ಮುಸ್ಲಿಮರ ಜನ್ಮ ಜಾಲಾಡಿದ ಸಾಚಾರ್ ವರದಿ

ಹಾಗೆ ನೋಡಿದರೆ ಅದೊಂದು ಸಂಘರ್ಷದ ಸಂದಿಗ್ದ ಘಟ್ಟವಾಗಿದ್ದರೂ ಸೂಕ್ತ ಸಮಯದಲ್ಲೇ ಈ ದೇಶಕ್ಕೊಂದು ಸಂವಿಧಾನ ಅಸ್ತಿತ್ವಕ್ಕೆ ಬಂದಿತ್ತು ಎಂಬುವುದು ಸುಳ್ಳಲ್ಲ. ಒಂದು ಕಡೆ ಧಾರ್ಮಿಕ ಪೈಪೋಟಿ ಹಾಗೂ ಜಾತೀಯತೆಯಲ್ಲಿ ಮುಳುಗಿದ್ದ ರಾಜಕೀಯದ ಕಾರ್ಮೋಡದಲ್ಲಿ ಉಂಟಾದ ರಾಷ್ಟ್ರಪಿತ ಗಾಂಧೀಜಿಯವರ ಹತ್ಯೆ! ಮತ್ತೊಂದು ಕಡೆ ದೇಶದ ವಿಭಜನೆಯಿಂದುಂಟಾದ ರಕ್ತದ ಹೊಳೆಯ ಆಕ್ರಂದನ! ದೇಶೀಯರ ಮನಸ್ಸು ಇನ್ನೂ ತಣ್ಣಗಾಗಿರಲಿಲ್ಲ. ಜನ್ಮ ಕೊಟ್ಟ ದೇಶದಿಂದ ಹೊರದಬ್ಬಲ್ಪಟ್ಟು ನಿರಾಶ್ರಿತರಾಗಿ ಅಲೆದಾಡಬೇಕಾಗಿ ಬಂದ ದಶಲಕ್ಷದಷ್ಟು ಜನರು ಎಲ್ಲಾ ಕಳೆದುಕೊಂಡಿದ್ದರ ಮದ್ಯೆಯೇ ತಾಯ್ನಾಡಿಗಾಗಿ ಹೋರಾಟ ನಡೆಸುತ್ತಿದ್ದರು. ೧೯೫೦ರಲ್ಲಿ ಅಸ್ತಿತ್ವಕ್ಕೆ ಬಂದ ಜಾತ್ಯಾತೀತ ಪ್ರಜಾಪ್ರಭುತ್ವದ ಸಂವಿಧಾನವು ಅಂದೇ ಅಲ್ಪ ಸಂಖ್ಯಾತರಿಗೆ ಸಂರಕ್ಷಣೆ, ಸಮಾನ ಹಕ್ಕು ಹಾಗೂ ತಮ್ಮ ಧರ್ಮವನ್ನು ಆಚರಿಸಲು ಹಾಗೂ ಪ್ರಚಾರ ಪಡಿಸಲು ಸ್ವಾತಂತ್ರ್ಯವನ್ನು ನೀಡಿತ್ತು. ಇದಾಗಿ ಅರವತ್ತು ವರ್ಷಗಳ ನಂತರ ೨೦೦೬ರಲ್ಲಿ ಡಾ|.ಮನಮೋಹನ್ ಸಿಂಗ್ ಅವರ ಸರ್ಕಾರ ದೇಶದ ಅತೀ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ತಯಾರಿಸಲು ನಿರ್ಧರಿಸಿ ಅದಕ್ಕಾಗಿ ಜಸ್ಟೀಸ್ ಸಾಚಾರ್‌ರವರ ನೇತ್ರತ್ವದ ಒಂದು ಸಮಿತಿಯನ್ನು ನೇಮಕ ಮಾಡಿ ಅವರು ತಯಾರಿಸಿದ ವಸ್ತುನಿಷ್ಟ ವರದಿಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿತು. ಮತಬ್ಯಾಂಕ್ ರಾಜಕೀಯದ ಭಾಗವಾಗಿ ಮುಸ್ಲಿಮರನ್ನು ತುಷ್ಠೀಕರಣ ನಡೆಸುವ ಸಂಚೆಂದು ಆರೋಪಿಸಿ ಮುಖ್ಯ ವಿರೋಧ ಪಕ್ಷವಾದ ಬಿ.ಜೆ.ಪಿ, ಸಾಚಾರ್ ಸಮಿತಿಯ ವಿರುದ್ದ ಆಕ್ಷೇಫ ವ್ಯಕ್ತ ಪಡಿಸಿತು. ಮುಸ್ಲಿಂ ಓಟುಗಳನ್ನು ಪೂರ್ತಿಯಾಗಿ ಬಾಚಿಕೊಳ್ಳಲು ಕಾಂಗ್ರೇಸ್ ನೇತೃತ್ವದ ಪ್ರತಿಯೊಂದು ಸರ್ಕಾರಗಳು ತೆಗೆದುಕೊಂಡ ಓಲೈಕೆ ನೀತಿಯಿಂದಾಗಿ ಬಹು ಸಂಖ್ಯಾತ ಹಿಂದೂ ಸಮುದಾಯದ ಆದಾಯದಿಂದ ಮುಸ್ಲಿಂ ಸಮುದಾಯ ಅನ್ಯಾಯವಾಗಿ ಸೌಲಭ್ಯ, ಸವಲತ್ತುಗಳನ್ನು ಪಡೆಯುತ್ತಿದೆ ಎಂದೂ ಅವರು ಆರೋಪಿಸಿದರು. ಕುಸಿದು ಬಿದ್ದ ಮಿಥ್ಯಾರೋಪಗಳು ಅದೆಷ್ಟೋ ವರ್ಷಗಳಿಂದ ತುಷ್ಠೀಕರಣದ ಹೆಸರಲ್ಲಿ ಜನರನ್ನು ಹಾಧಿ ತಪ್ಪಿಸುತ್ತಿದ್ದ ಬಿ.ಜೆ.ಪಿಯ ಅಪ್ಪಟ ಸುಳ್ಳು ಪ್ರಚಾರದ ಆರೋಪಗಳಿಗೆ ಉತ್ತರವೆಂಬಂತೆ ಸಾಚಾರ್ ಸಮಿತಿ ನಡೆಸಿದ ಸಮೀಕ್ಷಾ ವರದಿ ಪೀಡಿಸಲ್ಪಟ್ಟ, ಸವಲತ್ತುಗಳಿಂದ ವಂಚಿಸಲ್ಪಟ್ಟ ಸಮುದಾಯವೊಂದರ ನೈಜ ಚಿತ್ರಣ ಅನಾವರಣಗೊಳಿಸಿ ಬಿಟ್ಟಿತು. ಭಾತರದಲ್ಲೇ ಅತ್ಯಂತ ಕೆಳಮಟ್ಟದಲ್ಲಿರುವವರೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದ್ದ ಪರಿಶಿಷ್ಠ ಜಾತಿ ಮತ್ತು ಪಂಗಡಗಳಿಗಿಂತಲೂ ಮುಸ್ಲಿಮರ ಸ್ಥಿತಿ ಕೆಳಮಟ್ಟದಲ್ಲಿದೆ ಎಂದು ಸಾಚಾರ್ ಸಮಿತಿ ಕಂಡುಕೊಂಡಿದೆ. ವ್ಯಾಪಕವಾದ ಅವಗಣನೆ ಹಾಗೂ ತಾರತಮ್ಯವನ್ನು ಅನುಭವಿಸಿದ ಮುಸ್ಲಿಂ ಸಮಾಜ ಯಾವುದೇ ಸವಲತ್ತುಗಳನ್ನು ಅನರ್ಹವಾಗಿ ಪಡೆದಿಲ್ಲ. ಅಷ್ಟೇ ಅಲ್ಲ ಅರ್ಹ ಸವಲತ್ತುಗಳೇ ಅವರಿಗೆ ದೊರಕಿಲ್ಲ ಎಂಬ ಸತ್ಯ, ಸಾಚಾರ್ ಸಮಿತಿಯ ವರದಿ ಪುರಾವೆ ಸಹಿತ ದೇಶದ ಮುಂದಿಟ್ಟಿದೆ. ಆದರೆ ಸಾಚಾರ್ ಸಮಿತಿ ತಳಮಟ್ಟದಲ್ಲಿ ನಿಷ್ಪಕ್ಷವಾಗಿ ಸಮೀಕ್ಷೆ ನಡೆಸಿ ಕಂಡುಕೊಂಡ ಮುಸ್ಲಿಂ ಸಮಾಜದ ದುರಂತ ಸ್ಥಿತಿಗತಿಯನ್ನು ಸಾರ್ವಜನಿಕರಿಗೆ ತಿಳಿಯಪಡಿಸುವಲ್ಲಿ ಮಾತ್ರ ಸರ್ಕಾರ ಧೈರ್ಯ ತೋರಲಿಲ್ಲ ಎಂಬುದು ಬೇಸರದ ಸಂಗತಿ. ಹಾಗೆ ನೊಡಿದರೆ ಮುಸ್ಲಿಂ ಸಮಾಜವನ್ನು ಆಥಿಕ, ಸಾಮಾಜಿಕ, ಶೈಕ್ಷಣಿಕ ಸಬಲೀಕರಣ ನಡೆಸುವ ಬದಲು ಇಲ್ಲಿ ಮುಸ್ಲಿಮರ ಧಾರ್ಮಿಕ ಅಸ್ತಿತ್ವವನ್ನೇ ಅಲ್ಲಾಡಿಸುವ ಪ್ರಯತ್ನ ನಡೆಯುತ್ತಿದೆ. ಗಡ್ಡ, ಟೋಪಿ, ಬುರ್ಖಾ ಮೊದಲಾದ ಮುಸ್ಲಿಮರ ಐಡೆಂಟಿಟಿಗಳನ್ನು ಸಾರ್ವಜನಿಕವಾಗಿ ಸಂಶಯಾತ್ಮಕವಾಗಿ ಕಾಣುವ ಹಾಗೂ ಅವಹೇಳಿಸುವ ಪ್ರಸಂಗ ನಡೆಯುತ್ತಲೇ ಇದೆ. ಶಾಲಾ ಕಾಲೇಜು, ಸರ್ಕಾರಿ ಕಛೇರಿಗಳಲ್ಲೂ ಅಂಥ ಅವಹೇಳನ ಮೂದಲಿಕೆಗಳನ್ನು ಸಮುದಾಯದ ಮಂದಿ ಎದುರಿಸುತ್ತಿದ್ದಾರೆ. ಆದರೆ ಅಂಥ ಕುಬುದ್ದಿಯ ಅವಹೇಳನಕಾರರು ತಾವು ಶಿಕ್ಷೆಗೊಳಪಡಲಾರರೆಂಬ ಭಾವನೆಯನ್ನು ಹೊಂದಿರುವುದು ಮತ್ತೊಂದು ದುರಂತ. ಅದೇ ಕಾರಣಕ್ಕೆ ಸದಾಕಾಲ ಬೆದರಿಕೆ, ಹಿಂಸೆಯ ಭೀತಿಯಲ್ಲಿ ಕೆಲವಡೆ ಮುಸ್ಲಿಂ ಸಮಾಜವು ಬದುಕುವಂತಾಗಿದೆ. ಕೆಲ ನಗರ ಪ್ರದೇಶಗಳಲ್ಲಿ ಮನೆ ಮಾಡುವುದು, ಬಾಡಿಗೆಗೆ ತಂಗುವುದು ಕೂಡ ಮುಸ್ಲಿಮರ ಪಾಲಿಗೆ ಕಷ್ಟಕರವಾಗಿದೆ. ಎಲ್ಲೋ ಬಾಂಬ್ ಸ್ಪೋಟಗಳು ನಡೆದರೂ ಇಡೀ ಮುಸ್ಲಿಂ ಸಮಾಜವನ್ನೇ ಸಂಶಯದಿಂದ ನೋಡಲಾಗುತ್ತದೆ. ಅಷ್ಟೇ ಯಾಕೆ ಕೆಲ ನಿರಪರಾಧಿ ಯುವಕರನ್ನು ವಿನಾಕಾರಣ ಬಂಧಿಸಿ ಅವರನ್ನು ಅವಮಾನಿಸಲಾಗುತ್ತಿದೆ. ಹಾಗಂತ ಸಾಚಾರ್ ವರದಿ ಹೇಳುತ್ತದೆ! ಹೌದು ಇದೆಲ್ಲವೂ ಮೊದಲೇ ತಿಳಿದಿರುವ ಸತ್ಯ. ಇನ್ನು ಶಿಕ್ಷಣ, ಉದ್ಯೋಗ, ಸರ್ಕಾರಿ ಸರ್ವಿಸ್‌ಗೆ ಹೋದರೆ ಮುಸ್ಲಿಮರ ಹಿಂದುಳಿಯುವಿಕೆಯನ್ನು ದೇಶದ ಮುಂದೆ ಸಾಚಾರ್ ಬೊಟ್ಟುಮಾಡಿ ತೋರಿಸಿದೆ. ಅತೀ ಕಡಿಮೆ ಶಾಲಾ ಪ್ರವೇಶಾತಿ, ಶಾಲೆ ಬಿಡುವುದು, ಅದೂ ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಗಂಡು ಮಕ್ಕಳು! ಮೊದಲಾದ ಶೋಚನೀಯ ಪರಿಸ್ಥಿತಿಯನ್ನು ಸಾಚಾರ್ ತಿಳಿಸಿಕೊಟ್ಟಿದೆ. ಹೆಚ್ಚಿನವರು ಸಾಮುದಾಯಿಕ ಶಾಲೆ, ಮದ್ರಸಗಳಲ್ಲಿ ಕಲಿಯುದಕ್ಕಿಂತ ಸರ್ಕಾರಿ ವಿದ್ಯಾಲಯಗಳಲ್ಲಿ ಕಲಿಯಲು ಉತ್ಸುಕರಾಗಿದ್ದಾರೆ. ಮುಸ್ಲಿಂ ಸಮಾಜ ಧಾರ್ಮಿಕಕ್ಕೆ ಒತ್ತು ನೀಡುವುದರಿಂದ ಲೌಕಿಕ ಶಿಕ್ಷಣದಿಂದ ವಂಚಿತವಾಗಿದೆ ಎನ್ನುವಂತಿಲ್ಲ. ಕಾರಣ ಕೇರಳ ಮತ್ತು ಹೊರಗಿನ ಕೆಲವೊಂದು ಜಿಲ್ಲೆಗಳು ಹೊರತು ಪಡಿಸಿದರೆ ಅವರಿಗೆ ವ್ಯವಸ್ಥಿತ ಮದ್ರಸವೇ ಇಲ್ಲ. ನಿಜ ಹೇಳಬೇಕೆಂದರೆ ಕಡು ಬಡತನವೇ ಮುಸ್ಲಿಮರ ಹಿನ್ನಡೆಗೆ ಮೊದಲ ಕಾರಣ. ಆದ್ದರಿಂದಲೇ ಸಣ್ಣ ಮಕ್ಕಳು ಕೂಡ ಕುಟುಂಬದ ಜೀವನಕ್ಕಾಗಿ ಶಾಲೆಗಳಿಗೆ ಸಲಾಂ ಹೇಳಿ ಮೈಮುರಿದು ದುಡಿಯಲು ಇಳಿಯುತ್ತಾರೆ. ಅಷ್ಟೇ ಅಲ್ಲ ಮುಸ್ಲಿಂ ಬಾಹುಲ್ಯ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳೂ ವಿರಳವಾಗಿದೆ. ಅದೇ ರೀತಿ ಹಾಸ್ಟೇಲ್‌ಗಳೂ ಇಲ್ಲ. ಇನ್ನು ಅವು ಇದ್ದರೂ ಅದ್ಯಾಪಕರ ಕೊರತೆ. ಇನ್ನೂ ಕೆಲವರು ಪೂರ್ವಾಗ್ರಹ ಪೀಡಿತರಾಗಿ ಮುಸ್ಲಿಂ ಮಕ್ಕಳ ಬಗ್ಗೆ ಅಸಡ್ಡೆ ತೋರುತ್ತಾರೆ. ಹೀಗೇ ಶೈಕ್ಷಣಿಕ ಹಿನ್ನಡೆಯ ಕಾರಣ ಹುಡುಕ ಹೋದರೆ ಸರ್ಕಾರಿ ಉದ್ಯೋಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕೊರತೆಯೇ ಆಗಿದೆ ಎಂದು ತಿಳಿದು ಬರುತ್ತದೆ. ಇನ್ನು ಕನಿಷ್ಟ ಸಂಖ್ಯೆಯಲ್ಲಿ ಇದ್ದರೂ ಅವರು ಕೆಳಮಟ್ಟದ ಉದ್ಯೋಗದಲ್ಲಿದ್ದಾರೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಮುಸ್ಲಿಂ ಪ್ರಾತಿನಿಧ್ಯ ತೀರಾ ಕಡಿಮೆ. ಸಾಚಾರ್ ವರದಿ ಹೇಳಿದ ಕೆಳವೊಂದು ಅಂಕಿ ಅಂಶವನ್ನು ಇಲ್ಲಿ ಕೇಳಿ, ಈ ದೇಶದ ಜನ ಸಂಖ್ಯೆಯ ಶೇ.೧೫ ರಷ್ಟಿರುವ ಮುಸ್ಲಿಮರಲ್ಲಿ ಸರಕಾರಿ ಉದ್ಯೋಗದಲ್ಲಿರುವುದು ಕೇವಲ ಶೇ ೯.೪ ಮಾತ್ರ. ಸಿಆರ್‌ಪಿಎಫ್, ಸಿಐಎಸ್‌ಎಫ್, ಬಿಎಸ್‌ಎಫ್ ಮೊದಲಾದ ರಕ್ಷಣಾ ಇಲಾಖೆಯ ಉದ್ಯೋಗಗಳಲ್ಲಿ ಶೇ ೩.೨, ಇನ್ನು ಜಿಲ್ಲಾ ನ್ಯಾಯಾಧೀಶರಾಗಿ ಕೇವಲ ಶೇ ೨.೭ ಮಂದಿ ಮಾತ್ರ. ಅದೇ ತೆರನಾಗಿ ಆದಾಯದ ವಿಷಯಕ್ಕೆ ಬಂದರೆ ನಗರಗಳಲ್ಲಿ ಮುಸ್ಲಿಮರ ತಲಾ ಆದಾಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿಂತ ಕೆಳಮಟ್ಟದಲ್ಲಿದ್ದಾರೆ. ಕೇವಲ ಶೇ ೩ ಮಸ್ಲಿಮರು ಮಾತ್ರ ಸಬ್ಸಿಡಿ ಸಾಲಗಳನ್ನು ಗಿಟ್ಟಿಸುತ್ತಾರೆ ಅಷ್ಟೇ. ಉನ್ನತ ಕ್ಷೇತ್ರಗಳಾದ ಐಎಎಸ್‌ನಲ್ಲಿ ೩% ಐಎಫ್‌ಎಸ್‌ನಲ್ಲಿ೧.೮% ಐಪಿಎಸ್‌ನಲ್ಲಿ ೪% ಮಂದಿ ಮಾತ್ರ. ಇನ್ನು ಇಂಡಿಯನ್ ರೈಲ್ವೇಯ ಕಥೆ ಕೇಳಿ, ಅತೀ ದೊಡ್ಡ ಉದ್ಯೋಗ ಕ್ಷೇತ್ರವಾದ ಇಂಡಿಯನ್ ರೈಲ್ವೇಯಲ್ಲಿರುವ ಮುಸ್ಲಿಮರ ಪ್ರಮಾಣ ೪.೫%. ಅದರಲ್ಲಿ ೯೮%ರಷ್ಟು ಮಂದಿ ಅತ್ಯಂತ ಕೆಳಮಟ್ಟದ ಉದ್ಯೋಗದಲ್ಲಿದ್ದಾರೆ. ಪೋಲೀಸ್ ಕಾನ್‌ಸ್ಟೇಬಲ್‌ಗಳ ಪ್ರಮಾಣ ೬%, ಆರೋಗ್ಯ ಇಲಾಖೆಯಲ್ಲಿ ೪.೪%, ಸಾರಿಗೆಯಲ್ಲಿ ೬.೫% ಮಂದಿ ಮಾತ್ರ. ಇನ್ನು ಬ್ಯಾಂಕ್, ವಿಶ್ವವಿದ್ಯಾಲಯ ವಿಷಯಕ್ಕೆ ಬಂದರೂ ಪರಿಸ್ಥಿತಿ ಭಿನ್ನವಲ್ಲ. ಅದೆ ತೆರನಾಗಿ ಬ್ಯಾಂಕುಗಳ ಸಾಲ ಸೌಲಭ್ಯಗಳಿಗೂ ಕತ್ತರಿ. ಇನ್ನಿತರ ಸವಲತ್ತುಗಳಿಗೆ ಕೊಕ್ಕೆ. ಅಷ್ಟೇ ಯಾಕೆ ಅಲ್ಪಸಂಖ್ಯಾತರಿಗೆಂದು ಜಾರಿಗೊಳ್ಳುವ ಕಾರ‍್ಯಕ್ರಮಗಳು ಮುಸ್ಲಿಮರಿಗೆ ತಲುಪುವುದು ತೀರಾ ಕಡಿಮೆ ಎಂಬುವುದು ದುರಂತ ಸತ್ಯ. ಇದೆಲ್ಲವು ೪೦೩ ಪುಟಗಳ ಸಾಚಾರ್ ವರದಿ ಹೇಳಿದ ಕಹಿ ಸತ್ಯಗಳು! ಕೊರತೆಗಳಿವೆ ಎಂಬ ತಿಳುವಳಿಕೆ ಸಮಸ್ಯೆಗಳನ್ನು ಅರಿತು ಒಪ್ಪಿಕೊಂಡಾಗಲೇ ಅದರ ಪರಿಹಾರ ಮಾರ್ಗಕ್ಕಿರುವ ಸಾಧ್ಯತೆಗಳು ಉಂಟಾಗುವುದು ಎಂದು ಸಾಚಾರ್ ಸಮಿತಿ ಸ್ಪಷ್ಟವಾಗಿ ಹೇಳಿದ್ದು ಇಲ್ಲಿನ ಅತೀದೊಡ್ಡ ಕಾಣಿಕೆ. ಅದರಲ್ಲೂ ಮುಸ್ಲಿಮರನ್ನು ಬೇರೆಯಾಗಿ ಕಾಣುವ ಹಾಗೂ ಆರೋಪಿಗಳನ್ನಾಗಿ ಚಿತ್ರಿಸುವಂಥ ಇಂದಿನ ಸನ್ನಿವೇಶದಲ್ಲಿ ಸಾಚಾರ್ ಹೇಳಿದ್ದು ಮಹತ್ತರವಾದದ್ದೆ. ವಿವಿಧತೆಯಲ್ಲಿ ಏಕತೆಯನ್ನು ಗೌರವಿಸುತ್ತಲೇ ಸಮಾಜವೊಂದನ್ನು ಬೇರೆಯಾಗಿ ಕಾಣುವವರ ಕರಾಳ ಹಸ್ತದಿಂದ ಮುಸ್ಲಿಮರನ್ನು ಮುಕ್ತಿಗೊಳಿಸಿ ಸಮಗ್ರ ಪ್ರಗತಿಗೂ ಆ ಮೂಲಕ ಮುಖ್ಯ ವಾಹಿನಿಗೂ ಕರೆತರುವ ಪ್ರಯತ್ನವನ್ನು ಮಾಡಬೇಕೆಂದು ಸಾಚಾರ್ ವರದಿ  ಸರ್ಕಾರಕ್ಕೆ ಆದೇಶಿಸಿದೆ. ಇಂಡೋನೇಷ್ಯಾ ಬಿಟ್ಟರೆ ಜಗತ್ತಿನ ಅತೀ ಹೆಚ್ಚು ಮುಸ್ಲಿಮರು ವಾಸಿಸುವ ಭಾರತದ ಅಲ್ಪಸಂಖ್ಯಾತ ವರ್ಗವಾದ ಮುಸ್ಲಿಂ ಸಮಾಜ ಅನುಭವಿಸಿದ ನೋವು, ಯಾತನೆ ಹಾಗೂ ಹಕ್ಕಿಗೆ ಕೊಕ್ಕೆ ತಂದು ವಂಚಿಸಲ್ಪಟ್ಟ ಅಪಾಯಕಾರಿ ಸ್ಥಿತಿಯಿಂದ ಹೊರತರುವ ಪ್ರಯತ್ನವನ್ನು ಸರ್ಕಾರ ಮಾಡಲೇಬೇಕು. ಅಷ್ಟಕ್ಕೂ ನೀರೀಕ್ಷೆಗಳು ಹಾಗೆ ಬಾಕಿ ಇದ್ದರೂ ವಿಪರ್ಯಾಸವೇನೆಂದರೆ  ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್, ಸೆಂಟರ್ ಫಾರ್ ಬಡ್ಜೆಟ್ ಗವರ‍್ಮಂಟ್ ಅಕೌಂಟ್ ಬಿಟ್, ಅಕೌಂಟರಿ ಇನಿಶಿಯೆಟಿಯೊಂದಿಗೆ ಸೇರಿ ಸೂಕ್ಷ್ಮಗಾರಿಕೆಯ, ಅದೂ ತಳಮಟ್ಟದಲ್ಲಿ ಸಾಚಾರ್ ಸಮಿತಿ ನಡೆಸಿದ ಈ ಸಮೀಕ್ಷೆಯಲ್ಲಿ ತಿಳಿದು ಬಂದ ದುರಂತಕಾರಿ ಸತ್ಯಗಳು ಕೆಲವರಿಗೆ ಅಸತ್ಯವಾಗಿದೆಯಂತೆ! ಇಷ್ಟಕ್ಕೂ ಸಾಚಾರ್ ವರದಿ ತಯಾರಿಸಿದ ನಂತರ ಕೆಲವರಿಗೆ ಉಂಟಾದ ಅಂಥ ಜ್ಞಾನೋದಯವನ್ನು ಕಾಮಾಲೆ ರೋಗ ಎಂದು ಹೇಳದೆ ಬೇರೆ ದಾರಿ ಇಲ್ಲ. ಆದರೆ ಅರ್ಹ ಸೌಲಭ್ಯ ಸವಲತ್ತುಗಳನ್ನು ತಡೆಯಲ್ಪಟ್ಟು ಮುಸ್ಲಿಂ ಸಮಾಜದ ಒಂದು ಸಣ್ಣ ಗುಂಪನ್ನು ಕೂಡಾ ಸ್ಪರ್ಶಿಸದ ರೀತಿಯಲ್ಲಿ ಸರ್ಕಾರದ ಇಂದಿನ ಪ್ರಗತಿ ಕಾರ‍್ಯಕ್ರಮ ನಡೆಯುತ್ತಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ಮುಸ್ಲಿಮರು ಶೈಕ್ಷಣಿಕ, ಆರ್ಥಿಕ ಪ್ರಗತಿಗೂ ಸರ್ಕಾರಿ ಸರ್ವಿಸ್‌ನ ಪ್ರಾತಿನಿಧ್ಯಕ್ಕೂ ಉಂಟಾದ ವಿಘ್ನಗಳನ್ನು ಗುರುತಿಸುವ ಹಾಗೂ ಅದನ್ನು ಬಗೆಹರಿಸಲು ಮಾಡಿದ ಸೂತ್ರಗಳೆಲ್ಲವೂ ವಿಫಲವಾಗುತ್ತಿವೆ. ಸರ್ಕಾರ ಮುತುವರ್ಜಿಯಿಂದ ಏರ್ಪಡಿಸುವ ಸಾಮಾಜಿಕ, ಆರ್ಥಿಕ ಪ್ರಗತಿಯ ಕ್ರಿಯಾತ್ಮಕವಾದ ಪ್ರಕ್ರಿಯೆಗಳನ್ನು ಜಾರಿಗೆ ತರಲು ನೇಮಿಸಲ್ಪಟ್ಟ ಅಧಿಕಾರಿಗಳಿಗೆ ಅದೂ ಅಲ್ಪಸಂಖ್ಯಾತ ಇಲಾಖೆಯ ಕೈ ಕೆಳಗಿನ ಅಧಿಕಾರಿಗಳಿಗೆ ಕೂಡಾ ಸಮಾಜ ಎದುರಿಸುತ್ತಿರುವ ಸಾಮಾಜಿಕ ಆರ್ಥಿಕ ಹಾಗೂ ಸಾರ್ವಜನಿಕ ತಾರತಮ್ಯದ ಪೆಡಂಭೂತವನ್ನು ಎದುರಿಸುವ ಧ್ಯೇಯ ಹಾಗೂ ಆದೇಶ ನೀಡುವ ಅಧಿಕಾರ ಕೂಡಾ ಇಲ್ಲ. ಇಲ್ಲಿ ಬಜೆಟ್‌ನದ್ದೋ ಯೋಜನೆಗಳದ್ದೋ ಮಾತ್ರ ಸೋಲಲ್ಲ. ನೀತಿ ನಿರೂಪಣೆಯ ಸೋಲೂ ಆಗಿದೆ. ಈ ಸಮಸ್ಯೆಯನ್ನು  ಬಗೆಹರಿಸಲಿಕ್ಕಿರುವ ಹಾದಿ ಸಂಕೀರ್ಣವೋ, ದುಸ್ತರವೋ ಅಲ್ಲ. ಸಾರ್ವಜನಿಕ ನೀತಿ ನಿರೂಪಣೆಯ ಹಾದಿಯ ಬಗ್ಗೆ ವರದಿಯಲ್ಲಿರುವ ಶಿಪಾರಸ್ಸುಗಳು ಸ್ಪಷ್ಟವಾಗಿ ಹೇಳಿದೆ. ತಾರತಮ್ಯದಿಂದ ಅಸ್ಪೃಶ್ಯರಾಗಿ ಶತಮಾನಗಳಿಂದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಲ್ಪಡುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರನ್ನು ಮೇಲೆತ್ತಲು ನೀಡಲಾದ ಮೀಸಲಾತಿಗೆ ಕೈಗೊಂಡ ಮಾರ್ಗೋಪಾಯಗಳನ್ನು ಇಲ್ಲೂ ಉಪಯೊಗಿಸಿಕೊಂಡು ಮುಸ್ಲಿಮರನ್ನು ಹಾಗೂ ಇತರ ಹಿಂದುಳಿದ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಬಹುದು. ಧರ್ಮ, ಸಮಾಜದ ಐಡೆಂಟಿಟಿಗಳ ಹೆಸರಲ್ಲಿ ತಾರತಮ್ಯ ಅನುಭವಿಸುವ ಈ ದೇಶದ ಕೋಟ್ಯಾಂತರ ಜನರನ್ನು ಶೋಚನೀಯ ಪರಿಸ್ಥಿತಿಯಿಂದ ಪಾರುಮಾಡಿ ಪ್ರಗತಿಯ ಹಳಿಗೆ ತರುವುದು ಹೇಳಿದಷ್ಟು ಸುಲಭವಲ್ಲ. ನಿಜ, ಆದರೆ ಅಂಥ ಎದೆಗಾರಿಕೆ ತೋರುವ ಧೈರ‍್ಯ ನಮ್ಮನ್ನಾಳುವವರಿಗೆ ಎಷ್ಟಿದೆ ಎಂಬುದು ಅಷ್ಟೇ ಮುಖ್ಯ. ’ಅಲ್ಪಸಂಖ್ಯಾತರ ಓಲೈಕೆ’ ಎಂದು ಗುಲ್ಲೆಬ್ಬಿಸುವ ವಿರೋಧ ಪಕ್ಷದವರ ಮಿಥ್ಯಾರೋಪಗಳಿಗೆ ಉತ್ತರ ನೀಡುವ ಎದೆಗಾರಿಕೆ ಆಡಳಿತ ಪಕ್ಷಕ್ಕೆ ಇರಬೇಕು. ಅದಕ್ಕಿಂತಲೂ ಮಿಗಿಲಾಗಿ ಸವಲತ್ತುಗಳಿಂದ ವಂಚಿತರಾಗಿ ಸದಾ ಶೋಷಣೆ, ಪೀಡನೆಗೊಳಗಾಗುವ ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ ಪ್ರಾಣ ತೆತ್ತ ಅತೀ ದೊಡ್ಡ ಅಲ್ಪಸಂಖ್ಯಾತ ಸಮಾಜವೊಂದನ್ನು ಮೇಲೆತ್ತಬೇಕು. ಸಾಚಾರ್ ಶಿಪಾರಸ್ಸು ಜಾರಿಗೆ ತರಬೇಕು ಎಂಬ ಕನಿಷ್ಟ ಜ್ಞಾನವಾದರೂ ಅವರಿಗಿಲೇಬೇಕು. ಅಷ್ಟಕ್ಕೂ ಕೇವಲ ಮುಸ್ಲಿಮರ ದುಸ್ಥಿತಿಯ ಬಗ್ಗೆ ಕೇವಲ ವರದಿ ತಯಾರಿಸಿದರೆ ಸಾಲದು. ಈ ಮಟ್ಟದಲ್ಲಿ ಅಲ್ಲದಿದ್ದರೂ ಅದಕ್ಕಿಂತ ಸಣ್ಣ ಮಟ್ಟದ ಹಲವಾರು ವರದಿಗಳು ಈ ಮೊದಲು ತಯಾರಿಸಿ ಗೆದ್ದಲು ಹಿಡಿದಿದೆ. ಆದರೆ ಒಂದಿಷ್ಟು ನಿರೀಕ್ಷೆ ಮೂಡಿಸಿದ ತಳಮಟ್ಟದಲ್ಲಿ ಸಮೀಕ್ಷೆ ನಡೆಸಿ ತಯಾರಿಸಿದ ಸಮಗ್ರ ಸಾಚಾರ್ ವರದಿ ಮಾತ್ರ ಹಾಗಾಗಬಾರದು. ಈ ಬಗ್ಗೆ ಗದ್ದುಗೆಯ ಮಂದಿ ತಿಳಿದುಕೊಂಡರೆ ಒಳ್ಳೆಯದು. ಏಕೆಂದರೆ ದಶಕಗಳಿಂದ ಹೀನ ಸ್ಥಿತಿಯಲ್ಲಿರುವ ಈ ದೇಶದ ಸಮುದಾಯವೊಂದನ್ನು ಮೇಲೆತ್ತುವುದು ಆಳುವವರ ಕರ್ತವ್ಯ. ಒಂದು ಸಮಾಜವನ್ನು ಸವಲತ್ತುಗಳಿಂದ ದೂರ ಇರಿಸಿ, ಎಲ್ಲಾ ಕಡೆ ಅಸ್ಪೃಶ್ಯರಾಗಿ  ಕಾಣುವುದು ಎಷ್ಟು ಮಾತ್ರಕ್ಕೂ ಒಳಿತಲ್ಲ. ಅಷ್ಟಕ್ಕೂ ದೇಶದ ಅಭಿವೃದ್ದಿ ಎಂದರೆ ಈ ದೇಶದ ಸರ್ವ ಪ್ರಜೆಗಳ ಅಭಿವೃದ್ದಿಯಲ್ಲವೇ? ಜಾತ್ಯಾತೀತ ಸಂವಿಧಾನ ಇರುವ ಈ ದೇಶದಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ. ಅಂತಿರುವಾಗ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನಿರ್ಭಯವಾಗಿ ಬದುಕುವ ಸ್ವಾತಂತ್ರ್ಯ ಹಕ್ಕು ಸವಲತ್ತು ಇರಲೇಬೇಕು. ಅದಕ್ಕೆ ತಡೆಯೊಡ್ಡುವುದು ಈ ದೇಶದ ಪವಿತ್ರ ಸಂವಿಧಾನಕ್ಕೆ ವಿರುದ್ದವಾಗಿದೆ. ಇದು ಎಲ್ಲರೂ ತಿಳಿದಿರಬೇಕು ಅಷ್ಟೇ.

Related Posts

Leave A Comment

Voting Poll

Get Newsletter