ಗಾಂಧಿ ಕನಸಿನ ಭಾರತವನ್ನು ಮರಳಿ ಪಡೆಯಲು ಸಾಧ್ಯ...!
ಲೋಕಸಭ ಕಸಭೆ ಚುನಾವಣೆ ಮುಗಿದಿದೆ. ದೇಶದ ಪ್ರಮುಖ ಮಾಧ್ಯಮಗಳ ಎಲ್ಲಾ ಸಮೀಕ್ಷೆಗಳನ್ನು ಬುಡಮೇಲುಗೊಳಿಸಿ ಅಚ್ಚರಿಯ ಫಲಿತಾಂಶ ಬಂದಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದರೂ ಏಕಾಂಗಿಯಾಗಿ ಆಡಳಿತ ನಡೆಸುವಷ್ಟು ಬಹುಮತ ಹೊಂದಿಲ್ಲ. ಎನ್‌ಡಿಎ ಬಹುಮತ ಹೊಂದಿದ್ದರೂ ಪ್ರತಿಪಕ್ಷವು ಕಳೆದ ಬಾರಿಗಿಂತ ಪ್ರಭಲವಾಗಿದೆ. ಇಂಡಿಯಾ ಮೈತ್ರಿಕೂಟವು ಉತ್ತಮ ಸಾಧನೆ ಮಾಡಿದೆ. ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. 232 ಸ್ಥಾನಗಳನ್ನು ಗೆದ್ದಿರುವ ಇಂಡಿಯಾ ಮೈತ್ರಿಕೂಟವು ಪ್ರಸ್ತುತ ಪ್ರಬಲ ಅಸ್ತಿತ್ವದಲ್ಲಿದೆ. ಎನ್‌ಡಿಎ ಮಿತ್ರಪಕ್ಷಗಳು ಒಂದು ಕಾಲದಲ್ಲಿ ಕಾಂಗ್ರೆಸ್ ನ ಮಿತ್ರಪಕ್ಷಗಳಾಗಿದ್ದವು. ರಾಜಕೀಯದಲ್ಲಿ, ಸ್ಥಾನ, ಅಧಿಕಾರ ಮತ್ತು ಸ್ಥಾನಮಾನ ಎಲ್ಲವನ್ನೂ ನಿರ್ಧರಿಸುತ್ತದೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಿದ್ದರೂ ಕೂಡ ಅಸ್ತಿತ್ವ ಉಳಿಸಿಕೊ ಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಒಂದಂತೂ ಖಚಿತ, ಮತ್ತೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೂ ಮೋದಿಯವರ ಸರ್ವಾಧಿಕಾರ ಇನ್ನು ನಡೆಯುವುದಿಲ್ಲ. ಆ ಕಾರಣದಿಂದಲೇ ಈ ದೇಶದ ಬಹುತೇಕ ಜನರು ಈ ಫಲಿತಾಂಶದಿಂದ ರಾಜಕೀಯದಲ್ಲಿ ಅಜೇಯ ಅಥವಾ ದೈವಿಕ ವ್ಯಕ್ತಿಯಲ್ಲ, ಜನರಿಗೆ ಯಾವಾಗಬೇಕಾದರೂ ತೊಡೆದು ಹಾಕಬಹುದಾದ ಸಾಮಾನ್ಯ ರಾಜಕಾರಣಿ ಎಂದು ಸಾಬೀತಾಗಿದೆ. ಈ ಚುನಾವಣೆಯು ರಾಜಕೀಯ ಪಕ್ಷಗಳಲ್ಲಿ ಅಧಿಕಾರದ ಸಮತೋಲನವನ್ನು ಪುನಃ ಸ್ಥಾಪಿಸಿದೆ ಎಂಬುದನ್ನು ಸಹ ನೋಡಬೇಕು. ಚುನಾವಣಾ ಫಲಿತಾಂಶ ಹೀಗಿರದಿದ್ದರೆ ಬಿಜೆಪಿಯ ಅನಿಯಂತ್ರಿತ ಶಕ್ತಿಯ ಕತ್ತಲ ಕೋಣೆಗೆ ದೇಶವನ್ನು ತಂದು ನಿಲ್ಲಿಸುತ್ತಿದ್ದರು.
ಪ್ರತಿಪಕ್ಷಗಳು ಹೇಳಿಕೊಂಡಂತೆ ಈ ಚುನಾವಣೆಯು ಸಾಮಾನ್ಯ ಚುನಾವಣೆಯಾಗಿರಲಿಲ್ಲ. ಹತಾಶೆಯ ವಾತಾವರಣ, ಉಸಿರುಗಟ್ಟಿಸುವ ಕಾರ್ಗತ್ತಲು, ನಿರಂಕುಶದ ದೌರ್ಜನ್ಯ ಮತ್ತು ಕೋಮುವಾದದ ವಾಕರಿಕೆ ಗಾಳಿಯು ಸ್ವಲ್ಪ ಮಟ್ಟಿಗೆ ತಿಳಿಯಾಗಿದೆ. ಕನಿಷ್ಠ ಪಕ್ಷ, ಚುನಾವಣಾ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿಯವರ ಅಜೇಯತೆಯ ಗುಳ್ಳೆಯನ್ನು ಒಡೆದಿವೆ. ಭಾರತ ಈಗ ಮತ್ತೊಮ್ಮೆ ಆಳವಾದ ಸ್ಪರ್ಧಾತ್ಮಕ ರಾಜಕೀಯ ವ್ಯವಸ್ಥೆಯತ್ತ ತಿರುಗಿದೆ. ಇದೀಗ ಇಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಪ್ರಬಲವಾಗಿವೆ.
ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದು, ಸಾಂವಿಧಾನಿಕ ಸಂಸ್ಥೆಗಳನ್ನು ಉಳಿಸುವುದು ಮತ್ತು ಸಂವಿಧಾನವನ್ನು ರಕ್ಷಿಸುವ ವಿಷಯಗಳ ಆಧಾರದಲ್ಲಿ ಇಂಡಿಯಾ ಮೈತ್ರಿಕೂಟವು ಈ ಚುನಾವಣೆ ಯನ್ನು ಎದುರಿಸಿದ್ದವು. ಮೋದಿಯವರ ಸರ್ವಾಧಿಕಾರವನ್ನು ಪ್ರಶ್ನಾರ್ಹ ಪರ್ಯಾಯವಾಗಿ ಬಿಂಬಿಸುವಲ್ಲಿ ಇಂಡಿಯಾ ಒಕ್ಕೂಟ ಯಶಸ್ವಿಯಾಗಿದೆ. ಈ ಮೂಲಕ ಅವರು ಜನರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು, ಜನರು ಅವರೊಂದಿಗೆ ನಿಂತರು. ಮೈತ್ರಿ ಮಾಡಿಕೊಂಡು ತಮ್ಮ ಮತಗಳನ್ನು ಭದ್ರಪಡಿಸಿಕೊಳ್ಳಲ್ಲು ಮುಂದಾದ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಪ್ರಯತ್ನವು ಸಂಪೂರ್ಣ ಯಶಸ್ವಿಯಾಯಿತು. ಈ ಚುನಾವಣೆಯಲ್ಲಿ
ಉತ್ತರ ಪ್ರದೇಶವು ಇಂಡಿಯಾ ಮೈತ್ರಿಕೂಟದ ಗೆಲುವಿಗೆ ಬೆನ್ನೆಲುಬಾಗಿ ನಿಂತುಕೊಂಡಿತು. ಯುಪಿಯಲ್ಲಿ ಇಂಡಿಯಾ ಮೈತ್ರಿಕೂಟವು 80 ರಲ್ಲಿ 45 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿ ಯುಪಿಯಲ್ಲಿ ಬಿಜೆಪಿ 62 ಸ್ಥಾನ ಗಳಿಸಿದ್ದರೆ, ಈ ಬಾರಿ ಕೇವಲ 31 ಸ್ಥಾನಗಳನ್ನು ಗೆದ್ದಿದೆ. ಸಮತೋಲಿತ ಸೀಟು ಹಂಚಿಕೆಯೇ ಎಸ್ಪಿ ಗೆಲುವಿಗೆ ಸಹಕಾರಿಯಾಗಿದೆ. ಯಾದವ ಮತ್ತು ಮುಸ್ಲಿಂ ಮತಗಳು ಯಾವಾಗಲೂ ಸಮಾಜವಾದಿ ಪಕ್ಷದ ಬೆನ್ನೆಲುಬಾಗಿವೆ. ಅದರಾಚೆಗೆ ಇತರ ಗುಂಪುಗಳನ್ನು ಒಟ್ಟಿಗೆ ಇಟ್ಟುಕೊಂಡು ನೆಲೆಯನ್ನು ವಿಸ್ತರಿಸುವ ಹೆಜ್ಜೆ ಎಸ್ಪಿ ಯಶಸ್ಸಿನಲ್ಲಿ ನಿರ್ಣಾಯಕವಾಗಿದೆ.
ಬಿಜೆಪಿ ಬೃಹತ್ ಸಮಾವೇಶಗಳನ್ನು ನಡೆಸುವ ಮೂಲಕ ಪ್ರಚಾರ ನಡೆಸಿತು. ಆದರೆ ಕಾಂಗ್ರೆಸ್-ಎಸ್ಪಿ ಮೈತ್ರಿಕೂಟ ಸಣ್ಣ ಪುಟ್ಟ ಸಮುದಾಯದ ಸಭೆಗಳನ್ನು ಕರೆದು ಪ್ರಚಾರ ನಡೆಸಿತು. ರಾಯ್ ಬರೇಲಿ ಮತ್ತು ಅಮೇಠಿಯಲ್ಲಿ ಪ್ರಚಾರ ಮಾಡಿದ ಪ್ರಿಯಾಂಕಾ ಕೂಡ ದೊಡ್ಡ ರ್ಯಾಲಿಗಳನ್ನು ನಡೆಸಲಿಲ್ಲ. ಬದಲಾಗಿ ಮುಂಜಾನೆಯಿಂದ ತಡರಾತ್ರಿವರೆಗೂ ಈ ರೀತಿಯ ಸಭೆಗಳು ನಡೆಯುತ್ತಿದ್ದವು. ಮೋದಿ ಮತ್ತು ಬಿಜೆಪಿಯವರು ದೊಡ್ಡಮಟ್ಟದಲ್ಲಿ ಆಚರಿಸಿದ್ದ ಬಾಬರಿ ಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕೂಡ ಬಿಜೆಪಿಗೆ ಸಹಾಯ ಮಾಡಲಿಲ್ಲ. ರಾಮ ಮಂದಿರವನ್ನು ಒಳಗೊಂಡಿರುವ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್ ಸಮಾಜವಾದಿ ಪಕ್ಷದ ಅವತೇಶ್ ಪ್ರಸಾದ್ ವಿರುದ್ದ ಸೋತು ಬಿಜೆಪಿಯ ಧರ್ಮರಾಜಕೀಯಕ್ಕೆ ದೊಡ್ಡಮಟ್ಟದ ಏಟು ನೀಡಿತು.
ಹತ್ತು ವರ್ಷಗಳ ಸುದೀರ್ಘ ಮೋದಿ ಅಲೆಗೆ ಅಂತ್ಯ ಸೂಚಿಸಿದ ಚುನಾವಣೆ ಇದಾಗಿದೆ. ಬಿಜೆಪಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದೊಂದಿಗೆ ಚುನಾವಣೆ ಎದುರಿಸಿತ್ತು. ಉತ್ತರ ಪ್ರದೇಶದ ಜೊತೆಗೆ ಮಹಾರಾಷ್ಟ್ರದಲ್ಲೂ ಬಿಜೆಪಿ ಹೀನಾಯವಾಗಿ ಸೋತಿದೆ. ರಾಜಸ್ಥಾನ ಮತ್ತು ಹರಿಯಾಣದಲ್ಲಿ ಯಾವುದೇ ಲಾಭವಾಗಿಲ್ಲ. ಒಡಿಶಾ ಮತ್ತು ತೆಲಂಗಾಣದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವುದು ಬಿಜೆಪಿಗೆ ಏಕೈಕ ಸಮಾಧಾನವಾಗಿದೆ. ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ.
ವಾರಣಾಸಿಯಲ್ಲಿ ಗೆದ್ದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ 3,26,992 ಮತಗಳ ಕೊರತೆ ಕಂಡುಬಂದಿದೆ. ಈ ಬಾರಿ ಸಮಾಜವಾದಿ ಪಕ್ಷದ ಅಜಯ್ ರೈ ವಿರುದ್ಧ 1,52,513 ಮತಗಳ ಬಹುಮತವನ್ನು ಮಾತ್ರ ಮೋದಿ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯ ವಿಮರ್ಶಕರು ಕೂಡ ಹಿಂದಿಯ ಹೃದಯಭಾಗವನ್ನು ಅಭೇದ್ಯ ಮತಬ್ಯಾಂಕ್ ಎಂದು ಪರಿಗಣಿಸಿದ್ದರು. ಈ ಪುರಾಣವೇ ಚುನಾವಣಾ ಫಲಿತಾಂಶಗಳನ್ನು ನಾಶಪಡಿಸಿತು. ದೇಶದಲ್ಲಿ ಬಿಜೆಪಿ ಬೇರೆ ಪಕ್ಷ ಎಂಬ ಭ್ರಮೆಯನ್ನೂ ಈ ಚುನಾವಣೆ ನಾಶ ಮಾಡಿದೆ.
ಮೋದಿಯೇ ಬಿಜೆಪಿಯ ಶಕ್ತಿ. ಮೋದಿಯೇ ಬಿಜೆಪಿಯ ದೌರ್ಬಲ್ಯ. ಈ ಚುನಾವಣಾ ಪ್ರಚಾರದಲ್ಲಿ ದೇಶವು ಮೋದಿಯನ್ನು ದೇಶವನ್ನು ಮುನ್ನಡೆಸುವ ಸಮರ್ಥ ನಾಯಕನಾಗಿ ನೋಡಲಿಲ್ಲ. ಅವರು ದ್ವೇಷ ಮತ್ತು ವಿದ್ವೇಷವನ್ನು ಮಾತನಾಡುವ ಸ್ವಯಂ-ಅಭಿಮಾನಿ ವ್ಯಕ್ತಿಯಾಗಿ ಬಿಂಬಿತಗೊಂಡರು. ಚುನಾವಣಾ ಫಲಿತಾಂಶಗಳ ಮೂಲಕ ದೇಶದಲ್ಲಿ ಸ್ವತಂತ್ರ ಸಂಸ್ಥೆಗಳು ಮತ್ತು ನಾಗರಿಕ ಸಮಾಜವು ಹೆಚ್ಚು ಸಬಲೀಕರಣಗೊಳ್ಳುತ್ತಿದೆ. ಇಂಡಿಯಾ ಮೈತ್ರಿಯಿಂದ ಈ ಸಮತೋಲನ ಸಾಧ್ಯವಾಯಿತು. ಕೇಂದ್ರೀಕರಣ ಭಾರತಕ್ಕೆ ಪರಿಹಾರವಲ್ಲ ಎಂಬುದಕ್ಕೆ ಈ ಚುನಾವಣೆ ಸಾಕ್ಷಿ. ಮುಂದಿನ ದಿನಗಳಲ್ಲೂ ಇಂಡಿಯಾ ಒಕ್ಕೂಟವು ಒಟ್ಟಾಗಿ ಮುಂದುವರಿದರೆ, ಗಾಂಧಿಯವರ ಕನಸಿನ ಭಾರತವನ್ನು ಮರಳಿ ಪಡೆಯಲು ಸಾಧ್ಯವಾಗ ಬಹುದು ಎಂಬ ಸಂದೇಶವನ್ನು ಈ ಚುನಾವಣೆ ನೀಡಿದೆ.