ಕೃತಕ ಬುದ್ಧಿಮತ್ತೆ; ಮುಸ್ಲಿಂ ಲೋಕದ ಆತ್ಮಸಂಘರ್ಷಗಳು
ಕೃತಕ ಬುದ್ಧಿಮತ್ತೆ; ಮುಸ್ಲಿಂ ಲೋಕದ ಆತ್ಮಸಂಘರ್ಷಗಳು
2026ರ ಮೇ 15ರಂದು ಪೋಪ್ ಲಿಯೋ ಅವರು ತಮ್ಮ ಮೊದಲ ಎನ್ಸೈಕ್ಲಿಕಲ್ Magnifica Humanitas ಗೆ ಸಹಿ ಹಾಕಿದ ದಿನಾಂಕವು ವಿಶೇಷ ಮಹತ್ವವನ್ನು ಹೊಂದಿತ್ತು; ಅದು ಕೇವಲ ಆಕಸ್ಮಿಕವಾಗಿರಲಿಲ್ಲ. ಕೈಗಾರಿಕಾ ಯುಗದ ನೈತಿಕ ಬಿಕ್ಕಟ್ಟುಗಳನ್ನು—ಅಂದರೆ ಕಾರ್ಖಾನೆಗಳ ಉದಯ, ಯಾಂತ್ರೀಕರಣ, ಕಾರ್ಮಿಕರ ಶೋಷಣೆ ಹಾಗೂ ಬಂಡವಾಳ ಮತ್ತು ಕಾರ್ಮಿಕರ ನಡುವಿನ ತೀವ್ರ ಅಸಮತೋಲನವನ್ನು—ಎದುರಿಸಿದ 1891ರ Rerum Novarum ಎಂಬ ಪಾಪರ ಎನ್ಸೈಕ್ಲಿಕಲ್ ಪ್ರಕಟವಾಗಿ ನಿಖರವಾಗಿ 135 ವರ್ಷಗಳು ಪೂರ್ಣಗೊಂಡ ದಿನವೇ ಅದಾಗಿತ್ತು.
ಇಂದು ಜಾಗತಿಕ ಸಮಾಜ ಎದುರಿಸುತ್ತಿರುವ ಹೊಸ “ಸಾಮಾಜಿಕ ಪ್ರಶ್ನೆ” ಕಾರ್ಖಾನೆಗಳ ಕುರಿತದ್ದಲ್ಲ; ಅದು ಅಲ್ಗೋರಿದಮ್ಗಳ ಕುರಿತಾಗಿದೆ. ಪೋಪ್ ಅವರ ಎಚ್ಚರಿಕೆ ಸ್ಪಷ್ಟವಾಗಿದೆ. ಕೃತಕ ಬುದ್ಧಿಮತ್ತೆ (AI) ಕೇವಲ ಹೊಸ ತಂತ್ರಜ್ಞಾನ ಅಥವಾ ಸಾಧನವಲ್ಲ; ಹಿಂದೆ ಆವಿಯಂತ್ರವು ಮಾಡಿದಂತೆ, ಅದು ಕೆಲಸ, ಯುದ್ಧ, ಜ್ಞಾನ, ರಾಜಕೀಯ ಹಾಗೂ ‘ಮನುಷ್ಯ’ ಎಂಬ ಪರಿಕಲ್ಪನೆಯನ್ನೇ ಮರುರೂಪಿಸುತ್ತಿದೆ. ಆದ್ದರಿಂದ ಇಂದು ನಮ್ಮ ಮುಂದಿರುವ ಮೂಲ ಪ್ರಶ್ನೆ ಕೃತಕ ಬುದ್ಧಿಮತ್ತೆಗೆ ಏನು ಮಾಡಲು ಸಾಧ್ಯ ಎಂಬುದಲ್ಲ; ಅದು ಯಾವ ರೀತಿಯ ವಿಶ್ವವ್ಯವಸ್ಥೆಯನ್ನು ನಿರ್ಮಿಸುತ್ತಿದೆ ಮತ್ತು ಅದರ ಬೆಲೆಯನ್ನು ಯಾರು ತೆರಬೇಕಾಗುತ್ತದೆ ಎಂಬುದಾಗಿದೆ.
ಇದೇ ರೀತಿಯ ಪ್ರಶ್ನೆಗಳು ಮುಸ್ಲಿಂ ಸಮಾಜಗಳಲ್ಲಿಯೂ ಉದ್ಭವಿಸುತ್ತಿವೆ. ಆದರೆ ಅವು ಒಂದೇ ಕೇಂದ್ರೀಕೃತ ಧ್ವನಿಯ ಮೂಲಕ ವ್ಯಕ್ತವಾಗುತ್ತಿಲ್ಲ ಎಂಬುದಷ್ಟೇ ವ್ಯತ್ಯಾಸ. ದೋಹಾದಲ್ಲಿ ಇಸ್ಲಾಮಿಕ್ ನೈತಿಕತೆ ಕುರಿತು ಸಂಶೋಧನೆ ನಡೆಸುತ್ತಿರುವ ವಿದ್ವಾಂಸರು ನೈತಿಕ ಕರ್ತೃತ್ವ (moral agency) ಮತ್ತು ಹೊಣೆಗಾರಿಕೆ ಎಂಬ ವಿಷಯಗಳ ಕುರಿತು ಅಧ್ಯಯನಗಳನ್ನು ಮುಂದುವರಿಸುತ್ತಿದ್ದಾರೆ. ಮಲೇಷ್ಯಾದಲ್ಲಿ ಹೊಸ ತಂತ್ರಜ್ಞಾನಗಳ ಕುರಿತ ಚರ್ಚೆಗಳಲ್ಲಿ ಇಸ್ಲಾಮಿಕ್ ತತ್ತ್ವಗಳನ್ನು ಈಗಾಗಲೇ ಸಂಯೋಜಿಸಲಾಗಿದೆ. ಇನ್ನು ಇಂಡೋನೇಷ್ಯಾದಲ್ಲಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಡಿಜಿಟಲ್ ಜೀವನ, ಕೃತಕ ಬುದ್ಧಿಮತ್ತೆ ಸೃಷ್ಟಿಸುವ ಉತ್ತರಗಳು ಹಾಗೂ ಸ್ವಯಂಚಾಲನೆ (automation) ಉಂಟುಮಾಡುತ್ತಿರುವ ಸಾಮಾಜಿಕ ಪರಿಣಾಮಗಳನ್ನು ಎದುರಿಸಲು ಸಜ್ಜಾಗುತ್ತಿವೆ.
ಈ ಪರಂಪರೆಗಳು ಕ್ಯಾಥೋಲಿಕ್ ಸಾಮಾಜಿಕ ಬೋಧನೆಗಳ ಅದೇ ಭಾಷೆಯಲ್ಲಿ ಮಾತನಾಡದಿದ್ದರೂ, ಅವೆಲ್ಲವೂ ಒಂದು ನಿರ್ಣಾಯಕ ಅಂಶದಲ್ಲಿ ಪರಸ್ಪರ ಹೊಂದಾಣಿಕೆಯಾಗುತ್ತವೆ: ಮನುಷ್ಯನನ್ನು ಕೇವಲ ದತ್ತಾಂಶವಾಗಿ (data), ಉತ್ಪಾದಕತೆಯ ಮಾನದಂಡವಾಗಿ ಅಥವಾ ಮಾರುಕಟ್ಟೆಯ ಉಪಯುಕ್ತ ವಸ್ತುವಾಗಿ ಮಾತ್ರ ಕುಗ್ಗಿಸಿ ನೋಡಲು ಸಾಧ್ಯವಿಲ್ಲ. ಕ್ಯಾಥೋಲಿಕ್ ನಂಬಿಕೆಯ ಪ್ರಕಾರ, ಮಾನವನ ಘನತೆಯು ಅವನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದಾನೆ ಎಂಬ ಸತ್ಯದಲ್ಲಿ ನೆಲೆಗೊಂಡಿದೆ. ಈ ಘನತೆಯನ್ನು ಕಾರ್ಯಕ್ಷಮತೆ, ಬುದ್ಧಿಶಕ್ತಿ ಅಥವಾ ಆರ್ಥಿಕ ಮೌಲ್ಯದ ಆಧಾರದ ಮೇಲೆ ಗಳಿಸುವುದಿಲ್ಲ. ಒಂದು ಯಂತ್ರವು ಲೆಕ್ಕ ಹಾಕಬಹುದು, ಮುನ್ಸೂಚನೆ ನೀಡಬಹುದು ಮತ್ತು ಭಾಷೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಅದಕ್ಕೆ ಮನಸ್ಸಾಕ್ಷಿ ಅಥವಾ ನೈತಿಕ ಹೊಣೆಗಾರಿಕೆ (moral responsibility) ಇರುವುದಿಲ್ಲ.
ಇಸ್ಲಾಮಿಕ್ ಚಿಂತನೆಯೂ ವಿಭಿನ್ನ ಪರಿಕಲ್ಪನೆಗಳ ಮೂಲಕ ಇದೇ ತೀರ್ಮಾನಕ್ಕೆ ತಲುಪುತ್ತದೆ. ಆದಮನ ಸಂತತಿಗೆ ಅಲ್ಲಾಹನು ನೀಡಿದ ಗೌರವವನ್ನು ಸೂಚಿಸುವ ಕುರ್ಆನಿನ ತಕ್ರೀಮ್ (Takrīm), ಭೂಮಿಯ ಮೇಲಿನ ಮನುಷ್ಯನ ಹೊಣೆಗಾರಿಕೆಯನ್ನು ಸೂಚಿಸುವ ಖಿಲಾಫತ್ (Khilāfah) ಮತ್ತು ಮನುಷ್ಯನು ಹೊತ್ತಿರುವ ನೈತಿಕ ವಿಶ್ವಾಸಾರ್ಹತೆಯಾದ ಅಮಾನತ್ (Amānah) ಇವೆಲ್ಲವೂ ಇದಕ್ಕೆ ಆಧಾರವಾಗಿವೆ. ಮನುಷ್ಯನು ತನ್ನ ನೈತಿಕ ಹೊಣೆಗಾರಿಕೆಯನ್ನು ಒಂದು ಯಂತ್ರದ ಮುಂದೆ ಒಪ್ಪಿಸಲು ಸಾಧ್ಯವಿಲ್ಲ; ಏಕೆಂದರೆ ಹೊಣೆಗಾರಿಕೆ ಯಂತ್ರದ್ದಲ್ಲ, ಮನುಷ್ಯನದ್ದೇ ಆಗಿದೆ.
ತಂತ್ರಜ್ಞಾನವನ್ನು ದೈವೀಕರಿಸುವ ಪ್ರವೃತ್ತಿಗೆ (Deification of Technology) ವಿರುದ್ಧವಾಗಿ ಇಸ್ಲಾಮಿಕ್ ದೈವಶಾಸ್ತ್ರವು ಅತ್ಯಂತ ಪ್ರಬಲವಾದ ಪ್ರತಿಕ್ರಿಯೆಯನ್ನು ಇಲ್ಲಿಯೇ ನೀಡುತ್ತದೆ. ಅಲ್ಲಾಹನ ಏಕತ್ವವನ್ನು ಪ್ರತಿಪಾದಿಸುವ ತೌಹೀದ್ (Tawḥīd) ಎಂಬ ಪರಿಕಲ್ಪನೆ ಕೇವಲ ಆರಾಧನೆಯ ತತ್ವವಲ್ಲ; ಅದು ಸುಳ್ಳು ಪರಮಸತ್ಯಗಳ (False Absolutes) ವಿರುದ್ಧದ ಆಳವಾದ ವಿಮರ್ಶೆಯೂ ಆಗಿದೆ.
ದೇವರೊಬ್ಬರೇ ಪರಮಸತ್ಯವಾಗಿದ್ದರೆ, ಯಾವುದೇ ತಂತ್ರಜ್ಞಾನ, ಮಾರುಕಟ್ಟೆ ಅಥವಾ ಅಲ್ಗೋರಿದಮ್ ಅನ್ನು ಬದಲಿಸಲಾಗದ ವಿಧಿಯೆಂದು ಪರಿಗಣಿಸಲಾಗುವುದಿಲ್ಲ. ಕೃತಕ ಬುದ್ಧಿಮತ್ತೆ ಮನುಷ್ಯನು ನಿರ್ಮಿಸಿದ ಒಂದು ಸಾಧನ ಮಾತ್ರ. ಅದನ್ನು ವಿಗ್ರಹೀಕರಿಸಿ ಸಮಾಜಗಳು ತಮ್ಮ ವಿವೇಕಬುದ್ಧಿಯನ್ನು ಅದರ ಮುಂದೆ ಶರಣಾಗತಿಗೊಳಿಸಬಾರದು.
ಆದಾಗ್ಯೂ, ಇದರ ಮೂಲಭೂತ ಸಮಸ್ಯೆ ಕೇವಲ ತಾತ್ತ್ವಿಕವಾದುದಲ್ಲ; ಅದು ರಾಜಕೀಯವೂ ಆಗಿದೆ. ಯಂತ್ರದ ಮಾಲೀಕ ಯಾರು? ದತ್ತಾಂಶವನ್ನು ನಿಯಂತ್ರಿಸುವವರು ಯಾರು? ಈ ವ್ಯವಸ್ಥೆಗಳಿಂದ ಲಾಭ ಪಡೆಯುವವರು ಯಾರು? ಅದರ ಅಪ್ರತ್ಯಕ್ಷ ಮಾನವೀಯ ಪರಿಣಾಮಗಳ ಭಾರವನ್ನು ಹೊರುವವರು ಯಾರು? ಇಂದಿನ ಸಂದರ್ಭದಲ್ಲಿ ಅತ್ಯಂತ ಸಾಮಾಜಿಕ ಪ್ರಸ್ತುತತೆಯನ್ನು ಹೊಂದಿರುವ ಪ್ರಶ್ನೆಗಳು ಇವೇ.
ಇಲ್ಲಿಯೇ ಕ್ಯಾಥೋಲಿಕ್ ಸಾಮಾಜಿಕ ಬೋಧನೆಯ ಪರಂಪರೆಯು ಹೆಚ್ಚು ಅಭಿವೃದ್ಧಿಗೊಂಡ ರಚನಾತ್ಮಕ ವಿಮರ್ಶೆಯನ್ನು ಮುಂದಿಡುತ್ತದೆ. ಪೋಪ್ ಲಿಯೋ ಹದಿನಾಲ್ಕನೇ ಅವರು ಕೃತಕ ಬುದ್ಧಿಮತ್ತೆಯನ್ನು ಶ್ರಮ, ಬಂಡವಾಳ ಮತ್ತು ಅಸಮಾನತೆಯ ದೀರ್ಘ ಐತಿಹಾಸಿಕ ಹಿನ್ನೆಲೆಯಲ್ಲಿಯೇ ವಿಶ್ಲೇಷಿಸುತ್ತಾರೆ. AI ಮೇಲಿನ ನಿಯಂತ್ರಣವು ಅನೇಕ ರಾಷ್ಟ್ರಗಳಿಗಿಂತಲೂ ಹೆಚ್ಚಿನ ಸಂಪನ್ಮೂಲಗಳನ್ನು ತನ್ನ ವಶದಲ್ಲಿಟ್ಟಿರುವ ಕೆಲವೇ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಕೈಗಳಲ್ಲಿ ಕೇಂದ್ರೀಕೃತವಾಗುತ್ತಿದೆ ಎಂದು ಅವರು ಎಚ್ಚರಿಸುತ್ತಾರೆ. ದತ್ತಾಂಶ, ವೇದಿಕೆಗಳು, ಪೇಟೆಂಟ್ಗಳು (patents) ಮತ್ತು ಮೂಲಸೌಕರ್ಯಗಳು ಹೊಸ ಸಾಮ್ರಾಜ್ಯವಾದದ ಆಸ್ತಿಗಳಾಗಿ ರೂಪುಗೊಳ್ಳುತ್ತಿವೆ.
ಇಲ್ಲಿನ ಅಪಾಯವು ಕೇವಲ ವ್ಯಕ್ತಿಗಳು ಈ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವುದಲ್ಲ; ಬದಲಾಗಿ ಜ್ಞಾನ, ಶ್ರಮ ಮತ್ತು ಸಾಮಾಜಿಕ ಗೋಚರತೆ ಯನ್ನು ನಿರ್ಧರಿಸುವ ಪರಿಸ್ಥಿತಿಗಳನ್ನು ಕೆಲವೇ ಶಕ್ತಿಗಳು ನಿಯಂತ್ರಿಸುವ ಜಾಗತಿಕ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿರುವುದಾಗಿದೆ. ಇದರ ಪರಿಣಾಮವನ್ನು ಅತ್ಯಂತ ಆಳವಾಗಿ ಅನುಭವಿಸುವುದು ಮಧ್ಯಪ್ರಾಚ್ಯ, ಆಫ್ರಿಕಾ ಸೇರಿದಂತೆ ಗ್ಲೋಬಲ್ ಸೌತ್ ದೇಶಗಳೇ. ಜಗತ್ತಿನ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ದತ್ತಾಂಶವನ್ನು ಬಳಸಿಯೇ AI ವ್ಯವಸ್ಥೆಗಳಿಗೆ ತರಬೇತಿ ನೀಡಲಾಗುತ್ತದೆ. ಆದರೆ ಅದರ ಲಾಭವೂ, ನಿರ್ಧಾರ ಕೈಗೊಳ್ಳುವ ಅಧಿಕಾರವೂ ಕೆಲವೇ ನಿರ್ದಿಷ್ಟ ಕೇಂದ್ರಗಳಿಗೆ ಸೀಮಿತವಾಗಿರುತ್ತದೆ. ಇಂಗ್ಲಿಷ್ಗೆ ಹೋಲಿಸಿದರೆ ಅರೇಬಿಕ್, ಮಲಯ್ ಮತ್ತು ಇಂಡೋನೇಷಿಯನ್ ಭಾಷೆಗಳಿಗೆ ಇಂತಹ ವ್ಯವಸ್ಥೆಗಳಲ್ಲಿ ಅತ್ಯಂತ ಕಡಿಮೆ ಪ್ರಾತಿನಿಧ್ಯವಿದೆ.
ಇದರ ಪರಿಣಾಮವಾಗಿ, ಪಾಶ್ಚಾತ್ಯ ದತ್ತಸಂಗ್ರಹಗಳು ಒಳಗೊಂಡಿರುವ ಸಾಂಸ್ಕೃತಿಕ ಪೂರ್ವಧಾರಣೆಗಳು (cultural assumptions) ‘ತಟಸ್ಥ ತಂತ್ರಜ್ಞಾನ’ (neutral technology) ಎಂಬ ಹೆಸರಿನಲ್ಲಿ ಮುಸ್ಲಿಂ ಸಮಾಜಗಳ ಮೇಲೆ ಮತ್ತೆ ಹೇರಲ್ಪಡುವ ಸಾಧ್ಯತೆಯಿದೆ. ಇದನ್ನು ಜ್ಞಾನಮೀಮಾಂಸಾತ್ಮಕ ಅವಲಂಬನೆ (epistemic dependency) ಎಂದು ಕರೆಯಬಹುದು.
ಇಸ್ಲಾಮಿಕ್ ನೈತಿಕ ಚಿಂತನೆಯು ಇದಕ್ಕೆ ಪ್ರತಿಕ್ರಿಯಿಸಲು ಸ್ಪಷ್ಟವಾದ ತಾತ್ವಿಕ ಚೌಕಟ್ಟನ್ನು ಹೊಂದಿದೆ. ಇಸ್ಲಾಮಿಕ್ ಕಾನೂನುಚಿಂತನೆಯ ಮಕಾಸಿದ್ (Maqāṣid) ಪರಂಪರೆಯು ಯಾವುದೇ ಕ್ರಿಯೆ ಅಥವಾ ತಂತ್ರಜ್ಞಾನವು ಧರ್ಮ, ಜೀವ, ಬುದ್ಧಿ, ಕುಟುಂಬ, ಸಂಪತ್ತು, ಮಾನವ ಘನತೆ ಮತ್ತು ನ್ಯಾಯವನ್ನು ರಕ್ಷಿಸುತ್ತದೆಯೇ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ. ಅದಲ್ಲದೆ, ಸಾರ್ವಜನಿಕ ಸಂಪನ್ಮೂಲಗಳು, ಏಕಸ್ವಾಮ್ಯ (monopoly), ವಂಚನೆ ಮತ್ತು ನ್ಯಾಯಸಮ್ಮತ ವೇತನಗಳ ಕುರಿತು ಶಾಸ್ತ್ರೀಯ ಇಸ್ಲಾಮಿಕ್ ಕಾನೂನಿನಲ್ಲಿ ಸ್ಪಷ್ಟವಾದ ತತ್ವಗಳಿವೆ.
ಅತ್ಯಾವಶ್ಯಕ ಸಂಪನ್ಮೂಲಗಳನ್ನು ಮಾನವರು ಪರಸ್ಪರ ಹಂಚಿಕೊಳ್ಳಬೇಕು ಎಂಬ ಪ್ರವಾದಿಯ ಬೋಧನೆಯನ್ನು ಇಂದಿನ ಡಿಜಿಟಲ್ ಕಾಮನ್ಸ್ (Digital Commons) ಎಂಬ ಪರಿಕಲ್ಪನೆಗೂ ವಿಸ್ತರಿಸಬಹುದು. ಆದರೆ ಸಮಕಾಲೀನ ಇಸ್ಲಾಮಿಕ್ ಚರ್ಚೆಗಳ ಬಹುಪಾಲು ಇನ್ನೂ ಕೇವಲ ಹಲಾಲ್ ಅಥವಾ ಹರಾಮ್ ಎಂಬ ಅನುಮತಿತ್ವದ ಪ್ರಶ್ನೆಗೆ ಸೀಮಿತವಾಗಿವೆ. ಈ ಅಪ್ಲಿಕೇಶನ್ ಹಲಾಲೇ ಅಥವಾ ಹರಾಮೇ? ಧಾರ್ಮಿಕ ಮಾರ್ಗದರ್ಶನವನ್ನು ಚಾಟ್ಬಾಟ್ ಮೂಲಕ ನೀಡಬಹುದೇ? ಹಣಕಾಸು, ವೈದ್ಯಕೀಯ ಅಥವಾ ಶಿಕ್ಷಣ ಕ್ಷೇತ್ರಗಳಲ್ಲಿ AI ಅನ್ನು ಬಳಸಬಹುದೇ? ಇವೆಲ್ಲವೂ ಮಹತ್ವದ ಪ್ರಶ್ನೆಗಳೇ ಸರಿ; ಆದರೆ ಅವು ಮಾತ್ರ ಸಾಕಾಗುವುದಿಲ್ಲ. ಮುಸ್ಲಿಮರು AI ಅನ್ನು ಬಳಸಬಹುದೇ ಎಂಬುದಷ್ಟೇ ಮುಖ್ಯ ಪ್ರಶ್ನೆಯಲ್ಲ; ಇಂದಿನ AI ಆಧಾರಿತ ಆರ್ಥಿಕ ವ್ಯವಸ್ಥೆಯೇ ನ್ಯಾಯಸಮ್ಮತವಾಗಿದೆಯೇ ಎಂಬುದೇ ಮೂಲಭೂತ ಪ್ರಶ್ನೆಯಾಗಿದೆ.
ಒಂದು AI ವ್ಯವಸ್ಥೆಯ ಸರಳ ಬಳಕೆದಾರ ಸಂಪರ್ಕಸಾಧನದ ಹಿಂದೆ ದತ್ತಾಂಶವನ್ನು ಲೇಬಲ್ ಮಾಡುವ, ಹಿಂಸಾತ್ಮಕ ವಿಷಯವನ್ನು ಮೇಲ್ವಿಚಾರಣೆ ಮಾಡುವ, ಮಾದರಿಗಳಿಗೆ ತರಬೇತಿ ನೀಡುವ ಮತ್ತು ಅಪಾರ ಮಾನಸಿಕ ಆಘಾತವನ್ನು ಅನುಭವಿಸುವ ಅನೇಕ ಅದೃಶ್ಯ ಕಾರ್ಮಿಕರಿದ್ದಾರೆ. ಅವರಲ್ಲಿ ಬಹುಪಾಲು ದುರ್ಬಲ ಆರ್ಥಿಕ ವ್ಯವಸ್ಥೆಗಳಲ್ಲಿರುವ, ಕಡಿಮೆ ವೇತನ ಪಡೆಯುವ ಯುವಕರೇ ಆಗಿದ್ದಾರೆ. ಸ್ವಯಂಚಾಲನೆಯ ಭರವಸೆಯ ಹಿಂದೆ ಖನಿಜ ಸಂಪನ್ಮೂಲಗಳ ದುರ್ಬಳಕೆ, ಅಪಾರ ಇಂಧನ ಬಳಕೆ, ನಿಗಾ ವ್ಯವಸ್ಥೆಗಳು, ಸೇನಾ ಒಪ್ಪಂದಗಳು ಮತ್ತು ಹೆಚ್ಚುತ್ತಲೇ ಇರುವ ಅಸಮಾನತೆಗಳು ಅಡಗಿವೆ. ಇಸ್ಲಾಮಿಕ್ ನೈತಿಕತೆಯು ನ್ಯಾಯವನ್ನು ಗಂಭೀರವಾಗಿ ಪರಿಗಣಿಸುವುದಾದರೆ, ಯಂತ್ರವು ಏನು ಹೇಳುತ್ತದೆ ಎಂಬುದನ್ನು ಮಾತ್ರವಲ್ಲ, ಅದನ್ನು ಮಾತನಾಡುವಂತೆ ಮಾಡುತ್ತಿರುವುದು ಯಾರ ಶ್ರಮ ಮತ್ತು ಯಾರ ನೋವು ಎಂಬುದನ್ನೂ ಪ್ರಶ್ನಿಸಬೇಕು.
ಇಂಡೋನೇಷ್ಯಾದ ಅನುಭವವು ಒಂದು ಮಹತ್ವದ ಶಕ್ತಿಯನ್ನು ಸೂಚಿಸುತ್ತದೆ: ಸಾಮೂಹಿಕ ಧಾರ್ಮಿಕ ವಿವೇಚನೆ . ನಹ್ದ್ಲತುಲ್ ಉಲಮಾ , ಮುಹಮ್ಮದಿಯ್ಯ (Muhammadiyah) ಮತ್ತು ಇಂಡೋನೇಷ್ಯನ್ ಉಲಮಾ ಕೌನ್ಸಿಲ್ (Indonesian Ulema Council) ಮೊದಲಾದ ಸಂಸ್ಥೆಗಳು ಹೊಸ ಸಾಮಾಜಿಕ ಪ್ರಶ್ನೆಗಳ ಕುರಿತು ಸಾಮೂಹಿಕವಾಗಿ ಚರ್ಚಿಸಿ, ಅವುಗಳಿಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿವೆ.
ಮಲೇಷ್ಯಾದ ಪರಂಪರೆಯು ಮತ್ತೊಂದು ಮಹತ್ವದ ಶಕ್ತಿಯನ್ನು ಒದಗಿಸುತ್ತದೆ. ಮಕಾಸಿದ್ ಅಲ್-ಶರೀಅ (Maqāṣid al-Sharīʿah), ಸದ್ಗುಣ ನೈತಿಕತೆ (Virtue Ethics) ಮತ್ತು ಜಾತ್ಯತೀತ ಜ್ಞಾನದ ವಿಮರ್ಶಾತ್ಮಕ ಸಮೀಪನ (Critiques of Secular Knowledge) ಇವುಗಳ ಮೂಲಕ ಅದು ಆಳವಾದ ತಾತ್ವಿಕ ಅಡಿಪಾಯವನ್ನು ನಿರ್ಮಿಸುತ್ತದೆ. ಅದೇ ವೇಳೆ, ದೋಹಾದ ರಿಸರ್ಚ್ ಸೆಂಟರ್ ಫಾರ್ ಇಸ್ಲಾಮಿಕ್ ಲೆಜಿಸ್ಲೇಷನ್ ಅಂಡ್ ಎಥಿಕ್ಸ್ (Research Center for Islamic Legislation and Ethics) ಸೇರಿದಂತೆ ಅರಬ್ ವಿದ್ವಾಂಸರ ವಲಯವು ನೈತಿಕ ಕರ್ತೃತ್ವ ಮತ್ತು ನೈತಿಕ ಹೊಣೆಗಾರಿಕೆ ಕುರಿತ ಗಂಭೀರ ಸಂಶೋಧನೆಗಳು ಮತ್ತು ಚರ್ಚೆಗಳನ್ನು ಮುಂದಿರಿಸುತ್ತಿದೆ.
ಮುಸ್ಲಿಂ ಜಗತ್ತು ಎದುರಿಸುತ್ತಿರುವ ಪ್ರಮುಖ ಸವಾಲು ಜ್ಞಾನದ ಕೊರತೆಯಲ್ಲ; ಬದಲಾಗಿ, ಚದುರಿಹೋಗಿರುವ ಸಂವಾದಗಳೇ ಅದರ ಮುಖ್ಯ ಸಮಸ್ಯೆಯಾಗಿದೆ. ಕ್ಯಾಥೋಲಿಕ್ ಚರ್ಚ್ಗೆ ಪೋಪ್ ಮತ್ತು ಸಾಮಾಜಿಕ ಬೋಧನೆಗಳ ಏಕೀಕೃತ ಪರಂಪರೆ ಇದೆ. ಆದರೆ ಇದಕ್ಕೆ ವಿರುದ್ಧವಾಗಿ, ಸುನ್ನಿ ಇಸ್ಲಾಂನಲ್ಲಿ ಒಂದೇ ಕೇಂದ್ರೀಕೃತ ಅಧಿಕಾರ ಕೇಂದ್ರವಿಲ್ಲ. ಅದರ ಜ್ಞಾನವು ವಿವಿಧ ವಿದ್ವಾಂಸರು, ಸಂಸ್ಥೆಗಳು, ಪ್ರದೇಶಗಳು ಮತ್ತು ಭಾಷೆಗಳ ನಡುವೆ ವಿಕೇಂದ್ರೀಕೃತವಾಗಿ ಹರಡಿಕೊಂಡಿದೆ. ಪೋಪ್ ಅವರ ಎನ್ಸೈಕ್ಲಿಕಲ್ಗಳೊಂದಿಗೆ ಹೋಲಿಸಿದಾಗ ಇದು ಒಂದು ದೌರ್ಬಲ್ಯವೆಂದು ತೋರಬಹುದು. ಆದರೆ ಈ ವೈವಿಧ್ಯವನ್ನು ಕೇವಲ ಗೊಂದಲವೆಂದು ಕಾಣದೆ, ಒಂದು ಮುಕ್ತ ನೈತಿಕ ವ್ಯವಸ್ಥೆ (Open Ethical System) ಎಂದು ಅರ್ಥಮಾಡಿಕೊಳ್ಳಲು ಕಲಿತರೆ, ಅದನ್ನೇ ಒಂದು ಮಹತ್ವದ ಶಕ್ತಿಯಾಗಿ ರೂಪಿಸಬಹುದು.
ಇಲ್ಲಿ ನಾವು ಎದುರಿಸುತ್ತಿರುವ ಸವಾಲು ಯಾವುದೋ ‘ಇಸ್ಲಾಮಿಕ್ ಪೋಪ್’ ಅನ್ನು ಸೃಷ್ಟಿಸುವುದಲ್ಲ. ಅದು ಇಸ್ಲಾಮಿಕ್ ಪರಂಪರೆಯನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನವಾಗುತ್ತದೆ. ಬದಲಾಗಿ, ಪರಸ್ಪರ ಸಂಬಂಧಿತವಾದ ಒಂದು ನೈತಿಕ ಸಂವಾದವನ್ನು (Moral Conversation) ನಿರ್ಮಿಸುವುದೇ ನಿಜವಾದ ಸವಾಲು. ಅರಬ್ ಜಗತ್ತಿನ ನೈತಿಕ ಅಧ್ಯಯನಗಳನ್ನು, ಮಲೇಷ್ಯಾದ ಮಕಾಸಿದ್ (Maqāṣid) ಚಿಂತನೆಗಳನ್ನು ಹಾಗೂ ಇಂಡೋನೇಷ್ಯಾದ ಸಾಂಸ್ಥಿಕ ವಿವೇಚನೆಗಳನ್ನು , ಅಲ್ಗೋರಿದಮ್ಗಳ ಅಧಿಕಾರದಿಂದ ಈಗಾಗಲೇ ಪರಿಣಾಮಕ್ಕೊಳಗಾಗಿರುವ ಕಾರ್ಮಿಕರು, ವಲಸಿಗರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಜೀವನಾನುಭವಗಳೊಂದಿಗೆ ಸಂಪರ್ಕಿಸುವ ಸಂವಾದವೇ ಇಂದು ಅಗತ್ಯವಾಗಿದೆ.
ಮಾನವ ಘನತೆ ಎಂಬುದು ಕೇವಲ ಒಂದು ಅಮೂರ್ತ ಪರಿಕಲ್ಪನೆಯಲ್ಲ; ಅಧಿಕಾರವು ಅದೃಶ್ಯವಾಗುವ ಸಂದರ್ಭಗಳಲ್ಲಿಯೇ ಅದರ ನಿಜವಾದ ಪರೀಕ್ಷೆ ನಡೆಯುತ್ತದೆ ಎಂಬ ಸತ್ಯವನ್ನು ಕ್ರೈಸ್ತ ಮತ್ತು ಇಸ್ಲಾಮಿಕ್ ಪರಂಪರೆಗಳು ಸಮಾನವಾಗಿ ಎದುರಿಸಬೇಕಾಗಿದೆ. ಒಬ್ಬ ಕಾರ್ಮಿಕನನ್ನು ತಾನು ಪ್ರಶ್ನಿಸಲೂ ಸಾಧ್ಯವಾಗದ ಅಲ್ಗೋರಿದಮ್ ನಿಯಂತ್ರಿಸುವಾಗ ಮಾನವ ಘನತೆಯ ಪರೀಕ್ಷೆಯಾಗುತ್ತದೆ. ಒಬ್ಬ ನಿರಾಶ್ರಿತನ ಜೀವನವು ಕೇವಲ ಒಂದು ರಿಸ್ಕ್ ಸ್ಕೋರ್ (Risk Score) ಆಗಿ ಕುಗ್ಗಿಸಲ್ಪಟ್ಟಾಗ ಅದರ ಪರೀಕ್ಷೆಯಾಗುತ್ತದೆ. ಒಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಪೂರ್ವಾಗ್ರಹಗಳಿಂದ ರೂಪುಗೊಂಡ ದತ್ತಾಂಶದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸ್ವಯಂಚಾಲಿತ ವ್ಯವಸ್ಥೆಗಳು ನಿರ್ಧರಿಸುವಾಗ ಅದರ ಪರೀಕ್ಷೆಯಾಗುತ್ತದೆ. ಯುದ್ಧಭೂಮಿಯಲ್ಲಿ ಜೀವ–ಸಾವಿನ ನಿರ್ಣಾಯಕ ತೀರ್ಮಾನಗಳನ್ನು ಯಂತ್ರಗಳಿಗೆ ಒಪ್ಪಿಸಿದಾಗ ಅದರ ಪರೀಕ್ಷೆಯಾಗುತ್ತದೆ.
ಮಾನವ ಘನತೆಯ ಮುಂದಿನ ಅಧ್ಯಾಯವು ಚರ್ಚುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅಥವಾ ಬೃಹತ್ ತಂತ್ರಜ್ಞಾನ ಕಂಪನಿಗಳ ಕಚೇರಿಗಳಲ್ಲಿ ಬರೆಯಲ್ಪಡುವುದಿಲ್ಲ. ಅದು ದೈವಶಾಸ್ತ್ರವು ಅಲ್ಗೋರಿದಮ್ಗಳೊಂದಿಗೆ ಧೈರ್ಯದಿಂದ ಸಂವಾದ ನಡೆಸುವ ಸ್ಥಳದಲ್ಲಿಯೇ ರೂಪುಗೊಳ್ಳುತ್ತದೆ. ಅವುಗಳನ್ನು ಆರಾಧಿಸಲು ಅಥವಾ ಅವುಗಳಿಗೆ ಭಯಪಡಲು ಅಲ್ಲ; ಬದಲಾಗಿ ಯಾವುದೇ ಯಂತ್ರಕ್ಕೂ, ಯಾವುದೇ ಮಾರುಕಟ್ಟೆ ವ್ಯವಸ್ಥೆಗೂ, ಯಾವುದೇ ಸಾಮ್ರಾಜ್ಯಶಾಹಿ ಶಕ್ತಿಗೂ ಒಬ್ಬ ಮನುಷ್ಯನನ್ನು ಕೇವಲ ಒಂದು ದತ್ತಾಂಶ ಕಡತ ಅಥವಾ ದಾಖಲೆಯಾಗಿ ಕುಗ್ಗಿಸುವ ಹಕ್ಕಿಲ್ಲ ಎಂಬುದನ್ನು ದೃಢವಾಗಿ ಘೋಷಿಸಲಾಗಿದೆ ಎಂಬುದಾಗಿದೆ.