾತ್ರ (ಪ್ರಸ್ತುತ ಮಾರುಕಟ್ಟೆ ದರದ ಆಧಾರದಲ್ಲಿ) 2025-26ರ ಅಂತ್ಯದ ಹೊತ್ತಿಗೆ ₹357.49 ಲಕ್ಷ ಕೋಟಿ (4.187 ಲಕ್ಷಕೋಟಿ ಡಾಲರ್) ಆಗಲಿದೆ. ಇದೇ ಸಮಯಕ್ಕೆ ಜಪಾನ್‌ನ ಜಿಡಿಪಿ ಗಾತ್ರ ₹357.40 ಲಕ್ಷ ಕೋಟಿ ಇರಲಿದೆ. ಅಂದರೆ, ತೀರಾ ಅಲ್ಪ ಅಂತರದಿಂದ ಭಾರತವು ಮೇಲೇರಲಿದೆ. ನೀತಿ ಆಯೋಗದ ಸದಸ್ಯ ಅರವಿಂದ್ ವೀರಮಣಿ ಅವರ ಪ್ರಕಾರ, ಭಾರತವು ಈ ಸಾಧನೆಯನ್ನು 2025ರ ಅಂತ್ಯಕ್ಕೆ ಮಾಡಲಿದೆ.
 'ನವಭಾರತದ ಪ್ರಾಧಾನ್ಯ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವುದನ್ನು ಇದು ತೋಡುತ್ತಿದೆ; ಜಗತ್ತಿನ ಮೂರನೇ ಆರ್ಥಿಕತೆಯಾಗುವ ಮತ್ತು ವಿಕಸಿತ ಭಾರತ-2047ರ ಸಾಧನೆಯ ದಿಸೆಯಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ' ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.
ಆದರೆ, ಐಎಂಎಫ್ ವರದಿಯ ಬಗ್ಗೆಯೇ ಹಲವರು ಆಕ್ಷೇಪಣೆ ಎತ್ತಿದ್ದಾರೆ. ಭಾರತ ಸರ್ಕಾರ ನೀಡಿರುವ ದತ್ತಾಂಶ ಅಧರಿಸಿ ಐಎಂಎಫ್ ಆರ್ಥಿಕತೆಯ ಅಂದಾಜು ಮಾಡಿದೆಯೇ ಹೊರತು ತಾನೇ ದತ್ತಾಂಶ ಸಂಗ್ರಹಿಸಿಲ್ಲ. ಜತೆಗೆ, ಟ್ರಂಪ್ ಅವರ ತೆರಿಗೆ ಸಂಬಂಧಿ ನೀತಿಗಳಿಂದ ಜಗತ್ತಿನ ವ್ಯಾಪಾರ ವಲಯದಲ್ಲಿ ಭಾರಿ ಅಸ್ಥಿರತೆ ಉಂಟಾಗಿದ್ದು, ಅದು ಮುಂದಿನ ದಿನಗಳಲ್ಲಿ ಯಾವ ದೇಶದ ಆರ್ಥಿಕತೆಯ ಮೇಲೆ ಎಂಥ ಪರಿಣಾಮ ಬೀರಲಿದೆ ಎನ್ನುವುದು ಅನಿಶ್ಚಿತವಾಗಿದೆ. 2008ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದಾಗ ಐಎಂಎಫ್ ಅಂದಾಜುಗಳು ಸುಳ್ಳಾಗಿದ್ದವು. ದೇಶದ ಜಿಡಿಪಿ ಅಂದಾಜಿನ ಬಗ್ಗೆಯೂ ಕೆಲವು ತಕರಾರುಗಳಿವೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಭಾರತ ನಾಲ್ಕನೇ ದೊಡ್ಡ ಆರ್ಥಿಕತೆ ಆಗಲಿದೆ ಎಂದು ಸಂಭ್ರಮಿಸಲಾಗದು ಎನ್ನುವ ಮಾತುಗಳೂ ಕೇಳಿಬಂದಿವೆ.
ಮತ್ತೊಂದು ಮುಖ್ಯ ಆಕ್ಷೇಪಣೆ ಎಂದರೆ, ಭಾರತವು ಜಿಡಿಪಿ “ಆಧಾರದಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಆದರೆ, ದೇಶದ ಸಂಪತ್ತು ಕೆಲವೇ ಶತಕೋಟ್ಯಧಿಪತಿಗಳಲ್ಲಿ ಕ್ರೋಡೀಕರಣವಾಗುತ್ತಿದ್ದು, ಸರಾಸರಿ ಮಾಪನಗಳಿಂದ ದೇಶದ ಅಸಮಾನತೆ ಕಣ್ಣಿಗೆ ಕಾಣುತ್ತಿಲ್ಲ ಎಂದು ಕೆಲವರು ಟೀಕಿಸಿದ್ದಾರೆ. ದೇಶದ ಶ್ರೀಮಂತರ ಸಂಪತ್ತನ್ನು ಹೊರತುಪಡಿಸಿದರೆ, ಭಾರತ ಸ್ಥಾನಮಾನ ತೀರಾ ಕೆಳಕ್ಕೆ ಕುಸಿಯುತ್ತದೆ; ತಲಾ ಆದಾಯ ಮತ್ತು ಬಡವರು ಹಾಗೂ ಶ್ರೀಮಂತರ ನಡುವಿನ ಅಂತರ ಅರಿಯದ ಆರ್ಥಿಕ ಪ್ರಗತಿ ಅಪೂರ್ಣ ಎನ್ನುವ ವಿಶ್ಲೇಷಣೆಯೂ ಕೇಳಿಬಂದಿದೆ.

Related Posts

Leave A Comment

Voting Poll

Get Newsletter