ತೋಳ ಬರುತ್ತಿದೆ ...ತೋಳ ಬರುತ್ತಿದೆ... ಕಪಟ ರಾಜಕಾರಣ
"ಮಿತ್ರಸ್ಯ ಚಕ್ಷುಷಾ ಸಮೀಕ್ಷೇಮಹೇ" – “ನಾವು ಪರಸ್ಪರರನ್ನು ಮಿತ್ರ ದೃಷ್ಟಿಯಿಂದ ನೋಡೋಣ” ಎಂಬ ವೇದಗಳ ವಚನಗಳು ಮಾನವ ಸಮೂಹಕ್ಕೆ ಶಾಂತಿಯ ಸಂದೇಶವನ್ನು ಸಾರುತ್ತಿರುವಾಗ, ಇಲ್ಲಿ ಬುದ್ಧಿವಂತರ ಜಿಲ್ಲೆಯಲ್ಲಿ ಸರಣಿಯಾಗಿ ಹೆಣಗಳು ಉರುಳುತ್ತಿವೆ.
ಭೌಗೋಳಿಕವಾಗಿ ಕರಾವಳಿ ಪ್ರದೇಶದಲ್ಲಿರುವ ದಕ್ಷಿಣ ಕನ್ನಡ ಹಾಗೂ ಮತ್ತಿತ್ತರ ಪ್ರದೇಶಗಳು ರಾಜಕೀಯವಾಗಿ ಬಹಳ ಪ್ರಾಧಾನ್ಯತೆಯನ್ನು ಹೊಂದಿವೆ. ಕರಾವಳಿಯ ಕೇಂದ್ರಬಿಂದುವಾದ ದಕ್ಷಿಣ ಕನ್ನಡ ಸರ್ವಧರ್ಮಗಳ, ಪಂಗಡಗಳ, ಭಾಷೆಗಳ ಒಂದು ಸಮ್ಮಿಲನ ಭೂಮಿಯಾಗಿದೆ. ಎಷ್ಟೆಂದರೆ ಇದನ್ನು ಪ್ಯಾನ್ ಇಂಡಿಯಾ ಎಂದೇ ಕರೆಯಬಹುದು. ಪ್ರತಿ ಮೈಲು ದೂರದಲ್ಲಿ ಅತ್ಯಂತ ವಿಜೃಂಭಣೆಯಿಂದ ತಲೆ ಎತ್ತಿರುವ ಶೈಕ್ಷಣಿಕ ಹಾಗೂ ವೈದ್ಯಕೀಯ ಸಂಸ್ಥೆಗಳು ಇಲ್ಲಿನ ವಿಶೇಷತೆ.
ಆದರೆ ಇಷ್ಟೆಲ್ಲಾ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈ ಕರಾವಳಿಯಲ್ಲಿ ಅಷ್ಟೇ ಕೋಮು ಧ್ರುವೀಕರಣವೂ ನಡೆಯುತ್ತಿದೆ. ಮಂಗಳೂರಿನ ಇತ್ತೀಚಿನ ವಿದ್ಯಮಾನಗಳನ್ನು ನೋಡುವುದಾದರೆ, ಮುಂಗಾರಿನ ಮಳೆಯ ಜೊತೆಗೆ ರಕ್ತವೂ ಹರಿಯುವಂತಿದೆ. ಕೊನೆಗೂ ಮಂಗಳೂರು ನಗರವು ಈಗ ಕೊಲೆಗಡುಕರ ನಗರದಂತಾಗಿದೆ. ಇತ್ತೀಚೆಗಷ್ಟೇ ಗುಂಪು ಥಳಿತದಿಂದ ಅಶ್ರಫ್ ಎಂಬ ಕೇರಳ ವಲಸೆ ಕಾರ್ಮಿಕನನ್ನು ಬರೋಬ್ಬರಿ 30 ಜನರ ಮತಾಂಧ ಗುಂಪೊಂದು ಬರ್ಬರವಾಗಿ ಕೊಲೆಗೈಯಲಾಯಿತು.
ಪೊಲೀಸರು ಈ ಮತಾಂಧರನ್ನು ಬಂಧಿಸುವಲ್ಲಿ ಮೀನಮೇಷೆ ಎಣಿಸುತ್ತಿದ್ದಂತೆ, ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಕೊಲೆ, ಕೋಮುದ್ವೇಷ, ಬೆದರಿಕೆಗಳು, ರಾಜಕೀಯ ಮುಖಂಡರ ದ್ವೇಷ ಭಾಷಣಗಳು, ಅನಧಿಕೃತ ಉದ್ರಿಕ್ತ ಸಮಾವೇಶ, ಬಂದ್ ಕರೆಗಳು, ದ್ವೇಷ ಪ್ರೇರಿತ ಚೂರಿ ಇರಿತ, ಕೊನೆಗೆ ಅಬ್ದುಲ್ ರಹಿಮಾನ ಎಂಬ ಅಮಾಯಕನ ಹತ್ಯೆ – ಹೀಗೆ ಮುಂದುವರಿಯುತ್ತಾ ಹೋಯಿತು ದುಷ್ಕೃತ್ಯದ ಪಟ್ಟಿ.
இதಕ್ಕೆಲ್ಲ ಪ್ರಮುಖ ಕಾರಣ ಗೃಹ ಇಲಾಖೆಯ ಬೇಜವಾಬ್ದಾರಿತನವೇ ಸರಿ. ರಾಜಕೀಯವಾಗಿ ಅತಿ ಸೂಕ್ಷ್ಮವಾದ ಕರಾವಳಿಯಲ್ಲಿ ಕೋಮು ಉದ್ವಿಗ್ನತೆಯು ಬಾಲ ಅಲುಗಾಡಿದರೆ, ಪೂರ್ಣ ರೀತಿಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಪೊಲೀಸ್ ಇಲಾಖೆಯು ಕರಾವಳಿಯ ಜನರನ್ನು ಕಡೆಗೆಣಿಸುವುದರಲ್ಲೇ ತೊಡಗಿದೆ. ಕೋಮು ವಿಷದಿಂದ ಕಲುಷಿತವಾದ ಕರಾವಳಿಗೆ ಖಡಕ್ ಅಧಿಕಾರಿಗಳನ್ನು ಮೊದಲೇ ನೇಮಿಸುವ ಬದಲು, ಅಸಮರ್ಥರನ್ನು ನೇಮಿಸಿ ರಾಜ್ಯ ಸರ್ಕಾರ ಕರಾವಳಿಯನ್ನು ಕಡೆಗೆಣಿಸಿದಂತಾಗಿದೆ.
ಗೃಹ ಸಚಿವರು ಎಂದಿನಂತೆ 'ಆಂಟಿ ಕಮ್ಯುನಲ್ ಫೋರ್ಸ್' ಎಂಬ ಲಾಲಿಪಾಪ್ ಭರವಸೆಯನ್ನು ಪತ್ರಿಕಾಗೋಷ್ಠಿಯಲ್ಲಿ ಉಚಿತವಾಗಿ ವಿತರಿಸಿ ಬೆಂಗಳೂರಿಗೆ ವಾಪಸಾಗುತ್ತಾರೆ. ಅದೇ ರೀತಿ ಬಜಪೆಯಲ್ಲಿ ಕಾನೂನುಬಾಹಿರವಾಗಿ ಸಭೆ ನಡೆಸಿ ಪೊಲೀಸ್ ಇಲಾಖೆಗೆ, ಸಮಾಜಕ್ಕೆ ಹಾಗೂ ಸರಕಾರಕ್ಕೆ ಬೆದರಿಕೆ ಹಾಕಿ ಬಹಿರಂಗ ಹಿಂಸೆಗೆ ಕರೆ ನೀಡಿದ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗದ ಪೊಲೀಸ್ ಇಲಾಖೆ, ಬಂಟ್ವಾಳದಲ್ಲಿ ನಡೆದ ಕೊಲೆಯ ಮೊದಲ ಆರೋಪಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ.
ಒಂದೆಡೆ ಅಟ್ಟಹಾಸ ಬೀರುತ್ತಿರುವ ಕೋಮುವಾದಿಗಳು, ಮತ್ತೊಂದೆಡೆ ಮುಂಗಾರುಪೂರ್ವ ಮಳೆಗೆ ತತ್ತರಿಸಿದ 'ಸೋ ಕಾಲ್ಡ್ ಸ್ಮಾರ್ಟ್ ಸಿಟಿ', ಮತ್ತೊಂದೆಡೆ ಕುಸಿಯುತ್ತಿರುವ ಆರ್ಥಿಕತೆ, ಕಾಡುತ್ತಿರುವ ನಿರುದ್ಯೋಗ – ಇಷ್ಟೆಲ್ಲಾ ಆದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕಾರಣಿಗಳು ಕೋಮು ಧ್ರುವೀಕರಣ ಎಂಬ ಬೂದಿಯನ್ನು ಜನರ ಕಣ್ಣಿಗೆ ಎರೆಚಲು ಸೆಣೆಸಾಡುತ್ತಿದ್ದಾರೆ.
ಆಕ್ರೋಶಿತ ಜನರನ್ನು ಮಂಕಾಗಿಸಲು ಕಪೋಲಕಲ್ಪಿತ ವಿದ್ವೇಷ ಕತೆಗಳನ್ನು ಸೆಣೆಯುತ್ತ ತಮ್ಮ ಮಕ್ಕಳು ವಿದೇಶದಲ್ಲಿ ಗಂಟು ಗಂಟು ಡಾಲರ್ನಲ್ಲಿ ಮಿಂದೇಳುತ್ತಿರುವಾಗ, "ರಕ್ತಕ್ಕೆ ರಕ್ತ, ತಲೆಗೆ ತಲೆ" ಎಂದು ಮೈಕ್ ಕಟ್ಟಿ ಕಿರುಚಿ ಅಮಾಯಕ ಜನರನ್ನು ಪರಸ್ಪರ ಉದ್ರಿಕ್ತಗೊಳಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ.
ತಾನೊಬ್ಬ ಸಮುದಾಯ ಸಂರಕ್ಷಕ ಎಂದು ಬಿಂಬಿಸಲು ವೇದಿಕೆ ಕಟ್ಟಿ, "ತೋಳ ಬರುತ್ತಿದೆ, ತೋಳ ಬರುತ್ತಿದೆ" ಎಂದು ನಕಲಿ ಎಚ್ಚರಿಕೆ ಗಂಟೆ ಬಾರಿಸಿ ಅಮಾಯಕ ಜನರನ್ನು ಕಂಗಾಲಾಗಿಸುತ್ತಿದ್ದಾರೆ. ಈ ಕಪಟ ರಾಜಕಾರಣ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಲ್ಲ ಎಂಬುದು ಪ್ರತಿ ದೇಶಭಕ್ತರ ಪಾಲಿಗೆ ತಿಳಿದ ಸಂಗತಿ.
ಕರಾವಳಿಯಲ್ಲಿ ಕೋಮು ಧ್ರುವೀಕರಣದ ಹಿನ್ನೆಲೆಯನ್ನು ಅವಲೋಕಿಸುವುದಾದರೆ, ಭೂಗತ ಕಾರ್ಪೊರೇಟ್ ಶಕ್ತಿಗಳ ಕೈವಾಡವು ಕಾಣಸಿಗುತ್ತದೆ. ಕಾರ್ಪೊರೇಟ್ ಜಗತ್ತಿನಲ್ಲಿ ಪರಸ್ಪರ ಪೈಪೋಟಿಯು ಸಹಜ. ಆದರೆ ಅದರಲ್ಲಿ ಭೂಗತ ಕಳೆ ಇದ್ದರೆ ಅದು ಮನುಜ ಕಂಟಕ. ಪುರಾತನ ಕಾಲದಿಂದಲೇ ಮಂಗಳೂರು ಒಂದು ವ್ಯಾಪಾರ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ.
ಕೆಲ ನಿರ್ದಿಷ್ಟ ಸಮುದಾಯದವರು ಕೆಲ ನಿರ್ದಿಷ್ಟ ವ್ಯಾಪಾರದಲ್ಲಿ ವ್ಯಾಪಕವಾಗಿ ಮೇಲುಗೈ ಹೊಂದಾಗ, ಅವರಿಂದ ಬಹು ಸಂಖ್ಯೆಯವರು ವಿದೇಶದಲ್ಲಿ ಉದ್ಯಮ ನಡೆಸಿ ಯಶಸ್ವಿ ಉದ್ಯಮಿಗಳಾದಾಗ, ತಮ್ಮ ಜೇಬಿಗೆ ಯಾವಾಗ ಕತ್ತರಿ ಬೀಳಬಹುದೇ ಎಂದು ಅಸ್ವಸ್ಥರಾದವರೇ ಇಂದು ಕಿರುಚುತ್ತಿರುವ ಮತಾಂಧ ರಾಜಕಾರಣಿಗಳು.
ಕಪೋಲಕಲ್ಪಿತ ಕಥೆಗಳನ್ನು ಜನರಿಗೆ ಹೇಳುತ್ತಾ, ಅತಿರೇಕದ ಭಾಷಣಗಳನ್ನು ಮಾಡುತ್ತಾ, ಜನರನ್ನು ಮರುಳಾಗಿಸಿ ಪರಸ್ಪರ ಕಾದಾಡಿಸಿ ರಾಜಕೀಯ ಹಾಗೂ ಆರ್ಥಿಕ ಲಾಭ ಪಡೆಯುವುದೇ ಇವರ ದುರುದ್ದೇಶ.
ಈ ಮೈಕ್ ಕಟ್ಟಿ ಕರಾವಳಿಯಲ್ಲಿ ಭಾಷಣ ಮಾಡುವ ರಾಜಕಾರಣಿಗಳ ಹಿನ್ನೆಲೆ ನೋಡುವುದಾದರೆ – ಮಕ್ಕಳಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಂಗ, ಎಲ್ಲೆಲ್ಲಿ ಪಟ್ಟಣವಿದೆಯೋ ಅಲ್ಲೊಂದು ಬೃಹತ್ ಮಲ್ಲಿಗೆ ಅಥವಾ ಬಲು ದೊಡ್ಡ ಪಾಲುದಾರಿಕೆ, ಕಂತೆ ಕಂತೆ ನೋಟುಗಳನ್ನು ವೈಟ್ ವಾಶ್ ಮಾಡಲು ಹೆಸರಿಗೊಂದು ಚಾರಿಟೇಬಲ್ ಟ್ರಸ್ಟ್ – ಹೀಗೆ ಮುಂದುವರಿಯುತ್ತಾ ಹೋಗುತ್ತದೆ ಲೋಭಿಯ ಉದ್ದನೆಯ ಪಟ್ಟಿ.
ಯಾವುದಾದರೂ ದುಷ್ಕೃತ್ಯ ಅಥವಾ ಹಗರಣ ನಡೆದರೆ, ಅದರ ಹಿಂದಿನ ರೂವಾರಿಯನ್ನು ಸುಲಭವಾಗಿ ತಿಳಿಯಬೇಕಾದರೆ, ಆ ಕೃತ್ಯದಿಂದ ಅತಿ ಹೆಚ್ಚು ಲಾಭ ಯಾರಿಗೆ ಸಿಗುತ್ತವೋ ಬಹುಶಃ ಅವರೇ ಆಗಿರುತ್ತಾರೆ.
ಮಂಗಳೂರಿನಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವ ದ್ವೇಷಪ್ರೇರಿತ ಗಲಭೆ ಅಥವಾ ಹತ್ಯೆಗಳಿಂದ ಯಾರಿಗೆ ಲಾಭ ಎಂದು ಒಮ್ಮೆ ಅವಲೋಕಿಸಿದರೆ ಮಾತ್ರ ಸತ್ಯವು ತಿಳಿಯುತ್ತದೆ.
ಇಲ್ಲಿ ಹಿಂದೂ–ಮುಸ್ಲಿಂ ಸೇಡಿನ ಹತ್ಯಾ ಸರಣಿ ಎಗ್ಗಿಲ್ಲದಂತೆ ನಡೆಯುತ್ತಿರುವಾಗ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಯಾರಿಗೆ ಲಾಭವಿದೆ ಎಂಬುದನ್ನು ಕೇವಲ ಸಾಮಾನ್ಯ ಜ್ಞಾನ ಇರುವವರಿಗೆ ಅವಲೋಕಿಸಿದರೆ ಉತ್ತರ ಸ್ಪಷ್ಟ.
ರಣಹದ್ದುಗಳಂತೆ ಹೆಣದ ಮೇಲೆ ರಾಜಕೀಯ ಮಾಡುವವರ ಬಗ್ಗೆ ಪ್ರಬುದ್ಧ ಕರಾವಳಿಯ ಜನರು ಎಚ್ಚೆತ್ತುಕೊಳ್ಳಬೇಕಾದ ಸಮಯ ಕಳೆದು ಹೋಗಿದೆ.
ನಮ್ಮ ಹೋರಾಟವು ಯಾವುದೇ ಧರ್ಮದ ವಿರುದ್ಧವಾಗಬಾರದು – ಅದು ದ್ವೇಷದ ವಿರುದ್ಧವಾಗಬೇಕು.