ಫೆಲಿಸ್ತೀನಿಗಳ ವಿರುದ್ಧದ ಪ್ರೋಪಗಂಡ ಯುದ್ಧ ; ಮಾಧ್ಯಮಗಳು ಮತ್ತು ಸುಳ್ಳು ಸುದ್ದಿಗಳು
ತಿಂಗಳ ಹಿಂದೆ ಕೇರಳದ ಕಳಮಶ್ಶೇರಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿನ ಬಾಂಬ್ ಸ್ಪೋಟವನ್ನು ವರದಿ ಮಾಡಿದ್ದ ಕರ್ನಾಟಕದ ಕುಖ್ಯಾತ ನ್ಯೂಸ್ ಚಾನೆಲ್ ಸುವರ್ಣ ನ್ಯೂಸ್, ಆರೋಪಿ ಮಾರ್ಟಿನ್ ಶರಣಾಗುವುದಕ್ಕಿಂತ ಮುಂಚೆ ಇದೊಂದು ಉಗ್ರ ಸಂಚು ಎಂದು ತುತ್ತೂರಿ ಓದಿತ್ತು. ಇದನ್ನೇ ಫ್ಯಾಕ್ಟ್ ಎಂದು ನಂಬಿದ್ದ ಕೆಲವು ಸೋಶಿಯಲ್ ಮೀಡಿಯಾ ಪೇಜ್ ಗಳು ಸ್ಪೋಟದ ಹಿಂದೆ ಹಮಾಸ್ ಇದೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿತು.
ಸತ್ಯ ನಂತರ ಯುಗದಲ್ಲಿ (POST TRUTH ERA) ಸುಳ್ಳು ಸುದ್ದಿಗಳ ಸೃಷ್ಟಿ ಮತ್ತು ಹರಡುವಿಕೆ ಮತ್ತು ಅರ್ಧ ಬೆಂದ ಸುದ್ದಿಗಳ ಪ್ರಚಾರ ಸರ್ವೇ ಸಾಧಾರಣವಾಗಿ ಬಿಟ್ಟಿದೆ. ಬಲವರ್ಧಿತ ಕೃತಕ ಬುದ್ಧಿಮತ್ತೆ(AI), ಫೇಕ್ ನ್ಯೂಸ್ ಗಳನ್ನು ಹರಿಬಿಡುವ ದುರುಳರಿಗೆ ತಮ್ಮ ಕೆಲಸದ ತೀವ್ರತೆಯನ್ನು ಹೆಚ್ಚಿಸಲು ಸಹಾಯಕವಾಗುತ್ತಿದೆ. ಇತ್ತೀಚಿಗೆ ವೈರಲಾದ ಭಾರತದ ಪ್ರಖ್ಯಾತ ನಟಿಯಬ್ಬರ ಡೀಪ್ ಫೇಕ್ ವಿಡಿಯೋ ಒಂದು ಉದಾಹರಣೆ ಅಷ್ಟೇ.
ಅಕ್ಟೋಬರ್ ಏಳರಂದು ಗಾಜಾಪಟ್ಟಿಯಿಂದ ಹಮಾಸ್ ನಡೆಸಿದ ರಾಕೆಟ್ ಆಕ್ರಮಣ , ಇಸ್ರೇಲ್ ಗಡಿಯೊಳಗೆ ನುಗ್ಗಿ ನಡೆಸಿದ ಮಿಂಚಿನ ದಾಳಿ , ತದನಂತರ ಹಮಾಸ್ ವಿರುದ್ಧ ಯುದ್ಧ ಘೋಷಿಸಿ ಇಸ್ರೇಲ್ ನಡೆಸಿಕೊಂಡು ಬರುತ್ತಿರುವ ಮಾನವ ಹತ್ಯಾಕಾಂಡ ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡು ಬೆಂಕಿಯಂತೆ ಹರಡುತ್ತಿರುವ ಫೇಕ್ ನ್ಯೂಸ್ ಗಳು ಇಂದಿನ ಪ್ರಚಲಿತ ವಿದ್ಯಮಾನಗಳಾಗಿವೆ.
ಇಸ್ರೇಲ್ ಒಳಗೆ ನುಗ್ಗಿದ ಹಮಾಸ್ ಹೋರಾಟಗಾರರು ನಾಗರೀಕರ ಮೇಲೆ ದಾಳಿ ಮಾಡಿದ್ದು ಅಮಾನವೀಯ ಎಂಬುವುದರಲ್ಲಿ ಎರಡು ಮಾತಿಲ್ಲ. 1948ರಲ್ಲಿ ಇಸ್ರೇಲ್ ಸ್ಥಾಪನೆ ನಂತರ ದುರಂತಗಳನ್ನೇ ಅನುಭವಿಸುತ್ತಿರುವ 'ನಕ್ಬಾದ ' ಸಂತ್ರಸ್ಥರಾದ ಫೆಲೆಸ್ತೀನಿಗಳ ಪ್ರತಿರೋಧದ ಪ್ರದರ್ಶನ ಎಂದು ಹಮಾಸ್ ಗೆ ತನ್ನನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಮೂಲ ನಿವಾಸಿಗಳಾದ ಅರಬ್ ವಂಶಜರ ಮೇಲೆ ದಬ್ಬಾಳಿಕೆಗಳಿಂದಲೇ ಸ್ಥಾಪಿತವಾದ ಇಸ್ರೇಲ್ ಏಳು ದಶಕಗಳಿಂದ ಫೆಲೆಸ್ತೀನಿ ಮಣ್ಣಿನಲ್ಲಿ ತಾನು ನಡೆಸುತ್ತಿರುವ ಅಮಾನವೀಯ ಕೃತ್ಯಗಳಿಗೆ ಯಾವ ಕಾರಣ ನೀಡಬಹುದು? ದಾಳಿಯ ಬೆನ್ನಲ್ಲೇ ತನ್ನ ಪರವಾದ ಜಾಗತಿಕ ಮಾಧ್ಯಮಗಳು ಮತ್ತು ಸೋ ಕಾಲ್ಡ್ ಪತ್ರಕರ್ತರ ನೆರವಿನೊಂದಿಗೆ ಜಗತ್ತಿನ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ ಇಸ್ರೇಲ್, ಫೆಲೆಸ್ತೀನಿ ಗಳ ವಿರುದ್ಧ ಪ್ರೊಪಗೊಂಡ ಹರಡಲು ಅವುಗಳನ್ನು ಉಪಯೋಗಿಸಿಕೊಂಡಿತು.
ಹಮಾಸ್ 40 ಹಸುಗೂಸುಗಳನ್ನು ಶಿರಚ್ಛೇಧ ಮಾಡಿದೆ ಎಂಬ ಸುಳ್ಳು ಸುದ್ದಿ ಹರಡಿದ್ದ ಪತ್ರಕರ್ತೆಯೊಬ್ಬರು ಸುದ್ದಿ ಜಾಗತಿಕವಾಗಿ ವೈರಲ್ ಆದಾಗ ತನ್ನ ಬೇಜವಾಬ್ದಾರಿಯುತ ಹೇಳಿಕೆಯಿಂದ ಹಿಂದೆ ಸರಿದಿದ್ದರು. ದಮನಿತರ ಪರವಾಗಿ ಕಾರ್ಯನಿರ್ವಹಿಸಬೇಕಾದ ಪತ್ರಕರ್ತರೇ ಇಂತಹ ತಪ್ಪುಗಳನ್ನು ಎಸಗಿದರೆ ಅವರು ಹೇಳಿದ್ದನ್ನೇ ನಂಬುವ ಜನಸಾಮಾನ್ಯರ ಮಿದುಳಿನಲ್ಲಿ ಸೃಷ್ಟಿಯಾಗುವ ಭಯಾನಕ ಯೋಚನೆಗಳು, ಮಾನವಕುಲಕ್ಕೇ ಆಪತ್ತಲ್ಲವೇ?
ಹಮಾಸ್ ನ ಕಮಾಂಡ್ ರೂಂ ಇದೆಯೆಂದು ಆರೋಪಿಸಿ, ಇಸ್ರೇಲ್ ಅಲ್ ಶಿಫಾ ಆಸ್ಪತ್ರೆಯ ಮೇಲೆ ದಾಳಿ ನಡೆಸಿದಾಗ, ಅದು ಒಪ್ಪಿಸಿದ “ಪುರಾವೆಗಳನ್ನು” ವರದಿ ಮಾಡುವುದರಲ್ಲೇ ನಿರತರಾಗಿದ್ದ ಮಾದ್ಯಮಗಳಿಗೆ ಆಕ್ಸಿಜನ್ ಇಲ್ಲದೆ ಉಸಿರು ನಿಲ್ಲಿಸಿದ ಅಥವಾ ಸೂಕ್ತ ಆರೈಕೆ ಸಿಗದೆ ಇನ್ಫೆಕ್ಷನ್ ಗೊಳಗಾದ ಹಸುಗೂಸುಗಳ ಕಡೆಗೆ ಗಮನಕೊಡಲು ಸಮಯ ಸಿಗಲಿಲ್ಲ.
ಬಿಬಿಸಿ , ಸಿ ಎನ್ ಎನ್ ಮೊದಲಾದ ಜಾಗತಿಕ ಮಾಧ್ಯಮಗಳು ಫೆಲೆಸ್ತೀನಿಗಳ ವಿರುದ್ಧದ ಪ್ರೋಪಗಂಡ ಯುದ್ಧದಲ್ಲಿ ತನ್ನ ಪಾಲನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ತನ್ನ ಯಜಮಾನರಾದ ವೆಸ್ಟ್ ಜಗತ್ತಿನ ಒತ್ತಾಸೆಗಳಿಗೆ ಅನುಕೂಲವಾಯಿತು. ಮಾಧ್ಯಮ ಧರ್ಮವನ್ನ ಮರೆತ ಇಂತಹ ಪೀತ ಪತ್ರಿಕೆಗಳು ಜಗತ್ತಿಗೇ ಮಾರಕವಾಗಿದೆ.
ರಾಜಕೀಯ ವ್ಯವಸ್ಥೆಯೊಂದಿಗೆ ಬದಲಾದ ಭಾರತೀಯ ಅಂತರಂಗ
ಧರ್ಮಾದರಿತ ರಾಜಕೀಯ ವ್ಯವಸ್ಥೆಯು ಭಾರತವನ್ನು ತನ್ನ ಕೆನ್ನಾಲೆಗೆ ತೆಗೆದುಕೊಂಡಿರುವ ಈ ಸಂದರ್ಭದಲ್ಲಿ ಸಹಾನುಭೂತಿಯನ್ನು ಹೊಂದಿರುವ ಭಾರತೀಯ ಮನಸ್ಸುಗಳಲ್ಲೂ ಕೋಮುವಿದ್ವೇಷದ ಕಾರ್ಕೋಟಕ ವಿಷ ಏರಿರುವುದು ಕಂಡುಬರುತ್ತಿದೆ.
ಹಿಂದೆ ಸಾವನೋವಿನ ಸುದ್ದಿಗಳನ್ನು ಕೇಳಿದರೆ ಅಯ್ಯೋ ಎಂದು ಮರುಗುತ್ತಿದ್ದ ಭಾರತೀಯ ಮನಸ್ಸುಗಳು ಗುಲಾಮ ಮಾಧ್ಯಮಗಳ ನರಮೇಧದ ಬಗೆಗಿನ ಅಬ್ಬರದ ಸಂಭ್ರಮೋತ್ಸವದಿಂದ ಹಾದಿ ತಪ್ಪಿ ಹಿಂಸೆಯನ್ನು ಹೆಚ್ಚು ಹೆಚ್ಚು ಬಯಸುತ್ತಿದೆ.
ಈ ಪರಿಪಾಟ ಮುಂದುವರಿದರೆ ಸಂವಿಧಾನದ 4ನೇ ಕಂಬ ಎಂದೇ ಕರೆಯಲ್ಪಡುವ ಮಾದ್ಯಮಗಳಿಂದಳೇ ಪ್ರಜಾಪ್ರಭುತ್ವಕ್ಕೇ ಕುತ್ತು ಬರಲಿದೆ ಎಂಬುವುದು ನಿರಾಶಾಜನಕ.
ಸಫ್ವಾನ್ ಕುದ್ಲೂರು