ಸಮಸ್ಯಗಳಿಗೆ ಆತ್ಮಹತ್ಯೆ ಪರಿಹಾರವೇ?

   ಜೀವನ ಎಂಬುವುದು ಹಲವು ಸಮಸ್ಯೆಗಳಿಂದ ಕೂಡಿದೆ. ಕೆಲವೊಮ್ಮೆ ಸೋಲಬಹುದು ಹಾಗೂ ಕೆಲವೊಮ್ಮೆ ಜಯಶಾಲಿಯಾಗಲೂಬಹುದು, ಇದು ಜೀವನದಲ್ಲಿ ಸಹಜ.

ಸಮಸ್ಯೆಗಳಿಲ್ಲದ ಮನುಷ್ಯನನ್ನು ಊಹಿಸುವುದೇ ಅಸಾಧ್ಯ. ಪ್ರಾಣಿ, ಪಕ್ಷಿ ಸಂಕುಲವೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಮಾನಸಿಕ ಅಸಮತೋಲನೆ, ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ನಂಬಿದವರಿಂದ ಮೋಸ, ಶೈಕ್ಷಣಿಕ ಹಿನ್ನಡೆ ಇಂತಹ ಅನೇಕ ಕಾರಣಗಳಿಂದ ಹಲವಾರು ಪ್ರತಿಬಾವಂತರು ಆತ್ಮಹತ್ಯೆಗೆ ಶರಣವಾಗುತ್ತಿರುವುದು ವಿಷಾದನೀಯ.ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆಯಂತೂ ಪ್ರತಿ ದಿನ ಸುದ್ದಿಯಾಗಿರುವುದು ಆಘಾತ ಉಂಟುಮಾಡಿತ್ತು. 

ಅಂಕಿ ಅಂಶ ಪ್ರಕಾರ ಭಾರತದಲ್ಲಿ ಪ್ರತಿ ಗಂಟೆಗೆ 15 ಜನರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ವಿಶ್ವದಲ್ಲಿ ಪ್ರತೀ ವರ್ಷ 703,000 ಜನರು ತಮ್ಮ ಜೀವನವನ್ನು ತೊರೆಯುತ್ತಾರೆ. ಅದರಲ್ಲೂ 75% ಗಿಂತ ಅಧಿಕ ಮಂದಿ ಆತ್ಮಹತ್ಯೆಗೈಯ್ಯುವವರಾಗಿದ್ದಾರೆ. ಪ್ರತಿ ಆತ್ಮಹತ್ಯೆಯು ಆಯಾ ಕುಟುಂಬಗಳನ್ನು, ಸಮುದಾಯಗಳನ್ನು ಹಾಗೂ ದೇಶಕ್ಕೂ ಆಘಾತವನ್ನು ಮಾಡುತ್ತದೆ.

ಆತ್ಮಹತ್ಯೆಗಳಿಗೆ ಯಾವುದೇ ಧರ್ಮ ಪ್ರೇರಣೆ ನೀಡುವುದಿಲ್ಲ .ಇಸ್ಲಾಂ, ಜುದಾಯಿಸಂ ಮತ್ತು ಕ್ರೈಸ್ತ ಹಾಗೂ ಇತರ ಧರ್ಮಗಳು ಇದನ್ನು ಸಂಪೂರ್ಣವಾಗಿ ವಿರೋಧಿಸಿದೆ. ಆತ್ಮಹತ್ಯೆ ಪ್ರಯತ್ನಗಳು ಅನೇಕ ದೇಶಗಳಲ್ಲಿ ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ. 

ಭಾರತದ ಕಾನೂನು ಪ್ರಕಾರ ಸೆಕ್ಷನ್ 309ರ ಅಡಿಯಲ್ಲಿ ಆತ್ಮಹತ್ಯೆ ಪ್ರಯತ್ನವು ಒಂದು ಸಣ್ಣ ಅಪರಾಧವೆಂದು ಪರಿಗಣಿಸಲಾಗುತ್ತದೆ. ಆಫ್ರಿಕಾದ ಅನೇಕ ದೇಶಗಳಲ್ಲಿ ಆತ್ಮಹತ್ಯೆಯನ್ನು ಕಾನೂನು ಬದ್ದವೆಂದು ಪರಿಗಣಿಸಲಾಗುತ್ತದೆ. ಏಷ್ಯಾದಲ್ಲಿ ಭಾರತ ಹೊರತು ಮತ್ತಿತರ ದೇಶಗಳಲ್ಲಿ ಆತ್ಮಹತ್ಯೆ ಪ್ರಯತ್ನವೇ ಬಹುದೊಡ್ಡ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. 

2017ರ ವರದಿ ಪ್ರಕಾರ ಜಗತ್ತಿನಲ್ಲಿ ಆದ ಒಟ್ಟು ಸಾವುಗಳಲ್ಲಿ 8 ಲಕ್ಷ ಸಾವುಗಳು ಆತ್ಮಹತ್ಯೆ ಮೂಲಕವೇ ಆಗಿವೆ. ಈ ಸಂಖ್ಯೆಯು 2019 ರಲ್ಲಿ 10,0000 ಕ್ಕೆ ಏರಿದೆ ಅಂದರೆ ಪ್ರತೀ 40 ಸೆಕೆಂಡುಗಳಿಗೆ ಒಬ್ಬೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಬೆಳಕಿಗೆ ಬಂದಿದೆ. ಪ್ರತಿ ನಿತ್ಯ ಜಗತ್ತಿನಲ್ಲಿ ಸರಾಸರಿ 2750 ಮಂದಿ  ಆತ್ಮಹತ್ಯೆ  ಮಾಡಿಕೊಂಡು ತಮ್ಮ ಜೀವನವನ್ನು ಮುಗಿಸುತ್ತಾರೆ. 

ಆತ್ಮಹತ್ಯೆಗೆ ಪ್ರಮುಖ ಕಾರಣಗಳು 

ಮಾನಸಿಕ ಆರೋಗ್ಯ ಸಮಸ್ಯೆಗಳಿಂದ, ಚಲನ ಚಿತ್ರಗಳಿಂದ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಿಂದ ಪ್ರೇರಿತಗೊಂಡ ಮಾನವ ತನ್ನ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಎಂಬಂತೆ, ಏನೊಂದು ಚಿಕ್ಕ ಸಮಸ್ಯೆಯನ್ನು ಮೆಟ್ಟಿ ನಿಲ್ಲಲಾಗದೆ ಆತ್ಮಹತ್ಯೆಯನ್ನು ಆಯ್ಕೆ ಮಾಡುತ್ತಾನೆ. 

ಒಬ್ಬ ಸಾಮಾನ್ಯ ಜೀವನವನ್ನು ನಡೆಸುವ ವ್ಯಕ್ತಿಗೆ ಉಂಟಾಗುವ ಆರ್ಥಿಕ ಸಮಸ್ಯೆಯಿಂದ, ಕಡಿಮೆ ಸಂಬಳದಿಂದ ಹಾಗೂ ಫಲವತ್ತತೆ ಕೊಡದ ಕೃಷಿಯಿಂದ ಮಾನಸಿಕ ಅಸ್ವಸ್ತಗೊಂಡ ಮಾನವನು ಮುಂದಕ್ಕೆ ತನ್ನ ಜೀವನವನ್ನು ಹೇಗೆ ನಡೆಸಲಿ, ಮಕ್ಕಳನ್ನು ಹೇಗೆ ಓದಿಸಲಿ ಎಂದು ದಿಕ್ಕು ತೋಚದೆ ಕಂಗಾಲಾಗಿ ಆತ್ಮಹತ್ಯೆಗೆ ಮುಂದಾಗಲೂಬಹುದು.

ಆತ್ಮಹತ್ಯೆ ತಡೆಯುವ ವಿಧಾನವೇನು?

 ಆತ್ಮಹತ್ಯೆ ತಡೆಯುವ ವಿಚಾರದಲ್ಲಿ ಮೊದಲ ಜವಾಬ್ದಾರಿ ಕುಟುಂಬಸ್ಥರು ಹೊರಬೇಕು. ಕೌಟುಂಬಿಕ ಜೀವನದಲ್ಲಿ ಆತ್ಮ ವಿಶ್ವಾಸ ಕುಗ್ಗದಂತೆ ನೋಡಿಕೊಳ್ಳಬೇಕು. ವಿಧ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಾಗುವ ರೀತಿ ಶಾಲೆಗಳಲ್ಲಿ ಭೋದನೆಯನ್ನು ಅಳವಡಿಸಬೇಕು.

ಒತ್ತಡ ಮುಕ್ತ ಬದುಕು, ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ಕಲಿಸಿ ಕೊಡಬೇಕು. ಸರಳ ಸಮೃಧ್ಧ ಜೀವನ ಸಾಗಿಸಲು ಕಲಿಸಿಕೊಡಬೇಕು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಅವುಗಳಿಗೆ ಪರಹಾರಗಳನ್ನು ಕಂಡುಕೊಳ್ಳಬೇಕು. ಮಾನವೀಯ ಸಂಬಂಧಗಳು ಗಟ್ಟಿಯಾಗುವಂತೆ ಮಾಡಬೇಕು.

ನಮ್ಮ ಆತ್ಮವಿಶ್ವಾಸ, ವಿವೇಚನೆ, ಜ್ಞಾನ, ಸಾಮರ್ಥ್ಯ ಇವುಗಳ ಬಗ್ಗೆ ಒಮ್ಮೆ ಯೋಚಿಸಿದರೆ ಆತ್ಮಹತ್ಯೆಯ ಬಗ್ಗೆ ನಮಗೆ ಅಸಹ್ಯವೆನಿಸುತ್ತದೆ. ಮಾನಸಿಕ ದುರ್ಬಲರಾಗಿರುವವರಿಗೆ  ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರೆಣೆ   ಆಚರಿಸಲಾಗುತ್ತದೆ. ಇಂತಹ ಕಾರ್ಯಕ್ರಮದ ಮೂಲಕ ಮಾನಸಿಕ ದುರ್ಬಲ ವಾಗಿರುವವರಿಗೆ ಆತ್ಮ ವಿಶ್ವಾಸ, ಧೈರ್ಯ ತುಂಬುವುದು ಹಾಗೂ ಜೀವನದ ಬೆಲೆ ಏನು ಎಂಬುವುದು ತಿಳಿಸಿ ಕೊಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. 

ಬರಹ : ಉಮರುಲ್ ಫಾರೂಖ್ ಅಜ್ಜಾವರ 

Related Posts

Leave A Comment

Voting Poll

Get Newsletter