ಯಾ ಸಯ್ಯಿದೀ ಯಾ ರಸೂಲಲ್ಲಾಹ್: ರೌಳಾ ಷರೀಫ್ನ ಪ್ರೇಮಕಾವ್ಯ
ಯಾ ಸಯ್ಯಿದೀ ಯಾ ರಸೂಲಲ್ಲಾಹ್: ರೌಳಾ ಷರೀಫ್ನ ಪ್ರೇಮಕಾವ್ಯ
ಲೇಖಕಿ: ಝೈನಬ್ ಮುಹಮ್ಮದ್
ಅನುವಾದ: ಮುಹಮ್ಮದ್ ಅಬ್ದುಲ್ಲಾ ಹೆಚ್ ಕೆ
ರೌಳಾ ಷರೀಫ್ನ ಗೋಡೆಗಳ ಮೇಲೆ ಕೆತ್ತಲಾಗಿರುವ ‘ಯಾ ಸಯ್ಯಿದೀ ಯಾ ರಸೂಲಲ್ಲಾಹ್’ ಎಂಬ ಪ್ರವಾದಿ-ಪ್ರೇಮದ ಗೀತೆಯ ಸಾಲುಗಳು ಪ್ರವಾದಿ (ಸ್ವ)ರವರ ಮೇಲಿನ ಆಳವಾದ ಪ್ರೀತಿ ಮತ್ತು ಅವರ ಶ್ರೇಷ್ಠತೆಯನ್ನು ಅಂಗೀಕರಿಸುವ ಇಸ್ಲಾಮಿಕ್ ಸಾಹಿತ್ಯದ ಅತ್ಯಂತ ಸುಂದರವಾದ ಕೊಡುಗೆಗಳಲ್ಲಿ ಒಂದು.
ಸ್ಪೇನ್ನ ಪ್ರಮುಖ ವಿದ್ವಾಂಸರಾದ ಇಬ್ರಾಹೀಂ ಇಬ್ನ್ ಮೂಸಾ ಅಶ್-ಶಾತಿಬಿ ಅವರು ರಚಿಸಿದ ಈ ಕಾವ್ಯವು ವಿಶ್ವಾಸಿಗಳ ಹೃದಯಗಳಲ್ಲಿ ಆಳವಾಗಿ ಬೇರೂರಿದೆ. ಪ್ರವಾದಿ (ಸ್ವ) ರವರ ಮೇಲಿನ ಅನುರಾಗ ಮತ್ತು ಅವರನ್ನು ಮುಂದಿಟ್ಟುಕೊಂಡು ಮಾಡುವ ‘ತವಸ್ಸುಲ್’ (ಸಹಾಯ ಕೋರುವಿಕೆ) ಈ ಕವಿತೆಯ ತಿರುಳು.
‘ಯಾ ಸಯ್ಯಿದೀ ಯಾ ರಸೂಲಲ್ಲಾಹ್, ಖುದ್ ಬಿಯದೀ’ ಎಂಬ ಸಾಲಿನಿಂದ ಪ್ರಾರಂಭವಾಗುವ ಈ ಕಾವ್ಯವು, ತನಗೆ ಬೇರೆ ಯಾವುದೇ ಆಸರೆ ಮತ್ತು ನೆರಳಿಲ್ಲ ಎಂಬುದನ್ನು ಅರಿತುಕೊಂಡು, ಅಲ್ಲಾಹನ ಸಂದೇಶವಾಹಕರ ಕಡೆಗೆ ಸಹಾಯವನ್ನು ಕೋರಿ ತಿರುಗುವ ವಿಶ್ವಾಸಿಯೊಬ್ಬನ ಹೃದಯವನ್ನು ಚಿತ್ರಿಸುತ್ತದೆ. ಕವಿಯ ಮಾತುಗಳು ಕೇವಲ ಒಂದು ಸ್ತುತಿಗೀತೆಯಲ್ಲ, ಬದಲಾಗಿ ಒಂದು ಪ್ರಾರ್ಥನೆಯ ರೂಪದಲ್ಲಿರುವ ವಿನಂತಿಯಾಗಿದೆ. ಕಷ್ಟಗಳಲ್ಲಿ ತನಗೆ ಆಸರೆಯಾಗಿ ಅಲ್ಲಾಹನ ರಸೂಲರನ್ನು ಬಿಟ್ಟು ಬೇರೆ ಯಾರೂ ಇಲ್ಲವೆಂದು ಮತ್ತು ಎಲ್ಲಾ ಬಿಕ್ಕಟ್ಟಿನ ಘಟ್ಟಗಳಲ್ಲೂ ಅವರೇ ಮಾರ್ಗದರ್ಶಕರು ಎಂದು ಕವಿ ಒಪ್ಪಿಕೊಳ್ಳುತ್ತಾರೆ. ಕವಿತೆಯ ಪ್ರತಿಯೊಂದು ಸಾಲು ಪ್ರವಾದಿ (ಸ್ವ) ರವರ ಉನ್ನತ ಸ್ಥಾನವನ್ನು ನೆನಪಿಸುತ್ತದೆ. ’ಫ ಅಂತ ನೂರುಲ್ ಹುದಾ ಫೀ ಕುಲ್ಲಿ ಕಾಇನತಿನ್’ (ನೀವೇ ಜಗತ್ತಿಗೆಲ್ಲಾ ದಾರಿತೋರಿಸುವ ಬೆಳಕು) ಎಂಬ ಸಾಲು, ಪ್ರವಾದಿ (ಸ್ವ) ರವರು ಕತ್ತಲೆಯಲ್ಲಿ ಬೆಳಕು ಚೆಲ್ಲುವವರು ಎಂಬುದನ್ನು ಒತ್ತಿಹೇಳುತ್ತದೆ. ಅದೇ ರೀತಿ ’ವ ಅಂತ ಸಿರ್ರುನ್ನದಾ ಯಾ ಖೈರ ಮುಅ್ತಮದಿ’ (ನೀವೇ ಕರುಣೆಯ ರಹಸ್ಯ, ಅತ್ಯಂತ ಉತ್ತಮವಾದ ಆಶ್ರಯ ಕೇಂದ್ರ) ಎಂಬ ಸಾಲು ಪ್ರವಾದಿ (ಸ್ವ)ರವರು ಕರುಣೆ ಮತ್ತು ಸಹಾಯದ ಮೂಲವೆಂದು ನೆನಪಿಸುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಸ್ತುತಿಯಲ್ಲ, ಬದಲಾಗಿ ಅಲ್ಲಾಹನಿಂದ ಅನುಗ್ರಹಗಳನ್ನು ಪಡೆಯಲು ಪ್ರವಾದಿ (ಸ್ವ)ರ ಸ್ಥಾನವು ಕಾರಣವಾಗಿದೆ ಎಂದು ವಿಶ್ವಾಸಿಸುವಿಕೆಯ ಪ್ರತಿಬಿಂಬವಾಗಿದೆ. ಇಸ್ಲಾಮಿಕ್ ನಂಬಿಕೆಯಲ್ಲಿರುವ ತವಸ್ಸುಲ್ನ (ಸಹಾಯವನ್ನು ಕೋರುವಿಕೆ) ಪ್ರಾಮುಖ್ಯತೆಯು ಈ ಸಾಲುಗಳ ಮೂಲಕ ಪ್ರಕಟವಾಗುತ್ತದೆ.
ಕವಿತೆಯ ಕೆಲವು ಸಾಲುಗಳು ಪ್ರವಾದಿ (ಸ್ವ) ರ ಜೀವನದ ಅದ್ಭುತಗಳನ್ನು (ಮುಅ್ಜಿಝಾತ್) ಸ್ಪರ್ಶಿಸುತ್ತವೆ. ’ಯಾ ಮನ್ ತಫಜ್ಜರತಿಲ್ ಅನ್ಹಾರು ನಾಬಿಅತನ್ ಮಿನ್ ಅಸ್ಬುಐಹಿ ಫರವಾಲ್ ಜೈಶ ಬಿಲ್ ಮದದಿ’ (ಅವರ ಬೆರಳುಗಳಿಂದ ನದಿಗಳು ಉಕ್ಕಿ ಹರಿದುಬಂದವು, ಅದು ಇಡೀ ಸೈನ್ಯಕ್ಕೆ ಆಸರೆ ನೀಡಿತು) ಎಂಬ ಸಾಲು, ಇತಿಹಾಸ ಪ್ರಸಿದ್ಧವಾದ ತಬೂಕಿನ ಘಟನೆಯೊಂನ್ನು ಸ್ಮರಿಸುತ್ತದೆ. ತಬೂಕ್ ಯುದ್ಧದಲ್ಲಿ ಸೈನ್ಯವು ಬಾಯಾರಿಕೆಯಿಂದ ಕಂಗೆಟ್ಟಿದ್ದಾಗ, ನಬಿ (ಸ್ವ) ರವರ ಬೆರಳುಗಳಿಂದ ಶುದ್ಧ ನೀರು ಹರಿದುಬರಲು, ಸೈನಿಕರೆಲ್ಲರೂ ಅದ್ಭುತವೆಂಬಂತೆ ತಮ್ಮ ಬಾಯಾರಿಕೆಯನ್ನು ತೀರಿಸಿಕೊಂಡ ಘಟನೆಯನ್ನು ಇಸ್ಲಾಮಿಕ್ ಇತಿಹಾಸದಲ್ಲಿ ದಾಖಲಿಸಲಾಗಿದೆ. ಇಂತಹ ಅದ್ಭುತಗಳನ್ನು ನೆನಪಿಸುವ ಮೂಲಕ, ಕವಿ ಪ್ರವಾದಿ (ಸ್ವ)ರವರ ಅದ್ಭುತ ಸಾಮರ್ಥ್ಯಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಅವರ ಉನ್ನತ ಸ್ಥಾನವನ್ನು ದೃಢಪಡಿಸುತ್ತಾರೆ.
ಒಬ್ಬ ವಿಶ್ವಾಸಿಗೆ ಎದುರಾಗುವ ಮಾನಸಿಕ ಸಂಘರ್ಷಗಳೂ ಕವಿತೆಯಲ್ಲಿ ಪ್ರತಿಫಲಿಸುತ್ತವೆ. ’ಇನ್ನೀ ಇದಾ ಸಾಮನೀ ದೈಮುನ್ ಯುರವ್ವಿಉನೀ ಅಖೂಲು ಯಾ ಸಯ್ಯಿದಸ್ಸಾದಾತೀ ಯಾ ಸನದೀ’ (ನನ್ನನ್ನು ಬೆದರಿಸುವ ಸಂಕಷ್ಟಗಳು ನನ್ನನ್ನು ಬಾಧಿಸಿದಾಗ, ನಾನು ಹೇಳುತ್ತೇನೆ, ಓ ನಾಯಕರ ನಾಯಕರೇ, ನನ್ನ ಆಸರೆ ಮತ್ತು ನೆರಳೇ!) ಎಂಬ ಸಾಲು, ಎಲ್ಲಾ ಭಯಗಳನ್ನು ಅಲ್ಲಾಹನ ರಸೂಲರ ಹೆಸರನ್ನು ಹೇಳುವ ಮೂಲಕ ನಿವಾರಿಸಬಹುದು ಎಂದು ಕಲಿಸುತ್ತದೆ. ಇದು ಒಬ್ಬ ವಿಶ್ವಾಸಿಯ ಆತ್ಮವಿಶ್ವಾಸದ ಆಳವನ್ನು ತೋರಿಸುತ್ತದೆ. ಅದೇ ರೀತಿ, ’ಕುನ್ ಲೀ ಶಫೀಅನ್ ಇಲರ್ರಹ್ಮಾನಿ ಮಿನ್ ಝಲಲೀ’ (ನನ್ನ ತಪ್ಪುಗಳಿಗಾಗಿ ಅಲ್ಲಾಹನ ಬಳಿ ನನಗೊಬ್ಬ ಶಿಫಾರಸುಗಾರರಾಗಿರಿ) ಎಂಬ ಸಾಲು, ಅಂತಿಮ ದಿನದಂದು ಪ್ರವಾದಿ (ಸ್ವ)ರವರು ತಮ್ಮ ಉಮ್ಮತ್ (ಸಮುದಾಯ) ಗಾಗಿ ಅಲ್ಲಾಹನಲ್ಲಿ ಶಿಫಾರಸು (ಶಫಾಅತ್) ಮಾಡುತ್ತಾರೆ ಎಂಬ ನಂಬಿಕೆಯನ್ನು ಇಲ್ಲಿ ಒತ್ತಿಹೇಳುತ್ತದೆ. ಕವಿ ತನ್ನ ತಪ್ಪುಗಳನ್ನು ಮತ್ತು ಕುಂದುಕೊರತೆಗಳನ್ನು ಒಪ್ಪಿಕೊಳ್ಳುತ್ತಾ, ಪ್ರವಾದಿ (ಸ್ವ) ರವರ ಶಿಫಾರಸಿಗಾಗಿ ಬೇಡಿಕೊಳ್ಳುತ್ತಾರೆ.
ಸ್ಪೇನ್ನ ವಿದ್ವಾಂಸರಾದ ಇಬ್ರಾಹೀಂ ಇಬ್ನ್ ಮೂಸಾ ಅಶ್-ಶಾತಿಬಿ ಅವರು ರಚಿಸಿದ ಈ ಕಾವ್ಯವು, ಶತಮಾನಗಳು ಕಳೆದರೂ ವಿಶ್ವಾಸಿಗಳ ಹೃದಯಗಳಲ್ಲಿ ಜೀವಂತವಾಗಿದೆ. ಈ ಕವಿತೆಯು ರೌಳಾ ಷರೀಫ್ನ ಗೋಡೆಗಳ ಮೇಲೆ ಕೆತ್ತಲ್ಪಟ್ಟ ನಂತರ ಅದರ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಯಿತು. ಮದೀನಾಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿಶ್ವಾಸಿಗೂ ಈ ಸಾಲುಗಳು ಆಳವಾದ ಆಧ್ಯಾತ್ಮಿಕ ಅನುಭವವನ್ನು ನೀಡುತ್ತವೆ. ಪ್ರಸ್ತುತ ಈ ಪದ್ಯವು (ಬೈತ್) ಒಬ್ಬ ವ್ಯಕ್ತಿಯ ನಂಬಿಕೆಯ ಆಳ, ಹೃದಯದ ಮೃದುತ್ವ ಮತ್ತು ದೈವಿಕ ಮಾರ್ಗದತ್ತ ತಿರುಗುವ ಬಯಕೆ ಇವೆಲ್ಲವನ್ನೂ ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಸಾಲು ವಿಶ್ವಾಸಿಗಳಿಗೆ ಆಧ್ಯಾತ್ಮಿಕ ಶಕ್ತಿಯನ್ನು ಮತ್ತು ಪ್ರವಾದಿ (ಸ್ವ)ವರ ಮೇಲಿನ ಪ್ರೀತಿಯನ್ನು ಹೆಚ್ಚಿಸುವ ಪ್ರೇರಣೆಯನ್ನು ನೀಡುತ್ತದೆ. ಈ ಕಾವ್ಯವು ಅದರ ಆರಂಭದಿಂದ ಇಂದಿನವರೆಗೂ ಮುಸ್ಲಿಂ ಜಗತ್ತಿನಲ್ಲಿ ಜನಪ್ರಿಯವಾಗಿದೆ. ಅನೇಕ ವಿದ್ವಾಂಸರು ಮತ್ತು ಸೂಫಿಗಳು ಈ ಕವಿತೆಯನ್ನು ತಮ್ಮ ಭಾಷಣಗಳಲ್ಲಿ ಹಾಗೂ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ. ಈ ಕವಿತೆ ಪ್ರವಾದಿ ಪ್ರೇಮದ ಅಮರ ಸಂಕೇತವಾಗಿ ನೆಲೆನಿಂತಿದೆ.