ಸಯ್ಯದ್ ಅಲಿ ತಂಙಳ್ ಕುಂಬೋಳ್ ಮಾತನಾಡುತ್ತಿದ್ದಾರೆ...

ಪರಿಚಯ: ಉತ್ತರ ಕೇರಳದ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಆಧ್ಯಾತ್ಮಿಕ ನೇತಾರರಾದ ಮೂಡಿಸಿದ ಫಳಲ್ ಪೂಕೋಯ ತಂಙಳ್ ಅಗಲಿ ಹೋಗುವ ಮೊದಲು ಅದೇ ಹಾದಿಯಲ್ಲಿ ಸಮಾಜಕ್ಕೆ ಕರುಣಿಸಿದ ಪಂಚ ಮುತ್ತುಗಳೇ ಈ ನಮ್ಮ ಕುಂಬೋಳ್ ಸಾದಾತ್‌ಗಳು. ಮರ್‌ಹೂಂ ಸಯ್ಯದ್ ಫಳಲ್ ತಂಙಳ್ ಹಾಗೂ ಸಯ್ಯಿದತ್ ಉಮ್ಮು ಅಲೀಮಾ ದಂಪತಿಗಳಿಗೆ ಮೂರು ಹೆಣ್ಣು ಐದು ಗಂಡು ಒಟ್ಟು ಎಂಟು ಮಕ್ಕಳು. ಗಂಡು ಮಕ್ಕಳಲ್ಲಿ ಹಿರಿಯವರು ಇಂದು ಧಾರ್ಮಿಕ ಸಾಂಘಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೆ.ಎಸ್. ಕುಂಬೋಳ್ ಆಟಕೋಯ ತಂಙಳ್ ಎರಡನೇಯವರು. ಕುಂಬೋಳ್ ತಂಙಳ್ ಎಂದೇ ಪ್ರಸಿದ್ದರಾದ ಕೆ.ಎಸ್ ಕುಂಞಿಕೋಯ ತಂಙಳ್ ಇಂದು ಅದೆಷ್ಟೋ ಜನ ದೈನಂದಿನ ಕಷ್ಟ ಸಂಕಷ್ಟ ರೋಗ ಸಮಸ್ಯೆಗಳ ಪರಿಹಾರಕ್ಕಾಗಿ ಶುಭ ಪಯಣ, ಕಾರ್ಯಕ್ರಮಗಳ ಯಶಸ್ಸಿಗಾಗಿ ಬದುಕಿನೊಳು ಶಾಂತಿ ನೆಮ್ಮದಿ ಅರಸಿ ಹೋಗುವ ಆಶಾ ಕೇಂದ್ರವಾಗಿ ಮಾರ್ಪಟ್ಟಿರುವ ತಂಙಳ್ ವೀಡ್‌ನಲ್ಲಿ ಪಾಣಕ್ಕಾಡ್ ಸಾದಾತ್‌ಗಳಂತೆ ಹರಸಿ ಬಿಡುವುದು ಅದೇ ಕುಂಞಿಕೋಯ ತಂಙಳ್, ಮೂರನೇಯವರು ಇಂದು ಸಮಸ್ತ ಸಮ್ಮೇಳನ ಹಾಗೂ ಸುನ್ನಿ ಕಾರ್ಯಕರ್ತರುಗಳಿಗೆ ಆಶಿರ್ವಾದ ನೀಡಿ ಮಿಂಚುತ್ತಿರುವ ಸಯ್ಯದ್ ಕೆ.ಎಸ್ ಅಲಿಕೋಯ ತಂಙಳ್. ನಾಲ್ಕನೇಯವರು ಮಂಗಳೂರು ಪ್ರಸಿದ್ದ ವೈಧ್ಯರಾದ ಡಾ| ಸಯ್ಯದ್ ಸಿರಾಜುದ್ದೀನ್ ತಂಙಳ್. ಕೊನೆಯವರು ಅದೇ ಅಣ್ಣಂದಿರ ಹಾದಿಯಲ್ಲಿ ಗುರುತಿಸಿಕೊಂಡಿರುವ ಸಯ್ಯದ್ ಕೆ.ಎಸ್. ಜಹ್‌ಫರ್ ಸ್ವಾದಿಖ್ ತಂಙಳ್. ಇಲ್ಲಿ ಹೇಳುತ್ತಿರುವುದು ಕೆ.ಎಸ್ ಸಯ್ಯದ್ ಅಲಿ ತಂಙಳ್ ಅವರ ಬಗ್ಗೆ. ಪಂಚಮುತ್ತುಗಳಲ್ಲಿ ಮೂರನೇಯವರಾದ ಅಲಿತಂಙಳ್ ’ಮದನಿ’ ಪಧವೀದರ ವಿದ್ವಾಂಸರೂ ಆಗಿದ್ದಾರೆ. ಊರಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಸೂಫಿವರ‍್ಯ ಕಾಕು ಉಮ್ಮರ್ ಮುಸ್ಲಿಯಾರರ ಬಳಿ ದರ್ಸ್ ಶಿಕ್ಷಣ ಪಡೆದು ನಂತರ ಉಳ್ಳಾಲ ಸಯ್ಯದ್ ಮದನಿ ಕಾಲೇಜನ್ನು ಸೇರಿ ೧೯೮೮ರಲ್ಲಿ ಪದವಿ ಶಿಕ್ಷಣ ಪೂರೈಸಿದರು. ಅವರ ಧರ್ಮ ಪತ್ನಿ ಕೇರಳದ ಮುಸ್ಲಿಂ ಲೀಗ್ ನೇತಾರ ನಂದಿ ಜಾಮಿಆ ದಾರುಸ್ಸಲಾಂ ಅಧ್ಯಕ್ಷರಾಗಿದ್ದ ಮರ್‌ಹೂಂ ಸಯ್ಯದ್ ಉಮರ್ ಬಾಫಕೀ ತಂಙಳ್‌ರ ಪುತ್ರಿ ಸಯ್ಯಿದತ್ ಶರೀಫಾ ಕಾಳಾ ಇವರಿಗೆ ಒಂದು ಹೆಣ್ಣು ಎರಡು ಗಂಡು ಒಟ್ಟು ಮೂವರು ಮಕ್ಕಳು. ಮನೆತನದ ಸಂಪ್ರದಾಯದಂತೆ ಧಾರ್ಮಿಕ ಕ್ಷೇತ್ರದಲ್ಲಿ ಎಳೆಯದರಲ್ಲೇ ತಮ್ಮನ್ನು ತೊಡಗಿಸಿಕೊಂಡ ತಂಙಳ್ ಇಂದು ಕರ್ನಾಟಕ- ಕೇರಳದ ಬಹಳಷ್ಟು ಮೊಹಲ್ಲಾ ಜಮಾಅತ್‌ಗಳ ವಿವಿದ ಸಂಘ-ಸಂಸ್ಥೆಗಳ ಗೌರವಾಧ್ಯಕ್ಷರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು ಸಮಸ್ತ ಸಮ್ಮೇಳನ ಉರೂಸ್ ದ್ಸಿಕ್ರ್ ಹಲ್ಕಾ ಮತ್ತಿತರ ಕಾರ್ಯಕ್ರಮಗಳ ಹಾಗೇನೇ ಮಸೀದಿ, ಮದ್ರಸಾ ವ್ಯಾಪಾರ ಸಂಸ್ಥೆ ಮನೆ ಮತ್ತಿತರವುಗಳ ಉದ್ಘಾಟನೆ ಪ್ರಾರ್ಥನೆಗೆ ನೇತೃತ್ವ ವಹಿಸಿ ಧರ್ಮ ಭಕ್ತರಾಗಿ ಆಶಿರ್ವಚನ ದೀನೀ ಸಂದೇಶ, ಮನ ಸಾಂತ್ವನ ನೀಡಿ ಜನಮಾನಸದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇಷ್ಟೆಲ್ಲವಿದ್ದರೂ ತಂಙಳ್ ಮಾತ್ರ ನಿರ್ಗರ್ವಿ! ಸರಳ ಸಜ್ಜನಿಕೆಯ ಬದುಕು ಎಷ್ಟೇ ಸಣ್ಣವರೊಂದಿಗೂ ಮಾತನಾಡಿಸುವ ವ್ಯಕ್ತಿ. ಅಂಥ ತಂಙಳ್‌ರನ್ನು ಅಲ್‌ಅಹ್ಸನ್ ಪತ್ರಿಕೆಯ ಮುಲಾಖಾತ್ ವಿಭಾಗಕ್ಕೆ ನಡೆಸಿದ ಸಂದರ್ಶನದ ಆಯ್ದ ಬಾಗ ಇಲ್ಲಿದೆ.

  • ಕುಂಬೋಳ್ ಸಾದಾತ್‌ಗಳಿಗೆ ಸಮಾಜದಲ್ಲಿ ವಿಶೇಷ ಗೌರವ ಇದೆ ಆ ಬಗ್ಗೆ ಏನಂತೀರಿ?

ನಿಜ ನಮ್ಮ ಹೈದ್ರೋಸಿ ಮನೆತನದಲ್ಲಿ ಬಂದ ತ್ವರೀಖತ್‌ನ ಶೈಖ್‌ಗಳೂ ಆಗಿರುವ ನಮ್ಮ ತಂದೆ ತಾತಂದಿರ ಬಳಿ ಜನ ಪಾರ್ಥನೆಗೆ ಬರುತ್ತಿದ್ದರೂ ಈಗಲೂ ಅದೇ ತೆರನಾಗಿ ನಮ್ಮ ಬಳಿಯೂ ಪ್ರೀತಿ ಗೌರವವಿಟ್ಟು ಬರುತ್ತಾರೆ. ಅದರಲ್ಲೂ ಸಹೋದರ ಕುಂಞಿಕೋಯ ತಂಙಳ್‌ರ ಆಶಿರ್ವಾದಕ್ಕಾಗಿ ದಿನನಿತ್ಯ ಬರುವವರು ಅದೆಷ್ಟೋ.

  • ಕುಂಬೋಳ್ ಮನೆತನಕ್ಕೂ ಶೈಖುನಾ ಶಂಸುಲ್ ಉಲಮರಿಗೂ ನಿಕಟ ಸಾಮೀಪ್ಯ ಇತ್ತಲ್ಲ?

ಹೌದು. ನಮ್ಮ ತಂದೆಯರ ಆಪ್ತ ಪಂಡಿತರೂ ಶೈಖುನಾ ಶಂಸುಲ್ ಉಲಮಾ. ಆ ಕಾಲದಲ್ಲಿ ಶೈಖುನಾ ಕಾಸರಗೋಡು - ಕರ್ನಾಟಕ್ಕೆ ಬರುವಾಗ ಹೆಚ್ಚಾಗಿ ಕುಂಬೋಳ್‌ಗೆ ಬರುತ್ತಿದ್ದರು. ಕೆಲವೊಮ್ಮೆ ಎರಡ್ಮೂರು ದಿನ ತಂಗಿದ್ದೂ ಇದೆ. ಆ ಸಂದರ್ಭ ಅದೆಷ್ಟೋ ಉಲಮಾಗಳು ಮಸ್‌ಅಲ ಕೇಳಲು ನಮ್ಮ ಮನೆಗೆ ಬರುತ್ತಿದ್ದರು. ಒಂದು ರೀತಿಯಲ್ಲಿ ಶೈಖುನಾ ನಮ್ಮ ಮನೆಗೆ ಒಂದು ದೀನೀ ದರ್ಸ್ ನಡೆಯುತ್ತಿತ್ತು. ಅದೇ ತೆರನಾಗಿ ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಕುಂಬೋಳ್ ಉರೂಸ್‌ಗೆ ಶಂಸುಲ್ ಉಲಮಾ ಖಾಯಂ ಅಥಿತಿ. ೧೯೭೮ರಲ್ಲಿ ಮುಖಾಂ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ವಡಗರ ಮುಹಮ್ಮದ್ ಹಾಜಿ ಕಣ್ಣಿಯತ್ ಉಸ್ತಾದ್ ಮೊದಲಾದವರು ಬಾಗವಹಿಸಿದ ನೆನಪಿದೆ.

  • ಶಂಸುಲ್ ಉಲಮಾರೊಂದಿಗಿನ ತಮ್ಮ ಸಂಪರ್ಕದ ಬಗ್ಗೆ?

4491954722_524ae78949_oಬಹಳಷ್ಟು ಬಾರಿ ಜ್ಞಾನ ತಪಸ್ವಿಯೊಂದಿಗೆ ಸಂಚರಿಸುವ ಅವಕಾಶ ಸಿಕ್ಕಿದೆ. ಅಹಂ ಅರಿಯದ ಪಂಡಿತ ಸೂರ‍್ಯರ ವಿನಯ ಸೌಮ್ಯ ಸ್ವಭಾವ ಹಾಗೂ ಅಗಾಧ ಪಾಂಡಿತ್ಯ ನನ್ನನ್ನು ಬೆರಗುಗೊಳಿಸಿದೆ, ಮತ್ತೊಂದು ವಿಚಾರ ಹೇಳುತ್ತೇನೆ. ಶಂಸುಲ್ ಉಲಮಾ ವಫಾತ್ ಆದಾಗ ಪಾರ್ಥಿವ ಶರೀರ ನೋಡಬೇಕೆಂಬ ಆಸೆಯಿಂದ ತೆರಳಿದ್ದೆ. ಕಿಲೋ ಮೀಟರ್‌ಗಳಷ್ಟು ದೂರದಲ್ಲಿ ಜನರ ಕ್ಯೂ ಇತ್ತು. ಪರವಾಗಿಲ್ಲ ಆ ಪಾರ್ಥಿವ ಶರೀರ ನೋಡಲೇ ಬೇಕೆಂಬ ತೀರದ ಆಸೆಯಿಂದ ಅಪರಿಚಿತರಂತೆ ಮುಂದೆ ಸಾಗಿದೆ. ಪರಿಚಯ ಸಿಕ್ಕಿದ ಕೆಲವರು ಕರಕೊಂಡು ಮುಂದೆ ಸಾಗಿದರು. ಆದರೆ ಏನಾಯ್ತು ಗೊತ್ತಾ ಹತ್ತಿರವಾಗುತ್ತಿಂತೆ ಜನ ಪ್ರವಾಹ ನಿಯಂತ್ರಸಲಾಗದೇ ಸ್ವಯಂಸೇವಕರು ಗೇಟ್ ಬಂದ್ ಮಾಡಿಬಿಟ್ಟರು. ಎಲ್ಲವೂ ವೆಳ್ಳಿ ಮಕಾಡ್‌ಕುನ್ನು ಬಿಟ್ಟು ಪುದಿಯಂಙಡಿಗೆ ತೆರಳುವಂತೆ ಅನೌನ್ಸ್ ಮಾಡಿದರು. ಆಗ ನನ್ನ ನಿರೀಕ್ಷೆಗಳೆಲ್ಲವೂ ನುಚ್ಚು ನೂರಾದವು. ಆಗ ಅಲ್ಲಿ ಹೇಳಿಕೊಂಡೆ ನನ್ನ ತಂದೆ ಮತ್ತು ಶಂಸುಲ್ ಉಲಮಾರ ಮಧ್ಯೆ ಆತ್ಮೀಯ ಸಂಪರ್ಕವಿರುವುದಾದರೆ ನನಗೆ ಆ ಪಾರ್ಥಿವ ಶರೀರ ಕಾಣಲೇಬೇಕು ಏನಾಶ್ಚರ್ಯ ಮುಕ್ಕಂ ಫೈಝಿಯಂಥವರು ನನ್ನ ಬಳಿ ಬಂದು ಒಳ ರಸ್ತೆಯಲ್ಲಾಗಿ ಕರಕೊಂಡೋಗಿ ಗೇಟಿನ ಬಳಿ ಎತ್ತಿ ಒಳಗೆ ಕಳುಹಿಸಿದರು. ನೀವು ನಂಬಬೇಕು ನಾನು ಅರೆಕ್ಷಣ ಕಣ್ತುಂಬಾ ಆ ಪಾರ್ಥಿವ ಶರೀರವನ್ನು ನೋಡಿದ್ದೇ ತಡ ಪಾರ್ಥಿವ ಶರೀರವನ್ನು ಸ್ನಾನಕ್ಕೆ ಎತ್ತಲಾಯಿತು. ಈ ಘಟನೆ ಮಾತ್ರ ಮನಸ್ಸಿನಿಂದ ಮನದಾಳ ಬಿಟ್ಟು ಹೋಗುವುದಿಲ್ಲ.

  • ತಾವು ಹೆಚ್ಚಾಗಿ ಸಮಸ್ತದ ಸಮ್ಮೇಳನಗಳಲ್ಲೇ ಕಾಣಿಸುತ್ತೀರಲ್ಲ?.

ನೋಡಿ ಸಮಸ್ತ ನಮ್ಮ ರಾಜ್ಯದ ಅಧಿಕೃತ ಉಲಮಾ ಸಂಘಟನೆ ಅದು ಇಲ್ಲಿ ನಡೆಸಿದ ಮದ್ರಸಾ ಶಿಕ್ಷಣದ ಕ್ರಾಂತಿ ಉಂಟು ಮಾಡಿದ ಧಾರ್ಮಿಕ ಪ್ರಜ್ಞೆ ಎಲ್ಲರಿಗೂ ತಿಳಿದದ್ದೇ. ನಾಸ್ತಿಕರಾದ ಕಾಳಶೇರಿ ಸಹಿತ ಕೇರಳದ ಎಲ್ಲಾ ಮುಸ್ಲಿಮೇತರ ಇತಿಹಾಸಗಾರರೂ ಸಮಸ್ತದ ಸಾಧನೆಯನ್ನು ಒತ್ತಿ ಹೇಳಿದ್ದಾರೆ. ಇದು ಯಾರಿಂದಲೂ ಅಲ್ಲಗೆಳೆಯಲು ಸಾಧ್ಯವಿಲ್ಲ.

  • ಕರ್ನಾಟಕದೊಂದಿಗೆ ತಮ್ಮ ಸಂಪರ್ಕ ಹಾಗೂ ಕನ್ನಡಿಗರ ಬಗ್ಗೆ?

ಅದು ತಂದೆಯ ಕಾಲದಿಂದಲೇ ಇರುವಂಥದ್ದು ಕಾರ್ಯಕ್ರಮ ಶಿಲಾನ್ಯಾಸ ಉದ್ಘಾಟನೆಗೆಂದು ಅಂದಿನಿಂದಲೇ ನಮ್ಮನ್ನು ಕರೆಯುತ್ತಿದ್ದಾರೆ. ಅದೇ ತೆರನಾಗಿ ತಂಙಳ್‌ವೀಡ್ ಸಂದರ್ಶಕರಲ್ಲಿ ಹೆಚ್ಚಿನ ಪಾಲು ಕನ್ನಡಿಗರದ್ದೇ. ನಾನು ಕೂಡಾ ಎಳಯದರಿಂದಲೇ ಕರ್ನಾಟಕದ ಸಂಪರ್ಕದಲ್ಲಿದ್ದೇನೆ. ಉಳ್ಳಾಲ ಕಾಲೇಜಿನಲ್ಲಿ ವ್ಯಾಸಾಂಗ ಮಾಡುವ ಟೈಮಿಗೆ ನಂಗೆ ಅತ್ಯಂತ ಆತ್ಮೀಯರಾಗಿದ್ದ ಉಸ್ತಾದ್ ಉಳ್ಳಾಲ ತಂಙಳ್‌ರೊಂದಿಗೆ ಬಹಳಷ್ಟು ಊರಿಗೆ ಕಾರ್ಯಕ್ರಮಕ್ಕೆ ತೆರಳಿದ್ದೆ. ಅಂದಿನಿಂದಲೇ ಕನ್ನಡಿಗರ ಸಂಪರ್ಕದಲ್ಲಿದ್ದೇನೆ. ದೀನೀ ಪ್ರಜ್ಞೆಯುಳ್ಳ ಉಲಮಾ ಸಾದಾತ್‌ಗಳನ್ನು ಗೌರವಿಸುವ ಕನ್ನಡಿಗ ಮುಸ್ಲಿಮರು ನಿಜಕ್ಕೂ ಒಳ್ಳೆಯವರು.

  • ಸಮಾಜಕ್ಕೆ ತಮ್ಮ ಸಂದೇಶ?

ನೈಜ ಸುನ್ನತ್ ಜಮಾಅತ್‌ನ ತತ್ವಾದರ್ಶ ಕೈ ಬಿಡದೇ ಸತ್ಯವಂತರಾಗಿ ಬಾಳಲು ನಮ್ಮ ಪ್ರಯತ್ನ ಆಗಲೇಬೇಕು. ಆಡಂಭರದ ಬದುಕು ಧರ್ಮದ ಸಂಸ್ಕಾರಕ್ಕೆ ಚ್ಯುತಿ ಉಂಟುಮಾಡದಿರಲಿ ಮುಂದಿನ ಪೀಳಿಗೆಗೆ ಸತ್ಯಧರ್ಮದ ಸಂದೇಶ ಕಲಿಸಿ ಕೊಡಬೇಕು. ಅವರಿಗೆ ಆದರ್ಶ ಪ್ರಾಯರಾಗಿ ಬದುಕಬೇಕು. ಇಂದು ದರ್ಸ್ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವುದು ದುರಂತ. ದರ್ಸ್ ವ್ಯವಸ್ಥೆಗೆ ಪುನಶ್ಚೇತನ ನೀಡುವ ಪ್ರಯತ್ನ ಆಗಲೇಬೇಕು. ನೋಡಿ ನಮ್ಮೂರಿನಲ್ಲಿ ೧೯೭೨ರಲ್ಲಿ ಮರ್ಹ್ರಂ ಪಾಣಕ್ಕಾಡ್ ಪಿ.ಎಂ.ಎಸ್.ಎ ಪೂಕೋಯ ತಂಙಳ್ ಉದ್ಘಾಟಿಸಿದ ದರ್ಸ್ ಈಗಲೂ ನಡೆಯುತ್ತಾ ಬಂದಿದೆ. ಅದಕ್ಕೆ ನಮ್ಮ ಮನೆತನದ ನೇತೃತ್ವ ಇದೆ. ಇನ್ನೊಂದು ವಿಚಾರ ಹೇಳುತ್ತೇನೆ. ಯುವ ಜನಾಂಗ ಅತಿಯಾದ ಕ್ರಿಕೇಟ್ ಹಾಗೂ ಮೋಜು ಬದುಕಿಗೆ ಬಿದ್ದು ಧರ್ಮದಿಂದ ದೂರವಾಗುತ್ತಿದ್ದಾರೆ. ಈ ಬಗ್ಗೆ ಸಮಾಜ ಎಚ್ಚರವಹಿಸಬೇಕು. ಹಿಂದಿನ ಕಾಲದಲ್ಲಿ ಊರಿನ ಪಳ್ಳಿದರ್ಸ್‌ನಲ್ಲಿ ಹೊರ ಊರಿನ ಮುತಲ್ಲಿಮರು ಮಾತ್ರವಲ್ಲ ಊರಿನ ಮದ್ರಸಾ ಬಿಟ್ಟ ಯುವಕರು ಹಿರಿಯರಾರೂ ಬಾಗವಹಿಸಿ ಕಲಿಯುವುದರ ಸಂಪ್ರದಾಯವಿತ್ತು. ಇಂದು ದರ್ಸ್‌ಗಳೇ ಮಾಯವಾಗುತ್ತಿರುವುದರಿಂದ ಆ ಕಲಿಕೆಯ ಸಂಪ್ರದಾಯವು ನಿಂತು ಹೋಗಿದೆ. ಮೊಹಲ್ಲಾ ಕಮಿಟಿಯವರು ಅದನ್ನು ಮರಳಿ ತರಲು ಪ್ರಯತ್ನ ನಡೆಸಬೇಕು ಹೆಚ್ಚೆಚ್ಚು ತರಭೇತಿ ಶಿಬಿರಗಳನ್ನು ಸಂಘಟಿಸಬೇಕು. ಅದೇ ತೆರನಾಗಿ ಉಳ್ಳವರು ಬಡ ನಿರ್ಗತಿಕರಿಗೆ ನೆರವಾಗಬೇಕು. ದುಂದುವೆಚ್ಚ ಇಸ್ಲಾಮಿಕ್ ಸಂಪ್ರದಾಯದ ಮದುವೆ ಸಮಾರಂಭಗಳಿಗೂ ಬ್ರೇಕ್ ಬೀಳಬೇಕು.

  • ಉಲಮಾಗಳಿಗೆ ತಮ್ಮ ಸಂದೇಶ?

ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಿ ಸಮಾಜ ಕಟ್ಟುವ ಕೆಲಸ ನಡೆಸಬೇಕು.

ಕೃಪೆ: ಅಲ್ ಅಹ್ಸನ್ ಮಾಸಿಕ

Related Posts

Leave A Comment

Voting Poll

Get Newsletter