ಪ್ರವಾದಿಯವರ ಹಜ್: ವಿಧಾನ ಮತ್ತು ಸಂದೇಶ
ಪ್ರವಾದಿಯವರ ಹಜ್ಜ್
✍️ ಅಜ್ವದ್ ಉಜಿರೆ
ಇಸ್ಲಾಮಿನ ಮೂಲಭೂತ ಆರಾಧನಾ ಕರ್ಮಗಳಲ್ಲಿ ಐದನೆಯದ್ದಾಗಿದೆ “ಹಜ್ಜ್” ಕರ್ಮ. ಹಜ್ಜಿನ ವೇಳೆ ಧರಿಸುವ ಇಹ್ರಾಮಿನ ವಸ್ತ್ರವು ಮುಸ್ಲಿಮರೆಲ್ಲರೂ ಸಮಾನರು ಎಂಬ ಸಂದೇಶವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಇಸ್ಲಾಮಿನ ಇತರ ಎಲ್ಲಾ ಆರಾಧನಾ ಕರ್ಮಗಳಂತೆ, ಹಜ್ಜಿನ ಆಚರಣೆಯ ವಿಧಾನವನ್ನೂ ಪ್ರವಾದಿ ಮುಹಮ್ಮದ್ (ಸ.ಅ) ಸ್ವತಃ ಬೋಧಿಸಿದ್ದಾರೆ.
ಹಿಜ್ರಾ ಎರಡನೇ ವರ್ಷದಲ್ಲಾಗಿದೆ ಪ್ರವಾದಿ ಮುಹಮ್ಮದ್ (ಸ.ಅ) ರವರ ಉಮ್ಮತ್ತಿಗೆ ಹಜ್ಜ್ ಕಡ್ಡಾಯಗೊಳಿಸಲ್ಪಟ್ಟದ್ದು. ಮದೀನಾದಿಂದ ನಿರ್ಭೀತರಾಗಿ ಮಕ್ಕಾಗೆ ಪ್ರವೇಶಿಸುವ ಕನಸು ಕಂಡ ನಂತರ, ಹಿಜ್ರಾ ಆರನೇ ವರ್ಷದಲ್ಲಿ ಪ್ರವಾದಿಯವರು ಸುಮಾರು 1400 ಸಹಾಬಿಗಳೊಂದಿಗೆ ಮಕ್ಕಾಗೆ ಹೊರಟರು. ಆದರೆ ಆ ಕನಸಿನಲ್ಲಿ ಸೂಚಿಸಲಾದ ಸಮಯ ಇನ್ನೂ ಬಂದೊದಗಿರಲಿಲ್ಲ.
ಆದುದರಿಂದ, ಮಕ್ಕಾದಿಂದ ಸುಮಾರು ಇಪ್ಪತ್ತೈದು ಕಿ.ಮೀ ದೂರದಲ್ಲಿರುವ ಹುದೈಬಿಯ್ಯಾ ಎಂಬ ಸ್ಥಳದಲ್ಲಿ ಮುಸ್ಲಿಮರನ್ನು ಮಕ್ಕಾ ಮುಶ್ರಿಕರು ತಡೆದು ನಿಲ್ಲಿಸಿದರು. ಬಳಿಕ, ಹಲವು ಮಾತುಕತೆಗಳು ಮತ್ತು ಚರ್ಚೆಗಳ ನಂತರ, ಮೇಲ್ನೋಟಕ್ಕೆ ಮುಸ್ಲಿಮರಿಗೆ ಅನಾನುಕೂಲಕರವೆಂದು ಕಾಣಬಹುದಾದ ಒಂದು ಕದನ ವಿರಾಮ ಒಪ್ಪಂದಕ್ಕೆ ಮುಸ್ಲಿಮರು ಸಮ್ಮತಿಸಬೇಕಾದ ಪರಿಸ್ಥಿತಿ ಉಂಟಾಯಿತು. ಇತಿಹಾಸದಲ್ಲಿ ಈ ಒಪ್ಪಂದವು “ಹುದೈಬಿಯ್ಯಾ ಒಪ್ಪಂದ” ಎಂದು ಪ್ರಸಿದ್ಧಿಯಾಯಿತು.
ಪರಿಣಾಮವಾಗಿ, ಮುಸ್ಲಿಮರು ಮದೀನಾಕ್ಕೆ ಮರಳಿ, ಹೆಚ್ಚಿನ ಸುರಕ್ಷತೆ ಹಾಗೂ ಸ್ವಾತಂತ್ರ್ಯದೊಂದಿಗೆ ಧರ್ಮಪ್ರಚಾರ ಕಾರ್ಯಗಳಲ್ಲಿ ತೊಡಗಿದರು.
ಮುಂದಿನ ವರ್ಷ, ಅಂದರೆ ಹಿಜ್ರಾ ಏಳನೇ ವರ್ಷದಲ್ಲಿ, ಹಿಂದಿನ ವರ್ಷ ಮಾಡಲಾದ ಕದನ ವಿರಾಮದ ಒಪ್ಪಂದದ ಪ್ರಕಾರ ಮುಸ್ಲಿಮರು ಮಕ್ಕಾಗೆ ಪ್ರವೇಶಿಸಿ “ಉಮ್ರತುಲ್ ಕಝಾ” ನೆರವೇರಿಸಿದರು. ಮೂರು ದಿನಗಳ ನಂತರ ಅವರು ಮದೀನಾಕ್ಕೆ ಮರಳಿದರು.
ಈ ಘಟನೆ ನಡೆದ ಸುಮಾರು ಒಂದು ವರ್ಷದ ನಂತರ, ಅಂದರೆ ಹಿಜ್ರಾ ಎಂಟನೇ ವರ್ಷದಲ್ಲಿ, ಪ್ರವಾದಿ ಮುಹಮ್ಮದ್ ﷺ ರವರ ನೇತೃತ್ವದಲ್ಲಿ ಮುಸ್ಲಿಮರು ಐತಿಹಾಸಿಕ ಮಕ್ಕಾ ವಿಜಯವನ್ನು ಸಾಧಿಸಿದರು. ಈ ಮಹತ್ವದ ಘಟನೆಯನ್ನು ಇತಿಹಾಸ ಗ್ರಂಥಗಳಲ್ಲಿ “ಮಕ್ಕಾ ವಿಜಯ” (فتح مكة) ಎಂದು ಉಲ್ಲೇಖಿಸಲಾಗಿದೆ. ನಂತರ ಹಿಜ್ರಾದ ಒಂಭತ್ತನೇ ವರ್ಷದಲ್ಲಿ, ಪ್ರವಾದಿಯವರು ಅಬೂಬಕ್ಕರ್ ಸಿದ್ದೀಕ್ (ರ) ರ ನೇತೃತ್ವದಲ್ಲಿ ಒಂದು ಗುಂಪನ್ನು ಹಜ್ಜ್ ನೆರವೇರಿಸಲು ಮಕ್ಕಾಗೆ ಕಳುಹಿಸಿದರು.
ಮಕ್ಕಾದಲ್ಲಿ ಮೂರು ವಿಷಯಗಳನ್ನು ಸಾರ್ವಜನಿಕವಾಗಿ ಘೋಷಿಸಬೇಕೆಂದು ಪ್ರವಾದಿಯವರು ಅವರಿಗೆ ವಿಶೇಷವಾಗಿ ಆದೇಶಿಸಿದರು.
ಒಂದು: ಜಾಹಿಲಿಯ್ಯಾ ಕಾಲದಿಂದ ನಡೆದು ಬಂದ ನಗ್ನವಾಗಿ ತ್ವವಾಫ್ ಮಾಡುವ ಆಚರಣೆಯನ್ನು ಮುಂದಿನ ವರ್ಷದಿಂದ ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.
ಎರಡು: ಮುಂದಿನ ವರ್ಷದಿಂದ ಮುಸ್ಲಿಮರಲ್ಲದವರಿಗೆ ಹಜ್ಜ್ ನಿರ್ವಹಿಸುವ ಅವಕಾಶ ಇರುವುದಿಲ್ಲ.
ಮೂರು: ಇಂದಿನಿಂದ ಇಸ್ಲಾಮಿನ ವಿರೋಧಿಗಳೊಂದಿಗೆ ಯಾವುದೇ ರೀತಿಯ ಕದನ ವಿರಾಮ ಇರುವುದಿಲ್ಲವೆಂದು ಸೂಚಿಸುವ “ಸೂರತುತ್ ತೌಬಾ”ದ ಆಯತ್ಗಳನ್ನು ಮಕ್ಕಾ ನಿವಾಸಿಗಳಿಗೆ ಓದಿ ಕೇಳಿಸಬೇಕು.
ಅಬೂಬಕ್ಕರ್ ಸಿದ್ದೀಕ್ (ರ) ಅವರಿಗೆ ವಹಿಸಲಾದ ಕರ್ತವ್ಯವನ್ನು ಅವರು ಸಮರ್ಪಕವಾಗಿ ನಿರ್ವಹಿಸಿ, ಹಜ್ಜನ್ನು ಪೂರ್ಣಗೊಳಿಸಿದ ನಂತರ ಮದೀನಾಕ್ಕೆ ಮರಳಿದರು.
ಈ ಎಲ್ಲಾ ಘಟನೆಗಳ ನಂತರ, ಹಿಜ್ರಾ ಹತ್ತನೇ ವರ್ಷದಲ್ಲಿ (ದುಲ್ ಖಅದಾ 25ರಂದು) ಪ್ರವಾದಿ ಮುಹಮ್ಮದ್ (ಸ.ಅ) ಹಜ್ಜಿನ ಕರ್ಮವನ್ನು ನೆರವೇರಿಸಲು ಮಕ್ಕಾಗೆ ತೆರಳಿದರು.
ನಬಿಯವರೊಂದಿಗೆ ಯುವಕರು ಹಾಗೂ ವಯಸ್ಕರು ಸೇರಿ ಒಂದು ಲಕ್ಷಕ್ಕೂ ಹೆಚ್ಚು ಜನರು ಹಜ್ಜಿಗೆ ತೆರಳಿದ್ದರು. ಅವರು ಪ್ರತಿದಿನ ಸುಮಾರು ಐವತ್ತು ಕಿ.ಮೀ ನಂತೆ ಸಂಚರಿಸಿ, ಹತ್ತನೇ ದಿನದಂದು ಅಥವಾ ದುಲ್ ಹಿಜ್ಜಾ 5ರಂದು ಮಕ್ಕಾಗೆ ತಲುಪಿದರು.
ಮಕ್ಕಾಗೆ ತಲುಪಿದ ಪ್ರವಾದಿ ಮುಹಮ್ಮದ್ (ಸ.ಅ) ಮೊದಲು ತವಾಫ್ ಹಾಗೂ ಸ್ವಫಾ-ಮರ್ವಾ ನಡುವೆ ಸಅಯ್ ಎಂಬೀ ಕರ್ಮಗಳನ್ನು ನೆರವೇರಿಸಿದರು. ಬಲಿ ಮೃಗಗಳನ್ನು ಕರೆತಂದಿದ್ದರಿಂದ ಪ್ರವಾದಿಯವರು ಇಹ್ರಾಮಿನಲ್ಲೇ ಮುಂದುವರಿದರು.
ಆದರೆ, ಜೊತೆಗೆ ಬಂದವರಲ್ಲಿ ಬಲಿ ಮೃಗಗಳನ್ನು ಕರೆತರದವರಿಗೆ, ಅದೇ ದಿನ (ದುಲ್ ಹಿಜ್ಜಾ 5ರಂದು) ಉಮ್ರಾದ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಹಜ್ಜಿನ ಇಹ್ರಾಮನ್ನು ಉಮ್ರಾಗೆ ಬದಲಿಸಬೇಕೆಂದು ಪ್ರವಾದಿ ಮುಹಮ್ಮದ್ (ಸ.ಅ) ನಿರ್ದೇಶಿಸಿದರು.
ಇದಕ್ಕೂ ಮೊದಲು ದುಲ್ ಹುಲೈಫಾದಲ್ಲಿ ಎಲ್ಲರೂ ಹಜ್ಜಿಗಾಗಿಯೇ ಇಹ್ರಾಮ್ ಕಟ್ಟಿದ್ದರು. ಹಜ್ಜಿನ ಇಹ್ರಾಮನ್ನು ಹಜ್ಜ್ ಪೂರ್ಣಗೊಳ್ಳುವ ಮೊದಲು ಉಮ್ರಾಗೆ ಬದಲಿಸುವ ಈ ವಿಧಾನ ಆ ವರ್ಷಕ್ಕೆ ಮಾತ್ರ ಸೀಮಿತವಾಗಿತ್ತು. (ಹಜ್ಜಿನ ತಿಂಗಳಲ್ಲಿ ಉಮ್ರಾ ನಿರ್ವಹಿಸುವುದು ತಪ್ಪು ಎಂಬ ಜಾಹಿಲಿಯ್ಯಾ ಕಾಲದ ತಪ್ಪು ತಿಳಿವಳಿಕೆಯನ್ನು ಈ ಆದೇಶದ ಮೂಲಕ ನಿವಾರಿಸಲಾಯಿತು. ಅಲ್ಲದೆ, ಆ ಕೂಟದಲ್ಲಿ ಬಲಿ ಮೃಗಗಳನ್ನು ತರದವರು ಉಮ್ರಾವನ್ನು ಪೂರ್ಣಗೊಳಿಸಿ ಇಹ್ರಾಮಿನಿಂದ ವಿಮುಕ್ತರಾದರು.)
ಉಮ್ರಾದ ಇಹ್ರಾಮಿನಿಂದ ವಿಮುಕ್ತರಾದವರು ದುಲ್ ಹಿಜ್ಜಾ 8ರಂದು ಮತ್ತೆ ಇಹ್ರಾಮ್ ಧರಿಸಿ ಹಜ್ಜಿಗೆ ಪ್ರವೇಶಿಸಿದರು. ಅವರು ನಬಿ (ಸ.ಅ)ರೊಂದಿಗೆ ಮಿನಾಕ್ಕೆ ತೆರಳಿದರು. ಆ ದಿನದ ಝುಹ್ರ್ ನಮಾಜಿನಿಂದ ದುಲ್ ಹಿಜ್ಜಾ 9ರ ಸುಬಹ್ ತನಕದ ನಮಾಜುಗಳನ್ನು ಪ್ರವಾದಿಯವರು ಅಲ್ಲೇ ನೆರವೇರಿಸಿದರು. ಸುಬಹ್ ನಮಾಜಿನ ನಂತರ ಅವರು ಅರಫಾ ಕಡೆಗೆ ತೆರಳಿ ಮಧ್ಯಾಹ್ನಕ್ಕೆ ತಲುಪಿದರು. ಅಲ್ಲಿ ಸೂರ್ಯಾಸ್ತದವರೆಗೆ ತಂಗಿ, ನಂತರ ಮುಝ್ದಲಿಫಾಗೆ ತೆರಳಿದರು.
ದುಲ್ ಹಿಜ್ಜಾ 10ರ ರಾತ್ರಿ ಅವರು ಅಲ್ಲಿ ತಂಗಿದರು. ಮರುದಿನ ಜಮ್ರಾತ್ನಲ್ಲಿ ಎಸೆಯಲು ಬೇಕಾದ ಕಲ್ಲುಗಳನ್ನು ಅಲ್ಲಿಂದಲೇ ಸಂಗ್ರಹಿಸಿದರು.
ದುಲ್ ಹಿಜ್ಜಾ 10ರಂದು ಪ್ರವಾದಿ ಮುಹಮ್ಮದ್ (ಸ.ಅ) ಜಮ್ರತುಲ್ ಅಕಬಾಗೆ ಏಳು ಕಲ್ಲುಗಳನ್ನು ಎಸೆದರು. ಮಿನಾದಲ್ಲಿ ಬಲಿ ಮೃಗಗಳನ್ನು ವಧೆ ಮಾಡಿದ ನಂತರ ತಲೆಯ ಕೂದಲುಗಳನ್ನು ಕತ್ತರಿಸಿದರು. ನೂರು ಮೃಗಗಳಲ್ಲಿ 63ನ್ನು ಸ್ವತಃ ವಧೆ ಮಾಡಿ, ಉಳಿದವುಗಳನ್ನು ಅಲೀ ಇಬ್ನ್ ಅಬೀ ತಾಲಿಬ್ (ರ) ಅವರಿಗೆ ವಧೆ ಮಾಡಲು ಸೂಚಿಸಿದರು. ನಂತರ ಹಜ್ಜಿನ ಕಡ್ಡಾಯ ಕರ್ಮಗಳಾದ ತವಾಫ್ ಮತ್ತು ತವಾಫುಲ್ ಇಫಾದಾ ನೆರವೇರಿಸಿದರು.
ಅಯ್ಯಾಮು ತಶ್ರೀಕಿನ ಉಳಿದ ದಿನಗಳಲ್ಲಿ (ದುಲ್ ಹಿಜ್ಜಾ 11, 12, 13) ಪ್ರವಾದಿ ಮುಹಮ್ಮದ್ (ಸ.ಅ) ಮಿನಾದಲ್ಲಿಯೇ ತಂಗಿದ್ದರು. ಈ ಮೂರು ದಿನಗಳಲ್ಲಿಯೂ ಜಮ್ರಾತ್ನಲ್ಲಿ ಕಲ್ಲೆಸೆದರು. ದುಲ್ ಹಿಜ್ಜಾ 14ರಂದು ವಿದಾಯದ ತವಾಫ್ ನೆರವೇರಿಸಿ ಮದೀನಾಕ್ಕೆ ಮರಳಲು ತಯಾರಾದರು. ಮಕ್ಕಾಗೆ ಬಂದಂತೆ ಪ್ರತಿದಿನ ಸುಮಾರು ಐವತ್ತು ಕಿ.ಮೀ ನಂತೆ ಸಂಚರಿಸಿ, ಹತ್ತನೇ ದಿನ ಮದೀನಾಗೆ ತಲುಪಿದರು.
ಹಜ್ಜಿನ ವೇಳೆ ಅರಫಾ ಹಾಗೂ ಮಿನಾದಲ್ಲಿ ಪ್ರವಾದಿಯವರು ಸಂಕ್ಷಿಪ್ತವಾದ ಒಂದು ಮಹತ್ವಪೂರ್ಣ ಭಾಷಣವನ್ನು ನೀಡಿದರು. ಸುಮಾರು ಎಂಟರಿಂದ ಹತ್ತು ನಿಮಿಷಗಳ ಅವಧಿಯಲ್ಲಿದ್ದ ಈ ಭಾಷಣವು, ಪ್ರವಾದಿಯವರ ಇಪ್ಪತ್ತಮೂರು ವರ್ಷದ ಜೀವನದ ಸಾರಾಂಶವನ್ನು ಒಳಗೊಂಡಿತ್ತು.
ಪ್ರಾರಂಭದಲ್ಲಿ ಕೇಳುಗರ ಗಮನ ಸೆಳೆಯಲು ಪ್ರವಾದಿಯವರು ಪ್ರಶ್ನಿಸಿದರು: “ಈ ಸ್ಥಳ ಯಾವುದು? ಈ ಸಮಯ ಯಾವುದು?” ಇದಕ್ಕೆ ಸಹಾಬಿಗಳು “ಅಲ್ಲಾಹು ವ ರಸೂಲುಹು ಅಅ್ಲಮ್” ಎಂದು ಉತ್ತರಿಸಿದರು. ಆಗ ಪ್ರವಾದಿಯವರು ಹೇಳಿದರು: “ಇದು ಯುದ್ಧವನ್ನು ನಿರ್ಬಂಧಿಸಲಾದ ಪವಿತ್ರ ಸ್ಥಳ ಹಾಗೂ ಸಮಯವಾಗಿದೆ. ಇಲ್ಲಿ ರಕ್ತಸಿಕ್ತತೆ ಹರಾಮಾಗಿರುವಂತೆ, ನಿಮ್ಮಲ್ಲಿ ಒಬ್ಬರ ರಕ್ತ, ಮಾನ ಹಾಗೂ ಸಂಪತ್ತನ್ನು ಮತ್ತೊಬ್ಬರ ಮೇಲೆ ಅಲ್ಲಾಹನು ಹರಾಮ್ ಮಾಡಿದ್ದಾನೆ.” ಇದರ ಮೂಲಕ ಪ್ರವಾದಿಯವರು ಮಾನವೀಯ ಮೌಲ್ಯಗಳನ್ನು ಕಾಪಾಡಲು, ಅವನ್ನು ಜೀವನದಲ್ಲಿ ಅಳವಡಿಸಲು ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸಲು ಸೂಚಿಸಿದರು. ಕೊನೆಯಲ್ಲಿ ಅವರು ಹೇಳಿದರು: “فليبلغ الشاهد الغائب” (ಹಾಜರಿರುವವರು ಹಾಜರಲ್ಲದವರಿಗೆ ತಲುಪಿಸಬೇಕು).
ಈ ಮಹತ್ವಪೂರ್ಣ ಸಂದೇಶದ ಮೂಲಕ ಪ್ರವಾದಿಯವರು ಇಸ್ಲಾಮಿನ ವಿಶ್ವಮಾನವೀಯ ಸಂದೇಶವನ್ನು ಸಮಾಜದ ಪ್ರತಿಯೊಂದು ಹಂತಕ್ಕೂ ತಲುಪಿಸುವ ಜವಾಬ್ದಾರಿಯನ್ನು ಉಮ್ಮತ್ಗೆ ವಹಿಸಿದರು. ಮಾನವ ಜೀವ, ಗೌರವ ಮತ್ತು ಆಸ್ತಿಯ ಪವಿತ್ರತೆಯನ್ನು ಕಾಪಾಡುವುದು ಕೇವಲ ಧಾರ್ಮಿಕ ಕರ್ತವ್ಯವಷ್ಟೇ ಅಲ್ಲ, ನ್ಯಾಯಸಮ್ಮತ ಮತ್ತು ಶಾಂತಿಯುತ ಸಮಾಜ ನಿರ್ಮಾಣದ ಮೂಲಾಧಾರವೂ ಆಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಹೀಗಾಗಿ, ವಿದಾಯ ಹಜ್ಜಿನ ಈ ಭಾಷಣವು ಮಾನವ ಹಕ್ಕುಗಳು, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಇತಿಹಾಸ ಪ್ರಸಿದ್ಧ ಘೋಷಣೆಯಾಗಿ ಉಳಿದಿದೆ.