ಪುಣ್ಯ ನೆಬಿಯ ವ್ಯಕ್ತಿತ್ವ: ಪುಣ್ಯ ನೆಬಿಯರ ಸೌಂದರ್ಯ ಮತ್ತು ಸ್ವಭಾವ ಗುಣ
ಅಲ್ಲಾಹನು ನೆಬಿ (ಸ್ವಲ್ಲಲ್ಲಾಹು ಅಲೈಹಿವಸಲ್ಲಂ) ರನ್ನು ಸೃಷ್ಟಿಗಳಲ್ಲೇ ಶ್ರೆಷ್ಠರನ್ನಾಗಿ ಪರಿಪೂರ್ಣರನ್ನಾಗಿ ಸೃಷ್ಟಿಸಿದನು. ಪುಣ್ಯ ಹಬೀಬರು ರೂಪ, ಮೈಬಣ್ಣ, ಶರೀರಾಕೃತಿ,ಶರೀರ ಸೌಂದರ್ಯ, ವೇಷ ಭೂಷಣಗಳನ್ನು ಅರಿಯಲು ನಾವು ಭಾದ್ಯಸ್ತರಾಗಿದ್ದೇವೆ. ಈ ವಿಷಯಗಳನ್ನು ಒಳಗೊಂಡ ವಿವರಣೆಗಳನ್ನು ಹೊಂದಿದ ಪ್ರತ್ಯೇಕವಾದ ಒಂದು ಜ್ಞಾನ ಕ್ಷೇತ್ರವೇ ಇದೆ. ಅದನ್ನು" *ಶಮಾಈಲ್* "(ಪುಣ್ಯ ಹಬೀಬರ ಚರಿತ್ರೆ ವಿಶೇಷಣ ವಿಭಾಗ) ಎಂದು ಕರೆಯಲಾಗುತ್ತದೆ. ಪ್ರಸ್ತುತ ವಿಷಯದ ಸಂಬಂಧಿಸಿ ಕೆಲವೊಂದು ಮಾಹಿತಿಗಳನ್ನು ತಿಳಿಯೋಣ.
ಪುಣ್ಯ ಹಬೀಬರ ಶರೀರ ಆಕೃತಿ ಅತೀ ಹೆಚ್ಚು ಎತ್ತರವೋ ಕುಬ್ಜವೋ ಆಗಿರಲಿಲ್ಲ, ಆದರೆ ಎಷ್ಟೇ ಉದ್ದನೆಯ ವ್ಯಕ್ತಿಯ ಹತ್ತಿರ ನಿಂತರೂ ಪ್ರವಾದಿಯ ಶಿರವು ಎಲ್ಲರಿಗಿಂತ ಎತ್ತರವಾಗಿಯೇ ಕಾಣುತ್ತಿದ್ದು ಇದು ಪ್ರವಾದಿಯ ವಿಶಿಷ್ಟ ಸಿದ್ದಿಗಳಲ್ಲಿ ಒಂದಾಗಿದೆ. ನೆಬಿಯ ಮುಖ ಸೌಂದರ್ಯ ಪೌರ್ಣಮಿ ಚಂದ್ರನ ಪ್ರಭಯಂತೆ ಪ್ರಜ್ವಲಿಸುತ್ತಿತ್ತು. ಆ ಪ್ರಕಾಶಪೂರಿತ ಮುಖ ಸೌಂದರ್ಯದ ಮುಂದೆ ಸಾಕ್ಷಾತ್ ಸೂರ್ಯವು ಅಗ್ನಿನಾಳಗಳು ಸಹ ಮಂಕಾಗಿ ಹೋಗುತ್ತಿದ್ದವು.
ಕೆಂಪು ಮಿಶ್ರಿತ ಬಿಳುಪಾಗಿತ್ತು ಆ ಪವಿತ್ರ ಶರೀರದ ವರ್ಣ, ಆ ಸೌಂದರ್ಯದ ಮುಂದೆ ಯಾರೂ ಕೂಡ ಮೂಕವಿಸ್ಮಿತರಾಗುತ್ತಿದ್ದರು. ತಲೆ ಕೂದಲು ಜಡೆಗಟ್ಟಿದ್ದು ಆಗಿರಲಿಲ್ಲ. ಸಮಯಕ್ಕೆ ಸರಿಯಾಗಿ ತಲೆ ಕೂದಲನ್ನು ಅಚ್ಚುಕಟ್ಟಾಗಿ ಪ್ರತ್ಯೇಕ ರೀತಿಯಲ್ಲಿ ಬಾಚಿ ನಿಯಂತ್ರಿಸುತ್ತಿದ್ದರು.
ಕೆಲವೊಮ್ಮೆ ಮುಂಭಾಗದ ಕೇಶ ತಲೆಯ ಎರಡು ಬಾಗಕ್ಕೂ ಹಿಂಭಾಗದ ಕೇಶ ಕಿವಿಗಳ ಹಿಂಬದಿಗೂ ಬಾಚಿ ಸರಿಯಾಗಿ ನಿಯಂತ್ರಿಸುತ್ತಿದ್ದರು. ಪ್ರವಾದಿ (ಸ್ವಲ್ಲಲ್ಲಾಹು ಅಲೈಹಿವಸಲ್ಲಂ) ರವರ ಕೇಶಕ್ಕೆ ಕಡು ಕಪ್ಪುಬಣ್ಣವಿತ್ತು.ತಲೆ ಮತ್ತು ಗಡ್ಡದಲ್ಲಿ ಕೇವಲ 20 ಕೂದಲು ಮಾತ್ರ ಬಿಳುಪಾಗಿತ್ತು.
ಪ್ರವಾದಿಯವರ ಪವಿತ್ರ ಮುಖ ದುಂಡಾಕೃತಿಯಾಗಿತ್ತು.ಮಾಂಸದಿಂದ ತುಂಬಿ ತುಳುಕಿದ್ದೋ ಸಣಕಳೋ ಆಗಿರಲಿಲ್ಲ. ಹಣೆಯು ವಿಸ್ತಾರವಾಗಿ ಪ್ರಕಾಶಪೂರಿತವಾಗಿತ್ತು.ಹಣೆಯ ಹುಬ್ಬುಗಳು ಉದ್ದವಾಗಿತ್ತು.ಆದರೆ ಹುಬ್ಬುಗಳು ಪರಸ್ಪರ ಜೋಡಣೆ ಗೊಂಡಿರಲಿಲ್ಲ.ಎರಡು ಹುಬ್ಬುಗಳ ಮಧ್ಯೆ ಮನಮೋಹಕವಾದ ಸಣ್ಣ ಖಾಲಿ ಭಾಗವಾಗಿತ್ತು. ಈ ಕಾರಣದಿಂದ ಕಣ್ಣುಗಳ ಹುಬ್ಬುಗಳ ಮಧ್ಯೆ ಎಡೆಬಿಟ್ಟ ಭಾಗಗಳು ಎಂಬ ಅರ್ಥವಿರುವ " *ಅಸಜ್ಜುಲ್ ಹಾಜಿಬೈನ್*" ಎಂಬ ವಿಶೇಷ ನಾಮಕ್ಕೆ ಅರ್ಹರಾಗಿರುವುದು. ಹಬೀಬರ ಕಣ್ಣುಗಳು ಅಪೂರ್ವ ಸುಂದರವಾಗಿತ್ತು. ಕಣ್ಣುಗಳ ಬಿಳಿ ಬಣ್ಣದ ಭಾಗಗಳಲ್ಲಿ ಕಡು ಬಿಳಿಯೂ ಕಪ್ಪು ಭಾಗದಲ್ಲಿ ಕಡೂ ಕಪ್ಪಾಗಿ ಆಕರ್ಷಣೀಯವಾಗಿತ್ತು.
ಕಣ್ಣಿನ ರೆಪ್ಪೆಗಳು ಸದಾ ಕಾಡಿಗೆ ಹಾಕಿದಂತೆ ಗೋಚರಿಸುತ್ತಿತ್ತು. ಕೆನ್ನೆಗಳು ಸದಾ ಅರಳಿ ಇರುತ್ತಿತ್ತು, ಹಾಗು ಬಾಯಿ ವಿಸ್ತಾರವುಲ್ಲದಾಗಿತ್ತು.ತುಟಿಗಳು ಮುತ್ತುಗಳಂತೆ ಹಾಗೂ ಲಾಲಾರಸವು ಹಿಮದ ಹನಿಗಳಂತಾಗಿತ್ತು.
ಸುಂದರವಾದ ನಾಲಿಗೆ ಮುತ್ತಿನಂತಹಾ ಹಲ್ಲುಗಳು ಪ್ರವಾದಿಯವರದಾಗಿತ್ತು. ಪ್ರವಾದಿಯವರು ಮಾತನಾಡುವಾಗ ಮಿಂಚು ಹೊಳೆಯುವಂತಿತ್ತು ಹಾಗೂ ಮುಗುಳ್ನಗುವಾಗ ಆಲಿ ಕಲ್ಲು ಸುರಿಯುವಂತೆ ಬಾಸವಾಗುತುತ್ತು. ತುಟಿಯ ಕೆಂಪನ್ನು ಮರೆಮಾಚದಂತೆ ಮೀಸೆಯನ್ನು ಕತ್ತರಿಸಿ ನಿಯಂತ್ರಿಸುತಿದ್ದರು, ದುಂಡಗಿನ ಗಡ್ಡವನ್ನು ಬಾಚನಿಕೆಯಿಂದ ಬಾಚಿ ಕ್ರಮೀಕರಿಸುತ್ತಿದ್ದರು.
ಸಮುದ್ರದ ಆಮೆಯ ಚಿಪ್ಪಿನಿಂದ ನಿರ್ಮಿಸಿದ ಅಥವಾ ಕೈಯಿಂದ ನಿರ್ಮಿಸಿದ ಬಾಚನಿಕೆ ಸದಾ ಕೈಯಲ್ಲಿರುತಿತ್ತು, ಬಾಚನಿಕೆಯಿಂದ ಮೀಸೆ ಹಾಗೂ ಗಡ್ಡ ಬಾಚುತ್ತಿದ್ದರು. ಪುಣ್ಯ ಪ್ರವಾದಿಯ ಸೌಂದರ್ಯ, ಅಂಗಲಾವಣ್ಯ ಯಾರಿಂದಲೂ ವರ್ಣಿಸಲು ಸಾಧ್ಯವಿಲ್ಲ, ಸಾಧಾರಣವಾಗಿ ಸೂರ್ಯ ಚಂದ್ರನಿಗೆ ಪುಣ್ಯ ನಬಿಯವರ ಮುಖ ಸೌಂದರ್ಯವನ್ನು ಹೋಲಿಕೆ ಮಾಡಿ ವರ್ಣಿಸುವುದಿದೆ ಆದರೆ ಆ ಸೂರ್ಯ ಚಂದ್ರನನ್ನೆ ಸೃಷ್ಟಿಸಿದ್ದು ಪ್ರವಾದಿಯವರ ಪ್ರಕಾಶದಿಂದಾಗಿದೆ, ಹಜ್ರತ್ ಮುಹಮ್ಮದ್ ಇಬ್ನ್ ಸಈದುಲ್ ಬೂಸೀರಿ ಎಂಬ ಮಹಾ ಕವಿ ಹಬೀಬರ ಸೌಂದರ್ಯದ ಕುರಿತು ವ್ಯಾಖ್ಯಾನಿಸಿದ್ದು ಈ ರೀತಿಯಾಗಿದೆ.
"ಪೂರ್ವ ಪ್ರವಾದಿಗಳು ಅವರ ಅನುಯಾಯಿಗಳಲ್ಲಿ ಹಾಗೂ ಪುಣ್ಯ ಪ್ರವಾದಿಯವರ ಅನುಯಾಯಿಗಳು ಅವರ ಸಮಕಾಲೀನರಲ್ಲಿ ಪುಣ್ಯ ನೆಬಿಯರವರನ್ನು ವರ್ಣಿಸಿದ್ದು ಜಲಾಶಯದ ಮೇಲೆ ರಾರಾಜಿಸುವ ನಕ್ಷತ್ರದ ಹಾಗೆ ಎಂದಾಗಿತ್ತು, ಜಲಾಶಯದ ಮೇಲೆ ನಕ್ಷತ್ರಗಳ ನೆರಳನ್ನು ಕಾಣಲು ಸಾಧ್ಯವೇ ಹೊರತು ಅದರ ನೈಜ ಪ್ರಭೆಯನ್ನು ಕಾಣಲು ಅಸಾಧ್ಯ, ಅದೇ ರೀತಿಯಾಗಿದೆ ಪ್ರವಾದಿಯ ಸೌಂದರ್ಯ ವರ್ಣಿಸಲು ಅಸಾಧ್ಯವಾದದ್ದು.
ಬರಹ : ಶೈಖುನಾ ಉಸ್ಮಾನುಲ್ ಫೈಝಿ ಉಸ್ತಾದ್ ತೋಡಾರು
(ಬಹು:ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರು)