ಅಲ್ಲಾಹನು ನಮಗೆ ಪರೀಕ್ಷೆಗಳನ್ನು ಯಾಕೆ ಕೊಡುತ್ತಾನೆ?
ಅಲ್ಲಾಹನು ನಮಗೆ ಪರೀಕ್ಷೆಗಳನ್ನು ಯಾಕೆ ಕೊಡುತ್ತಾನೆ.
ಮನುಷ್ಯನ ಬದುಕು ಎಂದೂ ನೇರವಾಗಿ ಹರಿಯುವುದಿಲ್ಲ. ಒಂದು ದಿನ ಎಲ್ಲವೂ ನಮ್ಮ ಹಿಡಿತದಲ್ಲಿದೆಯೆಂದು ಅನ್ನಿಸುತ್ತದೆ; ಮತ್ತೊಂದು ದಿನ ಹಠಾತ್ತನೆ ಎಲ್ಲವೂ ಕೈಯಿಂದ ಜಾರಿ ಹೋದಂತೆ ತೋರುತ್ತದೆ. ಸಂತೋಷದ ಕ್ಷಣಗಳು, ಸಮೃದ್ಧಿಯ ಹರಿವುಗಳ ನಡುವೆ ದುಃಖದ ನೆರಳುಗಳು, ನಷ್ಟದ ನೋವುಗಳು ಕೂಡ ಸಾಕ್ಷಿಯಾಗುತ್ತದೆ, ನಿರೀಕ್ಷೆಗಳು ಭಗ್ನವಾಗುವ ಹತಾಶೆಗಳು ಸಹಜವಾಗಿ ಬೆರೆತುಕೊಳ್ಳುತ್ತವೆ. ಅಂತಹ ಸಂದರ್ಭಗಳಲ್ಲಿ ನಮ್ಮ ಮನದಾಳದಲ್ಲಿ ಶಬ್ದರಹಿತವಾಗಿ ಒಂದು ಪ್ರಶ್ನೆ ಮೂಡುತ್ತದೆ: “ಇದೆಲ್ಲ ಯಾಕೆ ನಡೆಯುತ್ತಿದೆ? ನಾನು ಏನಾದರೂ ತಪ್ಪು ಮಾಡಿದ್ದೇನಾ?”.
ಇಸ್ಲಾಂ ಈ ಪ್ರಶ್ನೆಯನ್ನು ಕಡೆಗಣಿಸುವುದಿಲ್ಲ. ಬದಲಿಗೆ, ಅದನ್ನು ಮನುಷ್ಯನ ಆಂತರಿಕ ಬೆಳವಣಿಗೆಯ ಮೂಲಕಲ್ಲಾಗಿರುತ್ತದೆ. ಕಷ್ಟಗಳು ಜೀವನದಲ್ಲಿ ಬರುವ ದೋಷಗಳಲ್ಲ; ಅವು ಬದುಕಿನ ಅವಿಭಾಜ್ಯ ಅಂಶಗಳು. ಇಸ್ಲಾಮಿನ ನೋಟದಲ್ಲಿ ಈ ಭೂಮಿ ವಿಶ್ರಾಂತಿಯ ಮನೆಯಲ್ಲ, ಅದೊಂದು ಪರೀಕ್ಷಾ ಮೈದಾನ. ಇಲ್ಲಿ ನಾವು ಎದುರಿಸುವ ಪ್ರತಿ ಸನ್ನಿವೇಶವೂ—ಅದು ನಮಗೆ ಸಂತೋಷ ತರುವುದೋ ಅಥವಾ ದುಃಖ ಕೊಡುವುದೋ— ಇದೆಲ್ಲವೂ ಅಲ್ಲಾಹನ ನೀಡಿದ ಪರೀಕ್ಷೆಯಾಗಿರುತ್ತದೆ.
ಜೀವನ ಮತ್ತು ಮರಣ – ಪರೀಕ್ಷೆಯ ಅಂಶಗಳು
ಕುರ್‌ಆನ್ ಮನುಷ್ಯನ ಬದುಕಿನ ಉದ್ದೇಶವನ್ನು ಸರಳವಾಗಿ ಚಿತ್ರಿಸುತ್ತದೆ. ಅಲ್ಲಾಹನು ಹೇಳುತ್ತಾನೆ:
{الَّذِي خَلَقَ الْمَوْتَ وَالْحَيَاةَ لِيَبْلُوَكُمْ أَيُّكُمْ أَحْسَنُ عَمَلًا وَهُوَ الْعَزِيزُ الْغَفُورُ} (ಸೂರತುಲ್ ಮುಲ್ಕ್ 67:2)
ಮರಣವನ್ನೂ ಮತ್ತು ಜೀವನವನ್ನೂ ಸೃಷ್ಟಿಸಿದವನು ಅವನೇ. ನಿಮ್ಮಲ್ಲಿ ಯಾರು ಉತ್ತಮ ಕಾರ್ಯಗಳಲ್ಲಿ ಮುಂದಿರುವರೆಂದು ಪರೀಕ್ಷಿಸಲು. ಅವನು ಬಲಶಾಲಿ, ಕ್ಷಮೆಗಾರನು.”
ಈ ವಾಕ್ಯ ಜೀವನದ ಆಳವನ್ನು ಬಿಚ್ಚಿಟ್ಟು ನಿಲ್ಲಿಸುತ್ತದೆ. ಬದುಕು ಕೇವಲ ಸುಖಗಳನ್ನು ಕೂಡಿಹಾಕುವ ಯಾತ್ರೆಯಲ್ಲ; ಇಲ್ಲಿನ ಯಶಸ್ಸು ನೋವಿಲ್ಲದ ಜೀವನವಲ್ಲ; ನೋವು ಬಂದಾಗಲೂ ಅಲ್ಲಾಹನೊಂದಿಗಿನ ಬಂಧವನ್ನು ಕಾಪಾಡಿಕೊಳ್ಳುವುದು.
ಕಷ್ಟವೆಂದರೆ ಶಿಕ್ಷೆಯಾ?
ಸಾಮಾನ್ಯ ಜನರಲ್ಲಿ ಒಂದು ತಪ್ಪು ಭಾವನೆ ಆಳವಾಗಿ ಬೇರೂರಿದೆ. ಯಾರ ಬದುಕಿನಲ್ಲಿ ಕಷ್ಟ ಬಂದರೆ, ಅದನ್ನು ಪಾಪದ ಫಲವೆಂದು ಭಾವಿಸುವ ಸ್ವಭಾವ. ಆದರೆ ಇಸ್ಲಾಂ ಇದನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ.
ಇಸ್ಲಾಮಿನ ಪ್ರಕಾರ: ಸಂಪತ್ತು ಬಂದರೂ, ಬಡತನ ಬಂದರೂ, ಆರೋಗ್ಯವೂ ಮತ್ತು ಅನಾರೋಗ್ಯವೂ ಪರೀಕ್ಷೆಯಾಗಿರುತ್ತದೆ.
ಸಂಪತ್ತು ಸಿಕ್ಕಾಗ ಅದು ಅಹಂಕಾರಕ್ಕೆ ಕಾರಣವಾಗುತ್ತದೆಯೋ ಅಥವಾ ಕೃತಜ್ಞತೆಗೆ ದಾರಿಯಾಗುತ್ತದೆಯೋ, ಅದೇ ರೀತಿ, ಕಷ್ಟದ ಸಮಯದಲ್ಲಿ ನಿರಾಶೆಯೋ ಸಹನೆಯೋ, ಸುಖ ದುಃಖವೂ ಪರೀಕ್ಷಯಾಗಿರುತ್ತದೆ.
ಪರೀಕ್ಷೆಗಳಿಲ್ಲದಿದ್ದರೆ ನಿಜವಾದ ನಂಬಿಕೆ ಮತ್ತು ಬಾಹ್ಯ ನಂಬಿಕೆಯ ನಡುವಿನ ವ್ಯತ್ಯಾಸವನ್ನು ತಿಳಿಯಲು ಸಾಧ್ಯವಿಲ್ಲ. ಯಾರು ಬೇಕಾದರೂ “ನಾನು ನಂಬಿಕೆದಾರ” ಎಂದು ಹೇಳಬಹುದು. ಆದರೆ ಕಷ್ಟ ಬಂದಾಗ, ಪ್ರಾರ್ಥನೆ ಭಾರವಾದಾಗ, ಆಶೆಗಳು ಚೂರಾಗಿ ಹೋದಾಗ, ಅಲ್ಲಾಹನ ಮೇಲಿನ ನಂಬಿಕೆಯನ್ನು ಕಾಪಾಡಿಕೊಳ್ಳುವವರೇ ನಿಜವಾದ ನಂಬಿಕೆದಾರರು.
ಈ ಸತ್ಯವನ್ನು ಪ್ರವಾದಿ ಮುಹಮ್ಮದ್ ﷺ ಸರಳವಾಗಿ ಹೇಳಿದ್ದಾರೆ:
«مَا يُصِيبُ الْمُؤْمِنَ مِنْ نَصَبٍ وَلَا وَصَبٍ وَلَا هَمٍّ وَلَا حَزَنٍ وَلَا أَذًى وَلَا غَمٍّ، حَتَّى الشَّوْكَةِ يُشَاكُهَا، إِلَّا كَفَّرَ اللَّهُ بِهَا مِنْ خَطَايَاهُ» (ಬುಖಾರಿ)
“ನಂಬಿಕೆದಾರನಿಗೆ ಬರುವ ನೋವು, ದಣಿವು, ಚಿಂತೆ, ದುಃಖ, ಹಾನಿ ಅಥವಾ ಸಂಕಟ—ಒಂದು ಮುಳ್ಳು ಚುಚ್ಚಿದರೂ ಸಹ—ಅಲ್ಲಾಹನು ಅದರ ಮೂಲಕ ಅವನ ಪಾಪಗಳನ್ನು ಕಳೆಯುತ್ತಾನೆ.”
ನಾವು ನೋವನ್ನು ಶಾಪವೆಂದು ನೋಡುತ್ತೇವೆ. ಆದರೆ ಇಸ್ಲಾಂ ಅದನ್ನು ಶುದ್ಧೀಕರಣದ ಹಂತವೆಂದು ಕಾಣುತ್ತದೆ. ಯಾವ ನೋವೂ ವ್ಯರ್ಥವಲ್ಲ. ಅದು ನಮ್ಮನ್ನು ಉನ್ನತಗೊಳಿಸಬಹುದು ಅಥವಾ ಪಾಪಗಳನ್ನು ತೊಡೆದುಹಾಕಬಹುದು.
ಪರೀಕ್ಷೆಗಳ ಹಿಂದಿನ ಅಲ್ಲಾಹನ ಕರುಣೆ
ಪರೀಕ್ಷೆಗಳು ಕೇವಲ ನೋವು ಕೊಡಲು ಬಂದಿದ್ದರೆ ಅವುಗಳು ತಡೆಯಲಾರದ್ದಾಗುತ್ತಿದ್ದವು. ಆದರೆ ಇಸ್ಲಾಂ ಪರೀಕ್ಷೆಗಳನ್ನು ಕರುಣೆಯ ಕಣ್ಣಿನಿಂದ ನೋಡುತ್ತದೆ. ಕೆಲವು ಸಲ ಅಲ್ಲಾಹನು ಒಬ್ಬನನ್ನು ಉನ್ನತ ಸ್ಥಾನಕ್ಕೆ ಏರಿಸಲು ಅವನನ್ನು ಕಠಿಣ ಸನ್ನಿವೇಶದಲ್ಲಿ ಇಡುತ್ತಾನೆ. ಅವನು ಅಲ್ಲಾಹನ ಮೇಲೆ ನಂಬಿಕೆ ಇಡುತ್ತಾನೆ, ವಿಧೇಯನಾಗಿ ಉಳಿಯುತ್ತಾನೆ. ಅಂತಹ ಕ್ಷಣಗಳು ಅವನನ್ನು ಒಳಗಿನಿಂದ ಆತ್ಮನಿರ್ಭರಗೊಳಿಸುತ್ತದೆ.
ಮನುಷ್ಯನ ತಪ್ಪುಗಳಿಗೆ ಮರಣಾನಂತರ ಶಿಕ್ಷೆಯಾಗದಂತೆ ಅಲ್ಲಾಹನು ಈ ಲೋಕದಲ್ಲೇ ಅವನ ಪಾಪವನ್ನು ಮೊಚಿಸುತ್ತಾನೆ. ಈ ಜಗತ್ತಿನ ನೋವು ಎಷ್ಟೇ ದೊಡ್ಡದೆನಿಸಿದರೂ, ಮರಣಾನಂತರದ ಶಿಕ್ಷೆಯ ಮುಂದೆ ಅದು ನಗಣ್ಯ. ಹೀಗಾಗಿ ಕಷ್ಟಗಳು ಕೆಲವೊಮ್ಮೆ ಅಲ್ಲಾಹನ ದಯೆಯ ರೂಪಗಳೇ ಆಗಿರುತ್ತದೆ.
ಸಾಮರ್ಥ್ಯಕ್ಕಿಂತ ಹೆಚ್ಚು ಹೊರೆಯನ್ನು ಅಲ್ಲಾಹನ ಒಬ್ಬನ ಮೇಲೆ ಹಾಕಿ ಪರೀಕ್ಷಿಸುವುದಿಲ್ಲ. ಕಷ್ಟದ ನಡುವೆ ಮನುಷ್ಯನಿಗೆ ಬರುವ ದೊಡ್ಡ ಭಯ “ಇದು ನನ್ನಿಂದ ಸಾಧ್ಯವೇ ಇಲ್ಲ” ಎಂಬ ಭಾವ. ಮನಸ್ಸು ಕುಗ್ಗಿದಾಗ ಸಮಸ್ಯೆ ನಮ್ಮ ಶಕ್ತಿಗಿಂತ ದೊಡ್ಡದೆನಿಸುತ್ತದೆ. ಆದರೆ ಇಸ್ಲಾಂ ಈ ಭಯಕ್ಕೆ ಸ್ಪಷ್ಟ ಉತ್ತರ ನೀಡುತ್ತದೆ. ಅಲ್ಲಾಹನು ತಆಲಾ ಕುರ್‌ಆನಿನಲ್ಲಿ ಹೇಳುತ್ತಾನೆ:
{لَا يُكَلِّفُ اللَّهُ نَفْسًا إِلَّا وُسْعَهَا} (ಸೂರತುಲ್ ಬಖರಾ 2:286)
“ಅಲ್ಲಾಹ್ ಯಾವ ಆತ್ಮಕ್ಕೂ ಅದರ ಸಾಮರ್ಥ್ಯಕ್ಕಿಂತ ಹೆಚ್ಚು ಹೊರೆ ಹಾಕುವುದಿಲ್ಲ.”
ಈ ಮಾತು ಕೇವಲ ಧಾರ್ಮಿಕ ವಾಕ್ಯವಲ್ಲ; ಅದು ಕಷ್ಟದಲ್ಲಿರುವವನಿಗೆ ನೀಡುವ ಆಳವಾದ ಆಶ್ವಾಸನೆ. ನೀವು ಎದುರಿಸುತ್ತಿರುವ ನೋವು, ಗೊಂದಲ ಅಥವಾ ನಷ್ಟ—ಅದು ನಿಮ್ಮ ಶಕ್ತಿಯೊಳಗೇ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಕೆಲವೊಮ್ಮೆ ನಾವು ಈ ಸತ್ಯವನ್ನು ಮರೆಯುತ್ತೇವೆ. ಕಷ್ಟ ನಮ್ಮನ್ನು ಮುತ್ತಿಕೊಂಡಾಗ ನಮ್ಮೊಳಗಿನ ಬಲವನ್ನು ನಾವೇ ಕಾಣದೆ ಹೋಗುತ್ತೇವೆ. ಆದರೆ ಅಲ್ಲಾಹನು ಈ ಪರೀಕ್ಷೆಯನ್ನು ನೀಡಿದ್ದರೆ, ಅದನ್ನು ಎದುರಿಸುವ ಶಕ್ತಿಯನ್ನೂ ಅವನೇ ನಮ್ಮಲ್ಲಿ ಇಟ್ಟಿದ್ದಾನೆ.
ಮನುಷ್ಯನ ಸ್ವಭಾವವೇ ಹೀಗೆ. ಕಷ್ಟ ಬಂದಾಗ ಕಳೆದುಹೋದದ್ದರ ಮೇಲೆಯೇ ಕಣ್ಣು ನೆಟ್ಟಿರುತ್ತದೆ. ಉದ್ಯೋಗ ಹೋದರೆ ಆದಾಯದ ಬಗ್ಗೆ ಮಾತ್ರ ಚಿಂತೆ. ಸಂಬಂಧ ಮುರಿದರೆ ನೋವಿನ ಬಗ್ಗೆ ಮಾತ್ರ ಯೋಚನೆ. ಆದರೆ ನಮ್ಮ ಬಳಿ ಉಳಿದಿರುವ ಅನೇಕ ಆಶೀರ್ವಾದಗಳನ್ನು ನಾವು ಗಮನಿಸುವುದಿಲ್ಲ—ಉಸಿರಾಡುವ ಶಕ್ತಿ, ದೇಹದ ಬಲ, ಕುಟುಂಬದ ಸಹಬಾಳ್ವೆ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಾಹನೊಂದಿಗಿನ ಬಂಧ. ಈ ನೋಟ ಬದಲಾದರೆ ಕಷ್ಟವೂ ಸ್ವಲ್ಪ ಹಗುರವಾಗುತ್ತದೆ.
ನಮಗೆ ಇಷ್ಟವಿಲ್ಲದದ್ದರಲ್ಲೇ ಒಳಿತು ಇರಬಹುದು
ಮನುಷ್ಯ ಕ್ಷಣಿಕವಾಗಿ ಯೋಚಿಸುವವನು. ಈಗ ನಡೆಯುತ್ತಿರುವುದೇ ಅವನಿಗೆ ಸತ್ಯವೆನಿಸುತ್ತದೆ. ಆದರೆ ಅಲ್ಲಾಹನ ಜ್ಞಾನ ಅನಂತ. ಈ ಸತ್ಯವನ್ನು ಅಲ್ಲಾಹನು ಕುರ್‌ಆನಿನಲ್ಲಿ ವ್ಯಕ್ತವಾಗಿ ಹೇಳುತ್ತಾನೆ:
{وَعَسَىٰ أَن تَكْرَهُوا شَيْئًا وَهُوَ خَيْرٌ لَّكُمْ} (ಸೂರತುಲ್ ಬಖರಾ 2:216)
“ನೀವು ದ್ವೇಷಿಸುವದ್ದೇ ನಿಮಗೆ ಒಳ್ಳೆಯದಾಗಿರಬಹುದು.”
ಈ ವಾಕ್ಯ ಮನುಷ್ಯನ ನೋಟ ಮತ್ತು ಅಲ್ಲಾಹನ ನೋಟದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಗೊಳಿಸುತ್ತದೆ. ನಾವು ಒಂದು ಘಟನೆಗೆ ‘ಕೆಟ್ಟದು’ ಎಂದು ತಕ್ಷಣ ಮುದ್ರೆ ಹಾಕುತ್ತೇವೆ. ಆದರೆ ಅದೇ ಘಟನೆ ಮುಂದೆ ನಮಗೆ ರಕ್ಷಣೆಯಾಗಿರಬಹುದು, ಮಾರ್ಗದರ್ಶನವಾಗಿರಬಹುದು. ಕೆಲವೊಮ್ಮೆ ಒಂದು ವಿಳಂಬ ದೊಡ್ಡ ತಪ್ಪಿನಿಂದ ದೂರ ಮಾಡಿರಬಹುದು. ಒಂದು ನಷ್ಟ ಇನ್ನೂ ದೊಡ್ಡ ನಷ್ಟದಿಂದ ಉಳಿಸಿರಬಹುದು. ಆದರೆ ಆ ಕ್ಷಣದಲ್ಲಿ ಅದು ನಮಗೆ ಅರ್ಥವಾಗುವುದಿಲ್ಲ.
ಜೀವನದಲ್ಲಿ ಅನೇಕರು ವರ್ಷಗಳ ನಂತರ ಹೇಳುವ ಮಾತು: “ಆಗ ಅದು ನೋವಾಗಿತ್ತು, ಆದರೆ ಇಂದು ಅರ್ಥವಾಗುತ್ತಿದೆ—ಅದೇ ನನ್ನ ಬದುಕಿನ ತಿರುವು.” ಇಸ್ಲಾಂ ಈ ಅನುಭವವನ್ನು ತತ್ವದ ರೂಪದಲ್ಲಿ ನೀಡುತ್ತದೆ. ಅಲ್ಲಾಹನು ನಮಗೆ ಏನನ್ನೂ ವ್ಯರ್ಥವಾಗಿ ಕೊಡುವುದಿಲ್ಲ. ಪ್ರತಿ ಘಟನೆ—ಅದು ನಮಗೆ ಇಷ್ಟವೋ ಬೇಸರವೋ—ನಮ್ಮ ಒಳಿತಿನ ಭಾಗವೇ.
ಕೃತಜ್ಞತೆ ಮತ್ತು ಸಹನೆ – ಈಮಾನಿನ ಆಧಾರಗಳು
ಈಮಾನಿನ ಬದುಕು ಎರಡು ಮುಖ್ಯ ಗುಣಗಳ ಮೇಲೆ ನಿಂತಿದೆ: ಕೃತಜ್ಞತೆ (ಶುಕ್ರ್) ಮತ್ತು ಸಹನೆ (ಸಬ್ರ್). ಪ್ರವಾದಿ ಮುಹಮ್ಮದ್ ﷺ ಈ ಸತ್ಯವನ್ನು ಸುಂದರವಾಗಿ ವಿವರಿಸಿದ್ದಾರೆ:
«عَجَبًا لِأَمْرِ الْمُؤْمِنِ، إِنَّ أَمْرَهُ كُلَّهُ لَهُ خَيْرٌ، وَلَيْسَ ذَاكَ لِأَحَدٍ إِلَّا لِلْمُؤْمِنِ؛ إِنْ أَصَابَتْهُ سَرَّاءُ شَكَرَ فَكَانَ خَيْرًا لَهُ، وَإِنْ أَصَابَتْهُ ضَرَّاءُ صَبَرَ فَكَانَ خَيْرًا لَهُ»
“ನಂಬಿಕೆದಾರನ ಸ್ಥಿತಿ ಅದ್ಭುತವಾಗಿದೆ. ಅವನ ಎಲ್ಲ ಸನ್ನಿವೇಶಗಳಲ್ಲೂ ಒಳಿತೇ ಇದೆ. ಸುಖ ಬಂದರೆ ಕೃತಜ್ಞನಾಗುತ್ತಾನೆ; ದುಃಖ ಬಂದರೆ ಸಹಿಸುತ್ತಾನೆ—ಎರಡೂ ಅವನಿಗೆ ಒಳ್ಳೆಯದೇ.”
ಈ ಮಾತು ಈಮಾನ್ದಾರನ ಬದುಕಿನ ನಕ್ಷೆಯಂತೆ. ಸುಖದಲ್ಲಿ ಮರೆಯದೆ ಕೃತಜ್ಞನಾಗಿರುವುದು ಸುಲಭವಲ್ಲ. ದುಃಖದಲ್ಲಿ ದೂರು ಹೇಳದೆ ಸಹಿಸುವುದು ಇನ್ನೂ ಕಷ್ಟ. ಆದರೆ ಈ ಎರಡನ್ನೂ ಸಮತೋಲನದಿಂದ ನಿಭಾಯಿಸುವವನೇ ನಿಜ ನಂಬಿಕೆದಾರ.
ಕೃತಜ್ಞತೆ ನಮ್ಮನ್ನು ಅಹಂಕಾರದಿಂದ ಕಾಪಾಡುತ್ತದೆ. ಸಹನೆ ನಿರಾಶೆಯಿಂದ ರಕ್ಷಿಸುತ್ತದೆ. ಈ ಗುಣಗಳಿಲ್ಲದೆ ಜೀವನದ ಏರಿಳಿತಗಳನ್ನು ಎದುರಿಸಲು ಸಾಧ್ಯವಿಲ್ಲ.
ಕಷ್ಟದೊಂದಿಗೆ ಸುಲಭವಿರುತ್ತದೆ – ಕುರ್‌ಆನಿನ ಭರವಸೆ
ಕಷ್ಟ ಶಾಶ್ವತವಲ್ಲ ಎಂಬ ಭರವಸೆಯನ್ನು ಅಲ್ಲಾಹ್ ಸ್ವತಃ ನೀಡಿದ್ದಾನೆ. ಕುರ್‌ಆನ್ ಹೇಳುತ್ತದೆ:
{فَإِنَّ مَعَ الْعُسْرِ يُسْرًا إِنَّ مَعَ الْعُسْرِ يُسْرًا} (ಸೂರತುಶ್ ಶರಹ್ 94:5–6)
“ಸುಲಭದೊಂದಿಗೆ ಕಷ್ಟ ಇರುತ್ತದೆ. ಕಷ್ಟದೊಂದಿಗೆ ಸುಲಭತೆ ಇದೆ.”
ಈ ಮಾತುಗಳ ಭಾಷೆಯೇ ನಮಗೆ ಆಶೆಯನ್ನು ಹುಟ್ಟಿಸುತ್ತದೆ. ಒಂದು ಕಷ್ಟಕ್ಕೆ ಒಂದಲ್ಲ, ಎರಡು ಸುಲಭತೆಗಳು. ಆದರೆ ಅವು ಕಷ್ಟದ ನಡುವೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಸಹನೆಯ ನಂತರವೇ ಅವು ಬೆಳಕಿಗೆ ಬರುತ್ತವೆ.
ಮನುಷ್ಯ ಇತಿಹಾಸವೇ ಇದಕ್ಕೆ ಸಾಕ್ಷಿ. ವಿಶೇಷವಾಗಿ ಪ್ರವಾದಿ ಮುಹಮ್ಮದ್ ﷺ ಅವರ ಜೀವನ. ಮಕ್ಕಾದಲ್ಲಿ ಅನುಭವಿಸಿದ ತಿರಸ್ಕಾರ, ಹಿಂಸೆ, ಏಕಾಂಗಿ ಹೋರಾಟ—ಎಲ್ಲವೂ ಕೊನೆಗೆ ಮದೀನಾದ ಜಯಕ್ಕೆ ದಾರಿ ಮಾಡಿಕೊಟ್ಟವು. ಒಂದು ಕಾಲದಲ್ಲಿ ಕೆಲವೇ ಜನರಿದ್ದ ಸಮುದಾಯ, ಕೆಲವು ವರ್ಷಗಳಲ್ಲಿ ಇಡೀ ಪ್ರದೇಶವನ್ನು ಬೆಳಗಿಸಿತು. ಈ ಘಟನೆ ಹೇಳುವುದು: ಕಷ್ಟ ಅಂತ್ಯವಲ್ಲ; ಅದು ಬದಲಾವಣೆಯ ಮೆಟ್ಟಿಲು.
ಜೀವನದ ಪರೀಕ್ಷೆಗಳು ನಮ್ಮನ್ನು ಕುಗ್ಗಿಸಲು ಬಂದಿಲ್ಲ. ಅವು ನಮ್ಮೊಳಗಿನ ಬಲವನ್ನು ಹೊರತರುವುದಕ್ಕಾಗಿ. ಕಷ್ಟದ ಸಮಯದಲ್ಲಿ ಮನುಷ್ಯ ತನ್ನನ್ನು ಹೊಸದಾಗಿ ಕಂಡುಕೊಳ್ಳುತ್ತಾನೆ. ತನ್ನೊಳಗಿನ ಸಹನೆ, ಧೈರ್ಯ, ನಂಬಿಕೆ—ಇವೆಲ್ಲ ಕಷ್ಟದ ಬೆಂಕಿಯಲ್ಲಿ ಪರೀಕ್ಷೆಗೊಳಗಾಗಿ ಶುದ್ಧವಾಗುತ್ತವೆ.
ಅಲ್ಲಾಹನು ನಮಗೆ ಪರೀಕ್ಷೆ ನೀಡುತ್ತಾನೆ ಎಂದರೆ ಅವನು ನಮ್ಮನ್ನು ಮರೆತಿದ್ದಾನೆ ಎಂದಲ್ಲ. ಬದಲಿಗೆ, ಅವನು ನಮ್ಮ ಮೇಲೆ ವಿಶೇಷ ಕಾಳಜಿ ಹರಿಸುತ್ತಿದ್ದಾನೆ ಎಂದರ್ಥ. ಪರೀಕ್ಷೆಗಳ ಮೂಲಕ ಅವನು ನಮ್ಮನ್ನು ಉನ್ನತಕ್ಕೆ ಏರಿಸಲು, ಹೃದಯವನ್ನು ಶುದ್ಧಗೊಳಿಸಲು, ನಂಬಿಕೆಯನ್ನು ಗಟ್ಟಿಗೊಳಿಸಲು ಬಯಸುತ್ತಾನೆ.
ಈ ಜಗತ್ತು ನಿತ್ಯವಲ್ಲ. ಇಲ್ಲಿನ ಕಷ್ಟಗಳೂ ನಿತ್ಯವಲ್ಲ. ಆದರೆ ಇಲ್ಲಿನ ಸಹನೆ, ಕೃತಜ್ಞತೆ ಮತ್ತು ನಂಬಿಕೆಯ ಫಲ ಶಾಶ್ವತ. ಇದನ್ನು ಅರಿತು ಬದುಕುವವನು ನೋವಿನ ನಡುವೆಯೂ ಶಾಂತಿಯನ್ನು ಕಂಡುಕೊಳ್ಳುತ್ತಾನೆ. ಕಷ್ಟ ಅವನನ್ನು ಮುರಿಯುವುದಿಲ್ಲ; ಅವನನ್ನು ರೂಪಿಸುತ್ತದೆ.
ಇನ್‌ಶಾ ಅಲ್ಲಾಹ್,
ಅಲ್ಲಾಹ್ ನಮಗೆ ಪ್ರತಿ ಪರೀಕ್ಷೆಯ ಅರ್ಥವನ್ನು ತಿಳಿಯುವ ಹೃದಯವನ್ನು ಕೊಡಲಿ. ಸಹನೆಯನ್ನು ನಮ್ಮ ಸ್ವಭಾವವಾಗಿ ಮಾಡಲಿ. ಮತ್ತು ನಮ್ಮ ಬದುಕಿನ ಪ್ರತಿ ಕಷ್ಟವನ್ನೂ ಆತ್ಮೀಯ ಬೆಳವಣಿಗೆಯ ಮೆಟ್ಟಿಲಾಗಿ ಪರಿವರ್ತಿಸಲಿ. ಆಮೀನ್.
ಲೇಖಕರ ಕುರಿತು
ಮೊಹಮ್ಮದ್ ಅಬ್ದುಲ್ ಘನಿ
ಅವರು ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ. ಕ್ಯಾಲಿಕಟ್ ವಿಶ್ವವಿದ್ಯಾಲಯದ ಮೂಲಕ ಬಿ.ಎ. (ಅರೇಬಿಕ್ ಭಾಷೆ ಮತ್ತು ಸಾಹಿತ್ಯ) ಪದವಿ ಮುಂದುವರಿಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.