ಸಹನೆಯ ಶಕ್ತಿ: ಆಂತರಿಕ ಸ್ಥೈರ್ಯ ಮತ್ತು ಆತ್ಮಬಲವನ್ನು ಬೆಳೆಸುವ ಇಸ್ಲಾ ಮಿನ ದೃಷ್ಟಿಕೋನ

ಸಹನೆಯ ಶಕ್ತಿ: ಆಂತರಿಕ ಸ್ಥೈರ್ಯ ಮತ್ತು ಆತ್ಮಬಲವನ್ನು ಬೆಳೆಸುವ ಇಸ್ಲಾ ಮಿನ ದೃಷ್ಟಿಕೋನ

ಸಹನೆ (ಸಬ್ರ್) ಇಸ್ಲಾಮಿನಲ್ಲಿ ಅತ್ಯಂತ ಮೌಲಿಕ ಮತ್ತು ಆಳವಾದ ಗುಣಗಳಲ್ಲಿ ಒಂದು. ಇದು ಕೇವಲ ಸಂಕಷ್ಟಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವಲ್ಲ; ಬದಲಿಗೆ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ, ಒಳಗಿನ ಅಶಾಂತಿಯನ್ನು ನಿಯಂತ್ರಿಸುವ ಮತ್ತು ಜೀವನದ ಏರಿಳಿತಗಳ ನಡುವೆ ಸಮತೋಲನ ಕಾಪಾಡುವ ಆತ್ಮಶಕ್ತಿ. 

ಮನುಷ್ಯನ ಜೀವನದ ಪ್ರತಿ ಹಂತದಲ್ಲೂ ಸಹನೆ ಅವನ ಸಹಯಾತ್ರಿಯಾಗಿರುತ್ತದೆ. ಶೈಶವದಲ್ಲಿ ಮಗು ತನ್ನ ಸಂಪೂರ್ಣ ಅವಲಂಬನೆಯನ್ನು ಸಹನೆಯೊಂದಿಗೆ ಅನುಭವಿಸುತ್ತದೆ. ಬಾಲ್ಯದಲ್ಲಿ ಕಲಿಕೆಗೆ ತಾಳ್ಮೆ ಬೇಕು. ಯೌವನದಲ್ಲಿ ಆಸೆಗಳು ಮತ್ತು ತ್ವರಿತ ಫಲಿತಾಂಶಗಳ ಹಸಿವನ್ನು ನಿಯಂತ್ರಿಸಲು ಸಹನೆ ಅಗತ್ಯ. ವೃದ್ಧಾಪ್ಯದಲ್ಲಿ ದೇಹದ ದೌರ್ಬಲ್ಯ ಮತ್ತು ಬದಲಾವಣೆಗಳನ್ನು ಸ್ವೀಕರಿಸುವ ಸಹನೆಯೇ ನಿಜವಾದ ಪರಿಪಕ್ವತೆಯ ಸಂಕೇತ.

ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್ ﷺ ಅವರ ಸುನ್ನತ್‌ಗಳಲ್ಲಿ ಸಹನೆಯನ್ನು ಕೇವಲ ನೈತಿಕ ಗುಣವಾಗಿ ಮಾತ್ರವಲ್ಲ, ಈಮಾನಿನ ಅವಿಭಾಜ್ಯ ಅಂಗವಾಗಿ ವರ್ಣಿಸಲಾಗಿದೆ. ಸಹನೆಯು ನಡತೆಯನ್ನು ಶುದ್ಧಗೊಳಿಸುತ್ತದೆ, ಸಂಬಂಧಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಅಲ್ಲಾಹನೊಂದಿಗಿನ ಬಾಂಧವ್ಯವನ್ನು ಗಾಢಗೊಳಿಸುತ್ತದೆ. 

ಕುರ್‌ಆನಿನಲ್ಲಿ ಸಹನೆಯ ಸೌಂದರ್ಯ

ಕುರ್‌ಆನ್ ಅನೇಕ ಸೂರತ್‌ಗಳಲ್ಲಿ ಸಹನೆಯನ್ನು ಗೌರವಯುತ, ಸುಂದರ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ಕೂಡಿದ ಗುಣವಾಗಿ ವರ್ಣಿಸುತ್ತದೆ. ಸೂರತ್ ಯೂಸುಫ್‌ನಲ್ಲಿ ಪ್ರವಾದಿ ಯಾಕೂಬ್ (ಅಲೈಹಿಸ್ಸಲಾಂ) ಅವರ ಮಾತುಗಳಲ್ಲಿ ಕಾಣುತ್ತದೆ:

فَصَبْرٌ جَمِيلٌ

 “ಸುಂದರವಾದ ಸಹನೆ!” (ಕುರ್‌ಆನ್ 12:18)

ಪ್ರಿಯಪುತ್ರ ಯೂಸುಫ್ (ಅಲೈಹಿಸ್ಸಲಾಂ)ನ ವಿಯೋಗದಲ್ಲಿ ವರ್ಷಗಳ ಕಾಲ ಕಣ್ಣೀರಿನೊಂದಿಗೆ ಬದುಕಿದರು ಯಾಕೂಬ್ ನಬಿ. ದುಃಖದಿಂದ ದೃಷ್ಟಿಯನ್ನೇ ಕಳೆದುಕೊಂಡರು. ಆದರೆ ಅವರ ಹೃದಯದಲ್ಲಿ ಅಲ್ಲಾಹನ ಮೇಲೆ ದೂರು ಎಂದಿಗೂ ಇರಲಿಲ್ಲ. ಅವರ ಸಹನೆ – ದೂರುರಹಿತ, ಭರವಸೆಯಿಂದ ತುಂಬಿದ ಮತ್ತು ಅಲ್ಲಾಹನ ಮೇಲಿನ ಪೂರ್ಣ ವಿಶ್ವಾಸದ ಸಹನೆಯಾಗಿತ್ತು – ಇದು ಎಲ್ಲರಿಗೂ ಆದರ್ಶ.

ಇದೇ ರೀತಿ ಪ್ರವಾದಿ ಅಯ್ಯೂಬ್ (ಅಲೈಹಿಸ್ಸಲಾಂ) ಅವರ ಜೀವನವೂ ಸಹನೆಯ ಅತ್ಯುನ್ನತ ಮಾದರಿ. ಸಂಪತ್ತು, ಮಕ್ಕಳು, ಆರೋಗ್ಯ – ಎಲ್ಲವನ್ನೂ ಕಳೆದುಕೊಂಡರೂ ಅವರು ಅಲ್ಲಾಹನಿಂದ ದೂರಾಗಲಿಲ್ಲ. ಅವರ ಸಹನೆ ಇಬಾದತ್, ಕೃತಜ್ಞತೆ ಮತ್ತು ಅಚಲ ವಿಶ್ವಾಸದಿಂದ ಕೂಡಿತ್ತು.

ಈ ಕಥೆಗಳು ನಮಗೆ ಕಲಿಸುವ ಸತ್ಯ: ನಿಜವಾದ ಸಹನೆ ಹೆಚ್ಚು ವೈಯಕ್ತಿಕ ಪಯಣ. ಕೆಲವೊಮ್ಮೆ ನಮ್ಮ ನೋವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವವರು ಈ ಲೋಕದಲ್ಲಿ ಇರಲಾರರು. ಆದರೆ ಅಲ್ಲಾಹ್ ಯಾವಾಗಲೂ ನಮ್ಮ ಜೊತೆಯಲ್ಲಿದ್ದಾನೆ:

وَاصْبِرُوا ۚ إِنَّ اللَّهَ مَعَ الصَّابِرِينَ

 “ತಾಳ್ಮೆಯಿಂದಿರಿ; ನಿಶ್ಚಯವಾಗಿಯೂ ಅಲ್ಲಾಹ್ ಸಹನಶೀಲರ ಜೊತೆಗಿದ್ದಾನೆ.” (ಕುರ್‌ಆನ್ ೮:೪೬)

ಪ್ರವಾದಿ ಮುಹಮ್ಮದ್ ﷺ: ಸಹನೆಯ ಜೀವಂತ ಆದರ್ಶ

ಸಹನೆಯ ಪರಿಪೂರ್ಣ ಮಾದರಿ ಪ್ರವಾದಿ ಮುಹಮ್ಮದ್ ﷺ ಅವರ ಜೀವನದಲ್ಲಿದೆ. ೨೩ ವರ್ಷಗಳ ದಅವತ್ತಿನಲ್ಲಿ ನಿರಾಕರಣೆ, ನಿಂದನೆ, ಹಿಂಸೆ, ಬಹಿಷ್ಕಾರ ಮತ್ತು ವೈಯಕ್ತಿಕ ನಷ್ಟಗಳನ್ನು ಎದುರಿಸಿದರು. ಆದರೂ ಅವರ ಪ್ರತಿಕ್ರಿಯೆ ಯಾವಾಗಲೂ ತಾಳ್ಮೆ ಮತ್ತು ಕರುಣೆಯಿಂದ ಕೂಡಿತ್ತು.

ತಾಇಫ್ ಘಟನೆಯಲ್ಲಿ ಕಲ್ಲುಗಳಿಂದ ಗಾಯಗೊಂಡಾಗ ಜಿಬ್ರೀಲ್ (ಅಲೈಹಿಸ್ಸಲಾಂ) ಊರನ್ನು ನಾಶ ಮಾಡಲು ಅನುಮತಿ ಕೇಳಿದರು. ಆದರೆ ಪ್ರವಾದಿ ﷺ ಪ್ರತೀಕಾರವನ್ನು ಬಿಟ್ಟು, ಭವಿಷ್ಯದಲ್ಲಿ ಅವರು ಇಸ್ಲಾಮ್ ಸ್ವೀಕರಿಸಬಹುದೆಂಬ ಆಸೆಯನ್ನು ಆಯ್ಕೆ ಮಾಡಿದರು.

ಮಕ್ಕಾ ವಿಜಯದ ದಿನ, ಅಧಿಕಾರ ಅವರ ಕೈಯಲ್ಲಿದ್ದಾಗ ಹಿಂಸೆಗೈದವರಿಗೆ ಹೇಳಿದರು:

اذْهَبُوا فَأَنْتُمُ الطُّلَقَاءُ

 “ಹೋಗಿರಿ, ನೀವೆಲ್ಲರೂ ಮುಕ್ತರು!”

ಸಹನೆಯ ಮೂರು ರೂಪಗಳು

ليس الشديد بالصرعة، إنما الشديد الذي يملك نفسه عند الغضب

ಪ್ರವಾದಿ ﷺ ಹೇಳಿದರು: “ನಿಜವಾದ ಬಲಿಷ್ಠನು ಕೋಪದ ಸಮಯದಲ್ಲಿ ತನ್ನನ್ನು ನಿಯಂತ್ರಿಸುವವನು.” (ಸಹೀಹ್ ಬುಖಾರಿ, ಸಹೀಹ್ ಮುಸ್ಲಿಂ)

ಸಹನೆಯನ್ನು ಮೂರು ರೂಪಗಳಲ್ಲಿ ಅರ್ಥಮಾಡಿಕೊಳ್ಳಬಹುದು:

ಸಂಕಷ್ಟಗಳಲ್ಲಿ ಸಹನೆ – ವಿಪತ್ತನ್ನು ಅಂತ್ಯವಾಗಿ ಅಲ್ಲ, ತಿರುವುಬಿಂದುವಾಗಿ ನೋಡುವ ದೃಷ್ಟಿ. ಅಲ್ಲಾಹನು ಪರೀಕ್ಷಿಸಿದಾಗ ಅದರೊಳಗೆ ಒಳ್ಳೆಯ ದಾರಿಯನ್ನೂ ಅಡಗಿಸಿರುತ್ತಾನೆ.

ಫಲಿತಾಂಶಕ್ಕಾಗಿ ಕಾಯುವ ಸಹನೆ – ಪ್ರಕ್ರಿಯೆಯನ್ನು ಪ್ರೀತಿಸುವುದು. ನಿಜವಾದ ಪ್ರೀತಿಯಲ್ಲಿ ಕಾಯುವುದು ಶಿಕ್ಷೆಯಲ್ಲ, ಇಬಾದತ್ ಆಗುತ್ತದೆ.

ಸ್ವಯಂ ನಿಯಂತ್ರಣದ ಸಹನೆ – ಮೊದಲ ಆಘಾತದ ಕ್ಷಣದಲ್ಲಿ ತೋರಿಸುವ ತಾಳ್ಮೆ. ಇಸ್ಲಾಮ್ ಭಾವನೆಗಳನ್ನು ನಿರಾಕರಿಸುವುದಿಲ್ಲ; ಅವುಗಳನ್ನು ಸುಂದರವಾಗಿ ನಿಯಂತ್ರಿಸುವುದನ್ನು ಕಲಿಸುತ್ತದೆ.

ಐದು ಸೆಕೆಂಡ್ ನಿಯಮ: ಸಹನೆಯ ಸರಳ ಅಭ್ಯಾಸ

ಅನೇಕ ಕ್ಷಣಗಳಲ್ಲಿ ಮನಸ್ಸು ತಕ್ಷಣ ಪ್ರತಿಕ್ರಿಯೆಗೆ ಒತ್ತಾಯಿಸುತ್ತದೆ. ಆದರೆ ಆ ತಕ್ಷಣದ ಪ್ರತಿಕ್ರಿಯೆಗಳೇ ಪಶ್ಚಾತ್ತಾಪಕ್ಕೆ ಕಾರಣವಾಗುತ್ತವೆ. ಇಲ್ಲಿ “ಐದು ಸೆಕೆಂಡ್ ನಿಯಮ” ಮಹತ್ವ ಪಡೆಯುತ್ತದೆ – ಪ್ರತಿಕ್ರಿಯಿಸುವ ಮೊದಲು ಕೇವಲ ಐದು ಕ್ಷಣ ತಾಳ್ಮೆ ವಹಿಸಿ.

ಈ ಚಿಕ್ಕ ತಾಳ್ಮೆ ಭಾವನೆಯನ್ನು ವಿವೇಕಕ್ಕೆ ಬದಲಾಯಿಸುತ್ತದೆ. ಪ್ರವಾದಿ ﷺ ಅವರ ಜೀವನವೇ ಇದಕ್ಕೆ ಸಾಕ್ಷಿ – ಯಾವ ಸಂದರ್ಭದಲ್ಲೂ ತಕ್ಷಣದ ಆಕ್ರೋಶಕ್ಕೆ ಒಳಗಾಗಲಿಲ್ಲ.

ನೀರಿನ ಬಾಟಲಿ ಅಂಗಡಿಯಲ್ಲಿ ಅಗ್ಗ, ವಿಮಾನ ನಿಲ್ದಾಣದಲ್ಲಿ ದುಬಾರಿ – ವಸ್ತು ಒಂದೇ, ಆದರೆ ಪರಿಸ್ಥಿತಿ ಮೌಲ್ಯ ಬದಲಿಸುತ್ತದೆ. ಹಾಗೆಯೇ ನಮ್ಮ ಮಾತುಗಳ ಮೌಲ್ಯವನ್ನು ನಿರ್ಧರಿಸುವುದು ಅವು ಹೊರಬರುವ ಮನಸ್ಥಿತಿ.

الصبر نصف الإيمان

“ಸಹನೆ ಇಮಾನಿನ ಅರ್ಧಭಾಗ.”

ಈ ಸಹನೆಯ ಅಭ್ಯಾಸ ಮನುಷ್ಯನನ್ನು ಒಳಗಿನಿಂದ ಬದಲಿಸುತ್ತದೆ – ಕೋಪಕ್ಕೆ ಗುಲಾಮನಾಗದೆ, ಅದನ್ನು ಆಳುವವನಾಗಿ ಮಾಡುತ್ತದೆ.

ಸಹನೆ ಇಸ್ಲಾಮಿನಲ್ಲಿ ಕೇವಲ ಗುಣವಲ್ಲ; ಅದು ಈಮಾನಿನ ಹೃದಯಭಾಗ. ಜೀವನದಲ್ಲಿ ಸಂಕಷ್ಟಗಳು, ವಿಳಂಬಗಳು ಮತ್ತು ನೋವುಗಳು ಅನಿವಾರ್ಯ. ಆದರೆ ಅವುಗಳ ಮಧ್ಯೆ ಮನುಷ್ಯ ಹೇಗೆ ನಿಲ್ಲುತ್ತಾನೆ ಎಂಬುದೇ ಅವನ ನಿಜವಾದ ಗುಣಮಟ್ಟ.

ಇಸ್ಲಾಂ ಸಹನೆಯನ್ನು ನಿಷ್ಕ್ರಿಯ ದುಃಖವಾಗಿ ಅಲ್ಲ, ಜಾಗೃತ ಶಕ್ತಿಯಾಗಿ ನೋಡುತ್ತದೆ. ಅಲ್ಲಾಹನ ಮೇಲಿನ ಭರವಸೆ, ಭಾವನೆಗಳ ಸಂಯಮ ಮತ್ತು ಕರ್ತವ್ಯದಲ್ಲಿ ಸ್ಥಿರತೆ – ಇವೇ ಸಹನೆಯ ಮೂಲಾಧಾರ.

ಲೇಖಕರ ಕುರಿತು

  • ಮೊಹಮ್ಮದ್ ಅಬ್ದುಲ್ ಘನಿ

ಅವರು ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ. ಕ್ಯಾಲಿಕಟ್ ವಿಶ್ವವಿದ್ಯಾಲಯದ ಮೂಲಕ ಬಿ.ಎ. (ಅರೇಬಿಕ್ ಭಾಷೆ ಮತ್ತು ಸಾಹಿತ್ಯ) ಪದವಿ ಮುಂದುವರಿಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

  • ಉಲ್ಲೇಖಗಳು
  • ಪವಿತ್ರ ಕುರ್‌ಆನ್
  • ಸಹೀಹ್ ಅಲ್-ಬುಖಾರಿ
  • ಸಹೀಹ್
  • ಮುಸ್ಲಿಂ
  • James Clear, Atomic Habits (2018)

Related Posts

Leave A Comment

Voting Poll

Get Newsletter