مــرحبـــا يــاشـهر الــنبــيﷺ

    ರಬೀವುಲ್ ಅವ್ವಲ್ ಎಂದಾಕ್ಷಣ ಸರ್ವ ಮುಸಲ್ಮಾನರೂ ಒಂದು ಕ್ಷಣ ರೋಮಾಂಚನಗೊಳ್ಳುವುದು ಸಾಮಾನ್ಯ. ಅಂದರೆ ಲೋಕಾನುಗ್ರಹಿ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರ ಜನನದಿಂದ ಅನುಗ್ರಹೀತವಾದ ತಿಂಗಳು ಎಂಬುದಾಗಿದೆ ಇದಕ್ಕೆ ಕಾರಣ. ಇಂತಹ ಅನುಗ್ರಹೀತ ಮಾಸದ ಆಗಮನಕ್ಕೆ ಪುಳಕಿತಗೊಳ್ಳದವನು ಪರಿಪೂರ್ಣ ವಿಶ್ವಾಸಿಯಾಗಲು ಸಾಧ್ಯವಿಲ್ಲ.“ತನ್ನನ್ನು ಹೆತ್ತು ಸಾಕಿ, ಸಲಹಿ, ತಮ್ಮೆಲ್ಲ ಕೃಪಾಶೀರ್ವಾದಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನಗಾಗಿ ಧಾರೆಯೆರೆದ ತನ್ನ ತಂದೆ-ತಾಯಿ, ಕಷ್ಟ-ಸುಖಗಳಲ್ಲಿ ಸದಾ ಸ್ಪಂದಿಸಿ ಸಾಂತ್ವನಗೈಯುತ್ತಿರುವ ತನ್ನ ಬಂಧು-ಬಳಗ ಸೇರಿದಂತೆ ಜಗತ್ತಿನ ಸರ್ವ ಜನರಿಗಿಂತಲೂ ನನ್ನನ್ನು ಅತ್ಯಂತ ಹೆಚ್ಚು ಇಷ್ಟಪಡುವವರೆಗೆ ಯಾವನೂ ಕೂಡಾ ಪರಿಪೂರ್ಣ ಸತ್ಯ ವಿಶ್ವಾಸಿಯಾಗಲಾರ” ಎಂಬ ಪ್ರವಾದಿ ವಚನವೇ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್‌ರನ್ನು ಯಾವ ರೀತಿ ಒಬ್ಬ ಮುಸಲ್ಮಾನ ತನ್ನ ಬದುಕಿನಲ್ಲಿ ಹಚ್ಚಿಕೊಳ್ಳಬೇಕು ಎಂಬುದನ್ನು ಸಾರಿ ಹೇಳುತ್ತದೆ.

 

ಈ ಲೋಕವನ್ನೇ ಸೃಷ್ಟಿಸಲು ಕಾರಣೀಕರ್ತರಾಗಿದ್ದಾರೆ ಹಝತ್ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಅಂತ್ಯ ಪ್ರವಾದಿಗಳ ಜೀವನ ಕ್ರಮವು ಅದು ಪವಿತ್ರ ಕು‌‍ಆನ್ ಆಗಿತ್ತು. ಅಂದರೆ ಪವಿತ್ರ ಕು‌ಆನಿನ ಸಕಲ ಆಶಯಾದರ್ಶಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಲೋಕಕ್ಕೆ ಮಾದರಿಯಾಗಿ ನಿಯೋಜಿಸಲ್ಪಟ್ಟಿದ್ದರು ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಪ್ರವಾದಿಯವರ ಮುಅಜಿಝತ್‌ಗಳನ್ನು ಹೇಳುವುದಾದರೆ, ಅವುಗಳನ್ನು ಬಣ್ಣಿಸುವುದಾದರೆ ಪದಗಳೇ ದೊರಕುತ್ತಿಲ್ಲ. ಅವರ ಔಸಾಫ್‌ಗಳನ್ನು ಹೇಳಿ ಮುಗಿಸಲು ಇದುವರೆಗೆ ಯಾವುದೇ ಸೃಷ್ಟಿಯಿಂದ ಸಾಧ್ಯವಾಗಿಲ್ಲ. ಇನ್ನು ಅಂತ್ಯ ದಿವಸದವರೆಗೆ ಸಾಧ್ಯವಾಗುವುದೂ ಇಲ್ಲ.

 

ಅರಬೀ ಸಾಹಿತ್ಯದಲ್ಲಿ ಅತ್ಯಮೋಘ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದ ಕಾಲಘಟ್ಟದಲ್ಲಾಗಿತ್ತು ಪ್ರವಾದಿಗಳಿಗೆ ಸಾಹಿತ್ಯ ಲೋಕಕ್ಕೆ ಸವಾಲಾಗಿ ಪವಿತ್ರ ಕು‌‍ಆನ್ ಅವತರಿಸಲ್ಪಟ್ಟದ್ದು. ಜೀವನದ ಪ್ರತಿಯೊಂದು ನಿಮಿಷವನ್ನೂ, ತಮ್ಮ ಸಕಲ ವ್ಯವಹಾರಗಳನ್ನೂ ಸಾಹಿತ್ಯ ಉಪಯೋಗಿಸಿಯೇ ಸಹವಸಿಸುತ್ತಿದ್ದ ಸಾಹಿತ್ಯ ದಿಗ್ಗಜರಿಗೆ ಪವಿತ್ರ ಕು‌‍ಆನ್‌ನ ಒಂದು ಸಣ್ಣ ಶ್ಲೋಕಕ್ಕೆ ಸಮಾನವಾದ ಒಂದೇ ಒಂದು ಚರಣವನ್ನು ರಚಿಸಲು ಸಾಧ್ಯವಾಗಿಲ್ಲ ಎನ್ನುವಾಗ ಇದಕ್ಕಿಂತ ದೊಡ್ಡ ಮುಅಜಿಝತ್ ಬೇರೆ ಹೇಳಬೇಕಾಗಿಲ್ಲ. ಪ್ರವಾದಿ ಕಾಲದ ಸಾಹಿತ್ಯ ಪರಾಕ್ರಮಿಗಳಿಗೆ ಪ್ರವಾದಿಗಳಿಗೆ ಅವತೀರ್ಣಗೊಂಡ ಜಗತ್ತಿನ ಅತ್ಯಂತ ಮೇರು ಸಾಹಿತ್ಯ ಕೃತಿ ಕೊನೆವರೆಗೂ ಸವಾಲಾಗಿಯೇ ಉಳಿದಿತ್ತು ಎಂಬುದು ಇಂದಿಗೂ ಪ್ರಸ್ತುತ.

 

ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಜನ್ಮದಿಂದ ಪುಳಕಿತಗೊಂಡ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಆ ಪ್ರವಾದಿಯವರನ್ನು ಸ್ಮರಿಸಿಕೊಳ್ಳುವುದರಿಂದ, ಮೌಲಿದ್ ಪಾರಾಯಣದಂತಹ ವ್ಯಕ್ತಿತ್ವ ಬಣ್ಣನೆಯಿಂದ, ಬಡ ಬಗ್ಗರಿಗೆ ಅನ್ನ-ಪಾನೀಯಾದಿಗಳನ್ನು ನೀಡುವುದರಿಂದ, ಚಿಣ್ಣರಿಂದ ಪ್ರವಾದಿ ಗುಣಗಾನವನ್ನು ಮಾಡಿಸಿ ಅದನ್ನು ಕೇಳುವುದರಿಂದ ನಿಸ್ಸಂಶಯವಾಗಿಯೂ ಪುಣ್ಯ ಸಂಪಾದನೆ ಸಾಧ್ಯವಿದೆ. ಅದು ಪ್ರವಾದಿ ಪ್ರೇಮದ ಒಂದು ಭಾಗದಲ್ಲಿ ಒಳಪಡುತ್ತದೆ ಎಂಬುದರಲ್ಲಿ ಎರಡು ಮಾತು ಬೇಕಾಗಿಲ್ಲ. ಅಂದ ಮಾತ್ರಕ್ಕೆ ಪ್ರವಾದಿ ಪ್ರೇಮವು ಕೇವಲ ರಬೀವುಲ್ ಅವ್ವಲ್ 12 ರಂದು ಆಚರಿಸುವ ಸಂಭ್ರಮಾಚರಣೆಗೆ ಮಾತ್ರ ಸೀಮಿತಗೊಳ್ಳಬಾರದು. ಜೀವನದ ಎಲ್ಲಾ ಮಜಲುಗಳಲ್ಲಿ ಅನುಸರಿಬೇಕಾದ ರೀತಿ-ನೀತಿಗಳನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರು ಹದಿನಾಲ್ಕು ಶತಮಾನಗಳ ಹಿಂದೆ ಮಾನವ ಕುಲ ಕೋಟಿಗೆ ತೋರಿಸಿಕೊಟ್ಟಿದ್ದಾರೆ. ಅವುಗಳನ್ನು ಯಥಾಪ್ರಕಾರ ಜೀವನದಲ್ಲಿ ಪಾಲಿಸಿಕೊಂಡು ನೆಬಿ ಚರ್ಯೆಗಳಿಗೆ ಒತ್ತು ಕೊಟ್ಟಾಗ ಅದು ನಿಜವಾದ ಪ್ರವಾದಿ ಪ್ರೇಮವಾಗುವುದು. ಪ್ರವಾದಿಯವರು ಕಲಿಸಿಕೊಟ್ಟ ನೆಬಿ ಚರ್ಯೆಗಳಿಗೆ ಪ್ರಾಧಾನ್ಯತೆಯನ್ನು ನೀಡುವುದರ ಜೊತೆಗೆ ಆ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್‌ ಅಸಾಧಾರಣ ವ್ಯಕ್ತಿತ್ವವನ್ನು ಅರಿತುಕೊಂಡು ಆ ಬಗ್ಗೆ ಸ್ಪಷ್ಟ ವಿಶ್ವಾಸ ತಾಳುವುದೂ ಕೂಡಾ ಅಷ್ಟೇ ಮುಖ್ಯ.

 

ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಿಲ್ಲ, ಅವರದು ಅಸಾಧಾರಣ ವ್ಯಕ್ತಿತ್ವ ಎಂಬುದರಲ್ಲಿ ಯಾವುದೇ ಸಂಶಯ ಬೇಕಾಗಿಲ್ಲ. ವರ್ತಮಾನದಲ್ಲಿ ಸಂಭವಿಸುತ್ತಿರುವ ಹಾಗೂ ಭವಿಷ್ಯದಲ್ಲಿ ಸಂಭವಿಸಲಿಕ್ಕಿರುವ ಸಕಲಘಟನೆಗಳನ್ನು ಕಣ್ಣಾರೆ ಕಂಡವರಂತೆ ಸವಿಸ್ತಾರವಾಗಿ ವಿವರಿಸಿ ಹೇಳುವುದು ಒಬ್ಬ ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ ಎನ್ನುವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹದಿನಾಲ್ಕು ಶತಮಾನಗಳ ಹಿಂದೆ ಇಂದಿನ ವರ್ತಮಾನದಲ್ಲಿ ನಡೆಯುತ್ತಿರುವ, ಮುಂದೆ ಭವಿಷ್ಯದಲ್ಲಿ ನಡೆಯಬಹುದಾದ ಎಲ್ಲವನ್ನೂ ಮಾನವ ಕೋಟಿಯ ಮುಂದೆ ಸ್ಪಷ್ಟವಾಗಿ ಸಾರಿ ಹೋಗಿದ್ದಾರೆ.

 

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಉಗುಳು ಹಾಗೂ ಬೆವರಿಗೆ ವಿಶೇಷ ಸುಗಂಧ ಪರಿಮಳವಿತ್ತು. ಅವುಗಳನ್ನು ನೆಲಕ್ಕೆ ಬೀಳಲು ಒಪ್ಪದೆ ಬಾಟ್ಲಿಗಳಲ್ಲಿ ಶೇಖರಿಸಿ ಸುಗಂಧ ದ್ರವ್ಯವಾಗಿ ಉಪಯೋಗಿಸುತ್ತಿದ್ದ ಚರಿತ್ರೆಗಳು ಪವಿತ್ರ ಇಸ್ಲಾಮೀ ಇತಿಹಾಸದಲ್ಲಿ ಸಾಕಷ್ಟು ಲಭ್ಯವಿರುವಾಗ ಪ್ರವಾದಿ  ಸ್ವಲ್ಲಲ್ಲಾಹು ಅಲೈಹಿವಲ್ಲಮ್‌ರು ಓರ್ವ ಸಾಮಾನ್ಯ ಮನುಷ್ಯ ಮಾತ್ರವಾಗಿದ್ದರು ಎಂದು ವಾದಿಸುವ ಮಂದಿಯ ಬೆವರಿಗೆ ಅದೆಂತಹ ವಾಸನೆಯಿದೆ. ಅದಕ್ಕಾಗಿ ಎಷ್ಟು ಜನ ಅಪೇಕ್ಷೆ ಪಡುತ್ತಿದ್ದಾರೆ ಎಂಬುದನ್ನು ಪ್ರಶ್ನಿಸಲೇಬೇಕಾಗಿದೆ.

 

 ಪ್ರಸ್ತುತ ಜಗತ್ತು ಕೋಮು ಆಧಾರಿತ ಕೃತ್ಯಗಳಿಂದ ಬಸವಳಿದಿದ್ದರೂ ಇಂದು ನಡೆಯುತ್ತಿರುವ ಎಲ್ಲ ಕೋಮುವಾದ ಕೃತ್ಯಗಳಿಗೂ ಪ್ರವಾದಿಗಳು ತಮ್ಮ ಸಂದೇಶದಲ್ಲಿ ಸ್ಪಷ್ಟ ಪರಿಹಾರವನ್ನು ಕಂಡುಕೊಂಡಿದ್ದಾರೆ. ಆದರೆ ಸ್ಥಾಪಿತ ಹಿತಾಸಕ್ತಿಗಳ ಅಪಾರ್ಥ ಕಲ್ಪನೆಯ ಮುಂದೆ ಅವೆಲ್ಲವೂ ಹೃಸ್ವವಾಗುತ್ತಿದೆಯಷ್ಟೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಹೇಳುತ್ತಾರೆ : “ತನ್ನ ನೆರೆಕರೆಯವನು ಅನ್ಯ ಧರ್ಮೀಯ ಎಂಬ ಒಂದೇ ಒಂದು ಕಾರಣಕ್ಕೆ ಆತನ ಸಂಕಷ್ಟದಲ್ಲಿ ಸ್ಪಂದಿಸಲು ಸಾಧ್ಯವಾಗದಿದ್ದರೆ ಆತ ನಮ್ಮವನಲ್ಲ” ಎಂದು. ಅಂದರೆ ಸತ್ಯ ವಿಶ್ವಾಸಿಯಾದ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಆತನ ಧರ್ಮದಿಂದ ಅಳೆಯದೆ ಆತನೂ ಓರ್ವ ಮಾನವ ಎಂಬ ಅಳತೆಗೋಲಿನಿಂದ ಮಾತ್ರ ಅಳೆಯಲು ಪವಿತ್ರ ಇಸ್ಲಾಂ ನಿರ್ದೇಶಿಸುತ್ತದೆ.

 

ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನೂ ಕೂಡಾ ತನಗೆ ಇಷ್ಟವಾದ ಧರ್ಮವನ್ನು ಸ್ವೀಕರಿಸಲು ಸ್ವತಂತ್ರನಾಗಿರುತ್ತಾನೆ ಎಂಬುದನ್ನು “ಅವರವರ ಧರ್ಮ ಅವರವರಿಗೆ” ಎಂಬ ವಚನದ ಮೂಲಕ ಪವಿತ್ರ ಕುರ್ ಆನ್ ಜಗತ್ತಿನ ಮುಂದೆ ಸ್ಪಷ್ಟವಾಗಿ ಸಾರಿದೆ. ಹೀಗಿರುತ್ತಾ ಧಾರ್ಮಿಕ ಏಕಸ್ವಾಮ್ಯವನ್ನು ಈ ಜಗತ್ತಿನಲ್ಲಿ ಸಾಧಿಸ ಹೊರಡುವುದು ಖಂಡಿತಾ ಸಾಧುವಲ್ಲ. ಮಾತ್ರವಲ್ಲ ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ ಕೋಮು ಕಲಹಗಳನ್ನು ಸೃಷ್ಟಿಸುವುದನ್ನು ಪವಿತ್ರ ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ, ಅಲ್ಲದೆ ಕೋಮುವಾದದ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹೇಳುತ್ತಾರೆ : “ಒಬ್ಬ ತಪ್ಪು ಮಾಡಿದಾಗ ಆತ ತನ್ನ ಸಮುದಾಯದವ ಎಂದು ಆತನ ತಪ್ಪನ್ನು ಸಮರ್ಥಿಸುವುದಾದರೆ, ಅಥವಾ ಆತನಿಗೆ ಸಹಾಯವನ್ನು ಮಾಡುವುದಾದರೆ ಅದು ಕೋಮುವಾದವಾಗುತ್ತದೆ. ಕೋಮುವಾದವನ್ನು ಸಮಾಜದಲ್ಲಿ ಪ್ರಚುರಪಡಿಸುವವನು, ಕೋಮುವಾದವನ್ನು ಬೆಂಬಲಿಸುವವನು, ಅದಕ್ಕೆ ಸಹಾಯ ಮಾಡುವವನು, ಅದಕ್ಕಾಗಿ ಜೀವ ತೆರುವವನು ನನ್ನವನಲ್ಲ” ಎಂದು ಪ್ರವಾದಿಗಳು ಎಚ್ಚರಿಸುವಾಗ ಪವಿತ್ರ ಇಸ್ಲಾಮಿನ ಬಗ್ಗೆ ಅಪಾರ್ಥ ತೀರಾ ಅಪ್ರಸ್ತುತ.

 

ಪವಿತ್ರ ಇಸ್ಲಾಮೀ ಚರಿತ್ರೆಯಲ್ಲಿ ಧರ್ಮದ ಅಸ್ತಿತ್ವದ ಪ್ರಶ್ನೆ ಬಂದಾಗ ಧರ್ಮ ಯುದ್ಧಗಳು ನಡೆದಿರುವುದು ನಿಜವಾದರೂ ಅವುಗಳು ಯಾವುದೇ ಬಲವಂತದ ಧರ್ಮ ಪ್ರಚಾರಕ್ಕಾಗಿ ನಡೆದಿಲ್ಲ ಅಥವಾ ಈ ಜಗತ್ತೆಲ್ಲವೂ ಇಸ್ಲಾಮೀಮಯಗೊಳ್ಳಬೇಕು ಎಂಬ ಉದ್ದೇಶದಿಂದಲೂ ನಡೆದಿಲ್ಲ. ಹಾಗೂ ಇಸ್ಲಾಮೀ ಚರಿತ್ರೆಯಲ್ಲಿ ನಡೆದ ಯಾವುದೇ ಧರ್ಮ ಯುದ್ಧದಲ್ಲೂ ಅಮಾಯಕರನ್ನು, ಮಕ್ಕಳನ್ನು, ಮಹಿಳೆಯರನ್ನು ಅಬಲರನ್ನು ವಿನಾ ಕಾರಣ ವಧಿಸಿದ್ದಿಲ್ಲ. ಯುದ್ಧ ಕೈದಿಗಳಿಗೆ ಚಿತ್ರ ಹಿಂಸೆಯನ್ನೂ ನೀಡಿಲ್ಲ ಎಂಬುದಾಗಿದೆ ವಾಸ್ತವ. ಪವಿತ್ರ ಇಸ್ಲಾಮೀ ಚರಿತ್ರೆಯಲ್ಲಿ ನಡೆದ 80 ಧರ್ಮ ಯುದ್ಧಗಳಲ್ಲಿ ಕೇವಲ 1018 ಮಂದಿ ಮಾತ್ರ ಬಲಿಯಾಗಿದ್ದಾರೆ ಎನ್ನುವ ಅಂಕಿ ಅಂಶ ಪವಿತ್ರ ಇಸ್ಲಾಂ ಮಾನವ ಜೀವಕ್ಕೆ ನೀಡಿದ ಮಹತ್ ಬೆಲೆಯನ್ನು ಕ್ಷಣ ಮಾತ್ರದಲ್ಲಿ ಅರ್ಥಮಾಡಿಕೊಳ್ಳಲು ಪೂರಕವಾಗಿದೆ.

 

ಆದುದರಿಂದ ಎಲ್ಲಾ ಭಾಗಳಿಂದ ಅವಲೋಕಿಸಿದಾಗಲೂ ಪವಿತ್ರ ಇಸ್ಲಾಂ ಧರ್ಮವು ಶಾಂತಿ-ಸೌಹಾರ್ದತೆಯನ್ನೇ ಈ ಜಗತ್ತಿಗೆ ಸಾರಿ ಹೇಳಿದೆ. ಅಂತ್ಯ ಪ್ರವಾದಿ ಹಝತ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್‌ರನ್ನು ಈ ಲೋಕದ ಸರ್ವ ಮಾನವ ಜನಾಂಗಕ್ಕೆ ಅನುಗ್ರಹವಾಗಿ ಹಾಗೂ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿ ಭೂಲೋಕಕ್ಕೆ ಕಳುಹಿಸಲಾಗಿದೆ. ಅಂತಹ ಶಾಂತಿಯ ದ್ಯೋತಕವಾಗಿರುವ, ಕಾರುಣ್ಯದ ಶಾಂತ ಸಾಗರವಾಗಿರುವ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್‌ರು ಈ ಭೂಲೋಕಕ್ಕೆ ಜನಿಸಿ ಬಂದ ದಿನವಾಗಿದೆ ಪವಿತ್ರ ರಬೀವುಲ್ ಅವ್ವಲ್ ಚಾಂದ್ 12. ಆ ದಿವಸದ ಮಹತ್ವದಿಂದ ಸರ್ವಶಕ್ತನಾದ ಅಲ್ಲಾಹನು ಈ ನಾಡಿನಲ್ಲಿ ಶಾಂತಿ-ಸೌಹಾರ್ದತೆ ಶಾಶ್ವತ ನೆಲೆಗೊಳ್ಳುವಂತೆ ಕಾರುಣ್ಯವೀಯಲಿ ಆಮೀನ್ ಯಾ ರಬ್ಬಲ್ ಆಲಮೀನ್, ಸರ್ವರಿಗೂ ರಬೀವುಲ್ ಅವ್ವಲ್ ಶುಭಾಶಯಗಳು...

 

      ಯಾಸರ್ ಉಮರ್ ಮಾದಾಪುರ

      ಕೋಶಾಧಿಕಾರಿ ನೂರುಲ್ ಉಲಮಾ ವಿಧ್ಯಾರ್ಥಿ ಒಕ್ಕೂಟ 

      (ಜಾಮಿಯಾ ನೂರಿಯ ಅರಬಿಯಾ)

      ಪ್ರಧಾನ ಕಾರ್ಯದರ್ಶಿ

     (SKSSF ತ್ವಲಬ ವಿಂಗ ಕರ್ನಾಟಕ ರಾಜ್ಯ ಸಮಿತಿ)

 

Related Posts

Leave A Comment

Voting Poll

Get Newsletter